ಓಂ ನಮಃ ಶಿವಾಯವನ್ನೇ ಕೇಳುತ್ತಾ ಹುಟ್ಟಿ ಬೆಳೆದವನು ನಾನು. ನನ್ನ ಅಜ್ಜಿ ನನಗೆ ಮಂತ್ರವೆಂದು ಹೇಳಿಕೊಟ್ಟದ್ದು ಅದು ಒಂದೇ. ಧರ್ಮಗ್ರಂಥವೆಂದೇನೂ ತಿಳಿದಿರದಿದ್ದ ನಮ್ಮ ಮನೆಯಲ್ಲಿ ಸಂಸ್ಕೃತಿಯೆಂದರೆ ಅದು ಶರಣ ಸಂಸ್ಕೃತಿ, ಧಾರ್ಮಿಕ ಶ್ರದ್ಧೆಯೆಂಬಂತೇನೂ ಅಲ್ಲದಿದ್ದರೂ ಶ್ರದ್ಧೆಯಿಂದ ಮೊಳಗುತ್ತಿದ್ದದ್ದು ಶರಣರ ವಚನಗಳು. ನನಗಂತೂ ಲಿಂಗ ಬಂಧನವಿಲ್ಲದೇ ಇದ್ದರೂ ಮನೆಯ ಹಿರಿಯರು ಅವರವರ ಇಷ್ಟಲಿಂಗಕ್ಕೆ ನೀರು, ಪತ್ರೆ ಕಾಣಿಸುತ್ತಿದ್ದದ್ದು ಅವರಿಗೆ ಇಷ್ಟ ಬಂದಾಗ. ಲಿಂಗವೋ, ಪೂಜೆಯೋ ಮುಖ್ಯವಾಗಿ ಎಂದೂ ಕಂಡಿರದ ಅವರು ಬಹಳ ಮಾನ್ಯತೆ ಕೊಡುತ್ತಿದ್ದದ್ದು ಶರಣ ಸಾಹಿತ್ಯಕ್ಕೆ, ವಚನ ಭಂಡಾರಕ್ಕೆ. ಆದರೂ ನುಣುಪಾದ, ಹೊಳೆಹೊಳೆಯುವ ಲಿಂಗವನ್ನು ಬೆಳ್ಳಿಯ ಕರಡಿಗೆಗಳಿಂದ ಹೊರ ತೆಗೆದಾಗ ಅದೇನೋ ಪ್ರೀತಿ. ನಾನೂ ಪೂಜಿಸುತ್ತೇನೆ ಎಂದು ಶಿಶು ಕುತೂಹಲದಿಂದ ಕೇಳಿದಾಗ, ಹಿರಿಯರ ಇಷ್ಟಲಿಂಗಗಳು ನನ್ನ ಇಷ್ಟಕ್ಕೆ ಬಂದು ಬಿಡುತ್ತಿದ್ದವು. ನಾನೋ ಅದಕ್ಕೆ ಇನ್ನಿಲ್ಲದ ಅಭಿಷೇಕ ಮತ್ತು ಪೂಜೆಗಳನ್ನು ಮಾಡುತ್ತಾ ಆನಂದಿಸುತ್ತಿದ್ದೆ. ಭಕ್ತ ಮಾರ್ಕಂಡೇಯನಿಗೆ ಒಲಿದಂತೆ ಒಂದು ದಿನ ಶಿವನು ತಾಂಡವ ನೃತ್ಯವನ್ನಾಡುತ್ತಾ ನನ್ನ ಮುಂದೆ ಬಂದು ಕೋಳೂರು ಕೊಡಗೂಸಿನ ಜೊತೆ ಲೋಕಾಭಿರಾಮವಾಗಿದ್ದಂತೆ ನನ್ನೊಡನೆಯೂ ಬಂದು ಸಲ್ಲಾಪದಲ್ಲಿ ತೊಡುಗುತ್ತಾನೆಂದ ಮಹದಾಸೆ. ಅದಕ್ಕಾಗಿಯೇ ಆ ಶಿವನ ಗಮನ ಸೆಳೆಯಲು ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಿದ್ದೆ. ಓಂ ನಮಃಶಿವಾಯ ಸಾವಿರಾರು ಬಾರಿ ಜಪ ಮಾಡುತ್ತಿದ್ದೆ. ಅವನ ವೇಷಭೂಷಣ, ಅವನ ಧೋರಣೆ, ನಡವಳಿಕೆಗಳು, ಸ್ವತಂತ್ರ ಮನೋಧರ್ಮ, ಜಂಗ್ಲಿ ಅಪಿಯರೆನ್ಸ್ ಇತ್ಯಾದಿಗಳ ಸೆಳೆತದ ಜೊತೆಗೆ ಆವೇಶಪೂರಿತ ಡಮರು, ಢಕ್ಕೆ, ಶಂಖಗಳ ಘೋಷ, ಗಟ್ಟಿ ಸ್ತುತಿಗಳು. ಕೆಲವೊಮ್ಮೆ ಬೋರಿಕ್ ಪೌಡರ್ನ ಮುಚ್ಚಳವು ಕಪ್ಪಗೆ ಲಿಂಗಾಕಾರವಾಗಿದ್ದು ಅದು ನನ್ನ ಆಟದಲ್ಲಿಯೂ ಶಿವಲಿಂಗವಾಗಿ ನುಸುಳಿರುತ್ತಿತ್ತು.
ಇರಲಿ, ನಮ್ಮ ಮನೆಗೆ ಆಗಾಗ್ಗೆ ಲೋಕಾಭಿರಾಮವಾಗಿ ಅನೇಕ ಜಂಗಮರು ಬರುತ್ತಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದ ಅವರು ನಮ್ಮ ಮನೆಗೆ ಬಂದು ಸ್ನಾನ ಪೂಜಾದಿಗಳನ್ನು ಮುಗಿಸಿಕೊಂಡು ಶರಣರ ಜೀವನದ ಕುರಿತೋ ಅಥವಾ ಪ್ರಸ್ತುತ ಮಠಗಳ ಕುರಿತೋ ಒಂದಿಷ್ಟು ಮಾತುಕತೆಯಾಡುತ್ತಿದ್ದರು. ಆಗ ನಾನು ಮೂರು ಅಥವಾ ನಾಲ್ಕನೆಯ ತರಗತಿಯ ಹುಡುಗ. ನಾನು ಕೇಳುತ್ತಿದ್ದ ಸಿದ್ಧಾರೂಢರ ಕಥೆಯಲ್ಲಿ ಬಾಲಕ ಸಿದ್ಧ ತನಗೆ ಎದುರಾದ ಗುರುಗಳಲ್ಲಿ ತನ್ನ ಪ್ರಶ್ನೆಗಳನ್ನು ಕೇಳುತ್ತಿದ್ದ ಪ್ರಭಾವದಿಂದಲೋ ಏನೋ, ಹಾಗೆ ಬಂದಿದ್ದ ಒಬ್ಬ ಜಂಗಮರಿಗೆ “ಲಿಂಗ” ಎಂದರೆ ಏನು ಎಂದು ಕೇಳಿದೆ.
ಅವರೋ “ನಿನಗಿಲ್ಲವೇ ತರಡುಬೀಜ, ಅದೇ ಲಿಂಗ” ಎಂದರು. ಪುಲ್ಲಿಂಗ ಸ್ತ್ರೀ ಲಿಂಗಗಳ ಪಾಠವಾಗಿದ್ದ ನಾನು ಮತ್ತೆ ಕೇಳಿದೆ, “ಅದಲ್ಲ, ನಾನು ಕೇಳಿದ್ದು ಶಿವಲಿಂಗ” ಎಂದು ಭಯಭಕ್ತಿಯಿಂದ ಕೇಳಿದೆ.
“ಶಿವಲಿಂಗ ಅಂದರೆ ಶಿವನ ತರಡುಬೀಜ” ಎಂದುಬಿಡೋದೇ ಆ ಜಂಗಮರು? ಅಲ್ಲಿಗೆ ನಾನು ಸುಮ್ಮನಾದರೂ ಅವರು ತಮಾಷೆ ಮಾಡಿದ್ದಾರೆಂದೇ ನೆನೆಸಿದ್ದೆ ಮತ್ತು ಅಂತಾ ಮಹಿಮಾಮಹಿಮ ದೇವರ ಬಗ್ಗೆ ಅಷ್ಟು ಪೋಲಿ ಮಾತಾಡಿದ್ದು ಆಶ್ಚರ್ಯವೂ ಆಗಿತ್ತು. ಒಂದು ವೇಳೆ ಈ ಜಂಗಮ ಡೂಪ್ಲಿಕೇಟ್ ಇರಬೇಕು ಎಂದೂ ಅಂದುಕೊಂಡೆ. ನಂತರ ಪರಿಚಯವಾಗಿದ್ದು ಶ್ರೀ ಶ್ರೀನಿವಾಸ ಕಲ್ಯಾಣದ ಕಥೆ.
ಭೃಗುವಿನ ಶಾಪ
ಅದರಲ್ಲಿ ಭೃಗುವು ಕೈಲಾಸಕ್ಕೆ ಬಂದಾಗ ಶಿವ ಮತ್ತು ಪಾರ್ವತಿಯು ಸರಸ ಸಲ್ಲಾಪದಲ್ಲಿ ತೊಡಗಿರುತ್ತಾರೆ. ಹಾಗಾಗಿ ಈ ಮಹರ್ಷಿಯು ಬಂದಿದ್ದನ್ನು ಗಮನಿಸುವುದಿಲ್ಲ. ಕೋಪಗೊಂಡ ಭೃಗುವು ಇನ್ನು ಮುಂದೆ ನಿನ್ನನ್ನು ಲಿಂಗರೂಪದಲ್ಲಿ ಪೂಜಿಸಲಿ ಎಂದು ಶಪಿಸುತ್ತಾನೆ.
ನನಗಾಗ ಬಂದ ಪ್ರಶ್ನೆಗಳೋ, “ಎಲ್ಲಾ ಬಿಟ್ಟು ಲಿಂಗರೂಪವನ್ನೇ ಈ ಋಷಿ ಏಕೆ ಆಯ್ದುಕೊಂಡ? ಶಿಶ್ನದ ಆಕೃತಿಯಲ್ಲಿ ನಿನ್ನನ್ನು ಪೂಜಿಸಲಿ ಎಂದು ಶಾಪ ಕೊಡುವುದು ಯಾವ ಸೀಮೆಯ ಶಿಕ್ಷೆ? ಅದಕ್ಕೂ ಮಿಗಿಲಾಗಿ ದೇವಾದಿದೇವನೆಂದಿರುವ ಶಿವನಿಗೆ ಇವನ್ಯಾರು ಋಷಿ ಶಾಪ ಕೊಡುವುದಕ್ಕೆ? ದೇವತೆಗಳಿಗಿಂತಲೂ ಋಷಿಯೊಬ್ಬನು ಮಿಗಿಲೇ? ಅಷ್ಟೊಂದು ಷಾರ್ಟ್ ಟೆಂಪರ್ಡ್ ಋಷಿ ಯಾವ ರೀತಿಯಲ್ಲಿ ಶ್ರೇಷ್ಠ? ಸಾಮಾನ್ಯ ಮನುಷ್ಯರಿಗೂ ಇರಬೇಕಾದ ಸಹನೆ, ಅರ್ಥ ಮಾಡಿಕೊಳ್ಳುವಷ್ಟು ವಿವೇಚನೆ, ಕ್ಷಮಾಭಾವ ಇಲ್ಲದ ಅವನೆಂತಹ ಋಷಿ? ಅವನಿಗೆ ಅವನೆಂದಂತೇ ಆಗಿ ಬಿಡುವ ಶಕ್ತಿ ಕೊಟ್ಟವರು ಯಾರು?” ಹೀಗೆ ಒಂದೆರಡಲ್ಲ!
ದಾರುಕಾವನದಲ್ಲಿ ಶಿವನ ಲಿಂಗ
ಇನ್ನೂ ಮುಂದೆ ಪ್ರೌಢಶಾಲೆ ಮುಟ್ಟಿದಾಗ ನನಗೆ ಸಿಕ್ಕ ತಾಪಿ ಧರ್ಮರಾವುರವರ ದೇವಾಲಯ ಮತ್ತು ಲೈಂಗಿಕ ಶಿಲ್ಪ. ಅದರಲ್ಲಿ ಪಾಲಾಕ್ಷ ಪಂಡಿತನಿಂದ ರಚಿಸಲ್ಪಟ್ಟ ಪುರಾಣದಲ್ಲಿ ಹೇಳಿರುವಂತಹ ಶಿವಲಿಂಗದ ಉಗಮದ ಕಥೆ ಹೇಳುತ್ತಾರೆ.
ಶಿವನು ಪಾರ್ವತಿಯನ್ನು ಮದುವೆಯಾದ ಹೊಸತರಲ್ಲಿ ತನ್ನ ಮಾವನಾದ ಹಿಮವಂತನ ಆದರಾತಿಥ್ಯವನ್ನು ಸ್ವೀಕರಿಸುತ್ತಾ ಆನಂದದಿಂದ ದಾರುಕಾವನದಲ್ಲಿ ವಿಹರಿಸುತ್ತಿರುತ್ತಾನೆ. ಆಗ ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ಬಂದಿದ್ದ ಶಿವನನ್ನು ಅಲ್ಲಿದ್ದ ಋಷಿಪತ್ನಿಯರು ನೋಡುತ್ತಾರೆ. ಆ ಹೆಂಗಸರನ್ನು ಕಂಡ ಶಿವನು ಕಾಮಾತುರನಾಗಿ ಕಿಲಕಿಲ ನಗುತ್ತಾ ನಿಂತುಕೊಂಡಿರುತ್ತಾನೆ. ಕೌಪಿನದಿಂದ ಹೊರಗಿಣುಕಿದ್ದ ಅವನ ಶಿಶ್ನವನ್ನು ನೋಡುತ್ತಾ ಆ ಋಷಿಪತ್ನಿಯರು ತಮ್ಮಲ್ಲೇ ಮಾತಾಡಿಕೊಂಡು ಸಮ್ಮೋಹಿತರಾಗಿ ನಿಂತಿರುತ್ತಾರೆ. ಆಗ ಅಲ್ಲಿಗೆ ಬಂದ ಋಷಿಗಳು ತಮ್ಮ ಪತ್ನಿಯರು ಹೀಗೆ ಶಿವನ ಲಿಂಗವನ್ನು ನೋಡುತ್ತಾ ನಿಂತಿರುವುದನ್ನು ಕಂಡು ಕ್ರೋಧಗೊಂಡು ತಮ್ಮಲ್ಲಿರುವ ದಂಡದಿಂದ ಅವನ ಲಿಂಗಕ್ಕೆ ಹೊಡೆಯುತ್ತಾರೆ. ತನ್ನ ಲಿಂಗಕ್ಕೆ ಹೊಡೆದ ಋಷಿಗಳ ಮೇಲೆ ಕುಪಿತನಾದ ಶಿವನು ತನ್ನ ಲಿಂಗವನ್ನು ಬೆಳೆಸಲು ಪ್ರಾರಂಭಿಸುತ್ತಾನೆ. ಆ ಲಿಂಗವೋ ಬೆಳೆಬೆಳೆಯುತ್ತಾ ಭೂಲೋಕ, ಮಹರ್ಲೋಕ, ಸತ್ಯಲೋಕ ಹೀಗೆ ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿಕೊಂಡು ಬೆಳೆಯುತ್ತಾ ಹೋದಂತೆ ಲೋಕವೆಲ್ಲಾ ಅಲ್ಲೋಲಕಲ್ಲೋಲವಾಗುತ್ತದೆ. ಆಗ ದೇವತೆಗಳು ಮತ್ತು ಋಷಿಗಳೆಲ್ಲರೂ ಬ್ರಹ್ಮನ ಬಳಿ ಮೊರೆ ಹೋಗುತ್ತಾರೆ.
ಆಗ ಬ್ರಹ್ಮನು ಬೆಳೆಯುತ್ತಿದ್ದ ಶಿವನ ಲಿಂಗದ ಊರ್ಧ್ವಭಾಗಕ್ಕೆ ಹೋಗಿ ಅದರ ಮೇಲೆ ಅಭಿಷೇಕಾದಿಗಳನ್ನು ಮಾಡಿ ದೇವತೆಗಳೊಂದಿಗೆ ಪ್ರಾರ್ಥಿಸುತ್ತಾನೆ. “ಶಿವನೇ ತಗ್ಗಿಸು, ಭವನೇ ಬಗ್ಗಿಸು” ಎಂದು ನಾನಾರೀತಿಯಲ್ಲಿ ಶಿವನ ನಾಮಗಳಿಂದ ಲಿಂಗವನ್ನು ಹಿಂದಕ್ಕೆ ತೆಗೆದುಕೊಳ್ಳಲು ಪ್ರಾರ್ಥಿಸುತ್ತಾರೆ. ಆಗ ಶಿವನು ಮೂಜಗವು ಕೇಳುವಂತೆ ಕಿಲಕಿಲ ನಗುತ್ತಾ, “ನೀವು ದಂಡದಿಂದ ಹೊಡೆದು ಅಪಮಾನಿಸಲು ಯತ್ನಿಸಿದ, ಕ್ಷುಲ್ಲಕವಾಗಿ ಪರಿಗಣಿಸಿದ ಈ ಲಿಂಗವನ್ನೇ ನೀವು ಇನ್ನು ಮುಂದೆ ಪೂಜಿಸಿ” ಎಂದು ಹೇಳುತ್ತಾನೆ. ಅಂದಿನಿಂದ ದೇವತೆಗಳು ಮತ್ತು ಋಷಿಗಳು ಲಿಂಗಪೂಜೆಯನ್ನು ಮಾಡಲು ತೊಡಗುವರು.
ಈ ಕಥೆಯನ್ನು ಓದಿದ ಮೇಲೆ ನನಗೆ ಆ ಜಂಗಮರು ನನಗೆ ಲಿಂಗ ಶಿವನ ತರಡುಬೀಜ ಎಂದು ಹೇಳಿದ್ದು ಇಂಥಾ ಕಥೆಯೊಂದರ ಆಧಾರಿತ ಎಂದು ಅರಿವಾಯಿತು. ಕ್ರಿಸ್ತಪೂರ್ವ ಮೂರನೆಯ ಶತಮಾನದಲಿ ದೊರಕಿರುವಂತಹ ಗುಡಿಮಲ್ಲಂ ಲಿಂಗದ ಶಿಲ್ಪವನ್ನು ಗಮನಿಸಿದರೆ ನಾವು ಪೂಜಿಸುವ ಲಿಂಗವೆಂಬುದು ಶಿವನ ನಿಮಿರಿದ ಶಿಶ್ನ ಎಂಬ ಸೂಚನೆಗಳನ್ನು ನೇರವಾಗಿ ನೀಡುತ್ತದೆ.
ಲಕುಲೀಶ
ಉದ್ರಿಕ್ತ ಶಿಶ್ನಕ್ಕೂ ಮತ್ತು ಶಿವಲಿಂಗಕ್ಕೂ ಸಂಬಂಧ ಕಲ್ಪಿಸಲು ನೆರವಾಗುವಂತೆ ಪಾಶುಪತವೆಂಬ ಶೈವಪಂಥದ ಸಂಸ್ಥಾಪಕನಾಗಿರಬಹುದಾದ ಲಕುಲೀಶನ ವಿಗ್ರಹವು ಗಮನಾರ್ಹವಾಗಿದೆ. ಕರ್ನಾಟಕದ ಮಹಾಕೂಟದ ಸಂಗಮೇಶ್ವರ ದೇವಸ್ಥಾನದಲ್ಲಿ, ಕ್ರಿಸ್ತಶಕ 7ನೇಶತಮಾನದ ಚಾಲುಕ್ಯರ ಅವಧಿಯಲ್ಲಿ ಕಡೆದಿರುವಂತಹ ಲಕುಲೀಶನ ವಿಗ್ರಹವು ಊರ್ಧ್ವಲಿಂಗ ಅಥವಾ ಊರ್ಧ್ವರೇತ ಅಂದರೆ ಮೇಲಕ್ಕೆ ನಿಲ್ಲಿಸಿಕೊಂಡ ಶಿಶ್ನವನ್ನು ಹೊಂದಿದೆ. ಈ ಲಕುಲೀಶನು ಪಾಶುಪತ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದು, ಈತನ ಉಲ್ಲೇಖವು ಲಿಂಗಪುರಾಣ, ಸ್ಕಂದಪುರಾಣ, ವಾಯುಪುರಾಣ ಮತ್ತು ಕೂರ್ಮಪುರಾಣಗಳಲ್ಲಿದೆ. ಈತನು ವೇದವ್ಯಾಸ ಮತ್ತು ಕೃಷ್ಣನ ಸಮಕಾಲೀನನಾಗಿದ್ದು ರುದ್ರನ 28ನೆಯ ಮತ್ತು ಕೊನೆಯ ಅವತಾರವೆಂದು ನಂಬುತ್ತಾರೆ. ಈತ ಗುಜರಾತಿನಲ್ಲಿ ಹುಟ್ಟಿದ್ದು, ಪಾಶುಪತ ಶೈವ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ವೇದಗಳನ್ನು, ಜೈನ ಮತ್ತು ಬೌದ್ಧ ಸಿದ್ಧಾಂತಗಳನ್ನು ನಿರಾಕರಿಸಿದ್ದ.
ಕ್ರಿಸ್ತಶಕ ಮೊದಲನೆಯ ಶತಮಾನದಲ್ಲಿ ಲಕುಲೀಶನು ಶೈವಾಗಮದಲ್ಲಿ ಬೆರೆತರೂ, ಸುಮಾರು ಇನ್ನೂರು ವರ್ಷಗಳ ನಂತರ ಅವನು ಶಿವನ ಅವತಾರವೆಂದು ಮಾನ್ಯ ಮಾಡಲಾಯಿತು.
ಶಿಶ್ನಾರಾಧಕರು
ಭಾರತದಲ್ಲಿ ಮಾತ್ರವಲ್ಲದೇ ವಿಯಟ್ನಾಂ, ಜಾವಾ, ಇಂಡೋನೇಶಿಯಾ, ಕಾಂಬೋಡಿಯಾ, ಈಜಿಪ್ಟ್, ಜಪಾನ್ ಮತ್ತು ಇನ್ನೂ ಪ್ರಾಚೀನ ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲೂ ನಾವು ಶಿಶ್ನ ಸಂಕೇತಗಳನ್ನು ಒಳಗೊಂಡ ಅನೇಕ ಕುರುಹುಗಳನ್ನು ಕಾಣುತ್ತೇವೆ. ಪ್ರಾಚೀನ ಭಾರತದ ಪೂರ್ವ ನಿವಾಸಿಗಳಾದ ದಸ್ಯುಗಳನ್ನು ಆರ್ಯರು ಶಿಶ್ನಾರಾಧಕರು ಎಂದು ಅಸಡ್ಡೆಯಿಂದ ಕಾಣುತ್ತಿದ್ದದ್ದು ಉಂಟು.
ಜಪಾನಿನಲ್ಲಿ ಮಾರ್ಚ್ 15ರಂದು ಶಿಶ್ನದ ಹಬ್ಬವನ್ನು ಆಚರಿಸುತ್ತಾರೆ. ಅಂದು ಶಿಶ್ನದ ಬೃಹದಾಕಾರದ ಮರದಿಂದ ನಿರ್ಮಿಸಲಾದ ಮಾದರಿಯ ಮೆರವಣಿಗೆಯನ್ನು ಬೀದಿಬೀದಿಗಳಲ್ಲಿ ಮಾಡುತ್ತಾರೆ. ಫಲವತ್ತಾದ ಬೆಳೆಯ, ಪುಂಸತ್ವದ ವೃದ್ಧಿಯ, ಪ್ರತಿಯೊಬ್ಬರಿಗೂ ಚೈತನ್ಯವನ್ನು ಪುನಶ್ಚೇತನಗೊಳಿಸುವ ಹರಕೆಯನ್ನು ಇದು ಹೊಂದಿರುತ್ತದೆ. ಇಡೀ ಕುಟುಂಬವು ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಸಾರ್ವಜನಿಕವಾಗಿ ನಡೆಯುವ ಜಾತ್ರೆಯಲ್ಲಿ ಒಬ್ಬೊಬ್ಬರು ಮರದ ಶಿಶ್ನಗಳನ್ನು ಜೊತೆಗೆ ತಂದಿದ್ದು ಒಬ್ಬರದೊಬ್ಬರ ಮಾದರಿಗಳನ್ನು ಚುಂಬಿಸುತ್ತಾರೆ. “ನೀನು ನಿನ್ನ ಶಿಶ್ನವನ್ನು ತಂದಿರುವೆಯಾ” ಎಂದು ಹಾಸ್ಯ ಚಟಾಕಿ ಹಾರಿಸುವಂತೆ, “ನಿನ್ನ ಶಿಶ್ನವು ಬಲವಾಗಿ ಚೈತನ್ಯ ಪೂರ್ಣವಾಗಿರಲಿ” ಎಂದು ಗಂಭೀರ ಹಾರೈಕೆಯನ್ನು ನೀಡುವುದೂ ಮತ್ತು “ಧನ್ಯವಾದಗಳು, ನಿನ್ನದೂ ಕೂಡ ಹಾಗೆಯೇ ಇರಲಿ” ಎಂದು ಪ್ರತಿ ಹಾರೈಸುವುದೂ ನಡೆಯುತ್ತದೆ.
ಈ ಬಗೆಯ ಶಿಶ್ನಾರಾಧನೆಗಳು ನಡೆಯಲು ಕಾರಣವನ್ನು ಹುಡುಕಲು ನಾವು ಆದಿಮ ಕಾಲಕ್ಕೇ ಹೋಗಬೇಕು.
ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಶಿಶ್ನಗಳ ಸಂಕೇತಗಳು ಗೌರವಕ್ಕೆ ಪಾತ್ರವಾಗಲು ಕಾರಣ ಮಾತೃಪ್ರಧಾನ ಕುಟುಂಬದಿಂದ ಪಿತೃಪ್ರಧಾನ ಕುಟುಂಬಕ್ಕೆ ಬದಲಾಗುವ ಸನ್ನಿವೇಶಗಳೆಂದುಕೊಂಡರೆ; ಅದು ಇದ್ದರೂ ಇರಬಹುದು. ಆದರೆ ಸೃಷ್ಟಿಯ ಕಾರಣಕ್ಕೆ ಶಿಶ್ನವೂ ಕೂಡ ಒಂದು ಮುಖ್ಯ ಕಾರಣ ಎಂದು ಮನುಷ್ಯನಿಗೆ ಮೂಡಿದ ಅರಿವು ಮುಖ್ಯ ಎನಿಸುತ್ತದೆ.
ಜೀವ ಸೃಷ್ಟಿಯ ಪ್ರಕ್ರಿಯೆಯಲ್ಲಿ ಸ್ತ್ರೀಯೊಬ್ಬಳೇ ಮುಖ್ಯ ಎಂದು ಮನುಷ್ಯ ಭಾವಿಸಿದ್ದನು. ನೈಸರ್ಗಿಕವಾಗಿ ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಿದ್ದರೂ, ಅದಕ್ಕೂ ಮತ್ತು ಶಿಶುವಿನ ಜನನಕ್ಕೂ ಅವನು ಸಂಬಂಧವನ್ನು ಕಲ್ಪಿಸಿಕೊಂಡಿರಲಿಲ್ಲ. ಸ್ತ್ರೀಯಲ್ಲಿ ಹೆರುವ ಪ್ರಕ್ರಿಯೆ ತಂತಾನೆ ಆಗುವುದು ಎಂದು ತಿಳಿದಿದ್ದು, ಅವಳನ್ನೇ ಬಹು ಮುಖ್ಯವಾಗಿ ಪರಿಗಣಿಸಿದ್ದನು. ಯೋನಿಯನ್ನು ಆರಾಧಿಸುತ್ತಿದ್ದನು. ಆದರೆ, ಸಂತಾನೋತ್ಪತ್ತಿಯಲ್ಲಿ ಶಿಶ್ನದ ಪಾತ್ರವೂ ಇದೆ ತಿಳಿದ ಮೇಲೆ ಅಥವಾ ಪುರುಷನ ಪಾತ್ರವು ಪ್ರಧಾನ ಎಂದು ಎನಿಸಿದಾಗ ಅವರ ಗಮನ ಮತ್ತು ಮಾನ್ಯತೆ ಶಿಶ್ನದ ಕಡೆಗೆ ಹರಿಯಿತು. ಮಿಶ್ರ ಅಭಿಪ್ರಾಯಗಳು ಮತ್ತು ಅವುಗಳಿಂದ ಹುಟ್ಟಿದಂತಹ ವಿವಿಧ ಸಿದ್ಧಾಂತಗಳು ಹುಟ್ಟಿದಂತೆ, ಇಷ್ಟಾದರೂ ಮಾತೃ ಪ್ರಾತಿನಿಧ್ಯವನ್ನು ಮಾನ್ಯ ಮಾಡುವವರು ಇದ್ದರು. ಹಾಗೆಯೇ ಪಿತೃ ಪ್ರಾಧಾನ್ಯತೆಯನ್ನು ಒಪ್ಪುವವರು ಶಿಶ್ನ ಸಂಕೇತಗಳನ್ನು ರೂಪಿಸಲಾರಂಭಿಸಿರಬೇಕು. ಆದರೆ, ಸ್ತ್ರೀ ಮತ್ತು ಪುರುಷ ಅಥವಾ ಪ್ರಕೃತಿ ಮತ್ತು ಪುರುಷ ಇಬ್ಬರನ್ನೂ ಪರಿಗಣಿಸಿದವರು ಇಬ್ಬರ ಸಂಕೇತಗಳನ್ನೂ ಕ್ರೋಢೀಕರಿಸಿದರು. ಲಿಂಗ ಮತ್ತು ಪಾಣಿವಟ್ಟ(ಪಾಣಿಪೀಠ)ವನ್ನು ಜೊತೆಯಾಗಿ ಕಂಡರು. ಲಿಂಗವು ಶಿಶ್ನದ ಸಂಕೇತವಾದರೆ, ಪಾಣಿವಟ್ಟವು ಯೋನಿಯ ಸಂಕೇತವಾಯಿತು. ತಂತ್ರ ಸಾಧನೆಯಲ್ಲಿ ಈ ಎರಡರ ಐಕ್ಯತೆ ಬಹು ಮುಖ್ಯವಾದ ಅಂಶವಾಗಿರುತ್ತದೆ. ಶಿಶ್ನವು ಶಿವ-ಆದರೆ, ಯೋನಿಯು ಶಕ್ತಿಯಾಯಿತು.
ನಾನಾ ಬಗೆಯ ಯಂತ್ರ ಮಂತ್ರ ಮತ್ತು ತಂತ್ರಗಳಲ್ಲಿ ಈ ಭಾಗ ಬಹು ಮುಖ್ಯವಾಗಿ ಪರಿಗಣಿತವಾಗುತ್ತದೆ.
ಭಾರತದ ತಂತ್ರ ಸಾಧನೆಯಲ್ಲಿ ಯೋನಿ ಮತ್ತು ಲಿಂಗದ ಮಹತ್ವವು ವಿಶಿಷ್ಟವಾದುದು.
–ಯೋಗೇಶ್ ಮಾಸ್ಟರ್, ಸಂಸ್ಕೃತಿ ಚಿಂತಕರು