“ಭಾರತದ ಪ್ರಜೆಗಳಾದ ನಾವು” ಚಿತ್ರ ನಿರ್ಮಿಸಿದ ಜೈಭೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿಯೇ, ಬಾಬಾಸಾಹೇಬರ ಆತ್ಮಕಥೆ “Waiting for Visa!” ಆಧರಿಸಿ ಕನ್ನಡದಲ್ಲಿ “ವೀಸಾ ನಿರೀಕ್ಷೆಯಲ್ಲಿ” ಎಂಬ ಚಿತ್ರ ನಿರ್ಮಿಸಲು ಸಿದ್ದತೆ ನಡೆಸಿದೆ. ನಮಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಅಂಬೇಡ್ಕರ್ ವಾದಿ ಚಿಂತಕ ಹಾಗೂ ಬರಹಗಾರ ಡಾ.ಕೃಷ್ಣಮೂರ್ತಿ ಚಮರಂ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಚಮರಂ ಅವರು ಕಳೆದ ಇಪ್ಪತೈದು ವರ್ಷಗಳಿಂದಲೂ ಬಹುಜನ ಚಳವಳಿಯಲ್ಲಿ ನಿರತರಾಹಿರುವವರು. “ಸಮಾಜ ಪರಿವರ್ತನ” ಪತ್ರಿಕೆಯ ಸಂಪಾದಕರಾಗಿ, “ಬಹುಜನ ವಿದ್ಯಾರ್ಥಿ ಸಂಘ”ದ ಆರಂಭಿಕ ಅಧ್ಯಕ್ಷರಾಗಿ, ಹಲವು ಕೇಡರ್ ಕ್ಯಾಂಪ್ ಗಳು, ವಿಚಾರ ಸಂಕಿರಣಗಳು, ಯುವಜನರ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಿದವರು.

Waiting for Visa

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಸ್ಯಶಾಸ್ತ್ರ, ಅನ್ವಯಿಕ ಸಸ್ಯಶಾಸ್ತ್ರ ಮತ್ತು ಬೀಜತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್ಡಿ ಪದವಿಗಳನ್ನು ಪಡೆದ ಚಮರಂ ಅವರು ಆನಂತರ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡದ್ದು ಬಹುಜನ ಚಳವಳಿಯಲ್ಲಿ. ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ ತಳಸ್ಪರ್ಶಿ ಅಧ್ಯಯನ ಮಾಡಿ, ಅಪ್ಪಟ ಅಂಬೇಡ್ಕರ್ ವಾದಿ ಬರಹಗಾರರಾಗಿ, ವಾಗ್ಮಿಯಾಗಿ ರೂಪುಗೊಂಡ ಚಮರಂ ಅವರು ಕತೆ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ನಾಟಕ ಹೀಗೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಮೂವತ್ತಕ್ಕು ಹೆಚ್ಚು ಕೃತಿಗಳನ್ನು ಈತನಕ ಪ್ರಕಟಿಸಿದ್ದಾರೆ. ನಾಡಿನ ಖ್ಯಾತ ಹೋರಾಟಗಾರ ಹ.ರಾ.ಮಹೇಶ್ ನಿರ್ದೇಶನದ “ಪೂನಾ ಒಪ್ಪಂದ” ಎಂಬ ನಾಟಕದಲ್ಲಿ ಬಾಬಾಸಾಹೇಬರ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಈ ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ನೂರಾರು ಪ್ರದರ್ಶನಗಳನ್ನು ಕಂಡಿತ್ತು.

Waiting for Visa

ಬಾಲ್ಯದಿಂದಲೂ ಸಿನಿಮಾಸಕ್ತರೂ ಆದ ಚಮರಂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 1998ರಲ್ಲಿ ಏರ್ಪಡಿಸಿದ್ದ ಚಿತ್ರಕತೆ ಮತ್ತು ನಿರ್ದೇಶನ ಶಿಬಿರದಲ್ಲಿ ಆಯ್ಕೆಯಾಗಿ ಸಿಂಗೀತಂ ಶ್ರೀನಿವಾಸರಾವ್, ಮಹೇಶ್ ಭಟ್, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಪ್ರಯಾಗ್ ರಾಜ್, ಶ್ಯಾಮ್ ಬೆನಗಲ್ ಮುಂತಾದ ದಿಗ್ಗಜ ನಿರ್ದೇಶಕರಿಂದ ತರಬೇತಿ ಪಡೆದು ಚಿತ್ರ ನಿರ್ದೇಶನ ಕಲೆಯನ್ನು ಕರಗತ ಮಾಡಿಕೊಂಡವರು.
ಮಹೇಶ್ ಕುಮಾರ್ ನಿರ್ದೇಶನದ “ಡ್ರ್ಯಾಗನ್” ಚಿತ್ರಕ್ಕೆ ಕತೆ, ಸಂಭಾಷಣೆ, ಸಾಹಿತ್ಯ ಹಾಗೂ ಸಹನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಟ್ಟರು. ನಂತರ ಇವರದೇ ನೈಜಘಟನೆಗಳಾಧಾರಿತ “ಪ್ರೀತಿಯ ಅರಸಿ” ಕಾದಂಬರಿಯನ್ನು ಎಚ್.ಮೋಹನ್ ಕುಮಾರ್ “ಊಟಿ” ಹೆಸರಲ್ಲಿ ಚಲನಚಿತ್ರವಾಗಿ ನಿರ್ಮಿಸಿದರು. ಈ ಚಿತ್ರವನ್ನೂ ಮಹೇಶ್ ಕುಮಾರ್ ಅವರೇ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಚಮರಂ ಅವರು ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚನೆಯೊಡನೆ ಸಹನಿರ್ದೇಶನ ಮಾಡಿದ್ದರು. ಅತ್ಯುತ್ತಮವಾಗಿ ಮೂಡಿಬಂದಿದ್ದ ಚಿತ್ರವು ಪ್ರಜ್ಞಾವಂತ ವಿಮರ್ಶಕ ವಲಯದಿಂದ ಬಹಳ ಮೆಚ್ಚುಗೆ ಗಳಿಸಿತ್ತು.

Waiting for Visa

ನಂತರ ತೆಲಂಗಾಣದ ಮರ್ಯಾದೆ ಹತ್ಯೆಯ ಹಿನ್ನೆಲೆಯಲ್ಲಿ “ಪ್ರೇಮಂ ಶರಣಂ ಗಚ್ಚಾಮಿ” ಎಂಬ ಕಿರುಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದರು. ಈ ಚಿತ್ರವೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ಅದಾದ ನಂತರ ಚಮರಂ ಅವರು ಕೈಗೆತ್ತಿಕೊಂಡದ್ದು “ಭಾರತದ ಪ್ರಜೆಗಳಾದ ನಾವು” ಎಂಬ ಭಿನ್ನವಾದ ಟೈಟಲ್ ಚಿತ್ರವನ್ನು. ಈ ಚಿತ್ರ ಸಹ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದೆ. ಹೀಗೆ ಬರಹ, ಭಾಷಣಗಳೊಡನೆ ಚಲನಚಿತ್ರ ಕ್ಷೇತದಲ್ಲೂ ತೊಡಗಿಸಿಕೊಂಡಿರುವ ಚಮರಂ ಇದೀಗ ಬಾಬಾಸಾಹೇಬರ ಆತ್ಮಕತೆಯನ್ನು ತೆರೆಗರ್ಪಿಸಲು ಸಿದ್ದತೆ ನಡೆಸಿದ್ದಾರೆ.

ʻತಮಿಳು, ಮಲಯಾಳಂ, ಮರಾಠಿ ಚಿತ್ರಗಳಲ್ಲಿ ದಲಿತ ಕೇಂದ್ರಿತ ಚಿತ್ರಗಳನ್ನು ನಿರ್ಮಿಸಿ, ಕಮರ್ಷಿಯಲ್ ಯಶಸ್ಸು ಕಾಣುತ್ತಿರುವ ಸಂದರ್ಭದಲ್ಲಿ ಕನ್ನಡದಲ್ಲಿ ಕನಿಷ್ಟ ಅಂತಹ ಪ್ರಯತ್ನಗಳನ್ನಾದರೂ ಮಾಡಬೇಕು. ನಮ್ಮ ಕತೆಗಳನ್ನು ಸ್ಟಾರ್ ನಿರ್ದೇಶಕರು, ಸ್ಟಾರ್ ನಟರು ಇಂತಹ ಆಫ್ ಬೀಟ್ ಚಿತ್ರಗಳನ್ನು ನಿರ್ಮಿಸಲು ಮುಂದಾಗುವುದಿಲ್ಲ. ಆದ್ದರಿಂದ ನಮ್ಮ ಇತಿಮಿತಿಯೊಳಗೆ ನಮ್ಮ ಕತೆಗಳನ್ನು ನಾವೇ ಹೇಳುವ ಸಾಹಸ ಮಾಡಬೇಕು. ನಾವು ಸೋಲಬಹುದು ಆದರೆ ಆ ಭಯದಲ್ಲಿ ನಮ್ಮ ಪ್ರಯತ್ನಗಳನ್ನೇ ನಿಲ್ಲಿಸಬಾರದು, ಕನಿಷ್ಟ ಅಂತಹ ಭೂಮಿಕೆಯನ್ನಾದರೂ ನಾವು ಸೃಷ್ಟಿಸಬೇಕುʼ ಎನ್ನುವ ಚಮರಂ ತಮ್ಮ ಪ್ರಯೋಗಗಳನ್ನು ಎದೆಗುಂದದೆ ಮಾಡುವುದಕ್ಕೆ ಮುಂದಾಗಿರುವುದನ್ನು ನಾವು ಅಭಿನಂದಿಸಲೇಬೇಕು.

ಬಾಬಾಸಾಹೇಬರ ಆತ್ಮಕತೆ “ವೀಸಾ ನಿರೀಕ್ಷೆಯಲ್ಲಿ” ಆರು ಘಟನೆಗಳ ಒಂದು ಸಣ್ಣ ಕೃತಿ. ಆದರೆ ಈ ಕೃತಿಯಲ್ಲಿನ ಘಟನೆಗಳು ಇಡೀ ಭಾರತದ ಅಂತಃಸತ್ವವನ್ನು ಅಲ್ಲಾಡಿಸುತ್ತವೆ. ಜಾತೀಯತೆಯ ಮನೋಧೋರಣೆಯು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಎಲ್ಲಾ ಧರ್ಮ ಮತ್ತು ಜಾತಿಗಳೊಳಗೆ ಎಷ್ಟರಮಟ್ಟಿಗೆ ರಕ್ತಗತವಾಗಿದೆ ಎಂಬುದನ್ನು ಈ ಕೃತಿಯಲ್ಲಿ ಬಾಬಾಸಾಹೇಬರು ಅನಾವರಣಗೊಳಿಸಿದ್ದಾರೆ. ಇಲ್ಲಿನ ಘಟನೆಗಳು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಈಗಲೂ ಅಷ್ಟೇ ಹಾಸುಹೊಕ್ಕಾಗಿರುವುದು ತಲ್ಲಣ ತರಿಸುವ ಸಂಗತಿ. ಈ ಘಟನೆಗಳನ್ನು ತೆರೆಗೆ ತರುವುದಕ್ಕೆ ಬಹಳವೇ ಸಿದ್ದತೆ, ಬದ್ದತೆ ಮತ್ತು ಬಂಡವಾಳ ಬೇಕು. ಚಮರಂ ಇದೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ? ಎಂಬ ಪ್ರಶ್ನೆ ಮತ್ತು ಕುತೂಹಲ ಇದ್ದೇ ಇದೆ.
ಅದೇನೇ ಇರಲಿ ಇಂತಹ ಪ್ರಯತ್ನಗಳು ನಡೆಯುತ್ತಿರಬೇಕು. ಜನರು ಇಂತಹ ಭಿನ್ನ ಸಾಹಸಗಳನ್ನು ಪ್ರೋತ್ಸಾಹಿಸಬೇಕು. ಇದು ಮುಂದಿನ ಪೀಳಿಗೆಗೆ ಕನಿಷ್ಟ ಮಾರ್ಗದರ್ಶಕವಾದೀತು. ಚಮರಂ ಅವರ ಈ ಸಾಹಸಕ್ಕೆ ಸ್ವಾಗತ ಕೋರುತ್ತಾ ಚಿತ್ರ ಅತ್ಯತ್ತಮವಾಗಿ ಮೂಡಿಬರಲಿ ಎಂದು ಹಾರೈಸೋಣ.

  • ಟೀಮ್‌ ಬಿಗ್‌ ಕನ್ನಡ
One thought on “ಕನ್ನಡ ಬೆಳ್ಳಿತೆರೆಗೆ ಬಾಬಾಸಾಹೇಬರ Waiting for Visa!”

Leave a Reply

Your email address will not be published. Required fields are marked *