ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಒಂಬತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ. ಕೆ. ಫೈಝಿ ಅವರು ಇಂದು (ಮಾರ್ಚ್ 01, 2023) ಹೋಟೆಲ್ ಒಂದರಲ್ಲಿ ನಡೆದ ಪತ್ರಿಕಾಗೋಷ್ಠಿಯ ಮೂಲಕ ಬಿಡುಗಡೆ ಮಾಡಿದರು.
ಅಮೀನ್ ಮೊಹ್ಸಿನ್ (ಮಡಿಕೇರಿ), ಸೈಯದ್ ಇಶಾಕ್ ಹುಸೇನ್ (ರಾಯಚೂರು), ಯಮನಪ್ಪ ಗುಣದಾಳ್ (ತೇರದಾಳ), ಚಂದ್ರು ಅಂಗಡಿ (ಮೂಡಿಗೆರೆ), ಅಥಾವುಲ್ಲಾ ದ್ರಾಕ್ಷಿ (ಬಿಜಾಪುರ), ರಿಯಾಝ್ ಪರಂಗಿಪೇಟೆ (ಮಂಗಳೂರು – ಉಲ್ಲಾಳ), ರಹೀಮ್ ಪಟೇಲ್ (ಗುಲ್ಬರ್ಗ ಉತ್ತರ), ಶಾಫಿ ಬೆಳ್ಳಾರೆ (ಪುತ್ತೂರು), ಡಾ. ವಿಜಯ್ ಎಂ. ಗುಂಟ್ರಾಲ್ (ಹುಬ್ಬಳ್ಳಿ ಪೂರ್ವ) ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು 7ನೇ ತಾರೀಖು ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿರುವ 54 ಕ್ಷೇತ್ರಗಳ ಪಟ್ಟಿ ಮತ್ತು 10 ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಿದ್ದೇವೆ. ಈಗ ಎರಡನೇ ಪಟ್ಟಿಯಲ್ಲಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಮತ್ತು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲದೆ ಎಂದು ಹೇಳಿದರು.
ಫಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪಕ್ಷವಾಗಿ ಎಸ್ಡಿಪಿಐ ತನ್ನ ಚುನಾವಣಾ ಪ್ರಾಚಾರವನ್ನು ಆರಂಭಿಸಿದ್ದೇವೆ. ನಾವು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಸಮಾನವಾಗಿ ಪ್ರಚಾರ ಕೈಗೊಳ್ಳುತ್ತೀವೆ. ಏಕೆಂದರೆ ಒಂದೆಡೆ ಬಿಜೆಪಿ ಅಲ್ಪಸಂಖ್ಯಾತರು, ಶೋಷಿತ ಸಮುದಾಯಗಳ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಏನೂ ಮಾಡದೆ ಮೌನವಾಗಿವೆ. ಹಾಗಾಗಿ ನಮ್ಮ ಹೋರಾಟ ಎಲ್ಲ ಪಕ್ಷಗಳ ವಿರುದ್ಧವೂ ಸಮಾನವಾಗಿರುತ್ತದೆ ಎಂದು ಅವರು ಹೇಳಿದರು. ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆ ಅವರನ್ನು ಅಭ್ಯರ್ಥಿ ಮಾಡಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಅವರು ಶಾಫಿ ಅವರನ್ನು ಬಿಜೆಪಿ ಸರ್ಕಾರ ಸುಳ್ಳು ಆರೋಪಗಳ ಮೇಲೆ ಬಂಧಿಸಿದೆ. ರಾಜಕೀಯ ದ್ವೇಷದ ಕಾರಣಕ್ಕೆ ಅವರನ್ನು ಗುರಿ ಮಾಡಲಾಗಿದೆ. ಅವರಿಗೆ ಅನ್ಯಾಯವಾಗಿದೆ ಎಂದು ಆ ಕ್ಷೇತ್ರದ ಜನ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು, ಕರ್ನಾಟಕದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಓಟರ್ ಗೇಟ್ ಹಗರಣ, 40% ಕಮಿಷನ್ ದಂಧೆ, ಈ ರೀತಿ ಈ ಸರ್ಕಾರ ಮಾಡದ ಹಗರಣ ಇಲ್ಲ. ಗುತ್ತಿಗೆದಾರರೊಬ್ಬರು ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರ ಲಂಚದ ಬೇಡಿಕೆಯೇ ಕಾರಣ ಎಂದು ಪತ್ರ ಬರೆದು ಜೀವ ಬಿಟ್ಟಿದ್ದರು. ಓಟರ್ ಗೇಟ್ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಚೆಕ್ ಗಳು ದೊರಕಿರುವುದು ಈ ಹಗರಣದಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ಇನ್ನು ಭ್ರಷ್ಟಾಚಾರದ ಜೊತೆ ಜೊತೆಗೆ ಈ ಸರ್ಕಾರದ ಕೋಮು ದ್ವೇಷದ ರಾಜಕೀಯ ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇಷ್ಟಿದ್ದರೂ ವಿರೋಧ ಪಕ್ಷ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಮತಗಳ ಮೇಲೆ ಉಸಿರಾಡುವ ಕಾಂಗ್ರೆಸ್ ಮುಸ್ಲಿಮರ ಯಾವ ಸಮಸ್ಯೆ, ಸವಾಲುಗಳಿಗೂ ಸ್ಪಂದಿಸುವುದೇ ಇಲ್ಲ. ಸ್ಪಂದಿಸುವುದು ಬಿಡಿ ಅದು ಬಿಜೆಪಿಗಿಂತ ಭಿನ್ನವಲ್ಲ ಎಂದು ಇತ್ತೀಚೆಗೆ ರಾಜಸ್ತಾನದ ಗೆಹಲೋಟ್ ಅವರ ಕಾಂಗ್ರೆಸ್ ಸರ್ಕಾರ ತೋರಿಸಿದೆ. ಕರ್ನಾಟದಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅದೇ ರೀತಿ ಕೊಲೆಯಾದ ಮಸೂದ್ ಮತ್ತು ಫಾಜಿಲ್ ಮನೆಗೆ ಹೋಗುವ ಕಾರ್ಯ ಮಾಡಲಿಲ್ಲ. ಅದೇ ರೀತಿ ರಾಜಸ್ತಾನದಲ್ಲಿ ಕನ್ಹಯ್ಯ ಲಾಲ್ ಕೊಲೆಯಾದಾಗ ಅವರ ಮನೆಗೆ ಭೇಟಿ ನೀಡಿ ಆತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಅಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿ ಗೆಹಲೋಟ್ ಮೊನ್ನೆ ಗೋ ಭಯೋತ್ಪಾದಕರಿಂದ ಕೊಲೆಯಾದ ಇಬ್ಬರು ಮುಸ್ಲಿಮರ ಮನೆಯ ಕಡೆ ತಿರುಗಿಯೂ ನೋಡಲಿಲ್ಲ. ಹಾಗಾಗಿ ಕಾಂಗ್ರೆಸ್ ಒಂದು ಡಬಲ್ ಸ್ಟಾಂಡರ್ಡ್ ಪಕ್ಷ ಅದರ ವಿರುದ್ಧವೂ ಕೂಡ ನಾವು ಬಿಜೆಪಿ ವಿರುದ್ಧ ಪ್ರಚಾರ ಕೈಗೊಂಡ ತೀವ್ರತೆಯಲ್ಲೇ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ಸಾದಿಯಾ ಸಯಿದಾ, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ. ಆರ್. ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ಅಬ್ದುಲ್ ಲತೀಫ್ ಪುತ್ತೂರು ಮತ್ತು ಅಭ್ಯರ್ಥಿಗಳು ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದರು.