ರುದ್ರು ಪುನೀತ್‌ ಆರ್‌ ಸಿ ಅವರ ಅಂಕಣ ʼಆಚೀಚೆಗೆ…ʼ

“ಪ್ರತೀ ಬಂಜಾರ ತಾಂಡಾಗಳಲ್ಲೂ ರಾಮ ಕೃಷ್ಣರ ದೇವಸ್ಥಾನಗಳನ್ನು ನಿರ್ಮಿಸಬೇಕಂತೆ, ಜೊತೆಗೆ ಪ್ರತೀದಿನ ಬೆಳಿಗ್ಗೆ ಮತ್ತು ಸಾಯಂಕಾಲ ಈ ದೇವಸ್ಥಾನಗಳಲ್ಲಿ ನಡೆಯುವ ಆರತಿ ಪೂಜೆಗೆ ಪ್ರತೀ ಮನೆಯ ಸದಸ್ಯರು ತಪ್ಪದೇ ಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕಂತೆ. ಇದು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬಂಜಾರ ಮಹಾ ಕುಂಭಮೇಳದಲ್ಲಿ ತೆಗೆದುಕೊಂಡ ನಿರ್ಣಯಗಳಂತೆ”

ಸನಾತನಿಗಳ ಈ ಕುಟಿಲತನದ ಬಗ್ಗೆ ಪಾಪ ಅಶಿಕ್ಷಿತ ನಮ್ಮ ಜನರಿಗಂತು ಗೊತ್ತಾಗುವುದಿಲ್ಲ ಆದರೆ ಸದನದಲ್ಲಿ ಅಂಬೇಡ್ಕರ್ ರವರ ಮೇಲೆ ಒಂದು ತಾಸು ಭಾಷಣ ಹೊಡೆಯುವ ಷಡ್ಯಂತ್ರಿಗಳಿಗೆ ಅಂಬೇಡ್ಕರ್ ರವರು ಈ ಸನಾತನ ವೈದಿಕಶಾಹಿಗಳ ಬಗ್ಗೆ ಏನನ್ನು ಹೇಳಿದ್ದಾರೆ, ಏನು ಬರೆದಿದ್ದಾರೆ ಅನ್ನೋದು ತಿಳಿದಿಲ್ಲವೇ?.

ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಹೇಳಿದ ಕುವೆಂಪು. ಸರ್ವರಿಗೂ ಶಿಕ್ಷಣ ಸಿಗಬೇಕೆಂದು ಹೇಳಿದ ಫುಲೇ, ಶಿಕ್ಷಣವೊಂದೇ ನಮ್ಮನ್ನು ಈ ಜಾತಿವ್ಯವಸ್ಥೆ, ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಅಸಮಾನತೆ ಎನ್ನುವ ಸಂಕೋಲೆಗಳಿಂದ ಮುಕ್ತಿ ನೀಡುವುದು ಎಂದು ಹೇಳಿದ ಅಂಬೇಡ್ಕರ್ ಅಲ್ಲವೇ ನಮಗೆ ಅದರ್ಶವಾಗಬೇಕಿರುವುದು. ಸಂವಿಧಾನ ರೂಪಗೊಂಡಿರುವುದೇ ಈ ಎಲ್ಲಾ ಅಸಮಾನತೆಗಳಿಂದ ನಮ್ಮನ್ನು ವಿಮುಕ್ತರನ್ನಾಗಿಸುವುದಕ್ಕೆ. ಸಂವಿಧಾನ ಅಸ್ತಿತ್ವಕ್ಕೆ ಬರುವ ಮುನ್ನ ಈ ದೇಶದಲ್ಲಿ ಇದೇ ಕುಂಭಮೇಳ ಆಯೋಜಿಸಿರುವ ಸನಾತನವಾದಿಗಳು ಇಂದಿಗೂ ಪೂಜಿಸುವ ಮನುಸ್ಮೃತಿ ಈ ನೆಲದಲ್ಲಿ ಚಾಲ್ತಿಯಲ್ಲಿತ್ತು. ಮನುಸ್ಮೃತಿ ಈ ನೆಲದ ಮೂಲನಿವಾಸಿಗಳಾದ ಶೂದ್ರರನ್ನು, ದಲಿತರನ್ನು ದೇವಸ್ಥಾನದಿಂದ ಆಚೆ ಇಟ್ಟಿತ್ತು, ಊರಿನಿಂದ ಆಚೆ ಇಟ್ಟಿತ್ತು, ಶಿಕ್ಷಣದಿಂದ ಆಚೆ ಇಟ್ಟಿತ್ತು, ಸಾಮಾಜಿಕ ನ್ಯಾಯದಿಂದ ಆಚೆ ಇಟ್ಟಿತ್ತು. ‘ಸ್ತ್ರೀ ನ ಸ್ವಾತಂತ್ರಾಂ ಅರ್ಹತಿ’ ಎನ್ನುವ ಶ್ಲೋಕ ಸ್ವತಃ ಬ್ರಾಹ್ಮಣ ಮೇಲ್ಜಾತಿಯ ಹೆಂಗಸರುಗಳಿಗೂ ಈ ಎಲ್ಲಾ ಸ್ವಾತಂತ್ರ್ಯಗಳಿಂದ ಆಚೆ ಇಟ್ಟಿತ್ತು.

ದೇವಸ್ಥಾನಗಳು ಜಾತಿಯ ಕಾರಣಕ್ಕೆ ನಮ್ಮನ್ನು ಸಾವಿರಾರು ವರ್ಷಗಳ ಕಾಲ ಆಚೆ ಇಟ್ಟಿತ್ತು. ವೇದಗಳನ್ನ ಕೇಳಿದ್ರೆ ಕಿವಿಯಲ್ಲಿ ಕಾದ ಸೀಸವನ್ನು ಹಾಕಬೇಕು, ಮಂತ್ರಗಳು ಬಾಯಲ್ಲಿ ಬಂದ್ರೆ ನಾಲಿಗೆಯನ್ನು ಕತ್ತರಿಸಬೇಕು ಎನ್ನುವುದು ಸ್ವತಃ ಮನುಸ್ಮೃತಿಯಲ್ಲಿ ದಾಖಲಾಗಿದೆ. ಕಟ್ಟು ಕಥೆಗಳಾದ ಪುರಾಣಗಳನ್ನೇ ಗಮನಿಸಿದರೂ ಕೆಳಜಾತಿಯವನು ಬಿಲ್ವಿದ್ಯೆಯನ್ನು ಕಲಿತ ಎನ್ನುವ ಕಾರಣಕ್ಕೆ ದ್ರೋಣಾಚಾರ್ಯ ಕೆಳಜಾತಿಯವನು ವಿದ್ಯೆ ಕಲಿತರೆ ಧರ್ಮಕ್ಕೆ ಅಪಚಾರ ಎನ್ನುವ ಸಬೂಬು ಹೇಳಿ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದ್ದ. ಶೂದ್ರ ಶಂಭುಕ ತಪಸ್ಸು ಮಾಡುತ್ತಿದ್ದಾನೆ ಹರಿನಾಮ ಸ್ಮರಣೆ ಕೆಳಜಾತಿಯವನು ಬಾಯಲ್ಲಿ ಬರುತ್ತಿದೆ ಎನ್ನುವ ಕಾರಣಕ್ಕೆ ಒಬ್ಬ ಬ್ರಾಹ್ಮಣನ ಮಾತು ಕೇಳಿ ಶ್ರೀರಾಮ ಶಂಬೂಕನ ರುಂಡ ಚೆಂಡಾಡಿದ.

ಈ ಶಾಸ್ತ್ರ ಸಂಪ್ರದಾಯಗಳು, ವೇದ ಉಪನಿಷತ್ತುಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ ಗ್ರಂಥಗಳು ಇವೆಲ್ಲವೂ ಇದ್ದ ಕಾಲದಲ್ಲಿಯೇ ಈ ನೆಲದಲ್ಲಿ ಅಸಮಾನತೆ, ಶೋಷಣೆ ತಾಂಡವವಾಡುತ್ತಿತ್ತು. ಮನುಷ್ಯರನ್ನ ಪ್ರಾಣಿಗಳಂತೆ ಕಾಣುತ್ತಿದ್ದ ಕಾಲವದು, ಜಾತಿಯ ಕಾರಣಕ್ಕೆ ಆದಂತಹ ಕಗ್ಗೊಲೆಗಳು, ಅತ್ಯಾಚಾರಗಳಿಗೆ ಲೆಕ್ಕವೇ ಇಲ್ಲ. ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಹಸಿವು ಇವೆಲ್ಲದರ ಜೊತೆಗೆ ಅಸ್ಪೃಶ್ಯತೆಯೂ ಅಂಟಿಕೊಂಡಿತ್ತು. ಆಗ ಯಾವ ರಾಮ ಕೃಷ್ಣ ತಿರುಪತಿ ಮಂಜುನಾಥ ವಿಷ್ಣು ಯಾವ ದೇವರುಗಳು ನಮ್ಮನ್ನು ಕಾಪಾಡಲಿಲ್ಲ. ಗಂಡ ಸತ್ತರೆ ಹೆಂಡತಿಯನ್ನು ಚಿತೆಗೆ ತಳ್ಳುವ ಕೆಟ್ಟ ನಿಯಮವನ್ನು ಕೂಡ ಜಾರಿಗೊಳಿಸಿದ್ದು ಇದೇ ಸನಾತನಿಗಳ ಮನುಸ್ಮೃತಿ. ಆಗ ಇದ್ದಂತಹ ಗುರುಕುಲಗಳಲ್ಲಿ ಸವರ್ಣೀಯರನ್ನು ಹೊರತುಪಡಿಸಿ ಯಾರಿಗೂ ಶಿಕ್ಷಣ ಪಡೆಯುವ ಹಕ್ಕಿರಲಿಲ್ಲ.

ಬುದ್ದ, ಬಸವಣ್ಣ, ಫುಲೆ, ನಾಲ್ವಡಿ, ಶಾಹು, ಅಂಬೇಡ್ಕರ್ ಇವರೆಲ್ಲರ ಹೋರಾಟದ ಫಲವಾಗಿ ನಮಗೆ ಶಿಕ್ಷಣ, ಭೂಮಿ, ಉದ್ಯೋಗ, ಮತ್ತು ಸಾಮಾಜಿಕ ನ್ಯಾಯ ದೊರೆತಿದೆ. ಸಂವಿಧಾನ ಬಂದಮೇಲೆಯೇ ನಾವುಗಳು ಪರಿಪೂರ್ಣ ಶಿಕ್ಷಣವನ್ನು ಮತ್ತು ಸಮಾನತೆಯನ್ನು ಅನುಭವಿಸುತ್ತಿರುವುದು. ಆದರೂ ಸಂವಿಧಾನ ವಿರೋಧಿಗಳು, ಮನುವಾದಿಗಳು ಸಂವಿಧಾನ ಜಾರಿಯಾದಾಗಿನಿಂದಲೂ ನಮ್ಮನ್ನು ಮತ್ತೆ ಗುಲಾಮರನ್ನಾಗಿಸುವುದಕ್ಕೆ, ಶಿಕ್ಷಣದಿಂದ ವಂಚಿಸುವುದಕ್ಕೆ, ಉದ್ಯೋಗದಿಂದ ದೂರ ಇಡುವುದಕ್ಕೆ, ಸಮಾನತೆಯನ್ನು ಕಿತ್ತುಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದಾರೆ. ಅದರ ಭಾಗವೇ ಧರ್ಮದ ನಶೆಯನ್ನು ಯುವಜನತೆಯಲ್ಲಿ ಇಂಟಾಕ್ಸಿಕೇಟ್ ಮಾಡುತ್ತಿರುವುದು. ಮುಸ್ಲಿಂ, ಕ್ರೈಸ್ತ, ಬೌದ್ಧರನ್ನು ತೋರಿಸಿ ಇವರೇ ನಮ್ಮ ಧರ್ಮ ವಿರೋಧಿಗಳು ಎನ್ನುವಂತೆ ಬಿಂಬಿಸಿ ನಮ್ಮನ್ನು ಮಂತ್ರಮುಗ್ದರನ್ನಾಗಿಸಿ, ನಮ್ಮನ್ನು ಮೌಢ್ಯದಲ್ಲಿ ಕಟ್ಟಿಹಾಕಿ ನಮ್ಮಿಂದಲೇ ನಮ್ಮ ಸಂವಿಧಾನವನ್ನು ನಾಶಗೊಳಿಸುವ ಕುತಂತ್ರವನ್ನು ರೂಪಿಸುತ್ತಿದ್ದಾರೆ..

ಕುಂಭಮೇಳ ನಿರ್ಣಯದ ಹ್ಯಾಂಡ್‌ ಬಿಲ್

ಅದರ ಭಾಗವೇ ಈ ರೀತಿಯ ಕುಂಭಮೇಳಗಳನ್ನು, ಸಮಾವೇಶಗಳನ್ನು ಏರ್ಪಡಿಸಿ, ತಳಸಮುದಾಯಗಳನ್ನು ಹೈಜಾಕ್ ಮಾಡಿ, ಆ ಸಮುದಾಯದ ಅವಕಾಶವಾದಿಗಳನ್ನು ಬಳಸಿಕೊಂಡು ಅವರ ಮೂಲಕ ಯುವಜನರನ್ನು ಸೆಳೆದು, ನಾವು ಧರ್ಮ ರಕ್ಷಣೆ ಮಾಡೋಣ, ನಮ್ಮ ಧರ್ಮ ಅಪಾಯದಲ್ಲಿದೆ, ನಮ್ಮನ್ನು ಕಾಪಾಡುವುದು ಮೋದಿ ಮಾತ್ರ, ಎನ್ನುವ ಸುಳ್ಳುಗಳನ್ನು ನಮ್ಮ ತಲೆಗೆ ತುಂಬಿ ನಮ್ಮ ಮೂಲಕವೇ ಬಾಬಾ ಸಾಹೇಬರ ಆಶಯಗಳನ್ನು ಕೊಲ್ಲುವ ಹುನ್ನಾರವಿದು..

ಇವರಿಗೆ ನಿಜಕ್ಕೂ ನಮ್ಮ ಸಮುದಾಯದ ಮೇಲೆ ಕಾಳಜಿ ಇದ್ದಿದ್ದರೆ: 1. ಶಿಕ್ಷಣದ ಬಗ್ಗೆ, 2. ಸರ್ಕಾರಿ ಶಾಲೆಗಳ ಉನ್ನತೀಕರಣದ ಬಗ್ಗೆ, 3. ಬಂಜಾರರು ಎದುರಿಸುತ್ತಿರುವ ಗುಳೆ/ವಲಸೆ ಸಮಸ್ಯೆಯ ಬಗ್ಗೆ, 4. ನಿರುದ್ಯೋಗ ಸಮಸ್ಯೆಯ ಬಗ್ಗೆ, 5. ಅಪೌಷ್ಟಿಕತೆಯ ಬಗ್ಗೆ, 6. ಹಸಿವಿನಿಂದ ಸಾಯುತ್ತಿರುವವರ ಬಗ್ಗೆ, 7. ಅತ್ಯಾಚಾರಗಳನ್ನು ತಡೆಗಟ್ಟುವ ಬಗ್ಗೆ, 8. ವಲಸೆ ಕಾರ್ಮಿಕರ ಸಂರಕ್ಷಣೆಯ ಬಗ್ಗೆ, 9. ಒಳ್ಳೆಯ ಸುಸಜ್ಜಿತ ಅರೋಗ್ಯ ಕೇಂದ್ರದ ಸ್ಥಾಪನೆಯ ಬಗ್ಗೆ, 10. ಗುಣಮಟ್ಟದ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಬಗ್ಗೆ. 11. ಸ್ಪರ್ಧಾತ್ಮಕ ತಯಾರಿಗೆ ವಿದ್ಯಾರ್ಥಿಗಳನ್ನು ತಯಾರಿಸುವ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಇದ್ಯಾವುದೂ ಸನಾತನಿಗಳಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಗುಡಿ ಗುಂಡಾರಗಳು, ಜನರನ್ನು ಮತ್ತೆ ಮೌಢ್ಯಕ್ಕೆ ತಳ್ಳಬೇಕು, ಶಿಕ್ಷಣ ಉದ್ಯೋಗದಿಂದ ವಂಚಿತರನ್ನಾಗಿಸಬೇಕು, ಮತ್ತೆ ಶೂದ್ರ ದಲಿತರನ್ನು ಗುಲಾಮರನ್ನಾಗಿಸಬೇಕು, ಮನುಸ್ಮೃತಿ ಮತ್ತೆ ಮರುಕಳಿಸಬೇಕು ಇದೇ ಇವರ ಮುಖ್ಯ ಉದ್ದೇಶವಾಗಿದೆ.

ಅದೇ ಕುಂಭಮೇಳದಲ್ಲಿ ನಮ್ಮ ಇನ್ನೊಬ್ಬ ನಾಯಕರು ಮಾತಾಡ್ತಾ ಈ ದೇಶವನ್ನ ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಆವೇಶಭರಿತವಾಗಿ ಹೇಳಿದ್ದಾರೆ. ರೀ ಸಚಿವರೇ ಹಿಂದೂ ರಾಷ್ಟ್ರ ಆಮೇಲೆ ಮಾಡುವಿರಂತೆ ಮೊದಲು ನಮಗೆ ಉದ್ಯೋಗ ಕೊಟ್ಟು ಅತೀ ಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಿಂದ ಹೊರತನ್ನಿ, ಹಸಿವಿನಿಂದ ಬಳಲುತ್ತಿರುವ ರಾಷ್ಟ್ರಗಳ ಪಟ್ಟಿಯಿಂದ ಹೊರತನ್ನಿ, ಅಸಹಿಷ್ಣುತೆಯ ರಾಷ್ಟ್ರಗಳ ಪಟ್ಟಿಯಿಂದ ಹೊರತನ್ನಿ, ನಮ್ಮ ದೇಶವನ್ನು ಕೋಮುವಾದದಿಂದ ಹೊರತನ್ನಿ, ಜಾಗತೀಕವಾಗಿ ಭಾರತ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯಿಂದ ಹೊರತನ್ನಿ, GDP ಸಮಸ್ಯೆಯಿಂದ ಹೊರತನ್ನಿ, Inflation ನಿಂದ ಹೊರತನ್ನಿ, ಡಾಲರ್ ಮುಂದೆ ರೂಪಾಯಿ ಮೌಲ್ಯದ ಕುಸಿತದಿಂದ ಹೊರತನ್ನಿ, ಪೆಟ್ರೋಲ್ ಡೀಸೆಲ್ ಭರಿಸಕ್ಕಾಗದೆ ಜನ ಸಾಯುವುದರಿಂದ ಹೊರತನ್ನಿ, ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿರುವುದರಿಂದ ಹೊರತನ್ನಿ.

ನಾಚಿಕೆ ಆಗಬೇಕು ನಿಮಗೆ ನಿಮ್ಮ ಸ್ವಾರ್ಥಕ್ಕೆ ಯುವಜನರ ತಲೆಯಲ್ಲಿ ಕೋಮುವಾದ, ಧರ್ಮದ ನಶೆ ತುಂಬಿಸಿ ಅವರನ್ನು ದಿಕ್ಕುತಪ್ಪಿಸುತ್ತಿರುವುದಕ್ಕೆ.. ನಿಮ್ಮ ಈ ಕುತಂತ್ರಗಳು ಹೆಚ್ಚು ದಿನ ನಡೆಯುವುದಿಲ್ಲ, ಅದೇ ಜನರಿಗೆ ನಿಮ್ಮ ಕುಟಿಲತನ ಗೊತ್ತಾಗಿ ನಿಮ್ಮ ವಿರುದ್ಧವೇ ತಿರುಗಿಬೀಳುವ ದಿನಗಳು ದೂರವಿಲ್ಲ..

‘ಬ್ರಾಹ್ಮಣರಿಗೆ ದಾನ, ದೇವಸ್ಥಾನಕ್ಕೆ ಅನುದಾನ, ಮನುವಾದಿಗಳಿಗೆ ಮತದಾನ ಮಾಡುವುದನ್ನು ಯಾವತ್ತು ನಿಲ್ಲಿಸುತ್ತೇವೆಯೋ ಅವತ್ತು ನಮ್ಮ ಅಭಿವೃದ್ಧಿಯ ಬಾಗಿಲು ತೆರೆಯುತ್ತದೆ’ ಎಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಅರ್ಥವಾಗುತ್ತದೆ.

ರುದ್ರು ಪುನೀತ್ .ಆರ್.ಸಿ
ಸ್ವಾಭಿಮಾನಿ ಬಂಜಾರ, ಸ್ವಾರ್ಥಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳುವ ಗುಲಾಮನಲ್ಲ.

Leave a Reply

Your email address will not be published. Required fields are marked *