ಅರ್ಚಕರಳ್ಳಿಯ ಜಾತಿವಂತರೆಂದು ಗರ್ವಪಡುತ್ತಿದ್ದ ಲಿಂಗಾಯತರೆದುರು ನಮ್ಮ ತಾತನ ಅಪ್ಪ, ಬೆಟ್ಟಪ್ಪ ರಾಜಾರೋಷವಾಗಿ ಮೀಸೆ ತಿರುಗುಸುತ್ತಿದ್ದ ರೀತಿ, ಏಯ್ ಬೆಟ್ಟ ಕಳ್ಬೆಟ್ಟ ಬಂದ ನೋಡ್ರೋ ಎಂದು ನಮ್ಮ ಮುತ್ತಾತನನ್ನು ಕಂಡು ಹೆದುರುತ್ತಿದ್ದ, ಆ ಹೊತ್ತಿನ ಸನ್ನಿವೇಶಗಳನ್ನು ಕತೆಯಂತೆ ಹೇಳುತ್ತಿದ್ದ ದಿನಗಳನ್ನು ನೆನೆದರೆ ನನ್ನ ಮೈ ಜುಂ ಎನ್ನುತ್ತಿತ್ತು. ಅಲ್ಲದೆ ಈ ಫ್ಯೂಢಲ್ ಜಾತಿಗಳನ್ನು ನಮ್ಮ ಪೂರ್ವಜರು ಹೀಗೆಲ್ಲ ಎದುರಿಸಿದ್ದಾರಲ್ಲ ಎಂಬ ಹೆಮ್ಮೆ ಮೂಡುತ್ತಿತ್ತು. ಅಥವಾ ಈ ಜಾತಿ ಹಾಗೂ ಅದು ಸೃಷ್ಟಿಸಿದ ಬಡತನ ನಡುವೆಯೂ ನಾವು ಯಾರಿಗೂ ತಲೆಬಾಗುವವರಲ್ಲ ಎಂಬುದ್ದನ್ನು ತಿಳಿಸಲು ನಮ್ಮಜ್ಜಿ, ಅವ್ವ , ಮಾವಂದಿರು ಹೀಗೆ ತಿಳಿಸುತ್ತಿದ್ದರೇನೊ. ಹಾಗೆಯೇ ಈ ನೆನಪುಗಳನ್ನು ಕತೆಗಳಂತೆ ಅವರು ಹೇಳುತ್ತಿದ್ದ ಪರಿಯಲ್ಲಿಯೇ ಮುಂದೆ ನಾವು ಸ್ವಾಭಿಮಾನದಿಂದ ಬದುಕಬೇಕು ಅನ್ನೋದ್ದನ್ನೂ ಸೂಚಿಸುತ್ತಿದ್ದರೇನೊ. ಅಥವಾ ಈ ಜಾತಿ ವಿರುದ್ಧ ತಮ್ಮ ಕೋಪ ಹಾಗೂ ಆಕ್ರೋಶವನ್ನು ಹೀಗೆ ವ್ಯಕ್ತಪಡಿಸುತ್ತಿದ್ದರೇನೊ. ಮೇಲಾಗಿ ಆ ಹೊತ್ತಲ್ಲಿ ಇವು ನಮಗೆ ನಮ್ಮದೇ ಫ್ಯಾಂಟಸಿಯ ಕತೆಗಳಂತೆಯೇ ಭಾಸವಾಗುತ್ತಿದ್ದವು ಕೂಡ. ಮತ್ತೆ ಈ ನೆನಪುಗಳು ನಮ್ಮನ್ನು ತಣಿಸುತ್ತಿದ್ದ ರೀತಿಯ ಜೊತೆಗೆ ನಾವು ನಮ್ಮದೇ ಲೋಕವನ್ನು ಭಾವಿಸುವಂತೆಯೂ ಮಾಡುತ್ತಿದ್ದವು.

ನಮ್ಮ ಅವ್ವನ ಅಪ್ಪ ಒಂತರ ಮರ್ಯಾದೆಯ ಮನುಷ್ಯ. ರೈಲ್ವೇ ಗ್ಯಾಂಗ್ ಮ್ಯಾನ್ ಆಗಿದ್ದವ. ಹೆಸರು ಚೆನ್ನಯ್ಯ ಅಂತ. ಅವ್ವನಿಗೆ ತನ್ನ ಅಪ್ಪ ಚೆನ್ನಯ್ಯನ ಗುಣಂಗಳು ಬಂದಿದ್ದವು ಎಂದು ಅವಳ ವ್ಯಕ್ತಿತ್ವದ ಬಗ್ಗೆ ಮಾತಾಡುವವರೆಲ್ಲ ಹೇಳುತ್ತಿದ್ದುದ್ದನ್ನು ನಾನೇ ಕೇಳಿಸಿಕೊಂಡಿರುವೆ. ಮತ್ತೆ ಚನ್ನಪಟ್ಟಣದ ಕೊಡಂಬಳ್ಳಿ ಇರೋ ಚನ್ನಯ್ಯನ ಬೆಟ್ಟವನ್ನು ನೋಡಿದಾಗಲೆಲ್ಲ ನಮ್ಮ ತಾತ ಹೀಗೆ ಇದ್ದನೊ ಎಂದು ತುಂಬಾ ಸಲ ಅಂದುಕೊಂಡು ಆ ಗದ್ದುಗೆಗೆ ನಾನು ಸುತ್ತು ಹಾಕಿದ್ದು ಇದೆ. ಈತ ಒಕ್ಕಲಿಗರ ಮನೆಯಲ್ಲಿ ಜೀತಗಾರನಂತಿದ್ದ. ಈ ಸಂತ ಚನ್ನಯ್ಯ ಹೊಲ ಉಳಲು ಹೋದಾಗ ಎತ್ತುಗಳು ತಮ್ಮಷ್ಟಕ್ಕೆ ತಾವೇ ಹೊಲ ಉಳುತ್ತಿದ್ದವಂತೆ. ಇದನ್ನು ಕಂಡ ಮೇಲು ಜಾತಿಯವರು ಈತ ಯಾರೋ ಮಹಾಮಹಿಮ ಎಂದ ಕತೆಗಳು, ಪ್ರತೀತಿಗಳು ಮಂಟೇಸ್ವಾಮಿ ಪರಂಪರೆಯ ಮತ್ತೊಂದು ಮಗ್ಗಲಾಗಿ ಬರುತ್ತದೆ. ಈ ಚನ್ನಪ್ಪಾಜಿಯ ಬೆಟ್ಟ, ಚೆನ್ನಜ್ಜ, ಅವ್ವನ ಅಪ್ಪ ಚೆನ್ನಯ್ಯ ಈ ಎಲ್ಲರೂ ಕಾಲದೊಡಲಲ್ಲಿ ಈ ಜಾತಿ ವಿರುದ್ಧ ತಣ್ಣಗೆ ಸಂಘರ್ಷ ಸಾರಿದ ನಮ್ಮ ಪೂರ್ವಿಕರೇ ಇರಬೇಕೆಂದು ತುಂಬಾ ಸಲ ನನ್ನ ಸಾಹಿತ್ಯ, ಚರಿತ್ರೆ ಹಾಗೂ ಸಂಸ್ಕೃತಿ ಬಗ್ಗೆ ಯೋಚಿಸುವಾಗಲೆಲ್ಲ ಕಾಡುತ್ತಿರುತ್ತದೆ.

ಕನ್ನಡದ ದೊಡ್ಡ ಶಿವಕವಿ ನಮ್ಮ ಹರಿಹರನ ರಗಳೆಗಳ ಲೋಕದ ತುಂಬೆಲ್ಲ ಶಿವನ ಮೆಚ್ಚುಗೆ ಪಡೆದು, ಘನಭಕ್ತರಾದವರೆಲ್ಲರೂ ನಮ್ಮ ಅಜ್ಜಿ ಮತ್ತು ತಾತನ ಲೋಕದ ಆದಿಮ ಪೂರ್ವಜರೇ ಆಗಿದ್ದಾರೆಂಬುದೇ ಹರಿಹರನ ಬಗ್ಗೆ ನಮ್ಮಲ್ಲಿ ಪ್ರೀತಿ ಮತ್ತು ಅಭಿಮಾನ ಹೆಚ್ಚಾಗುವಂತೆ ಮಾಡಿದೆ. ಉರಿಕಂಡಾಯದ ಕಲ್ಪನೆಯೇ ಈ ಬಗೆಯ ಒಂದು ಜನಾಂಗದ ನೈತಿಕ ಪ್ರಖರತೆಯ ಆದಿಮತೆಯನ್ನೇ ಒತ್ತಿ ಹೇಳುತ್ತಿದೆ. ಇದು ಅರಿವೂ ಹೌದು ಆಯುಧವೂ ಹೌದು. ಇದು ನಮ್ಮ ಬದುಕು ಹಾಗೂ ಇದನ್ನು ಅವಮಾನಿಸುವ ಜಗತ್ತನ್ನು ಮೀರಿ ನಾವು ಕಲ್ಪನಾಶೀಲರಾಗಲು ಈ ತರದ ನೆನಪುಗಳು ನಮಗೆ ಅರಿವಿಲ್ಲದೆ ನಮ್ಮನ್ನು ಪೋಷಿಸುತ್ತಿರುತ್ತವೆ. ಕಲ್ಪನಾಶೀಲತೆಯು ಮನುಷ್ಯರ ಅಗಾಧವಾದ ಸ್ವಾತಂತ್ರ್ಯ ಮತ್ತು ಸಾಹಸಶಿಲತೆಯ ಧ್ಯೋತಕವಾಗಿರುತ್ತದೆ. ಹಾಗಾಗಿ ನಮ್ಮ ಹಿರಿಯರ ಲೋಕ ಜಾತಿ ಅವಮಾನದ ವಿರುದ್ಧ ತನ್ನ ಕಲ್ಪನಾಶೀಲತೆಯ ಮೂಲಕವೇ ತಮ್ಮದೇ ಲೋಕಸೃಷ್ಟಿಯ ಚರಿತ್ರೆಯನ್ನು ಹೆಣೆದುಕೊಂಡು ಬಂದಿದೆ.

ಜಗತ್ತು ಕತ್ತಲಿಂದ ಆವರಿಸಿದಾಗ ಸೃಷ್ಟಿಯನ್ನು ಬೆಳಕಿಗೆ ತಂದು, ಧರೆ ತಂದವರು ನಮ್ಮ ಪೂರ್ವಿಕರು ಎಂಬುದು ನಮ್ಮ ಸಾಂಸ್ಕೃತಿಕ ಸ್ಮೃತಿ ಹೊಸ ಎನರ್ಜಿ ಎನ್ನಬಹುದು. ಧರೆ ತಂದಯ್ಯನ ಮಕ್ಕಳು ಏಕೆ ಜಾತಿ ಬಾಹಿರಾದದು ಎಂಬ ಪ್ರಶ್ನೆಗಳಡಿಯಲ್ಲಿ, ನಾವು ಚರಿತ್ರೆಯನ್ನು ಅಗೆಯುವ ಅಗತ್ಯವಿದೆ. ಹೀಗೆಲ್ಲ ಯೋಚಿಸುವಾಗ ಮಹಾಲಯ ಅಮವಾಸೆ, ಹಿರಿಯರ ಪೂಜೆಯ ದಿನ ಅಪ್ಪ, ಅವ್ವಂದಿರು ತಮ್ಮ ಹಿರೀಕರಿಗೆ ಧೂಪ ಹಾಕುವ ಆಚರಣೆಗಳು ನಿಜಕ್ಕೂ ನಮ್ಮದೇ ನೆನಪಿನ ಲೋಕದ ಸ್ಮೃತಿ ಪರಂಪರೆಯನ್ನು ತೆರೆಯುತ್ತವೆ. ಆದ್ದರಿಂದ ಅಪ್ಪ ಅವ್ವನ ಲೋಕದ ಹಿರಿಯರು ಈಗ ನಮಗೆ ರೂಕ್ಷವಾಗಿ ಕಾಣುವಂತೆ ಮಾಡಿದ ಈ ಬಗೆಯ ಆಧುನಿಕ ಜ್ಞಾನದ ಬಗ್ಗೆ ನಾವು ವಿಮರ್ಶೆ ಇಟ್ಟುಕೊಳ್ಳಬೇಕಿದೆ. ಚಾಂಡಾಲ ಭೈರವ ಶಂಕರನನ್ನು ಎದುರಾಗುವ ಚರಿತ್ರೆಯ ನೆನಪು ಅಸ್ಪೃಶ್ಯರ ಅಜ್ಞಾತ ಲೋಕದ ತತ್ವ ಪರಂಪರೆಯ ವಿಶಿಷ್ಟತೆ ಬಗ್ಗೆ ಮಾತಾಡುತ್ತದೆ. ಇಡೀ ಭಾರತವೇ ಮಾದಿಗ ಭಾರತ ಎಂಬುದರ ಬಗ್ಗೆ ಆಳವಾದ ಅಧ್ಯಯನ ಮಾಡುವ ಅಗತ್ಯವಿದೆ. ನನಗಂತೂ ಈ ಆಧುನಿಕ ಅಕ್ಷರಸ್ಥ ದಲಿತನ ಪ್ರತಿಭಾ ಶಕ್ತಿಗೂ ಮೀರಿ ನಮ್ಮ ಅನಾಧುನಿಕ ಹಿರಿಯರ ಲೋಕ ಸೃಷ್ಟಿಸಿರುವ ಮೌಖಿಕ ಜಗತ್ತು ಪ್ರಖರವಾಗಿ ಕಾಣುತ್ತಿದೆ. ನಾಯಿಗೆ ಲಿಂಗ, ಕೊತ್ತಿಗೆ ಲಿಂಗ, ನರೀಗೆ ಲಿಂಗ ಎಂಬ ವೀರಶೈವದ ಲಿಂಗ ಪ್ರಮಾಣವನ್ನೇ ಭಂಜಿಸಿದ ಅನಕ್ಷರಸ್ಥ ಲೋಕದ ನೀಲಗಾರರ ಹಿಂದೆ, ಯಾವ ಜಾತಿ ವಿರೋಧದ ಸಂಘರ್ಷ ಹಾಗೂ ನ್ಯಾಯತತ್ವಗಳಿದ್ದವು. ಈ ವಿಚಾರಗಳು ಎಲ್ಲಿಂದ ಬಂದವು. ಆದ್ದರಿಂದ ನಮ್ಮ ಹಿರಿಯರ ಬಗೆಗೆ ನಾವು ಸಂಯಮವಹಿಸಬೇಕಿದೆ. ಮತ್ತು ನಮ್ಮ ಹಿರೀಕರ ಲೋಕದ ಆ ಧೂಪದ ಧೂಳಲ್ಲಿ ತೇಲಬೇಕು. ಹಾಗೂ ಆ ಧೂಪದ ಬಟ್ಟಲ ಸಾಂಬ್ರಾಣಿಯ ಘಮಲಲ್ಲಿ ನಾವು ಮಿಂದೇಳುವುದೂ ಸಹ ನಮಗೆ ಶಕ್ತಿ ನೀಡುತ್ತದೆ ಎಂದು ಈಗ ನಂಬುತ್ತೇನೆ ಕೂಡ. ಆದ್ದರಿಂದ ನಾನು ಈ ಹಿರಿಯರ ಹಬ್ಬದಲ್ಲಿ ಧೂಪ ಹಾಕಿ, ಅವರನ್ನು ಗೌರವಾದರಗಳಿಂದ ನೆನೆಯುತ್ತೇನೆ.

ಧೂಪ

ಉರಿ ಕಂಡಾಯದ 2ನೇ ಲೇಖನ: ಅವ್ವ, ಆ ಮಾ ರೇವ, ಈ ಮಾ ಕಾವೇರಿ ಓದಿ

ಎಲ್ಲರ ಹಾಗೆ ಬದುಕಿಗಂಟಿಕೊಂಡ ದಾರೀಲಿ ಈ ನಾವುಗಳು ಮನುಷ್ಯರ ಹಾಗೆ ಬೀಗಿ ನಡೆಯುವ ರೀತಿಗಳು ಒಂದೇ ರೀತಿ ಇರಲಾರವು. ಬರೀ ಮನುಷ್ಯತನದಲಿ ತೇಲುವ ಬೀಗುವ ಸನ್ನಿವೇಶಗಳು ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂಬುದೇ ಈ ಹೊತ್ತಿನ ದುರಂತ ಹಾಗೂ ಸವಾಲು ಕೂಡ. ಆ ಹಲವೊಮ್ಮೆಯೋ, ಈ ಕೆಲವೊಮ್ಮೆಯೋ ಹೀಗೆ ಬೀಗುವ ಸನ್ನಿವೇಶಗಳು ಬಿಸಿಲಿಗೆ ಕರಗುವ ಮಂಜಿನಂತಾಗಿಬಿಡುತ್ತವೆ. ಹೀಗಾಗಾದ ಬದುಕಿನ ಹಗಲುಗಳನ್ನು ದಾಟುವುದು ಹೇಗೆ? ನಮ್ಮ ವರ್ತಮಾನ ಇಂತಹ ಉರಿಗಳಿಂದ ಹೊರ ಬಂದಿಲ್ಲ. ಈಗ ನಮ್ಮ ವೈಚಾರಿಕ ಪ್ರವರಗಳು ಕೂಡ ನಮಗೆ ರಿಬೌಂಡ್ ಆಗುತ್ತಿರುವಂತಿವೆ. ನಾವು ಕಿರುಚುವವರಾಗುತ್ತಿದ್ದು, ಲಂಕೇಶರು ಹೇಳಿದಂತೆ ಕಿವಿ ಇಲ್ಲದ ಜನಾಂಗವಾಗಿದ್ದೇವೆನೋ? ಇಂತಹ ಬರೀ ಕಾಲಹರಣದ ಈ ಹೊತ್ತಲ್ಲಿ, ನಮ್ಮ ಹಿರೀಕರ ನೆನಪಿನ ಲೋಕಗಳನ್ನು ಬೆನ್ನೆತ್ತುವುದು ಏನೋ ಒಂತರ ಹೊಸ ಬೆಳಕಿನ ಪ್ರವಾಹದಲ್ಲಿ ತಣ್ಣಗೆ ಮಿಂದು ಬಂದ ಅನುಭವವಾಗುತ್ತದೆ. ಇದು ಬೌದ್ಧಿಕ ಲೋಲುಪತೆಯೇ ಆಗುತ್ತದೆ ಎಂಬ ಭಯ ಇದ್ದರೂ, ನಮ್ಮ ಅನಕ್ಷರಸ್ಥ ಲೋಕ ಹಚ್ಚಿದ ನೈತಿಕ ಹಣತೆಯ ಬೆಳಕು ಮತ್ತೊಂದು ತರದ ಪರಂಪರೆಯೇ ಆಗುತ್ತದೆ ಎಂಬ ವಿಶ್ವಾಸ ಇತ್ತೀಚೆಗೆ ನನಗೆ ದಟ್ಟವಾಗುತ್ತಿದೆ.

ಬಾಬಾ ಸಾಹೇಬರು ಧರ್ಮ ಎಂಬ ಪದವನ್ನು ಅಮಾನತ್ತು ಮಾಡಲಿಲ್ಲ. ಆದ್ದರಿಂದ ಇವರು ಕೊಟ್ಟ ಧರ್ಮದ ಅರ್ಥ ಹಾಗೂ ಬೆಳಕಿನಡಿ, ನಾವು ನಮ್ಮ ಹಿರೀಕರ ಮೌಖಿಕ ಲೋಕದೆಡೆಗೆ ಕಣ್ಣಾಯಿಸಿದರೆ, ಅಲ್ಲೂ ಒಂದು ಬಗೆಯ ಧಾರ್ಮಿಕ ಸಂಘರ್ಷದ ಚರಿತ್ರೆಯ ಕುರುಹುಗಳಿವೆ ಎಂಬದು ಗೊತ್ತಾಗುತ್ತದೆ. ಇಂದು ಸಾಮಾಜಿಕ ಕೇಡನ್ನು ಎದುರಾದ ನಮ್ಮ ಅನಕ್ಷರಸ್ಥ ಹಿರೀಕರ ಲೋಕವನ್ನು ನಾವು ಎದುರಾಗಬೇಕಿದೆ. ಮತ್ತೆ ನಾಸ್ತಿಕವಾದಿ ವೈಚಾರಿಕತೆಯ ಪ್ರವರಗಳ ಆಚೆಗೂ ನಮ್ಮದೇ ಹಿರೀಕರ ಉರುಗದ್ದುಗೆ ಲೋಕ ತಾನು ಉತ್ಪಾದಿಸಿದ್ದ ಜ್ಞಾನ ಹಾಗೂ ವಿವೇಕವು ಜಾತಿ ವಿರೋಧೀ ಆಂದೋಲನದ ಬೌದ್ಧಿಕತೆಯನ್ನೇ ಹೊಂದಿದೆ ಎಂಬುದನ್ನು ನಾವು ಮನನ ಮಾಡಿಕೊಳ್ಳಬೇಕಿದೆ.

ಜಾತಿ ಕ್ರೌರ್ಯಕ್ಕೆ ಒಳಗಾಗಿದ್ದರೂ, ತಾವು ನಿಂತ ಬದುಕಿನಡಿಯಲ್ಲಿಯೇ ಲೋಕ ಕಟ್ಟುವ ಪ್ರತಿಭೆ ತೋರಿರುವ ಈ ಅಜ್ಞಾತ, ನಮ್ಮ ಹಿರೀಕರ ಲೋಕ ಸೌಂದರ್ಯವು ಜಾತಿ ಎಂಬ ಸಾಮಾಜಿಕ ಕೇಡಿನ ವಿರುದ್ಧವೇ ಪ್ರಕಟವಾಗಿದೆ. ಹಾಗಾಗಿ ಈಗ ಹಿರಿಯರ ಹಬ್ಬ ಬಂದಿದೆ. ಎಡೆ ಇಟ್ಟು ಧೂಪ ಹಾಕಿ ಹಿರಿಯರನ್ನು ನೆನೆವ ಪರಿಯೇ ನಮಗೆ ಒಂದು ದೊಡ್ಡ ಸಾಂಸ್ಕೃತಿಕ ಶಕ್ತಿಯಾಗುತ್ತದೆ.. ಅದರಲ್ಲೂ ಜಾತಿ ಎಂಬ ಸಾಮಾಜಿಕ ಕೇಡನ್ನು ಎದುರಾಗಿರುವ ನಮ್ಮ ಹಿರೀಕರ ಆದಿಮ ರೂಪಕಗಳು ಈ ಧರೆಯಲ್ಲಿ ಪ್ರೇಮ, ಸತ್ಯ ಹಾಗೂ ನ್ಯಾಯಾದರ್ಶಗಳು ಉಳಿಯುವಂತೆ ಮಾಡಿವೆ. ಮಾದೇಶ್ವರನ ಗುಡ್ಡರು ಹಾಗೂ ಮಂಟೇದಯ್ಯನ ನೀಲಗಾರರು ಒತ್ತಿ ಹೇಳುವ ಜ್ಯೋರ್ತಿಲಿಂಗದ ಕಲ್ಪನೆಯೇ ನೈಜ ಮಾನವ ಜಗತ್ತಿನ ವಿವೇಕವನ್ನು ಒತ್ತಿ ಹೇಳುತ್ತದೆ. ಮತ್ತೆ ನಾನು ದಲಿತರಲ್ಲದ ಹಿಂದುಳಿದ ಸಮುದಾಯಗಳ ಗಾಯಕರ ಬಾಯಲ್ಲಿ, ಹೊಲೇರ ಹೊನ್ನಯ್ಯ ಹಾಗೂ ಮಾದಾರ ಚನ್ನಯ್ಯನನ್ನು ಘನ ಶರಣರು ಎಂದು ಹಾಡುವ ರೀತಿಯನ್ನು ಕಂಡು ದಂಗಾಗಿ ಹೋಗಿದ್ದೇನೆ. ದಲಿತೇತರಲ್ಲೂ ನೈತಿಕ ಪ್ರದೀಪವಾಗಿರುವ ಈ ನಮ್ಮ ಹಿರೀಕರ ಈ ದೇವರಿಲ್ಲದ ಆಧ್ಯಾತ್ಮ ಪರಂಪರೆಯೇ ಬಾಬಾ ಸಾಹೇಬರು ಎತ್ತಿಡಿದ ವ್ಯಕ್ತಿ ಘನತೆ ಹಾಗೂ ಸ್ವಾಭಿಮಾನವನ್ನೇ ಹೋಲುತ್ತದೆ.

ಅಸ್ಪೃಶ್ಯತೆ ನಮ್ಮನ್ನು ಕ್ಷಣ ಕ್ಷಣಕ್ಕೂ ಈಗ ತೀವ್ರವಾಗಿ ಕಾಡದೆ ಇದ್ದರೂ, ಇದು ಈಗ ಬೇರೆ ತರದಲ್ಲಿ ರೂಪಾಂತರಗೊಳ್ಳುತ್ತಿದೆ ಎಂಬುದಂತೂ ಸತ್ಯ. ಆದರೆ ನಮ್ಮ ಹಿಂದಣ ತಲೆಮಾರುಗಳು ನಾವೆಂದೂ ಅನುಭವಿಸದ ಅವಮಾನದಲ್ಲಿ ನೊಂದು ಬೆಂದಿದ್ದರು. ಮತ್ತೂ ಈಗಲೂ ಹಳ್ಳಿಯನ್ನೇ ಅವಲಂಭಿಸಿ ಬದುಕುತ್ತಿರುವವರ ಪಾಡು ತೀರಾ ಅಸಹನೀಯವಾಗಿದೆ. ಈ ವಿಚಾರದಲ್ಲಿ ಹೊಸ ಕಾಲದ ಮನುಷ್ಯ ವಿರೋಧೀ ಅಸಂಗತಗಳು ಸೇರಿಕೊಂಡು, ಜಾತಿ ವಿನಾಶ ಹಾಗೂ ಅಸ್ಪೃಶ್ಯರ ವಿಚಾರಗಳು ಹಿನ್ನೆಲೆಗೆ ಸರಿಯುತ್ತಿರುವ ಕಾಲವೂ ಇದಾಗಿದೆ. ಈಗ ಬಾಲ್ಯದಲ್ಲಿ ಜೊತೆಗಿದ್ದವರೇ ನಮ್ಮೆದುರು ಜಾತಿವಾದಿಗಳಾಗಿ ಕಾಣುತ್ತಿದ್ದಾರೆ. ಈ ಜಾತಿ ಎಂಬುದು ಈ ವ್ಯವಸ್ಥೆಯ ಆಳ ಅಜ್ಞಾತವನ್ನೂ ವ್ಯಾಪಿಸಿಕೊಳ್ಳುತ್ತಿದೆ. ಈಗಲೂ ನಾವು ಎಲ್ಲರ ಹಾಗೆ ಮನುಷ್ಯರು ಎಂಬ ಅಸ್ಮಿತೆಗಾಗಿ ದಿನದಿನವೂ ಸಂಘರ್ಷಕ್ಕೆ ಒಳಗಾಗುತ್ತಿರುವುದು ಏನನ್ನು ಹೇಳುತ್ತಿದೆ? ಕಾಲ ಮಂಗರ್ ಮಯಾ ಎಂದು ಸುಮ್ಮನಾಗುವ ನಮ್ಮ ನಡೆಗಳು ನಾವು ಯಥಾಸ್ಥಿತಿವಾದವನ್ನೇ ಒಪ್ಪಿಕೊಳ್ಳುತ್ತಿದ್ದೇವೆಂದು ಅರ್ಥವೆ? ಈ ದೇಹ ಮತ್ತು ಆತ್ಮಕ್ಕಂಟುವ ಇಂತಹ ನಾವು ಅವರು ಎಂಬ ಭಾಷೆ ಅದು ಕಾಲವೂ ಕಳಚಲಾಗದ ಕವಚವೇ? ಎಂದೆಲ್ಲ ಪ್ರಶ್ನೆಗಳು ಒಳಗೊಳಗೆ ನುಸುಳಾಡುತ್ತಿರುತ್ತವೆ. ಇದು ಬಲಿಯುತ್ತ ನಮ್ಮ ಮಾನುಷತನವನ್ನೇ ಮುಕ್ಕಲು ಮುಂದಾದರೂ, ಇದರ ವಿರುದ್ಧ ನಮ್ಮ ಅಸ್ಮಿತೆಯ ಸಂಘರ್ಷ ಶುರುವಾಗುತ್ತದೆ. ನನಗೆ ಈ ಸಂಘರ್ಷದ ನೆನಪುಗಳ ಹುತ್ತವನ್ನು ಸ್ಫೋಟಗೊಳಿಸುತ್ತಿದ್ದ ನಮ್ಮ ಅಜ್ಜಿ, ನಮ್ಮ ಅವ್ವ ಮತ್ತು ಮಾವಂದಿರು ತಮ್ಮ ತಾತಾ ಮುತ್ತೂ ಮುತ್ತಾತನ ಬಗ್ಗೆ ಹೇಳುತ್ತಿದ್ದ ಕತೆಗಳೇ ಒಂತರ ರೋಚಕ ಹಾಗೂ ರೋಮಾಂಚನವನ್ನುಂಟು ಮಾಡುತ್ತಿದ್ದವು.

ಧೂಪ ಕೋಟಿಗಾನಹಳ್ಳಿ ರಾಮಯ್ಯ

ಕೋಟಿಗಾನಹಳ್ಳಿ ರಾಮಯ್ಯನವರ ಚೌಕಿಯಲ್ಲಿ ನಾವು ತಲಪರಿಗೆ ಕೃತಿಯನ್ನು ಸಿದ್ಧಪಡಿಸುವಾಗ, ನಮ್ಮ ಅನಕ್ಷರಸ್ಥ ಲೋಕದ ಹಿರೀಕರು ಹಚ್ಚಿದ ಹಣತೆ ಬಗ್ಗೆ ರಾಮಯ್ಯ ಅವರು ಅಭಿಮಾನದಿಂದ ಹೇಳುತ್ತಿದ್ದರು. ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿ ಆರಂಭದಲ್ಲಿ ವೈಚಾರಿಕತೆಯ ಅತಿಯಲ್ಲಿ ನಮಗೆ ಸಂಸ್ಕೃತಿ ನಿರ್ಮಾಣದಲ್ಲಿ ಯಾವುದೇ ಪಾಲಿಲ್ಲ ಎಂದು ಸಂಸ್ಕೃತಿ ನಿರಾಕರಣೆಯ ಧಾವಂತತೆಯನ್ನು ಎಬ್ಬಿಸಿತ್ತು. ಹಾಗಾಗಿ ನಮಗೆ ಹಳ್ಳಿ ವಿರೋಧದ ರಭಸದಲ್ಲಿ ನಮ್ಮ ಹಿರೀಕರ ಲೋಕವನ್ನು ಅಸಹನೆಯಿಂದ ನೋಡುವಂತಾಗಿತ್ತು. ಆದರೆ ರಾಮಯ್ಯನವರು, ಬಂಜಗೆರೆ ಜಯಪ್ರಕಾಶ್ ರಂತಹ ಹಿರಿಯರಿಂದಾಗಿ, ನಮ್ಮ ಹಿರಿಯರ ಲೋಕದ ನೆನಪಿನ ಲೋಕವನ್ನು ಹೇಗೆ ಗ್ರಹಿಸಿಬೇಕು ಎಂಬ ಖಾಚಿತ್ಯ ನಮಗೆ ದಕ್ಕಿತು. ಅದರಲ್ಲೂ ರಾಮಯ್ಯನವರು ನಮ್ಮ ಪರಂಪರೆಯ ಹಿರೀಕರ ಬಗ್ಗೆ ಮಾತಾಡುವಾಗ ಒಂದು ತೀವ್ರ ಉಗ್ರನೈತಿಕತೆಯ ಮೇಲೆ ಕೂತ ಉರಿಗದ್ದುಗೆ ಅಯ್ಯನ ರೀತಿ ನಮಗೆ ಭಾಸವಾಗುತ್ತಿದ್ದರು. ಮತ್ತೊಂದೆಡೆ ಬಂಜಗೆರೆ ಜಯಪ್ರಕಾಶ್ ಥರದವರು ತಣ್ಣಗೆ ನಮ್ಮಲ್ಲಿ ಸಂಸ್ಕೃತಿ, ವಿಮರ್ಶೆ ಹಾಗೂ ಅನಕ್ಷರಸ್ಥ ಲೋಕದ ಬೇರುಗಳನ್ನು ಹೇಗೆ ಗ್ರಹಿಸಬೇಕೆಂದು, ಅವರ ಒಡನಾಟದಿಂದ ನಮಗೆ ಮನಗಾಣಿಸುತ್ತಾ ಹೋದರು.

ಅಲ್ಲದೆ ಈ ರಾಮಯ್ಯನಂಥವರ ಸಿಡುವು ಹಾಗೂ ನೈತಿಕತೆಯ ಪರಿಭಾಷೆಯು, ನಮ್ಮನ್ನು ಮತ್ತೆ ಮತ್ತೆ ದಲಿತಲೋಕದ ಆದಿಮತೆ ಬಗ್ಗೆ ಎಜುಕೇಟ್ ಮಾಡುತ್ತಿತ್ತು. ನನ್ನಂಥವರು ಇವರಿಂದ ಪರಂಪರೆಯ ವಿವೇಕ ದಕ್ಕಿಸಿಕೊಂಡೆವು ಮಾತ್ರವಲ್ಲದೆ, ನಾವು ದಲಿತ ಸಂಸ್ಕೃತಿಯ ಅಲೋಚನೆಗಳನ್ನು ಕಟ್ಟಿಕೊಳ್ಳಲು ಮೂಲ ಗ್ರಹಿಕೆಯಾಗಿ ಇವರ ವಿಚಾರಗಳು ನೆರವಾದವು. ಹೀಗೆ ನಮ್ಮ ಹಿರಿಯರ ಸ್ಮೃತಿಲೋಕವೇ ಮೌಖಿಕವಾಗಿದ್ದರೂ ಇದು ಇಂದಿನ ಆಧುನಿಕ ಜ್ಞಾನದ ಪ್ರಖರತೆಗೆ ಕಡಿಮೇ ಏನಲ್ಲ ಎಂಬಂತೆ, ಸಂಘರ್ಷ ಹಾಗೂ ನ್ಯಾಯದ ಪ್ರಶ್ನೆಗಳನ್ನು ಎದುರಾಗುವಂತೆ ನಮ್ಮನ್ನು ಪ್ರೇರೇಪಿಸುತ್ತಿದೆ. ಈ ಹೊತ್ತು ಏನೆಲ್ಲ ಆಧುನಿಕತೆ, ಕಾನೂನು ಇದ್ದಾಗ್ಯೂ ಈ ಜಾತಿ ಅವಮಾನ, ಅತ್ಯಾಚಾರ ಹಾಗೂ ಮರ್ಯಾದೆಗೇಡು ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಆದರೆ ಏನೂ ಇಲ್ಲದ ಆ ಹೊತ್ತಲ್ಲಿ ನಮ್ಮ ಹಿಂದಣ ತಲೆಮಾರು, ತಮ್ಮನ್ನು ಮನುಷ್ಯ ಮರ್ಯಾದೆಯ ನೈತಿಕತೆಯೊಳಗೆ ಕಾಪಾಡಿಕೊಂಡಿದ್ದರು. ಹಾಗಾದರೆ ಇವರನ್ನು ಕಾದ ಶಕ್ತಿ ಮತ್ತು ಸಂಕಲ್ಪಗಳು ಯಾವುವು ಎಂಬ ಅಚ್ಚರಿಮಿಶ್ರಿತ ಕುತೂಹಲಗಳು ಇಂದಿಗೂ ನನ್ನ ಓದು ಮತ್ತು ಅಧ್ಯಯನವನ್ನು ವಿಸ್ತರಿಸುತ್ತಿವೆ.

2 thoughts on “ಹಿರೀಕರ ಧೂಪದ ಬಟ್ಟಲ ಸಾಂಬ್ರಾಣಿಯ ಘಮಲಲ್ಲಿ ಮಿಂದೇಳುತ್ತಾ ಶಕ್ತಿ ಪಡೆಯೋಣ”

Leave a Reply

Your email address will not be published. Required fields are marked *