ಹಾಸನ: ಪ್ರಸ್ತುತ ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಅಸಮಾನತೆ ದೂರವಾಗಿಲ್ಲ. ದಲಿತ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗುತ್ತಾರೆಂಬ ಕಾರಣಕ್ಕೆ ಇತರ ಸದಸ್ಯರು ಗೈರಾಗುವ ಮೂಲಕ ತಮ್ಮ ಬುದ್ದಿ ಪ್ರದರ್ಶಿಸಿದ್ದಾರೆ ಎಂದು ಕವಿ ಸುಬ್ಬು ಹೊಲೆಯಾರ್ ಅವರು ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬೆಂಗಳೂರಿನ ʻಚೆ ಪುಸ್ತಕ, ವೆಂಕಟಾಲʼ ಪ್ರಕಾಶನ ಮತ್ತು ʻಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾಸನʼ ವತಿಯಿಂದ ಏರ್ಪಡಿಸಿದ್ದ ಡಾ.ಐಚನಹಳ್ಳಿ ಕೃಷ್ಣಪ್ಪ ರಚಿತ ಮತಿಘಟ್ಟ ಕೃಷ್ಣಮೂರ್ತಿ ಬದುಕು ಬರಹ ಹಾಗು ಕಂಚಿನ್ತಟ್ಟೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಕಾವ್ಯ ಕೂಡ ರಾಜಕೀಯ ಅಸ್ತ್ರವಾಗಬೇಕು. ಕಾವ್ಯದ ಅಕ್ಷರಗಳು ರಾಜಕೀಯಕ್ಕೆ ಹೊರತಾಗಿಲ್ಲ ಎಂಬುದು ಗಮನಾರ್ಹ ಸಂಗತಿ. ಅಮಾನುಷ ಪದ್ದತಿಗಳ ವಿರುದ್ಧ ಸಂಘಟಿತ ಹೋರಾಟ ಬೇಕು. ಈ ಬಗ್ಗೆ ನಮ್ಮೊಳಗಿನ ಅರಿವು ಜಾಗೃತವಾಗದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಬದುಕು, ಬರಹ ನಮ್ಮನ್ನು ಮುನ್ನಡೆಸಬೇಕು ಆದರೆ ಹಿಮ್ಮುಖವಾಗಿ ಕರೆದೊಯ್ಯುತ್ತಿದೆ. ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ನಿಷ್ಟ್ರಿಯವಾಗಿವೆ. ಚಂದ್ರಪ್ರಸಾದ್ ತ್ಯಾಗಿ ಅವರ ಬಳಿಕ ಸಂಘಟಿತ ಹೋರಾಟವನ್ನು ಕಾಣಲು ಆಗುತ್ತಿಲ್ಲ. ದಲಿತ ಮುಖಂಡರು ಎನಿಸಿಕೊಂಡರು ವೈಯಕ್ತಿಕ ಕೆಲಸಗಳಿಗಾಗಿ ಮಾತ್ರ ವೇದಿಕೆಗೆ ಬರುತ್ತಾರೆ ಹೊರತು ಸಮುದಾಯದ ಬೆಳವಣಿಗೆ ಬಗ್ಗೆ ಯೋಚಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೇಖಕ ಡಾ. ಪ್ರಕಾಶ್ ಮಂಟೇದ ಅವರು ಮಾತನಾಡಿ, ಆಧುನಿಕತೆ ಬೆಳೆದಂತೆ ಗ್ರಾಮ ಸ್ವರಾಜ್ಯ ಮೂಲೆಗುಂಪಾಗುತ್ತಿದೆ. ಪ್ರಾಚೀನ ಭಾರತದ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗು ವೈಭವವನ್ನು ಅರಿಯದಿದ್ದರೆ ನಾವು ಪೂರ್ವಾಗ್ರಹಪೀಡಿತ ಅಂಗವಿಕಲರಾಗುತ್ತೇವೆ ಎಂದು ಹೇಳಿದರು. ಮತಿಘಟ್ಟ ಕೃಷ್ಣಮೂರ್ತಿ ಅವರು ಇಂದಿನ ಪೀಳಿಗೆಗೆ ಪರಿಚಯವೇ ಇಲ್ಲ. ಗ್ರಾಮೀಣ ಜೀವನ ಹೇಗಿತ್ತು ಎನ್ನುವುದನ್ನು ಅರಿಯಲು ಜಾನಪದ ಸಾಹಿತ್ಯವನ್ನು ಅರಿಯಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕೃಷ್ಣಮೂರ್ತಿ ಅವರು ಹತ್ತು ಸಾವಿರ ಪುಟಗಳಷ್ಟು ರಚಿಸಿದ್ದಾರೆ. ಆದರೆ ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲೂ ಮತಿಘಟ್ಟ ಕೃಷ್ಣಮೂರ್ತಿ ಅವರನ್ನು ಪರಿಚಯಿಸುವ ಪಾಠಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಸಂಸ್ಕೃತಿ ಯಾವುದು, ಮೂಲಧಾತು ಏನು ಹಾಗು ಪರಂಪರೆ ಹೇಗಿತ್ತು ಎಂಬುದನ್ನು ಅರಿಯುವ ಸಣ್ಣ ಪ್ರಯತ್ನವನ್ನು ನಮ್ಮ ಸಮಕಾಲೀನರು ಮಾಡುತ್ತಿಲ್ಲ. ಹಿರಿಯರು ಬದುಕಿದ ರೀತಿ ನಾವು ಬದುಕಲು ಸಾಧ್ಯವಿಲ್ಲ. ಕನಿಷ್ಠ ಅವರು ಹಾಕಿಕೊಟ್ಟ ಜ್ಞಾನವನ್ನು ಸಹ ಗ್ರಹಿಸುತ್ತಿಲ್ಲ ಎಂದೆನಿಸುತ್ತದೆ. ಡಾ.ಐಚನಹಳ್ಳಿ ಕೃಷ್ಣಪ್ಪ ಅವರು ಮತಿಘಟ್ಟ ಕೃಷ್ಣಮೂರ್ತಿ ಅವರ ಕುರಿತು ಕೃತಿ ರಚಿಸಿ ಬದುಕಿನ ವಿವರ, ನಿಲುವು, ಜಾನಪದ ಲೋಕಕ್ಕೆ ಏನೆಲ್ಲ ಕೊಡುಗೆ ಕೊಟ್ಟಿದ್ದಾರೆ ಅನ್ನೋದನ್ನ ಚೆನ್ನಾಗಿ ವಿವರಿಸಿದ್ದಾರೆ. ಕೃಷ್ಣಮೂರ್ತಿ ಅವರ ಬದುಕಿನ ಧ್ಯೇಯ ಏನಾಗಿತ್ತು ಎನ್ನುವುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ದೇಶ ವಿಶಾಲವಾಗಿದೆ, ಪರ್ವತಗಳು ಎತ್ತರದಲ್ಲಿವೆ. ಆದರೆ ಮನುಷ್ಯರ ಮನಸ್ಸು ವಿಶಾಲವಾಗಿಲ್ಲ ಎಂದು ಕೃಷ್ಣಮೂರ್ತಿ ಹೇಳಿದ್ದರು. ಆ ನಿಟ್ಟಿನಲ್ಲಿ ಸೂಕ್ಷ್ಮವಾಗಿ ಕೆಲಸ ಮಾಡಿದ ಅವರು ಮನುಷ್ಯರ ಮನಸ್ಸು ವಿಶಾಲವಾಗಬೇಕೆಂದು ಪ್ರತಿಪಾದಿಸಿದ್ದರು ಎಂದರು.

ಗೀತ ರಚನೆಕಾರ ಹೃದಯಶಿವ ಅವರು ಮಾತನಾಡಿ, ಹಾಸನ ಜಿಲ್ಲೆಗೆ ತನ್ನದೇಯಾದ ಸಾಂಸ್ಕೃತಿಕ ನೆಲೆ ಇದೆ. ಆ ಕಾರಣಕ್ಕಾಗಿಯೇ ರಾಜ್ಯಾದ್ಯಂತ ಜಿಲ್ಲೆ ಖ್ಯಾತಿ ಗಳಿಸಿದೆ. ಎಲ್ಲಾ ಪ್ರಾಕಾರಗಳಂತೆ ಜಾನಪದಕ್ಕು ತನ್ನದೇಯಾದ ಮಹತ್ವವಿದೆ. ಜಾನಪದ ಅಂದರೆ ಹಾಡು ಮಾತ್ರವಲ್ಲ. ನೃತ್ಯ, ಗೀತೆ ಎಲ್ಲವನ್ನೂ ಜಾನಪದದಲ್ಲಿ ಕಾಣಬಹುದು. ಇದು ಮಣ್ಣಿನಿಂದ ಹುಟ್ಟಿಕೊಂಡ ಸಂಸ್ಕೃತಿ ಎಂದರು. ಮನುಷ್ಯ ಆಧುನಿಕತೆಗೆ ಎಷ್ಟೇ ವಾಲಿದರೂ ನಮ್ಮ ಬೇರುಗಳು ಮೂಲದಲ್ಲೇ ಇರುತ್ತವೆ. ಆ ನಿಟ್ಟಿನಲ್ಲಿ ಜಾನಪದದ ಮಹತ್ವ ಎಷ್ಟೆಂಬುದು ಅರಿವಾಗುತ್ತದೆ. ಪ್ರಸ್ತುತ ನಾಗರಿಕತೆಯ ಹಾದಿಯನ್ನು ಗಮನಿಸಿದರೆ ಮೊದಲು ಮನುಷ್ಯನ ಗುರಿ ಬದುಕು ಮಾತ್ರ ಆಗಿತ್ತು. ಆದರೆ ಹೊಟ್ಟೆ ತುಂಬಿದ ಮೇಲೆ ಬೇರೆ ಬೇರೆ ಆಸೆಗಳು ಹುಟ್ಟಿಕೊಂಡವು. ವ್ಯಕ್ತಿಯ ಗ್ರಹಿಕೆ ಹೆಚ್ಚಿದಂತೆ ಬೇಟೆಯಾಡುವುದನ್ನು ಕಲಿತ. ಆ ಬಳಿಕ ಕೃಷಿ ಹಾಗು ಹೈನುಗಾರಿಕೆಯನ್ನು ರೂಢಿಸಿಕೊಂಡ. ಆದರೆ ಇಂದು ಎಲ್ಲವನ್ನೂ ಸಾಧಿಸಿ ಯಾಂತ್ರಿಕ ಬದುಕಿಗೆ ಜೋತು ಬಿದ್ದಿದ್ದಾನೆ ಎಂದರು.

ಕಂಚಿನ್ತಟ್ಟೆ ಕೃತಿ ಕುರಿತು ಲೇಖಕ ಚಲಂ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ, ಸಂತ ಫಿಲೋಮಿನಾ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಸಿಸ್ಟರ್ ಜಾಸ್ಮಿನ್, ಲೇಖಕ ಪ್ರಕೃತಿ ಎನ್.ಬನವಾಸಿ, ಪ್ರಕಾಶಕ ವಿ.ಆರ್.ಕಾರ್ಪೆಂಟರ್ ಮಾತನಾಡಿದರು. ಕೃತಿಕಾರ ಡಾ.ಐಚನಹಳ್ಳಿ ಕೃಷ್ಣಪ್ಪ ಉಪಸ್ಥಿತದ್ದರು. ಪತ್ರಕರ್ತರಾದ ನಾಗರಾಜ್ ಹೆತ್ತೂರು ಸ್ವಾಗತಿಸಿದರೆ, ಬಿ.ಆರ್.ಬೊಮ್ಮೆಗೌಡ ಕಾರ್ಯಕ್ರಮ ನಿರೂಪಿಸಿದರು. ಪ್ರೇಕ್ಷಕರ ಸಾಲಿನಲ್ಲಿ ಅಂತರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್‌, ಮಲೆನಾಡ ಸಾಹಿತಿ ಹಾಡ್ಲಹಳ್ಳಿ ನಾಗರಾಜ್‌, ಹಿರಿಯ ಲೇಖಕಿ ಬಾನು ಮುಸ್ತಾಕ್‌, ಅಚೀವರ್ಸ್‌ ಶಿಕ್ಷಣ ಸಂಸ್ಥೆಯ ಝುಲ್ಫೀಕರ್‌ ಅಹ್ಮದ್‌ ಮುಂತಾದವರು ಆಸೀನರಾಗಿದ್ದರು.

Leave a Reply

Your email address will not be published. Required fields are marked *