ಸಂತ ತುಕಾರಾಮರ ಪದ್ಯವೊಂದು ಮೂಕನಾಯಕ ಪತ್ರಿಕೆಯ ಮೊದಲ ಅಂಕಣವಾಗಿ ಪ್ರಕಟವಾಗುತ್ತದೆ. ಆ ಪದ್ಯ ಬಾಬಾಸಾಹೇಬ್ ಅಂಬೇಡ್ಕರರ ಮುಂದಿನ ಹೋರಾಟ ಯಾರಿಗಾಗಿ ಮತ್ತು ಏತಕ್ಕಾಗಿ ಎಂದು ಸ್ಪಷ್ಟಪಡಿಸಿತು. ಅಂದು ಭಾರತದ ಮನುವಾದಿಗಳಿಗೆ ತಿಳಿಯಲಿಲ್ಲ “ದನಿ ಇಲ್ಲದವರಿಗೆ ದನಿಯಾಗಿ ಒಬ್ಬ ಮಹಾನ್ ನಾಯಕ ಉದಯಿಸಿದ್ದಾನೆಂದು. 1920 ಜನವರಿ 31 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರು “ಮೂಕನಾಯಕ” ಎಂಬ ಶೀರ್ಷಿಕೆಯಲ್ಲಿ ಮರಾಠಿ ಭಾಷೆಯ ಪತ್ರಿಕೆಯನ್ನು ಆರಂಭಿಸುತ್ತಾರೆ. ಬಹುಶಃ ಇದು ಇತಿಹಾಸದಲ್ಲಿ ದಾಖಲಾಗಲೇಬೇಕಾದ ಘಟನೆ. ಏಕೆಂದರೆ ಸಾವಿರಾರು ವರ್ಷಗಳು ಶಿಕ್ಷಣದಿಂದ ವಂಚಿತರಾಗಿದ್ದ ಅಸ್ಪೃಶ್ಯ ಸಮುದಾಯದ ಮೊಟ್ಟಮೊದಲ ಪತ್ರಿಕೆ ಇದಾಗಿದೆ.
ಅಮೇರಿಕಾದ “ಕೊಲಂಬಿಯಾ ವಿಶ್ವವಿದ್ಯಾಲಯ”ದಲ್ಲಿ ಆಗಷ್ಟೇ ವಿದ್ಯಾಭ್ಯಾಸ ಮುಗಿಸಿ, ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಛಲದಿಂದ ಆಗಮಿಸಿದ್ದರು ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್. ಒಂದು ಅಸ್ಪೃಶ್ಯ ಸಮುದಾಯದ ವ್ಯಕ್ತಿ ಉನ್ನತ ವ್ಯಾಸಂಗ ಮಾಡಿದ್ದಾರೆ ಎಂಬುದು ಬಿಟ್ಟರೆ ಬಾಬಾಸಾಹೇಬ್ ಅಂಬೇಡ್ಕರರ ಬಗ್ಗೆ ಅಂದು ಯಾರಿಗೂ ಅಷ್ಟಾಗಿ ಪರಿಚಯವಿರಲಿಲ್ಲ. ಆದರೆ ಅವರಲ್ಲಿರುವ ಜ್ಞಾನ ಮತ್ತು ಸಾಮರ್ಥ್ಯವನ್ನು ಭಾರತ ದೇಶ ಕಾಣಲು ಹೆಚ್ಚು ಸಮಯ ಹಿಡಿಸಲಿಲ್ಲ.
“ಮೂಕನಾಯಕ” ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಅಂದು ಬಾಬಾಸಾಹೇಬರು ಹೇಳಿದ್ದು ಇಂದಿಗೂ ನಡೆಯುತ್ತಿದೆ!
ಮೂಕನಾಯಕ ಪತ್ರಿಕೆಯ ಮೊದಲ ಸಂಚಿಕೆಯು ಸಂತ ತುಕಾರಾಮರ ಪದ್ಯದಿಂದ ಆರಂಭವಾಗುತ್ತದೆ.
“ಆಸೆಗಳನ್ನು ಇಟ್ಟುಕೊಂಡು ಏನು ಮಾಡಲಿ.
ನನ್ನ ತುತ್ತೂರಿಯನ್ನು ಅನವಶ್ಯಕವಾಗಿ ಊದುತ್ತಿದ್ದೇನೆ
ಈ ಪ್ರಪಂಚ ಮೂಕರ ದನಿಯನ್ನು ಕೇಳುವುದೇ ಇಲ್ಲ
ಅವರಿಗೆ ಗೌರವವೂ ನೀಡುವುದಿಲ್ಲ,
ಅವರನ್ನಾಗಲಿ, ಅವರ ಅಗತ್ಯತೆಗಳನ್ನಾಗಿ
ಪರಿಗಣಿಸುವುದೂ ಇಲ್ಲ”
ಹೀಗೆ ಸಂತ ತುಕಾರಾಮರ ಪದ್ಯದ ಪ್ರೇರಣೆಯಿಂದ ಮೂಕರ ಮಾತು ಪ್ರಪಂಚಕ್ಕೆ ಕೇಳುವಂತೆ ಮಾಡುವುದೇ ಮೂಕನಾಯಕ ಪತ್ರಿಕೆಯ ಧ್ಯೇಯವಾಯಿತು. ಏಕೆಂದರೆ ಅಂದು ಹಿಂದುಳಿದ ಮತ್ತು ಅಸ್ಪೃಶ್ಯ ಸಮುದಾಯಗಳ ಸಮಸ್ಯೆಗಳ ಬಗ್ಗೆಯಾಗಲಿ, ಅವರ ಮೇಲೆ ನಡೆಯುವ ಅನ್ಯಾಯಗಳನ್ನಾಗಲಿ ಮಾತನಾಡುವಂತ ಒಂದೇ ಒಂದು ಪತ್ರಿಕೆ ಇರಲಿಲ್ಲ ಮತ್ತು ಈ ಸಮುದಾಯಗಳ ಬಗ್ಗೆ ಯಾವುದೇ ಕಾಳಜಿಯೂ ಅಂದಿನ ಮಾಧ್ಯಮಗಳಿಗೆ ಇರಲಿಲ್ಲ. ಅಂಥ ಒಂದು ದುಸ್ಥಿತಿಯ ಸಂದರ್ಭದಲ್ಲಿಯೇ, ಭಾರತದಲ್ಲಿ ಕಡೆಗಣಿಸಲ್ಪಟ್ಟ ಸಮುದಾಯಗಳ ಸಮಸ್ಯೆಗಳನ್ನು ಮತ್ತು ಅದರ ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸಲು ಮೂಕನಾಯಕ ಪತ್ರಿಕೆಯನ್ನು ಬಾಬಾಸಾಹೇಬ್ ಅಂಬೇಡ್ಕರರು ಆರಂಭಿಸಿದರು.
ಸಂತ ತುಕಾರಾಮರ ಪದ್ಯವನ್ನು ಮುದ್ರಿಸಿದ ಬಾಬಾಸಾಹೇಬರು “ಯಾವುದೇ ಚಳುವಳಿ ಜಯಿಸಬೇಕಾದರೆ ಆ ಚಳುವಳಿಯ ಉದ್ದೇಶಗಳು ಪ್ರಚಾರವಾಗಬೇಕು. ಹಾಗಾಗಿ ಇಂದು ಚಳುವಳಿಗೆ ಪತ್ರಿಕೆ ಎಂಬ ಮಾಧ್ಯಮ ಅಗತ್ಯವಾಗಿ ಬೇಕಾಗುತ್ತದೆ. ಪ್ರತಿಕಾ ಮಾಧ್ಯಮ ಇರದ ಚಳುವಳಿ ರೆಕ್ಕೆಗಳಿಲ್ಲದ ಹಕ್ಕಿಯಂತೆ. ನಮ್ಮ ಅಸ್ಪೃಶ್ಯ ಸಮುದಾಯಗಳ ಮೇಲೆ ಆಗುತ್ತಿರುವ ಹಾಗೂ ಭವಿಷ್ಯದಲ್ಲಿ ಆಗಬಹುದಾದಂತಹಾ ಅನ್ಯಾಯಗಳನ್ನು ದೂರ ಮಾಡುವ ಉಪಾಯಗಳನ್ನು ಹುಡುಕುವುದರ ಜೊತೆಗೆ ನಮ್ಮ ಭವಿಷ್ಯದ ಉನ್ನತಿಗಾಗಿ ಸರಿಯಾದ ಮಾರ್ಗಗಳ ಬಗ್ಗೆ ಚರ್ಚೆ ಮಾಡಿ ಜಾಗೃತಿ ಮೂಡಿಸಲು ಪತ್ರಿಕೆಗಿಂತಲೂ ಉತ್ತಮವಾದ ಮಾಧ್ಯಮವಿಲ್ಲ. ಆದರೆ ಬಾಂಬೆ ನಗರದ ಪತ್ರಿಕೆಗಳನ್ನು ಗಮನಿಸಿದರೆ ಅವೆಲ್ಲವೂ ಒಂದೇ ಜಾತಿಯ ಹಿತಕ್ಕಾಗಿ ಕೆಲಸ ಮಾಡುತ್ತಿವೆ. ಮತ್ತು ಅದೇ ಜಾತಿಯ ಹಿಡಿತದಲ್ಲಿವೆ. ಅವರಿಗೆ ಇತರ ಜಾತಿಗಳ ಬಗ್ಗೆ ಯಾವ ಕಾಳಜಿಯೂ ಇಲ್ಲ. ಬದಲಿಗೆ ಇತರ ಜಾತಿಗಳ ಬಗ್ಗೆ ಅಹಿತಕರವಾದ ವಿಚಾರಗಳೂ ಆ ಪತ್ರಿಕೆಗಳಲ್ಲಿ ಬರುತ್ತವೆ” ಎಂದು ಹೇಳುತ್ತಾರೆ.
ಅಂದರೆ ಒಂದು ಚಳುವಳಿಗೆ ಮಾಧ್ಯಮ ಎನ್ನುವುದು ಎಷ್ಟು ಅಗತ್ಯವೆಂದು ನಾವು ಅರಿತುಕೊಳ್ಳಬೇಕಿದೆ. ಜೊತೆಗೆ ಪತ್ರಿಕಾ ಮಾಧ್ಯಮವಾಗಲಿ, ಟಿ ವಿ ಮಾಧ್ಯಮವಾಗಲಿ ಈಗಲೂ ಪ್ರಬಲ ಜಾತಿಗಳ ಕೈಯಲ್ಲೇ ಇವೆ. ಅಲ್ಲದೇ ಈ ಮಾಧ್ಯಮಗಳಿಗೆ ಜನರ ನಿಜವಾದ ಸಮಸ್ಯೆಗಳಿಗಿಂತಲೂ, ಜನರನ್ನು ವಿಭಜಿಸುವ ಮತ್ತು ಜನವಿರೋಧಿ ನಾಯಕರನ್ನು ಹೊಗಳುವ ಹೊಗಳುಭಟ್ಟರಂತೆ ವರ್ತಿಸುತ್ತಿರುವುದು ನೀವು ನೋಡುತ್ತಲೇ ಇದ್ದೀರಿ. ಅಂದು ಬಾಬಾಸಾಹೇಬರ ಕಾಲಘಟ್ಟದಲ್ಲಿ ಇದ್ದಂತಹಾ ಮಾಧ್ಯಮಗಳೇ ಇಂದಿಗೂ ಹೆಸರು ಬದಲಿಕೊಂಡು ಒಂದೇ ವರ್ಗದ ಕೈಯಲ್ಲಿದೆ.
ಮೂಕನಾಯಕ ಪತ್ರಿಕೆಯ ಬಗ್ಗೆ ಜಾಹಿರಾತು ನೀಡಲು ನಿರಾಕರಿಸಿದ ಜಾತಿವಾದಿ ದೇಶಭಕ್ತರು ಇವರೇ ನೋಡಿ
ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೂಕನಾಯಕ ಪತ್ರಿಕೆ ಆರಂಭ ಮಾಡಲು ನಿರ್ಧರಿಸಿದಾಗ, ಮೊದಲು ಅಡಚಣೆಯಾಗಿದ್ದು ಪತ್ರಿಕೆ ಆರಂಭಿಸಲು ಬೇಕಾದ ಹಣದ ಕೊರತೆ. ಆದರೆ ಬಾಬಾಸಾಹೇಬರ ಸ್ನೇಹಿತರಾಗಿದ್ದ ದತ್ತೋಬ ಪವಾರ್ ಎಂಬುವವರು ಅಂದು ಕೊಲ್ಲಾಪುರದ ಮಹಾರಾಜರಾಗಿದ್ದ ಛತ್ರಪತಿ ಶಾಹುಮಹಾರಾಜರಿಗೆ ಆಪ್ತರಾಗಿದ್ದರು. ಅವರೇ ಬಾಬಾಸಾಹೇಬ್ ಅಂಬೇಡ್ಕರರನ್ನು ಶಾಹು ಮಹಾರಾಜರಿಗೆ ಪರಿಚಯಿಸುತ್ತಾರೆ. ಬಾಬಾಸಾಹೇಬರಿಗಿಂತ ಮೊದಲೇ ಸಾಮಾಜಿಕ ಪರಿವರ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಾಹು ಮಹಾರಾಜರಿಗೆ, ಬಾಬಾಸಾಹೇಬ್ ಅಂಬೇಡ್ಕರರು ಚಳುವಳಿ ಮುನ್ನಡೆಸಬಲ್ಲ ಮುಂದಿನ ಸಮರ್ಥ ನಾಯಕನಾಗಿ ಕಂಡರು. ಮೂಕನಾಯಕ ಪತ್ರಿಕೆ ಆರಂಭಿಸಬೇಕೆಂಬ ಬಯಕೆ ಬಾಬಾಸಾಹೇಬರಿಂದ ವ್ಯಕ್ತವಾದಾಗ ಕೂಡಲೇ ಅಂದು 2500/- ರೂಪಾಯಿಗಳನ್ನು ನೀಡಿ ಸಹಾಯ ಮಾಡುತ್ತಾರೆ. ಹೀಗೆ ಬಾಬಾಸಾಹೇಬರಿಗೆ ಶಾಹು ಮಹರಾಜರೆಂಬ ದೊಡ್ಡ ಶಕ್ತಿಯೇ ಜೊತೆಗೆ ನಿಂತದ್ದು ಮತ್ತಷ್ಟು ಉತ್ಸಾಹವನ್ನು ತುಂಬುತ್ತದೆ.
ಪತ್ರಿಕೆ ಆರಂಭಿಸಲು ಬೇಕಾದ ಮುದ್ರಣಾಲಯ ಇತರ ಎಲ್ಲಾ ಸಾಮಗ್ರಿಗಳು ಸಿದ್ಧವಾದವು. ಆದರೆ ಮೂಕನಾಯಕ ಎಂಬ ಪತ್ರಿಕೆ ಬಿಡುಗಡೆಯಾಗುತ್ತಿದೆ ಎಂದು ಜನರಿಗೆ ತಿಳಿಸಲು ಜಾಹಿರಾತನ್ನು ನೀಡಬೇಕಾಗಿತ್ತು. ಅದಕ್ಕಾಗಿ ಅಂದು ಬಾಲಗಂಗಾಧರನಾಥ್ ತಿಲಕರು ಆರಂಭಿಸಿದ್ದ “ಕೇಸರಿ” ಪತ್ರಿಕೆಗೆ ಮೂಕನಾಯಕ ಪತ್ರಿಕೆಯ ಬಗ್ಗೆ ಜಾಹಿರಾತು ನೀಡಲು 3 ರೂಪಾಯಿಗಳನ್ನು ಮುಂಗಡವಾಗಿಯೇ ಪಾವತಿಸಿರುತ್ತಾರೆ. ಆದರೆ ಈ ಮೂಕನಾಯಕ ಪತ್ರಿಕೆ ಒಬ್ಬ ಅಸ್ಪೃಶ್ಯ ಸಮುದಾಯದ ವ್ಯಕ್ತಿಯಿಂದ ಆರಂಭವಾಗುತ್ತಿರುವ ಪತ್ರಿಕೆ ಎಂದು ತಿಳಿದ ಕೂಡಲೇ ಜಾಹಿರಾತನ್ನು ನೀಡಲು ನಿರಾಕರಿಸಿಬಿಡುತ್ತಾರೆ.
ಸ್ವರಾಜ್ಯದ ಬಗ್ಗೆ ಪುಂಕಾನುಪುಂಕವಾಗಿ ಅಬ್ಬರಿಸಿ ಬರೆದ “ಕೇಸರಿ” ಪತ್ರಿಕೆಗೆ ಮೂಕನಾಯಕ ಪತ್ರಿಕೆಯೂ ಅಸ್ಪೃಶ್ಯವಾಗಿ ಕಂಡದ್ದು ಈ ದೇಶದ “ಜಾತಿವಾದಿ ದೇಶಭಕ್ತರ” ಮನಸ್ಥಿತಿ ಎಂತಹುದು ಎಂದು ಅರ್ಥಮಾಡಿಸುತ್ತದೆ. ಆದರೂ ಬಾಬಾಸಾಹೇಬರು ದೃತಿಗೆಡದೆ ಇತರ ಪತ್ರಿಕೆಗಳಿಗೂ ಜಾಹಿರಾತು ನೀಡಲು ಸಂಪರ್ಕಿಸುತ್ತಾರೆ. ಅವರಿಂದಲೂ ಇದೇ ಜಾತಿವಾದಿ ಪ್ರತಿಕ್ರಿಯೆ ಪುನರಾವರ್ತಿಸುತ್ತದೆ. ಇದೇ ಕಾರಣಕ್ಕೆ ಬಾಂಬೆಯಲ್ಲಿರುವ ಪತ್ರಿಕೆಗಳು ಒಂದೇ ಜಾತಿಯ ಹಿತವನ್ನು ಕಾಪಾಡುತ್ತವೆ ಎಂದು ತಮ್ಮ ಮೊದಲ ಸಂಚಿಕೆಯಲ್ಲಿಯೇ ಬರೆಯುತ್ತಾರೆ. ಮೂಕನಾಯಕ ಪತ್ರಿಕೆಗೆ ಜಾಹಿರಾತು ಕೂಡಾ ನೀಡಲು ನಿರಾಕರಿಸಿದ ಜಾತಿವಾದಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಶಾಹು ಮಹಾರಾಜರು ಅನಕ್ಷರಸ್ಥ ಸಮುದಾಯಗಳಿಗೆ ಬಾಬಾಸಾಹೇಬರ ದನಿ ಮುಟ್ಟಲು ಮೂಕನಾಯಕ ಪತ್ರಿಕೆಯನ್ನು ಓದಿ ಅರ್ಥೈಸಲು ಸಂಬಳ ಕೊಟ್ಟು ಕಳಿಸುತ್ತಾರೆ.
ಮೂಕನಾಯಕ vs ಸ್ವರಾಜ್ಯ
ಒಂದು ಸಮುದಾಯ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದರೂ, ಅವಮಾನಗಳನ್ನು ಭರಿಸಿಕೊಂಡೇ ನಿದ್ರಿಸುತ್ತಿರುವಾಗ ಅವರನ್ನು ಜಾಗೃತಿಗೊಳಿಸಬೇಕಾದ ಬಹುದೊಡ್ಡ ಜವಾಬ್ದಾರಿ ಬಾಬಾಸಾಹೇಬ್ ಅಂಬೇಡ್ಕರರ ಮೇಲೆ ಇತ್ತು. ಜೊತೆಗೆ ಸ್ವತಂತ್ರ ಚಳುವಳಿಯು ಗಾಂಧೀಜಿಯವರ ಸಾರ್ವಭೌಮ ನೇತೃತ್ವದಲ್ಲಿ “ಸ್ವರಾಜ್ಯ” ಬೇಡಿಕೆಯಲ್ಲಿ ನಿರತವಾಗಿತ್ತು. ಆದರೆ ಬಾಬಾಸಾಹೇಬ್ ಅಂಬೇಡ್ಕರರು ಸ್ವರಾಜ್ಯ ಎಂಬುದು ಏನು ಎಂದು ಮೂಕನಾಯಕ ಪತ್ರಿಕೆಯ ಮುಖಾಂತರ ಪ್ರಶ್ನಿಸುತ್ತಾರೆ. “ಸ್ವರಾಜ್ಯ ಎಂದರೆ ಏನು? ಮತ್ತು ಯಾರಿಗಾಗಿ ಸ್ವರಾಜ್ಯ? ಸ್ವರಾಜ್ಯ ಎಂದರೆ ನೀವು ಸ್ವಯಂ ಆಡಳಿತ ಮಾಡುವುದೆ? ಅಥವಾ ಅಸ್ಪೃಶ್ಯರ ಮೇಲೆ ನೀವು (ಮೇಲ್ಜಾತಿಗಳು) ಆಡಳಿತ ಮಾಡುವುದೇ? ಮೊದಲು ಇದನ್ನು ಉತ್ತರಿಸದೇ ಸ್ವರಾಜ್ಯ ಎಂಬ ಬೇಡಿಕೆ ಕುಠಿಲತನದಿಂದ ಕೂಡಿರುತ್ತದೆ ಎಂದು ಅರ್ಥ. ಸ್ವರಾಜ್ಯ ಎಂಬುದು ಅಸ್ಪೃಶ್ಯ ಸಮುದಾಯಗಳಿಗೂ ಸಿಗುತ್ತದೆಯೇ ಅಥವಾ ಕೇವಲ ಮೇಲ್ಜಾತಿಗಳಿಗೆ ಮಾತ್ರವೇ? ಅಥವಾ ಸ್ವರಾಜ್ಯ ಎಂಬುದು ಮೇಲ್ಜಾತಿಗಳಿಗೆ ಅಸ್ಪೃಶ್ಯರನ್ನು ಶೋಷಣೆ ಮಾಡುವ ಸ್ವಾತಂತ್ರವನ್ನು ನೀಡುವ ಅಸ್ತ್ರವೇ? ಹಾಗಾದರೆ ಬ್ರಾಹ್ಮಣರಿಗೆ ಸ್ವರಾಜ್ಯ ಜನ್ಮಸಿದ್ದ ಹಕ್ಕಾದರೆ ಅಸ್ಪೃಶ್ಯರಿಗೂ ಮೇಲ್ಜಾತಿಗಳಿಂದ ಸ್ವರಾಜ್ಯ ಬೇಕಿದೆ. ಬ್ರಿಟೀಷರಿಂದ ಮೇಲ್ಜಾತಿಗಳಿಗೆ ಸ್ವಯಂ ಆಡಳಿತ ಬೇಕಾದರೆ, ಮೇಲ್ಜಾತಿಗಳಿಂದ ಸಾವಿರಾರು ವರ್ಷಗಳು ಅನ್ಯಾಯಕ್ಕೊಳಗಾದ ಅಸ್ಪೃಶ್ಯ ಸಮುದಾಯಗಳಿಗೆ ಮೇಲ್ಜಾತಿಗಳಿಂದ ಸ್ವಯಂ ಆಡಳಿತ ಬೇಕಾಗಿದೆ”.
ಅಷ್ಟೇ ಅಲ್ಲದೇ ಗಾಂಧೀಜಿ ನೇತೃತ್ವದ ಕಾಂಗ್ರೆಸಿಗೆ ಮೂರು ಸವಾಲುಗಳನ್ನು ಹಾಕುತ್ತಾರೆ.
1. ಬ್ರಿಟೀಷರಿಂದ ಸ್ವರಾಜ್ಯವನ್ನು ಕೇಳುತ್ತಿರುವವರು ಇದೇ ಅಸ್ಪೃಶ್ಯ ಸಮುದಾಯಗಳಿಗೆ ನಿಮ್ಮ ಗುಲಾಮಗಿರಿಯಿಂದ, ಅನ್ಯಾಯಗಳಿಂದ ಸ್ವರಾಜ್ಯ ನೀಡಲು ಸಿದ್ದರಿದ್ದೀರ?
2. ಅಸ್ಪೃಶ್ಯ ಸಮುದಾಯಗಳಿಗೆ ಪ್ರತ್ಯೇಕ ರಾಜಕೀಯ ಹಕ್ಕುಗಳು ಪಡೆದಾಗಲೇ ಅವರಿಗೆ ಸ್ವರಾಜ್ಯ ಲಭಿಸಿದಂತೆ. ಈ ಸ್ವರಾಜ್ಯವನ್ನು ನೀಡಲು ಮೇಲ್ಜಾತಿಗಳು ಸಮ್ಮತಿಸುತ್ತೀರಾ?
3. ನೀವು ಕೇಳುತ್ತಿರುವ ಸ್ವರಾಜ್ಯದಲ್ಲಿ ಅಸ್ಪೃಶ್ಯ ಸಮುದಾಯಗಳಿಗೂ ನಿಮ್ಮಷ್ಟೇ ಸಮಾನವಾದ ಹಕ್ಕುಗಳು ನೀಡಲು ಒಪ್ಪಿಕೊಳ್ಳುವಷ್ಟು ಸಿದ್ದರಾಗಿದ್ದೀರ?
ಎಂದು ಸ್ಪಷ್ಟವಾಗಿ ಸ್ವರಾಜ್ಯ ಎಂಬುದು ಶೋಷಣೆ ಮಾಡುವ ಮೇಲ್ಜಾತಿಗಳಿಗೆ ಅಧಿಕಾರ ನೀಡಲು ಅಸ್ಪೃಶ್ಯ ಸಮುದಾಯಗಳು ಬೇಕೇ ಹೊರತೂ, ಅದೇ ಸ್ವರಾಜ್ಯ ಅಸ್ಪೃಶ್ಯರ ಸಮುದಾಯಗಳಿಗೆ ನೀಡಲು ಮೇಲ್ಜಾತಿಗಳು ಸಿದ್ಧರಿಲ್ಲ ಎಂದು ಜಾಗೃತಿ ಮೂಡಿಸುತ್ತಾರೆ. ಇದು ಗಾಂಧೀಜಿಯವರ ಸ್ವರಾಜ್ಯ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇಳುತ್ತಿರುವ ಸ್ವರಾಜ್ಯ ಎಷ್ಟು ಭಿನ್ನವಾಗಿದೆ ಮತ್ತು ನ್ಯಾಯಯುತವಾಗಿದೆ ಎಂದು ತೋರಿಸುತ್ತದೆ. ಬಹುಶಃ ಕಾಂಗ್ರೆಸ್ ಎಂದಿಗೂ ಒಪ್ಪಲಾರದಂತಹಾ, ಉತ್ತರಿಸಲಾರದಂತಹಾ ಕಠೋರವಾದ ಪ್ರಶ್ನೆಗಳನ್ನು ಮೂಕನಾಯಕ ಪತ್ರಿಕೆಯ ಮುಖಾಂತರ ಕಾಂಗ್ರೆಸ್ ಮುಂದಿಟ್ಟರು.
ಧೀನ ಬಂಧು – ಯಂಗ್ ಇಂಡಿಯಾ ಎಂಬ ದ್ವಂದ್ವ ಪತ್ರಿಕೆಗಳ ಮಧ್ಯೆ ಬಾಬಾಸಾಹೇಬರೆಂಬ ಪ್ರಾಮಾಣಿಕ ಪತ್ರಿಕೋದ್ಯಮಿ
ಧೀನ ಬಂಧು ಎಂಬ ಗುಜರಾತಿ ಪತ್ರಿಕೆ ಮತ್ತು ಯಂಗ್ ಇಂಡಿಯಾ ಎಂಬ ಆಂಗ್ಲ ಪತ್ರಿಕೆ ಈ ಎರಡು ಪತ್ರಿಕೆಗಳೂ ಕಾಂಗ್ರೆಸ್ ಪರವಾಗಿ ಗಾಂಧೀಜಿಯವರ ನಿರ್ದೇಶನದಂತೆ ನಡೆಯುತ್ತಿದ್ದ ಪತ್ರಿಕೆಗಳು. ಇಂದು ಸಂಘಪರಿವಾರ, ಬಿಜೆಪಿ ನಿರ್ದೇಶನದಂತೆ ನಡೆಯುತ್ತಿರುವ ಟಿವಿ ಚಾನಲ್ ಗಳಂತೆ ಅಂದು ಕೇಸರಿ, ಧೀನಬಂಧು, ಯಂಗ್ ಇಂಡಿಯಾ ಇದ್ದವು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರು BBC ಚಾನೆಲ್ ಗೆ ನೀಡಿರುವ ವಿಡಿಯೋ ಸಂದರ್ಶನದಲ್ಲಿ ಈ ಪತ್ರಿಕೆಗಳನ್ನು ಹೆಸರಿಸುತ್ತಾ ಹೀಗೆ ಹೇಳುತ್ತಾರೆ, “ಧೀನಬಂಧು ಎಂಬ ಗುಜರಾತಿ ಪತ್ರಿಕೆಯಲ್ಲಿ ಗಾಂಧೀಜಿಯವರು ಅಪ್ಪಟ ಸಾಂಪ್ರದಾಯವಾದಿ ಚತುವರ್ಣ ಪದ್ದತಿಯನ್ನು ಆಚರಿಸುವಂತೆ ಬರೆಯುತ್ತಾರೆ. ಆದರೆ ಯಂಗ್ ಇಂಡಿಯಾ ಎಂಬ ಆಂಗ್ಲ ಭಾಷೆಯ ಪತ್ರಿಯಲ್ಲಿ ತಾನೊಬ್ಬ ಅಹಿಂಸಾವಾದಿ, ಸಮಾನತಾವಾದಿಯಂತೆ ಬರೆಯುತ್ತಾರೆ. ಏಕೆಂದರೆ ಗುಜರಾತಿ ಭಾಷೆಯನ್ನು ಆಂಗ್ಲರು ಓದುವುದಿಲ್ಲ. ಹಾಗಾಗಿ ಅಲ್ಲಿ ವರ್ಣಾಶ್ರಮವೇ ಶ್ರೇಷ್ಟ ಎನ್ನುತ್ತಾರೆ. ಅದೇ ಯಂಗ್ ಇಂಡಿಯಾ ಪತ್ರಿಕೆಯನ್ನು ಆಂಗ್ಲರು ಓದುವುದರಿಂದ ತಾನೊಬ್ಬ ಸಮಾನತಾವಾದಿಯಂತೆ ತೋರ್ಪಡಿಸಲು ಹಂಬಲಿಸುತ್ತಾರೆ”.
ಉದಾಹರಣೆಗೆ ಹೇಳುವುದಾದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವುದೂ ಒಂದು ರೀತಿಯ ಗಾಂಧಿಯವರ ಸ್ಪಷ್ಟ ಅನುಕರಣೆಯೇ ಆಗಿದೆ. ವಿದೇಶಗಳಿಗೆ ಹೋದರೆ ತಾನೊಬ್ಬ ಅಪ್ಪಟ ದೇಶಭಕ್ತ, ಜಾತ್ಯಾತೀತ , ಸರ್ವಧರ್ಮ ಸಹಿಷ್ಣು, ಸಮಾನತಾವಾದಿಯಂತೆ ಭಾಷಣ ಮಾಡುತ್ತಾರೆ. ಅದೇ ಭಾರತದಲ್ಲಿ ಕೋಮುಗಲಭೆಗಳಾಗಲಿ, ರೈತರ ಭೂಮಿ ಕಬಳಿಸಲಿ, ದಲಿತರ ಮೇಲೆ ಅತ್ಯಾಚಾರ, ದಾಳಿಗಳಾಗಲಿ ಮೌನವಾಗಿ ಸಮ್ಮತಿಸುತ್ತಿರುತ್ತಾರೆ. ಮುಂದುವರೆದು ಬಾಬಾಸಾಹೇಬರು “1932ರಲ್ಲಿ ದುಂಡುಮೇಜಿನ ಸಭೆಯಲ್ಲಿ ಅಸ್ಪೃಶ್ಯರ ಪ್ರತ್ಯೇಕ ಚುನಾಯಕಗಳನ್ನು ವಿರೋಧಿಸುತ್ತಾರೆ. ಯಾಕೆ ವಿರೋಧಿಸುತ್ತೀರಿ ನೀವು ಸಮಾನತಾವಾದಿಯಲ್ಲವೇ, ದಲಿತರ ಉದ್ದಾರಕರಲ್ಲವೇ ಎಂದು ವಿದೇಶಿಗರು ಕೇಳಿದರೆ ‘ನಿಮಗೆ ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಜಾರಿಕೊಳ್ಳುತ್ತಾರೆ’.
ಹೀಗೆ ಗಾಂಧೀಜಿಯವರ ದ್ವಂದ್ವ ನಿಲುವುಗಳ ನಡುವೆ ಬಾಬಾಸಾಹೇಬರು ಪ್ರಾಮಾಣಿಕ ಪ್ರತಿಕೋದ್ಯಮಿಯಾಗಿ ಸತ್ಯವನ್ನು ನೇರವಾಗಿ ಸತ್ಯವೆಂದು ತಮ್ಮ ಮೂಕನಾಯಕ, ಬಹಿಷ್ಕೃತ ಭಾರತ್, ಜನತಾ, ಸಮತಾ, ಪ್ರಬುದ್ದ ಭಾರತ ಪತ್ರಿಕೆಗಳಲ್ಲಿ ಬರೆಯುತ್ತಾರೆ. ಅಷ್ಟೇ ಅಲ್ಲದೇ ಬಾಬಾಸಾಹೇಬ್ ಅಂಬೇಡ್ಕರರು ತಮ್ಮ ಸ್ವಂತ ಮಗ ಪತ್ರಿಕೆಯ ಹಣವನ್ನು ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಾಗ ಆತನ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಪತ್ರವನ್ನು ಬರೆದು ಎಚ್ಚರಿಕೆ ನೀಡುತ್ತಾರೆ. ಇಂದು ಎಂಜಲು ಹಣಕ್ಕಾಗಿ ಪತ್ರಿಕೋದ್ಯಮವನ್ನು ಭಜನಾಮಂಡಳಿಗಳಾಗಿ ಮಾಡಿಕೊಂಡಿರು ಪತ್ರಿಕೋದ್ಯಮಗಳು, ಟಿವಿ ಮಾಧ್ಯಮಗಳನ್ನು ಕಂಡಾಗ ಭಾರತದ ಭವಿಷ್ಯ ಮಾರಾಟವಾದ ಮಾಧ್ಯಮ ಭಯೋತ್ಪಾದಕರ ಕೈಯಲ್ಲಿ ಒದ್ದಾಡುತ್ತಿರುವುದು ಕಾಣುತ್ತದೆ.
ಗಾಂಧೀಜಿಯವರ ಹರಿಜನ ಪತ್ರಿಕೆ ಮತ್ತು ಅಂಬೇಡ್ಕರ್ ರವರ ಸಮತಾ ಮತ್ತು ಜನತಾ ಪತ್ರಿಕೆ ಏನಿದರ ಮರ್ಮ?
ಇಂದು ಪ್ರಗತಿಪರರ ಸೋಗಿನಲ್ಲಿರುವ ಗಾಂಧೀವಾದಿಗಳು ತುಂಬಾ ಇಷ್ಟ ಪಡುವ ಗಾಂಧೀಜಿಯವರ ಜೀವನದ ಎರಡನೇ ಅಧ್ಯಾಯ ಇದು. ಯಾವುದೆಂದರೆ ಗಾಂಧೀಜಿಯವರು ದಲಿತರ ಕೇರಿಗಳಿಗೆ ಹೋಗುವುದು, ರಾಮಭಜನೆ ಮಾಡಿಸುವುದು, ಊಟ ಮಾಡುವುದು, ಸ್ವಚ್ಛ ಭಾರತ ಮಾಡುತ್ತೀನೆಂದು ಪೊರಕೆ ಹಿಡಿಯುವುದು, ದಲಿತರಿಗೆ ದೇವಾಲಯ ಪ್ರವೇಶ ಮಾಡಿಸುವುದರ ಜೊತೆಗೆ 1933ರಲ್ಲಿ “ಹರಿಜನ್” ಎಂಬ ಆಂಗ್ಲ ಭಾಷೆಯ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಇದನ್ನು ಆರಂಭಿಸಿದ ಉದ್ದೇಶದ ಬಗ್ಗೆ ಈ ಗಾಂಧೀವಾದಿಗಳಿಗೆ ಗೊತ್ತಿದೆಯೋ ಇಲ್ಲವೋ ಆದರೆ ಭೀಮವಾದಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ. 1932ರಲ್ಲಿ ಲಂಡನ್ ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ವಿರುದ್ಧ ಸೋತ ಗಾಂಧಿ, ಬ್ರಿಟೀಷರು ನೀಡಿದ “ಕೋಮುವಾರು ತೀರ್ಪಿಗೆ” ಒಪ್ಪಲೇಬೇಕಾಯಿತು. ಆದರೆ ಸೋಲನ್ನು ಒಪ್ಪದ ಗಾಂಧೀಜಿಯವರು ಅಂಬೇಡ್ಕರ್ ಅವರು ಗಳಿಸಿಕೊಂಡ ಪ್ರತ್ಯೇಕ ಚುನಾಯಕಗಳು ಮತ್ತು ಎರಡು ಓಟಿನ ಹಕ್ಕನ್ನು ಹೇಗಾದರೂ ಮಾಡಿ ಕಸಿದುಕೊಳ್ಳಬೇಕೆಂಬ ಏಕೈಕ ದುರುದ್ದೇಶದಿಂದ ಮೊಟ್ಟಮೊದಲಬಾರಿಗೆ ಅಸ್ಪೃಶ್ಯರ ವಿರುದ್ದ ಆಮರಣಾಂತ ಉಪವಾಸಕ್ಕೆ ಕುಂತರು!
ಈ ಸಮಯದಲ್ಲಿ ತಮ್ಮೆಲ್ಲಾ ಬಲವನ್ನು ಪ್ರಯೋಗ ಮಾಡಿ ಬಾಬಾಸಾಹೇಬ್ ಅಂಬೇಡ್ಕರರ ಮೇಲೆ ಹಲವಾರು ಒತ್ತಡಗಳನ್ನು ಹೇರಿ ಪೂನಾದ ಎರವಾಡ ಜೈಲಿಗೆ ಬರುವಂತೆ ಮಾಡಿದರು. ಕೊನೆಗೆ 1932 ಅಕ್ಟೋಬರ್ 22 ರಂದು ಅಸ್ಪೃಶ್ಯ ಸಮುದಾಯಗಳು ಗಳಿಸಿಕೊಂಡ ಪ್ರತ್ಯೇಕ ಚುನಾಯಕಗಳ ಬದಲಿಗೆ “ಇಂದಿನ ಗುಲಾಮಗಿರಿಯ ಮೀಸಲು ಕ್ಷೇತ್ರಗಳನ್ನು” ಪಡೆಯುವಂತೆ ಮಾಡಿದರು. ಈ ಒಪ್ಪಂದಕ್ಕೆ ಕಣ್ಣೀರಿಂದಲೇ ಸಹಿ ಹಾಕಿದ ಬಾಬಾಸಾಹೇಬರು “ಗಾಂಧೀಜಿ ಅಸ್ಪೃಶ್ಯರ ಮೊದಲ ಶತ್ರು” ಎಂದು ಹೇಳಿದರು.
ಅಸ್ಪೃಶ್ಯರಿಗೆ ಮಾಡಿದ ಮಹಾಮೋಸದ ಕಳಂಕದಿಂದ ಪಾರಾಗಲು ಗಾಂಧೀಜಿ ಮಾಡಿದ ಕೆಲಸಗಳೇ ಇಂದು ಪ್ರಗತಿಪರರಿಗೆ ಗಾಂಧೀಜಿಯವರು ಆದರ್ಶವಾಗಿದ್ದಾರೆ. ಈ ಕಳಂಕದಿಂದ ಪಾರಾಗಲು ಗಾಂಧೀಜಿಯವರು ದಲಿತರ ಕೇರಿಗಳಿಗೆ ಹೋಗುವುದು, ರಾಮಭಜನೆ ಮಾಡಿಸುವುದು, ಊಟ ಮಾಡುವುದು, ಸ್ವಚ್ಛ ಭಾರತ ಮಾಡುತ್ತೀನೆಂದು ಪೊರಕೆ ಹಿಡಿಯುವುದು, ದಲಿತರಿಗೆ ದೇವಾಲಯ ಪ್ರವೇಶ ಮಾಡಿಸುವುದು, ಜೊತೆಗೆ 1933ರಲ್ಲಿ “ಹರಿಜನ್” ಎಂಬ ಆಂಗ್ಲ ಭಾಷೆಯ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಅಂದಿನಿಂದ ಅಸ್ಪೃಶ್ಯರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿನಿಧಿಯಲ್ಲ ನಾನೇ (ಗಾಂಧೀಜಿ) ಪ್ರತಿನಿಧಿ ಎಂದು ತೋರ್ಪಡಿಸಲು ಏನೆಲ್ಲಾ ಕುತಂತ್ರಗಳು ಮಾಡಿದರು ಎಂದು ಇತಿಹಾಸ ಸಾಕ್ಷಿಯಾಗುತ್ತದೆ. ಆದ್ದರಿಂದ ಈ ಪೂನಾ ಒಪ್ಪಂದದ ನಂತರವೇ “ಹರಿಜನ್” ಪತ್ರಿಕೆ ಪ್ರಾರಂಭಿಸಿದ ಉದ್ದೇಶ ಏನಿರಬಹುದೆಂದು ಯೋಚಿಸಿ.
ಆದರೆ ಮಹಾಮಾನವತಾವಾದಿಯಾದ ಬಾಬಾಸಾಹೇಬ್ ಅಂಬೇಡ್ಜರ್ ಅವರು 1928ರಲ್ಲಿಯೇ “ಸಮತಾ” ಅಂದರೆ ಸಮಾತನೆಯನ್ನು ಸಾರುವ ಪತ್ರಿಕೆ ಪ್ರಾರಂಭಿಸಿದರು. 1930ರಲ್ಲಿ “ಜನತಾ” ಅಂದರೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುತ್ತಾ ಪ್ರಜೆಗಳೇ ಪ್ರಭುಗಳು ಎಂದು ಸಾರಿದರು. ಆದರೆ ಇದೇ ಸಮಯದಲ್ಲಿ ಗಾಂಧೀಜಿಯವರು ನೀವು “ಹರಿಜನ” ಎಂಬ ಜಾತಿಸೂಚಕ, ಜಾತಿ ನಿಂದನೆಯ ಪದಗಳಲ್ಲಿಯೇ ಅಲೆದಾಡಿ ಎನ್ನುತ್ತಿದ್ದರು. ಪೂನಾ ಒಪ್ಪಂದದಲ್ಲಿ ಅಸ್ಪೃಶ್ಯರಿಗೆ ಮಾಡಿದ ಅನ್ಯಾಯವನ್ನು ತೊಳೆದುಕೊಳ್ಳಲು ಹೋಗಿ ಮರಳಿ ಅನ್ಯಾಯವನ್ನೇ ಮಾಡತೊಡಗಿದರು. ಗಾಂಧೀಜಿಯವರಿಗೆ ಹರಿಜನ್ ಬೇಕಿದ್ದರು ಆದರೆ ಬಾಬಾಸಾಹೇಬರಿಗೆ ಪ್ರಬುದ್ದ ಭಾರತದ ಸಮತಾ, ಜನತಾ ಬೇಕಿತ್ತು. ಇದಷ್ಟೇ ಗಾಂಧೀವಾದಿಗಳಿಗೂ ಸಮಾನತಾವಾದಿಗಳಿಗೂ ಇರುವ ವ್ಯತ್ಯಾಸ.
ಮೂಕನಾಯಕ ಎಂಬ ಪತ್ರಿಕೆಯನ್ನು ಇಂದಿಗೆ 104 ವರ್ಷಗಳ ಹಿಂದೆ ಬಾಬಾಸಾಹೇಬ್ ಅಂಬೇಡ್ಕರರು ದಲಿತ ದನಿಯ ಪತ್ರಿಕೋದ್ಯಮದ ಪಿತಾಮಹನಾಗಿ ಆರಂಭಿಸಿದರು. ತದನಂತರ ಸ್ವತಂತ್ರ ಭಾರತದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಅಸ್ಪೃಶ್ಯ ಸಮುದಾಯಗಳ ಪಾಲ್ಗೊಳ್ಳುವಿಕೆಯೇ ವಿರಳವಾಗಿದೆ. ವಿರಳವಾಗಿದೆ ಎನ್ನುವುದಕ್ಕಿಂತಲೂ ಜಾತಿವಾದಿಗಳು ಮಾಧ್ಯಮಗಳನ್ನು ಹಿಡಿತದಲ್ಲಿಟ್ಟುಕೊಂಡು ಅವಕಾಶ ಸಿಗದಂತೆ ಮಾಡುತ್ತಿದ್ದಾರೆ. ಆದರೆ ನಮಗೂ ಒಂದು ದನಿಯಾಗುವ “ಮೂಕನಾಯಕ” ಮರಳಿ ಆರಂಭವಾಗಬೇಕು, ಭಾರತವನ್ನು ಪ್ರಬುದ್ದ ಭಾರತವಾಗಿ ಮಾಡಬೇಕು.
[…] ಜನಾ ನಾಗಪ್ಪ ಅವರ ಈ ಲೇಖನವನ್ನೂ ಓದಿ: ಮೂಕನಾಯಕ ಪತ್ರಿಕೆ ಎತ್ತಿದ ದನಿ; ಮೂರ್ಖ, ಮನು… […]