ಹಿಂದೆ ಗರಿಮನೆಯ (ಗರಿಶೆಡ್ಡು) ಬಾಗಿಲ ಪಕ್ಕ ದೀಪಗಳನ್ನಿಡಲು ಗೂಡನ್ನು ಮಾಡುತ್ತಿದ್ದರು. ಇವುಗಳನ್ನು ದೀಪದ ಗೂಡು ಎನ್ನುವುದು ವಾಡಿಕೆ. ಬಹುಶಃ ಆಗ ಮನೆಕಟ್ಟಿಕೊಳ್ಳುವುದೆಂದರೆ, ಹೆಂಚಿನ ಮನೆಯಂದಷ್ಟೇ ಆಗಿತ್ತು. ಮಳೆಗಾಳಿಗೆ ಸುರಿಯದ ಒಂದು ಸೂರು ಮಾಡಿಕೊಳ್ಳುವುದೇ ಅಂದಿಗೆ ದೊಡ್ಡ ಚಾಲೆಂಜೇ ಆಗಿರುತ್ತಿತ್ತು. ಆಗ ಹೆಂಚಿನ ಮನೆ ಮತ್ತು ಗರಿಮನೆಗಳು ಅನ್ಕೂಲಸ್ಥರು, ಅನಾನೂಕೂಲಸ್ಥರು ಎಂದು ಜನರನ್ನು ವಿಂಗಡಿಸಲು ಮಾನದಂಡವಾಗಿದ್ದವು. ಆದರೆ ಗರಿ ಮನೇಲಿ ಮಾತ್ರ ಈ ತರದ ದೀಪದ ಗೂಡುಗಳಿರುತ್ತಿದ್ದವು.

ನಾನೂ ಈ ಗರಿಮನೆಯವನೆ. ಇವು ಹೆಂಗಿರ್‍ತಿದ್ದೊ ಅಂದ್ರೆ ಮನೆಯ ಎಡಬಲ ಮಣ್ಣು ಅಥವಾ ಇಟ್ಟಿಗೆಗಳಿಂದ ಆದ ಕುಳ್ಳಗಿನ ಗೋಡೆಗಳಿರ್ತಿದ್ದೊ. ಕೆಲವರ ಮನೆಗಳ ಗೋಡೆಗಳ ಒಳಮುಖ ಸುಣ್ಣ ಬಳ್ಕೊಂಡಿದ್ರೆ, ಹೊರಿಗಿನ ಗೋಡೆ ಮೈಗಳು ಹಂಗೆ ಇಟ್ಕೆ ಅಥ್ವಾ ಮಣ್ಣಿನಿಂದ ಸುಣ್ಣ ಕಾಣದೆಯೂ ಇರ್ತಿದ್ದೊ. ಈ ಮನೆಗಳ ಮುಂದೆ ಮತ್ತು ಹಿಂದೆ ಮಾತ್ರ ಗೋಡೆಗಳು ಎತ್ರವಾಗಿರ್‍ತದ್ದವು. ಉಳಿದಂತೆ ಮನೆ ನೆತ್ತಿಯಿಂದ ಎರಡು ಸೈಡು ಕುಳ್ಳಗಿನ ಗೋಡೆಗಳಾಗಿದ್ವು. ಇವು ಹೆಂಗೆ ಇದ್ದರೂ ಮೇಷ್ಟ್ರು ಸಿದ್ಧಲಿಂಗಯ್ಯನವರು ಕಾವ್ಯಾತ್ಮಕವಾಗಿ ಹೇಳಿದಂತೆ, ಆ ಗುಡಿಸಲ ಮನೆಗಳ ಆವರಣದಲ್ಲಿ ಗುಲಾಬಿಗಳಷ್ಟೇ ಅಲ್ಲದೆ, ಕನಕಾಂಬರ, ನೀಲಿಪಟ್ಕದ್ಹೂವ, ನಂದಿ ಬಟ್ಲೂವ್ವ. ದಾಸವಾಳ, ಕಾಮ ಕಸ್ತೂರಿ ಗಿಡಗಳು ಆ ಗರಿಮನೆಯ ಎಡಬಲದಲ್ಲಿ ಲೈನ್ಗೆ ನಿಂರ್ತಿದ್ದೊ.

ಸಾಂಧರ್ಭಿಕ ಚಿತ್ರ

ಈ ಗರಿಮನೆಗಳಿಗೆ ಮಳೆಗಾಲದಲ್ಲಿ ಸಿಕ್ಕಾಬಟ್ಟೆ ತಾಪತ್ರಯವೆ. ಆ ಸುರಿಯೋ ಗಾಳಿ ಮಳಗೆ ಎರಚಲು ಹೊಡೆಯೋದು, ಗಾಳಿ ಬರ್ರನೇ ಬೀಸಿದಾಗ ಇಡೀ ಮನೆ ಸೂರು ಹಾರಿಹೋಯ್ತದೆ ಅಂತ ಭಯದಲ್ಲಿ ಆಗ ನಮ್ಮಂಥವರು ಕಾಲ ಕಳೆದದ್ದಿದೆ. ನನಗೆ ಈಗಲೂ ನೆನಪಿದೆ ಒಮ್ಮೆ ಭಾರಿ ಮಳೆಗಾಳಿ, ಸಿಡ್ಲು ಗುಡ್ಗು. ಆಗ ಮನೆ ಕೊಚ್ಚಿ ಹೋಗುತ್ತದೆಂದೇ ಹೆದರಿ ನಾವು ಅವ್ವನ ಕಾಲ್ಬುಡವನ್ನು ತಬ್ಬಿದ್ದೆವು. ಅವ್ವ ಸೂರು ಹಾರಿ ಹೋಗದಂತೆ ಹಿಡಿದಿದ್ದಳು. ಆ ಸನ್ನಿವೇಶವನ್ನು ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ. ಹಂಗಿದ್ದಾಗ್ಲೂ ಮತ್ತೆ ಗಾಳಿ ಇಲ್ಲದೆ ಸುರಿವ ಮಳೆಯ ರಾತ್ರಿಗಳಲ್ಲಿ ಅದೇ ಗರಿಮನೇಲಿ ನಾವು ಬೆಚ್ಚಗೆ ಮಲಗಿರುವುದೂ ಇದೆ. ಇದು ಒಂತರ ಅವರ್ಣನೀಯ, ಯಾರೂ ಕಾಣದ ಸುಖ.

ಇಂತಹ ಏನೆಲ್ಲ ಕಷ್ಟ ಕಾರ್ಪಣ್ಯಗಳು ನಮಗೆ ಮಾಮೂಲು ಎನ್ನುವಂತಿದ್ದರೂ, ಬದುಕಿನ ಖುಷಿ, ಸಂತಸಗಳಿಗೇನೂ ಕೊರತೆ ಇರ್‍ತಿಲಿಲ್ಲ. ನಮ್ಮ ಗರಿಮನೆ ಅರ್ಧ ಆಡುಗಳ ಕೊಟ್ಗೆ, ಉಳಿದರ್ಧದಲ್ಲಿ ಮಲಗುವ ಜಾಗ ಮತ್ತೆ ಕೋಣೆ ಇರ್ತಿತ್ತು. ನಾವು ಅಡ್ಗೆ ಮನೇನ ಕೋಣೆ ಅಂತಿವಿ. ಈಗಲೂ ನನಗೆ ಕಿಚನ್ ಎನ್ನುವ ಬದಲು ಕೋಣೆನೆ ನಾಲ್ಗೆ ಮೇಲೆ ಸಡನ್ನಾಗಿ ಬಂದ್ಬಿಡುತ್ತೆ. ಇವೇನೆ ಇದ್ದರೂ ನನ್ನಂಥವರು ಖಂಡಿತ ನಮ್ಮ ಬಡತನವನ್ನು ಸಾಹಿತ್ಯಕವಾಗಿ ವೈಭವೀಕರಿಸಲಾರೆವು. ಆದರೆ ಕಷ್ಟಸುಖದ ಆ ಮನೆಗಳು ನಮ್ಮನ್ನು ಮನುಷ್ಯರನ್ನಾಗಿಸಿವೆ. ಇದನ್ನು ಗರ್ವದಿಂದ ಹೇಳಿಕೊಳ್ಳಲು ಖಂಡಿತ ಹಿಂಜರಿಯಲಾರೆವು.

ಅದರಲ್ಲೂ ದೀಪಾವಳಿ ಬಂದಾಂಗ, ನಾವೇನೂ ಈಗಿನಂತೆ ಆ ಹಬ್ಬ ಮಾಡ್ತಿರ್ಲಿಲ್ಲ. ಆದರೆ ಅವ್ವನಂಥವರ ಶ್ರದ್ಧೆಯ ಲೋಕ ಬೆರೆತರದಲ್ಲಿ ಜೀವಿಸುತ್ತಿತ್ತು. ಈ ದೀಪಾವಳಿನ ದೀವ್ಳಿಗೆ ಅಂತ ಕರಿಯೋರು. ಆ ಹೊತ್ತಲ್ಲಿ ಗರಿಮನೆಗಳ ಹೊಸ್ತಿಲು, ಹಾಗೂ ದೀಪದ ಗೂಡುಗಳಲ್ಲಿನ ಮಿಣು ಮಿಣುಕಿನ ಮಂದ್ರ ಬೆಳಕಿನ ದೀಪಗಳು, ಮನೆ ಮುಂದಿನ ರಂಗೋಲಿ ಇವೆಲ್ಲವೂ ಒಂತರ ಇವೇ ನಮಗೆ ಸಿರಿಯಾಗಿದ್ದವು. ಏನೋ ಒಂತರ ಅಮೂರ್ತ ಖುಷಿ. ನಮಗಾಗ ಪಟಾಕಿ ಹೊಡೆಯೋದು ತೀರಾ ಇರಲಿಲ್ಲವಾದರೂ, ಪಟಾಕಿಗಿಂತಲೂ ನಮ್ಗೆ ಇವುಗಳೇ ನಮಗೆ ಮುಖ್ಯ ಆಕರ್ಷಣೆಯಾಗ್ತಿದ್ದವು. ಗರಿಮನೆಯ ಮನೆಗೂಡ ದೀಪ ಹಾಗೂ ರಂಗೋಲಿ ನಮಗೂ ಏನೋ ಬೌತ್ತಿಕ ಸೌಕರ್ಯದ ಸಂಭ್ರಮಗಳಿಲ್ಲದಿದ್ದರೂ, ಅವ್ವನಂಥವರ ಶ್ರದ್ಧೆ ಏನೋ ನಮಗೂ ಈ ದೀವಳಿಗೆಗೂ ಹೊಸ ನಂಟನ್ನು ಕನೆಕ್ಟ್ ಮಾಡುತ್ತಿತ್ತು. ನೀಲಗಾರರು ಆದಿ ಜ್ಯೋತಿ, ಬೀದಿ ಜ್ಯೋತಿ, ಪರಂಜ್ಯೋತಿ ಅಂತ ಪದ ಹಾಡುತ್ತಿದ್ದುದು, ಇವೆಲ್ಲವೂ ಏನೋ ಆ ಮುಗ್ಧವಯಸ್ಸಿನ ನನ್ನಂಥವರಲ್ಲಿ ಬೇರೆಯದೇ ಆದ ಆಸಕ್ತಿ ಹಾಗೂ ಶ್ರದ್ಧೆಯೆಡೆಗೆ ಚಿತ್ತ ಹೊರಳುವಂತೆ ಮಾಡುತ್ತಿದ್ದವು.

ಅರಿವೇ ಕಂಡಾಯ – 6ನೇ ಭಾಗ : ಜಾತಿಮೀರಿದ ಕ್ರಿಕೆಟ್ ತಂಡವೂ, ಬೀಫ್ ಕಬಾಬು

ಒಂದು ವಿಚಾರ ಹೇಳಲೇಬೇಕು. ಅದು ಈ ರಂಗೋಲೆ ಪುಡಿ ಮಾಡೋದ್ನ. ಅವ್ವನ ತರದವರು ರಂಗೋಲೆ ಕಲ್ಲ ಹುಡುಕಿಕೊಂಡು ಹೋಗೋರು. ಅದೂ ರೈಲ್ವೆ ರೋಡಿನ ಕಡೆಗೆ. ಸುಮಾರು ಒಂದೆರಡು ಕಿಲೋಮಿಟ್ರು ನಡೆಯೋರು ಅನ್ನಿಸ್ತಿತ್ತು. ಅಲ್ಲಿ ರಂಗೋಲೆ ಕಲ್ಲ ಹುಡ್ಕಿ, ಕೈ ಆರೇಕೋಲಲ್ಲಿ ಮೀಟಿ, ಆ ಕಲುಗಳನ್ನು, ಪುಡಿಯನ್ನು ತಪ್ಲೆಗೆ ತುಂಬ್ಕೊಂಡು ಹೊತ್ಕೊಂದು ಬರೋರು. ಆಮೇಲೆ ಅದನ್ನು ಪುಡಿ ಮಾಡಿ ಒಣ್ಗಾಕಿ, ಜರಡಿ ಹಿಡ್ದೊ ರಂಗೋಲೆ ಪುಡಿ ಮಾಡ್ಕೊಳ್ತಿದ್ರು. ಈ ಪಾಡ್ ಪಟ್ಟು ಕಲ್ಲರಳಿಸಿ ಹೂವಾಗಿಸುತ್ತಿದ್ದ ಅವ್ವನಂಥಹ ಅಸಂಖ್ಯ ಹೆಣ್ಣುಮಕ್ಕಳ ಈ ಶ್ರದ್ಧೆ, ಕೌಶಲ್ಯಗಳಿಂದಾಗಿಯೇ ಮನೆಮುಂದೆ ರಂಗೋಲಿ ಹಾಗೂ ದೀಪದ ಗೂಡುಗಳಲ್ಲಿ ಬೆಳಕು ಮಂದ್ರವಾಗಿ ಹರಡಿ ಆ ಗರಿಮನೆಗಳು ಶೋಭಿಸುತ್ತಿದ್ದವು.

ಕತ್ತಾಲೆ ಬೆಳದಿಂಗಳೊಳಗ ಎಂಬ ಕವಿ ಕಲ್ಪನೆಗಳು ನಮಗೆ ಅನುಭವದಿಂದಲೇ ವೇದ್ಯವಾಗಿದ್ದವು. ನಾವೇನೂ ಕೃತಕ ಕವಿಸಮಯಗಳಲ್ಲಿ ರೋಮಾಂಚನ ಅನುಭವಿಸಿದವರಲ್ಲ ಈ ವಿಚಾರಗಳಲ್ಲಿ ಎಂಬುದೇ ನನ್ನಂಥವರ ಹೆಚ್ಚುಗಾರಿಕೆ. ಅದರಲ್ಲೂ ಈ ಗರಿಮನೆಗಳೂ ದುಡಿಯೋ ತಾವು, ದನಕುರಿ ಮೇಯ್ಸೊ ತಾವು, ಸೌದೆ ಸೊಪ್ಪು ತರೋದಿಕ್ಕೆ ಹೋದ್ಕಡೆಯೆಲ್ಲಾ ಒಂದೇ ಬಳಗದಂತೆ ಇರಲು ಕಾರಣವಾಗುತ್ತಿದ್ದೇವೆನೊ. ಈ ಕಷ್ಟಕಾರ್ಪಣ್ಯಗಳು ಏನೇ ಇದ್ದರೂ, ಇವು ಕೆಲವು ಕ್ಷಣಗಳಾದರೂ ಗಡಿಮೀರಿ ಅಯ್ಯೋ ಎಲ್ಲರದು ಇದೇ ಪಾಡು ತಾನೆ ಬಾಪ್ಪ, ಬಾವ್ವೊ ಎನ್ನುವಂತಹ ಜೀವನ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದೆವೇನೊ. ಕಣ್ಣಾರೆ ಈ ಹೀಗೆ ಮಾತಾಡಿರುವವರನ್ನು ನಾನು ಸ್ವತಃ ನೋಡಿದ್ದಿದೆ.

ಮಳೆರಾಯನ ಹೊರುವ ಆಚರಣೆಯ ಚಿತ್ರ

ಈ ಸಂದರ್ಭಗಳು ಒಂದು ಸಾಮರಸ್ಯದ ಭ್ರಾಂತಿಯನ್ನು ಕ್ಷಣಕಾಲವಾದರೂ ನಮ್ಮಲ್ಲಿ ಉಳಿಸಿ ಹೋಗಿವೆ ಎಂಬುದ್ದನ್ನು ನಾವು ಒಪ್ಪಿಕೊಳ್ಳಲೇಬೇಕು. ಅದರಲ್ಲೂ ಈ ಮಳೆ ಬರ್‍ದೆ ದಿನಗಳಲ್ಲಿ ಊರಲ್ಲಿ ಮಳೆರಾಯನ್ನ ಮಾಡೋದಿತ್ತಲ್ಲ ಅದು ಅತ್ಯದ್ಭುತ. ಎಲ್ಲರ ಮನೆಯ ನೀರು ಮಳೆರಾಯ ಮತ್ತು ಆತನನ್ನು ಹೊತ್ತವನನ್ನು ನೆನೆಸುತ್ತಿತ್ತು. ಜನಗಳಿಗೂ ಒಂದು ಸಣ್ಣ ಸಾಮಾಜಿಕ ಸತ್ಯದ ಲಾಜಿಕ್ ಇರುತ್ತೆ ಅನ್ನೋನು ನಾನು. ಏಕೆಂದರೆ ಇವ್ರೂ ಈ ಜಾತಿ ಗೀತಿ ಬಗ್ಗೆ ಒಂದು ಸಣ್ಣ ಡೌಟ್ನ ಇಟ್ಕೊಂಡಿರ್ತರೆ ಅನ್ನೋದ್ದನ್ನು ತೆಗ್ದುಹಾಕೋಕ್ಕಾಗಲ್ಲ. ಏನ್ ಮಾಡೋದು ಅದು ಅವರ ಅಸಹಾಯಕತೆ ಕೂಡ. ಮತ್ತೆ ತಮ್ಮ ಜಾತಿ ವಿರೋಧವನ್ನು ತಾವೇ ಹೊರ ಹಾಕಬಾರದ್ದಲ್ಲ. ಅದು ಅವರನ್ನು ಕಾಡುತ್ತೆ. ಕುಲ ಮೀರ್‍ದ ಮನ್ಸ, ವನ ಮೀರಿದ ಪಕ್ಷಿ ಬಾಳೋಕ್ಕಾಗುತ್ತಾ ಎಂಬ ಕತೆಗಳು ಜನರನ್ನು ಹೆದ್ರುಸ್ಬಿಡ್ತವೆಯಷ್ಟೆ. ಎಷ್ಟೋ ಸಲ ನನ್ನ ಬಳಿ ಕೆಲವರು ತಮ್ಮ ಬಡತನ ಕಾರಣಕ್ಕೇನೊ, ಮತ್ತೆ ತಮಗೆ ತಮ್ಮ ಜಾತಿಯಿಂದ ಏನೂ ಪ್ರಯೋಜನವಾಗಿಲ್ಲ ಎಂಬುದ್ದನ್ನು ಸ್ವಯಂ ಅರ್‍ತಕೊಂಡೊ ಏನೊ, ಅಯ್ಯೋ ಬಾಪ್ಪ ಹೆಣ್ಣು ಗಂಡು ಎರಡೇ ಜಾತಿ ಎಂದು ಬಹಳ ನಮ್ರತೆಯಿಂದ ಮಾತಾಡುತ್ತಿದ್ದರು.

ಕೆಲವೊಮ್ಮೆ ಸಂಜೆ ಹೊತ್ತಾಯ್ತು ಅಂದ್ರೆ ಮನೇ ದೀಪ ಹಚ್ಚಲು, ಅಥವಾ ಒಲೆ ಹಚ್ಚಲು ಬೆಂಕಿಪಟ್ಣ ಇಲ್ದೆ ಇದ್ದಾಗ, ಜನ ಇವುಗಳನ್ನು ಬಗೆಹರಸಿಕೊರ್ಳಳುತ್ತಿದ್ದ ಸನ್ನಿವೇಶಗಳನ್ನು ಕೇಳುದ್ರ, ಇವು ತುಂಬಾನೆ ಮಹಾನ್ ಸೋಜಿಗ ಹುಟ್ಟಿಸ್ತವೆ. ಕೆಲವರು ಅವ್ರ ಮನೆ ದೀಪ ತಂದು ಉರಿತಾಯ್ರೊ ಬೇರೆ ಮನೆಯವ್ರ ದೀಪ್ದಲ್ಲಿ ಹಚ್ಕೊಂಡು ಹೋಗೋರು, ಮತ್ತೆ ಕೆಲವ್ರು ಬೇರೆಯವರ ಮನೆಯ ಒಲೆಕೆಂಡ ತಕೊಂಡೋಗಿ, ತಮ್ಮ ಮನೆ ಒಲೆ ಹಚ್ಕೊಳ್ಳೋರು. ಕೆಲವ್ರು ಜಾತಿ ಕಾರ್‍ಣಕ್ಕೆ ಬತ್ತೀರ್‍ಲಿಲ್ಲ. ಮತ್ತೆ ಕೆಲವ್ರು ಅಯ್ಯೋ ಜಾತಿ ನೆಚ್ಕೊಂಡ್ರೆ ಮನೇಲಿ ದೀಪ ಹಚ್ಚೋಕ್ಕಾದದ್ದೆ ಅಂತ ಯಾವ ದಾಕ್ಷಿಣ್ಯಕ್ಕೂ ಒಳಗಾಗದೆ ದೀಪ ಹಚ್ಕೊಂಡೋಗೋರು.

ನಮ್ಮ ವಾಟ್ಸಾಪ್‌ ಚಾನಲ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

ಅಕ್ಕೊ ಒಂದ್ಕುಪ್ಪಿ ಎಣ್ಣೆ ಬಿಡು, ಒಂದ್ ಬಟ್ಲು ಅಸೀಟ್, ಒಂದೆರ್‍ಡು ಕಡ್ಡಿ ಕೊಡಕ್ಕ ಎಂದು ತಮ್ಮೊಳಗೆ ತಾವು ಸೋಷಿಯಲ್ ಟ್ರಾಂಜಾಕ್ಷನನ್ನು ನಿರ್ಭಿತಿಯಿಂದ ಮಾಡುತ್ತಿದ್ದ ಆ ದಿನಗಳನ್ನು ಕಣ್ಣಾರೆ ಕಂಡು ಬೆಳೆದವನು ನಾನು. ಇವು ಕೇವಲ ಒಡಲಕಳವಳ ಕಳೆವುದಕ್ಕಾಗಿ, ಮಕ್ಳುಮರಿಗಳದ್ದು ಹೊಟ್ಟೆಬಟ್ಟೆ ಕಟ್ಟೋದಕ್ಕೆ ನಾವು ಸಡನ್ನಾಗಿ ಅರ್ಥಮಾಡ್ಕೊಂಡ್ರೆ ಖಂಡಿತ ಈ ಗುಡಿಸಲ ಬದುಕಿನ ಜೀವಗಳ ಬದುಕಿನ ದೃಷ್ಟಿ ಖಂಡಿತ ಅರ್ಥವಾಗದು. ಇಲ್ಲಿನ ಮಾನವೀಯತೆಗೆ ಬೇರ ಮಗ್ಗಲುಗಳಿವೆ. ಜಾತಿ ಮೀರುವ ಸಡಿಲ ಉಲ್ಲಂಘನೆಗಳು ಇವಾಗಿದ್ದವು. ಆದ್ದರಿಂದ ಈ ಮೂವ್ಮೆಂಟ್ಗಳನ್ನು ಅನಿವಾರ್ಯತೆಗಳಿಗಾಗಿ ಜಾತಿ ಮ್ಯೂಟ್ ಮಾಡೋದು ಎಂದು ಅಂದಾಜಿಸಬಾರದು. ಇದು ಆಧುನಿಕ ಜ್ಞಾನದ ಅಹಂಕಾರವೂ ಆಗಬಹುದು. ಬದುಕು ನಡೆಯಬೇಕೆಂಬ ಚಲನೆಯ ಹಂಬಲಗಳು ಈ ಗರಿಮನೆಗಳ ಜೀವಗಳಲ್ಲಿ ಮೈದಾಳುತ್ತಿದ್ದವು. ತಮ್ಮ ತಮ್ಮ ತಾಪತ್ರೆಗಳನ್ನು ನೀಗಿಸುವ ಪರಿ, ಕೇವಲ ಹೊಂದಾಣಿಕೆಗಳಿಗಿಂತಲೂ, ಈ ಜನ ಕೂಡ ಒಂದು ತರ್ಕ ಮಾಡಿ ತಮ್ಮ ಸ್ಥಿತಿಗತಿಗಳ ಹಿಂದಣ ಮುಂದಣವನ್ನು ಪರೀಕ್ಷಿಸುತ್ತಿದ್ದರು. ಆದರೆ ಇದು ಸಾಮಾಜಿಕ ಪ್ರಜ್ಞೆ ಮತ್ತು ಜ್ಞಾನವಾಗಿ ಹರಡದಿದ್ದರೂ, ಪ್ರತಿ ಮನುಷ್ಯರ ಮರ್ಯಾದೆಯ ಬಗ್ಗೆ ಎದೆಗೂಡಲ್ಲಿ ಒಂದು ಸಣ್ಣ ಬೆಳಕಾಗಿಯಾದರೂ ಆಗೊಮ್ಮೆ ಈಗೊಮ್ಮೆ ಮಿಂಚಾಗ್ತದಲ್ಲ ಎಂಬುದ್ದನ್ನು ನಾವು ಮರೆಯಬಾರದು.

ಹಳ್ಳಿಗಳನ್ನು ಜಾತಿ ಅವಮಾನದ ಆಚೆಗೂ ನೋಡುವ ವಿಚಾರ ಸರಿಯೇ ಆದರೂ, ಈಗ ಇವುಗಳು ತುಂಬಾ ಹದಗೆಟ್ಟಿ ಹೋಗಿವೆ ಎಂದೇ ಹೇಳಬಹದು. ನನ್ನ ಗರಿಮನೆಯ ಬಾಲ್ಯದ ಅನುಭವಗಳು ಹಳಹಳಿಕೆಗಳ ತರ ಎಂದುಕೊಂಡರೂ, ಈಗ ಹಗಲನ್ನೇ ಮುಕ್ಕುವ ಮಿರಿಮಿರಿಯ ಕಣ್ಣ ದೃಷ್ಟಿಯನ್ನೇ ನುಂಗುವ ಈ ವಿಪರೀತವಾದ ಇಂದಿನ ಬೆಳಕಿನ ಲೋಕದಲ್ಲಿ ಮನುಷ್ಯರಾದ ನಾವು ಹೃದಯಹೀನ ಜನಾಂಗಗಳಾಗಲು ಹೊರಟಂತಿದೆ. ಆದರೆ ನಮ್ಮ ಪೂರ್ವಿಕರಾದ ನೀಲಗಾರರು ಬೆಳಕಿನ ಹುಳ ಕಲ್ಪನೆಯನ್ನು ಕೊಟ್ಟಿದ್ದಾರೆ. ಇಂತಹ ಕಾವ್ಯ ಹಾಗೂ ಮಾನುಷತನದ ಲೋಕ ಒಡಮೂಡಿದ್ದೆ ಈ ಗರಿಮನೆಗಳ ಮನಸ್ಸುಗಳಲ್ಲಿ. ಹಾಗಾಗಿ ಅವ್ವಂದಿರ ದೀಪದ ಗೂಡಗಳ ಆ ಬೆಳಕು ಭಿನ್ನಬೇದ ಎಸಗದ ಪರಂಜ್ಯೋತಿ ಪರಂಪರೆಯದ್ದು ಎಂದು ನಾನು ಖಚಿತವಾಗಿ ನಂಬುತ್ತೇನೆ. ಅವ್ವನಂಥವರು ಇಡುತ್ತಿದ್ದ ಆ ದೀಪದ ಗೂಡುಗಳ ಬೆಳಕಲ್ಲಿ ಸತ್ಯ ಮತ್ತು ಬದುಕನ್ನು ನಿಯ್ಯತ್ತಿಂದ ಎದುರಿಸುವ ನಮ್ರ ಹಂಬಲಗಳಿದ್ದವು.

ಈಗ ಮಗಳು ಮನೆಯಲ್ಲಿ ಆಗೊಮ್ಮೆ ಈಗೊಮ್ಮೆ ಹಚ್ಚುವ ಬುದ್ದನೆದುರಿನ ದೀಪವನ್ನು ತದೇಕ ಚಿತ್ತದಿಂದ ನೋಡಿದರೂ ನನಗೆ ಅಸಮಾಧಾನ, ಅಶಾಂತತೆಯೇ ಕಾಡುತ್ತಿರುತ್ತದೆ. ಆದರೆ ಅವಳು ಇದು ಅವ್ವನ ದೀಪ ಎಂದಾಗ ನನ್ನೊಳಗೆ ಶಾಂತತೆ ಮೂಡುತ್ತದೆ. ಸಿರಿಗರ ಇಲ್ಲದ ಅವ್ವನಂಥವರ ದೀಪದ ಗೂಡುಗಳ ಬೆಳಕನ್ನು ಧ್ಯಾನಿಸುತ್ತ ಕೂತರೆ, ನಾನು ಈಗ ಕೇವಲ ಕುಬ್ಜನಾದ ಹಾಗೆ ಭಾಸವಾಗುತ್ತದೆ. ದೀಪದಡಿಯ ಕತ್ತಲು ಎಂಬಂತೆ ನನ್ನಂಥವರ ವಿರೋಧಾಭಾಸಗಳು. ಏನೇ ಆದರೂ ಒಮ್ಮೊಮ್ಮೆ ಈ ಪದವನ್ನು ಗಟ್ಟಿಯಾಗಿ ಹಾಡಿಬಿಡುತ್ತೇನೆ ಅವ್ವನನ್ನು ನೆನೆಯುತ್ತಾ…

ಮಣ್ಣಲ್ಲಿ ಹುಟ್ಟಿದ್ದೆ, ಮಣ್ಣಲ್ಲಿ ಬೆಳೆದಿದ್ದೆ, ಎಣ್ಣೇಲಿ ಕಣ್ಣ ಬಿಟ್ಟಿದ್ದೆ ಜಗಜ್ಯೋತಿ ನೀನು ಸತ್ಯದಿಂದ ಉರಿಯೇ ಪರಂಜ್ಯೋತಿ..

Leave a Reply

Your email address will not be published. Required fields are marked *