ಅಕ್ಟೋಬರ್ 14 ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧಮ್ಮ ಸ್ವೀಕರಿಸಿದ ಸವಿ ನೆನಪಿನಲ್ಲಿ ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಬೌದ್ಧ ಧಮ್ಮ ಸ್ವೀಕಾರದ ಸಂಭ್ರಮಗಳೂ ನಡೆಯುತ್ತವೆ. ಭಾರತದಲ್ಲಿ ಮತ್ತೆ ಬೌದ್ಧ ಧಮ್ಮದ ಪ್ರಭಾವ ಪ್ರಾರಂಭವಾಯಿತು ಎನ್ನುವಂತಹ ಕ್ರಾಂತಿಕಾರಕ ವಾತಾವರಣವೇ ಸೃಷ್ಟಿಯಾಗುತ್ತದೆ. ಈ ವರ್ಷ ಕರ್ನಾಟಕದ ಗುಲ್ಬರ್ಗದಲ್ಲಿ ಸುಮಾರು ಹತ್ತು ಸಾವಿರ ಮಂದಿ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧಮ್ಮಕ್ಕೆ ಮರಳಿದ್ದು ಇತಿಹಾಸವಾಯಿತು. ಬೆಂಗಳೂರಿನಲ್ಲೂ ನೂರಾರು ಜನ ಹಿಂದೂ ಧರ್ಮ‌ ತೊರೆದು, ಬಾಡಿಗೆ ಮನೆ ಬಿಟ್ಟು ಸ್ವಂತ ಮನೆಗೆ ಮರಳಿದಂತೆ ಬೌದ್ಧ ಧಮ್ಮಕ್ಕೆ ಮರಳಿದರು. ಹೆಜ್ಜೆ ಹೆಜ್ಜೆಗೂ ಜೈ ಭೀಮ್ ಘೋಷಣೆಗಳು, ನಮೋ ಬುದ್ಧಾಯ ಎನ್ನುವ ಪರಸ್ಪರ ಶುಭಾಶಯಗಳ ವಿನಿಮಯಗಳೂ ಕಂಡು ಬರುತ್ತಿದ್ದವು. ಇದನ್ನು ಕಂಡಾಗ ಬೌದ್ಧ ಧಮ್ಮವು ಭಾರತದಲ್ಲಿ ಮತ್ತೆ ತನ್ನ ಘತವೈಭವವನ್ನು ಮರುಕಳಿಸಿಬಿಟ್ಟಿತೇ ಎನ್ನಿಸಿದರೂ ಆಶ್ಚರ್ಯವಿಲ್ಲ.

ಭಾರತದಲ್ಲಿ ಬೌದ್ಧ ಧಮ್ಮದ ಹೊಸಗಾಳಿ ಶುರುವಾಯಿತೇ?

ನಾವು ಮನಸ್ಸು ಮಾಡಿದರೇ ಮತ್ತೆ ಆ ಜೀವ ಜಲದ ಸಾಗರವನ್ನು ಸ್ಥಾಪಿಸಬಹುದೇ? ಬೌದ್ಧ ಧಮ್ಮ ಮತ್ತೆ ಭಾರತದ ಶಿಖರ ಪ್ರಾಯವಾಗಬಹುದೇ ಎನ್ನುವ ಆಶಾಭಾವನೆಯು ಸಹಜವಾಗಿ ಮೂಡುತ್ತದೆ. ಆದರೇ, ಇದು ಸಾಧ್ಯವೇ? ಈ ಸಂಭ್ರಮ ಇನ್ನೆಷ್ಟು ದಿನ? ಭಾರತದಲ್ಲಿ ಕೋಮುವಾದಿ ರಾಜಕಾರಣಕ್ಕೆ ಸಿಕ್ಕಿರುವ ರಾಜಾಶ್ರಯವು ನಮ್ಮ ಆಶಾಭಾವನೆಯನ್ನು ಚಿವುಟದೆ ಬಿಟ್ಟೀತೆ? ಕಾಯುವವನೇ ಕೊಲ್ಲಲು ನಿಂತರೇ ಕಾಯುವವನಾರು? ಸ್ವತಃ ಆಡಳಿತಗಾರರೇ ಕೊಲ್ಲುವ, ಕಡಿಯುವ, ಪ್ರತಿಕಾರದ ಮಾತುಗಳನ್ನು ಬೀದಿ ಬೀದಿಯಲ್ಲಿ ಆಡುತ್ತಿರುವಾಗ, ತನ್ನ ರಾಜಕೀಯ ವೈರಿಗಳನ್ನೂ, ಧಾರ್ಮಿಕ ನಂಬಿಕೆಯ ವಿರೋಧಿಗಳನ್ನೂ ಕೊಲ್ಲುವುದೇ ಧರ್ಮ‌ ಎಂದು ನಂಬಿರುವ ಖೂಳತನವೇ ರಾಜದಂಡ ಹಿಡಿದಿರುವ ಈ ದೇಶದಲ್ಲಿ, ಇನ್ನಾವ ಭರವಸೆ ಉಳಿದಿದೆ ಎಂಬ ಪ್ರಶ್ನೆ ಧುತ್ತನೆ ಎದುರು ಬಂದು ವಕ್ಕರಿಸದೆ ಇರಲಾರದು. ಈ ಆತಂಕಭರಿತವಾದ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕೆಂದರೇ ನಾವು ಮತ್ತೆ ಬೌದ್ಧ ಧಮ್ಮದ ಹುಟ್ಟು ಮತ್ತು ಬೆಳವಣಿಗೆಯ ಇತಿಹಾಸವನ್ನು ಕೆದಕಬೇಕಾಗುತ್ತದೆ.

ನೀನಾ ಇತಿಹಾಸ? 2ನೇ ಭಾಗವನ್ನೂ ಓದಿ: ಔರಂಗಜೇಬ್ & Read Between The Line’s

ಬುದ್ಧ ಧಮ್ಮ

ಒಂದು ಕಾಲದಲ್ಲಿ ಭಾರತದ ಆತ್ಮವಾಗಿ ಕಂಗೊಳಿಸಿದ್ದ ಬೌದ್ಧ ಧಮ್ಮವು ಇಂದು ಭಾರತದಲ್ಲಿ ಏನಾಗಿದೆ? ಇದಕ್ಕೆ ಕಾರಣಗಳು ಮತ್ತು ಪರಿಹಾರಗಳೇನು ಎಂಬುದನ್ನು ನಾವಿಲ್ಲಿ ಅತ್ಯಂತ ಪ್ರಜ್ಞಾ ಪೂರ್ವಕವಾಗಿ ಮತ್ತು ಜಾಗ್ರತೆಯಾಗಿ ಹಾಗು ಸೂಕ್ಷ್ಮ ಚಿಕಿತ್ಸಕ ಬುದ್ಧಿಯಿಂದ ನೋಡಬೇಕಾಗುತ್ತದೆ. ಮತ್ತು ಪದೇ ಪದೇ ಓರೆಗೆ ಹಚ್ಚಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಒಂದು ಧರ್ಮಕ್ಕೆ ರಾಜಾಶ್ರಯವಿದ್ದಾಗ ಏನಾಗುತ್ತದೆ. ಅಥವಾ ರಾಜಾಶ್ರಯವು ತಪ್ಪಿ ಹೋದಾಗ ಯಾವ ಅವನಗತಿಗೆ ಸಾಗುತ್ತದೆ ಎಂದು ನಾನಿಲ್ಲಿ ಚರ್ಚಿಸಲು ಪ್ರಯತ್ನ ಪಟ್ಟಿದ್ದೇನೆ. ಬಿಗ್ ಕನ್ನಡ ಸುದ್ದಿ ಸಂಸ್ಥೆಗೆ ನಾನು ಬರೆಯುತ್ತಿರುವ “ನೀನಾ ಇತಿಹಾಸ” ಎಂಬ ನನ್ನ ಅಂಕಣದ ಸರಮಾಲೆಯಲ್ಲಿ “ಬೌದ್ಧ ಧಮ್ಮಕ್ಕೆ ಬೇಕು ರಾಜಾಶ್ರಯ” ಎನ್ನುವ ವಾದವನ್ನಿಟ್ಟುಕೊಂಡು, ಹಲವು ಕಂತುಗಳಲ್ಲಿ ಈ ಲೇಖನ ಬರೆಯುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ. ಆರೋಗ್ಯಕರ ಚರ್ಚೆಗಳಿಗೆ ಸದಾ ಸ್ವಾಗತ.

***

ಜಗತ್ತಿನ‌ಲೇ ಅತ್ಯಂತ ಜೀವಪರವಾದ ಧರ್ಮಗಳಲ್ಲಿ ಬುದ್ಧನ ಧಮ್ಮವು ಪ್ರಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಭಾರತದ ಘನತೆಗೆ ಸಾಕ್ಷಿಯಾಗಿ, ಭಾರತದ ತಾಯಿ ಹೃದಯದ ಅಂತಃಕರಣಕ್ಕೆ ಕನ್ನಡಿ ಹಿಡಿದಂತೆ, ಭಾರತಕ್ಕೆ ಅನ್ನ ನೀರಿಗಾಗಿ ವಲಸೆ ಬಂದವರೆಲ್ಲರನ್ನೂ ಕೈ ಹಿಡಿದು ಸಲಹುವ ಕರುಣಾಮಯಿಯಾದ ಭಾರತದ ನೆಲದ ಗುಣಕ್ಕೆ ಕಲಶ ಪ್ರಾಯವಾಗಿ ಜಗತ್ತಿಗೆ ಮಾದರಿಯಾಗಿದ್ದದ್ದು ಭಾರತದ ಬೌದ್ಧ ಧಮ್ಮ. ಅಂತಹ ಜೀವಪರವಾದ ಧಮ್ಮವನ್ನು ಭಾರತದಲ್ಲಿ ಇನ್ನಿಲ್ಲದಂತ ಚಿತ್ರಹಿಂಸೆಗೆ ಒಳಪಡಿಸಿ ಭಾರತದಿಂದ ಓಡಿಸಿದ ಅಪಕೀರ್ತಿ ಮಾತ್ರ ಭಾರತಕ್ಕೆ ವಕ್ಕರಿಸಿದ ಜೀವವಿರೋಧಿ ಬ್ರಾಹ್ಮಣ್ಯಕ್ಕೇ ಸಲ್ಲಬೇಕು.

ಶಂಕರಾಚಾರ್ಯನ ಕಾಲದಲ್ಲಿ ಒಬ್ಬ ಬಿಕ್ಕುವಿನ ತಲೆ ಕಡಿದು ತಂದರೆ, ಇಂತಿಷ್ಟು ಚಿನ್ನದ ವರಹಗಳನ್ನು ಬಹುಮಾನವಾಗಿ ನೀಡಲಾಗುವುದು ಎನ್ನುವಷ್ಟರ ಮಟ್ಟಿಗೆ ವೈದಿಕರು, ಬೌದ್ಧ ಧಮ್ಮದ ವಿರುದ್ಧ ಶಡ್ಯಂತ್ರ ರೂಪಿಸಿದ್ದರು ಮತ್ತು ಬೌದ್ಧ ಧಮ್ಮದ ಅಸಹಿಷ್ಣುಗಳಾಗಿದ್ದರು, ಎಂಬುದನ್ನು ಇತಿಹಾಸದ ದಾಖಲೆಗಳನ್ನು ತೆಗೆದು ನೋಡಿದಾಗ ಕಂಡು ಬರುವ ಕಟು ಸತ್ಯವಾಗಿದೆ. ವಲಸಿಗ ಆರ್ಯರು ಭಾರತದ ಬಹುಸಂಖ್ಯಾತ ಮೂಲ ನಿವಾಸಿಗಳ ಬೌದ್ಧ ಧಮ್ಮದ ಮೇಲೆ ಇಷ್ಟು ಹಗೆತನ‌ ಸಾಧಿಸಿ ಗೆಲುವು ಸಾಧಿಸುವಲ್ಲಿಯೂ ಯಶಸ್ಸಾಗಿದ್ದು ಹೇಗೆ ಮತ್ತು ಇದಕ್ಕೆ ಕಾರಣವೇನು ಅನ್ನೋದನ್ನು ಮುಂದೆ ನೋಡೋಣ.

ಸಾಮ್ರಾಟ್ ಅಶೋಕ ಜಗತ್ತಿನ ಅತ್ಯಂತ ಪ್ರಸಿದ್ಧ ಚಕ್ರವರ್ತಿಗಳಲ್ಲಿ ಒಬ್ಬ. ಕ್ರಿ.ಪೂ 273ರಿಂದ ಕ್ರಿ.ಪೂ 232ರವರೆಗಿನ ಸಾಮ್ರಾಟ್ ಅಶೋಕನ ಆಡಳಿತವು ಭಾರತದ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದ ಸಾಮ್ರಾಟ್ ಅಶೋಕನ ಭಾರತದಲ್ಲಿ ಬೌದ್ಧ ಧಮ್ಮವು ಅತ್ಯಂತ ಉತ್ತುಂಗದಲ್ಲಿತ್ತು. ಭಾರತದ ಮೂಲೆ ಮೂಲೆಗೂ ಬೌದ್ಧ ಧಮ್ಮ ಪ್ರಚಾರಕರನ್ನು ಕಳಿಸಿ, ಭಾರತವು ಬೌದ್ಧ ಧಮ್ಮದಿಂದ ಕಂಗೊಳಿಸುವಂತೆ ಮಾಡಿದ್ದನು. ಅಶೋಕನ ಕಾಲದಲ್ಲಿ ಬೌದ್ಧ ಧಮ್ಮ ಪ್ರಚಾರಕರಾಗಿ ಕರ್ನಾಟಕಕ್ಕೆ ಬಂದಿದ್ದ ಹಲವು ಬೌದ್ಧ ಬಿಕ್ಕುಗಳು, ಧಮ್ಮ ಪ್ರಚಾರಕರು ವಲಸಿಗರಾದ ಆರ್ಯ ಇತಿಹಾಸ ಚೋರರ ಕೈಗೆ ಸಿಕ್ಕರು. ಕೆಲವರು ದೇವತೆಗಳಿಂದ ಹತರಾದ ರಾಕ್ಷಸರ ಹಣೆಪಟ್ಟಿ ಹೊತ್ತು ವಿಲನ್‌ಗಳಾಗಿ ಹೋದರು. ಮತ್ತೆ ಕೆಲವರನ್ನು ಅರಗಿಸಿಕೊಳ್ಳಲೂ ಆಗದೇ ಮತ್ತು ಎದುರಿಸಲೂ ಆಗದೇ, ಅಂತಹವರನ್ನು ಇದೇ ಇತಿಹಾಸ ಚೋರ ವೈದಿಕರು ತಿದ್ದೀ ತೀಡಿ ತಮ್ಮ ವೈದಿಕ ಸಂಪ್ರದಾಯದ ದೇವರುಗಳನ್ನಾಗಿ ಮಾಡಿಕೊಂಡು ತಮ್ಮ ಹೊಟ್ಟೆ ಪಾಡಿನ‌ ದಾರಿಯನ್ನಾಗಿ ಮಾಡಿಕೊಂಡು ಬಿಟ್ಟರು.

ಹೀಗೆ ವಿಲನ್ ಆದವರ ಪೈಕಿ ತೇರ ಮಹದೇವನಾದ ಮಹಿಷನೂ ಒಬ್ಬ. ಹಾಗೇ ಇತಿಹಾಸ ಚೋರ ವೈದಿಕರ ಕಟ್ಟು ಕತೆಗಳಿಂದ ದೇವರುಗಳಾಗಿ ಗರ್ಭ ಗುಡಿಯಲ್ಲಿ ಬಂಧಿಯಾಗಿರುವವರ ಪೈಕಿ ಮಲಯ ಮಹದೇವ, ಅಣ್ಣಪ್ಪ, ಮಂಜುನಾಥ, ಗೋವಿಂದ, ಎಲ್ಲಮ್ಮ, ಚಾವುಂಡಿ ಯಕ್ಷಿಣಿ ಮುಂತಾದವರು ಪ್ರಮುಖರು. ಇದೇ ಇತಿಹಾಸ ಚೋರರ ಕೈಗೆ ಸಿಕ್ಕಿ ತನ್ನ ಮೂಲ ಬುದ್ದನ ಸ್ವರೂಪವನ್ನೇ ಕಳೆದುಕೊಂಡು ವಿಷ್ಣು, ರಂಗ, ವಿಠ್ಠಲ ನಾರಾಯಣರೇ ಮುಂತಾದ ದೇವ ದೇವಿಯರಾಗಿ ಇತಿಹಾಸ ಚೋರರ ಹೊಟ್ಟೆ ತುಂಬಿಸುತ್ತಿರುವ ಹಲವು ಪ್ರಮುಖ ದೇವಸ್ಥಾನಗಳು ನಮಗೆ ಕರ್ನಾಟಕದಲ್ಲೂ ಕಂಡು ಬರುತ್ತವೆ. ಇವರ ಕಳ್ಳತನಗಳನ್ನು ಬಟಾಬಯಲು ಮಾಡುವ ಹಲವು ದಾಖಲೆಗಳು ಕಂಡು ಬರುತ್ತವೆ‌ಯಾದರೂ ಆ ಹಾದಿಯ ಪ್ರಯತ್ನಗಳು ಅಷ್ಟು ಸಮರ್ಪಕವಾಗಿ ನಡೆದಿಲ್ಲ.

ಅಯೋಧ್ಯೆ ತೀರ್ಪಿನಲ್ಲಿ ಕಂಡು ಬರುವ ಉತ್ಖನನ ಕಾಲದಲ್ಲಿ ಪತ್ತೆಯಾದವೆಂದು ಹೇಳಲಾಗುವ ಬೌದ್ಧ ಮಂದಿರ ಅಥವಾ ಜೈನ ಬಸದಿಗಳ ಅವಶೇಷಗಳ ಉಲ್ಲೇಖಗಳು ಈ ಮೇಲಿನ ವಾದಕ್ಕೆ ಹೆಚ್ಚು ಸಾಕ್ಷಿ ಒದಗಿಸುತ್ತವೆ. ಸಾಮ್ರಾಟ್ ಅಶೋಕನ ರಾಜಾಶ್ರಯದಲ್ಲಿ ಭಾರತದ ಮೂಲೆ ಮೂಲೆಗೂ ತಲುಪಿ, ಭಾರತದ ಆತ್ಮವೇ ಆಗಿ, ಭಾರತದ ಶಾಂತಿ ಸಹನೆ ತಾಳ್ಮೆಯ ಪ್ರತಿರೂಪದಂತೆ ಕಂಗೊಳಿಸಿ, ಭಾರತದ ಶಿಖರಪ್ರಾಯವಾಗಿದ್ದ ಬೌದ್ಧ ಧಮ್ಮವು ಅನ್ನ, ನೀರು ಹರಸುತ್ತಾ ಮಧ್ಯ ಏಷ್ಯಾದ ಯುರೇಷಿಯಾದಿಂದ ಭಾರತಕ್ಕೆ ವಲಸೆ ಬಂದಿದ್ದ ನಗಣ್ಯ ಎನ್ನಿಸುವಷ್ಟೇ ಜನಸಂಖ್ಯೆಯ, ಈ ವೈದಿಕ ಇತಿಹಾಸ ಚೋರರು ತಮ್ಮ ಅಷ್ಟೇ ಅಷ್ಟು ಜನಸಂಖ್ಯೆಯನ್ನು ಇಟ್ಟುಕೊಂಡು ಅದ್ಹೇಗೆ ಭಾರತದ ಬಹುಜನರ ಧಮ್ಮವನ್ನು ಭಾರತದಿಂದಲೇ ಓಡಿಸಿದರು ಎಂದು ನೋಡುವಾಗ ನಮಗೆ ಕಂಡುಬರುವ ನಿಜವಾದ ಕಾರಣವೇನೆಂದರೆ, ರಾಜಾಶ್ರಯವಿಲ್ಲದ ಯಾವುದೇ ಧರ್ಮವೂ ಉಳಿಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ನಮ್ಮ ಕಣ್ಣಿಗೆ ರಾಚುವಂತೆ ಹಿಡಿಯುತ್ತದೆ.

ಸಾಮ್ರಾಟ್ ಅಶೋಕನ ನಂತರ ರಾಜಾಶ್ರಯವನ್ನು ಕಳೆದುಕೊಂಡ ಬೌದ್ಧ ಧಮ್ಮವನ್ನು ಭಾರತದಿಂದ ಓಡಿಸದ ಹೊರತು, ವೈದಿಕಶಾಹಿತನಕ್ಕಿಲ್ಲಿ ಉಳಿಗಾಲವಿಲ್ಲ ಎಂದು ಕಂಡುಕೊಂಡ ವೈದಿಕರು, ಆಗಲೇ ತಮ್ಮ ತಂತ್ರ ಕುತಂತ್ರಗಳನ್ನು ಹೆಣೆಯಲಾರಂಭಿಸಿದರು. ಆಗಲೇ ಸ್ವಲ್ಪ ಸ್ವಲ್ಪವೇ ಚಿಗುತುಕೊಳ್ಳಲಾರಂಭಿಸಿದ ಈ ವಲಸಿಗ ಆರ್ಯರು ತಾವು ಕಲಿತಿದ್ದ ಹಲವು ದುಶ್ಚಟಗಳಿಗೆ ಭಾರತದ ಮೂಲ ನಿವಾಸಿ ರಾಜರನ್ನು ಈಡು ಮಾಡಲು ನೋಡಿದರು, ದೇವರು ಧರ್ಮಾಚರಣೆಗಳ ಹೆಸರಲ್ಲಿ ಹೆಂಡ, ಜೂಜು, ವೇಶ್ಯಾವಾಟಿಕೆಗಳ ದಾಸರನ್ನಾಗಿ ಮಾಡಿದರು. ಪ್ರಕೃತಿಯೇ ದೇವರೆಂದು ನಂಬಿದ್ದವರಿಗೆ ಹೊಸ ಹೊಸ ದೇವರುಗಳನ್ನು ಸೃಷ್ಟಿಸಿ, ಆ ದೇವರುಗಳಿಗೆ ದೇವಸ್ಥಾನಗಳನ್ನು ನಿರ್ಮಿಸಿ, ಗರ್ಭಗುಡಿ ಸಂಸ್ಕೃತಿಯನ್ನು ಹೇರಿದರು. ಆ ದೇವಸ್ಥಾನಗಳ ಮೂಲಕ ಹೇಗೆ ಹಣ ಮಾಡಬಹುದೆಂಬ ದುರಾಲೋಚನೆಯ ಮಾರ್ಗಗಳನ್ನು, ದುರಾಸೆಗಳನ್ನು ರಾಜರ ತಲೆಗಳಿಗೆ ತುಂಬಿದರು. ದೇವಸ್ಥಾನಗಳಲ್ಲಿ ದೇವದಾಸಿ ಪದ್ದತಿಗಳನ್ನು ಪರಿಚಯಿಸಿ ಹೆಣ್ಣು ಮಕ್ಕಳನ್ನು ಮಾರಾಟದ ಸರಕುಗಳನ್ನಾಗಿಸಿ ವ್ಯಾಪಾರದ ಕೇಂದ್ರಗಳನ್ನಾಗಿಸಿದರು. ಮುಂದುವರೆದು, ಅವರ ಸ್ವತ್ತುಗಳನ್ನು ಯಾಗ ಯಜ್ಞಗಳ ಹೆಸರಲ್ಲಿ, ದಾನ ಧರ್ಮದ ನೆಪದಲ್ಲಿ ಕಸಿದು ಕೊಳ್ಳತೊಡಗಿದರು. ಪುತ್ರಕಾಮೇಷ್ಟಿ ಯಾಗ, ಸೋಮಯಾಗಗಳ ಮೂಲಕ ರಾಜನನ್ನು, ರಾಜನ ಹೆಂಡತಿಯರನ್ನೂ ಅನಾಚಾರಗಳಿಗೆ ತಳ್ಳಿದರು. ಅಶ್ವಮೇಧ ಯಾಗಗಳ ಮೂಲಕ ರಾಜ್ಯ ವಿಸ್ತರಣೆಯ ದಾಹವನ್ನು ರಾಜರಲ್ಲಿ ಉಂಟು ಮಾಡಿ ರಾಜ, ರಾಜರ ನಡುವೆ ಎತ್ತಿಕಟ್ಟಿ ಯುದ್ದಗಳನ್ನುಂಟು ಮಾಡಿದರು.‌ ಒಂದಿಷ್ಟು ಅಧಿಕಾರ, ಅವಕಾಶ ದೊರೆತ ಕೂಡಲೇ ಮೌರ್ಯ ವಂಶದ ಕೊನೆಯ ರಾಜ ಬೃಹದ್ರಥ ಮೌರ್ಯನನ್ನು ಕೊಲ್ಲುವ ಶುಂಗ ವಂಶದ ಪುಷ್ಯಮಿತ್ರನು, ಸುಮತಿ ಭಾರ್ಗವನೆಂಬ ಕುಟಿಲ ಬ್ರಾಹ್ಮಣನ ಮೂಲಕ ಮನುಧರ್ಮವನ್ನು ಬರೆಸಿ ಭಾರತದ ಶಾಸನವನ್ನಾಗಿಸಿದನು.

ಅಲ್ಲಿಗೆ ಭಾರತದ ಘನತೆಯಾಗಿದ್ದ ಬೌದ್ಧ ಧಮ್ಮವು ರಾಜಾಶ್ರಯದ ಸಂಪೂರ್ಣ ಅವಕಾಶವನ್ನು ಕಳೆದುಕೊಂಡಿತು ಮತ್ತು ಮುಂದಿನ ಹಲವು ವರ್ಷಗಳ ಕಾಲ ನಿರಂತರವಾಗಿ ದಾಳಿ, ದಬ್ಬಾಳಿಕೆ, ಅತ್ಯಾಚಾರ, ಕೊಲೆ, ಸುಲಿಗೆಗೆ ಒಳಗಾಗಿ ಭಾರತದಿಂದ ಮಾಯವಾಗ ತೊಡಗಿತು.

ಭಾರತದ ಪಾಲಿನ ಈ ಅತ್ಯಂತ ಅನ್ಯಾಯ ಮತ್ತು ಅನಾಹುತಕಾರಿಯಾದ ವೈದಿಕ ದಾಳಿಯನ್ನು ಬಾಬಾ ಸಾಹೇಬರು ಹೀಗೆ ಹೇಳುತ್ತಾರೆ. ಪುಷ್ಯಮಿತ್ರ ಮಾಡಿದ ಬೃಹದ್ರಥನ ಹತ್ಯೆ ದುರದೃಷ್ಟವಶಾತ್ ಗಣನೆಗೆ ಬಾರದೇ ಹೋಗಿದೆ. ಅದು ಫ್ರೆಂಚ್ ಕ್ರಾಂತಿಗಿಂತಲೂ ಮಿಗಿಲಾದುದಲ್ಲವಾದರೂ, ಅದರಷ್ಡೇ ದೊಡ್ಡ ರಾಜಕೀಯ ಕ್ರಾಂತಿಯಾಗಿದೆ. ಬೌದ್ಧ ರಾಜರನ್ನು ಅಧಿಕಾರದಿಂದ ಕೆಳಗಿಳಿಸಲು ಬ್ರಾಹ್ಮಣರು ನಡೆಸಿದ ರಾಜಕೀಯ ಕ್ರಾಂತಿಯು ರಕ್ತಮಯ ಕ್ರಂತಿಯಾಗಿದೆ. ಪುಷ್ಯಮಿತ್ರನಿಂದಾದ ಬ್ರಹದ್ರಥನ ಹತ್ಯೆಯು ಅದನ್ನೇ ಹೇಳುತ್ತದೆ.

– ಮುಂದುವರೆಯುತ್ತದೆ…

One thought on “ನೀನಾ ಇತಿಹಾಸ? : ರಾಜಾಶ್ರಯ ಬೇಕು ಬೌದ್ಧ ಧಮ್ಮಕ್ಕೆ”

Leave a Reply

Your email address will not be published. Required fields are marked *