ಕನ್ನಡ ಚಿತ್ರರಂಗದಲ್ಲಿ ದಲಿತರು ಮತ್ತು ಮಧ್ಯಮದಿಂದ ಕೆಳಗಿರುವವರು ಎಂದು ಭಾವಿಸಲಾಗುವ ಸಮುದಾಯ, ಅವುಗಳ ಅಸ್ತಿತ್ವ, ಅವರ ಅಸ್ಮಿತೆ, ಆಚರಣೆ ಮತ್ತು ಸಂಸ್ಕೃತಿಯ ಬಗ್ಗೆ ಇರುವಷ್ಟು ತಾತ್ಸಾರ ಬಹುಶಃ ಬೇರಾವ ಸಿನಿಮಾ ರಂಗಗಳಲ್ಲಿ ಇಲ್ಲವೆನ್ನಬಹುದು. ದಲಿತರ ಸಂಕಷ್ಟಗಳ ಕಂಟೆಂಟ್ ಇರುವ ಚಿತ್ರಗಳನ್ನು ಥಿಯೇಟರ್‌ನತ್ತ ಸುಳಿಯದಂತೆ ನೋಡಿಕೊಳ್ಳುವ ಹುನ್ನಾರ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆಯಾದರೂ, ಈಗಂತೂ ಅದು ಅತ್ಯಂತ ನೀಚತನಕ್ಕೆ ತಲುಪಿಬಿಟ್ಟಿದೆ.
ಅದಕ್ಕೊಂದು ಸ್ಪಷ್ಟ ಉದಾಹರಣೆ ಪಾಲಾರ್ ಸಿನಿಮಾ! ಹೌದು, ಹೇಳಿ-ಕೇಳಿ ಪಾಲಾರ್ ದಲಿತರ ಭೂ ಹಕ್ಕುಗಳ ಪರ ದನಿ ಎತ್ತುವ, ಅದಕ್ಕಾಗಿ ಅವರನ್ನು ಜಾಗೃತಗೊಳಿಸಲು ರೂಪಿಸಿದಂತ ಅಪ್ಪಟ ಕನ್ನಡ ನೆಲದ ಸಿನಿಮಾ. ಆದರೆ, ಈ ನೆಲದ ಅದೆಷ್ಟೋ ಮ್ಯೂಸಿಕ್ ಕಂಪೆನಿಗಳು, ಈ ಸಿನಿಮಾದ ಹಾಡುಗಳ ಹಕ್ಕುಗಳನ್ನು ಕೊಂಡುಕೊಳ್ಳುವುದರಿಂದ ಹಿಂದೆ ಸರಿದಿದ್ದು ಸುದ್ದಿಯಾಗಿ, ಕರ್ನಾಟಕದ ಪ್ರಜ್ಞಾವಂತ ಜನರ ಗಮನ ಸೆಳೆದಿತ್ತು.
ಜಾತೀವಾದಿಗಳ ಅಟ್ಟಹಾಸದ ಬಲೂನಿಗೆ ಸೂಜಿಮೊನೆ ತಾಗಿಸುವಂತೆ ಪ್ರಖ್ಯಾತ ಚಿತ್ರ ನಿರ್ದೇಶಕ ಪಾ.ರಂಜಿತ್ ಅವರು ಸ್ವತಃ ಟ್ವೀಟ್ ಮಾಡಿ, ಟ್ರೇಲರ್ ಕೂಡಾ ಬಿಡುಗಡೆ ಮಾಡಿದ್ದು ಈಗ ಇತಿಹಾಸ. ಅದೇ ಇತಿಹಾಸದ ಮುಂದುವರಿಕೆಯಾಗಿ, ಪಾಲಾರ್ ಚಿತ್ರಕ್ಕೆ ಈಗ ಹೃದಯವಂತ ಡಿಸ್ಟಿಬ್ಯೂಟರ್ ಸಿಕ್ಕಿದ್ದಾರೆ. ಅದೇ ಖುಷಿಯಲ್ಲಿ ಪಾಲಾರ್ ನಿರ್ದೇಶಕ ಜೀವಾ ನವೀನ್ ಈಗ ಪ್ರೀಮಿಯರ್ ಶೋ ಏರ್ಪಡಿಸುವ ಮೂಲಕ ಕರ್ನಾಟಕದಲ್ಲಿ ಹೊಸ ಅಲೆಯೆಬ್ಬಿಸುವ ಉಮೇದಿನಲ್ಲಿ ಇದ್ದಾರೆ.
ಮಕರ ಸಂಕ್ರಾಂತಿಯ ಈ ಸಡಗರದಲ್ಲಿ ಪಾಲಾರ್ ಚಿತ್ರ ತಂಡದ ಗೆಲುವಿನ ಸಡಗರವೂ ಧಾವಿಸಲಿ ಎಂದು ಆಶಿಸುತ್ತಾ, ಇದೊಂದು ಕನ್ನಡದ ಮೈಲಿಗಲ್ಲಾಗಿ ಅವತಾರವೆತ್ತಲಿ ಎನ್ನೋಣ… ಅಲ್ಲವೇ?
ಸ್ಥಳ: ಸ್ವಾಗತ್ ಶಂಕರ್ ನಾಗ್ ಚಿತ್ರಮಂದಿರ, MG Road, ಬೆಂಗಳೂರು.
ಸಂಜೆ: 6.30 ಗಂಟೆಗೆ.
ದಿನಾಂಕ: 20-01-2023, ಶುಕ್ರವಾರ
ಪಾಸ್ ಪಡೆದುಕೊಳ್ಳಲು ಸಂಪರ್ಕಿಸಿ: 9916015901 (ಪ್ರಶಾಂತ್, ಸತ್ಯ ಸಿನಿ ಡಿಸ್ಟ್ರಿಬ್ಯೂಟರ್)
ಸಂಪಾದಕ, BIG ಕನ್ನಡ