“ದೊರೆ ಸತ್ತಿದ್ದಾನೆ ದೊರೆ ಚಿರಾಯುವಾಗಲಿ” ಈ ಬ್ರಿಟೀಷ್ ನಾಣ್ಣುಡಿಯನ್ನು ಅಳವಡಿಸಿಕೊಂಡು ನಾವು ಜನವರಿ 26ರಂದು “ಗಣತಂತ್ರ ಸತ್ತಿದೆ ಗಣತಂತ್ರ ಚಿರಾಯುವಾಗಲಿ!” ಎಂದು ಘೋಷಿಸಬೇಕಿದೆ. 1950ರ ಜನವರಿ 26ರಂದು ಜಾರಿಗೆ ಬಂದ ಭಾರತದ ಗಣತಂತ್ರವು 2024ರ ಜನವರಿ 22ರಂದು ಸಂಪೂರ್ಣವಾಗಿ ಭಗ್ನಗೊಂಡಿದೆ. ಈ ಪ್ರಕ್ರಿಯೆ ದೀರ್ಘಕಾಲದಿಂದಲೇ ಚಾಲ್ತಿಯಲ್ಲಿತ್ತು. ಕಳೆದ ಕೆಲವು ಸಮಯದಿಂದಲೇ ನಾನು ಗಣತಂತ್ರದ ಅಂತ್ಯವನ್ನು ಕುರಿತು ಪ್ರಸ್ತಾಪಿಸುತ್ತಿದ್ದೇನೆ. ಈಗ ನಾವು ಅದಕ್ಕೆ ದಿನಾಂಕವನ್ನು ನಿಗದಿಪಡಿಸಬಹುದು. ಈಗ ನಾವು ಹೊಸ ರಾಜಕೀಯ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಈ ಹೊಸ ವ್ಯವಸ್ಥೆಯಲ್ಲಿ ಅವಕಾಶಗಳನ್ನು ಅಪೇಕ್ಷಿಸುವವರು ಹೊಸ ಆಟದ ನಿಯಮಗಳನ್ನು, ಈವರೆಗೂ ಸಾಧ್ಯವಾಗದಿದ್ದರೆ, ಈಗ ಶೀಘ್ರವಾಗಿ ಅಳವಡಿಸಿಕೊಳ್ಳುತ್ತಾರೆ. ನಮ್ಮ ಮೊದಲ ಗಣತಂತ್ರಕ್ಕೆ ಬದ್ಧವಾಗಿರುವ ನಾವು ಅದನ್ನು ಪುನರ್ ಸ್ಥಾಪಿಸಲು ಬಯಸುವುದಾದರೆ ನಮ್ಮ ರಾಜಕಾರಣದ ಬಗ್ಗೆ ಪುನರಾಲೋಚನೆ ಮಾಡಬೇಕಿದೆ. ನಾವು ಹೊಸ ರಾಜಕೀಯ ಪರಿಭಾಷೆಯನ್ನು ಹುಟ್ಟುಹಾಕಬೇಕಿದೆ. ಈ ಭಾಷೆಯು ನಮ್ಮ ಗಣತಂತ್ರದ ಮೌಲ್ಯಗಳನ್ನು ರಕ್ಷಿಸುವ ಮೂಲ ಬೇರುಗಳಲ್ಲಿ ಕಂಡುಕೊಳ್ಳಬೇಕಿದೆ. ನಮ್ಮ ರಾಜಕೀಯ ಕಾರ್ಯತಂತ್ರಗಳನ್ನೂ ಅಮೂಲಾಗ್ರವಾಗಿ ಮರುಚಿಂತನೆಗೊಳಪಡಿಸಬೇಕಿದೆ. ರಾಜಕೀಯ ಸಮೀಕರಣಗಳನ್ನು ಪುನಾರಚಿಸಬೇಕಿದೆ. ಹಳೆಯ ಮಾದರಿಯ ಸಂಸದೀಯ ವಿರೋಧದಿಂದ ಭಿನ್ನವಾದ ಪ್ರತಿರೋಧದ ರಾಜಕಾರಣವನ್ನು ಆಶ್ರಯಿಸಬೇಕಿದೆ.
ಸ್ಪಷ್ಟವಾಗಿ ಹೇಳಬಹುದಾದರೆ, ಅಯೋಧ್ಯೆಯಲ್ಲಿ ನಡೆದದ್ದು ಕೇವಲ ಭಗವಾನ್ ರಾಮನ ಪ್ರತಿಮೆಯ ಅಥವಾ ರಾಮಮಂದಿರದ ಪ್ರತಿಷ್ಠಾಪನೆ ಅಲ್ಲ. ಅದು ನಿಯಮ, ಶ್ರದ್ಧೆ ಅಥವಾ ಧರ್ಮವನ್ನು ಕುರಿತಾದದ್ದಲ್ಲ. ಇಲ್ಲಿ ಹಲವು ರೀತಿಯ ಸಾಂವಿಧಾನಿಕ, ರಾಜಕೀಯ, ಧಾರ್ಮಿಕ ನಿಯಮಗಳ ಉಲ್ಲಂಘನೆಯಾಗಿತ್ತು. ಖಂಡಿತವಾಗಿಯೂ ಇಲ್ಲಿ ಕೋಟ್ಯಂತರ ನಂಬಿಕಸ್ಥರ ಆಶಯ ಇತ್ತು. ಈ ಆಶಯಗಳಿಗೆ ಪ್ರಭುತ್ವದೊಡಗಿನ ಸಂಬಂಧವೂ ಸ್ಪಷ್ಟವಾಗಿತ್ತು. ಇದು ಒಂದು ರೀತಿಯಲ್ಲಿ ಹಿಂದೂ ಧರ್ಮದ ರಾಜಕೀಯ ವಸಾಹತೀಕರಣವನ್ನು ಪ್ರತಿನಿಧಿಸಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ, ಇಡೀ ಕಾರ್ಯಕ್ರಮದ ವಿನ್ಯಾಸ, ಕ್ರೋಢೀಕರಣದ ಮಾದರಿ ಮತ್ತು ಪ್ರಭಾವವನ್ನು ಪರಿಗಣಿಸಿದರೆ ಜನವರಿ 22ರಂದು ನಡೆದದ್ದು ಒಂದು ರಾಜಕೀಯ ಸಮಾರಂಭ. ರಾಜಕೀಯ ದಿಗ್ವಿಜಯವನ್ನು ನಿರೀಕ್ಷಿಸಲು, ಚಾಲನೆಗೊಳಪಡಿಸಲು, ಘನೀಕರಿಸಲು ರೂಪಿಸಿದ ರಾಜಕೀಯ ಪ್ರಹಸನವಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಧರ್ಮದ ಅಥವಾ ಭಾರತೀಯ ರಾಷ್ಟ್ರೀಯತೆಯು ಪ್ರತಿಪಾದಿಸುವ ರಾಷ್ಟ್ರದ ಪರಿಕಲ್ಪನೆಗಾಗಲೀ ಇದು ಪೂರಕವಾಗಿರಲಿಲ್ಲ.
ಒಂದು ಹೊಸ ವ್ಯವಸ್ಥೆ
ನಮ್ಮ ಮುಂದೆ ಒಂದು ಹೊಸ ಸಂವಿಧಾನವಿದೆ, ಒಂದು ದಸ್ತಾವೇಜಿನ ರೂಪದಲ್ಲಿಲ್ಲ ಆದರೆ ಕಳೆದ ಒಂದು ದಶಕದಲ್ಲಿ ನಾವು ಗಮನಿಸುತ್ತಿರುವ ಬದಲಾವಣೆಗಳನ್ನು ಹರಳುಗಟ್ಟಿಸುವ ರಾಜಕೀಯ ಅಧಿಕಾರಕ್ಕೆ ಪೂರಕವಾದ ಒಂದು ವ್ಯವಸ್ಥೆಯನ್ನು ಬಿಂಬಿಸುವಂತಿದೆ. ಭಾರತದ ಮೂಲ ಸಂವಿಧಾನವು ಅಲ್ಲಸಂಖ್ಯಾತರ ಹಕ್ಕುಗಳನ್ನು ಒಂದು ಮಿತಿ ಎಂದು ಪರಿಗಣಿಸಿತ್ತು. ಈ ಮಿತಿಯೊಳಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಏನು ಮಾಡಕೂಡದು ಎನ್ನುವುದನ್ನೂ ಸ್ಪಷ್ಟಪಡಿಸಲಾಗಿತ್ತು. ಆದರೆ ಈ ಹೊಸ ಸಂವಿಧಾನವು ಬಹುಸಂಖ್ಯಾತ ಸಮುದಾಯದ ಇಚ್ಚೆಯನ್ನು ಸ್ಥಾಪಿಸುತ್ತದೆ. ಅಷ್ಟೇ ಅಲ್ಲದೆ ಮೂಲ ಸಂವಿಧಾನವು ಏನೇ ಹೇಳಿದ್ದರೂ ಸಹ ಸರ್ಕಾರದ ಯಾವುದೇ ಅಂಗಗಳೂ ಮೀರದಂತೆ ಲಕ್ಷ್ಮಣರೇಖೆಯನ್ನು ರಚಿಸುತ್ತದೆ. ಈಗ ನಾವು ಎರಡು ಸ್ತರದ ಪೌರತ್ವವನ್ನು ಹೊಂದಿದ್ದೇವೆ: ಹಿಂದೂಗಳು ಮತ್ತು ಸಹವರ್ತಿಗಳು ಭೂಮಾಲೀಕರಾಗಿದ್ದರೆ, ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರು ಗೇಣಿದಾರರಾಗಿರುತ್ತಾರೆ. ರಾಜ್ಯಗಳ ಒಕ್ಕೂಟ ಎಂಬ ಮೂಲ ಚೌಕಟ್ಟಿನ ಬದಲು ವಿವಿಧ ಪ್ರಾಂತ್ಯಗಳಿಗೆ ಆಡಳಿತಾತ್ಮಕ ಕಾರ್ಯಗಳನ್ನು ವಿಧಿಸುವ ಏಕೀಕೃತ ಸರ್ಕಾರವನ್ನು ಹೊಂದಿರುತ್ತೇವೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಅಧಿಕಾರ ವಿಂಗಡನೆಯ ಪರಿಕಲ್ಪನೆಯೇ ಶೀಘ್ರಗತಿಯಲ್ಲಿ ಮಸುಕಾಗುತ್ತಿದ್ದು, ಈಗ ಬಲಿಷ್ಠವಾದ ಕಾರ್ಯಾಂಗವೇ ಆಳ್ವಿಕೆಯಲ್ಲಿ ಮೇಲುಗೈ ಸಾಧಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಲಿಷ್ಠ ಕಾರ್ಯಾಂಗವು ಶಾಸನಬದ್ಧ ಕ್ರಿಯೆಗಳ ಮೂಲಕ ಸಿದ್ಧಪಡಿಸುವ ಆವರಣದ ಒಳಗೇ ನ್ಯಾಯಾಂಗವೂ ನ್ಯಾಯವಿತರಣೆ ಮಾಡಬೇಕಾಗುತ್ತದೆ. ಸಂಸದೀಯ ಪ್ರಜಾತಂತ್ರವು ಕ್ರಮೇಣ ಅಧ್ಯಕ್ಷೀಯ ಮಾದರಿಗೆ ಎಡೆ ಮಾಡಿಕೊಟ್ಟಿಲ್ಲ ಬದಲಾಗಿ ಚುನಾಯಿತ ದೊರೆಯ ಆಳ್ವಿಕೆಗೆ ದಾರಿ ಸುಗಮವಾಗಿಸಿದೆ. ಈ ವ್ಯವಸ್ಥೆಯಲ್ಲಿ ಜನರು ಒಬ್ಬ ಸರ್ವೋಚ್ಛ ನಾಯಕನನ್ನು ಆಯ್ಕೆ ಮಾಡಿ ಎಲ್ಲವನ್ನೂ ಆತನಿಗೇ ಸಮರ್ಪಿಸಿಬಿಡುತ್ತಾರೆ.
ಹೊಸ ಸಂವಿಧಾನದ ಹೇರಿಕೆಗೆ ಸಂವಿಧಾನ ರಚನಾ ಸಭೆಯ ನ್ಯಾಯಸಮ್ಮತತೆ ಇರುವುದಿಲ್ಲ. 2024ರ ಜನವರಿ 22ರಂದು ಭಾರತದ ಆತ್ಮ ವಿಮೋಚನೆ ಪಡೆದಿದೆ ಎಂದು ಸಚಿವ ಸಂಪುಟದ ನಿರ್ಣಯದಲ್ಲಿ ಹೇಳಬಹುದು. ಆದರೆ ಇದು ಭಾರತದ ಎರಡನೆ ಗಣತಂತ್ರದ ಅಧಿಕೃತ ಜನ್ಮದಿನ ಆಗಿಲ್ಲ. ಸಂವಿಧಾನವನ್ನು ವಸ್ತುತಃ ರದ್ದುಗೊಳಿಸುವ ಪ್ರಯತ್ನದ ವಿರುದ್ಧ ಹೋರಾಟಕ್ಕೆ ಇನ್ನೂ ಅವಕಾಶವಿದೆ. ಮುಂಬರುವ ಸಂಸದೀಯ ಚುನಾವಣೆಗಳು ಈ ಸಮರದ ಮೊದಲ ಭೂಮಿಕೆಯಾಗಿರುತ್ತದೆ. ಚುನಾವಣೆಯ ಅಂತಿಮ ಫಲಿತಾಂಶ ಏನೇ ಆದರೂ ನಾವು ಈ ಹೊಸ ರಾಜಕೀಯ ವ್ಯವಸ್ಥೆಯ ವಾಸ್ತವತೆಯನ್ನು ನಿರಾಕರಿಸಲಾಗುವುದಿಲ್ಲ. ತೀವ್ರತೆರನಾದ ಮರುಚಿಂತನೆಯ ಸವಾಲುಗಳನ್ನು ಇನ್ನು ಹೆಚ್ಚು ಕಾಲ ಮುಂದೂಡಲಾಗುವುದಿಲ್ಲ.
ಮೊದಲ ಗಣತಂತ್ರದ ಅವಸಾನದಲ್ಲಿ ನಮ್ಮ ಪಾತ್ರವೂ ಇದೆ ಎನ್ನುವುದರ ಬಗ್ಗೆ ನಮ್ಮಲ್ಲಿ ಅರಿವು ಅಗತ್ಯ. ಅವರಿಗೆ ಸರಿ ಎನಿಸಿದ್ದನ್ನು ಮಾಡುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ದೂಷಿಸಿ ಫಲವಿಲ್ಲ. ಮೊದಲ ಗಣತಂತ್ರದ ಸಂವಿಧಾನಕ್ಕೆ ಬದ್ಧತೆಯನ್ನು ಘೋಷಿಸಿದವರ ಮೇಲೆ ಜವಾಬ್ದಾರಿ ಹೊರಿಸಬೇಕಿದೆ. ರಾಜಕೀಯ ಬದ್ಧತೆಯಿಂದ ಜಾರಿ ಅನುಕೂಲವಾದಿ ರಾಜಕಾರಣಕ್ಕೆ ಹೊರಳಿದ ಕಾರಣ ಉಂಟಾಗಿರುವ ಜಾತ್ಯತೀತತೆಯ ಅವನತಿಯೇ ಈ ಭಗ್ನಾವಸ್ಥೆಗೆ ಕಾರಣವಾಗಿದೆ. ಸೆಕ್ಯುಲರ್ ಸಿದ್ಧಾಂತದ ಹಠಮಾರಿತನ, ಜನಸಂಪರ್ಕದ ಕೊರತೆ ಹಾಗೂ ಜನತೆಯೊಡನೆ ಅವರಿಗೆ ಅರಿವಾಗುವ ಭಾಷೆಯಲ್ಲೇ ಮಾತನಾಡಲು ನಿರಾಕರಿಸಿರುವುದು ಜಾತ್ಯತೀತತೆಯ ಮೂಲ ಚಿಂತನೆಯನ್ನೇ ಅಪಮೌಲ್ಯಗೊಳಿಸಿದೆ. ಬಾಬ್ರಿ ಮಸೀದಿ ಧ್ವಂಸದ ಮೂಲಕ ಮುನ್ನೆಚ್ಚರಿಕೆಯನ್ನು ನೀಡಿ ಮೂರು ದಶಕಗಳ ನಂತರದಲ್ಲಿ ಈ ಮಾರಣಾಂತಿಕ ದಾಳಿಯು ಸಂಭವಿಸಿದೆ ಎನ್ನುವುದನ್ನು ಮರೆಯಕೂಡದು. ಮೂವತ್ತು ವರ್ಷಗಳ, ಈ ವ್ಯಾಧಿಯು ತಂತಾನೇ ಮರೆಯಾಗಿಹೋಗುತ್ತದೆ ಎಂಬ ಭ್ರಮೆಯಿಂದ ಹಿಡಿದು ಜಾತಿ ರಾಜಕಾರಣ ಇದನ್ನು ಎದುರಿಸುತ್ತದೆ ಎಂಬ ಸಿನಿಕತನದ ನಂಬಿಕೆಯವರೆಗೂ ಸೆಕ್ಯುಲರ್ ರಾಜಕಾರಣವು ಹೊಯ್ದಾಡಿದೆ. ಇಂದು ಸೆಕ್ಯುಲರ್ ರಾಜಕೀಯವು ದುಸ್ಥಿತಿಯಲ್ಲಿದ್ದರೆ ಅದಕ್ಕೆ ಕಾರಣ ಅದರದ್ದೇ ಆದ ಲೋಪಗಳು, ತಪ್ಪು ಒಪ್ಪುಗಳು ಎನ್ನುವುದನ್ನು ಒಪ್ಪಲೇಬೇಕಿದೆ.
ರಾಜಕೀಯದ ಮೂಲಕ ಕಳೆದುಕೊಂಡಿದ್ದನ್ನು ರಾಜಕೀಯದಿಂದಲೇ ಪುನಃ ಗಳಿಸಲು ಸಾಧ್ಯ. ಇಂದು ನಮ್ಮ ಮುಂದೆ ಹೆಚ್ಚು ಆಯ್ಕೆಗಳಿಲ್ಲ. ಸಂವಿಧಾನಕ್ಕೆ ಬದ್ಧವಾಗಿರುವ ನಾವು ನಮ್ಮದೇ ದೇಶದಲ್ಲಿ , ಆಗಾಗ್ಗೆ ಸಾಂಕೇತಿಕ ವಿರೋಧವನ್ನು ವ್ಯಕ್ತಪಡಿಸುತ್ತಾ, ಆಳ್ವಿಕೆಯೊಂದಿಗೆ ಶಾಮೀಲಾಗದೆ ಜರ್ಝರಿತರಾದ ಸೈದ್ಧಾಂತಿಕ ಅಲ್ಪಸಂಖ್ಯಾತರಾಗಿ ಬದುಕಬೇಕು ಅಥವಾ ಒಂದು ದಿಟ್ಟ, ಪ್ರಯೋಗಶೀಲ, ಶಕ್ತಿಯುತವಾದ ಗಣತಂತ್ರವಾದಿ ರಾಜಕಾರಣವನ್ನು ರೂಪಿಸಬೇಕು.
ಎರಡು ಆಯಾಮದ ಹಾದಿ
ಈ ಗಣತಂತ್ರವಾದಿ ರಾಜಕಾರಣವು ಎರಡು ನೆಲೆಗಳಲ್ಲಿ ಸಕ್ರಿಯವಾಗಬೇಕಿದೆ. ಮೊದಲನೆಯದಾಗಿ ಮುಂದಿನ ಹಲವು ದಶಕಗಳ ಕಾಲ ಸಾಂಸ್ಕೃತಿಕ-ಸೈದ್ಧಾಂತಿಕ ಸಂಘರ್ಷವಾಗಬೇಕಿದೆ. ಭಾರತೀಯ ರಾಷ್ಟ್ರೀಯತೆಯನ್ನು, ನಮ್ಮ ನಾಗರಿಕತೆಯ ಪರಂಪರೆಯನ್ನು, ನಮ್ಮ ಭಾಷೆಗಳನ್ನು, ಹಿಂದೂ ಧರ್ಮವನ್ನೂ ಒಳಗೊಂಡಂತೆ ಧಾರ್ಮಿಕ ಸಂಪ್ರದಾಯಗಳನ್ನು ಮರಳಿಪಡೆಯುವುದರೊಂದಿಗೆ ಈ ಹೋರಾಟ ಆರಂಭವಾಗಬೇಕಿದೆ. ಮುನ್ನಡೆದು ಭಾರತಕ್ಕೆ ಒಂದು ಹೊಸ ಮುಂಗಾಣ್ಕೆಯನ್ನು ಪ್ರತಿಪಾದಿಸುವ ಮೂಲಕ ಸೈದ್ಧಾಂತಿಕ ಸಮತೋಲವನ್ನು ಪುನರ್ ನಿರ್ವಚನೆಗೊಳಪಡಿಸಬೇಕಿದೆ. ಇದು ಪಿರಮಿಡ್ಡಿನ ತಳಹಂತದ ಆಶೋತ್ತರಗಳಿಗೆ ಪೂರಕವಾಗಿರಬೇಕಿದೆ. 20ನೆಯ ಸತಮಾನದ ಕೆಲವು ಸೈದ್ಧಾಂತಿಕ ಸಂಘರ್ಷಗಳು, ಉದಾಹರಣೆಗೆ ಕಮ್ಯುನಿಸ್ಟರು-ಸಮಾಜವಾದಿಗಳು-ಗಾಂಧಿವಾದಿಗಳ ನಡುವಿನ ಸಂಘರ್ಷಗಳು, ಇಂದು ಅಪ್ರಸ್ತುತವಾಗುತ್ತವೆ. ನಾವು ಎಲ್ಲ ರೀತಿಯ ಉದಾರವಾದಿ, ಸಮಾನತಾವಾದಿ, ವಸಾಹತುವಿರೋಧಿ ಧೋರಣೆಗಳಿಂದ ಸ್ಪೂರ್ತಿ ಪಡೆದು ವರ್ತಮಾನದ ಹೊಸ ಸಿದ್ಧಾಂತವನ್ನು ರೂಪಿಸಬೇಕಿದೆ. ಇದನ್ನು ಸ್ವರಾಜ್ 2.0 ಎಂದು ಕರೆಯಬಹುದು.
ಇದರೊಟ್ಟಿಗೆ ಹೊಸ ಮಾದರಿಯ ರಾಜಕಾರಣವನ್ನು ರೂಪಿಸಬೇಕಿದೆ. ವಿರೋಧಿ ರಾಜಕೀಯದ ಬದಲು ಆಧಿಪತ್ಯ ರಾಜಕೀಯಕ್ಕೆ ಪ್ರತಿಯಾದ ಪ್ರತಿರೋಧದ ರಾಜಕಾರಣ ನಮ್ಮದಾಗಬೇಕಿದೆ. ಚುನಾವಣಾ ಸ್ಪರ್ಧೆಗಳು ಈ ರಾಜಕಾರಣದಲ್ಲಿ ಪ್ರಧಾನವಾಗಿರಬೇಕಿಲ್ಲ. ಗಣತಂತ್ರವಾದಿ ರಾಜಕಾರಣ ತನ್ನ ಕಾರ್ಯತಂತ್ರಗಳನ್ನು ಪುನರಾಲೋಚಿಸಬೇಕಿದೆ. ಹೊಸ ರಾಜಕೀಯ ಜಗತ್ತಿನಲ್ಲಿ ವಿವಿಧ ಪಕ್ಷಗಳನ್ನು ವಿಭಜಿಸುವ ಧೋರಣೆಗಳು ಇಂದು ಪ್ರಸ್ತುತವಾಗುವುದಿಲ್ಲ. ಪ್ರಸ್ತುತ ಬಿಕ್ಕಟ್ಟು ಒಂದು ಅಮೂಲಾಗ್ರ ರಾಜಕೀಯ ಪುನಾರಚನೆಯನ್ನು ಬಯಸುತ್ತದೆ. ಗಣತಂತ್ರದ ಮೂಲ ತತ್ವಗಳಿಗೆ ಬದ್ಧರಾಗಿರುವವರು ಒಂದು ರಾಜಕೀಯ ಗುಂಪಿನಲ್ಲಿ ಸಮ್ಮಿಳಿತವಾಗಬೇಕಿದೆ. ಪೂರ್ವ ನಿರ್ಧಾರಿತ ಫಲಿತಾಂಶಗಳೊಂದಿಗೆ ಚುನಾವಣೆಗಳು ಕೇವಲ ಜನಾಭಿಪ್ರಾಯ ಸಂಗ್ರಹವಾಗುವುದರಿಂದ ಚುನಾವಣಾ ರಾಜಕಾರಣವು ನೇಪಥ್ಯಕ್ಕೆ ಸರಿಯಬೇಕಿದೆ. ಚಳುವಳಿಗಳ ರಾಜಕೀಯ ಹಾಗೂ ರಸ್ತೆಗಳಲ್ಲಿನ ವಿರೋಧ ಹೊಸ ಪರಿಸ್ಥಿತಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದರೆ ಪ್ರಜಾಸತ್ತಾತ್ಮಕ ವಿರೋಧಕ್ಕೆ ಅವಕಾಶಗಳು ಕಡಿಮೆಯಾಗುವುದರಿಂದ ಇದೂ ಸಹ ಒತ್ತಡಕ್ಕೊಳಗಾಗುತ್ತದೆ. ಪ್ರತಿರೋಧದ ರಾಜಕಾರಣವು ಹೊಸತಾದ, ನಾವೀನ್ಯತೆಯಿಂದ ಕೂಡಿದ ಮಾದರಿಗಳನ್ನು ಕಂಡುಕೊಳ್ಳಬೇಕಿದೆ. ಹಾಗೆಯೇ ಪ್ರಜಾಸತ್ತಾತ್ಮಕವಾಗಿ, ಅಹಿಂಸಾತ್ಮಕವಾಗಿ ಇರುವುದು ಅತ್ಯವಶ್ಯ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಗಣತಂತ್ರ ದಿನವನ್ನೇ ಕೊನೆಯ ಗಣರಾಜ್ಯೋತ್ಸವ ಎಂದು ಭಾವಿಸಿ ಆಚರಿಸುವಂತೆ ಜೋಕ್ ಹರಿದಾಡುತ್ತಿದೆ. ವಿಡಂಬನೆ ಎಂದರೆ ಇದು ಈಗಾಗಲೇ ಸಾಬೀತಾಗಿದೆ. ಈ ಜನವರಿ 26ರಂದು ನಾವು ಅವಸಾನ ಹೊಂದಿರುವ ಗಣತಂತ್ರವನ್ನು ಸ್ಮರಿಸಲು ಆಚರಿಸಬೇಕಿದೆ ಅಥವಾ ಗಣತಂತ್ರವನ್ನು ಮರಳಿ ಪಡೆಯುವ ದೃಢ ನಿಶ್ಚಯದೊಂದಿಗೆ ಆಚರಿಸಬೇಕಿದೆ.
- ಯೋಗೇಂದ್ರ ಯಾದವ್
ಮೂಲ: The Republic is dead and there is no point blaming BJP-RSS. We need a new political language
The print – 26 Jan 2024 - ಅನುವಾದ: ನಾ ದಿವಾಕರ
(ಯೋಗೇಂದ್ರ ಯಾದವ್ ಭಾರತ್ ಜೋಡೋ ಅಭಿಯಾನದ ರಾಷ್ಟ್ರೀಯ ಸಂಯೋಜಕರು)