ನಾವು ಆರಂಭದಲ್ಲಿ ಒಂದಷ್ಟು ವಿಚಾರಗಳನ್ನಿಟ್ಟುಕೊಂಡು ಕವಲೊಡೆಯುವ ಜೀವನ ಸನ್ನಿವೇಶಗಳಿಗೆ ಒಳಗಾಗುತ್ತೇವೆ. ಕೇವಲ ವೈಚಾರಿಕತೆ ಸುತ್ತ ಏಕಾಂಗಿಯಾಗುವುದು, ಅಮೂರ್ತ ಹಂಬಲ, ಅಲೋಚನೆಗಳ ಗುಮಾರಾದಂತೆ ಇವುಗಳ ಸುತ್ತಲೇ ಗಿರಕಿ ಹೊಡೆಯುವುದು. ಮತ್ತೆ ಎಲ್ಲೋ ಮನಸ್ಸನ್ನು ನೆಟ್ಟು ಕಣ್ಣೆದುರಿನ ವಾಸ್ತವದಲ್ಲಿ ಸುಮ್ಮನೆ ಜೀವಿಸುವುದು. ಮತ್ತೆಲ್ಲೋ ಮನಸ್ಸು ಅಲೆದಾಡುವುದು. ಈ ತರದ ಬೌದ್ಧಿಕ ಪುಲಕಗಳ ಏಕಾಂತವು ನಮ್ಮನ್ನು ಪಾಸಿವ್ನೆಸ್ಗೂ ತಳ್ಳುತ್ತದೆಂಬುದು ಬೇರೆಯದೆ ವಿಚಾರ. ಆದರೆ ಬದುಕು ಅಂದ್ರೆ ಇದಲ್ಲ ಎಂಬ ಭಾವನೆಗಳು, ಹಂಬಲಗಳು ಮತ್ತಾವುದೋ ಅಮೂರ್ತ ತೀರಕ್ಕೆ ನಮ್ಮನ್ನು ಎಳೆದೊಯುತ್ತವೆ. ಇದು ನಮ್ಮ ಎಚ್ಚರ ನಮಗೆ ಹುಟ್ಟಾಕುವ ದ್ವಂದ್ವಾತ್ಮಕ ಸಂಘರ್ಷವೆನಿಸುತ್ತದೆ.

ನಾನು ಊರುಕೇರಿಯ ಹಿಂಜರಿಕೆ ಸ್ವಭಾವದ ವಿಲಕ್ಷಣ ವ್ಯಕ್ತಿತ್ವದವನಾಗಿದ್ದೆ. ಅಥವಾ ಇದು ನನ್ನದೇ ಲೋಕಗ್ರಹಿಕೆ ಹುಟ್ಟುವ ಸಂದರ್ಭದ ನನ್ನ ಚಿತ್ರಣವೂ ಇದಾಗಿತ್ತೇನೊ. ಇದೊಂತರ ಏನೊಂದು ಅರಿವಾಗದ ಸ್ಥಿತಿ. ಒಂತರ ಆ ಕ್ಷಣದಲ್ಲಿ ಎಲ್ಲವುಗಳ ಜೊತೆ ಸುಮ್ಮನೆ ಇದ್ದುಬಿಡುವ ಸ್ಥಿತಿಯಂತೆ ಕಂಡರೂ, ನಮ್ಮ ಆಳದಲ್ಲಿ ಏನೋ ಒಂತರ ಅಶಾಂತ ಮೌನ, ಸಂಘರ್ಷದ ಸೆಳೆತ, ವೈಚಾರಿಕ ತಿಮಿರು, ವ್ಯಕ್ತಿವಿಶಿಷ್ಠತೆ ವ್ಯಸನ ಇವೆಲ್ಲವೂ ಮೊಳೆಕೆಯೊಡೆಯುತ್ತವೆ. ಅದರಲ್ಲೂ ಈ ಸಾಹಿತ್ಯದ ಗಂಧಗಾಳಿಯ ಓದಿನ ಜೊತೆ ಲೀನವಾದರೆ ವ್ಯಕ್ತಿ ಲೋಕವಿಮುಖನಾಗುವ ವಿಚಿತ್ರ ಬೌದ್ಧಿಕ ವಾಸನೆಗಳಲ್ಲಿ ತಣ್ಣಗೆ ಒಳಗೊಳಗೆ ನರಳಬೇಕಾಗುತ್ತದೆ. ಇದು ಜಡತೆಯಂತಿದ್ದರೂ ಇದರಾಳದಲ್ಲಿ ಕ್ರಿಯಾಶೀಲತೆ ಇದೆ ಎಂಬ ನಂಬಿಕೆಗಳನ್ನು ತಾಳುವುದು. ಮತ್ತೇ ಈ ನಂಬಿಕೆಗಳು ಕಣ್ಣೆದುರಿನ ನಿಜದ ಉರಿಗೆ ಕರಗಿಬಿಟ್ಟರೆ ಮತ್ತೇನೋ ಮನೋ ಮಸೆತ, ಖಾಲಿ ಗೂಡಲಿ ಕನಸು ಕಾಣ್ವ ಒಂಟಿ ಹಕ್ಕಿ ಚಡಪಡಿಕೆಗಳು ಎನ್ನಬಹುದೇ. ಅಥವಾ ಇದನ್ನು ಅಂಟಿಯೂ ಅಂಟದ ರೀತಿ ಎಂದು ಹೇಳಬಹುದಾಗಿತ್ತೇನೊ. ಅಥವಾ ವ್ಯಕ್ತಿಯ ವಿಚಿತ್ರ ಭಗ್ನತೆಯೂ ಆಗಿತ್ತೇನೊ. ಅಥವಾ ಒಂತರ ಇದು ಮೈಯ್ಯ ಕೂರೆಗಳನ್ನು ಕುಕ್ಕುತ್ತಾ ಕಾಲ ಕಳೆವ ಕುರಿಗಾಹಿಯ ರೀತಿಯೂ ಆಗಿತ್ತೇನೊ.

ಬಂಜಗೆರೆ ಜಯಪ್ರಕಾಶ್

ನಾನು ಎಂ.ಎ ಮುಗಿಸಿದ್ದೆ. ಊರಿನ ರಂಪಾಟಗಳ ಆಚೆಗೂ ರಾಮನಗರದ ಸಂವಾದದಲ್ಲಿ ಓದು, ಸಾಹಿತ್ಯ ಚರ್ಚೆ, ಇವುಗಳೇ ಮುಖ್ಯ ಎಂದೇ ದಿನ ನೂಕಿಬಿಡುತ್ತಿದ್ದೆನು. ಊರು, ಜನ, ಮನೆ ಇವುಗಳಿಗೆ ದೂರವಾಗುವ ಒಂದು ವಿಚಿತ್ರ ಅಪರಿಚಿತನದ ಪ್ರವೃತ್ತಿ ಶುರುವಾಯಿತು ಅನಿಸುತ್ತದೆ. ಊರಲ್ಲಿ ಹೆಚ್ಚೆಂದರೆ ಪುಸ್ತಕ ಹಿಡಿದು ಆಡು ಮೇಯ್ಸಲು ಹೋಗುತ್ತಿದ್ದೆನು. ಜನ ಊರಲ್ಲಿ ಅದೇನೊ ಎಂ.ಎ. ಮಾಡಿ ಆಡ್ತಿಕ ಕಾಯೋಕೆ ಹೋಗ್ತಾನಲ್ಲ ಅಂತ ಅನ್ಕೊಳ್ತಿದ್ರು. ಆದರೂ ಈ ಸನ್ನಿವೇಶ ಯಂಗಿತ್ತೆಂದರೆ, ಇವ್ನು ಎಷ್ಟು ಓದ್ತಾನಪ್ಪ ಎಂದು ಜನ ಅಂದುಕೊಳ್ಳುವಂತೆ ನಾನು ಸಾಹಿತ್ಯ, ವೈಚಾರಿಕತೆ, ಚಳವಳಿ ಕುರಿತು ಓದಲು ತೊಡಗಿಕೊಂಡಿದ್ದೆನು. ನನಗೆ ಈಗಲೂ ನೆನಪಿದೆ ಬಂಜಗೆರೆ ಜಯಪ್ರಕಾಶ್ ಅವರು ಅನುವಾದಿಸಿದ ʻತಲೆಮಾರುʼ ಕಾದಂಬರಿಯನ್ನು ಆಡು ಮೇಯ್ಸಿಕೊಂಡೆ ಓದಿದ್ದು, ಆ ಕಾದಂಬರಿ ಓದಿ ಅವರ ಜೊತೆ ಮಾತಾಡಬೇಕೆಂಬ ತೀವ್ರ ಹಂಬಲಕ್ಕೂ ಒಳಗಾಗಿದ್ದೆ. ಆದರೆ ಆಗ ಮೊಬೈಲು ಬಂದಿದ್ದರೂ ನಮ್ಮಂಥವರು ಹೊಂದುವಷ್ಟು ಸ್ಥಿತಿವಂತರಾಗಿರಲಿಲ್ಲ. ಅಲ್ಲದೇ, ಈ ಕಾದಂಬರಿ ಓದಿನಿಂದ ಮತ್ತೆ ಜೇಪಿ ಸರ್ ಬಗ್ಗೆ ಪ್ರೀತಿ ಮತ್ತು ಅಭಿಮಾನ ತುಂಬಾ ಇಮ್ಮಡಿಗೊಂಡಿತ್ತು ಆಗ. ಹಾಗೆ ಪ್ರಭಾವ ಬೀರಿತ್ತು ಆ ರೂಟ್ಸ್ ಕಾದಂಬರಿ. ಆ ಆಫ್ರಿಕಾ, ಆ ಕಾಡು, ಆ ಜನ ಅವರ ಕಷ್ಟಗಳು ಹೀಗೆ ಈ ಕಾದಂಬರಿ ಓದುತ್ತಾ ಓದಂತೆಲ್ಲ, ಆ ಕಾದಂಬರಿಯ ಸಂವೇದನೆ ಹಾಗೂ ಆ ಕಪ್ಪು ಜನಗಳ ನೋವು, ಅವಮಾನ ಸಂಕಟಗಳು ನಮ್ಮದೇ ಜೀವನದ ಭಾಗವಾಗಿ ಕಂಡವು. ಅದರಲ್ಲೂ ಆಫ್ರಿಕಾ ಆ ಬುಡಕಟ್ಟಿನ ನಂಬಿಕೆಗಳು ನಮ್ಮದೇ ಲೋಕದೃಷ್ಟಿಯಂತಿದ್ದವು. ಅದರಲ್ಲೂ ಆ ಬುಡಕಟ್ಟಿನಲ್ಲಿ ಮಗು ಹುಟ್ಟಿದ ತಕ್ಷಣ ಅದನ್ನು ಹೊರಗೆ ತಂದು ಆಕಾಶಕ್ಕೆ ತೋರಿಸುವ ಸನ್ನಿವೇಶವಂತೂ ನನ್ನನ್ನೂ ಮತ್ತೆ ಮತ್ತೆ ಕಾಡುತ್ತಲೇ ಇರುವಂತೆ ಮಾಡಿದೆ.

ಜೇಪಿ ಸರ್ ಅವರನ್ನು ನಾನು ರಾಮನಗರದ ಸಂವಾದದಲ್ಲಿ ಮೊದಲು ನೋಡಿದ್ದು. ನಮಗೆಲ್ಲ ಸಾಹಿತಿ ಬರಹಗಾರರು ಎಂದರೆ ಕುವೆಂಪು, ತೇಜಸ್ವಿ, ಲಂಕೇಶರಷ್ಟೆ ಎಂಬ ಭ್ರಮೆಯನ್ನು ಹೊಂದಿದ್ದೆವು. ಜೇಪಿ ಸರ್ ರವರನ್ನು ನೋಡಿ, ಇವರೂ ಸಾಹಿತಿಯೇ ಎಂದು ನಾನು ಆಶ್ವರ್ಯಪಟ್ಟಿದ್ದುಂಟು. ಅವರ ಸಿಂಪಲ್ನೆಸ್, ಅನುದ್ವೇಗರಹಿತವಾದ ಮಾತು ಎಲ್ಲವೂ ನಾನು ಅಕಾಡಮಿಕ್ ಆಗಿ ಕಟಿಕೊಂಡಿದ್ದ ಸಾಹಿತ್ಯ, ಸಾಹಿತಿಗಳ ಚಿತ್ರಣವನ್ನು ಒಡೆದು ಹಾಕಿತು. ಸರ್ ಆಗಾಗ ಸಂವಾದದ ಚರ್ಚೆಗಳಲ್ಲಿ ಬಂದು ಹೋಗ್ತಿದ್ರಷ್ಟೆ. ಒಂದು ಡೈರಿ ಹಿಡ್ಕೊಂಡ್ ಬರೋರು. ಬಹುಶಃ ಕಾವೇರಿ ನದಿ ವಿವಾದ ಕುರಿತ ಚರ್ಚೆ ಇರಬೇಕು. ಸರ್‍ನ ನಾ ಅಂದು ಪ್ರಥಮವಾಗಿ ನೋಡಿದ್ದೆ.

ಸಂವಾದದ ಲೈಬ್ರರಿ ಪುಸ್ತಕಗಳು ನನ್ನ ಅಲೋಚನೆ ಓದಿನ ಕ್ಯಾನ್ವಸನ್ನು ವಿಸ್ತರಣೆ ಮಾಡಿದವು ಎಂದರೆ ತಪ್ಪಾಗದು. ಇಲ್ಲಿ ಕೋಮುವಾದ, ಎಡಪಂಥೀಯ ವಿಚಾರಧಾರೆ, ಜಾಗತೀಕರಣ ವಿರೋಧೀ ಕುರಿತ ಪುಸ್ತಗಳೂ ಅಲ್ಲದೆ, ದಲಿತ ಆತ್ಮಕತೆಗಳು, ಕ್ರಾಂತಿಕಾರಿ ಕವಿಗಳ ಕವನಗಳು ಇರುತ್ತಿದ್ದವು. ಅದರಲ್ಲೂ ಮರಾಠಿ ದಲಿತ ಆತ್ಮಕತೆಗಳಾದ ಆಕ್ರಮ ಸಂತಾನ, ಉಚಲ್ಯ ಹಾಗೂ ಗಬಾಳ ಆತ್ಮಕತೆಗಳನ್ನು ಓದಿ ಅವುಗಳೊಳಗೆ ಕಳೆದು ಹೋಗಿದ್ದೆ. ದಲಿತ ಲೋಕದ ಈ ಆತ್ಮಕತೆಗಳನ್ನು ಓದಿ ಬೆಚ್ಚಿ ಬಿದ್ದಿದ್ದೆ ಕೂಡ. ಅಲ್ಲದೆ ನಾನು ಆಂಧ್ರದ ವಿಪ್ಲವ ಸಾಹಿತ್ಯ ಕುರಿತು ಓದಿದ್ದು ಇಲ್ಲೆ ಎನ್ನಬಹುದು. ಸಾಮಾಜಿಕ ವಿಮರ್ಶೆಯ ನನ್ನ ಗ್ರಹಿಕೆಗಳು ಇಲ್ಲಿನ ಪುಸ್ತಕಗಳಿಂದ ತೀವ್ರವಾದವೆನ್ನಬಹದು. ಜೊತೆಗೆ ಆಗ ನಾನು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಲಂಕೇಶರ ನೀಲು ಪದ್ಯಗಳು, ಟೀಕೆ ಟಿಪ್ಪಣಿಯ ಜೊತೆಗೆ ಅವರ ಅಕ್ಕ, ಡಿ.ಆರ್ ನಾಗರಾಜ್ ರವರ ಸಾಹಿತ್ಯ ಕಥನ ಕೃತಿಗಳನ್ನು ಓದಿದ್ದೆ. ಅದರಲ್ಲೂ ಡಿ.ಆರ್ ಅವರ ಬರಹಗಳ ಹುಚ್ಚು ಹಿಡಿಸಿಕೊಂಡಿದ್ದೆನು. ಸಾಹಿತ್ಯದಲ್ಲಿ ಶುದ್ಧ ಸಾಹಿತ್ಯ, ಅಶುದ್ಧ ಸಾಹಿತ್ಯದ ವಿಚಾರಗಳು ನನ್ನನ್ನೂ ಆಕರ್ಷಿಸಿದ್ದವು. ನಾನಂತು ನನ್ನ ಹಿನ್ನಲೆ ಹಾಗೂ ಸಂವಾದದ ಓರಿಯಂಟೇಷನ್ನಿನ ಕಾರಣಕ್ಕೆ ಏನೋ ನಾನು ಅಶುದ್ಧ ಸಾಹಿತ್ಯದ ಕಡೆ ಹೆಚ್ಚು ಆಕರ್ಷಿತನಾಗಿದ್ದೆ.

ನಿಜವಾಗಲೂ ಎಂ.ಎ.ನಲ್ಲಿ ಘಟಾನುಘಟಿಗಳೇ ಪಾಠ ಮಾಡಿದ್ದರೂ, ನನಗೆ ಸಾಹಿತ್ಯ, ಸಾಮಾಜಿಕ ಚಳವಳಿ ಹಾಗೂ ವೈಚಾರಿಕತೆಗಳ ಅರಿವು ತೀವ್ರವಾದದ್ದು ಎಂ.ಎ ಮುಗಿಸಿ ನಾನು ಸಂವಾದದಲ್ಲಿ ಓರಿಯಂಟೇಷನ್ಗೆ ಒಳಗಾದದ್ದು, ಮತ್ತೆ ಬೀದಿ ನಾಟಕದಲ್ಲಿ ಬೀದಿ ಬೀದಿ ಸುತ್ತಿ ಹಾಡಾಡಿದ ಮೇಲೆಯೇ ಎನ್ನಬಹುದು. ರಾಮನಗರದ ಸಂವಾದದ ಲೈಬ್ರರಿಯಲ್ಲಿ ಬಹಳಷ್ಟು ಪುಸ್ತಕಗಳನ್ನು ಓದುತ್ತಿದ್ದೆ. ಆನೆಯನ್ನು ಸೋಲಿಸಿದ ಮಿಡತೆಗಳು ಈ ಪುಸ್ತಕ ನೋಡಿ ಇದೇನು ಹೀಗಿದೆಯಲ್ಲ ಎಂದು ಓದಲು ಟ್ರೈ ಮಾಡಿದ್ದೆ. ಮತ್ತೆ ಅಲ್ಲಿ ಸಾಕಿಯವರ ಮೇಕಿಂಗ್ ಹಿಸ್ಟರಿ ಪುಸ್ತಕ ನೋಡಿದ್ದೆ. ಅದು ಇಂಗ್ಲೀಷ್‌ನಲ್ಲಿತ್ತು, ಓದಲೂ ಆಗಲಿಲ್ಲ. ಆದರೆ ಆ ಟೈಟಲ್ ನನ್ನನ್ನು ತುಂಬಾ ಆಕರ್ಷಿಸುತ್ತಿತ್ತು.

ಸಂವಾದದಲ್ಲಿ ನಾವುಗಳೇ ಚರ್ಚೆ, ಹಾಡು ಮತ್ತೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೆವು. ಮತ್ತೆ ನಮ್ಮೆಲ್ಲ ಅಲೋಚನೆಗಳಿಗೆ ಮಿತೃತ್ವದ ಆಲಿಂಗನ ನೀಡಿ ಜೊತೆಗಿದ್ದು, ಅಪ್ಪಿ ಈ ತರ ಮಾಡೋಣ, ನೋಡಿ ಯೋಚಿಸಿ ಎಂದು ಪ್ರೋತ್ಸಾಹ ನೀಡುತ್ತಿದ್ದವರು ಟಿ.ಹೆಚ್ ಲವಕುಮಾರ್ ಎಂಬ ವಿಚಿತ್ರ ಆಕರ್ಷಣೀಯ ವ್ಯಕ್ತಿತ್ವ. ಈ ಲವಕುಮಾರ್ ಜೊತೆಗೆ ಪಾರ್ಥಸಾರಥಿ ಬರೋರು. ನನಗೆ ಈಗಲೂ ನೆನಪಿದೆ. ಮ್ಯಾನ್ಸನ್ ಹೌಸ್ ಎಂಬ ಫ್ರೆಂಚ್ ಬ್ರಾಂದಿ ಬ್ಯಾಟಲ್ನ ಫಸ್ಟ್ ಟೈಮ್ ಇವರ ಬಳಿ ನೋಡಿದ್ದು. ಸಾಕಷ್ಟು ವಿಚಾರಗಳಾದ ಮೇಲೆ ನಾನೂ ಅದರ ರುಚಿ ನೋಡಿದ್ದೆನು. ಬಹುಶಃ ಡ್ರಿಂಕ್ಸ್ ಬಗ್ಗೆ ಮತ್ತೂ ಆನಂತರ ಗುಂಡಿನ ಗೋಷ್ಠಿಯ ರಂಗಿನ ಮಾತು, ವಿಚಾರಗಳ ಖಯಾಲಿಗಳ ಸಂಬಂಧ ಇಲ್ಲಿಂದ ಚಿಗುರಿತು ಎಂದರೂ ತಪ್ಪಾಗದು.

ನಾವು ಜನರಂಗ ತಂಡವನ್ನು ಕಟ್ಟಿಕೊಂಡಿದ್ದೆವು. ಒಮ್ಮೆ ನಾನು, ಲವಕುಮಾರ್ ಮತ್ತೆ ಇತರರು ಸೇರಿ ರೇವಣಸಿದ್ಧೇಶ್ವರ ಬೆಟ್ಟದಲ್ಲಿ ಆಹೋರಾತ್ರಿ ಚರ್ಚೆ, ಹಾಡುಗಳನ್ನು ಹಾಡಿದ್ದೆವು. ನಮ್ಮ ಜನರಂಗ ತಂಡವನ್ನು ಜನಾರ್ಧನ್ ಕೆಸರಗದ್ಧೆ ದೊಡ್ಡಬಳ್ಳಾಪುರ ಸಂವಾದದ ಕಾರ್ಯಕ್ರಮಗಳಿಗೂ ಕರೆಸುತ್ತಿದ್ದರು. ಮತ್ತೆ ದೊಡ್ಡಬಳ್ಳಾಪುರ ಆರ್ಕಾವತಿ ಮತ್ತು ಕುಮುದ್ವತಿ ಹೋರಾಟದ ಕಾರ್ಯಕ್ರಮಗಳಲ್ಲೂ ನಾವು ಪರಿಸರ ಹಾಗೂ ಹೋರಾಟದ ಹಾಡುಗಳನ್ನು ಹಾಡಿದ್ದೆವು ಕೂಡ.

ಕಿ.ರಂ. ನಾಗರಾಜ್

ಸಂವಾದದ ಸಹವಾಸದಿಂದಲೋ ಏನೋ ಹಾಡುಹಬ್ಬ, ಬೆಳದಿಂಗಳ ಹಬ್ಬ, ಅಮವಾಸೆ ಹಬ್ಬ ಅಂತ ಮಾಡ್ತಿದ್ದೊ. ಈ ಅಮವ್ಯಾಸೆ ಹಬ್ಬ ಅಂತ ರೇವಣಸಿದ್ಧೇಶ್ವರ ಬೆಟ್ಟದಲ್ಲಿ ಕಾರ್ಯಕ್ರಮ ಹಾಕೊಂಡಿದ್ವಿ. ಗೆಸ್ಟಾಗಿ ಕಿರಂ ಮೇಷ್ಟ್ರುನ ಕರಿಬೇಕು ಅನ್ಕೊಂಡಿದ್ದವು. ಆಗಿನ ಸಂವಾದದ ಕಿರಣ ಮೇಡಂ, ನಾನು, ಹುಲಿಕುಂಟೆಮೂರ್ತಿ, ರವಿಬಾಗಿ ಎಲ್ಲ ಕಿರಂ ಬಳಿ ಮಾತಾಡಿದ್ದೆವು. ಸರ್ರು ಒಪ್ಕೊಂಡಿದ್ರು. ಆದರೆ ಇದ್ದಕಿದ್ದ ಹಾಗೆ ಕಿರಣ್ ಮೇಡಂ ರವರ ಅತಿಯಾದ ಪೋನಿಂಗ್ ಆಪ್ರೋಚ್‌ನಿಂದ ಬೇಸತ್ತು ಕಿರಂ ಮೇಷ್ಟ್ರುಗೆ ಬೇಸರ ಆಗಿ ಓಗ್ರಿ ನಾನ್ ಬರೋಲ್ಲ. ಯಾರ್ರೀ ಅವ್ರು ಪೋನಿ. ಅಷ್ಟೊತ್ತು ಪೋನನಲ್ಲಿ ಮಾತಾಡ್ತರ ಅಂದ್ಬಿಟ್ರು. ಕಾರ್ಯಕ್ರಮ ಸಂಜೆಗಿದೆ ಸರ್ ಈಗನ್ಬುಟ್ರಲ್ಲ ಅಂದ್ಬುಟ್ಟು, ನಾವು ಕಿರಂ ಸರ್‍ನ ಕನ್ವಿನ್ಸ್ ಮಾಡೋಕೆ ಡಿಪಾರ್‍ಟ್‌ಮೆಂಟ್ಗೆ ಬಂದೆವು. ನಾನು ಹುಲಿಕುಂಟೆ ಮೂರ್ತಿ, ರವಿಬಾಗಿ ಹೋದೊ. ಮೇಸ್ಟ್ರು ಮನೋಗೊಂಟೋಗಿದ್ರು. ಅಯ್ಯೋ ಶಿವ್ನೆ ಅನ್ಕೊಂಡು ಅಡ್ರಸ್ ಹುಡುಕಿಕೊಂಡು ಮನೆಗೋದೊ ಹೆದ್ರಕೊಂಡೆ. ಸರ್ ನಮ್ಮನ್ನಾ ನೋಡ್ಬುಟ್ಟು, ಬನ್ರಿ ಅಂದ್ರು. ಮೆಲ್ಲಗೆ ಒಳ್ಗೋದೊ ನೋಡುದ್ರೆ, ಸ್ವಾಮಿ ಪುಸ್ತಕಗಳ್ನ ಗುಡ್ಡೆ ಹಾಕೊಂಡು, ಬನ್ನಿ ಅಲ್ಲಮಪ್ರಭುವಿನ ವಚನ ಕೇಳಿ ಅಂದ್ರು. ನಾವು ಹ್ಞಾ ಸರ್ ಎಂದು ವಿಧೇಯರಾಗಿ, ಅಯ್ಯೋ ಹೆಂಗೆ ಸರ್‍ನ ಕರಿಯೋದು ಅಂತ ಅನ್ಕೊಂಡು, ಕೊನೆಗೆ ಸಾರ್ ನಮ್ಮ ತರದ ಹುಡುಗ್ರು ಸೇರಿ ಈ ತರ ಅಮವಾಸೆ ಹಬ್ಬ ಮಾಡ್ತ ಇದ್ದೀವಿ ಸರ್. ಕತ್ತಲೆ ಬಗ್ಗೆ ಕಾವ್ಯ, ಅದರ ಸುತ್ತ ವಿಚಾರ ಮಾಡೋರಷ್ಟೇ ಸೇರ್‍ತಿರೋದು, ಇದು ಎನ್ಜಿಓ ಕಾರ್ಯಕ್ರಮ ಆದರೂ ನಾವೆಲ್ಲ ಇದ್ದೀವಿ ಸರ್. ಮತ್ತೆ ಅಕ್ಕ ದು.ಸರಸ್ವತಿಯವರು ನೀವು ಬತ್ತರೆ ಎಂದು ಅವ್ರು ಬತ್ತಿದ್ದಾರೆ ಎಂದು ವಿನಮ್ರವಾಗಿ ಕೇಳಿಕೊಂಡೊ. ಸರ್ ಆಯ್ತು ನಡ್ರಿ ಬರ್‍ತಿನಿ ಅಂದ್ರು. ಆಗ ನಾವು ಯುದ್ಧವನ್ನು ಗೆದ್ದ ಖುಷಿಯನ್ನು ಅನುಭವಿಸಿದ್ದೆವು. ಕಿರಂ ಮೇಷ್ಟ್ರು ತಾಯ್ತನ ಅಂದು ನಮಗೆ ಅರಿವಾಗಿತ್ತು.

ಪ್ರಕಾಶ್ ಮಂಟೇದ

ನಾನು ಆಗತಾನೆ ಸಂಶೋಧನಾರ್ಥಿಯಾಗಿದ್ದೆ. ರಾಮನಗರದ ಸಂವಾದ ಓದು, ಬೀದಿನಾಟಕ, ಜನರಂಗ ಇವೆಲ್ಲದರ ಪ್ರಭಾವ ನನ್ನಂಥವರಲ್ಲಿ ಒಂದು ಜನತಾ ಪ್ರಜ್ಞೆ ಉದ್ಧೀಪನಗೊಂಡಿತ್ತು. ಜಾತಿ, ಲಿಂಗ, ಕೋಮು ಇವುಗಳನ್ನು ಮೀರಿದ ಹಾಡು, ವಿಚಾರ ನನ್ನಂಥವರಲ್ಲಿ ಕೇವಲ ಮನುಷ್ಯರಾಗಿ ತೀವ್ರವಾಗಿ ಬದುಕುವ ಹಂಬಲಗಳನ್ನು ಪೋಷಿಸುತ್ತಿದ್ದವು. ಸಾಹಿತ್ಯ, ಸಂಸ್ಕೃತಿ ಹಾಗೂ ಹೋರಾಟದ ವ್ಯಕ್ತಿಗಳನ್ನು ತೀರಾ ಹತ್ತಿರದಿಂದ ಕಂಡು ಪುಲಕಗೊಂಡು ನಾವು ಹೀಗೆಯೇ ಇರಬೇಕು, ಬದುಕಬೇಕು ಎಂದುಕೊಂಡ ಕ್ಷಣಗಳು ನಮ್ಮೆಲ್ಲಿ ಎಬ್ಬಿಸಿದ್ದ ಅಸ್ಖಲಿತವಾದ ಮಾನುಷತನ ಇನ್ನೂ ನಮ್ಮ ಹಂಬಲಗಳಲ್ಲಿಯೇ ಇದೇ ಎಂಬುದೇ ನನ್ನಂಥವರು ಮನುಷ್ಯರಾಗಿ ಉಳಿಯಲು ಕಾರಣವಾಗಿದೆ.

ನಾವು ಬೆವರನು ಸುರಿಸಿ ದುಡಿಯುವ ಜನ
ನಮ್ಮ ಬೆವರಿನ ಪಾಲನು ಕೇಳುವೆವು
ತುಂಡು ಭೂಮಿಯಲ್ಲ ಒಂದು ದೇಶವಲ್ಲ
ಇಡೀ ಭೂಗೋಳವನೆ ಕೇಳುವೆವು

ಎಂದು ತುಂಬ ಹೈ ಪಿಚ್ಚಲಿ ಹಾಡುತ್ತಿದ್ದ ಆ ದಿನಗಳನ್ನು ನೆನೆದು ಈಗ ಮಾತಾಡಲು ಹೊರಟರೆ ನಾವೆಷ್ಟು ವಿರೋಧಾಭಾಸಗಳ ಜನ ಎಂಬುದು ವಿಚಿತ್ರವಾಗಿ ಕಾಡುತ್ತದೆ. ಈ ಜನದನಿ ಎಂಬ ನಮ್ಮ ಲೋಕದೃಷ್ಟಿ ಹಾಡು ಸಾವಿರ ಸಾವಿರವಾಗಿ ಇನ್ನೂ ನಾವು ಮಾಗಿ ಮಾಗಿ ಏಳುವವರಾಗಬೇಕು ಎಂಬುದನ್ನು ತಿಳಿಸುತ್ತಿದೆ.

ನಮ್ಮ ವಿಚಾರಗಳ ಸೋಲು ಗೆಲುವುಗಳ ಲೆಕ್ಕಚಾರಗಳ ಆಚೆಗೂ ನಮ್ಮೊಳೆಗೆದ್ದ ಆ ಜನತಾ ಪ್ರಜ್ಞೆಯ ಹಂಬಲಗಳು ನಮ್ಮೊಳಗೆ ಬೆಸುಗೆ ಹಾಕಿಕೊಳ್ಳದೆ ಹೋದರೆ ನಾವೆಲ್ಲ ಬರೀ ವಾಚಾಳಿಗಳಾಗುತ್ತೇವಷ್ಟೆ. ಈ ಅವಲೋಕನದೊಂದಿಗೆಯೇ ಅಡಿಯಿಡುವ ಸಂಯಮವನ್ನು ದಕ್ಕಿಸಿಕೊಂಡೆ ನಾವು ನಮ್ಮ ಹಿಂದಣವನ್ನು ಮುಂದಣಕ್ಕೆ ಶಕ್ತಿಯಾಗಿಸಿಕೊಳ್ಳಬೇಕಾಗಿದೆ.

ನಮ್ಮ ಸ್ವಾರ್ಥ, ಬದುಕಿನ ಅನಿವಾರ್ಯತೆ ಎಂಬ ಲೆಕ್ಕಚಾರವನ್ನು ಮೀರಿ ಕನಿಷ್ಠ ಮನುಷ್ಯರಾಗಲೇ ಬೇಕಾದ ನಮ್ಮ ನಾಳೆಗಳಿಗೆ ನಾವು ಮಾನವರಾಗೋಣ, ನಾವು ಮಾನವರಾಗೋಣ ಎಂದು ನಮ್ಮನ್ನು ನಾವು ಎಚ್ಚರಿಸಿಕೊಳ್ಳುವ ಸ್ವಎಚ್ಚರ ಮತ್ತು ಸ್ವವಿಮರ್ಶೆ ದಿಕ್ಕನ್ನು ಅಂದು ನಮ್ಮಲ್ಲಿ ಮೈದಾಳಿದ ಜನತಾ ಪ್ರಜ್ಞೆ ತೋರುತ್ತಲೇ ಇರುತ್ತದೆ. ಈ ನಂಬಿಕೆ ಹಾಗೂ ವಿಶ್ವಾಸಗಳಿಗಾಗಿಯೇ ನಾವು ಭೂತದತ್ತ ನೋಡುತ್ತಲಿರಬೇಕಾಗುತ್ತದೇನೊ.

ಇಳೆ ಬಾಳುತಿರಲಿ,
ಸ್ವರ್ಗಗಳು ಚಿರಕಾಲ ತೋಯುತ್ತಿರಲಿ ಇಳೆ ಮಳೆಯಿಂದ
ಜಿನುಗುತಿರಲಿ ಕಾಡುಗಳು ನೀರಿನಿಂದ
ಬೆಳೆದು ದಣಿಯುತ್ತಿರಲಿ ಹೂಗಳರಳುತಿರಲಿ
ಬದುಕುವೆವು ಮತ್ತೆ ಮತ್ತೆ ನಾವು
ಬದುಕುವೆವು ಮತ್ತೆ ಮತ್ತೆ ನಾವು

ಈ ಆದಿಮ ಮಾನವ ಜನಾಂಗಗಳ ಪ್ರಾರ್ಥನೆಗಳು ನಮ್ಮ ಹಂಬಲ ಮತ್ತು ಜನತಾ ಪ್ರಜ್ಞೆಯ ದ್ಯೋತಕವಾಗಿ ನಮ್ಮ ಬದುಕನ್ನು ವ್ಯಾಪಿಸಿಕೊಳ್ಳಬೇಕಿದೆ. ಬಹುಶಃ ಈ ಕಾರಣಕ್ಕಾಗಿಯೇ ಏನೋ ನಮ್ಮ ಆದಿಮ ಜನಗಳು ಹೀಗೆ ಪ್ರಾರ್ಥಿಸುತ್ತಿದ್ದರೆನ್ನಬಹುದು. ಈ ಪ್ರಾರ್ಥನೆಯನ್ನು ನಾನೂ ಕೂಡ ಇಂದಿಗೂ, ಮುಂದೆಯೂ ಹಾಡಿನ ರೂಪದಲ್ಲಿ ಮಾಡುತ್ತಲೇ ಇರುತ್ತೇನೆ.

One thought on “ಅರಿವೇ ಕಂಡಾಯ – 8: ಆಫ್ರಿಕನ್ ಕಾದಂಬರಿಯೂ, ಫ್ರೆಂಚ್ ಬ್ರಾಂಡಿಯೂ…”

Leave a Reply

Your email address will not be published. Required fields are marked *