ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಿಷೇಧವೇರಿದಂತೆ ಪರಿಗಣಿಸಲ್ಪಟ್ಟಿದ ಜಾತೀಯತೆ, ಅಸ್ಪೃಶ್ಯತೆ, ಊಳಿಗಮಾನ್ಯ ಪದ್ಧತಿ ಮತ್ತು ಮರ್ಯಾದಾ ಹತ್ಯೆಯಂತಹ ಅಂಶಗಳನ್ನು ನಿರ್ದೇಶಕರು ಮತ್ತು ಬರಹಗಾರರು ನಿರ್ಭೀತಿಯಿಂದ ಭೂ ಸುಧಾರಣಾ ಕಾಯ್ದೆ ಹಾಗು ಮಾರಮ್ಮನ ಜಾತ್ರೆಯಲ್ಲಿ ಕೋಣ ಕಡಿದು ‘ಹೊಲೆ ಮಾರಿ’ ತರುವಂತಹ ನೆಲಮೂಲದ ಆಚರಣೆಗಳೊಂದಿಗೆ ಅದ್ಭುತವೆನ್ನುವ ರೀತಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ…
ಕನ್ನಡದಲ್ಲೂ ‘ಅಸುರನ್,’ ‘ಕರ್ಣನ್’, ‘ಜೈ ಭೀಮ್’ ತರಹದ ಸಿನಿಮಾ ಮಾಡಬಲ್ಲೆವು ಎಂದು ‘ಕಾಟೇರ’ ಮೂಲಕ ಉತ್ತರಿಸಿಯೇ ಬಿಟ್ಟರು. ಪಾ ರಂಜಿತ, ವೆಟ್ರಿಮಾರನ್, ಮಾರಿ ಸೆಲ್ವರಾಜ್ ತರಹದ ಸಿನಿಮಾ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ದೊರೆತಂತಾಯಿತು, ತರುಣ್ ಸುಧೀರ್ ಅವರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾರೆ…
ಇಂತಹ ಸಿನಿಮಾನ ಮಾಡಬೇಕಾದರೆ ತುಂಬಾನೇ ಗಟ್ಟಿಯಾದ ಕಥೆಯಿರಬೇಕು ಹಾಗು ಸ್ಕ್ರಿಪ್ಟ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು, ಆ ನಿಟ್ಟಿನಲ್ಲಿ ಜಡೇಶ್ ಕೆ. ಹಂಪಿ ನಿಜವಾಗಲು ಜಯ ಸಾಧಿಸಿದ್ದಾರೆ…
ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಹರಿತವಾದ ಸಂಭಾಷಣೆ ಬರೆದು ಗೆಲ್ಲಿಸಿರುವ ಮಾಸ್ತಿ ಕನ್ನಡ ಚಿತ್ರರಂಗದ ಅಗ್ರ ಬರಹಗಾರರಾಗಿ ಹೊರಹೊಮ್ಮಿದ್ದಾರೆ… ಕಾಟೇರ ಸಿನಿಮಾದ ನಾಯಕ ನಟ ದರ್ಶನ್ ಆಗಿದ್ದರು, ಸಿನಿಮೀಯವಲ್ಲದ ನೈಜ್ಯ ಮಾತುಗಳನ್ನೆ ಬರೆಯುವ ಮೂಲಕ ಮಾಸ್ತಿ ಅವರೆ ನಾಯಕನಾಗಿ ಎದ್ದು ಕಾಣುತ್ತಾರೆ…
ನಡಿಯೋ ದಾರಿ ನಮ್ದಲ್ಲ,
ಉಳೊ ಭೂಮಿ ನಮ್ದಲ್ಲ,
ಕುಡಿಯೋ ನೀರ್ ನಮ್ದಲ್ಲ,
ತಿನ್ನೋ ಅನ್ನದಿಂದ ಉಡೊ ಬಟ್ಟೆತಂಕ ಎಲ್ಲಾ ಜಾತಿ ಮೇಲಳಿತಾರೆ…
ಬೆಳೆ ಬೆಳೆಯೋದ್ ನಾವು, ಪಾಲ್ ತಗೊಳೋರ್ ಅವ್ರು…
ಮೆಟ್ಟೊಲಿಯೋದ್ ನಾವು, ಮೆಟ್ಕೊಂಡ್ ಓಡಾಡೋರ್ ಅವ್ರು…
ಗೇಮೆ ನಮ್ದು, ಆದಾಯ ಅವ್ರ್ದು…
ನಾಯ್ಗಳಾದ್ರೂ ಎಲ್ಲಂದ್ರಲ್ಲಿ ಓಡಾಡ್ತವೆ…
ನಾವು…? ಅದಕ್ಕಿಂತ ಕಡೆಯಾಗೋದ್ವಾ…?
ಇದೆಲ್ಲಾ ಯಾರ್ತವ ಹೇಳ್ಕೊಳ್ಳುವ…?
ಭೂಮಾಲಿಕರಿಂದ ಭೂರಹಿತ ಗೇಣಿದಾರರಿಗೆ/ರೈತರಿಗೆ ಮರುಹಂಚಿಕೆ ಮಾಡಬೇಕೆಂದು, ಕೃಷಿ ವ್ಯವಸ್ಥೆಯೊಳಗಿನ ಶೋಷಣೆ ಮತ್ತು ಸಾಮಾಜಿಕ ಅನ್ಯಾಯವನ್ನು ತೊಲಗಿಸಲು ಸರ್ಕಾರ ಹೊರಡಿಸುವ ಭೂ ಸುಧಾರಣಾ ಕಾಯ್ದೆಯನ್ನೂ ಧಿಕ್ಕರಿಸಿ ಉಳುವವನಿಗೆ ಅವನ ಪಾಲಿನ ಭೂಮಿ ನೀಡದೆ ದೌರ್ಜನ್ಯ ಎಸುಗುವ ಊರಿನ ಮೇಲ್ಜಾತಿಯ ಜಮೀನ್ದಾರರ ವಿರುದ್ಧ ಗ್ರಾಮಸ್ಥರ ನಾಯಕನಾಗಿ ಸಿಡಿದು ನಿಲ್ಲುವ ಕಮ್ಮಾರನಾಗಿ ಕಾಟೇರನ ಪಾತ್ರಕ್ಕೆ ದರ್ಶನ್ ಅದ್ಭುತವೆನ್ನುವ ರೀತಿಯ ಜೀವತುಂಬಿ ಅವರ ಇಲ್ಲಿಯವರೆಗಿನ ಸಿನಿಮಾ ಬದುಕಿನ ಅತ್ಯುತ್ತಮ ನಟನೆಯನ್ನು ಪ್ರದರ್ಶಸಿದ್ದಾರೆ. ಶಾನುಭೋಗರ ಮಗಳಾಗಿ ಕನಸಿನ ಯುವರಾಣಿ ಆರಾಧನಾ ಗಮನಸೆಳೆಯುತ್ತಾರೆ..
ಮೂಕ ಹಿರಣ್ಯಕಶಿಪುವಿನ ದನಿಯಾಗುವ ಕಾಟೇರ, ಮಾತುಬರದ ಚಂಗ್ಲುಗೆ ಹಿನ್ನೆಲೆ ಧ್ವನಿ ನೀಡುವ ದೃಶ್ಯವಂತು ಅದ್ಭುತ ರೂಪಕವೆನ್ನುವಂತಿದೆ…
“ಕಾಟೇರ” ಕನ್ನಡ ಚಿತ್ರರಂಗದ ಹೊಸ ಯುಗ ಆರಂಭ…
- ರಮ್ಮಿ
ಸಿನಿಮಾ ವಿಶ್ಲೇಷಕರು
[…] ಇದನ್ನೂ ಓದಿ: ಭೀಮ ಕೋರೆಗಾಂವ್‌ನ ಸಿದ್ಧನಾಕ; ಭೀಮನಹಳ್ಳಿಯ… […]