ಬದುಕಿನಿಂದ ಬಿಡಿಸಿಕೊಂಡ
ನಕ್ಷತ್ರಗಳ ಎಣಿಸುತ್ತೇನೆ
ನೀಲಿ ಆಗಸಕ್ಕೆ ಚುಕ್ಕಿಯಾಗಲೊರಟ
ವೇಮುಲನ ತಿಳಿನಗೆ ಎದೆಯ ಹೊಕ್ಕಿ
ಹುಸಿವಾದಗಳ ನಿಶಾನೆಗೆ ಜೀವ ತೀಡುತ್ತದೆ..

ಈ ಹುಡುಗ…
ಸದಾ ಕಣ್ಣುಗಳೊಳಗೆ
ಮತ್ತೊಬ್ಬರ ಬದುಕಿನ
ಹುಕಿ ತುಂಬಿಕೊಂಡಿದ್ದವನು
ಇವನೂ ಎದ್ದು ಹೊರಟನಂತೆ…

ಇಲ್ಲದವರ ಪರ ಹೋರಾಡುತ್ತಿದ್ದವನ
ಎದೆಯೊಳಗಿದ್ದ ಖಾಲಿತನಯಾವುದೋ
ಯಾವ ರಾತ್ರಿಗಳಲಿ ನಿದ್ದೆ ಇಲ್ಲದೇ
ಬದುಕಿಗಾಗಿ ಪರಿತಪಿಸಿದ್ದನೋ
ಯಾವ ನೋವು ಮತ್ತೊಬ್ಬರ
ನೋವಿಗೆ ಹೆಗಲಾಗುವುದ ಕಲಿಸಿತ್ತೋ
ಯಾವ ಪೆಟ್ಟು ಉಳ್ಳವರ ಎದೆಗೊದ್ದು
ಅಸಹಾಯಕರ ಎದೆಗಪ್ಪಿಕೊಳ್ಳುವ
ಛಲ ತುಂಬಿತ್ತೋ…

ಯಾವ ಹಾಡು ಅವನ ಅಂಬೇಡಿಗರನ
ಹಾದಿಗೆ ಎಳೆದು ತಂದಿತ್ತೋ…
ಯಾವ ಮಾತು ಚೆಗುವೆರಾನ
ಕ್ರಾಂತಿಯ ಪರಿಚಯಿಸಿತ್ತೋ..
ಯಾವ ಕಾರಣಗಳು
ಕೆಂಪು ನೀಲಿ ಬಣ್ಣಗಳ
ಅವನ ತಿಳಿಕಣ್ಣಿನಾಳಕ್ಕಿಸಿದ್ದವೋ ಏನೋ….

ಮೊನ್ನೆ ಇದ್ದಕ್ಕಿದ್ದಂತೆ
ಹೆಗಲ ಮೇಲೊತ್ತ
ಅಷ್ಟೂ ಭಾರ ಇಳಿಸಿಕೊಂಡು
ತಣ್ಣಗೆ ಎದ್ದು ನಡೆದನಂತೆ…

ಬಂಡಾಯದ ಎಲ್ಲಾ ಹಾದಿಗಳಲ್ಲೂ
ಹೂನಗೆಯ ತುಂಬಿಕೊಂಡು ಎದುರಾಗಿದ್ದವನು
ಕಳ್ಳುಬಳ್ಳಿ ಸಂಬಂಧಗಳಿಲ್ಲದೇ
ಕಾರುಣ್ಯವನ್ನರಿತು ಸತ್ಯದ ಜೊತೆ ನಿಂತವನು
ಅಲೆಗಳಿಗೆ ಕರಗುವ ಬಂಡೆಗಲ್ಲುಗಳಂತೆ
ಇಂಚಿಂಚೇ ಕರಗಿ
ಕಾರುಣ್ಯದ ಮಂತ್ರದಂಡವೇ ಆಗಿದ್ದದವನು
ಕಟ್ಟಿದ ಕವಿತೆಗಳಲ್ಲಿ
ತಾಯ್ಗಣ್ಣಿನ ಕನಸುಗಳ ಹೊಸೆದಿದ್ದವನು
ಉಳ್ಳವರ ಒಟ್ಟಿಗುಟ್ಟಿದರೂ
ಇಲ್ಲದವರ ನಾಳೆಗಳಿಗಾಗಿ
ಮೌನವಾಗಿ ದುಡಿದವನು
ಅಷ್ಟೇ ನಿಶ್ಯಬ್ಧವಾಗಿ
ಸಾವಿಗೆ ಕುತ್ತಿಗೆ ಹೊಡ್ಡಿದ್ದಾನೆ…

ಈಗ ಬದುಕಿಗೆ ಉತ್ತರಿಸಬೇಕಾದವರು ನಾವು…
ನಮ್ಮ ಕನಸುಗಳಲ್ಲಿ ಅವನಿಗೊಂದು ಪಾಲಿಟ್ಟವರು
ನಮ್ಮ ನೋವುಗಳಿಗೆ ಅವನ ಹೆಗಲ ಬಯಸಿದವರು
ಹಿಡಿ ನಗುವ ಅವನೊಂದಿಗೆ ಹಂಚಿಕೊಂಡವರು
ಸಿಡಿದೇಳುವ ಬಂಡಬದುಕುಗಳ ಅವನೆದಿರಿಟ್ಟು
ಎದೆಯೊಳಗೊಂಡು ಬಂಡಾಯವ ಕಟ್ಟಿಕೊಟ್ಟವರು…!
ಈಗ ಬದುಕುಗಳಿಗೆ ಉತ್ತರಿಸಬೇಕಾದವರು ನಾವೇ…

ಹಾ ಉತ್ತರಿಸೋಣ…
ಸಾವನ್ನು ಎದುರಿಟ್ಟು ಅನುಮಾನಿಸುವವರ ಎಲ್ಲಾ ಪ್ರಶ್ನೆಗಳಿಗೂ
ಹಾಗೂ ನಮ್ಮದೇ ಬದುಕುಗಳಿಗೂ ಉತ್ತರಿಸೋಣ…

ಸಾವು ಹೇಡಿತನವಲ್ಲ,
ತೊಟ್ಟು ಕಳಿಚಿದ ನಕ್ಷತ್ರಗಳು
ನೀಲಿ ಬಾನಿನಲಿ ಕೆಂಪು ನಗೆಬೀರುವಾಗ
ಅವು ಉರಿದುಹೋದ ಸಮತೆಯ ಪಂಚುಗಳಿಗೆ
ನಮ್ಮ ನೆತ್ತರ ಎಣ್ಣೆ ಮಾಡಿ ಮುಂದೆ ಸಾಗಲೇಬೇಕಾದ
ಹಾದಿಗೆ ಉತ್ತರಿಸೋಣ…

ಸಾವು ಎಲ್ಲರಿಗೂ ಇದೆ
ನೊಂದವರ ಬದುಕಿಗಾಗಿ ಜೀವತೆತ್ತವರ
ಬದುಕು ಮಾತ್ರ ಎಲ್ಲರೊಂದಿಗೆ ಜೀವಂತವಿರುತ್ತದೆ…

ತೊಟ್ಟು ಕಳಚಿಕೊಂಡ ಈ ನಕ್ಷತ್ರಗಳ
ನಮ್ಮ ಉಸಿರುಗಳೊಳಗೆ ಕಾಯ್ದುಕೊಳ್ಳುವ
ಅವರು ಕನಸಿದ ನಾಳೆಗಳಿಗಾಗಿ
ನಾವೂ ಒಂದಷ್ಟು ದೂರ ಕ್ರಮಿಸುವ ಮಾತು ಕೊಡುತ್ತಾ….
ನಮ್ಮ ಬದುಕುಗಳನ್ನೇ ಉತ್ತರವಾಗಿಸೋಣ….

ಜೈಭೀಮ್, ಲಾಲ್ ಸಲಾಮ್…

~ಮಂಜುಳಾ ಹುಲಿಕುಂಟೆ

Leave a Reply

Your email address will not be published. Required fields are marked *