ಕೆ.ಪಿ. ಪೂರ್ಣಚಂದ್ರ ತೇಜಸ್ವಿ ’ನವ್ಯ’ ಸಾಹಿತ್ಯದ ’ಹವಾ’ ಜೋರಿದ್ದ ಸಂದರ್ಭದಲ್ಲಿ ತಮ್ಮನ್ನು ಸೃಜನಶೀಲ ಬರವಣಿಗೆಗೆ ತೊಡಗಿಸಿಕೊಂಡವರು. ಭಾರತೀಯ ಸಮಾಜವು ಆಧುನೀಕರಣದತ್ತ ಹೆಜ್ಜೆ ಇಡುತ್ತಿದ್ದ ಕಾಲವೂ ಅದಾಗಿತ್ತು. ಆ ಸಂದರ್ಭದಲ್ಲಿದ್ದ ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಆಧುನಿಕತೆ, ಮೌಢ್ಯ, ಮತೀಯತೆ, ಅಸಮಾನತೆ, ಜೀವವಿಜ್ಞಾನ, ಪರಿಸರ, ಇತ್ಯಾದಿ ವಿಷಯಗಳಿಗೆ ಪ್ರತಿಕ್ರಿಯಾತ್ಮಕವಾಗಿ ಕಥನಗಳನ್ನು ರಚಿಸಿದವರು. ಈ ವಲಯಗಳಲ್ಲಿ ತಾಂಡವಾಡುತ್ತಿದ್ದ ತಬ್ಬಲಿತನ, ಅಶಾಂತಿ, ಕೀಳರಿಮೆ, ಸಂಘರ್ಷಗಳನ್ನು ನಿರೂಪಿಸಲು ಅವರು ಆಯ್ಕೆ ಮಾಡಿಕೊಂಡ ಕಥನಕ್ರಮವೂ ವಿಶಿಷ್ಟವಾದದ್ದು. ಪಾತ್ರಗಳ ಮೂಲಕವೇ ಕಥನಗಳ ವಸ್ತುವನ್ನು ಹುಡುಕುವಂತೆ ಮಾಡಿದವರು. ಬಹುಶಃ ಸುತ್ತಮುತ್ತಲಿನ ಪರಿಸರದೊಂದಿಗಿದ್ದ ನಿರಂತರ ಒಡನಾಟದಿಂದಾಗಿ ತೇಜಸ್ವಿಯವರಿಗೆ ಬೆಳೆದ ಹುಡುಕಾಟದ ಸ್ವಭಾವವು ಅವರ ಕಥನಗಳಲ್ಲಿಯೂ ದಾಖಲಾಗಿವೆ. ಹೀಗಾಗಿ ಅವರ ಬರಹಗಳು ಸ್ಥಳೀಯ ಜ್ಞಾನ, ಜೀವನ ವಿಧಾನಗಳನ್ನು ಹಾಗೂ ಆಧುನಿಕತೆಯೊಂದಿಗೆ ಮುಖಾಮುಖಿಗೊಳಿಸಿ ಪರೀಕ್ಷಿಸುವಂತೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಕಥನಗಳು ವಿದ್ಯಾವಂತರು ಸ್ಥಳೀಯತೆಯ ಬಗೆಗೆ ತೋರುವ ಅಸಡ್ಡೆಯ ಕಾಯಿಲೆಗಳನ್ನು ಹುಡುಕಿ, ಅದಕ್ಕೆ ಚಿಕಿತ್ಸೆ ಮಾಡಬಹುದಾದ ಸರಳ ಸಾಧ್ಯತೆಗಳನ್ನು ತಿಳಿಸುತ್ತವೆ. ನಮ್ಮಿಂದ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಅಲಕ್ಷಿತಕ್ಕೆ ಈಡಾಗಿರುವ ಸ್ಥಳೀಯ ಜ್ಞಾನ ಪರಂಪರೆಯತ್ತ ಗಮನ ಹರಿಸುವಂತೆ ಮಾಡುತ್ತವೆ.
ಸ್ಥಳೀಯ ಪ್ರತಿಭೆ ಎನ್ನುವುದು, ಅಕ್ಷರವನ್ನು ಜ್ಞಾನದ ಸಿದ್ಧಮಾದರಿಯ ಮಾನದಂಡವನ್ನಾಗಿ ಸ್ವೀಕರಿಸಿದ ತರುವಾಯ ಉದ್ಭವಿಸಿದ ಸಮಸ್ಯೆಯೇ? ಅಥವಾ ಅನಾದಿ ಕಾಲದಿಂದಲೂ ಪಾರಂಪರಿಕ ಜ್ಞಾನ ಮೂಲದವರೊಂದಿಗೆ ಕಾಪಾಡಿಕೊಂಡು ಬಂದ ಅಂತರವೇ? ಎಂಬ ಪ್ರಶ್ನೆಗಳು ಪ್ರಾಥಮಿಕವಾಗಿ ಎದುರಾಗುತ್ತವೆ. ಇವುಗಳ ಬೆನ್ನಹಿಂದೆ ತಕ್ಕಮಟ್ಟಿನ ಪ್ರಭುತ್ವದ ಮೌನ ಹಾಗೂ ಅಭಿವೃದ್ಧಿಯ ತಂತ್ರಗಾರಿಕೆಯ ಸ್ವರೂಪಗಳ ಕೊಡುಗೆ ಇರುವುದು ತಿಳಿಯುತ್ತವೆ. ಹೀಗಾಗಿ ಪ್ರಭುತ್ವದ ಮೌನ ಹಾಗೂ ಅಭಿವೃದ್ಧಿಯ ತಂತ್ರಗಾರಿಕೆಗಳು ಸ್ಥಳೀಯ ಜ್ಞಾನ ಪರಂಪರೆಗಳ ಮೇಲೆ ಉಂಟಾದ ಪರಿಣಾಮ ಹಾಗೂ ಅನುಕೂಲ- ಈ ಎರಡು ಮುಖಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವ ಅಗತ್ಯವಿದೆ. ಆ ಮೂಲಕ ಪ್ರತಿಭೆ ಮತ್ತು ಜ್ಞಾನಕ್ಕೂ ಇರುವ ವ್ಯತ್ಯಾಸಗಳನ್ನು ಸ್ಪಷ್ಟಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಉದ್ದೇಶದಿಂದಾಗಿ ತೇಜಸ್ವಿ ಕಥನಗಳಲ್ಲಿ ಚಿತ್ರಿತವಾಗಿರುವ ಸ್ಥಳೀಯ ಪಾತ್ರಗಳ ಪ್ರತಿಭೆಯನ್ನು ಅವುಗಳ ಸಾಮಾಜಿಕ ಸ್ತರವಿನ್ಯಾಸಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಅವುಗಳನ್ನು ಬುಡಕಟ್ಟು ಪರಂಪರೆ ಮತ್ತು ನಾಗರಿಕ ಪರಂಪರೆಯ ತಳಹದಿಯ ಮೇಲೆ ಸ್ಪಷ್ಟೀಕರಿಸಿಕೊಳ್ಳಲು ಪ್ರಯತ್ನಿಸಲಾಗಿದೆ.
ಪ್ರತಿಭೆ ಮತ್ತು ಜ್ಞಾನಗಳ ಮುಖಾಮುಖಿ
ಕಥನಗಳಲ್ಲಿ ಬಹುಮುಖ್ಯವಾಗಿ ಗುರುತಿಸಬೇಕಾದದು ಪ್ರತಿಭೆ ಮತ್ತು ಜ್ಞಾನಗಳ ಮುಖಾಮುಖಿಯನ್ನು. ಈ ಬಗೆಯ ಪ್ರಕ್ರಿಯೆ ಪರಿಸರದ ಹಲವು ಮುಖಗಳನ್ನು ಪರಿಚಯಿಸುತ್ತವೆ. ಪ್ರತಿಭೆ ಮತ್ತು ಜ್ಞಾನಗಳು ಮೇಲ್ನೋಟಕ್ಕೆ ಒಂದೇ ತೆರನಾಗಿ ಅರ್ಥವಾದರೂ, ವ್ಯತ್ಯಾಸವಿದೆ ಅನ್ನುವುದನ್ನು ತೇಜಸ್ವಿ ಕಥನಗಳು ಸೂಕ್ಷ್ಮವಾಗಿ ತೆರೆದಿಡುತ್ತವೆ. ಕಥನಗಳಲ್ಲಿ ಪ್ರತಿಭೆ ಎನ್ನುವಂಥದ್ದಕ್ಕೆ ಒಂದು ಸಾಂಪ್ರದಾಯಿಕ ಹಿನ್ನೆಲೆಯಿದೆ. ಅದಕ್ಕೆ ’ಕಲ್ಚರ್’ನ ಕೊಡುಗೆಯಿದೆ. ಯಾವ ಕಾಲಕ್ಕೆ ಯಾವುದು ಆಗಬೇಕು ಅನ್ನುವುದನ್ನು ಪ್ರಾದೇಶಿಕ ’ಕಲ್ಚರ್’ ತೀರ್ಮಾನಿಸುತ್ತಿರುತ್ತದೆ. ಈ ಬಗೆಯ ’ಲಿಂಕ್’ಅಲ್ಲಿನ ಪರಿಸರವನ್ನು ಆಶ್ರಯಿಸಿರುತ್ತದೆ. ಅದಕ್ಕೆ ಹೊಂದಿಕೊಂಡಂತೆ ಪ್ರತಿಭೆ ಅನಾವರಣಗೊಳ್ಳುತ್ತದೆ. ವೈಜ್ಞಾನಿಕವಾಗಿಯೇ ಇರುತ್ತದೆ ಮತ್ತು ಇರಬೇಕೆಂಬ ನಿಯಮವಿಲ್ಲ. ಬದಲಾಗಿ ಸಾಮುದಾಯಿಕ ಒಪ್ಪಿಗೆ ಮತ್ತು ಒಳಿತು ಅದಕ್ಕೆ ಮುಖ್ಯವಾಗಿರುತ್ತದೆ. ಈ ಪ್ರಕ್ರಿಯೆಯಿಂದ ದೊರಕುವ ವಿದ್ವತ್ತನ್ನು ಪ್ರತಿಭೆ ಎಂದು ಕರೆದುಕೊಳ್ಳಬಹುದು. ಜ್ಞಾನ ಎನ್ನುವುದು ಓದಿನಿಂದ ವೃದ್ಧಿಸುತ್ತದೆ. ಅದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇರುತ್ತದೆ. ಹೀಗೆ ಸಿದ್ಧಗೊಂಡ ಜ್ಞಾನ ಅನೇಕ ರೂಪಗಳಲ್ಲಿ ಪ್ರತಿಭೆಯಿದ್ದ ಪ್ರಾದೇಶಿಕ ವಲಯವನ್ನು ಪ್ರವೇಶಿಸುತ್ತದೆ. ಆಗ ಅಲ್ಲಿನ ಕೌಶಲ್ಯಗಳು ನಿಧಾನಕ್ಕೆ ನಿಷ್ಕ್ರಿಯತೆಗೆ ತುತ್ತಾಗುತ್ತವೆ. ಆದರೆ ಇನ್ನೂ ಕೆಲವು ಜಡ್ಡುಗಳು ಕೊಚ್ಚಿ ಹೋಗುವುದಕ್ಕೂ ತಯಾರಿ ನಡೆಸುತ್ತವೆ. ಇವುಗಳಿಂದಾಗಿ ಉಪಯೋಗ ಮತ್ತು ಅನನುಕೂಲಗಳನ್ನು ಒಂದು ವರ್ಗ ಬಹುಬೇಗವಾಗಿ ಸ್ವೀಕರಿಸಿ, ಎದುರಿಸಿ ಅನುಸರಿಸುತ್ತದೆ.
ಇದಾವುದನ್ನೂ ಮಾಡದೆ ಉಳಿದ ಬಹುದೊಡ್ಡ ಸಾಮಾನ್ಯ ಜನವರ್ಗ ಅವರಿಂದ ನಿರ್ಲಕ್ಷಕ್ಕೆ ಒಳಗಾಗುತ್ತದೆ. ಅಲಕ್ಷಿತವೇ ಒಪ್ಪಿಗೆ ಎಂದು ತಿಳಿದ ಪ್ರಭುತ್ವವು ಅವರ ಬಗ್ಗೆ ಯಾವುದೇ ರೀತಿಯಲ್ಲೂ ಮೌನ ಮುರಿಯುವುದಿಲ್ಲ. ಕೆಲವರು ಮಾತ್ರ ಜ್ಞಾನಕ್ಕೆ ಸಹಾಯಕ ಪರಿಕರಗಳಂತೆ ಕಂಡುಬಂದು ಕಣ್ಮರೆಯಾಗುತ್ತಾರೆ. ಪ್ರಭುತ್ವದ ಪರವಾಗಿ ಜ್ಞಾನವನ್ನು ಕ್ರೋಡೀಕರಿಸುವುದಕ್ಕೆ ಸಾಧನಗಳಂತೆ ಬಳಕೆಯಾಗುತ್ತಾರೆ. ಓದಿನಿಂದ ಜೀವತಳೆದ ಜ್ಞಾನ ಕ್ರಮೇಣ ಸ್ಥಳೀಯ ಪ್ರತಿಭೆಯ ಚಲನಶೀಲತೆಗೆ ಮನ್ನಣೆ ಸಿಗದಂತೆ ಯಜಮಾನಿಕೆಯ ಅಡ್ಡಗಾಲು ಹಾಕುತ್ತದೆ.
ಜ್ಞಾನ ಮತ್ತು ಪ್ರತಿಭೆಗಳ ಮುಖಾಮುಖಿ ಎಂದರೆ ಕೇವಲ ಎರಡು ಬೌದ್ಧಿಕ ಪ್ರಕ್ರಿಯೆಗಳಂತೆ ತೇಜಸ್ವಿಯವರ ಕಥನಗಳಲ್ಲಿ ಕಂಡುಬರುವುದಿಲ್ಲ. ಬದಲಾಗಿ ’ಕಲ್ಚರ್’ಗಳ ಸಂಘರ್ಷವಾಗಿದೆ. ಆದ್ದರಿಂದಾಗಿ ಜ್ಞಾನ ಮತ್ತು ಪ್ರತಿಭೆಗಳ ನಡೆಗಳು ಉಂಟುಮಾಡಿರುವ ಬಿಕ್ಕಟ್ಟುಗಳನ್ನು ಸ್ಪಷ್ಟವಾಗಿ ಗುರುತಿಸುವ ಕೆಲಸವನ್ನು ಸಾಂಸ್ಕೃತಿಕ ಪರಿಕರದ ಮೂಲಕವೇ ವಿಶ್ಲೇಷಿಸಿಕೊಳ್ಳಬೇಕಾಗಿದೆ. ಕಾರಣ ನಮ್ಮ ಸಾಮಾಜಿಕ ಪರಿಸರವೆಲ್ಲವೂ ಪೂರ್ಣವಾಗಿ ಜಾಗತಿಕ ಸಂವೇದನೆಯೊಂದಿಗೆ ಬೆಸೆದುಕೊಂಡಿಲ್ಲ. ಈ ಅಂತರದಿಂದಾಗಿಯೇ ಸ್ಥಳೀಯ ಪ್ರತಿಭೆಗಳು ತಮ್ಮ ಅಸ್ತಿತ್ವವನ್ನು ಅಲ್ಪಮಟ್ಟಿಗಾದರೂ ಉಳಿಸಿಕೊಂಡಿವೆ. ಅದನ್ನೂ ಕಳೆದುಕೊಂಡರೆ ಜ್ಞಾನವೇ ಸವಾರಿ ನಡೆಸಿ, ನಿರುದ್ಯೋಗಗಳನ್ನು ಸೃಷ್ಟಿಸುತ್ತದೆ. ಜೊತೆಗೆ ನಮ್ಮ ಸಾಮಾಜಿಕ ಬಂಧವು ನಿರ್ಮಿಸಿಕೊಂಡು ಬಂದಿರುವ ವ್ಯವಸ್ಥೆಯನ್ನು ಮೀರುವುದಕ್ಕೆ ಯಾವ ಪ್ರೋತ್ಸಾಹವೂ ದೊರೆಯುವುದಿಲ್ಲ. ಇದು ಕೃತಿಗಳಲ್ಲಿನ ಜನತೆಗಳಲ್ಲಿಯೂ ಕಂಡುಬರುತ್ತದೆ. ಹೀಗೆ ಆಧುನಿಕ ಮತ್ತು ಸ್ಥಳೀಯ ಸಂವೇದನೆಗಳಿಗೆ ಸ್ಪಂದಿಸುವ ಪಾತ್ರಗಳಲ್ಲಿ ತಾತ್ವಿಕ ವ್ಯತ್ಯಾಸವಿದೆ. ಈ ಎರಡು ಸಂವೇದನೆಗಳು ಹಲವು ವೇಳೆ ಪ್ರತಿಭೆಗೆ ಮಾರಕವಾಗಿ ಮತ್ತು ಕೆಲವು ವೇಳೆ ಪೂರಕವಾಗಿ ಬೆಳೆದಿವೆ.
ಕಥನಗಳಲ್ಲಿ ಚಿತ್ರಿತವಾಗಿರುವ ಪಾತ್ರಗಳ ಹಿನ್ನೆಲೆಯಲ್ಲಿ ಬಹುಮಖ್ಯವಾಗಿ ನಮಗೆ ಎರಡು ರೀತಿಯ ಸಾಮಾಜಿಕ ಸ್ತರಗಳು ಗೋಚರಿಸುತ್ತವೆ. ಒಂದು: ಬುಡಕಟ್ಟು ಪರಂಪರೆಯ ಸಹಜಗುಣಗಳಿರುವ ಸಮಾಜ. ಎರಡು: ಬುಡಕಟ್ಟು ಪರಂಪರೆಯಿಂದ ಸಂಪೂರ್ಣ ಕಳಚಿಕೊಳ್ಳದ ನಾಗರಿಕ ಸಮಾಜ. ಈ ಎರಡೂ ಸಾಮಾಜಿಕ ಸ್ತರಗಳಲ್ಲಿಯೂ ಪ್ರತಿಭೆ ಬೇರೆಬೇರೆ ಸ್ವರೂಪಗಳನ್ನು ಪಡೆದುಕೊಂಡಿದೆ. ಅವುಗಳ ನಡುವೆ ಭಿನ್ನ ಅಭಿವ್ಯಕ್ತಿ ಮಾಧ್ಯಮಗಳಿವೆ. ಜೊತೆಗೆ ಅವುಗಳದ್ದೇ ಆದ ಒಂದು ಪರಂಪರೆ ಇದೆ. ಬುಡಕಟ್ಟು ಪರಂಪರೆಯ ಸಹಜಗುಣಗಳಿರುವ ಸ್ಥಳೀಯ ಪಾತ್ರಗಳು ಪ್ರಕೃತಿಯೊಂದಿಗೆ ನಿಕಟ ಒಡನಾಟವನ್ನು ಇಟ್ಟುಕೊಂಡಿವೆ. ಅದೇ ನಾಗರಿಕ ಸಂವೇದನೆಗಳನ್ನು ಹೊಂದಿರುವ ಪಾತ್ರಗಳು ಪ್ರಕೃತಿಯನ್ನು ವೈಜ್ಞಾನಿಕ ವಿಧಿ ವಿಧಾನಗಳ ಮೂಲಕ ಅಭ್ಯಾಸಿಸುವ ವರ್ಗವಾಗಿ ಕಂಡುಬರುತ್ತದೆ.
ಇದನ್ನು ಮತ್ತಷ್ಟು ಸರಳವಾಗಿ ಹೇಳುವುದಾರೆ- ಕಾಡಿನೊಂದಿಗೆ, ಕಾಡಿನ ಪಕ್ಷಿ, ಪ್ರಾಣಿ, ಕೀಟ, ಗಿಡಗಳ ತಿಳಿವಳಿಕೆ, ಹಾಗೆಯೇ ಸಮುದಾಯದ ಕಲೆ, ಸಂಸ್ಕೃತಿ, ಆಚರಣೆ, ತಂತ್ರಗಾರಿಕೆ, ನಂಬಿಕೆ, ಇತ್ಯಾದಿಗಳನ್ನು ಪರಂಪರೆಯಂತೆ ಬಳಸಿ, ಬದುಕುತ್ತಿರುವ ಒಂದು ಸಾಮಾನ್ಯ ಜನವರ್ಗ. ಇದಕ್ಕೆ ಭಿನ್ನವಾಗಿ ನಿಲ್ಲುವಂತದ್ದು ನಾಗರಿಕ ವರ್ಗ. ಈ ವರ್ಗವು ಸಾಮಾನ್ಯ ಜನವರ್ಗವನ್ನೂ ಸೇರಿದಂತೆ, ಪ್ರಕೃತಿಯನ್ನು ತನ್ನ ಆಧುನಿಕ ಜ್ಞಾನಶಿಸ್ತುಗಳಲ್ಲಿ ಅಧ್ಯಯನಕ್ಕೆ ಒಳಪಡಿಸುತ್ತದೆ. ತೇಜಸ್ವಿಯೂ ಕೂಡ ಈ ನೆಲೆಯಲ್ಲಿಯೇ ನಿಲ್ಲುವಂತವರು. ಇದನ್ನು ಅವರ ನಿರೂಪಣಾ ತಂತ್ರ ಮತ್ತು ಕಥನದೊಳಗೆ ಅವರೇ ಒಂದು ಪಾತ್ರವಾಗಿ ಬರುವಲ್ಲಿಯೂ ಅದನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬಹುದು. ಇಲ್ಲಿ, ಕಾಡು ಒಬ್ಬರಿಗೆ ಆಧ್ಯಾತ್ಮದ ಭಾಗವಾದರೆ; ಇನ್ನೊಬ್ಬರಿಗೆ ದೈನಂದಿನ ಭೌತಿಕ ಬದುಕಿನ ಅವಿಭಾಜ್ಯವಾಗಿರುತ್ತದೆ. ಇನ್ನೂ ಕೆಲವರಿಗೆ ಸಂಪತ್ತಿನ ಆಗರವೂ; ಅಧ್ಯಯನದ ಸಾಮಾಗ್ರಿಯಾಗಿಯೂ ಕಾಣುತ್ತದೆ.
ಇಂತಹ ವರ್ಗಗಳಲ್ಲಿ ಪ್ರತಿಭೆ ಅಭಿವ್ಯಕ್ತವಾಗುವ ಪರಿಸರ ಇನ್ನೂ ವಿಶೇಷವಾದದು. ಸ್ಥಳೀಯ ಪಾತ್ರಗಳ ಪ್ರತಿಭೆ ದೈಹಿಕ ಕ್ರಿಯೆ-ಪ್ರಕ್ರಿಯೆಗಳ ಮುಖಾಂತರ, ಅಧ್ಯಯನಶೀಲ ಪಾತ್ರಗಳು ಬೌದ್ಧಿಕ ಕ್ರಿಯೆಯಲ್ಲಿ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ನಾವು ಸಹ ಸಾಮಾನ್ಯವಾಗಿ ಬೌದ್ಧಿಕ ಪಾತ್ರಗಳ ಪ್ರತಿಭೆಯ ಹಿನ್ನೆಲೆಯಲ್ಲಿ ಸಾಮಾನ್ಯ ಪಾತ್ರಗಳ ಪ್ರತಿಭೆಯನ್ನು ಅಲಕ್ಷಿಸುತ್ತೇವೆ. ಇದನ್ನು ಮೀರಲು ಪ್ರಯತ್ನಿಸಿದಾಗ ಈ ಎರಡೂ ಪಾತ್ರಗಳ ಪ್ರತಿಭೆಯ ಸ್ವರೂಪ, ಗುಣ ಲಕ್ಷಣಗಳು, ಮಿತಿಗಳು, ವೈಶಿಷ್ಟ್ಯಗಳು ತಿಳಿಯುತ್ತವೆ. ತೇಜಸ್ವಿಯೂ ಕೂಡ ತಮ್ಮ ಕಥನಗಳ ನಿರೂಪಣೆಯಲ್ಲಿ ಈ ತಂತ್ರಗಾರಿಕೆಯನ್ನು ಪಾಲಿಸಿದ್ದಾರೆ. ಆದರೆ ಯಾವ ಪಾತ್ರಗಳ ಅಥವಾ ವಿಷಯಗಳ ಬಗ್ಗೆ ತಮ್ಮದೇ ಆದ ನೇರ ನಿಲುವನ್ನು ಪ್ರತಿಪಾದಿಸದೇ ವಸ್ತು ವಿಷಯವನ್ನು ಮಂಡಿಸುವುದು ಗಮನಾರ್ಹ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಪಾತ್ರಗಳ ಪ್ರತಿಭೆಯನ್ನು ಪತ್ತೆಹಚ್ಚುವ ಕಾರ್ಯವೂ ನಡೆದಿದೆ. ಅದಕ್ಕಾಗಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕತೆ, ಸುಧಾರಣಾವಾದಿ, ಊಳಿಗಮಾನ್ಯ, ಪ್ರತಿಭಟನೆ, ಅನುಸಂಧಾನದಂತಹ ಪರಿಕರಗಳ ಮೂಲಕ ಸಾಮುದಾಯಿಕ ಒಟ್ಟು ಪ್ರಜ್ಞೆಯನ್ನು ತಡಕಾಡುತ್ತವೆ. ಸ್ವಭಾವತಃ ’ಹಿತ್ತಲ ಗಿಡ ಮದ್ದಲ್ಲ’ ಅನ್ನುವ ಮಾತಿನಂತೆ, ಸ್ಥಳೀಯ ಪ್ರತಿಭೆಗಳನ್ನು ನಾವು ಪತ್ತೆಹಚ್ಚದೇ, ಆ ಪ್ರತಿಭೆಗೆ ಸರಿಸಮಾನಾಗುವುದನ್ನು ಆಮದು ಮಾಡಿಕೊಂಡು ಆ ಸ್ಥಳೀಯ ’ಅಸ್ತಿತ್ವ’ವನ್ನು ಅಲ್ಲಗೆಳೆಯುವುದಕ್ಕೆ ಆರಂಭಿಸುತ್ತೇವೆ. ಆದರೆ ತೇಜಸ್ವಿ ಈ ತೌಲನಿಕ ಪ್ರಯೋಗಶೀಲತೆಯನ್ನು ಹಲವು ಕಥನಗಳಲ್ಲಿ ಮಾಡಿದ್ದಾರೆ. ಸ್ಥಳೀಯ ಪಾತ್ರಗಳ ಜ್ಞಾನಕ್ಕೆ ಸಂಬಂಧಿಸಿದಂತೆ ಆಮದು ಪ್ರತಿಭೆಯ ಬಾಯಿಯಲ್ಲಿಯೇ ಆಡಿಸುವ ಮಾತುಗಳು ಜ್ಞಾನಕ್ಕೊಂದು ಸೈದ್ಧಾಂತಿಕ ನೂತನ ವಿಶ್ಲೇಷಣೆಯನ್ನು ಒದಗಿಸುತ್ತವೆ. ಹಾಗೆಯೇ ಸಾಮಾನ್ಯ ಪಾತ್ರಗಳ ಜ್ಞಾನವನ್ನು ಗುರುತಿಸುವಲ್ಲಿ, ಬೌದ್ಧಿಕ ಪಾತ್ರಗಳಿಗೂ ಸೂಕ್ಷ್ಮ ಸಂವೇದನೆಗಳು ಬೇಕಾಗುತ್ತದೆ. ಬೌದ್ಧಿಕತೆಗೆ ಸ್ಥಳೀಯ ಜ್ಞಾನದ ಅಗತ್ಯತೆ ಎಷ್ಟಿದೆ ಎನ್ನುವುದನ್ನು ತಿಳಿಸುತ್ತವೆ. ಹೀಗೆ ಕಥನಗಳು ಸ್ಥಳೀಯ ಪ್ರತಿಭೆಯನ್ನು ಅನುಸಂಧಾನಗೊಳಿಸಿವೆ.
ಇನ್ನೂ ವಿಶೇಷವೆಂದರೆ ಈ ಕಥನಗಳು ಭಾರತೀಯ ಪರಂಪರೆಯಲ್ಲಿ ಬೌದ್ಧಿಕರೆಂದು ಹೆಸರು ಮಾಡಿದ್ದವರನ್ನು ಹೊರಗಿಟ್ಟಿವೆ. ಕುತೂಹಲವೆಂದರೆ ಸ್ಥಳೀಯ ಜ್ಞಾನವನ್ನು ಬಳಸಿಕೊಂಡು, ಬೌದ್ಧಿಕರು ಉದ್ಧಾರವಾದದ್ದನ್ನು ಸೂಕ್ಷ್ಮವಾಗಿ ಮುಂದಿಟ್ಟಿವೆ. ಈ ಕಾರಣಕ್ಕಾಗಿಯೇ ಇರಬೇಕು ಕಥನಗಳು ಭಾರತೀಯ ಬೌದ್ಧಿಕರ ಬದಲಾಗಿ, ಕರ್ವಾಲೋ, ಅರಿಸ್ಟಾಟಲ್ ಮುಂತಾದವರನ್ನು ಉದ್ದೇಶಪೂರ್ವಕವಾಗಿಯೇ ತಂದಿವೆ. ಇಂಥವರು ಮಲೆನಾಡಿನ ಕಥನಗಳಲ್ಲಿ ಬಂದಿದ್ದಾದರೂ ಏಕೆ ಅನ್ನುವ ಪ್ರಶ್ನೆಯೂ ಮುಖ್ಯವಾದದ್ದೆ. ಈ ಪ್ರಶ್ನೆ ಒಂದು ಸ್ಪಷ್ಟವಾದ ಉತ್ತರವನ್ನು ನಮ್ಮ ಮುಂದಿಡುತ್ತದೆ. ಅದು ಸ್ಥಳೀಯ ಪ್ರತಿಭೆಯನ್ನು ಗುರುತಿಸುವಲ್ಲಿ ನಮ್ಮವರು ಸೋತಿರುವುದು. ಒಂದು ವೇಳೆ ಗುರುತಿಸಿದರೂ ಅದನ್ನು ಪ್ರಭುತ್ವ ಪೂರಕವಾಗಿಯೋ ಅಥವಾ ಸ್ವ-ಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಂಡಿರುವುದು.
ಲಿಂಗ ಸಹಾನುಭೂತಿ
ತೇಜಸ್ವಿಯವರ ಕಥನಗಳಲ್ಲಿ ಸ್ಥಳೀಯ ಪುರುಷ ಪಾತ್ರಗಳ ಪ್ರತಿಭೆಗೆ ಹೆಚ್ಚಿನ ಮಾನ್ಯತೆ ದೊರಕಿದೆ. ಆ ಪ್ರತಿಭೆಗೆ ಸ್ತ್ರೀ ಪಾತ್ರಗಳು ಪ್ರಕೃತಿಯಂತೆ ಕೇವಲ ಉತ್ಪಾದನಾ ಪೂರಕವಾಗಿ ಬಳಕೆಗೊಂಡಿವೆ. ಅಂದರೆ ಪುರುಷ ಪಾತ್ರಗಳಿಗೆ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸುತ್ತ, ತಾವೇ ಹೆಚ್ಚು ಅಲಕ್ಷಿತಕ್ಕೆ ಒಳಗಾಗಿವೆ. ಕಥನಗಳು ಈ ಮಾನವ ಪಾತ್ರಗಳಿಗೆ ನೀಡಿದ ಮಹತ್ವವನ್ನೇ ಮಾನವೇತರ ಪಾತ್ರಗಳಿಗೂ ನೀಡಿವೆ. ಆ ಮೂಲಕವಾಗಿ ಕಥನದ ಉದ್ದೇಶ ಹಾಗೂ ಆಶಯಗಳನ್ನು ಅನ್ವೇಷಿಸಲು ಪ್ರಯತ್ನಿಸಿವೆ. ಆಧುನಿಕ-ಅಧ್ಯಯನಾತ್ಮಕ-ನೈಸರ್ಗಿಕ-ಸಾಮಾಜಿಕ ಅಂಶಗಳೊಂದಿಗೆ ಈ ಮಾನವೇತರ ಪಾತ್ರಗಳ ಅಂತರ್ಸಂಬಂಧಗಳನ್ನು ಚರ್ಚಿಸಿವೆ. ಮಾನವ ಸಮಾಜ ತನ್ನೆಲ್ಲಾ ಮೂಲಗಳನ್ನು ನಾಶಮಾಡಿಕೊಳ್ಳುತ್ತಾ, ವ್ಯಾಪಾರೀಕರಣ, ಕೈಗಾರಿಕೀಕರಣ, ಖಾಸಗೀಕರಣ ಮತ್ತು ವಲಸೆಗೆ ತಾನೇ ಒಳಗಾಗುತ್ತ ಸಾಗುತ್ತಿರುವ ವಿದ್ಯಮಾನಗಳಿಗೆ ಮಾನವೇತರ ಪಾತ್ರಗಳು ಮೂಕಸಾಕ್ಷಿಯಂತೆ ಕಾಣುತ್ತವೆ. ಪಾರಂಪರಿಕ ಬಂಧನಗಳೊಂದಿಗೆ ಬಿಡುಗಡೆ ಬಯಸುವ ಮಾನವ ಪಾತ್ರಗಳಿಗೆ ಅದಮ್ಯ ಚೇತನವನ್ನು ತುಂಬಿವೆ. ಹೀಗೆ ಮಾನವ ಮತ್ತು ಮಾನವೇತರ ಪಾತ್ರಗಳು ಒಂದಕ್ಕೊಂದು ಪೂರಕವಾಗಿವೆ. ಇದು ಸಹ ಪ್ರತಿಭೆಯನ್ನು ವಿಶ್ಲೇಷಿಸಿಕೊಳ್ಳಲು ಸಹಕಾರಿಯಾಗಿವೆ. ಮಾನವೇತರ ಪಾತ್ರಗಳು ಹಾಗೂ ಪ್ರತಿಮೆಗಳು ಮಾನವ ಅಭಿವ್ಯಕ್ತಿಸಲಾಗದ ಸಹಾನುಭೂತಿ ಅಥವಾ ಸಂಘರ್ಷಾತ್ಮಕ ಧ್ವನಿಗಳನ್ನು ಹೊರಹಾಕಿವೆ. ನಾವು ಯಾವುದನ್ನು ಟೀಕಿಸುತ್ತೆವೆಯೋ ಅದನ್ನೇ ಒಪ್ಪಿಕೊಳ್ಳುವಂತಹ ಮನೋಭೂಮಿಕೆಯನ್ನು ಸೃಷ್ಟಿಸುವ ದ್ವಂದ್ವಗಳನ್ನು ಕಟ್ಟಿಕೊಡುತ್ತವೆ.
ಕಥನಗಳ ಮಾನವ ಪಾತ್ರಗಳು ಕೆಲವು ಸಂದರ್ಭಗಳಲ್ಲಿ ಪ್ರತಿಭಾಶೂನ್ಯವಾಗಿಯೂ ವರ್ತಿಸುತ್ತವೆ. ಅಂದರೆ ಸರಿ-ತಪ್ಪುಗಳನ್ನು ತೂಗಿ ನೋಡುವ ಜವಾಬ್ದಾರಿಗಳನ್ನು ಹೊರುವುದೇ ಇಲ್ಲ. ಒಂದು ಹಂತದವರೆಗೂ ಮುಂದುವರೆದಂತೆ ಕಂಡುಬಂದರೂ ಭೌತಿಕತೆಯಿಂದ ಪಲಾಯನಗೊಳ್ಳುವತ್ತ ಸಾಗಲು ಹವಣಿಸುತ್ತವೆ. ಹೀಗೆ ವರ್ತಿಸಲು ಪಾರಂಪರಿಕ ಬಂಧನಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳುವ ಆಧುನಿಕ ಮಾರ್ಗಗಳು ಪ್ರಮುಖ ಕಾರಣಗಳಾಗಿವೆ. ಈ ರೀತಿಯ ಮಾನಸಿಕ ತೊಳಲಾಟಗಳಿಗೆ ಸಿಕ್ಕ ಪಾತ್ರಗಳ ಮುಖೇನ ಕಥನಗಳು ಅಭಿವ್ಯಕ್ತಿಸಲು ತುಡಿಯುತ್ತಿರುವ ಮೌಲ್ಯಗಳನ್ನು ಆರೋಗ್ಯಕರ ಚೌಕಟ್ಟಿನಲ್ಲಿ ವಿವರಿಸಿಕೊಳ್ಳಲು ಸ್ಥಳೀಯ ಪ್ರತಿಭೆಗಳು ಅತ್ಯುತ್ತಮ ಪರಿಕರಗಳಾಗಿವೆ.
ಆದರೂ ಕಥನಗಳಲ್ಲಿ ಕೆಲವು ಕಾರಣಗಳಿಗೆ ಮಾನವ ಹಾಗೂ ಮಾನವೇತರ ಪಾತ್ರಗಳು ಕಡೆಗಣಿಸಲ್ಪಟ್ಟಿವೆ. ಅವುಗಳೊಂದಿಗೆ ಪ್ರಧಾನವೆಂದು ಗುರುತಿಸಿಕೊಳ್ಳಲು ಸಾಧ್ಯವೆನಿಸುವ ವಸ್ತುಗಳೂ ಅಂತಿಮದಲ್ಲಿ ಬದಲಾಗಿ ಬಿಡುತ್ತವೆ. ಗುರಿಯಾಗಿ ಬಿಡುತ್ತದೆ. ಈ ಕ್ರಮವನ್ನು ಕಥನದ ವೈಫಲ್ಯವೆಂದು ಗುರುತಿಸಿಕೊಳ್ಳುವುದಕ್ಕಿಂತ ವಿಶಿಷ್ಟತೆ ಎಂದು ಕಂಡುಕೊಳ್ಳಬೇಕಾಗುತ್ತದೆ. ’ಕರ್ವಾಲೋ’ ಕಾದಂಬರಿಯಲ್ಲಿ ಹಾರುವ ಓತಿಯೇ ಪ್ರಧಾನವಾದರೂ, ತನ್ನ ಪರಿಸರದ ಪ್ರಮುಖ ಅಂಶಗಳನ್ನೂ ಮುನ್ನೆಲೆ ತರುತ್ತದೆ. ’ಕರ್ವಾಲೋ’ ಜೀವ ವೈವಿಧ್ಯತೆಗಾಗಿ ಹಾರುವ ಓತಿಯನ್ನು ಹುಡುಕುವ ಕ್ರಿಯೆಯನ್ನೇ ಮುಖ್ಯಧಾರೆಯನ್ನಾಗಿ ಬಳಸಿಕೊಳ್ಳುವ ಅಗತ್ಯವಾದರೂ ಏನಿತ್ತು? ಎಂಬ ಪ್ರಶ್ನೆ ಮನುಷ್ಯ ಮತ್ತು ಪ್ರಕೃತಿಯ ನಿಯಂತ್ರಣಗಳನ್ನು ಮೀರುವ ಸಂಕೇತವಾಗಿದೆ. ಪ್ರಾಕೃತಿಕ ಪ್ರತಿಭೆಗಳನ್ನು ಮಾನವ ಹೇಗೆ ನಿರ್ಲಕ್ಷಿಸಿದ್ದಾನೆಂಬ ಮಹತ್ವದ ಅಂಶಗಳನ್ನು ಹಾರುವ ಓತಿ ಬಾನಿನ ವಿಸ್ತಾರದಂತೆಯೇ ತಿಳಿಸಿದೆ. ಒಟ್ಟಾರೆಯಾಗಿ ಕಥನಗಳಲ್ಲಿನ ಮಾನವೇತರ ಪಾತ್ರಗಳಾದ ಪ್ರಾಣಿ-ಪಕ್ಷಿಗಳ ಜೀವನಕ್ರಮವನ್ನು ಅರಿತುಕೊಳ್ಳುವ ಧಾವಂತದಲ್ಲಿ, ಅವುಗಳ ಪ್ರತಿಭೆಗಳನ್ನು ಹೇಗೆ ಅಲಕ್ಷಿಸಿದ್ದಾನೆ ಎಂಬುದು ಮುಖ್ಯವಾದ ನೆಲೆಗಳಲ್ಲೊಂದು. ಇವುಗಳಷ್ಟೇ ಅಲ್ಲದೆ, ಪ್ರತಿಮೆಗಳ ರೂಪದಲ್ಲಿ ಬಳಕೆಗೊಂಡಿರುವ ಕೆಸರೂರು, ಬಿರುಗಾಳಿ, ಹೆಬ್ಬಲಸಿನ ಮರ, ದಿಮ್ಮಿ, ಕಾಳ್ಗಿಚ್ಚು, ಕಾಡಿನ ಮೂಲಿಕೆಗಳು, ಜಡಿಮಳೆ, ಇತ್ಯಾದಿಗಳು ಹೊಂದಿರುವ ನೈಸರ್ಗಿಕ ಪ್ರತಿಭೆಗಳನ್ನು ವಿಶ್ಲೇಷಿಸಿಕೊಳ್ಳಲು ಸಾಧ್ಯತೆಗಳಿವೆ.
’ಎಂಗ್ಟನ ಪುಂಗಿ’ ಕತೆಯ ಎಂಗ್ಟ, ’ಕರ್ವಾಲೋ’ ಕಾದಂಬರಿಯ ಮಂದಣ್ಣ, ’ಸಂಬಳಕ್ಕೆ ಸಿಕ್ಕಿಕೊಂಡ ದೆವ್ವ’ ಕತೆಯ ಮಾರ, ’ಅವನತಿ’ಯ ಸೂರಾಚಾರಿ- ಅಂತಹ ಎಲ್ಲಾ ಸ್ಥಳೀಯ ಪಾತ್ರಗಳು ಕ್ರಿಯಾಶೀಲ ಗುಣವನ್ನು ಹೊಂದಿವೆ. ತಾವುಗಳೇ ಕಟ್ಟಿಕೊಂಡಿದ್ದ ನಿರ್ಬಂಧಗಳನ್ನು ಮುರಿಯುತ್ತಾ ಹೋಗುತ್ತವೆ. ಎಷ್ಟೇ ಮುರಿಯಲು ಪ್ರಯತ್ನಿಸಿದರೂ ಸಹ ಜೀವಿಗಳೊಂದಿಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಳ್ಳುತ್ತವೆ. ಅವುಗಳು ಆಧುನಿಕ ವ್ಯವಸ್ಥೆ ಉಂಟುಮಾಡಬಹುದಾದ ಕಂದಕಗಳಂತೆ ತೋರುವುದಿಲ್ಲ. ಅವುಗಳನ್ನು ಒಪ್ಪಿಕ್ಕೊಳ್ಳುವುದಕ್ಕೆ ಸಾಧ್ಯವಾಗದಿರಬಹುದು. ಆದರೆ ಕ್ರಿಯಾಶೀಲ ಗುಣವನ್ನು ಮೆಚ್ಚಲೇಬೇಕು. ಆಧುನಿಕತೆಯ ವಿವಿಧ ಮುಖಗಳು ಅವುಗಳ ಕ್ರಿಯಾಶೀಲತೆಯೊಂದಿಗೆ ಇಡೀ ಬದುಕನ್ನು ನಾಶಮಾಡುತ್ತದೆ. ಅವರ ಕೃಷಿ, ಜ್ಞಾನ, ಕಲೆ, ಸಂಸ್ಕೃತಿಗಳಲ್ಲಿನ ಪ್ರತಿಭೆಯನ್ನು ಇಲ್ಲವಾಗಿಸುತ್ತವೆ. ಕೇವಲ ಪ್ರತಿಭೆಗಳನ್ನು ಗುರುತಿಸಿಕೊಳ್ಳುವುದಕ್ಕಿಂತ ಅವುಗಳನ್ನು ನಾಶಮಾಡಲು ಪ್ರಯತ್ನಿಸಿದ ಅಂಶಗಳನ್ನು ಗುರುತಿಸಿಕೊಳ್ಳಬೇಕಾಗಿದೆ. ಈ ಬಗೆಯಲ್ಲಿ ತೇಜಸ್ವಿಯವರ ಕಥನಗಳು ಅಪಾರ ಸಾಧ್ಯತೆಗಳನ್ನು ಒದಗಿಸುತ್ತವೆ. ಉದಾಹರಣೆಗೆ- ’ಮೇದರಹಳ್ಳಿ ಅವಸಾನ’ಕ್ಕೆ ಕಾರಣವಾದ ಪ್ಲಾಸ್ಟಿಕ್, ಅದರ ಬಿದಿರು ಕಲೆಗೆ ಕುತ್ತನ್ನು ತರುತ್ತದೆ. ಅದರೊಂದಿಗೆ ಅಲ್ಲಿನ ಜನರ ಬದುಕನ್ನು ಹೇಗೆಲ್ಲಾ ಬದಲಾಯಿಸುತ್ತದೆ ಎಂಬುದನ್ನು ಗಮನಿಸುವಂತದ್ದು.
ಒಂದು ಪ್ರದೇಶವನ್ನು ಅಭಿವೃದ್ಧಿ ಮತ್ತು ಸಂರಕ್ಷಣೆಯ ಸೋಗಿನಲ್ಲಿ ಪ್ರವೇಶಿಸುವ ಕಟ್ಟಳೆಗಳು, ಕಾನೂನುಗಳು, ಇಲಾಖೆಗಳು, ವ್ಯಕ್ತಿಗಳು ಉಂಟುಮಾಡುವ ಪರಿಣಾಮಗಳು ವಿಭಿನ್ನವಾಗಿರುತ್ತವೆ. ಅಂತೆಯೇ ತೇಜಸ್ವಿಯವರ ಕಥನಗಳಲ್ಲಿನ ಪರಿಸರದ ದೃಷ್ಟಿಯಿಂದಾಗಿ ಇವುಗಳು ಮುಖ್ಯವಾಗುತ್ತವೆ. ಸ್ಥಳೀಯವಾಗಿದ್ದ ಜನತೆಯ ರೀತಿ-ರಿವಾಜುಗಳು, ವ್ಯಕ್ತಿಗಳ ಕೌಶಲ್ಯಗಳು ಮುಂತಾದವುಗಳು, ಪ್ರವೇಶಿಕೆ ಪಡೆದ ಜಾಗತಿಕ ಸಂವೇದನೆಯೊಂದಿಗೆ ಮುಖಾಮುಖಿಯಾಗುವ ನೆಲೆಗಳೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಇವುಗಳೊಂದಿಗೆ ಬಹುಮುಖ್ಯವಾಗಿ ಧರ್ಮ, ಜಾತಿ, ವರ್ಣ ಮತ್ತು ವರ್ಗಗಳನ್ನು ಮೀರುವ ಒಂದು ಚಲನೆಯು ವ್ಯಾಪಕವಾಗಿ ಕಥನಗಳನ್ನು ಆವರಿಸಿದೆ.
ಸ್ಥಳೀಯ ಮಹಾನ್ ಶಿಲ್ಪಿಯಾದಂಥ ಸೂರಾಚಾರಿಯ ಪ್ರತಿಭೆಯನ್ನು ಅವನ ಸುತ್ತಮುತ್ತಲಿನ ಜನರೇ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಆದ್ದರಿಂದಾಗಿ ಅವನ ಪ್ರತಿಭೆ ಅವನಿಗೇ ತಿಳಿಯದೇ ಹೋಗುತ್ತದೆ. ಹೀಗಾಗಿ ಅವನಿಗೆ ಸಿದ್ದಿಸಿದ್ದ ಕೌಶಲ್ಯವನ್ನು ಕಳೆದುಕೊಳ್ಳುತ್ತಾನೆ. ಮೌಢ್ಯದ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಜನರಿಂದ ಮಾನ್ಯತೆಯನ್ನು ಹಂಬಲಿಸುತ್ತಾನೆ. ಹೀಗೆ ತನ್ನ ಮೂಲ ಕಸಬನ್ನು ಬಿಟ್ಟು ’ಅವನತಿ’ಯತ್ತ ಸಾಗುತ್ತಾನೆ. ಇಂತಹ ಪಾತ್ರಗಳ ನಡೆ ವ್ಯವಸ್ಥೆಯನ್ನು ಎದುರಿಸುವಂತೆ ಕಂಡುಬಂದರೂ ಅವುಗಳ ನಾಶವನ್ನು ತಾವುಗಳೇ ಮಾಡಿಕೊಳ್ಳುತ್ತವೆ. ಜ್ಞಾನದ ಎದುರು ಸೋಲುತ್ತವೆ. ನಾಗರಿಕ ಸಮಾಜದ ಬದಲಾವಣೆಗೆ ಪೂರಕವಾಗಿ ಜ್ಞಾನ ಸಹಾಯಕವಾದರೂ ಪ್ರತಿಭೆಯನ್ನು ಬೆಳೆಸುತ್ತಿಲ್ಲ! ಜ್ಞಾನ ವೈಜ್ಞಾನಿಕತೆ ಮತ್ತು ಅವೈಜ್ಞಾನಿಕತೆಗಳೆರಡನ್ನೂ ಒಟ್ಟಿಗೆ ಬೆಳಸಬಲ್ಲದು ಅನ್ನುವುದನ್ನು ’ಕುಬಿ ಮತ್ತು ಇಯಾಲ’ ಕತೆ ನಿರೂಪಿಸಿದೆ. ಒಟ್ಟಾಗಿ ಕಥನಗಳು ಜ್ಞಾನಕ್ಕೆ ಸೌಲಭ್ಯಗಳಿವೆ; ಪ್ರತಿಭೆಗೆ ಇಲ್ಲ ಅನ್ನುವುದನ್ನು ಪ್ರತಿಪಾದಿಸುತ್ತವೆ.
ಪಾತ್ರಗಳ ಪ್ರತಿಭೆಯನ್ನು ಮಾತ್ರ ಪರಿಗಣಿಸದೆ, ಅದನ್ನು ಕಾಪಾಡುವ ಕಾಡಿನ ಬಗ್ಗೆಯೂ ಚರ್ಚೆಯನ್ನು ವಿಸ್ತರಿಸಬೇಕಿದೆ. ಕೃತಿಗಳಲ್ಲಿ ಕಂಡುಬರುವಂತೆ ಕಾಡು ತನ್ನ ವಿಸ್ತಾರವನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗುವುದನ್ನು ಕಾಣಬಹುದು. ಅಲ್ಲಿನ ಮೂಲ ಜನರ ಪ್ರತಿಭೆಗೆ ಆಗರವಾಗಿದ್ದ ಕಾಡು ’ಫಾರೆಸ್ಟ್’ ಆಗಿ ಬದಲಾಗುತ್ತದೆ. ಜೊತೆಗೆ ಸ್ಥಿತಿವಂತರ ಕಾಫಿ ಎಸ್ಟೇಟ್ ಆಗಿ ಪರಿವರ್ತಿವಾಗುವುದರ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ’ಭೂಮಿ’ಯಾಗುತ್ತಿದ್ದ ಚಲನೆಯಿಲ್ಲಿದೆ. ಇದರೊಂದಿಗೆ ಕಾನೂನುಗಳು, ಸರ್ಕಾರದ ವಿವಿಧ ಇಲಾಖೆಗಳು, ಪ್ರಭುತ್ವದ ಪರವಾದ ವ್ಯಕ್ತಿಗಳು ವ್ಯವಸ್ಥಿತ ಸಂಚು ರೂಪಿಸಿದಂತೆ ’ಕಲ್ಚರ್’ ಜೊತೆಗೆ ಬೆರೆತಿದ್ದ ಪ್ರತಿಭೆಯನ್ನು ಹತ್ತಿಕ್ಕುತ್ತವೆ. ಜ್ಞಾನದ ಅಡಿಯಾಳಾಗಿ ಸ್ಥಾನವನ್ನು ಪಡೆಯುತ್ತವೆ. ಲೇಖಕ ಕೂಡ ಒಂದು ಪಾತ್ರವಾಗಿ ಬರುವುದರಿಂದ, ಅವನ ಕ್ರಿಯಾಶೀಲತೆಯ ಹಿಂದೆ ಇರುವುದು ಕೂಡ ಅವನ ಜ್ಞಾನ ಮಾತ್ರ. ಜ್ಞಾನ ಗಳಿಸಿದಂತೆ ಸುಲಭವಾಗಿ ಪ್ರತಿಭೆಯನ್ನು ಗಳಿಸಲು ಸಾಧ್ಯವಿಲ್ಲ ಅನ್ನುವುದಕ್ಕೆ ಲೇಖಕ ಪಾತ್ರವೇ ದೊಡ್ಡ ಉದಾಹರಣೆ.
ಕಥನಗಳು ಎತ್ತಿರುವ ಇನ್ನೊಂದು ಬಹುಮುಖ್ಯ ಪ್ರಶ್ನೆ- ’ತುಕ್ಕೋಜಿ’ ಅಂತಹ ಸ್ಥಳೀಯ ಜ್ಞಾನ ಪರಂಪರೆ ಯಾಕೆ ’ಅಪ್ಡೇಟ್’ ಆಗುತ್ತಿಲ್ಲ ಅನ್ನುವುದು. ಹೀಗಾಗದೇ ಇರುವುದಕ್ಕೆ ಸಾಕಷ್ಟು ಕಾರಣಗಳನ್ನು ಪಾತ್ರಗಳ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಅವುಗಳೊಂದಿಗೆ ಕಾನೂನುಗಳು, ಜಮೀನ್ದಾರರ ದಬ್ಬಾಳಿಕೆ, ಆಧುನೀಕರಣದ ಪ್ರಭಾವ, ಇತ್ಯಾದಿಗಳು ಪೂರಕವಾಗುವುದನ್ನೂ ಸಹ ಮುಂದಿಡುತ್ತಾರೆ. ಇಂತವುಗಳ ದಟ್ಟ ಪ್ರಭಾವಗಳ ನಡುವೆ ಪಾತ್ರಗಳು, ಅವುಗಳ ಪ್ರತಿಭೆ ಅವಗಣನೆಗೆ ಒಳಗಾಗುತ್ತವೆ. ಇಂತಿರುವಾಗ ಸ್ಥಳೀಯ ಜ್ಞಾನ ಪ್ರತಿಭೆಗಳನ್ನು ಗುರುತಿಸುವ ಮಾನದಂಡಗಳನ್ನು ಹೇಗೆ ರೂಪಿಸಿಕೊಳ್ಳುವುದು? ಪ್ರಸ್ತುತ ಅದರ ಅಗತ್ಯತೆ ಏನಿದೆ? ’ಮೂಲಿಕೆ ಬಳ್ಳಿಯ ಸುತ್ತ’ ಕತೆಯಲ್ಲಿನ ಸ್ಥಳೀಯ ಜ್ಞಾನಪ್ರತಿಭೆಗಳು ಬೌದ್ಧಿಕ ಜ್ಞಾನಕ್ಕೆ ಸರಿಸಮಾನವಾಗಿ ನಿಲ್ಲುವವೇ? ನಿಂತರೆ ಸರಿಸಮಾನದ ಮಾನ್ಯತೆ ಏಕಿಲ್ಲ? ಎಂಬಂತಹ ಪ್ರಶ್ನೆಗಳು ಉದ್ಭವಿಸುತ್ತವೆ. ಅವುಗಳಲ್ಲಿ ಕೆಲವು ಸಂಕೀರ್ಣವಾದವುಗಳಾದರೆ, ಇನ್ನು ಕೆಲವು ತಾರ್ಕಿಕವಾದವುಗಳು. ಅಂತಿಮವಾಗಿ ಜ್ಞಾನ ಮತ್ತು ಸ್ಥಳೀಯ ಪ್ರತಿಭೆಗಳು ಒಂದಕ್ಕೊಂದು ಪೂರಕವಾಗಿರಬೇಕು. ಆಗ ಮಾತ್ರ ಹೊಸದಾದ ಜ್ಞಾನ ಮೀಮಾಂಸೆಯನ್ನು ಕಟ್ಟಲು ಸಹಕಾರಿಯಾಗುತ್ತದೆ ಎಂಬ ಆಶಯವನ್ನು ಕಥನಗಳು ಅಭಿವ್ಯಕ್ತಿಸಿವೆ.
- ಡಾ. ರವಿ ಎಂ ಸಿದ್ಲಿಪುರ
ಡಾ. ರವಿ ಎಂ. ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ವಿಷಯದಲ್ಲಿ ಅಧ್ಯಯನ ಕೈಗೊಂಡು ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಮತ್ತು ವಾರ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ‘ಪರ್ಯಾಯ’ ಎಂಬ ವಿಮರ್ಶಾ ಲೇಖನಗಳ ಸಂಕಲನ, ‘ಶಾಸನ ಓದು’, ‘ವಿಮರ್ಶೆ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ ‘ಸಮರ ವ್ಯಾಪಾರ’ ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.