ಅದು ತೊಂಬತ್ತರ ದಶಕದ ಆರಂಭದ ದಿನಗಳು. ಅಪ್ಪನಿಗೆ ಅದ್ಯಾವ ಪ್ರೇರಣೆಯೋ, ಪ್ರಭಾವವೋ ಗೊತ್ತಿಲ್ಲ. ಊರಲ್ಲಿ “ಅಂಬೇಡ್ಕರ್ ನಿಮ್ನ ವರ್ಗಗಳ ಕ್ಷೇಮಾವೃದ್ಧಿ ಸಂಘ” ಅಂತ ಬೋರ್ಡು ನೆಡಿಸಿದ್ದ. ʻಶಿವ್ನೆ, ನಾರಾಯ್ಣʼ ಅನ್ಕೊಂಡು ತಮ್ಮ ಪಾಡಿನಲ್ಲಿಯೇ ಇರುವ ಜನಕ್ಕೆ ಅಂಬೇಡ್ಕರ್ ಯಾರು, ಏನೂ ಎಂಬುದು ಬೇಕಿರಲಿಲ್ಲ ಅನ್ಸುತ್ತೆ. ಆ ಹೊತ್ತಿಗೆ ಬಹುಶಃ ಊರಿನ ಹೊಲೆಯರಿಗೂ ಬೇಕಾಗಿರಲಿಲ್ಲವೆನಿಸುತ್ತದೆ. ಆ ಮಟ್ಟದ ಅಜಾಗರೂಕತೆ ಮತ್ತು ಅಭದ್ರತೆ ಇತ್ತು ಆಗ. ನಮ್ಮೂರನ್ನು ಕಾಲೋನಿ ಅಂತನೇ ಕರಿತಿದ್ರು. ಹೆಚ್ಚು ಎಸ್ಸಿಗಳೇ ಇದ್ದರೂ, ಒಕ್ಕಲಿಗರು, ಕುರುಬರು ಹಾಗೂ ತಿಗಳ ಸಮುದಾಯಗಳ ಜನಗಳು ಇದ್ದರು. ಆದರೂ ಕಾಲೋನಿ ಎಂದರೆ, ಎಸ್ಸಿಗಳದ್ದು ಎಂಬ ದನಿ ಬರುತ್ತಿತ್ತು. ಈ ಎಸ್ಸಿಗಳು ಯಾರೂ ಎಂದಾಗ ಊರಲ್ಲಿಯೇ ಬಹುಸಂಖ್ಯಾತರಾಗಿದ್ದ ಭೋವಿಗಳು(ಒಡ್ಡರು) ಆನಂತರದಲ್ಲಿ ಹೊಲೆಯರು ಸೇರಿದ್ದರು. ಆದರೆ ತಳಮಟ್ಟದ ಸತ್ಯ ಹೇಗಿತ್ತೆಂದರೆ, ಎಸ್ಸಿಗಳು ಎಂದು ಹೇಳಿಕೊಳ್ಳುವ ಭೋವಿಗಳು ಹೊಲೆಯರನ್ನು ಮನೆಗೆ ಸೇರುಸುತ್ತಿರಲಿಲ್ಲ. ತೆಲುಗಿನಲ್ಲಿ ಹೊಲೆಯರನ್ನು ಮಾಲೋಳ್ಳು ಅಂತ ಮಾತಾಡಿಕೊಳ್ಳೋರು.

ಭೋವಿ

ನನಗೆ ಈಗಲೂ ನೆನಪಿದೆ ಹೊಲೆಯರಿಗೆ ಬಾವಿಯಿಂದ ನೀರನ್ನು ತಮ್ಮ ಬಿಂದಿಗೆಯಿಂದ ತೆಗೆದು, ಮುಟ್ಟಿಸಿಕೊಳ್ಳದೇ ಸುರಿದ ಆ ದಿನಗಳ ಸನ್ನಿವೇಶ. ಮತ್ತೆ ಹೊಲೆಯರಿಗೆ ನೀರಿಗೆ ತತ್ವಾರ ಬಂದು ದಾಸಪ್ಪನ ಕಟ್ಟೆ ಅಂತ ಇತ್ತು. ಈ ಕಟ್ಟೆ ಅಥವಾ ಕೆರೆಯು ತಿಕ ತೊಳೆಯೋದಿಕ್ಕೆ, ದನ, ಕುರಿ ತೊಳೆಯೋಕೆ ಬಳಸಲಾಗುತ್ತಿತ್ತು. ಅಂತಹ ಕೆರೆಯ ನೀರನ್ನು ಹೊಲೆಯರು ಕುಡಿದಿದ್ದಿದೆ. ಈ ಥರ ಅಮಾನವೀಯವಾಗಿ ಎಸ್ಸಿಗಳೆನ್ನುವ ಭೋವಿಗಳು ನಡೆಸಿಕೊಂಡದ್ದಿದಿದೆ. ಭೋವಿಗಳು ತಮ್ಮ ದಬ್ಬಾಳಿಕೆ, ಪುಂಡಾಟಿಕೆಗಳಿಂದ ಊರಲ್ಲಿ ಒಂತರದ ದೌರ್ಜನ್ಯದ ಹವಾ ಇಟ್ಟಿದ್ದರು. ಇವರ ದೌರ್ಜನ್ಯದ ಪರಿ ನೆನೆದರೆ ಈಗಲೂ ಆಕ್ರೋಶ ಉಕ್ಕುತ್ತದೆ. ʻಅನ್ನೇಕಾರ್ರುʼ ಅಂತ ಒಳಗೊಳಗೆ ಬೈಯ್ದುಕೊಳ್ಳೋದಿತ್ತು ಇವರನ್ನು. ಅಂದಿನ ಇವರ ಜಾತೀಯತೆಯನ್ನು “ಏನ್ ಇವರ ಸಾಮಾಜಿಕ ಅಜ್ಙಾನ” ಎಂದು ಸುಮ್ಮನಾಗಬಹುದಷ್ಟೆ. ಆದರೂ ಜಾತಿ ಆಚರಣೆಯಲ್ಲಿ ತಮ್ಮಂತೆಯೇ ಎಸ್ಸಿಗಳಾದ ಹೊಲೆಯರನ್ನು ನಿಕೃಷ್ಟವಾಗಿ ನಡೆಸಿಕೊಂಡದ್ದಿದೆ ಎಂಬುದು ಸತ್ಯವಷ್ಟೇ.

ಒಮ್ಮೆ ಹೊಲೆಯರ ಹೆಣ್ಣುಮಗಳಿಗೆ ಒಡ್ಡರ ಹುಡುಗಿ ಕುಡ್ಲಲ್ಲೆ ಕುಟುಕಿ ಹಣೆ ತೂತ್ ಮಾಡಿದ್ದ ಸನ್ನಿವೇಶ ನಡೆದಿತ್ತು. ನಮಗೊ, ಅದನ್ನು ಜಾತಿ ದೌರ್ಜನ್ಯ ಎಂದು ತಿಳಿಯದ ವಯಸ್ಸದು. ತೀರ ಜನ ಬಾಹುಳ್ಯವಿದ್ದ ಈ ಭೋವಿಗಳ ಬಳಿ ನ್ಯಾಯ ಕೇಳಲು ಹೋದ ಹೊಲೆಯರ ಬಗ್ಗೆ ತಿಪ್ಪೆ ಸಾರಿಸಿ ಕಳಿಸುತ್ತಿದ್ದರು. ಮತ್ತೆ ಏನಾದರೂ ಈ ತರದ್ದು ಆದರೆ ದಂಡು ದಂಡೇ ಬಂದು ಹೆದರಿಸುತ್ತಿದ್ದರು ಕೂಡ. ಊರ ಎಲ್ಲರೂ ಇವರ ಕೆಟ್ಟ ನಡವಳಿಕೆಗೆ ಮನದಲ್ಲಿಯೇ ಶಾಪ ಹಾಕುತ್ತಿದ್ದರು.

ಪ್ರಕಾಶ್‌ ಮಂಟೇದ ಅವರ “ಅರಿವೇ ಕಂಡಾಯ” ಭಾಗ – 4 : ಯಶೋಧಮ್ಮ ಎಂಬ ಜನಾಧಿಕಾರದ ಗುಬ್ಬಿಗೂಡು

ಹಳ್ಳಿಗಳಲ್ಲಿ ಈ ಬಹುಸಂಖ್ಯಾತರ ದಬ್ಬಾಳಿಕೆಯ ಜೊತೆ ಅದಕ್ಕೆ ಜಾತಿ ದಬ್ಬಾಳಿಕೆ ಸೇರಿದರೆ ಸಾಕು ಅದು ಇನ್ನೂ ವಿಪರೀತವಾಗುತ್ತದೆ. ಅದರಲ್ಲೂ ಈ ಭೋವಿ ಹೆಂಗಸರ ಜಾತಿ, ಅಂಟು ಮುಟ್ಟಿನ ಪ್ರಸಂಗಗಳು ಎಷ್ಟು ಅಸಹ್ಯಕರವಾಗಿರುತ್ತಿದ್ದವೆಂದರೆ, ಬೋರ್ವೆಲ್ ಬಳಿ ನೀರಿಡಿಯುವ ಸಂದರ್ಭದಲ್ಲಿ ಹೊಲೆಯರ ಬಿಂದಿಗೆ ಇಟ್ಟ ಜಾಗದಲ್ಲಿ ಭೋವಿಗಳ ಹೆಂಗಸು ತಮ್ಮ ಬಿಂದಿಗೆ ಇಡಲು ಆ ಜಾಗವನ್ನು ಎಷ್ಟೋ ನೀರಾಕಿ ತಿಕ್ಕಿ ತಿಕ್ಕಿ ಆಮೇಲೆ ತಮ್ಮ ಬಿಂದಿಗೆ ಇಡುತ್ತಿದ್ದರು. ಈ ಸನ್ನಿವೇಶ ಅಸಹ್ಯ ಬರುಸುತ್ತಿತ್ತು. ಆದರೆ ಇದೇ ಇವರ ಮಕ್ಕಳುಗಳು ನನ್ನ ಜೊತೆ ಶಾಲೆಯಲ್ಲಿ ಎಸ್ಸಿ ಎಂದು ಸ್ಕಾಲರ್ಶಿಪ್, ಯೂನಿಫಾಂ ಅನ್ನು ಪಡೆಯುತ್ತಿದ್ದುದು ಇವರಿಗೆ ಗೊತ್ತಿಲ್ಲವೆಂದು ನಾನು ಒಳಗೊಳಗೆ ಕುದಿಯುತ್ತಿದ್ದೆ. ನೋಡಲು ಅನಕ್ಷರಸ್ಥರು, ಅಮಾಯಕರ ಹಾಗೆ ಕಾಣುತ್ತಿದ್ದ ಭೋವಿಗಳ ಹೆಂಗಸರು ಏನಾದರೂ ಜಗಳ ಗಿಗಳ ನಡೆದರೆ ಗಂಡಸರಿಗಿಂತಲೂ ಒಂದ್ ಕೈ ಮುಂದೆಯೇ ಇರುತ್ತಿದ್ದರು. ಕೆಲವೊಮ್ಮೆ ಊರೇ ಹೊತ್ತಿ ಉರಿಯುವ ಹಾಗೆ ಜಗಳ ಮಾಡಲು ಈ ಹೆಂಗಸರು ಭಯಂಕರ ಕಾರಣರಾಗಿದ್ದುಂಟು.

ಊರು ಹುಟ್ಟಿದ ಆ ಆದಿ ಸಂದರ್ಭದಲ್ಲಿ ನಮ್ಮ ತಾತನ ಮನೆ ಅಲ್ಲದೆ, ಭೋವಿ ಜನರನ್ನು ಹೊರತುಪಡಿಸಿ ನಾಲ್ವರ ಜಾತಿಗಳ ಮನೆಗಳಿದ್ದವು. ಆಗ ಊರಿಗೆ, ಎಂ.ಜಿ. ಸೈಟ್ ಅಂತಲೂ, ಕುರಿಫಾರಂ ಎಂತಲೂ ಅಡ್ಡ ಹೆಸರುಗಳಿದ್ದವು. ಈಗ ನಮ್ಮ ದಾಖಲೆಗಳಲ್ಲಿ ಕುಂಬಾಪುರ ಕಾಲೋನಿ ಎಂದೇ ನಮ್ಮ ಊರನ್ನು ನಮೂದಿಸಲಾಗಿದೆ. ಆದರೆ ಜನರ ಬಾಯಲ್ಲಿ ಫಾರಂನೋರು ಎಂತಲೇ ಹಳೆಯ ಅಡ್ಡೆಸರಲ್ಲಿಯೇ ಈಗಲೂ ಸುತ್ತಲಿನವರು ಕರೆಯುವ ವಾಡಿಕೆ ಇದೆ. ಈ ತೆಲುಗು ಮಾತಾಡುತ್ತಿದ್ದ ಈ ಭೋವಿಗಳು ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರು, ಹೊಲಮನೆ ಮಾಡಿಕೊಂಡವರು. ನನಗೆ ಆಶ್ವರ್ಯ ಹುಟ್ಟಿಸಿದ್ದುದು ಈ ಭೋವಿಗಳು ಎಸ್ಸಿಗಳಾದರೂ ಹೋಟಲ್ ಇಟ್ಟಿದುದು, ಅಲ್ಲಿ ಎಸ್ಸಿಗಳಲ್ಲದ ಒಕ್ಕಲಿಗರು, ಕುರುಬರು, ತಿಗಳರು ಬಂದು ಟೀ ಕುಡಿದು, ತಿಂಡಿ ಮಾಡುತ್ತಿದ್ದುದು. ಆದರೆ ಹೊಲೆಯರಿಗೆ ಮಾತ್ರ ನೆರಿಕೆಯಲ್ಲಿ ಟೀಗೆ ಸಫರೇಟು ಲೋಟ ಸಿಗಿಸಿರುತ್ತಿದ್ದರಷ್ಟಲ್ಲದೆ ಪ್ರತ್ಯೇಕ ಜಾಗವನ್ನು ಮೀಸಲಿರಿಸಿದ್ದರು. ಅಲ್ಲದೆ ಊರ ದೇವಸ್ಥಾನಕ್ಕೆ ನೇರ ಪ್ರವೇಶವನ್ನು ಎಸ್ಸಿಗಳಾದ ಭೋವಿಗಳು ಪಡೆದಿದ್ದರು. ಆದರೆ ಈ ಸೌಲಭ್ಯ ಹೊಲೆಯರಿಗೆ ಇರಲಿಲ್ಲ. ಇವರ ಎಸ್ಸಿತನದ ಇಬ್ಬಂದಿತನದ ಬಗ್ಗೆ ಎಲ್ಲಿಲ್ಲದ ಕೋಪ ಬರಿಸುತ್ತಿತ್ತು. ದುರಂತವೆಂದರೆ, ಇದು ಸಾಮಾಜಿಕ ಪ್ರತ್ಯೇಕತೆ ಎಂದು, ನಮಗೆ ಅನ್ನಿಸಿರಲಿಲ್ಲ.

ನಾನು ಮಿಡ್ಲಸ್ಕೂಲಿಗೆ ಸೇರಿದ್ದೆ. ಮೇಷ್ಟ್ರುಗಳು ತರಗತಿಗಳಲ್ಲಿ ಎಸ್ಸಿಗಳು ಯಾರು ಕೈ ಎತ್ತಿ ಎಂದು ಕೇಳುತ್ತಿದ್ದರು. ಆಗ ನನ್ನ ಜೊತೆ ಭೋವಿ ಹುಡುಗ ಹುಡುಗಿಯರು ಕೈ ಎತ್ತುತ್ತಿದ್ದರು. ಇದು ನನಗೆ ಆಶ್ಚರ್ಯವಾಗುತ್ತಿತ್ತು. ಸ್ಕಾಲರ್ಶಿಪ್ ಮತ್ತು ಯೂನಿಫಾರ್ಮ್ ಪಡೆದುಕೊಳ್ಳುತ್ತಿದ್ದುದು ನನ್ನ ಭೋವಿ ಜೊತೆಗಾರರು ಎಸ್ಸಿಗಳು ಅಂತ ಕೈ ಎತ್ತುತ್ತಾರೆಂದು. ಈ ನನ್ನ ಮಿಡ್ಲ್ ಸ್ಕೂಲ್ ಇದ್ದ ಊರಲ್ಲಿ ಜಾತಿ ಪ್ರತ್ಯೇಕತೆಯ ಹೊಲಗೇರಿಯ ಪರಿಚಯವಾಯಿತು. ಅಲ್ಲಿ ಮೊದಲ ಬಾರಿಗೆ ಹೊಲಗೇರಿಯಲ್ಲಿ ಅಂಬೇಡ್ಕರ್ ಬೋರ್ಡನ್ನು ನೋಡಿದ್ದೆ. ಊರಿನ ಎಲ್ಲರೂ ಒಂದು ಕಡೆ, ಎಸ್ಸಿಗಳೇ ಒಂದು ಕೇರಿ ಅಂತ ಯಾಕೆ ಎಂದೂ ಕೊರಿತಿತ್ತು.

ಮತ್ತೆ ಊರ ಆಂಜನೇಯನ ದೇವಸ್ಥಾನಕ್ಕೆ ಭೋವಿಗಳೂ ಹೋಗಬಹುದಿತ್ತು, ಹೊಲೆಯರು ಒಳಗೆ ಅಂದರೆ, ಸ್ವಲ್ಪ ಹೊಸ್ತಿಲು ದಾಟಿ ಒಂಚೂರು ಒಳಪ್ರವೇಶಿಸಬಹುದಿತ್ತು. ಹೊಲೆಯರು ಬರಬಾರದು ಎಂದು ಭೋವಿಗಳು ತಕರಾರು ತೆಗೆಯುತ್ತಿದ್ದುಂಟು. ಪ್ರತಿವರ್ಷದ ಊರ ಮಾರಿ ಹಬ್ಬದಲ್ಲಿ ಮಾರಮ್ಮನ ಗುಡಿ ಮುಂದೆ ಆರತಿ ಇಡುವ ಸಂದರ್ಭ ಬಂದಾಗ, ಹೊಲೆಯರ ಆರತಿಗಳು ಒಂದು ಕಡೆ, ಊರ ಎಸ್ಸಿಗಳಾದರೂ ಭೋವಿಗಳು ಹಾಗೂ ಇತರೆ ಜಾತಿಗಳ ಆರತಿಗಳು ಒಂದೆಡೆ ಇರುತ್ತಿದ್ದವು. ಆಗ ನನಗೆ ಈ ತರ ಯಾಕೆ ಎಂಬ ಪ್ರಶ್ನೆಗಳು ಒಳಗೊಳಗೆ ಮೂಡುತ್ತಿದ್ದವು. ಈ ಸಂದರ್ಭದಲ್ಲಿ ಈ ಪ್ರತ್ಯೇಕತೆಯ ಬಗ್ಗೆ ಅನುಮಾನವೇಳುತ್ತಿದ್ದರೂ ಮಾನಸಿಕವಾಗಿ ಕಿರಿಕಿರಿ ಕೂಡ ಆಗುತ್ತಿತ್ತು.

ಇಂತೆಲ್ಲ ಏನೇ ಇದ್ದರೂ, ಆ ಊರಿಗೆ, ಆ ಹೊತ್ತಿಗೆ ಅಪ್ಪ ಒಬ್ಬ ಡಿ ಗ್ರೂಫ್ ಸರ್ಕಾರ ನೌಕರನಾಗಿದ್ದ. ಮತ್ತೆ ನೌಕರಿ ಸೇರುವ ಮೊದಲು ಈ ಊರಿನವರಿಗೆ ಪಾಠ ಹೇಳಿಕೊಟ್ಟು ಊರಿಗಾಗಿ ಕಲ್ಯಾಣದ ಕೆಲಸ್ಗಳನ್ನೂ ಮಾಡಿದ್ದನು. ಹಾಗಾಗಿ ಇವನಿಗೆ ಗಂಗಾಧರಯ್ಯ ಮೇಷ್ಟ್ರು ಎಂಬ ಮತ್ತೊಂದು ಹೆಸರು ಇತ್ತು. ಜೋಗಯ್ಯನಾಗಿದ್ದ ಅಪ್ಪ ತುಂಬಾ ಶ್ರದ್ಧೆ, ಶುಚಿತ್ವದಿಂದ ಇರುತ್ತಿದ್ದ. ಹಾಗೇ ನೋಡಿದರೆ ನಾವು ತುಂಬಾ ಅಚ್ಚುಕಟ್ಟಿನ ಮನೆಯವರಂತಿರುತ್ತಿದ್ದೊ. ಅಪ್ಪ ಹಾರ್ಮೊನಿ ನುಡಿಸುತ್ತಿದ್ದ ಕೂಡ. ಮತ್ತೆ ನಾನು ಮಿಡ್ಕ್ ಸ್ಕೂಲ್ ಹೋಗುವ ಹೊತ್ತಿಗೆ ಮನೆಗೆ ಅವ್ವನ ಹಠದ ಕಾರಣಕ್ಕಾಗಿ ಬುಶ್ ಟಿವಿ ಬಂದಿತ್ತು. ಮನೆಯಲ್ಲೊಂದು ಸೆಕೆಂಡ್ ಹ್ಯಾಂಡಲ್ ಟಿವಿಎಸ್ ಮೊಪೆಡ್ ಕೂಡಾ ಇತ್ತು. ಒಂದು ಕಾಲದಲ್ಲಿ ಪೇಟೆಯಿಂದ ಸಾಬ್ರು ಆಡುಕುರಿ ತಕೊಂಡು ಹೋಗೋದಿಕ್ಕೆ ಮಾತ್ರ ಯೆಜುಡಿ ಮತ್ತು ಬುಲೆಟ್ ಗಾಡೀಲಿ ಡಬ ಡಬ, ವರ್ರೋ ಡುರ್ರ್ ಎಂದೂ ಬರುತ್ತಿದ್ದರು. ಆಗಿನ ನಮ್ಮ ಸ್ಕೂಟರ್ ಲೋಕವೇ ಒಂತರ. ಊರಲ್ಲಿ ಒಂದೋ ಎರಡೋ ಸ್ಕೂಟರ್ ಇದ್ದವು. ಅದರಲ್ಲಿ ನಮ್ಮದೂ ಒಂದಾಗಿತ್ತು. ಇದಕ್ಕಿಂತಲೂ ಮುಖ್ಯವಾಗಿ ನೈತಿಕವಾಗಿ ಹಾಗೂ ಒಂದು ಬಗೆಯ ಮನುಷ್ಯ ಮರ್ಯಾದೆಯ ನಡವಳಿಕೆಗಳ ಗುಣಾವಳಿಗಳು ನಮ್ಮ ಮನೇಲಿ ಇತ್ತು ಎಂಬುದು. ದೇವರು, ಧರ್ಮದ ಶ್ರದ್ದೆಗಳಲ್ಲದೆ, ಅಪ್ಪ, ಅವ್ವರ ಬದುಕಿನ ಒಪ್ಪ ಓರಣದ ಸನ್ನಿವೇಶಗಳು ಊರವರ ಕಣ್ಣಲ್ಲಿ ನಾವು ಒಂತರದಲ್ಲಿ ಭಿನ್ನವಾಗಿರಲು ಕಾರಣವಾಗಿದ್ದವು. ಇದು ಇತರೆ ಜಾತಿಗಳ ಎದುರು ನಾವು ಒಂತರ ನ್ಯಾಯಬದ್ಧ ಮರ್ಯಾದಸ್ಥರು ಎನ್ನುವಂತನ್ನಲೂ ಕಾರಣವಾಗಿತ್ತು.

ನಾನು ಹೈ ಸ್ಕೂಲಿಗೆ ಸೇರಿದ ಹೊತ್ತದು. ಅಪ್ಪ ಎಲ್ಲರನ್ನು ಸೇರಿಸಿಕೊಂಡು ʻಅಂಬೇಡ್ಕರ್ ನಿಮ್ಮ ವರ್ಗಗಳ ಕ್ಷೇಮಾವೃದ್ಧಿ ಸಂಘʼ ಮಾಡಲು ಮುಂದಾಗಿದ್ದ. ಇದೊಂತರ ಕಪ್ಪೆಗಳನ್ನು ತಕ್ಕಡಿಗೆ ಹಾಕುವ ಸಾಹಸದಂತಿತ್ತು. ಏನೋ ಇಂತಹ ಸನ್ನಿವೇಶಗಳ ನಡುವೆಯೂ ಕೊನೆಗೆ ಬಾಬಾ ಸಾಹೇಬರ ಭಾವಚಿತ್ರ ಇರುವ ಸಂಘದ ಬೋರ್ಡನ್ನು ನಮ್ಮ ಮನೆಯ ಮುಂದೆ ನಡೆಸಿದ್ದ. ನನಗೆ ಈಗಲೂ ಅಪ್ಪ ನಮ್ಮ ಮನೇಲಿ ನಡೆಸಿದ್ದ ಒಂದು ಮೀಟಿಂಗ್ ಚಿತ್ರಣ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಆ ಸಭೆಯಲ್ಲಿ ದುಂಡಯ್ಯ ಎಂಬ ಹೀರೀಕ ಯಾಕೆ ನಾವು ಸಂಘ ಮಾಡಬೇಕು ಎಂಬುದ್ದನ್ನು ಕುರಿತು, ತನ್ನ ಜಾತಿ ಅವಮಾನದ ಅನುಭವವನ್ನು ಶೇರ್ ಮಾಡಿ ಮಾತಾಡಿದ್ದರು. ಆ ಹಿರೀಕನ ಸಾತ್ವಿಕ ಸಿಟ್ಟಿನಲ್ಲಿ ʻನೋಡ್ರಪ್ಪ ನಾವು ಕಕ್ಸು ಮಾಡೋ ಜಾಗ್ದಲ್ಲಿ ಕುತ್ಕೋಬೇಕಾಗಿತ್ತು, ಮಣ್ಣಲ್ಲಿ ಅಕ್ಷರ ತಿದ್ದುತ್ತಿದ್ದೊ, ಹಂಗಿತ್ತು ನಮ್ಮ ಸ್ಥಿತಿ. ಏನೋ ಪುಣ್ಯಾತ್ಮರು ಅಂಬೇಡ್ಕರ್ ಅವ್ರು ನಮ್ಮನ್ನು ಮೇಲೆತ್ತಿದರು. ಇದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕುʼ ಅಂತ ಹೇಳುತ್ತಿದ್ದ ಮಾತುಗಳು ಮೌಖಿಕವಾಗಿ ಅಸ್ಪೃಶ್ಯರ ಕರಾಳಮುಖಗಳ ಇತಿಹಾಸದಂತೆಯೇ ನನ್ನನ್ನು ಸೆಳೆದು ಆಸಕ್ತಿ ಮೂಡಿಸಿದ್ದವು.

ಆಗ ರಾಶಿ ದೇವರಾಜ್ ರವರು ದಸಂಸ ಮತ್ತು ಚಳವಳಿಯ ಭಾಗವಾಗಿ ರಾಮನಗರದಲ್ಲಿ ಪ್ರಶ್ನಾತೀತ ದಲಿತ ನಾಯಕರಾಗಿದ್ದರು. ಅವರ ಪ್ರಭಾವ ಅಪ್ಪನ ಮೇಲಿತ್ತು ಎಂಬುದು ಕೊನೆಗೆ ರಾಮನಗರದಲ್ಲಿ ನಡೆದ ಸಭೆಯಲ್ಲಿ ಗೊತ್ತಾಗಿತ್ತು. ಅಲ್ಲಿ ದಲಿತ ಕಾರ್ಯಕರ್ತರ ದಂಡೇ ಇತ್ತು. ʻಕಪ್ಪು ಕತ್ತಲ ರಾತ್ರಿಯಲ್ಲಿ, ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ’ ಈ ಹಾಡುಗಳನ್ನು ಪ್ರತ್ಯಕ್ಷವಾಗಿ ಅಲ್ಲಿ ಕೇಳಿ ನನ್ನ ಜಾತಿ ಅನುಭವ ಪ್ರಸಂಗ, ಸನ್ನಿವೇಶಗಳನ್ನು ವಿವರಿಸಿಕೊಳ್ಳಲು ಒಂದು ಸಾಮಾಜಿಕ ಆಕ್ರೋಶದ ಅಭಿವ್ಯಕ್ತಿ ಇದು ಕಿರುದಾರಿ ತೆರೆದಿರಬಹುದು. ಆದರೆ ಅಪ್ಪನ ಈ ಸಂಘ ನಿಷ್ಕ್ರಿಯವಾಯಿತು. ಈಗಲೂ ಸಂಘದ ರಿಜಿಸ್ಟರ್ಡ್ ಮಾಡಿಸಿದ್ದ ಫೋಟೋ, ನಮ್ಮ ಮನೇಲಿ ಸಾಕ್ಷಿಯಂತೆ ಗೋಡೆ ಮೇಲೆ ನಿಸ್ತಬ್ಧವಾಗಿದೆ. ಅಪ್ಪನೇ ತನ್ನ ಕಾಳಜಿಯಿಂದ ಎಲ್ಲರನ್ನು ಒಗ್ಗೂಡಿಸಲು ಮುಂದಾಗಿದ್ದದು, ಈಗಲೂ ಆತನ ಬಗ್ಗೆ ಗೌರವ ಮೂಡಿಸುತ್ತದೆ. ಆದರೆ ಇದು ನಮ್ಮ ಜನಗಳಲ್ಲಾಗಲೀ, ಆನಂತರದ ತಲೆಮಾರುಗಳಲ್ಲಾಗಲೀ ಈ ಬೆಳವಣಿಗೆ ಒಂದೇ ಒಂದು ಪ್ರಜ್ಞೆಯಾಗಲಿಲ್ಲ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ನನ್ನಲ್ಲಿ ಏನೋ ಒಂದು ಸಾಮೂಹಿಕ ಕ್ರಿಯೆಯೊಳಗೆ ಬೆರೆಯಬೇಕು, ಆದರ್ಶವಾಗಿ ಏನಾದರೂ ಮಾಡಬೇಕು ಎಂಬ ಹಂಬಲಗಳನ್ನು ಹುಟ್ಟುಹಾಕಿದಂತೂ ಸತ್ಯ. ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ತತ್ವಗಳು ಅಸ್ಪಷ್ಟವಾಗಿ ನನ್ನೊಳಗೆ ಕೂತಿದ್ದವು. ಆದರೆ ಅವು ವೈಚಾರಿಕತೆಯ ಕಿಡಿಯಾಗಿ ಮಾತ್ರ ಹೊಮ್ಮಿರಲಿಲ್ಲ. ಏನೇ ಆದರೂ ಅಪ್ಪ ಪರೋಕ್ಷವಾಗಿ ನನ್ನೊಳಗೆ ಅಂಬೇಡ್ಕರ್ ಎಂಬ ಚೇತನದ ಅಸ್ಪಷ್ಟ ಬಿಂಬ ಮೂಡಲು ಕಾರಣನಾಗಿದ್ದ.

ಈ ಎಲ್ಲ ಸನ್ನಿವೇಶಗಳ ನಡುವೆ ಜಾತಿ ಗೌಣ ಆಗಿಬಿಡುತ್ತಿತ್ತು. ಆದರೆ ಹೊರಗಡೆ, ಉಣ್ಣುವ, ನೀರು ಕುಡಿಯುವ, ಅಥವಾ ಹಬ್ಬ ಹರಿದಿನಗಳ ದೇವಸ್ಥಾನದ ಪೂಜೆ ಪುನಸ್ಕಾರಗಳ ಸಂದರ್ಭಗಳಲ್ಲಿ ಈ ಜಾತಿ ಎದ್ದು ಬರುತ್ತಿತ್ತು. ಇನ್ನೂ ಒಂದು ದುರಂತವನ್ನು ನೆನಪಿಸುವುದಾದರೆ, ನಮ್ಮ ಮನೆಯ ಎದುರಿನ ನಮ್ಮದೇ ಪೈಕಿಯ ನಿಂಗನ ಸಾವು ಈ ಜಾತಿ ಅಸ್ಪೃಶ್ಯತೆಯ ಕ್ರೌರ್ಯ ಎಂತಹುದು ಎಂಬುದ್ದನ್ನು ತೋರಿಸಿಕೊಟ್ಟಿತ್ತು. ನರ್ಸರಿಗೆ ಪ್ಯಾಕ್ ತುಂಬಲು ಹೋಗುತ್ತಿದ್ದ ನಿಂಗ, ಒಂದು ದಿನ ಊಟ ಮಾಡಿ, ನೀರು ಕುಡಿಯಲು ಹೋಗಿ ತಿಗಳ ಜಾತಿ ಹೆಂಗಸಿನ ಪಾತ್ರೆ ಮುಟ್ಟಿಸ್ಕೊಂಡ್ಬಿಟ್ಟಿದ್ದ. ಸಡನ್ನಾಗಿ ಆ ತಿಗಳರ ಹೆಂಗಸು, ದೊಡ್ಡ ರಂಪ ಮಾಡಿ, ನಡಿ ನಿಮ್ಮಪ್ಪನಿಗೆ ಹೇಳ್ತಿನಿ ಅಂತ ಹೆದರಿಸಿದ್ದಾಳೆ. ಸಹಜವಾಗಿ ಈ ನಿಂಗನಿಗೆ ಅವರಪ್ಪನನ್ನು ಕಂಡರೆ ತುಂಬಾ ಭಯವಿತ್ತು. ಇನ್ನೂ ಮನೆಗೋದರೆ ಏನಾಗುತ್ತೋ ಎಂದು ಹೆದರಿ, ಆ ನಿಂಗ ನರ್ಸರಿ ಪಕ್ಕದಲ್ಲಿಯೇ ಇದ್ದ ಮೀಟರ್ ಗೇಜ್ ರೈಲ್ವೆ ಟ್ರಾಕಿನ ಬದಿಯಲ್ಲಿ ಕತ್ತಾಳೆ ಬೇಲಿಯಲ್ಲಿ ಅವಿತು ಕುಳಿತು, ರೈಲು ಗಾಡಿಗೆ ಹಾರಿ, ಹಳಿಗಳ ನಡುವೆ ಛಿದ್ರವಾಗಿದ್ದ. ಎಷ್ಟರಮಟ್ಟಿಗೆ ಎಂದರೆ, ನನ್ನ ಚಿಕ್ಕಪ್ಪ ಆತನ ದೇಹಗಳನ್ನು ಆಯ್ದು ಗುಡ್ಡೆ ಹಾಕಿದ್ದ.

ಸಾಂದರ್ಭಿಕ ಚಿತ್ರ

ಈ ಘಟನೆ ಆ ನನ್ನ ಎಳೆಯ ವಯಸ್ಸಿನಲ್ಲಿ ನನ್ನನ್ನು ತಬ್ಬಿಬ್ಬುಗೊಳಿಸಿತ್ತು. ಕೇವಲ ಒಂದು ಪಾತ್ರೆ ಮುಟ್ಟಿದ್ದಕ್ಕೆ ಹೊಲೆಯನಾದ ನಿಂಗ ಹೆಣವಾದ ಆ ಭೀಕರ ಸನ್ನಿವೇಶಗಳು ಇಂದಿಗೂ ಬೇರೆ ಬೇರೆ ರೀತಿಯಲ್ಲಿ ಜೀವಂತವಾಗಿವೆ. ನೋಡಲು ಅಮಾಯಕರು, ಬಡವರಂತೆ ಕಾಣುತ್ತಿದ್ದವರು ಜಾತಿ ಕಾರಣಕ್ಕೆ ಕಠೋರ ಮೃಗಗಳಾಗುತ್ತಿದ್ದ ಇತರೆ ಜಾತಿ ಹೆಂಗಸರ ವರ್ತನೆಗಳು ತೀರಾ ಅಸಹ್ಯಕರವೆನಿಸುತ್ತಿದ್ದವು. ನನಗೆ ತುಂಬಾ ಸಲ ಇವ್ರ ಮನೆಗಳನ್ನು ನೋಡಿದರೆ ನೀರ್ ಕುಡಿಯೋಕು ಮನಸ್ಸಾಗಲ್ಲ ಇವ್ಯಾಕೆ ಹೀಗಾಡ್ತವೆ ಎಂದುಕೊಂಡಿದ್ದೇನೆ. ನಿಂಗನ ಸಾವಿಗೆ ಈ ಜನಕ್ಕೆ ಒಂದು ಗಿಲ್ಟ್ ಕೂಡ ತೋರಗೊಡದೆ ಕಣ್ಣೀರಾಕಿ ಅಯ್ಯೋ ಅವನ ಹಣೆಬರಹ ಅಷ್ಟೆ ಎಂದು ಪ್ರವಚನ ಕೊಡ್ತಿದ್ರು. ಮೇಲಾಗಿ ನಿಂಗನ ಸಾವಿಗೆ ಜಾತಿ ಕಾರಣ ಎಂದೂ ನಾವ್ಯಾರೂ ಊಹಿಸಲಾಗದ ಅಜ್ಞಾನದಲ್ಲಿದ್ದೆವು.

ಇನ್ನೂ ಭೀಕರದ ಜಾತಿ ದೌರ್ಜನ್ಯ, ಮೇಲ್ಜಾತಿಗಳ ದಬ್ಬಾಳಿಕೆಗಳ ಸನ್ನಿವೇಶಗಳು ನಾವು ಆಡು ಕುರಿ ಮೇಯಿಸುವ ಸಂದರ್ಭದಲ್ಲಿ ಸುದ್ದಿಯಾಗುತ್ತಿದ್ದವು. ನಾನು ಹೈಸ್ಕೂಲಿಗೆ ಪಕ್ಕದ ಅಂಜನಾಪುರಕ್ಕೆ ಸೇರಿದ್ದೆ. ಅಲ್ಲಿನ ಲಿಂಗಾಯತರ ಆರ್ಭಟಗಳ ಬಗ್ಗೆ ಮೊದಲೇ ಕೇಳಿದ್ದು, ಭಯಗೊಂಡಿದ್ದೆನು. ಈ ಊರಲ್ಲಿ ಲಿಂಗಾಯತರದ್ದೆ ಕಾರುಬಾರು. ಕುರುಬರು ಮತ್ತೆ ತೀರಾ ಸಣ್ಣ ಗುಂಪಾಗಿ ವಾಲ್ಮೀಕಿ ಜನರಿದ್ದರು. ಒಮ್ಮೆ ಈ ಊರಲ್ಲಿ ವಾಲ್ಮೀಕಿ ಜಾತಿ ಹೆಂಗಸೊಬ್ಬಳಿಗೆ ಪ್ರಬಲ ಲಿಂಗಾಯತರು ಹೊಡೆದು, ಆಕೆಯನ್ನು ಸಾರ್ವಜನಿಕವಾಗಿ ಥಳಿಸಿ ನಾಚಿಕೆ ಇಲ್ಲದೆ, ಆಕೆಯ ಗುಪ್ತಾಂಗಕ್ಕೆ ರೀಪೀಸು ಪಟ್ಟಿ ಹಾಕಿದ ಅಮಾನವೀಯ ಕ್ರೌರ್ಯ ನಡೆದಿದ್ದರ ಬಗ್ಗೆ ಜನ ಮಾತಾಡಿದ್ದರು. ನಾನು ಹೈಸ್ಕೂಲ್ಗೆ ಇಲ್ಲೇ ಸೇರಿದ್ದಾಗ ತೀರಾ ಭಯಗೊಂಡು ನಡೆಯುತ್ತಿದ್ದೆ. ಹಾಗಾಗಿ ಸ್ಕೂಲಿಗೋಗುವಾಗ ಕುಡಿಯಲು ನೀರು ಕೇಳಲು ಸಿಕ್ಕಾಬಟ್ಟೆ ಭಯ ಹಾಗೂ ನಾಚಿಕೆಯಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ನಾವು ಎಸ್ಸಿಗಳೆಂಬುದಕ. ಆದರೆ ಆ ಊರಲ್ಲಿ ತುಂಬಾ ಒಳ್ಳೆಯ ಲಿಂಗಾಯತರೂ ಇದ್ದರು. ನನಗೆ ಒಳ್ಳೆಯ ಮಾನವೀಯ ಸ್ನೇಹಿತರು ಆ ಊರಲ್ಲಿ ಸಿಕ್ಕರು ಕೂಡ. ಆದರೆ ನನ್ನೂರಿನ ಭೋವಿಗಳಿಂದಾದ ಕಿರಿಕಿರಿಯ ಸನ್ನಿವೇಶಗಳೂ ಈ ಊರಲ್ಲಿ ಆಗಲಿಲ್ಲ. ಆದರೂ ಜಾತಿ ದೌರ್ಜನ್ಯ ತಣ್ಣಗೆ ಬುಸುಗುಟ್ಟುವ ಹಾವಿನಂತೆ ಊರುಗಳಲ್ಲಿ ಅಂದಿಗಿಂತಲೂ ಇಂದು ಜೋರಾಗಿಯೇ ಇದೆ ಎಂಬುದ್ದನ್ನು ಅಲ್ಲಗಳೆಯಲಿಕ್ಕಾಗದು..

3 thoughts on “ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ ಮತ್ತು ಭೋವಿಗಳ ಅಂದಿನ ಅಟ್ಟಹಾಸವೂ!”
  1. ನಿಮ್ಮ ಬದುಕಿನ ಕಥಾನಕಗಳನ್ನು ಓದುತಿದ್ದರೆ ನನಗೂ ನನ್ನ ಪ್ರಾಥಮಿಕ ಶಾಲೆಗಳ ಅನುಭವಗಳು ಕಣ್ಮುಂದೆ ಬಂದವು.
    ನಿಮಗೆ ತೋರಿದ ಪ್ರಶ್ನೆಗಳೇ ನನ್ನ ತಲೆಯಲ್ಲೂ ಸುಳಿಯುತ್ತಿದ್ದವು
    ಸ್ಪೃಶ್ಯ/ ಅಸ್ಪೃಶ್ಯ ಜಾತಿಗಳ ತಳಸ್ಪರ್ಶಿ ವಿವರಗಳು ನನ್ನ ನಿಜದ ಗ್ರಹಿಕೆಗೆ ಬಂದದ್ದೆ ಪಿ.ಯು.ಸಿ ನಂತರದ ದಿನಗಳಲ್ಲಿ.
    90 ದಶಕದ ವಿದ್ಯಾರ್ಥಿಗಳು ಇಂತಹ ಅನುಭವಗಳಿಗೆ ಎಡತಾಕಿ ಒಂದು ಛಾಲೆಂಜ್ ತೆಗೆದುಕೊಂಡು ಸಾಧನೆಯ ಕಡೆಗೆ ಮುಖಮಾಡಿ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ
    ಎರಡನೇಯದು ಇಂತಹದೇ ಜಾತಿ ಅನುಭವಗಳಿಗೆ ಪದೇ ಪದೇ ಓಳಗಾಗಿ ಕಲಿಯುವಿಕೆಯ ಸಹವಾಸವೇ ಬೇಡೆಂದು ಬೆನ್ನುತಿರುಗಿಸಿ ನಗಣ್ಯರಾಗುತ್ತ ಬದುಕಿನ ಕುದಿಗೆ ಸಿಲುಕಿ ಈಗಲೂ ಬೇಯುತ್ತಿದ್ದಾರೆ.
    – ಶಿವಶಂಕರ ಸೀಗೆಹಟ್ಟಿ.

Leave a Reply

Your email address will not be published. Required fields are marked *