ನಾನು ಈ ಅಂಕಣವನ್ನು ಯಾವುದೋ ನಿರ್ದಿಷ್ಟ ಸಿದ್ಧಾಂತ ಹಾಗೂ ಒಂದು ಪ್ರಭಾವಿತ ವೈಚಾರಿಕ ನೋಟಗಳ ಅಡಿಯಲ್ಲಿ ಖಂಡಿತ ಬರೆವ ಉತ್ಸುಕತೆ ತೋರಲಾರೆ. ಇದೊಂತರ ಅಲ್ಲಮ ಪ್ರಭು ಹೇಳಿದಂತೆ ನುಡಿಗೆಟ್ಟ ನುಡಿ, ನಡೆಗೆಟ್ಟ ನಡೆಯ ಕ್ರಮದಲ್ಲಿ ನನ್ನನೇ ನಾನು ರೂಪಿಸಿಕೊಳ್ಳುವ ನನ್ನ ಗೊಂದಲ, ಒಳ ತಿಮಿರು, ನೆನಪು, ನನ್ನ ಒಳ ವಿಕ್ಷಿಪ್ತತೆ ಹೀಗೆ ಇದು ಅಸಲಿಯಾಗಿ ಕೇವಲ ನನ್ನದೇ ಖಾಸಗೀತನದ ಮನೋಪಾತಾಳಿಯ ಬರಹವಾಗಿರುತ್ತದೆ. ಮತ್ತೆ ಇದು ಕುವೆಂಪುರವರ ನೋಡುವ ಕಣ್‌ ನೋಡುವರೆಗೂ ಎಂಬಂತೆ ನನ್ನದೇ ದಿಗಂತ ಹಾಗೂ ಅನಂತತೆಗಳೊಂದಿಗಿನ ತೋಯ್ದಾಟವಾಗಿರುತ್ತದೆ. ಹಾಗಾಗಿ ಇದು ಈ ನನ್ನ ಕಣ್ಣದಿಟ್ಟಿಗೆ ಕಾಣುವ ಲೋಕದ ಅರಳುವಿಕೆಯಷ್ಟೆ. ಅಂದರೆ, ನನ್ನ ಬದುಕಿನ ಕ್ಷಣಗಳ ಚಲನೆಯ ಎಡ ಬಲಗಳ ನೆರಳು ಇವುಗಳು ಆ ಚಣದೊಳ್‌ ರೂಪಿಸುವ ನನ್ನತನ ಹಾಗೂ ಆ ನೆಪದ ನನ್ನ ಲೋಲುಪತೆ, ಹಲವು ಹಂಬಲಗಳು, ಸ್ವಾರ್ಥ, ನಿಶ್ವಾರ್ಥದ ಗೋಜಲುಗಳ ಮೊತ್ತವೂ ಸಹ ಆಗಿರುತ್ತವೆ. ಹಾಗಾಗಿ ಈ ಅಂಕಣದಲ್ಲಿ ನಾನು ಸಮಾಜೋರ್ಥಿಕ ಹಾಗೂ ರಾಜಕೀಯ ವಿಚಾರಗಳನ್ನು ಮುಖ್ಯ ಮಾಡದೆ, ಇವುಗಳನ್ನು ಕ್ವಚಿತ್ತಾಗಿ ಹಂಚಿಕೊಳ್ಳುತ್ತಲೇ ನಾನು ಈ ಅಂಕಣವನ್ನು ನನ್ನ ಓದು, ಅಲೆದಾಟ, ಕಾವ್ಯ, ಬಂಡುಕೋರತನ, ವಿಮರ್ಶೆ, ನೆನಪು, ಅರಿವು, ಲೋಕದೃಷ್ಟಿ. ನನ್ನ ಮಾನುಷತನದ ಬಿಕ್ಕಟ್ಟುಗಳು… ಹೀಗೆ ಇನ್ನೂ ನನ್ನಾಳದ ಅಜ್ಞಾತ ರಾಡಿ, ರಸವನ್ನೆಲ್ಲ ದಿಟ್ಟಿಸಿ ತಣ್ಣಗೆ ಬರೆಯುವ ಪ್ರಯತ್ನವಾಗಿದೆ. ಜೊತೆಗೆ ಇವೆಲ್ಲವೂ ಒಟ್ಟಾಗಿ ಮೈ ಪಡೆಯುವ ಅಕ್ಷರಕ್ಕೆ ಕಂಡಾಯವೆಂದೇ ನಾನು ಕರೆದುಕೊಳ್ಳುತ್ತೇನೆ. ಹಾಗಾಗಿ ಇದೊಂತರ ನಾನೇ ಕಟ್ಟಿಕೊಂಡ ಅರಿವು ಮತ್ತು ಮರೆವು ಇವೆರಡರ ಸಂಘರ್ಷೀಯ ದ್ವಂದ್ವಗಳ ಮೊತ್ತವೇ ಆಗಿರುತ್ತವೆ.

ಹಾಗಾಗಿ ಇದು ಆನು ಒಲಿದಂತೆ ಹಾಡುವೆ ಎಂಬಂತೆಯೂ ಆಗಬಹುದು. ಆದರೆ ಆನು ಒಲಿದಂತೆ ಪಾಡುವೆ ಎಂಬುದರ ಅರ್ಥದ ಒಡಲನ್ನು ಕಣ್ಣುಮುಚ್ಚಿ ಕಾಣಲು ಹೊರಟರೆ, ಅಬ್ಬಾ ಏನೆಲ್ಲ ವ್ಯಕ್ತಿ ಮತ್ತು ಸಮಾಜದ ಸಂಬಂಧಗಳ ಒಳಸುಳಿಗಳು ಗೋಚರವಾಗುತ್ತವೆ. ಇದು ಖಂಡಿತವಾಗಿ ಒಳ ಸಂಘಷದ ದಾರಿ. ಇದು ಬೇಂದ್ರೆಯಜ್ಜನ ಪಟ್ಟ ಪಾಡೆಲ್ಲವೂ ಹಾಡಾಗುವ ಬಗೆಯದ್ದೇ ಆದರೂ, ಇದರಾಚೆಗೂ ಈ ಬದುಕಿನ ಕುದಿತಗಳ ಕುಲುಮೆಯ ಬಾಳುವೆಯ ತನವನ್ನು ಅಣ್ಣ ಬಸವಣ್ಣ ಚಿಂತಿಸುವ, ಮಥಿಸುವ ಮತ್ತಿದರ ತಿರುಳನ್ನು ನುಡಿ ನಡೆಯಾಗಿಸುವ ಈತನ ಬಗೆ ಇದೆಯಲ್ಲ ಇದು ನುಡಿಯೇ ನಡೆಯ ಲೋಕ ತತ್ವದ ಸಂವಾದವೇ ಆಗುತ್ತದೆ. ಇದು ಆನು ಒಲಿದಂತೆ ಒಡಲರೂಪ. ಹೀಗೆ ಮಾತಾಡುತ್ತಲೇ ನಮ್ಮ ಪಾಡಿನ ಭೂತವನ್ನೂ, ಹಿಂದಣವನ್ನೋ ಈಗ ನಿಂತ ನಿಲುವಲ್ಲಿ ತಿರುಗಿ ನೋಡಿದಾಗ ನಮ್ಮ ಛಿಧ್ರತೆಗಳನ್ನು ಕಂಡು ಭಯವಾಗುತ್ತದೆ. ಹಾಗೆ ಆನು ಒಲಿದಂತೆ ಹಾಡುವೆ ಎಂಬುದು ಎಷ್ಟು ಕಷ್ಟಸಾಧ್ಯ ಎಂಬತಾಗಿ ಇದೆಲ್ಲವೂ ಒಂತರ ನುಡಿಜಾಣತ್ವವಾಗಿ ಬಿಡುತ್ತದೆ ಎಂಬ ಹಿಂಜರಿಕೆ ನನ್ನನ್ನು ಕಾಡುತ್ತಿರುತ್ತದೆ.

ಇದನ್ನೂ ಓದಿ: ಅರಿವೆ ಕಂಡಾಯ ಮೊದಲ ಭಾಗ: ಧರೆಗೆ ದೊಡ್ಡವರ ಕಂಡಾಯ

ಬಹುಶಃ ಬದುಕಿನ ಕುದಿತಗಳ ಶಾಖ ಹಾಗೂ ಅದರ ಕಸುವು ನನ್ನಂಥವರಿಗೆ ಕೇವಲ ಸಾಹಿತ್ಯ ಹಾಗೂ ಯಾವುದೋ ಕೃತಕ ಆಧ್ಯಾತ್ಮದ ಸೋಗಿನಲ್ಲಿ ಲಭಿಸಿರಲಾರದು ಎಂಬುದು ಖಚಿತವಾಗಿ ಗೊತ್ತಿದೆ. ಮತ್ತೆ ಇದು ನನ್ನಂಥವರಿಗೆ ಬೇಕಿಲ್ಲ ಕೂಡ. ನಮ್ಮ ಬದುಕಿನ ಒಪ್ಪ ಓರಣದ ಕಸುವು ಮತ್ತೆ ಕೌಶಲ್ಯಗಳು ನಮಗೆ ನಮ್ಮ ಕಾಲುದಾರಿಗಳ ಜೀವಾನುಭವದಿಂದಲೇ ಜೈವಿಕವಾಗಿ ದಕ್ಕಿರುವಂತವೇ ಆಗಿವೆ. ಆದರೆ ಇದನ್ನಷ್ಟೇ ಹೇರಿಕೊಂಡು ಹೋಗುವುದಾದರೂ ಎಲ್ಲಿಗೆ ಎಂದಾಗ ಈ ಜೀವಕ್ಕೊಂದು ಹೊಸ ಅಸ್ಮಿತೆಯೊಂದ್ದನ್ನು ಈ ಅರಿವು ಎಂಬ ಕಂಡಾಯ ಕಟ್ಟಿಕೊಡುತ್ತದೆ. ಬಹುಶಃ ಈ ಬಗೆಯ ಒಳ ರೂಪುಗೊಳ್ಳುವಿಕೆಯ ಜ್ಞಾನ ನಿರ್ಮಿತಿಯ ಶಕ್ತಿಯು ನಮ್ಮದೇ ಲೋಕದ ಅರಿವಿನ ಕಂಡಾಯವಾಗಿ ರೂಪಾಂತರಗೊಳ್ಳುತ್ತದೆ. ಇದು ವ್ಯಕ್ತಿ ತಾನು ಕಲಿತು ದ್ವೀಪವಾಗುವ ಅಪಾಯದಿಂದ ಮರಳಿ ಮತ್ತೆ ತನ್ನ ಸಮೂಹವನ್ನು ಅಥವಾ ಈ ಸಮೂಹದ ನಂಟನ್ನು ಇರಿಸಿಕೊಳ್ಳುವ ಪರಿಯೇ ಆಗಿರುತ್ತದೆ. ಇದು ತತ್ವಜಿಜ್ಞಾಸಿಗರು ಹೇಳಿದಂತೆ ಚಿನ್ನವು ಮರಳಿ ಅದಿರಾಗಿ ಮತ್ತೆ ಮಣ್ಣಿನ ವಾಸನೆಗೆ ಒಳಗಾಗುವ ಬಗೆಯಂತಹುದೆ. ಹಾಗೆಂದು ಇದನ್ನು ಆದರ್ಶೀಕರಿಸಿ ಭಾವಲೋಲುಪತೆಗೆ ಒಳಗಾಗಿಸುವ ಫಜೀತಿಯ ಬಗ್ಗೆಯೂ ಎಚ್ಚರವಿರಬೇಕಾಗುತ್ತದೆ. ಈ ದಾರಿ ಒಳ ಸಂಘಷದಿಂದಲೂ ಕೂಡಿರುತ್ತದೆ ಕೂಡ. ಆದ್ದರಿಂದಲೇ ಈ ಆನು ಒಲಿದಂತೆ ಎಂಬುದು ಯಾವುದೇ ವ್ಯಕ್ತಿ ತಾನು ನೈತಿಕ ಗದ್ದುಗೆಗೇರಿ ಪ್ರಾಂಜಲತೇಗೇರುವಂತದ್ದಾಗಿರುತ್ತದೆ. ಇದೊಂತರ ಮನುಷ್ಯರೇ ದೇವರಾಗುವ ಪರಂಪರೆಯ ದಾರಿ. ಮನುಷ್ಯರ ಈ ಬಗೆಯ ಜೀವಿಗಳ ರೂಪಾಂತರಕ್ಕೆ ಅರಿವಿನ ಕಂಡಾಯ ನೆರವಾಗಬೇಕಾಗುತ್ತದೆ. ಈ ಪ್ರಕ್ರಿಯೆ ನನ್ನ ಕಂಡಾಯದೊಡೆಯ ಉರಿಗದ್ದುಗೆಯ ರೂಪಕದ ಪ್ರಖರತೆಯನ್ನು ನೆನಪಿಸುತ್ತದೆ. ಇದಕ್ಕೆ ಕಾಲ ದೇಶಗಳ ಹಂಗಿಲ್ಲ ಕೂಡ. ಯಾರೂ ಬೇಕಾದರೂ ಹೀಗೆ ಗದ್ದುಗೆ ಏರಬಹುದು. ಇದು ಆನು ಒಲಿದಂತೆ ಎಂಬುದರ ರೂಪಕದ ಅರ್ಥವಾಗಿದೆ.

ನನಗೆ ಹೀಗೆ ಮಾತಾಡುವಾಗ ಮೂರು ಘಟನೆಗಳು, ಸನ್ನಿವೇಶಗಳು ಈ ಹೊತ್ತಿಗೂ ಕಾಡುತ್ತಲೇ ಇವೆ. ಒಂದು ನಾನು ಮಿಡ್ಲು ಸ್ಕೂಲಲ್ಲಿ ಓದುವಾಗ ಅವ್ವ ನನಗೇಳದೆ ಶೂ ತಂದು ಕೊಟ್ಟು, ಮಾರನೆ ದಿನ ನಾನೂ ಎಲ್ಲರ ಹಾಗೆ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯಲ್ಲಿ ಬೀಗುವಂತೆ ಮಾಡಿದ್ದದು. ಅವಳ ಒಳಗಿದ್ದ ಸ್ವಾಭಿಮಾನ ಹಾಗೂ ಸರೀಕರೆದುರು ನಾವು ಬೀಗಬಹುದು, ಹಾಗೂ ಮರ್ಯಾದೆಯ ಬದುಕನ್ನು ನಮ್ಮ ಪಾಡಲ್ಲಿಯೇ ಹೊಂದಬಹುದು ಎಂಬುದನ್ನು, ಅವ್ವ ಶಬ್ದದ ಹಂಗಿಲ್ಲದೆ ತಿಳಿಸಿಬಿಟ್ಟಳೇ ಎಂದು ನಾನು ಈಗಲೂ ಅವಳ ಅನುಪಸ್ಥಿತಿಯಲ್ಲಿ ನನಗೆ ನಾನೇ ಅಂದುಕೊಳ್ಳುತ್ತಿರುತ್ತೇನೆ. ಎಂದಾದರೂ ಅವಳನ್ನು ಈ ಬಗ್ಗೆ ಕೇಳಬೇಕೆನಿಸಿದರೂ ಈ ಪ್ರಶ್ನೆಗಳು ಕಾಲ ಪ್ರವಾಹದಲ್ಲಿ ತಳಸೇರಿದವೇನೋ. ಮತ್ತೆ ಅವಳಲ್ಲಿ ಪುಟಿಯುತ್ತಿದ್ದ ಸ್ವಾಭಿಮಾನ ಆಸ್ಫೋಟದ ಬಗ್ಗೆ ನಾನು ಇನ್ನೊಂದು ಸನ್ನಿವೇಶವನ್ನೂ ಹೇಳುವಂತೆ ಮಾಡುತ್ತಿದೆ.

ಆಗ ನಮ್ಮೂರಲ್ಲಿ ಒಂದೆರಡು ಮನೆಗಳಲ್ಲಷ್ಟೇ ಟವಿಗಳಿದ್ದ ಸಂದರ್ಭ. ಅವ್ವ ಎಲ್ಲರಂತೆ ಟಿವಿ ನೋಡಲು ಹೋಗುವವಳಲ್ಲ. ಹಠವಾದಿಯಾಗಿದ್ದ ಈ ಅವ್ವ, ಅಂದಿನ ಪ್ರಧಾನಿ ರಾಜೀವ್‌ ಗಾಂಧೀ ಬಾಂಬ್‌ಗೆ ಬಲಿಯಾದ ದೃಶ್ಯಗಳು ಟಿವಿಯಲ್ಲಿ ಬರ್ತಿವೆ ಎಂದು ಗೊತ್ತಾಗಿ, ಒಕ್ಕಲಿಗರ ಮನೆಯವರ ಬಾಗಿಲ ಬಳಿ ನಿಂತು ಎಲ್ಲರ ಹಾಗೆ ಟಿವಿ ನೋಡುತ್ತಿದ್ದು, ಅವಳಿಗೆ ಗೊತ್ತಿಲ್ಲದ ಹಾಗೆ ಹೊಸ್ತಿಲ್ಲನ್ನು ದಾಟಿ ಒಳಗೆ ಹೋಗಿದ್ಲೇನೊ. ಅಷ್ಟಕ್ಕೇ ಆ ಮನೆಯೊಡತಿ ಏನಮ್ಮ ಇಲ್ಲಿವರ್ಗೂ ಬಂದ್ಬಿಟ್ಟಿದ್ದೀ ಅಂತ ಕೋಪಗೊಂಡಾಗ, ಅವ್ವ ಹಠದಿಂದ ಎದ್ದು ಬಂದು ಆ ವಾರದಲ್ಲಿಯೇ ನಮ್ಮ ಮನೇಲಿ ಟಿವಿ ಇರುವಂತೆ ನೋಡಿಕೊಂಡ ಭಯಂಕರ ಸ್ವಾಭಿಮಾನಿ. ಏನೋ ಆ ಅಂದಿನ ಅವ್ವಳ ನಡೆ ನನ್ನೊಳಗೆಯೇ ಬದುಕಿನ ಕಸುವು ಹಾಗೂ ಕಲಿಕೆಯ ಹಂಬಲಗಳನ್ನು ನನಗೂ ಅರಿವಿಲ್ಲದೆ ಕಸಿಗೊಳಿಸಿಬಿಟ್ಟಿದೆ. ಈ ಅನುಭವ ಶಬ್ದದ ಹಂಗಿಲ್ಲದೆ ಅವಳು ಕಲಿಸಿದ ಪಾಠಗಳೇ ಆಗಿವೆ. ನಾನು ಜಡಸ್ತನಾದಾಗ, ಗೋಜಲಲ್ಲೆ ಕೂತುಬಿಟ್ಟಾಗ, ಇವು ಅರಿವಿನ ಕಂಡಾಯವಾಗಿ ನನ್ನೊಳಗೆ ಭರವಸೆಗಳನ್ನೆಬ್ಬಿಸುತ್ತವೆ. ನಮ್ಮ ಜೀವಮಾನದ ಕಾಲ ಜ್ಞಾನದ ಕಟ್ಟು ನಮ್ಮದೇ ಹಸ್ತಗಳಿಂದ ರೂಪಿತವಾಗುತ್ತದೆ ಎಂಬ ಸತ್ಯವನ್ನು ಅವ್ವ ಪರೋಕ್ಷವಾಗಿ ಹೇಳಿದ್ದಳೇ ಎಂಬ ಅನುಮಾನ ಈಗಲೂ ಸುಳಿದಾಡುತ್ತಿದೆ.

ಎರಡನೆಯದಾಗಿ…

ಮತ್ತೆ, ಹೀಗೆ ಬದುಕಿನ ಏರಿಳಿತಗಳ ಕಣಿವೆ ಕಂದರಗಳ ಜಾಡಲ್ಲಿ ಸಾಗುವಾಗ, ನರ್ಮದಾ ನದಿ ಕಣಿವೆಯಲ್ಲಿ ಕಂಡ ಸನ್ನಿವೇಶ ಈಗಲೂ ನನ್ನನ್ನೂ ಕಾಡುತ್ತಲೇ ಇದೆ. ಇದರ ನೆನಪು ನನ್ನ ಅರಿವನ್ನೇ ತಿರುವು ಮುರುವಾಗುವಂತೆಯೂ ಮಾಡುತ್ತಿದೆ. ನರ್ಮದಾ ಬಚಾವ್‌ ಅಂದೋಲನದ ಎಕ್ಸ್ಪೋಸರ್ಗೆ ನಮ್ಮನ್ನು ಸಂವಾದ ಸಂಸ್ಥೆ ಕರೆದುಕೊಂಡು ಹೋಗಿತ್ತು. ಆಗ ಚಳವಳಿ, ಅಂದೋಲನ ಇವೆಲ್ಲದರ ಬಗ್ಗೆ ತೀರಾ ಹತ್ತಿರದ ಬದುಕಿನಲ್ಲಿ ಕಂಡಿರದ ವಯಸ್ಸದು. ನಾನು ಆಗತಾನೆ ಕನ್ನಡ ಎಂ.ಎ. ಮುಗಿಸಿ ಗೊತ್ತುಗುರಿಯಿಲ್ಲದವನಂತಿದ್ದೆ. ಆಗ ಈ ಸಂವಾದ ನನ್ನನ್ನು ಓರಿಯಂಟ್‌ ಮಾಡಿತು. ಈ ಸಂಸ್ಥೆಯಡಿ ನಾವು ಲಿಂಗ, ಜಾತಿ, ವರ್ಗಗಳ ಬಗ್ಗೆ ಬೇಸಿಕ್‌ ಆದ ಸಾಮಾಜಿಕ ಅರಿವು ಪಡೆದುಕೊಂಡಿದ್ದೆವು. ಇದರ ಪ್ರಭಾವ ಬೀದಿಯಲ್ಲಿ ನಾನು ನಿಸ್ಸಂಕೋಚವಾಗಿ ಸಾಮಾಜಿಕ ಆಕ್ರೋಶದ ದಾಟಿಯಲ್ಲಿ ಹಾಡುವಂತೆ ಮಾಡಿತು.

ನರ್ಮದಾ ನದಿಗೆ ಕಟ್ಟಿರುವ ಸರ್ದಾರ್‌ ಸರೋವರ್‌ ಅಣೆಕಟ್ಟುಗಳಿಂದಾಗಿ ಆದ ಮುಳುಗಡೆ, ಬುಡಕಟ್ಟುಗಳ ಬದುಕಿನ ಮಾರಣಹೋಮ, ಜನವಸತಿ ಇಲ್ಲದೆ ತತ್ತರಿಸಿದ ಅಲ್ಲಿನ ಭೀಕರ ಸನ್ನಿವೇಶಗಳನ್ನು ಕಣ್ಣಾರೆ ಕಂಡು ನಾನು, ʻಮಹಾನಿರ್ನಾಮ ಎಂದರೇ ಇದೆನಾ?ʼ ಎಂದು ಬೆಚ್ಚಿ ಬಿದ್ದಿದ್ದುಂಟು. ಇದಕ್ಕೆಲ್ಲ ಪ್ರಗತಿ, ಅಭಿವೃದ್ಧಿ ಎಂದು ಕರೆಯುತ್ತಾರ? ಎಂದು ನನ್ನೊಳಗೆ ನಾನೇ ವಿಚಿತ್ರ ತಳಮಳ, ಕಳವಳಕ್ಕೆ ಒಳಗಾದ ಸಂದರ್ಭವದು. ಆ ಕ್ಷಣ ನಮ್ಮ ಶಾಲಾ ಕಾಲೇಜುಗಳು ಹೇಳಿಕೊಡುವ ಪ್ರಗತಿ ಅಭಿವೃದ್ಧಿ ಅರ್ಥ ಇದೆನಾ ಎಂದು ದಂಗಾಗಿದ್ದೆ. ಜನಕ್ಕೆ ವಸತಿ ಹಾಗೂ ಪರಿಹಾರ ಕಲ್ಪಸುವಲ್ಲಿ ಸರ್ಕಾರಗಳು ಮೀನಾಮೇಷವೆಣಿಸಿರುವ ಆ ಅಸಲಿ ಸನಿವೇಶಗಳು ನನ್ನೊಳಗೆ, ಮೇಷ್ಟ್ರು ಕವಿ ಸಿದ್ಧಲಿಂಗಯ್ಯನವರ ಕವಿತೆ “ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ” ಎಂಬ ಪ್ರಶ್ನೆಗಳನ್ನು ತೀವ್ರಗೊಳಿಸಿತು. ಈ ಕಾವ್ಯ ಯಾವ ಕವಿಸಮಯಗಳ ಹಂಗಿಲ್ಲದೆ ಜೀವನದ ಸುಡು ಸುಡುವ ವಾಸ್ತವದ ಬೆಂಕಿ ಎಂಬುದರ ಅರಿವಾಯಿತು. ಇದರ ಪರಿಣಾಮ ನನ್ನೊಳಗೆ ಬಂಡಾಯದ ಒಳ ದನಿಯು ಮೊಳಕೆಗೊಂಡಿತು. ಇಲ್ಲೊಂದು ಬಗೆಯ ಸಾಮಾಜಿಕ ಮುಖಾಮುಖಿಯಲ್ಲಿ ನಾನು ಸಾಹಿತ್ಯವನ್ನು ನೋಡುವ ಗ್ರಹಿಕೆಗಳು ಮೈಪಡೆಯುತ್ತಾ ಹೋದವು. ಅದರಲ್ಲೂ ನರ್ಮದಾ ಕಣಿವೆಯ ಧೂಮ್ಖೇಡಿ ಎಂಬ ಊರಲ್ಲಿ ಬೆಳಬೆಳಗ್ಗೆ ನಾನು ಕಂಡು, ಕೇಳಿದ ಕೊಳಲ ದನಿಯಂತೂ ಈಗಲೂ ನನ್ನೊಳಗೆ ಜೀವಂತವಾಗಿ ಅನುರಣನಗೈಯುತ್ತಲೇ ಇದೆ.

ಆ ಗ್ರಾಮ ಕೂಡ ಅಣೆಕಟ್ಟೆಯ ನೀರಿನ ಮುಳುಗಡೆಯಿಂದಾಗಿ ಸ್ಥಳಾಂತರಗೊಂಡಿತ್ತು. ನಾವು ಒಂದು ರಾತ್ರಿ ಆ ಊರಲ್ಲಿ ತಂಗಿ, ಅಲ್ಲಿನ ಜನಗಳ ನೋವು, ಕಷ್ಟಸುಖಗಳ ವಿಚಾರಿಸಿದ್ದೆವು ಕೂಡ. ಆ ಜನರ ಅನುಭವಗಳು, ಅವರ ಮುಖಗಳು ಎಲ್ಲ ಒಂತರ ನಾನು ಯಾವುದೋ ಅಧೋಲೋಕದಲ್ಲಿದ್ದೇನೆ ಎನ್ನುವಂತೆ ಭಾಸವಾಗುತ್ತಿದ್ದವು. ರಾತ್ರಿ ಅಲ್ಲೆ ಕಳೆದು ಬೆಳಿಗ್ಗೆ ಹೀಗೆ ಸುತ್ತಾಡಿ, ಆ ಹಳ್ಳಿ ಸ್ಥಳಾಂತರಗೊಂಡ ಜಾಗದಿಂದ ಆ ಊರು ಮೊದಲಿದ್ದ ಜಾಗದೆಡೆಗೆ ಹೋದಾಗ ಆ ಊರು ಮುಳಯಗಡೆಯಾಗಿತ್ತು. ಕಣ್ಣೆದುರು ನೀರೋ, ನೀರು. ನಾನು ನಿಶ್ಚಲನಾಗಿ ಅದನ್ನೇ ದಿಟ್ಟಿಸಿ ನಿಂತಿದ್ದೆ. ಆ ಮೋಡ ಕವಿದ ಆ ವಾತಾವರಣದ ಅಲೆಗಳಿದ್ದರೂ ಅಲ್ಲಿ ನಿಶಬ್ದವಿತ್ತು. ಬಹುಶಃ ಆ ನದಿಯ ಅಣೆಕಟ್ಟಿನ ನೀರು ನಿರಾಶ್ರಿತ ಜನಗಳ ಕಣ್ಣೀರೇ ಎಂದು ನಾನು ಏನೋನೋ ಅಂದುಕೊಳ್ಳುತ್ತಿದ್ದೆ. ಆದರೆ ಆ ನೀರಸದ್ದಿನ ನಡುವೆ ದೂರದಿಂದ ಕೊಳಲಿನ ದನಿ ತೇಲಿ ಬಂದಂತಾಯ್ತು. ಹಾಗೆ ಕಿವಿಗೊಟ್ಟು ಆಲಿಸಿ ನಿಂತು ದನಿಯ ಜಾಡಿದು ನೋಡಿದೆ. ಆಗ ಆ ನೀರಿನ ಮಧ್ಯೆ ಸಣ್ಣ ದ್ವೀಪವಿತ್ತು. ಆ ದ್ವೀಪದಿಂದ ಕೊಳಲ ದನಿ ತೇಲುತ್ತಾ ಬರುತ್ತಿದೆ ಎಂಬುದು ಖಾತ್ರಿಯಾಯಿತು. ಆದರೆ ನನಗೆ ಆಶ್ಚರ್ಯವಾಗಿ ಯಾರಪ್ಪ ಇದು, ಈ ಜನರ ಬದುಕೇ ಮುಳಗಡೆಯಾಗಿ ಎಲ್ಲ ತತ್ತರಿಸುತ್ತಿರುವಾಗ ಇದೇನಿದು ಕೊಳಲ ದನಿ ಸಂಭ್ರಮ, ಯಾರೀ ಕೃಷ್ಣ ಎಂದು ಅಲ್ಲಿನ ಜನರನ್ನು ವಿಚಾರಿಸಿದಾಗ, ಆ ಜನಗಳು ಹೇಳಿದ ಕತೆ ಕೇಳಿ ನಾನು ಅನುಭವಿಸಿದ ವಿಪರ್ಯಾಸ ಮಿಶ್ರಿತ ರೋಮಾಂಚನ ಹೇಳಲಾಗದ ಅನುಭವ. ಇದರಿಂದ ನಾನು ಆ ಕೊಳಲ ದನಿಗೆ ಮಾರುಹೋದೆ.

ಆ ದ್ವೀಪವು ಆ ಕೊಳಲು ನುಡಿಸುತ್ತಿದ್ದವನ ಮನೆಯೇ ಆಗಿತ್ತು. ಅಲ್ಲಿ ಆತನ ಮನೆ, ದನ ಜಾನುವಾರುಗಳಿದ್ದವೆಂದು, ಅಣೆಕಟ್ಟಿನಿಂದಾಗಿ ನೀರು ಆವರಿಸಿ ಇಡೀ ಊರೇ ಮುಳುಗಿ ಹೋದಾಗ, ಈ ಕೊಳಲು ನುಡಿಸುವವನ ಮನೆಯು ಆ ನೀರಿನ ಮಧ್ಯೆ ದ್ವೀಪವಾಗಿಬಿಟ್ಟಿತು. ಇವರ ಬದುಕು ಎತ್ತರದ ಜಾಗಕ್ಕೆ ಸ್ಥಳಾಂತರಗೊಂಡರೂ, ಈ ಕೊಳಲು ನುಡಿಸುವಾತ ಈ ಅಣೆಕಟ್ಟಿನ ನೀರನ್ನು ಈಜಿ ತನ್ನ ಮನೆಯ ಆ ಜಾಗದಲ್ಲಿ ಕೂತು ದಿನಾ ಕೊಳಲು ನುಡಿಸುತ್ತಾನೆ ಎಂದ ಅಲ್ಲಿನ ಸ್ಥಳೀಕರ ವಿವರ ಕೇಳಿ, ಹೀಗೂ ಇರಬಹುದೇ ಎಂದು ಯೋಚಿಸಿದೆ. ನಾನು ಈ ಆತನ ಊರು, ನೆಲದ ಬಗೆಗಿನ ಸಂಬಂಧಕ್ಕೆ ದಂಗಗಾಗಿ ಹೋದೆ.

ಶಾಲೆಗಳಲ್ಲಿ ಏಕೆ ಈ ಬಗೆಯ ಜೈವಿಕತೆಯನ್ನು ಕಲಿಸಲಾರೆವು ಎಂಬುದು ಈಗಲೂ ನನ್ನಂಥವರಿಗೆ ಸವಾಲಾಗಿ ಪರಿಣಮಿಸಿದೆ. ಆ ನರ್ಮದಾ ನದಿ ತೀರದ ಜನರ ಮುಗ್ಧ ಮನಸ್ಸು ʻಮಾ ರೇವ ಅಪನಿ ಪಾನಿ ಕಲ್‌ ಕಲ್‌ ಕಲರವʼ ಎಂದಾಡುವುದರ ಹಿಂದಿನ ಸಂಬಂಧದ ಬಳ್ಳಿಯಿಂದ ಜನರನ್ನು ಅಗಲಿಸುವ ಸರ್ಕಾರಗಳ ನಿರ್ದಯಿ ಜನವಿರೋಧೀ ನೀತಿಗೆ ದೂಮ್ಖೇಡಿ ಗ್ರಾಮದ ಅನಾಮಿಕನ ಕೊಳಲ ದನಿಯು ಪ್ರತಿರೋಧವಾಗಿ ಮಂಡಲಗೊಳ್ಳುತ್ತಿತ್ತು.

ಹೀಗೆ ನಾನು ಕ್ರಮೇಣ ಏನೇನೋ ಯೋಚಿಸಲು ತೊಡಗಿದ್ದೆ. ಬಾಬಾ ಸಾಹೇಬರ ಹೋರಾಟ ಮತ್ತು ಜನ ಪ್ರತಿರೋಧದ ವಿಚಾರಗಳು ಮತ್ತಷ್ಟು ಢಾಳಾಗಿ ನನ್ನನ್ನು ಆವರಿಸಿದವು. ಮೇಲಾಗಿ ನಾನು ಬದುಕನ್ನು ಗ್ರಹಿಸಿದ ಪರಿ, ಹಾಗೂ ನನ್ನ ಸಾಹಿತ್ಯಕ ರೋಮಾಂಚನ ಮನಸ್ಸಿಗೂ ನಿಲುಕದ ಈ ಸಂಕಟಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ಆ ಕ್ಷಣದಲ್ಲಿ ಮೂಡಿದ ಪ್ರಶ್ನೆಗಳು ಯಾವ ಸಿದ್ಧಾಂತವೂ ಕಲಿಸದ ನೋಟಗಳನ್ನು ನೀಡಿವೆ.

ಮೂರನೆಯದಾಗಿ…

ಈ ನೆಲ, ನದಿ, ಜನ ಸಮೂಹ ನೆನಪುಗಳ, ಅವುಗಳ ಒಳಗಣ ಸಂಘರ್ಷಗಳ ಬೆಂಕಿ ಈಗಲೂ ನನ್ನನ್ನು ತಾಗುತ್ತಿದೆ. ಈ ಅಗ್ನಿಶಿಖೆಯ ಜಾಡಿದು ಕಾವೇರಿ ತೀರಕ್ಕೆ ಬಂದಾಗ ಚಿಕ್ಕಲ್ಲೂರಲ್ಲಿ ನನಗೆ ಕಂಡ ಕಂಡಾಯಗಳ ಮೆರವಣಿಗೆ ಹಾಗೂ ಅಪಾರ ಜನಸ್ತೋಮದ ನಡುವೆ ಎದ್ದ ಚಂದ್ರಮಂಡಲದ ಶಿಖೆಯಲ್ಲಿ ಜನಗಳ ಚರಿತ್ರೆಯ ಶಕ್ತಿ ಅರಿವಾಯಿತು. ಅದರಲ್ಲಿಯೂ ಮಾರನೇ ದಿನ ಕಾವೇರಿ ತೀರದಲ್ಲಿ ಅಲೆದಾಡಿ, ತೆಪ್ಪ ಏರಿ ಆ ಜಾತ್ರೆಗೆ ಈ ಕಡೆಯ ಚನ್ನಪಟ್ಟಣದ ಕಡೆಯಿಂದ, ಹಲಗೂರಿಗೆ ಬಂದು, ಅಲ್ಲಿಂದ ಮುತ್ತತ್ತಿಗೆ ಬಂದು, ತೆಪ್ಪದ ಮೂಲಕ ಕಾವೇರಿ ದಾಟಿ ಚಿಕ್ಕಲ್ಲೂರಿಗೆ ಬರುವ ಸಾಂಸ್ಕೃತಿಕ ದಾರಿ ಇದೆ. ಈ ದಾರಿಯಲ್ಲಿಯೇ ನೀಲಗಾರರು, ನಿಜವಾದ ಭಕ್ತಿಯ ಪರಕಾಷ್ಠೆಯಲ್ಲಿ ಕಂಡಾಯದ ಒಡೆಯನನ್ನು ನೆನೆದು ಬರುತ್ತಿರುವವರನ್ನು ನೋಡುವುದೇ ಒಂತರದ ಖುಷಿ, ಹಾಗೂ ತಣ್ಣಗಿನ ಸಂಭ್ರಮ.

“ಪದವನೇಳೊ ನಾಲಗೆ ಮೇಲೆ ಒಲಿದು ಬಾರೋ ಧಮ್ಮ ಗುರುವೇ” ಎಂಬ ನೀಲಗಾರರ ದನಿ, ಕಾವೇರಿ ತೀರದಲ್ಲಿ ಮಾರ್ದನಿಸುವ ಬಗೆಯ ವಿಸ್ಮಯವು ಆ ನದಿ, ಕಾಡಿನ ಜನ ನಡಿಗೆಯ ನಡುವೆ ಹಲವು ದಾರ್ಶನಿಕವೆನಿಸುವ ಕುತೂಹಲಕಾರಿ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಮತ್ತೆ ನಾನಾಗ ವಿಶ್ವವಿದ್ಯಾಲಯದ ಸಂಶೋಧಾನಾರ್ಥಿಯಾಗಿ ಒಂದು ರೆಕಾರ್ಡರ್‌ ಹಾಗೂ ಕ್ಯಾಮೆರ ಹೆಗಲಿಗೇರಿಸಿಕೊಂಡು ತೆಪ್ಪದ ನದಿಯೇರಿ ಹೋರಟಾಗ, ನಾನಿದ್ದ ತೆಪ್ಪಕ್ಕೆ ಚಿಕ್ಕಲ್ಲೂರಿಗೆ ಮಹಿಳಾ ಭಕ್ತೆಯರು ಹತ್ತಿಕೊಂಡಿದ್ದರು. ನಾನು ಆ ನದಿ, ಆ ಜನ ಇದೆಲ್ಲವನ್ನು ತಣ್ಣಗೆ ಕೂತು ಒಬ್ಬ ಟೂರಿಸ್ಟನಂತೆ ದಿಟ್ಟಿಸುತ್ತಿದ್ದಾಗ, ಇದ್ದಕಿದ್ದಾಗೆ “ಆನೆ ಮೇಲೆ ಅಮ್ಮಯ್ಯ, ಕುದ್ರೆ ಮೇಲೆ ಸಿದ್ದಪ್ಪಾಜಿ..” “ಹಾಡಿರಿ ರಾಗಗಳ ನುಡಿಸಿರಿ ತಾಳಗಳ…” ಎಂಬ ಪದದನಿ ಟೂರಿಸ್ಟ್‌ ಅಥವಾ ಅಕಾಡಮಿಕ್‌ ಆದ ನನ್ನ ವ್ಯಕ್ತಿತ್ವದಿಂದ ಹೊರಗಡೆ ಬಂದ ಕ್ಷಣ, ನಾನು ಆ ಪರಿಶೆಯ ಜನರನ್ನು ಜೈವಿಕವಾಗಿ ಬೆಸುಗೆ ಹಾಕಿಕೊಳ್ಳುವಂತೆ ಮಾಡಿತು.

ಆ ಕ್ಷಣಕ್ಕೆ ನನ್ನ ಕ್ಯಾಮೆರಾ, ರೆಕಾರ್ಡ್‌ಗಳನ್ನು ನದಿಗೆ ಎಸೆದು ಬಿಡಬೇಕೆನಿಸಿತು. ಜಾನಪದ ಎಂದರೆ ಮ್ಯೂಸಿಯಂ ಥಿಂಕ್ಸ್‌ ಎಂಬಂತಹ ವಿಶ್ವವಿದ್ಯಾಲಯಗಳು ಕೊಟ್ಟ ವ್ಯಾಖ್ಯಾನಗಳು ಅಂದೇ ಕಾವೇರಿ ನೀರಿನ ಹರಿವಲ್ಲಿ ಕೊಚ್ಚಿ ಹೋದವು. ಡಿ. ಆರ್‌. ನಾಗರಾಜ್‌ ರವರು ಹೇಳಿದಂತೆ “ಜಾನಪದದೊಳಗೆ ಮನುಷ್ಯ ಸಂಘರ್ಷದ ಚರಿತ್ರೆ ಇದೆ” ಎಂಬುದರ ಸೂಚನೆ ಆ ನರ್ಮದಾ, ಈ ಕಾವೇರಿ ತೀರಗಳಲ್ಲಾಯಿತು. ನನ್ನ ಅರಿವಿನಲ್ಲಾದ ಪಲ್ಲಟ, ಜನರ ಮುಗ್ಧ ನಂಬಿಕೆಯ ಲೋಕದೊಳಗೆ ತೋಯ್ದು ಹೋಗಿ, ಆ ಕಂಡಾಯ ಮೆರೆವ ದಾರೀಲಿ ಆ ಬೆಟ್ಟ, ನದಿ, ಕಾಡು ಕಣಿವೆಯ ನಿಬ್ಬೆರಗಿನ ಸ್ಥಿತಿಯಲ್ಲಿ ನಾನೂ ನಿಶ್ಚಲನಾಗಿ ಕೂರುವಂತೆ ಪ್ರಭಾವಿಸಿತು.

ಎಂ.ಎ. ತರಗತಿಗಳಲ್ಲಿ ಕಿರಂ ಮೇಷ್ಟ್ರು ಜೀವನರಥೋತ್ಸವಿದು ಇದು ಎಂದು ಪಂಪನನ್ನು ಮೈದುಂಬಿಕೊಂಡು ಕಾವ್ಯದ ಬಗ್ಗೆ ಉತ್ಸಾಹದಲ್ಲಿ ಮಾತಾಡುತ್ತಿದ್ದ ಕ್ಷಣಗಳು, ನನಗೆ ಹೊರಗಿನ ಈ ಜೀವನ ಸನ್ನಿವೇಶಗಳಿಂದಾಗಿ ನಿಜ ಅನುಭವಕ್ಕೆ ದಕ್ಕುವಂತಾದವು. ಯಾವ ಅಕ್ಷರ ಕಿಲುಬಿಡಿದು ವ್ಯಕ್ತಿಯನ್ನು ದ್ವೀಪವನ್ನಾಗಿಸುವ ಸ್ಥಿತಿಗೆ ನೂಕಿತ್ತೊ ಇಂತಹ ಅಕ್ಷರದ ಜಡತೆಯಿಂದ ವ್ಯಕ್ತಿ ತಾನು ತನ್ನ ಅರಿವಿಗೆ ಬಂದು ತನ್ನ ವಿಕಲ್ಪಗಳಿಂದ, ಕಲ್ಪಿತ ಭ್ರಮೆಗಳಿಂದ ಹೊರಬರಬೇಕು. ಇದು ರೂಪಾಂತರ ಕ್ರಿಯೆಯಾಗಿ ನನ್ನ ರೂಢಿಗತ ಜ್ಞಾನ ಮತ್ತು ನಂಬಿಕೆಗಳ ಅರ್ಥವನ್ನೇ ಪಲ್ಲಟಿಸಿತು. ಅಕ್ಷರದ ಸಂವೇದನಾಶೂನ್ಯತೆಯ ನಿಸ್ತೇಜತೆಯನ್ನು ವಿಸರ್ಜಿಸಿ, ನಾನು ಕಂಡಾಯದ ಸಮೂಹದ ಅರಿವಲ್ಲಿ ಲೀನವಾಗುವಂತಹ ನಂಟಿನ ಜೀವನವೃಕ್ಷದ ಸಂತಾನವಾಗುವಂತೆ ಮಾಡಿತು. ಯಾವುದ್ದನ್ನು ಕುವೆಂಪುರವರು ಮೌನ ಕ್ರಾಂತಿ ಎಂದರೋ, ಅದು ನನ್ನೊಳಗೆ ಮೊಳೆಯದಲೆಗಳಂತೆ ಈ ಬಗೆಯ ನೆನಪುಗಳಿಂದಾಗಿ ಅನುರಣಿಸುತ್ತಲೇ ಇದೆ.

One thought on “ಅರಿವೇ ಕಂಡಾಯ – 2 : ಅವ್ವ, ಆ ಮಾ ರೇವ, ಈ ಮಾ ಕಾವೇರಿ”

Leave a Reply

Your email address will not be published. Required fields are marked *