ಅಪಪ್ರಚಾರ! ಇದೊಂದು ಥರದ ಕಾಯಿಲೆ!

ಕೆಲವರಿರ್ತಾರೆ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮೊಬೈಲ್‌ನಲ್ಲೋ, ಆಫೀಸ್‌ನಲ್ಲೋ ಏನೋ ತೊಂದರೆಯಾಗುತ್ತೆ ಅಥವಾ ಅವರಿಗೆ ತಿಳಿದಿರದ ಯಾವುದೋ ವಿಷಯದಲ್ಲಿ! ಸುತ್ತಮುತ್ತಲವರ ಮೇಲೆಲ್ಲಾ ಅನುಮಾನ ಪಡಲು ಶುರುಮಾಡುತ್ತಾರೆ, ಬೆನ್ನ ಹಿಂದೆ ಅವರ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಇದಕ್ಕೆ ಕಾರಣ, ಬಹುಪಾಲು ಋಣಾತ್ಮಕ ಮನೋಭಾವವೇ ಆಗಿರುತ್ತದೆ ಇಲ್ಲವೇ ಸಂದರ್ಭವನ್ನು ಬಳಸಿಕೊಂಡು ಒಬ್ಬರ ಇಮೇಜ್ ಅನ್ನು ಹಾಳುಮಾಡುವ ಉದ್ದೇಶವಿರುವುದು.

ಇಂಥವರು ಪ್ರಶ್ನೆ ಕೇಳಿ ಅನುಮಾನ, ಗೊಂದಲ ಪರಿಹರಿಸಿಕೊಳ್ಳುತ್ತಾರಾ? ಇಲ್ಲ! ಹೋಗಲಿ ತಾವೇ ಸಂಶೋಧಿಸಿ ಸಮಸ್ಯೆಯ ಕಾರಣ ಕಂಡು ಹಿಡಿಯುತ್ತಾರಾ? ಇಲ್ಲ! ಸಾಮಾನ್ಯವಾಗಿ ಆ ಸಾಮರ್ಥ್ಯ ಅವರಿಗಿರುವುದಿಲ್ಲ, ಇದ್ದರೂ ಅವರ ಋಣಾತ್ಮಕ ಮನೋಭಾವ ಪರಿಹಾರ ಕಂಡುಕೊಳ್ಳಲು ಬಿಡುವುದಿಲ್ಲ.

ಅವರ ಅನುಮಾನ, ದುರಭಿಪ್ರಾಯಗಳಿಗೆ ಅನುಭವದ ಕೊರತೆ, ಅಜ್ಞಾನ ಕಾರಣವಾಗಿರುತ್ತದೆ, (ತಂತ್ರಜ್ಞಾನದ ಆಳ ಅಗಲ, ಅದರ ತಲೆನೋವು ಯಾವ ಮಟ್ಟಕ್ಕಿರುತ್ತೆ ಎಂಬುದನ್ನ ಇಂಥವರಿಗೆ ಅರ್ಥ ಮಾಡಿಸಲು ಒಂದೆರಡು ದಿನ IT ಕಂಪನಿಗಳ ತಂತ್ರಜ್ಞಾನದ ವಾತಾವರಣದಲ್ಲಿ ಕೂಡಿಸಬೇಕು, ಒಂದಷ್ಟು ಟಾಸ್ಕ್ ಗಳ ಪೂರೈಸಲು ಕೊಡಬೇಕು.) ಮತ್ತು ಬಹುಮುಖ್ಯವಾಗಿ ಯಾರನ್ನೂ ನಂಬದಂಥ ಮನಸ್ಥಿತಿ ಕಾರಣವಾಗಿರುತ್ತದೆ! ಜೊತೆಗೆ ಕೀಳರಿಮೆ ಸೇರಿಕೊಂಡರಂತೂ ವಾತಾವರಣವನ್ನು ತಮ್ಮ ಋಣಾತ್ಮಕ ನಡೆನುಡಿಗಳಿಂದ ಹೊಲಸೆಬ್ಬಿಸುತ್ತಾರೆ, ಕೀಳರಿಮೆ ಭಾವವ ನಿರ್ವಹಿಸ ಬಾರದವರು! ಇಂಥ ಋಣಾತ್ಮಕ ಮನೋಭಾವದಿಂದ ಸುತ್ತಲವರಿಗೆ ಉಸಿರುಗಟ್ಟಿಸುತ್ತಿರುತ್ತಾರೆ ಎಂಬ ಅರಿವು ಅವರಿಗಿರುವುದಿಲ್ಲ.

ಸಾಂದರ್ಭಿಕ ಚಿತ್ರ

ಪ್ರಶ್ನೆ ಮಾಡುವುದರಲ್ಲೂ ವಿಧಗಳಿವೆ, ಉದ್ದೇಶಗಳಿವೆ:

  1. ತಪ್ಪು ತಿಳುವಳಿಕೆಗಳನ್ನ ತಪ್ಪಿಸಲು, ಗೊಂದಲ ಪರಿಹರಿಸಿಕೊಳ್ಳಲು
  1. ಬೇಕಂತ ನೋಯಿಸಲು
    ಇವು ಕೆಲ ಉದಾಹರಣೆಗಳು!

ಪ್ರಶ್ನಿಸುವುದು ಯಾವಾಗಲೂ ತಪ್ಪಲ್ಲ, ಕೆಲವೊಮ್ಮೆ ಪ್ರಶ್ನಿಸಿದಾಗ ಖುಷಿಪಡಬೇಕು, ಪ್ರಶ್ನಿಸಿದವರ ಆಸ್ಥೆಗೆ, ಆಸಕ್ತಿಗೆ,
ನಮ್ಮನ್ನು ಅನುಮಾನಿಸುವ ಬದಲು, ನಮ್ಮನ್ನು ಅರಿಯಲು ಆಯ್ಕೆ ಮಾಡುತ್ತಿರುವರೆಂದು! ಮತ್ತು ಪ್ರಶ್ನೆ ಕೇಳಿದರೆ, ಎಲ್ಲಿ ನಮ್ಮ ಲೆವೆಲ್ ಕಡಿಮೆಯಾಗುವುದೋ, ದಡ್ಡರಾಗಿ ಕಾಣುವೆವೋ ಎಂಬ ಭಾವನೆ ಹಲವರಲ್ಲಿದೆ. ಎಲ್ಲಾ ತಿಳಿದವರು ಇಲ್ಯಾರೂ ಇಲ್ಲ ಎಂಬುದು ಕಾಮನ್ ಸೆನ್ಸ್!

ಸಾಮಾನ್ಯವಾಗಿ ದುರುದ್ದೇಶ ಉಳ್ಳವರೇ, ತಪ್ಪಿತಸ್ಥ ಮನೋಭಾವದವರೇ, ಪ್ರಶ್ನಿಸಿದಾಗ ಹೆಚ್ಚು ಕೋಪಗೊಳ್ಳುವುದು, ಕಿರಿಕಿರಿಯಾಗುವುದು! ಕಿರಿಕಿರಿ ಮಾಡಲೆಂದೇ ಪ್ರಶ್ನಿಸುವವರ ಬಗ್ಗೆ ಕಿರಿಕಿರಿಯಾಗುವುದು ಬೇರೆ! ಕೊಂಚ ತಾಳ್ಮೆ, ಸ್ವಲ್ಪ ವಿವೇಚನೆ ಎಲ್ಲರ ಸಮಯ, ನೆಮ್ಮದಿ ಉಳಿಸುತ್ತದೆ.

ಉಸಿರಿರುವವರೆಗೂ ಕಲಿಯುವುದಿರುತ್ತೆ! ಕಲಿಯಬೇಕಾದಾಗೆಲ್ಲ ಪ್ರಶ್ನಿಸಬೇಕಾಗುತ್ತೆ, ಪ್ರಯತ್ನಿಸಬೇಕಾಗುತ್ತೆ ಎಂಬುದು ಸಾಮಾನ್ಯ ಜ್ಞಾನವಷ್ಟೇ! ಅನುಮಾನ ಪಡುವ ಮೊದಲು, ತಪ್ಪು ತಿಳಿಯುವ ಬದಲು, ಅನುಮಾನವಿರುವ ವಿಷಯಗಳನ್ನು ಸ್ವತಃ ಪ್ರಯತ್ನಿಸುವುದೊಳಿತು, ಆಗ ಇನ್ನೊಬ್ಬರ ಮೇಲೆ ಅನಗತ್ಯ ಆಪಾದನೆ ಮಾಡುವುದನ್ನು, ಅದರಿಂದ ಸಂಬಂಧ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಬಹುದು, ಆಪಾದನೆ ಹೊರಿಸುವುದು, ಕಿರಿಕಿರಿ ಮಾಡುವುದೇ ಉದ್ದೇಶವಾಗಿದ್ದರೆ, ಅದನ್ನು ಬೇರೆಯದೇ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ತಮ್ಮ ಮೇಲರಿಮೆ ಸಾಧಿಸಲು ಮತ್ತೊಬ್ಬರನ್ನು ಕೀಳು ಮಾಡುವವರಿದ್ದರೆ, ಅವರನ್ನು ವಿಶೇಷವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.

~ ರೇಖಾ ಹೊಸಹಳ್ಳಿ

ವಿಶ್ವದ ಟಾಪ್ ಟೆನ್ ಐಟಿ ಕಂಪನಿಗಳಲ್ಲೊಂದರಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ, ಅನುವಾದ, ಬರಹಗಳಲ್ಲೂ ತೊಡಗಿಸಿಕೊಂಡಿದ್ದು, ಪ್ರಸ್ತುತ ಕಮ್ಯುನಿಟಿ ಕ್ವಾಲಿಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ರೇಖಾ ಹೊಸಹಳ್ಳಿಯವರಿಗೆ ತಂತ್ರಜ್ಞಾನ, ಅಡುಗೆ, ಸಾಹಿತ್ಯ, ರಾಜಕೀಯ, ಕಲೆ, ವಾಣಿಜ್ಯ, ಆಧ್ಯಾತ್ಮ ಆಸಕ್ತಿಯ, ಅನ್ವೇಷಣೆಯ ಕ್ಷೇತ್ರಗಳಾಗಿವೆ.

ವಿವಿಧ ಕ್ಷೇತ್ರಗಳಲ್ಲಿನ ತಮ್ಮ ಪಯಣದಲ್ಲಿ ಹೆಚ್ಚಾಗಿ ಸ್ವಂತ ಅನ್ವೇಷಣೆಯ ಮೂಲಕವೇ ಕಲಿಕೆ, ಅನುಭವಗಳನ್ನು ಪಡೆದುಕೊಂಡ ಅವರಿಗೆ ತಂತ್ರಜ್ಞಾನ, ಪ್ರಕ್ರಿಯೆಗಳಲ್ಲಿನ ತೊಡಕು, ಸವಾಲುಗಳ ಅರಿವಿದೆ, ವಿವಿಧ ಮನೋಭಾವದ ಜನರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ರೇಖಾ ಹೊಸಹಳ್ಳಿ ಅವರು ಬಿಗ್‌ ಕನ್ನಡಕ್ಕಾಗಿ ʼರೇಖಾ ಚಿತ್ರʼ ಎಂಬ ಅಂಕಣದ ಮೂಲಕ ಓದುಗರಿಗೆ ಮುಖಾಮುಖಿಯಾಗಲಿದ್ದಾರೆ. ಪ್ರಸ್ತುತ ಲೇಖನದಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಅವರಿಗೆ ಹೊಸದಲ್ಲದಿದ್ದರೂ ಮುಗ್ಧ, ಶುದ್ಧ ಮನಸಿನ ಗೆಳತಿಯೊಬ್ಬರಿಗೆ ಒಂದಿಲ್ಲೊಂದು ತಗಾದೆ ತೆಗೆಯುವ ವ್ಯಕ್ತಿಯೊಬ್ಬ ಮಾಡಿದ ಕಿತಾಪತಿ ಈ ಬಗ್ಗೆ ವಿಸ್ತರಿಸಿ ಬರೆಯಲು ಪ್ರೇರೇಪಿಸಿತು.

Leave a Reply

Your email address will not be published. Required fields are marked *