ಬಂಧುಗಳೇ, “ನಮಗಿಂತ ‘ಇವರು’ ಕೆಳಜಾತಿಗಳು” ಎಂದು ಭಾವಿಸುವ ಜಾತಿಗಳವರ ಪಟ್ಟಿಮಾಡಿ ಗಮನಿಸೋಣ..! ಸಾಮಾನ್ಯವಾಗಿ ಎಲ್ಲಾ ಜಾತಿ ಉಪಜಾತಿಗಳವರೂ ‘ಜಾತಿ’ ಎಂಬ ಸಾಮಾಜಿಕ ವಿಷವರ್ತುಲ ವ್ಯವಸ್ಥೆಯಲ್ಲಿ ಸಿಲುಕಿದವರು ‘ತಮಗಿಂತ ಮೇಲು ಜಾತಿಗಳು ಯಾರ್ಯಾರು ಎಂದು ನೋಡುವುದು ಬಹಳ ಕಡಿಮೆ. ಆದರೆ ತಮಗಿಂತ ಕೆಳಜಾತಿಗಳು ಯಾರ್ಯಾರು ಎಂಬುದನ್ನು ಸ್ಪಷ್ಟವಾಗಿ ಅರಿತಿರುತ್ತಾರೆ. ಮತ್ತು ಅದನ್ನು ಆಗಾಗ ಅಲ್ಲಲ್ಲಿ ನೇರವಾಗಿ ಪ್ರತ್ಯಕ್ಷವಾಗಿ ಒಮ್ಮೊಮ್ಮೆ ಪರೋಕ್ಷವಾಗಿ ಕಾರಿಕೊಳ್ಳುತ್ತಿರುತ್ತಾರೆ..!
ಬ್ರಾಹ್ಮಣರ ಕಣ್ಣಲ್ಲಿ ಮನದಲ್ಲಿ ಮತ್ತು ಶಾಸ್ತ್ರದಲ್ಲಿ ಎಂದೆಂದಿಗೂ ಕ್ಷತ್ರಿಯರು ವೈಶ್ಯರು ಶೂದ್ರರು ಮತ್ತು ಸ್ತ್ರೀಯರು ಎಂದೆಂದಿಗೂ ಕೆಳಜಾತಿ ಭಾವನೆ..! ಕ್ಷತ್ರಿಯರ ಮತ್ತು ವೈಶ್ಯರ ಕಣ್ಣಲ್ಲಿ ಮನದಲ್ಲಿ ಶೂದ್ರರು ಎಂದೆಂದಿಗೂ ಕೆಳಜಾತಿ ಎಂಬ ಭಾವನೆ..! ಶೂದ್ರರಾದ ಲಿಂಗಾಯತರ ಕಣ್ಣಲ್ಲಿ ಮನದಲ್ಲಿ ಶೂದ್ರರೇ ಆದ ಒಕ್ಕಲಿಗರು ರೆಡ್ಡಿಗಳು ಇನ್ನಿತರ ಶೂದ್ರಜಾತಿಗಳು ಅಸ್ಪೃಶ್ಯರು ಆದಿವಾಸಿಗಳು ಅಲೆಮಾರಿಗಳು ಕೆಳಜಾತಿ ಎಂಬ ಭಾವನೆ.! ಒಕ್ಕಲಿಗರು ರೆಡ್ಡಿ ನಾಯ್ಡುಗಳ ಕಣ್ಣಲ್ಲಿ ಇನ್ನುಳಿದ ಹಿಂದುಳಿದ ಜಾತಿಗಳೆಲ್ಲಾ ಕೆಳಜಾತಿಗಳೇ..! ಇತರೆ ಹಿಂದುಳಿದ ಜಾತಿ(OBC)ಗಳ ಕಣ್ಣಲ್ಲಿ ಮನದಲ್ಲಿ ಆಚರಣೆಯಲ್ಲಿ ಎಲ್ಲಾ ಎಸ್ಟಿ ಎಸ್ಸಿಗಳೂ ಕೆಳಜಾತಿಗಳು .! ಎಸ್ಟಿಗಳ ಕಣ್ಣಲ್ಲಿ ಮನದಲ್ಲಿ ಆಚರಣೆಯಲ್ಲಿ ಎಸ್ಸಿಗಳೆಲ್ಲಾ ಕೆಳಜಾತಿಗಳು..!ಎಸ್ಸಿಗಳಲ್ಲೇ ಟಚಬಲ್ ಎಸ್ಸಿಗಳಾದ ಭೋವಿ ಲಂಬಾಣಿ ಕೊರಮ ಕೊರಚ ಮುಂತಾದ ಜಾತಿಗಳವರಿಗೆ ಅನ್ ಟಚಬಲ್ ಎಸ್ಸಿಗಳಾದ ಹೊಲಯರು ಮಾದಿಗರು ಕೆಳಜಾತಿಗಳು..!
ಇನ್ನು ಹೊಲಯರು ಮಾದಿಗರು ನಡುವೆ ಮೇಲು ಕೀಳು ಅಂತಿಲ್ಲ., ಆದರೆ ಯಾರೋ ಸೃಷ್ಟಿಸಿ ತುರುಕಿದ ಎಡ ಬಲ ಎಂಬ ಭೇದ ಹೆಚ್ಚಿದೆ..! ಅಲ್ಲಲ್ಲಿ ಅವರವರೇ ಇದ್ದಾಗ ಇವರಿಬ್ಬರ ಶ್ರೇಷ್ಟತೆಯ ವ್ಯಸನಗಳು ಮೇಲ್ಜಾತಿ ಎಂದುಕೊಂಡ ಬೇರೆಯವರಿಗಿಂತ ಏನೇನೂ ಕಡಿಮೆ ಇಲ್ಲ..! ಇವರಿಬ್ಬರನ್ನೂ ಇತರರೆಲ್ಲರೂ ಥೂ ಚೀ ಎಂದರೂ ಈ ಪ್ರಾಚೀನ ಅವಮಾನದಿಂದ ಆಚೆ ಬರಲು ಇವರು ಒಟ್ಟಿಗೆ ಕೂತು ಪ್ರಾಮಾಣಿಕವಾಗಿ ಮುಕ್ತವಾಗಿ ಚಿಂತಿಸದೆ ಎಡಬಲಕ್ಕೆ ತಿರುಗಿನಿಂತಿರುವುದೇ ದುರಂತ ಮತ್ತು ವಿಪರ್ಯಾಸ.!
ಬುದ್ಧರನ್ನು ಅಂಬೇಡ್ಕರರನ್ನು ಬಹುಜನ ತತ್ವವನ್ನು ಒಪ್ಪಿಕೊಂಡವರು ಎಲ್ಲಾ OBC/SC/ST ಗಳನ್ನು ಒಂದುಗೂಡಿಸುವ ಮೊದಲ ಹೆಜ್ಜೆಯೇ ಈ ಎಡಬಲಗಳನ್ನು ಕಳಚಿ ಒಂದಾಗುವುದು..! ಅದಾದರೆ ಖಂಡಿತ ಈಗಾಗಲೇ ಪೊರೆಕಳಚಿಕೊಂಡ ಅನೇಕ ಇತರೆ ಜಾತಿ ಉಪಜಾತಿಗಳ ಹಾಗು ಮುಸ್ಲಿಂ ಕ್ರೈಸ್ತರನ್ನೂ ಒಳಗೊಂಡ ಪ್ರಜ್ಞಾವಂತರು ಜೊತೆಸೇರುವ ಶುಭಸೂಚನೆಗಳಿವೆ..!
ನಾವು ಚಿಕ್ಕವರಿದ್ದಾಗ (ಈಗಲೂ ಸಹ) ನಮ್ಮ ಹಳ್ಳಿಯಲ್ಲಿ ಅಲ್ಪಸಂಖ್ಯಾತ ಹೊಲಯರನ್ನು ಅಲ್ಲಿನ ಬಹುಸಂಖ್ಯಾತ ಎಸ್ಟಿಗಳು (ನಾಯಕ) ಮುಟ್ಟಿಸಿಕೊಳ್ಳದೆ ಅವಮಾನಿಸುತ್ತಿದ್ದರು..! ಇನ್ನುಳಿದ ಮೇಲ್ಜಾತಿಯವರದೂ ಅದೇ ಮನಸ್ಥಿತಿ ಅದೇ ಪರಿಸ್ಥಿತಿ.! ಇತರೆ ಜಾತಿಯ ಸಣ್ಣ ಸಣ್ಣ ಹುಡುಗರೂ ಸಹ ಹೊಲಯರ ಕೇರಿಗೆ ಬಂದು ಅಲ್ಲಿನ ಹಿರಿಯರನ್ನು ‘ಯೋವ್ ಮೋವ್ ನಿನ್ನಾ ನಮ್ಮಪ್ಪ ಕರಿತೌರೆ ಬಾ, ಹೋಗು, ಕೂತ್ಕೊ, ಕೊಡುʼ ಎಂದು ಕಿಂಚಿತ್ತೂ ಗೌರವ ಕೊಡದೆ ಏಕವಚನದಲ್ಲಿ ಮಾತಾಡಿಸಿದರೆ, ನಮ್ಮ ಕೇರಿಯ ಹಿರಿಯರು ಇತರೆ ಸಮುದಾಯದ ಆ ಚಿಕ್ಕ ಹುಡುಗ ಹುಡುಗರನ್ನು ಆಯ್ತು ಬನ್ನಿ, ಹೋಗಿ ಕೊಡಿ ಬುಡಿ ಬತ್ತಿನಿ ನಡೀರಿ ಅಪ್ಪೌರ್ಗೆ ಯೋಳಿ ಎಂದು ಗೌರವಕೊಟ್ಟು ಮಾತಾಡಿಸುತ್ತಿದ್ದರು. ವಿಪರ್ಯಾಸವೆಂದರೆ ನಾವು ಇತರೆ ಜಾತಿಗಳಿಂದ ನಿತ್ಯವೂ ಅಷ್ಟು ಅವಮಾನಕ್ಕೊಳಗಾಗುತ್ತಿದ್ದರೂ ವರ್ಷಕ್ಕೊಮ್ಮೆ ಮಾಡುವ ಗ್ರಾಮದೇವತೆ ಹಬ್ಬದ ದಿನ ನಮ್ಮೂರಿನ ಮೂಲೆಯಲ್ಲಿದ್ದ ಎರಡೇ ಎರಡು ಜಾಡಮಾಲಿಗಳ ಮನೆಯ ಈರ ಮತ್ತು ಅಮಾಸ ಎಂಬ ಹಿರಿಯರು ನಮ್ಮ ಕೇರಿಗೆ ಊಟಕೊಡಿ ಬುದ್ದಿ ಅಂತ ಬಂದರೆ ಹೊಲಯರ ಚಿಕ್ಕ ಚಿಕ್ಕ ಹುಡುಗರು ಆ ಈರ ಮತ್ತು ಅಮಾಸ ಇಬ್ಬರನ್ನೂ “ಡೋವ್ ಈರ ಡೋವ್ ಅಮಾಸ ಮನೆ ಒಳಕ್ಕ ಬರ್ಬೇಡ ಅಲ್ಲೇ ಕೂತ್ಕೊ” ಎಂದು ಬೇರೆಯವರು ನಮ್ಮನ್ನು ಎಷ್ಟು ಕೆಟ್ಟದಾಗಿ ಅಸಹ್ಯವಾಗಿ ಅವಮಾನಿಸಿ ಏಕವಚನದಲ್ಲಿ ಮಾತಾಡಿಸುತ್ತಿದ್ದರೋ ಅಷ್ಟೇ ಕೆಟ್ಟದಾಗಿ ಅವರನ್ನು ಕಾಣುವುದು ಅವರನ್ನು ಹಿಯಾಳಿಸಿ ಬಟ್ಟೆ ಎಳೆದು ನಗುವುದು ಸಹಜವಾಗಿತ್ತು..! ಹಾಗೆ ಮಾಡುವಾಗ ಆ ಬಡ ಹೊಲಯರ ಮುಖದಲ್ಲಿ ನಾವು ಇವರಿಗಿಂತ ಮೇಲ್ಜಾತಿ ಎಂಬ ಮೇಲರಿಮೆ ಕಾಣುತ್ತಿದ್ದನ್ನು ಖುದ್ದು ಗಮನಿಸಿದ್ದೇನೆ..!
ಇದನ್ನೇ ಬಾಬಾಸಾಹೇಬರು ‘ಜಾತಿ’ ಎಂಬುದು ಒಂದು ಮನಸ್ಥಿತಿ ಎಂದರು. ಅದು ಎಲ್ಲರಲ್ಲಿಯೂ ಸುಪ್ತವಾಗಿ ಎಚ್ಚರಾಗಿರುತ್ತದೆ. ಅವಕಾಶ ಸಿಕ್ಕಾಗ ಅದು ಹೆಡೆಯೆತ್ತಿ ವಿಷಕಾರುತ್ತದೆ.! ಈ ಜಾತಿ ಉಪಜಾತಿ ರೋಗದ ಭೇದಗಳು ನೀಗಲು ಏಕೈಕ ಮತ್ತು ಶಾಶ್ವತ ಪರಿಹಾರ ಎಂದರೆ, ಅದು ಬಾಬಾಸಾಹೇಬರು ತೋರಿ ನಡೆದ ಬೌದ್ಧಧಮ್ಮದೀಕ್ಷೆ ಹಾಗು ಅನುಸರಣೆ ಮತ್ತು ಆ ಮೂಲಕ ಬಹುಜನರ ಸ್ವಂತ ಪಕ್ಷದ ಸ್ವತಂತ್ರ ರಾಜ್ಯಾಧಿಕಾರ ಗಳಿಕೆ..!