ಸೂರ್ಯೋದಯದಷ್ಟೇ ತೀವ್ರವಾಗಿ ಸೂರ್ಯಾಸ್ತಮಾನವೂ ನನ್ನೊಳಗೆ ಪುಳಕ ಉಂಟುಮಾಡಬಲ್ಲದು. ಈ ಸಲ ವೃದ್ಧಾಪ್ಯ ಅರ್ಥಾತ್ ಮುಪ್ಪಿನ ಬಗ್ಗೆ ಬರೆಯುತ್ತಿದ್ದೇನೆಂದು ಈಗಾಗಲೇ ನೀವು ಗ್ರಹಿಸಿರಬಹುದು. ದಟ್ಟ ಜೀವನಾನುಭವ, ಮಾಗಿದ ವ್ಯಕ್ತಿತ್ವ, ಕಲ್ಲುಮುಳ್ಳುಗಳ ದಾಟಿ ಬಂದ ನಿರಾಳತೆ ಮತ್ತು ಇಂಚಿಂಚೇ ವೈರಾಗ್ಯದತ್ತ ವಾಲುವ ಕಾಲ. ಈ ಜಗತ್ತಿನಿಂದ ಮಾನಸಿಕವಾಗಿ ಬೇರ್ಪಡೆಗೊಳ್ಳುತ್ತ, ಅರಿತೋ ಮರೆತೋ ಪವಿತ್ರ ಸಾವಿಗೆ ಸಜ್ಜಾಗುವ ಪರಿಪೂರ್ಣತೆ.
ಮಕ್ಕಳು ಮನೆ ಕಟ್ಟಿ ತಮ್ಮ ಮಡದಿ ಮಕ್ಕಳೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದರೆ ನೆಮ್ಮದಿ; ಸಾಲ, ರೋಗ, ಸಾಂಸಾರಿಕ ಗೋಳಿನಲ್ಲಿ ಮುಳುಗಿದ್ದರೆ ತುಸು ಆತಂಕ. ಸಿಡುಕುಮೋರೆಯ, ಮನೆ ಮುರಿಯುವ ಸೊಸೆಯಂದಿರು ಸಿಗದಿದ್ದರಂತೂ ನಿರುಮ್ಮಳ. ಮೊಮ್ಮಕ್ಕಳು ಬಾಯ್ತುಂಬ ತಾತ, ಅಜ್ಜಿ ಅನ್ನುತ್ತಾ ಓಡೋಡಿ ಬಂದು ತೊಡೆಯ ಮೇಲೆ ಕೂತರಂತೂ ಕಣ್ತುಂಬಿಕೊಳ್ಳುತ್ತವೆ: ಮುದ್ದು ಮೊಮ್ಮಗಳಿಗೆ ತಲೆ ಬಾಚಿ ಜಡೆ ಹಾಕುವ ಅಜ್ಜಿ, ಪುಟಾಣಿ ಮೊಮ್ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಒಂದು ಸುತ್ತು ಹೋಗಿ ಬರುವ ಅಜ್ಜ- ಅದೊಂದು ಮುಪ್ಪಿನ ಸುವರ್ಣಕಾಲ.
ಇದನ್ನು ಸುವರ್ಣಕಾಲವೆಂದು ಹೇಳಲು ಕಾರಣವಿಷ್ಟೇ; ಯಾವುದೇ ಹೊಸ ಕನಸನ್ನು ಕಾಣಬೇಕಾದ ಕಾಲ ಅಷ್ಟರಲ್ಲಿ ಕರಗಿರುತ್ತದೆ; ಬಾಳ ಪರೀಕ್ಷೆಯಲ್ಲಿ ಪಾಸೋ, ನಪಾಸೋ ಅದು ಆಮೇಲೆ- ಒಂದು ಸುಧೀರ್ಘ ಬದುಕನ್ನು ತೀವ್ರವಾಗಿ ಅನುಭವಿಸಿದ, ಒಂದಿಡೀ ಜೀವನದುದ್ದಕ್ಕೂ ಜಗತ್ತನ್ನು ಹತ್ತಿರದಿಂದ ನೋಡಿದ ಅನುಭವದ ಒಟ್ಟು ಪಾಕ ಜೋಳಿಗೆಯಲ್ಲಿರುವುದಂತೂ ಖರೆ. ಯಾರಿಗೋ ಬಕೆಟ್ಟು ಹಿಡಿಯಬೇಕಾದ ದರ್ದಾಗಲೀ, ಯಾರನ್ನೋ ಎದುರು ಹಾಕಿಕೊಳ್ಳುವ ತುರ್ತಾಗಲೀ ಇರಲಾರದು. ನಿರಾಳ, ನಿರುಮ್ಮಳ !
ಅರವತ್ತು ದಾಟಿದವರನ್ನು ಬೇರೆ ಬೇರೆ ವರ್ಗಗಳಾಗಿ ಅಧ್ಯಯನಿಸಬಹುದು. ಅದರಲ್ಲಿ ನಿವೃತ್ತರದು ಒಂದು ವರ್ಗ. ಅವರು ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ, ಯಾಕೆಂದರೆ ಅವರು ಸಂಪಾದನೆ ಮಾಡುವುದಕ್ಕಿಂತ, ನಾಳೆಗಾಗಿ ಕೂಡಿಡುವುದಕ್ಕಿಂತ ಸುಮ್ಮನೆ ಕೂರದೆ ಕಾರ್ಯೋನ್ಮುಖರಾಗಿರುವುದು ಮುಖ್ಯ; ಇನ್ನು ಕೆಲವರು ದೇವಸ್ಥಾನ, ಅಧ್ಯಾತ್ಮ, ಪುಸ್ತಕಗಳ ಮೊರೆ ಹೋಗುವುದು, ಚೇತನವನ್ನು ಜಾಗೃತವಾಗಿಡುವ ಸಲುವಾಗಿ. ಪಟ್ಟಣದ ಒಂದಿಷ್ಟು ಮಂದಿ ಬೆಳಗ್ಗಿನ ವಾಕಿಂಗ್, ಸಂಜೆ ಕ್ಲಬ್ಬಿನ ಲಘು ಪಾರ್ಟಿಗಳಿಗೆ ತುಡಿದರೆ ಹಳ್ಳಿಯ ಜನ ಹೊಲಗದ್ದೆಗಳಲ್ಲಿ ಕೈಲಾದಷ್ಟು ಕೆಲಸ ಮಾಡುವುದು, ಆಡು, ಕುರಿ ಮೇಯಿಸಲು ಹೊಲಮಾಳಗಳಿಗೆ ಹೋಗುವುದುಂಟು. ಇವೆಲ್ಲದರ ಜೊತೆಗೆ ವೃದ್ಧಾಶ್ರಮ ಸೇರಿದ ಅಥವಾ ಆಸ್ಪತ್ರೆಗಳ ಬೆಡ್ಡುಗಳಲ್ಲೇ ಹೆಚ್ಚು ಕಾಲ ಕಳೆಯುವ ಮಂದಿಯ ಮನೋಭೂಮಿಕೆಯಲ್ಲಿ ಮೂಡುವ ವಿಚಿತ್ರ, ವಿಶಿಷ್ಟ ಭಾವನೆಗಳನ್ನೂ ನಾವು ಗಂಭೀರವಾಗಿ ಗ್ರಹಿಸಬೇಕಾಗುತ್ತದೆ.
ವೃದ್ಧಾಪ್ಯಕ್ಕೆ ಈ ಮೇಲಿನ ಮಾತುಗಳು ಪುಟ್ಟದೊಂದು ಪ್ರಸ್ತಾವನೆಯಷ್ಟೇ!
ಮುಪ್ಪು, ಅದರಲ್ಲೂ ಅರವತ್ತು ಎಪ್ಪತ್ತನೆಯ ವಯಸ್ಸು ಬದುಕು ಹಣ್ಣು ಬಿಡುವ ಕಾಲವೆಂದು ಹೇಳುವಾಗ ಅವರ ದೇಹಗಳ ಕ್ಷೀಣತೆ, ಮನಸುಗಳ ಪಕ್ವತೆ ಗಮನಿಸಬೇಕಾಗುತ್ತದೆ, ಬದಲಾವಣೆಯನ್ನು ಯಾರೂ ಅಲ್ಲಗಳೆಯಲಾಗದು. ಅದು ಮನುಷ್ಯನೊಬ್ಬನ ಒಟ್ಟು ವ್ಯಕ್ತಿತ್ವ ನಿರ್ಮಿತಗೊಳ್ಳುವ, ಅನಾವರಣಗೊಳ್ಳುವ ಕಾಲಘಟ್ಟ. ಶಂಕರ, ರಾಮಾನುಜ, ಮಧ್ವರ ಸಿದ್ದಾಂತಗಳನ್ನು ಪರಾಮರ್ಶಿಸುವ ಕಾಲ, ಬುದ್ಧ, ಗಾಂಧಿ, ಬಸವ, ಕುವೆಂಪು, ಕಾರ್ಲ್ ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ಮುಂತಾದದವರ ಒಟ್ಟು ಚಿಂತನೆಯನ್ನು ಗುಡ್ಡೆ ಹಾಕಿಕೊಂಡು ಧ್ಯಾನಿಸುವ ಕಾಲ, ಹಿಟ್ಲರ್-ಇಂದಿರಾಗಾಂಧಿ-ಮೋದಿ, ನೆಹರು-ದೇವೇಗೌಡ-ಕರುಣಾನಿಧಿ ನಡುವೆ ತಾಳೆ ನೋಡುವ ಕಾಲ, ಗಾಂಧಿ ಕೊಂದವರ ಜೊತೆ ಕಲಬುರ್ಗಿ-ಗೌರಿ-ಪನ್ಸಾರೆ ಹತ್ಯೆಗಳಿಗೆ ಇರಬಹುದಾದ ಉದ್ದೇಶವನ್ನು ತೂಗಿ ನೋಡುವ ಕಾಲ ಅದು; ತನ್ನಂತೆ ಹೂ, ಹಣ್ಣು ತಳೆದು ವಯಸ್ಸಾದ ಮರಗಳು, ಮುದಿ ಎತ್ತುಗಳು, ಅವಶೇಷಗೊಳ್ಳುತ್ತಿರುವ ಪುರಾತನ ಕಟ್ಟಡ, ನಗರ, ಹಳ್ಳಿ, ಭಾಷೆ, ಸಂಸ್ಕೃತಿ, ಆಚರಣೆಗಳ ಬಗ್ಗೆ ಧ್ಯಾನಿಸುವ ಸಮಯ ಅದು.
ಒಟ್ಟಾರೆಯಾಗಿ ನಾಗರೀಕತೆ, ಆಧುನಿಕತೆ ಹೆಸರಿನಲ್ಲಿ ಕಣ್ಮರೆಯಾದ ಪುರಾತನ ಜೀವಂತಿಕೆಯನ್ನು ಹುಡುಕುವ ಕಾಲ ಕೂಡ ಅದು. ಹಾಗೆಯೇ ಧರ್ಮ-ದೇವರ ಹೆಸರಿನಲ್ಲಿ, ಸ್ವಪ್ರತಿಷ್ಠೆ-ಸ್ವಜಾತಿ ಪ್ರೇಮ, ಧರ್ಮಗ್ರಂಥಗಳ, ಶಾಸ್ತ್ರ ನಂಬಿಕೆಗಳ ಹೆಸರಿನಲ್ಲಿ ಮನುಷ್ಯನನ್ನು ಅವರಿಸಿಕೊಳ್ಳುತ್ತಿರುವ ಅಸಮಾನತೆ, ಸೋಗಲಾಡಿತನ, ಮೃಗತ್ವದ ಕುರಿತು ಚಿಂತಿಸುವ ಸಮಯ ಕೂಡ. ಚಿಂತನೆ, ಸಿದ್ದಾಂತ, ನಿಲುವು, ಬದ್ಧತೆಗಳಲ್ಲಿ ಎಷ್ಟು ತಮ್ಮ ಆಳದಿಂದ ಹುಟ್ಟಿದಂಥವು, ಎಷ್ಟು ಬೇರೆಯವರ ಪ್ರಭಾವದಿಂದ ಆವರಿಸಿದಂಥವು, ಅದರ ಪರಿಧಿ-ವಿಸ್ತಾರ ಎಷ್ಟು ಅನ್ನುವ ವಿಮರ್ಶೆಗೆ ತಮ್ಮನ್ನು ತಾವೇ ಒಡ್ಡಿಕೊಳ್ಳುವ ಕಾಲವೂ ಹೌದು.
- ಆದರೆ ನಾವೆಲ್ಲ ಈ ವೃದ್ಧರನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದೇವಾ? ನಮ್ಮಿಂದ ಸಲ್ಲಬೇಕಾದುದನ್ನೆಲ್ಲ ಸಲ್ಲಿಸಿದ್ದೇವಾ?
- ಇವರಿಗೆ ಸಿಗಬೇಕಾದ ಗೌರವ, ನೀಡಬೇಕಾದ ಸ್ಥಾನ, ಆದ್ಯತೆಗಳಿಂದ ವಂಚಿತರನ್ನಾಗಿಸಿ ಎಷ್ಟು ಘಾಸಿಗೊಳಿಸಿದ್ದೇವೆ ಇವರನ್ನು!
- ಅವರ ಆರೋಗ್ಯ, ಮನಸ್ಥಿತಿ ನೋಡಿ. ಕುಸಿದ ಈ ದೇಹಕ್ಕೆ ಹೊತ್ತೊತ್ತಿಗೆ ಊಟ, ಬಿಸಿನೀರು, ನೆಮ್ಮದಿಯ ನಿದಿರೆ, ಅಕ್ಕರೆಯ ಮಾತು ಕೊಟ್ಟಿದ್ದೇವಾ?
- ದಂಡಿಸಿ ಕೇಳುವ ಚೈತನ್ಯವನ್ನೇ ಕಳೆದುಕೊಂಡಿರುವ ಇವರಿಗೆ ಬೇಕಾದ ಅಗತ್ಯಗಳನ್ನು ಪೂರೈಸಿದ್ದೇವಾ?
ನಿಮ್ಮ ಪುಟ್ಟ ಮಕ್ಕಳನ್ನು ನೀವು ಮುದ್ದಿಸುವಾಗ, ಅಕ್ಕರೆಯಿಂದ ಅನ್ನ ತಿನ್ನಿಸುವಾಗ, ಜೋಗುಳ ಹಾಡಿ ಮಲಗಿಸುವಾಗ, ಮೈ ಬಿಸಿಯಾದರೆ, ತುಸು ಕೆಮ್ಮಿದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ನೀವು ಮಕ್ಕಳಾಗಿದ್ದಾಗ ಇವರೂ ಕೂಡ ಅದೇ ರೀತಿ ನಿಮ್ಮನ್ನು ಪ್ರೀತಿಯಿಂದ ಸಾಕಿದ್ದರು, ನಿಮ್ಮನ್ನು ಕಾಳಜಿಯಿಂದ ನೋಡಿಕೊಂಡಿದ್ದರು ಅನ್ನುವ ಸತ್ಯವನ್ನು ಮನಗಂಡರೆ ಖಂಡಿತ ನಿಮ್ಮಲ್ಲಿ ಬದಲಾವಣೆಯಾಗುತ್ತದೆ. ಇಷ್ಟಕ್ಕೂ ವಯಸ್ಸಾದ ತಾಯ್ತಂದೆಯರೂ ಕೂಡ ಪುಟ್ಟ ಮಕ್ಕಳ ಹಾಗೆ ನಂಬಿ. ಅರಳೋ ಮರುಳೋ ಅನ್ನುವಂತೆ ಒಂದೆರಡು ಮಾತಾಡಿದರೆ ಹೊಟ್ಟೆಗೆ ಹಾಕಿಕೊಳ್ಳಿ. ಎಷ್ಟಾದರೂ ನಿಮ್ಮ ದೇಹದ ಮಾಂಸಖಂಡಗಳ, ಜೀವಕೋಶಗಳ, ನಿಮ್ಮ ಆಕಾರದ ಮೂಲ ಬೇರು ಅವರೇ ಆಗಿದ್ದಾರೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಿ. ಒಮ್ಮೆ ಅವರ ಸುಕ್ಕುಮೊಗ, ಅಸಹಾಯಕ ಸ್ಥಿತಿ, ಆ ಕಾಂತಿಹೀನ ಕಣ್ಣುಗಳನ್ನು ನೋಡಿ ಪ್ಲೀಸ್!