ಮೋಹನದಾಸ ಕರಮಚಂದ ಗಾಂಧಿಯವರ ಕುರಿತು ಭಾರತದ ಬಹುಜನರು ಯಾಕೆ ಒಂದು ರೀತಿಯ ಅಸಹನೆಯನ್ನು ಹೊಂದಿದ್ದಾರೆ!?
ಎಂಬ ಅನೇಕ ಗಾಂಧಿವಾದಿಗಳ ಆಕ್ರೋಶದ ಪ್ರಶ್ನೆಗಳಿಗೆ ಪೂನಾ ಒಪ್ಪಂದ ಎಂಬ ಮರಮೋಸದ ಕರಾಳ ಒಪ್ಪದದಲ್ಲಿ ಮಾತ್ರ ಉತ್ತರವಿದೆ.
ಪೂನಾ ಒಪ್ಪಂದ ಎಂದರೇನು?
ಅತ್ಯಂತ ಸರಳವಾಗಿ ಹೇಳುವುದಾದರೆ; 1932, ಸೆಪ್ಟಂಬರ್ 24 ರಂದು ಪೂನಾ ನಗರದ ಯರವಾಡ ಜೈಲಿನಲ್ಲಿ ಗಾಂಧೀ ಮತ್ತು ಅಂಬೇಡ್ಕರ್ ಅವರ ನಡುವೆ ನಡೆದ ಒಂದು ಐತಿಹಾಸಿಕ ರಾಜಕೀಯ ಒಪ್ಪಂದ. ಈ ಒಪ್ಪಂದದಂತೆ ಎಸ್ಸಿ/ಎಸ್ಟಿ ಸಮುದಾಯಕ್ಕೆ ಒಂದಷ್ಟು ರಾಜಕೀಯ ಮೀಸಲು ಕ್ಷೇತ್ರಗಳು ದಕ್ಕಿದವು. ಅರೇ ಒಳ್ಳೆಯದೇ ಆಯಿತಲ್ಲವೇ? ಮತ್ತೇಕೆ ಇದನ್ನು ಕರಾಳ ಒಪ್ಪಂದ ಎನ್ನಲಾಯಿತು?
ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾಗಿತ್ತು. ಅದೇ ಸಮಯಕ್ಕೆ ಬಾಬಾಸಾಹೇಬರು ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟೀಷರಿಂದ ಜಾತಿವಾದಿ ಮೇಲುವರ್ಗದವರ ಕೈಗೆ ಅಧಿಕಾರ ಹಸ್ತಾಂತರವಾದರೆ ನಮ್ಮನ್ನು ಆಳುವವರು ಮಾತ್ರವೇ ಬದಲಾಗುತ್ತಾರೆ. ನಮಗೆ ಯಜಮಾನರ ಬದಲಾವಣೆಯಾಗುವ ಸ್ವಾತಂತ್ರ್ಯದ ಬದಲು ಎಲ್ಲಾ ಜನಸಮುದಾಯಗಳಿಗೂ ಅಧಿಕಾರ ಹಕ್ಕುಗಳು ಗ್ಯಾರಂಟಿಯಾದ ನಂತರವೇ ಬ್ರಿಟೀಷರು ಅಧಿಕಾರ ಹಸ್ತಾಂತರ ಮಾಡಬೇಕೆಂದು ಆಗ್ರಹಿಸಿದರು ಮತ್ತು ದೇಶದಾದ್ಯಂತ ಬಿರುಗಾಳಿಯಂತೆ ಸುತ್ತಿ ಶೋಷಿತ ಸಮುದಾಯಗಳನ್ನು ಸಂಘಟಿಸಿದರು (ಈಗಿನ ಎಲ್ಲಾ ಎಸ್ಸಿ/ಎಸ್ಟಿ/ಓಬಿಸಿ) ಅದಲ್ಲದೆ ಬ್ರಿಟೀಷರ ವಿವಿಧ ಸುಧಾರಣಾ ಸಮಿತಿಗಳಿಗೆ ಶೋಷಿತರ ರಾಜಕೀಯ ಹಕ್ಕೊತ್ತಾಯಗಳನ್ನು ಸಾಕ್ಷ್ಯಾಧಾರಗಳ ಸಮೇತ ಮಂಡಿಸಿದ್ದರು. ಬಾಬಾಸಾಹೇಬರ ಈ ಬೇಡಿಕೆಗಳೆಲ್ಲವೂ ತರ್ಕಬದ್ದವಾದುದೆಂದು ಬ್ರಿಟೀಷರು ಪರಿಗಣಿಸಿದರು ಮತ್ತು ಇದೆಲ್ಲವನ್ನು ಕೂಲಂಕುಶವಾಗಿ ಚರ್ಚಿಸಲು ಲಂಡನ್ ನಲ್ಲಿ 1930 ರಿಂದ 1932 ರ ತನಕ ಮೂರು ಸುತ್ತಿನ ರೌಂಡ್ ಟೇಬಲ್ ಕಾನ್ಫರೆನ್ಸ್ ನಡೆಸಿದರು. ಅಲ್ಲಿ ಬಾಬಾಸಾಹೇಬರು 21 ವರ್ಷ ತುಂಬಿದ ಎಲ್ಲಾ ಭಾರತೀಯ ಪ್ರಜೆಗಳಿಗೂ ಓಟಿನ ಹಕ್ಕನ್ನೂ, ಶೋಷಿತ ಸಮುದಾಯಗಳಿಗೆ ಪ್ರತ್ಯೇಕ ಚುನಾಯಕಗಳನ್ನೂ ಕೇಳಿದರು.
ಆದರೆ, ಗಾಂಧೀಜಿ ಮತ್ತು ಅಂದಿನ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರುಗಳೆಲ್ಲರೂ ಭಾರತೀಯರೆಲ್ಲರಿಗೂ ಓಟಿನ ಅವಕಾಶವನ್ನೂ, ಶೋಷಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನೂ ಕಟುವಾಗಿ ವಿರೋಧಿಸಿದರು. ಈ ಎಲ್ಲಾ ವಿರೋಧಗಳ ನಡುವೆಯೂ ಅಂಬೇಡ್ಕರ್ ಅವರು ಬಯಸಿದ ಸಕಲರಿಗೂ ಮತದಾನದ ಹಕ್ಕು ದೊರೆಯಿತು. ಶೋಷಿತರಿಗೆ ಪ್ರತ್ಯೇಕ ಮತಕ್ಷೇತ್ರ ನೀಡಿದರೆ ಹಿಂದೂಧರ್ಮ ಒಡೆದುಹೋಗುತ್ತದೆ ಎಂಬ ಗಾಂಧೀಜಿಯವರ ವಾದವನ್ನು ಅಲ್ಲಗೆಳೆದ ಅಂಬೇಡ್ಕರ್ ಅವರು ಶತಶತಮಾನಗಳಿಂದ ಶೋಷಿತ ಸಮುದಾಯಗಳನ್ನು ಹಿಂದೂ ಸಮಾಜದಿಂದ ಹೊರಗೇ ಇಟ್ಟಿದ್ದಾರೆ. ಅದಲ್ಲದೆ ಶೋಷಿತ ಸಮುದಾಯವು ಮೂಲ ಬೌದ್ದ ಸಮುದಾಯವೇ ಹೊರತು, ಅವರೆಂದೂ ಹಿಂದೂಗಳಾಗಿಯೇ ಇಲ್ಲ ಎಂಬುದನ್ನು ಇತಿಹಾಸದ ಸಾಕ್ಷ್ಯಗಳ ಮೂಲಕ ಸಾಬೀತು ಪಡಿಸಿದರು. ಇದರಿಂದ ಕನ್ವಿನ್ಸ್ ಆದ ಬ್ರಿಟೀಷರು ಎಸ್ಸಿ/ಎಸ್ಟಿಗಳಿಗೆ (ಆಗಿನ್ನೂ ಒಬಿಸಿಗಳ ಪಟ್ಟಿ ಇರಲಿಲ್ಲ) ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರ ಆಶಯಗಳನ್ನೂ ಎತ್ತಿ ಹಿಡಿವ ವಿಶೇಷ ಚುನಾಯಕಗಳನ್ನು ನೀಡಿ ಆದೇಶ ಹೊರಡಿಸಿದರು. ಇದೆ “ಕಮ್ಯೂನಲ್ ಅವಾರ್ಡ್” ಅಂದರೆ ಕೋಮವಾರು ತೀರ್ಪು.
ಈ ತೀರ್ಪಿಗೆ ಬದ್ದವಾಗಿರುತ್ತೇವೆಂದು ದುಂಡು ಮೇಜಿನ ಸಭೆಯಲ್ಲಿ ಸಹಿಹಾಕಿ ಬಂದ ಗಾಂಧೀಜಿಯವರು ಭಾರತಕ್ಕೆ ಬಂದೊಡನೆ ಈ ತೀರ್ಪಿನಿಂದಾಗಿ ಭವಿಷ್ಯದಲ್ಲಿ ಸೃಷ್ಟಿಯಾಗಬಹುದಾದ ಶೋಷಿತರ ನೈಜ ನಾಯಕತ್ವ, ಶೋಷಿತರ ಹಕ್ಕು ಅಧಿಕಾರಗಳನ್ನು ಲೆಕ್ಕಹಾಕಿ ಹೌಹಾರಿದರು! ನಮ್ಮ ಕೈಕೆಳಗೆ ಗುಲಾಮರಂತಿರುವ ಈ ಸಮುದಾಯಗಳು ನಮ್ಮ ಸರಿಸಮಕ್ಕೆ ಸದನಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಕೂರುವುದನ್ನು ಗ್ರಹಿಸಿ ತಲ್ಲಣಿಸಿಹೋದರು. ಬ್ರಿಟೀಷರ ವಿರುದ್ದ ಮತ್ತೆ ಸಮರ ಸಾರಿದರು. ಅವರನ್ನು ಯರವಾಡ ಜೈಲಿಗೆ ಹಾಕಲಾಯಿತು. ಶೋಷಿತ ಸಮುದಾಯಗಳಿಗೆ ಸಿಕ್ಕ ಈ ವಿಶೇಷ ರಾಜಕೀಯ ಹಕ್ಕುಗಳ ವಿರುದ್ದವೇ ಗಾಂಧೀಜಿಯವರು ಯರವಾಡ ಜೈಲಿನಲ್ಲೇ ಉಪವಾಸ ಸತ್ಯಾಗ್ರಹಕ್ಕೆ ಕುಳಿತದ್ದು!
ಇದನ್ನು ನೆಪ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯ ನಾಯಕರು ದೇಶದಾದ್ಯಂತ ಶೋಷಿತರ ವಿರುದ್ದ, ಅಂಬೇಡ್ಕರ್ ವಿರುದ್ದ ಗಲಭೆಗಳನ್ನೇ ಸೃಷ್ಟಿಸಿದರು. ಗಾಂಧೀಜಿವರು ಪ್ರಾಣ ಕಳೆದುಕೊಂಡರೆ ಅದಕ್ಕೆ ಅಂಬೇಡ್ಕರ್ ಅವರೇ ಕಾರಣ, ಅಂಬೇಡ್ಕರ್ ಬ್ರಿಟೀಷರೊಡನೆ ಸೇರಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ದೇಶ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಎಂಬ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಗಾಂಧೀಜಿಯನ್ನು ಹೀರೋ ಮಾಡಿ, ಅಂಬೇಡ್ಕರ್ ಅವರನ್ನು ವಿಲನ್ ಆಗಿಸಿದರು! ಇದರಿಂದಾಗಿ ಸ್ವಾತಂತ್ರ್ಯ ಹೋರಾಟಗಾರರು ಶೋಷಿತರ ವಿರುದ್ದ ತಿರುಗಿ ಬಿದ್ದರು. ಅಂಬೇಡ್ಕರ್ ಅವರ ಮೇಲೆ ಒತ್ತಡ ತಂತ್ರ ತಂದರು, ಪ್ರಾಣಬೆದರಿಕೆ ಒಡ್ಡಿದರು. ಕೊನೆಗೂ ಅಂಬೇಡ್ಕರ್ ಅವರನ್ನು ಒತ್ತಡಪೂರ್ವಕವಾಗಿ ಯರವಾಡ ಜೈಲಿಗೆ ಕರೆತಂದು ವಿಶೇಷ ಚುನಾಯಕಗಳನ್ನು ಕೈಬಿಡುವಂತೆ ಬೆದರಿಸಿ ಈಗಿರುವ ಮೀಸಲು ಸ್ಥಾನಗಳಿಗೆ ಒಪ್ಪುವಂತೆ ಮಾಡಲಾಯಿತು. ಇದೇ ಸರಳವಾಗಿ ಪೂನಾ ಒಪ್ಪಂದ.
ಇದನ್ನು ನಾನು ಒಪ್ಪುವುದಿಲ್ಲ. ಇದೊಂದು ಮಹಾಮೋಸ ಮತ್ತು ಐತಿಹಾಸಿಕ ಅನ್ಯಾಯ. ಇದರಿಂದಾಗಿ ಶೋಷಿತ ಸಮುದಾಯಗಳು ಗುಲಾಮಗಿರಿಯಲ್ಲೇ ಉಳಿಯಲಿದ್ದಾರೆ. ಇದರ ಪಾಪವು ಗಾಂಧೀಜಿಯವರಿಗೇ ಸಲ್ಲುತ್ತದೆ. ಇತಿಹಾಸದಲ್ಲಿ ಗಾಂಧೀಜಿ ಶೋಷಿತ ಸಮುದಾಯಗಳ ಖಳನಾಯಕರಾಗಿ ಉಳಿಯುತ್ತೀರಿ. ಶೋಷಿತ ಸಮುದಾಯಗಳು ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ ಎನ್ನುತ್ತಲೇ ಪೂನಾ ಒಪ್ಪಂದಕ್ಕೆ ಕಣ್ಣೀರಿನಲ್ಲೇ ಸಹಿ ಹಾಕಿ, ಬಹಳ ನೋವು, ನಿರಾಶೆ ಮತ್ತು ಸೋಲಿನಿಂದ ಅಂಬೇಡ್ಕರ್ ಅವರು ತೆರಳಿದರು.
ಅಂದು ಅಂಬೇಡ್ಕರ್ ಅವರು ಹೇಳಿದಂತೆಯೇ ಗಾಂಧೀಜಿ ಬಯಸಿದಂತೆಯೇ ಇಂದು ಶೋಷಿತ ಸಮುದಾಯಗಳ ಸ್ಥಿತಿ ಇದೆ!
ಆದರೆ, ಗಾಂದೀಜಿಯವರನ್ನು ಮಾತ್ರ ಇತಿಹಾಸದಲ್ಲಿ ಖಳನಾಗದಂತೆ, ಶೋಷಿತರ ಕಣ್ಣುಗಳನ್ನೇ ಕಿತ್ತರೂ ಗಾಂಧೀಜಿಯವರೇ ತಮ್ಮ ಕಣ್ಣುಗಳು ಎಂಬಂತೆ ಇತಿಹಾಸವನ್ನು ಸೃಷ್ಟಿಸುವಲ್ಲಿ ಗಾಂಧಿವಾದಿಗಳು ಭಯಂಕರ ಯಶಸ್ಸು ಸಾಧಿಸಿದರು! ಇದೆಲ್ಲವೂ ನನ್ನ ಗ್ರಹಿಕೆಯಲ್ಲ ಸ್ವತಃ ಅಂಬೇಡ್ಕರ್ ಅವರೇ ಗಾಂಧೀಜಿಯವರ ಈ ಧೋರಣೆಗಳನ್ನು “ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಡನ್ ಟು ದ ಅನ್ ಟಚಬಲ್ಸ್” ಎಂಬ ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಯಾರಾದರೂ ಓದಬಹುದು.
ಬಹುತೇಕ ಗಾಂಧಿವಾದಿಗಳು ದಲಿತಪರವಾಗಿಯೂ ಇರುತ್ತಾರೆ. ಆದರೆ ಅವರ ಬಯಕೆ ಮಾತ್ರ ಗಾಂಧಿ ಮತ್ತು ಅಂಬೇಡ್ಕರ್ ಎಂದರೆ ದಲಿತರ “ಎರಡು ಕಣ್ಣುಗಳು” ಎಂಬುದನ್ನು ದಲಿತರ ಎದೆಯೊಳಗೆ ಬಿತ್ತುವುದರಲ್ಲೇ ಅವರ ಉತ್ಸಾಹ ಅಡಗಿದೆ. ಬಹುತೇಕ ಈ ಉದ್ದೇಶವನ್ನು ಅವರು ಸಾಧಿಸಿ ದಲಿತ ಸಾಹಿತಿಗಳು ಹಾಗು ಹೋರಾಟಗಾರರ ಎದೆಯೊಳಗೆ “ಗಾಂಧಿ ಅಂಬೇಡ್ಕರ್ ದಲಿತರ ಎರಡು ಕಣ್ಣುಗಳು” ಅಥವಾ ಇನ್ನೂ ಮುಂದೆ ಹೋಗಿ “ಅಂಬೇಡ್ಕರ್ ದಲಿತರ ತಂದೆ, ಗಾಂಧಿ ದಲಿತರ ತಾಯಿ” ಎಂಬ ಆಕರ್ಷಕವಾದ ಭಾವುಕತೆಯನ್ನು ಬಿತ್ತಿ ಸಾಕಷ್ಟು ಬೆಳೆಯನ್ನೂ ಬೆಳೆದುಕೊಂಡಿದ್ದಾರೆ. ಆದರೆ ಇದೇ ಪ್ರಗತಿಪರರು ಇತರೆ ಜನಸಮುದಾಯದಲ್ಲಿ ಅಂಬೇಡ್ಕರ್ ಗಾಂಧಿ ನಮ್ಮ ಎರಡು ಕಣ್ಣುಗಳು ಅಥವಾ ಅಪ್ಪ ಅಮ್ಮ ಎಂಬ ಕಥೆ ಬಿತ್ತುವುದಿಲ್ಲ! ಅಲ್ಲಿ ಮಾತ್ರ ಗಾಂಧೀಜಿ ರಾಷ್ಟ್ರಪಿತ, ಅಂಬೇಡ್ಕರ್ ದಲಿತ ನಾಯಕ!
ಗಾಂಧೀಜಿಯವರು ಅಸ್ಪೃಶ್ಯ ಸಮುದಾಯವನ್ನು ಪೂನಾ ಒಪ್ಪಂದದ ನಂತರ ಹಿಂದೂಕರಣ ಮಾಡಲು ತಮ್ಮ ಜೀವನವನ್ನೇ ಮುಡಿಪಿಟ್ಟರು. ಅದಕ್ಕಾಗಿ ಅವರನ್ನು “ಹರಿಜನ” ಎಂದು ಹೊಸ ನಾಮಕಾರಣವನ್ನೇ ಮಾಡಿದರು. ಅದಕ್ಕೆ ಅವರಿಗೆ ಸಿಕ್ಕಿದ್ದು ಗುಜರಾತಿನ ದೇವಾಲಯಗಳಲ್ಲಿನ ಅನಾಥ ಅಥವಾ ಅಕ್ರಮ ಸಂತಾನದ ಮಕ್ಕಳನ್ನು ಹರಿಜನರು ಎಂದು ಜನ ಕರೆಯುತ್ತಿದ್ದುದು.
ಇದನ್ನೇ ದಲಿತ ಸಮುದಾಯಕ್ಕಿಟ್ಟು ಹರಿಜನರಾಗಿಸಿದರು! ಅದನ್ನು ಪ್ರಚಾರ ಮಾಡುವ ಸಲುವಾಗಿ ತಮ್ಮ “ಯಂಗ್ ಇಂಡಿಯಾ” ಪತ್ರಿಕೆಯ ಹೆಸರನ್ನೇ ಬದಲಿಸಿ “ಹರಿಜನ್” ಆಗಿಸಿದ ಮಹಾತ್ಯಾಗಿ! ಅದಲ್ಲದೆ “ಹರಿಜನ ಸೇವಕ ಸಂಘ” ಸ್ಥಾಪಿಸಿ ಶೋಷಿತರನ್ನು ಓಲೈಸಿದರು. ಈ ಸಂಘದ ಹೆಸರಲ್ಲಿ ದೇಶದಾದ್ಯಂತ ಹಣ ಸಂಗ್ರಹಿಸಿದರು. ಆದರೆ ಒಂದು ನಯಾಪೈಸೆಯನ್ನೂ ಹರಿಜನರ ಉದ್ದಾರಕ್ಕಾಗಿ ಬಳಸಲಿಲ್ಲ. ಎಲ್ಲವನ್ನೂ ತಮ್ಮ ರಾಷ್ಡ್ರೀಯ ಕಾಂಗ್ರೆಸ್ ಗಾಗಿ ಬಳಸಿದರು! ಇದರ ಪೂರ್ತಿ ಲೆಕ್ಕವನ್ನು ಅಂಬೇಡ್ಕರ್ ಅವರು ದಾಖಲಿಸಿದ್ದಾರೆ ಆಸಕ್ತರು ಓದಿ. ಆ ಪುಸ್ತಕದ ಹೆಸರೇನು ಗೊತ್ತೆ? “ಗಾಂಧಿ ಮತ್ತು ಅಶ್ಪೃಶ್ಯರ ವಿಮೋಚನೆ” ಅದರಲ್ಲಿನ ಮುಖ್ಯವಾದ ಅಧ್ಯಾಯ “ಬಿವೇರ್ ಆಫ್ ಗಾಂಧಿ!” ನಾಯಿಯಿದೆ ಎಚ್ಚರಿಕೆ ನೋಡಿದ್ದೀರಲ್ಲವೇ? ಹಾಗೇ “ಗಾಂಧಿ ಬಗ್ಗೆ ಎಚ್ಚರವಿರಲಿ” ಎಂದು ಸ್ವತಃ ಗಾಂಧೀಜಿಯವರು ಬದುಕಿದ್ದಾಗಲೇ ಬರೆದು ಪ್ರಕಟಿಸಿದ್ದರು!
ನೆನಪಿರಲಿ, ಹರಿಜನ ಎಂಬುದನ್ನು ಸ್ವತಃ ಬಾಬಾಸಾಹೇಬರೇ ತಿರಸ್ಕರಿಸಿದ್ದಾರೆ ಮತ್ತು ಗಾಂಧೀಜಿಯವರ ಈ ಕೀಳು ಮನಸ್ಥಿತಿಯನ್ನು ಧಿಕ್ಕರಿಸುತ್ತಾರೆ. ಹರಿಜನ ಎಂಬ ಪದವನ್ನು ಶಾಸನ ಸಭೆಯಲ್ಲೇ ಕಿತ್ತುಹಾಕಿಸಿದ್ದಾರೆ. ಅದು ಅಸಂವಿಧಾನಿಕ ಪದ. ಹಾಗಿದ್ದರೂ ಗಾಂಧಿವಾದಿಗಳ ಕಣ್ಣಲ್ಲಿ ಮಾತ್ರ ದಲಿತರು ಇಂದಿಗೂ ಹರಿಜನರೇ! ಇದನ್ನು ಅನೇಕ ದಲಿತರೂ ಹೆಮ್ಮೆಯಿಂದ ಬಳಸುತ್ತಾರೆ ಎಂಬುದೇ ವಿಪರ್ಯಾಸ!
ಕೃಷ್ಣಮೂರ್ತಿ ಚಮರಂ ಅವರ “ಜನವರಿ 26 ಗಣರಾಜ್ಯದಿನವಲ್ಲ!” ಎಂಬ ಲೇಖನವನ್ನೂ ಓದಿ
ಅಷ್ಟಲ್ಲದೆ ಕೆಲವು ದೊಡ್ಡ ಗಾಂಧಿವಾದಿ ದಲಿತ ಚಿಂತಕರು, ಸಾಹಿತಿಗಳೂ ಸಹ ಗಾಂಧೀಜಿಯವರು ನಮ್ಮ ಜನರನ್ನು ದೇವರ ಮಕ್ಕಳಾಗಿಸಿದ ಮಹಾತ್ಮ ಎಂದೇ ಇಂದಿಗೂ ಬಣ್ಣಿಸುತ್ತಾರೆ. ಇದು ನಮ್ಮ ದುರಂತ! ಈಗ ಹೇಳಿ ಪೂನಾ ಒಪ್ಪಂದವು ಶೋಷಿತ ಸಮುದಾಯಗಳಿಗೆ ಕರಾಳವಲ್ಲವೇ? ಇದರ ಕೀರ್ತಿಯು ಶ್ರೀಮಾನ್ ಎಂ.ಕೆ.ಗಾಂಧೀಜಿಯವರಿಗೇ ಸಲ್ಲಬೇಕಲ್ಲವೇ?
ಮುಂದೇನು?
ನಿಜ ಹೇಳಬೇಕೆಂದರೆ, ಇಷ್ಟೇ ನಮಗೆ ಮಹಾತ್ಮ ಗಾಂಧೀಜಿಯವರ ಮೇಲಿರುವ ಮರುಕ! ಅದನ್ನೊರತುಪಡಿಸಿ ಇನ್ಯಾವ ದ್ವೇಷವೂ ನಮಗಿಲ್ಲ. ಪೂನಾ ಒಪ್ಪಂದದ ಈಗಿನ ರಾಜಕೀಯ ಮೀಸಲಾತಿಯನ್ನು ನಾವು ಧಿಕ್ಕರಿಸಿ, ಸ್ವತಂತ್ರ ರಾಜಕಾರವನ್ನೇ ಮಾಡಬೇಕಿದೆ. ಅಂತಹ ತ್ಯಾಗದ ನಾಯಕತ್ವ ಸೃಷ್ಟಿಯಾದರೆ ಮಾತ್ರ ಅಂತಹ ಜನರೂ ಸೃಷ್ಟಿಯಾಗುತ್ತಾರೆ.
– ಡಾ.ಚಮರಂ
[…] […]