ಮೈಸೂರು (04-09-2023): ಸರ್ಕಾರ ಜಾರಿಗೆ ತರುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಎಸ್‌ಸಿಎಸ್‌ಪಿ-ಟಿಎಸ್ ಪಿ ಅನುದಾನದಲ್ಲಿ ಹಣ ಬಳಕೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘಟನೆಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ನಂಜರಾಜ್ ಬಹುದ್ದೂರ್ ಛತ್ರದಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ದಲಿತ ಹಲವು ಮುಖಂಡರು ರಾಜ್ಯ ಸರ್ಕಾರದ ನಡೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿರಿಸಿರುವ ಎಸ್‌ಸಿಎಸ್‌ಪಿ-ಟಿಎಸ್ ಪಿ ಹಣವನ್ನು ಕಳೆದ ಹತ್ತು ವರ್ಷಗಳಲ್ಲಿ ಆಳಿದ ಸರ್ಕಾರಗಳು ಯಾವ ರೀತಿಯಲ್ಲಿ ಇತರ ಕಾರಣಗಳಿಗಾಗಿ ಬಳಕೆ ಮಾಡಿಕೊಂಡು ದಲಿತರನ್ನು ವಂಚಿಸುತ್ತಾ ಬಂದಿವೆ ಮತ್ತು ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದಲಿತರಿಗೆ ಮೀಸಲಿಟ್ಟ ಎಸ್‌ಸಿಎಸ್‌ಪಿ-ಟಿಎಸ್ ಪಿ ಹಣದಲ್ಲಿ ಸುಮಾರು 11000 ಕೋಟಿ ರೂಪಾಯಿಗಳನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಸಲು ಮುಂದಾಗಿರುವುದರ ಸಂಬಂಧ ವಿಸ್ತೃತವಾದ ಪ್ರಬಂಧವನ್ನು ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡರ ಪ್ರಭುಸ್ವಾಮಿ ಅವರು ಮಂಡಿಸಿದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಸ್ಸಿ-ಎಸ್ಟಿ ಜನರ ಕಲ್ಯಾಣ ಅಭಿವೃದ್ಧಿ ಅನುದಾನ ಕಡಿತಗೊಳಿಸಿರುವುದು ಸರ್ಕಾರ ನಡೆಸುವವಗೆ ದಲಿತರ ಮೇಲಿರುವ ಕಾಳಜಿಯನ್ನು ತೋರುತ್ತದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕಾಯ್ದೆ ತಿಳಿದಿದ್ದರೂ ಹಣ ಕಡಿತಗೊಳಿಸಿರುವುದು ಸರಿಯಲ್ಲ ಎಂದರು. ಸಮಾರಂಭದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಭೀಮನಹಳ್ಳಿ ಸೋಮೇಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಸಂಶೋಧಕರ ಸಂಘದ ಉಪಾಧ್ಯಕ ಎಂ.ಲೋಕೇಶ್, ಮುಖಂಡರಾದ ಪ್ರತಾಪ ರಾಜೇಂದ್ರ, ಮಹೇಶ್ ಮಾರ್ಚಹಳ್ಳಿ, ಎನ್. ಯೋಗೀಶ್, ನಾಗರಾಜು, ನರೇಂದ್ರ, ಅನಿಲ್ ಗುಡ್ಡಣ್ಣ ಹಾಜರಿದ್ದರು. ಸಾಗರ್, ರಮೇಶ್ ತಾಯೂರು, ಮತ್ತಿತರರು ಪರಿವರ್ತನೆ ಗೀತೆಗಳನ್ನು ಹಾಡಿದರು.