ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಸಿದ್ಧ ಮಾತು `Hit back then talk’ ಎಂದು. ಇದನ್ನು ಅಕ್ಷರಗಳಲ್ಲಿ ತೆಗೆದುಕೊಂಡರೆ ಅದೊಂದು ಹಿಂಸಾತ್ಮಕ ಚಳುವಳಿಯೇ ಆಗಿಬಿಡುತ್ತದೆ. ಆದರೆ, ಅಂಬೇಡ್ಕರ್ ಹೇಳಿದ ಕಾಂಟೆಕ್ಸ್ಟ್ ಹಿಂತಿರುಗಿಸಿ ಹೊಡೆಯಿರಿ ಎಂದಲ್ಲ… ಅವರ ಮಾತಿನ ಸಾರಾಂಶ ʼಎಜುಕೇಟ್, ಅಗಿಟೇಟ್, ಆರ್ಗನೈಸ್ʼ (Educate, Agitate, Organize) ಅಂತ. ಅಂದರೆ, ವಿದ್ಯಾವಂತರಾಗಿ, ಜಾಗೃತರಾಗಿ ಸಂಘಟಿತರಾಗಿ ಎಂದು. ಒಂದಷ್ಟು ಮಟ್ಟಿಗೆ ಬಾಬಾ ಸಾಹೇಬರ ಆಶಯ ಜಾರಿಯಾಗುತ್ತಿದೆ. ಜನ ವಿದ್ಯಾವಂತರಾಗುತ್ತಿದ್ದಾರೆ, ಜಾಗೃತರಾಗಿ ಸಂಘಟಿತರೂ ಆಗುತ್ತಿದ್ದಾರೆ. ಆದರೆ…
ಈ ಆದರೆ ಎಂಬ ನೋವು ನಮ್ಮನ್ನು ಎಲ್ಲ ಕಾಲಕ್ಕೂ ಕಾಡುತ್ತಲೇ ಇದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅನೇಕ ದಲಿತರು ಐಎಎಸ್, ಐಪಿಎಸ್ ಉನ್ನತ ಮಟ್ಟದಲ್ಲಿ ಪಾಸ್ ಮಾಡಿದ್ದರೂ ಅವರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಹಾಗಾದರೆ, ಬಾಬಾ ಸಾಹೇಬರು ಹೇಳಿದ ಎಜುಕೇಟ್ ಜತೆಗೆ ಮತ್ತಿನ್ನೇನೋ ಬೇಕಿತ್ತು ಅನಿಸಿಬಿಡುತ್ತದೆ. ಹೌದು ಎಜುಕೇಷನ್ ಜತೆಗೆ ಈ ದೇಶದ ದಲಿತರು ಸರಿಯಾಗಿ ಜಾಗೃತರಾಗುತ್ತಿಲ್ಲ; ಸಂಘಟಿತರಾಗುತ್ತಿಲ್ಲ. ದಲಿತರೊಳಗೇ ಇರುವ ನೂರಾರು ಬಣಗಳು, ಸಾವಿರಾರು ಸಂಘಟನೆಗಳಾಗಿ, ಅವುಗಳಲ್ಲಿನ 90 ಪರ್ಸೆಂಟ್ ಸಂಘಟನೆಗಳು ಮನುವಾದಿ ಪಕ್ಷಗಳಿಗೆ ಕಾಲಾಳುಗಳನ್ನು ತಯಾರು ಮಾಡುವ ಕಾರ್ಖಾನೆಗಳಾಗುತ್ತಿವೆ. ಸ್ವಂತ ಬಲದ ಮೇಲೆ, ತನ್ನ ಕಾಲಮೇಲೆ ತಾನು ನಿಲ್ಲುವ ದಿಟ್ಟತನವನ್ನು ರೂಢಿಸಿಕೊಳ್ಳಬೇಕಿತ್ತು. ಅದನ್ನೇ ಬಾಬಾ ಸಾಹೇಬರು ಹಿಟ್ ಬ್ಯಾಕ್ ದೆನ್ ಟಾಕ್ ಎಂಬ ಅರ್ಥದಲ್ಲಿ ಹೇಳಿದ್ದು.
ಎನ್ಸಿಆರ್ಬಿ (ನ್ಯಾಷನಲ್ ಕ್ರೈ ರೆಕಾರ್ಡ್ ಬ್ಯೂರೋ) ಕೊಡುವ ಮಾಹಿತಿಯ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಗಳಿಗೆ ಒಮ್ಮೆ ದಲಿತರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ, ಸುಲಿಗೆ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಅದು 8 ನಿಮಿಷಗಳಿಗೆ ಇಳಿಯುವ ಸಾಧ್ಯತೆಯೂ ಇರುತ್ತದೆ. ಇಂಥದ್ದೊಂದು ವಿಷಮ ಸ್ಥಿತಿಯಲ್ಲಿ ಇಂಡಿಯಾದ ದಲಿತರು ಬದುಕುತ್ತಿದ್ದಾರೆ. ಅದರ ಒಂದು ಸಣ್ಣ ತುಣುಕು ʻಪಾಲಾರ್ʼ ಸಿನಿಮಾದಲ್ಲಿ ಕಾಣ ಸಿಗುತ್ತದೆ.
ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಭೂಮಿಯನ್ನು, ಭೂಮಿಯ ಜತೆಗೆ ಮಗನನ್ನು ಕಳೆದುಕೊಳ್ಳುವ ಕುಟುಂಬದ ಹೃದಯ ವಿದ್ರಾವಕ ಸ್ಥಿತಿಯನ್ನು ಕಂಡಾಗ ಸಂಕಟವಾಗಿಬಿಡುತ್ತದೆ. ಅದೇ ಸಮಯದಲ್ಲಿ ತನ್ನ ಅಣ್ಣನ ಸಾವಿಗೆ ಕಾರಣನಾದ ಯಜಮಾನನ್ನು ಕೊಲ್ಲಲು ಹೊರಡುವ ಮುನಿರಾಜನ ಆಕೋಶ ಸ್ವತಃ ನಮ್ಮದೇ ಆಕ್ರೋಶವೆಂಬಂತೆ, ಮುನಿರಾಜನಲ್ಲಿ ನಮ್ಮನ್ನು ನಾವೇ ಕಂಡು, ಈ ಸಮಸ್ಯೆಗೆ ಹೀಗಲ್ಲದೆ, ಮತ್ತಿನ್ಯಾವ ರೀತಿಯಲ್ಲಿ ನ್ಯಾಯ ಕೊಡಿಸಲು ಸಾಧ್ಯವೆಂಬ ಮನಸ್ಥಿತಿ ದಕ್ಕಿಬಿಡುತ್ತದೆ. ಅದು ಮತ್ತೆ ಮುನಿರಾಜನ ಸಾವಿನ ನಂತರವೂ ಪುನರ್ಜೀವ ತಳೆಯುತ್ತಾದಾದರೂ, ರತ್ನಾಳ ʼಪ್ಲಾನ್ ಮಾಡಿ, ಮುಗಿಸೋಣʼ ಎನ್ನುವ ತಾಳ್ಮೆ ತಡೆದುಬಿಡುತ್ತದೆ. ಈ ತಾಳ್ಮೆಯಲ್ಲಿ ಸಹಜವಾಗಿ ಅಂಬೇಡ್ಕರ್ ಇಣುಕುತ್ತಾರೆ!
ಹೌದು, ಅಂದು ಕೂಡಾ ಇದ್ದ ಇಂಥ ಜಾತಿ ದೌರ್ಜನ್ಯಗಳನ್ನು ಕಂಡು ರೋಸಿಹೋಗಿ, ಅಂಬೇಡ್ಕರ್ ಏನಾದರೂ ರಕ್ತಕ್ರಾಂತಿಗೆ ನಾಂದಿಹಾಡಿದ್ದರೆ ಇಂದು ಭಾರತದ ಸ್ಥಿತಿ ಹೀಗಿರುತ್ತಿರಲಿಲ್ಲವೇನೋ ಎಂದು ಅನಿಸಿಬಿಡುತ್ತದೆ. ಆದರೂ ಸಕಲ ದಲಿತರ ಪ್ರತಿನಿಧಿಯಾಗಿ ಪ್ರಜ್ವಲಿಸುತ್ತಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಮಾತೃಹೃದಯದಿಂದ ಇಲ್ಲಿನ ಎಲ್ಲಾ ಕೇಡುಗಳನ್ನು ಸಹಿಸಿ ನುಂಗಿಕೊಂಡರು. ಸಮಯ ಹೊಂದಿಸಿ, ಇಲ್ಲಿನ ನೊಂದ ಜನಕ್ಕೆ ಪರಿಹಾರ ದಕ್ಕುವಂಥ ಅತ್ಯುನ್ನತ ಸಂವಿಧಾನ ರಚಿಸಿದರು.
ಪಾಲಾರ್ ಸಿನಿಮಾ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗದ ಕಾರಣ (ಇದೇ ಫೆಬ್ರವರಿ 10ಕ್ಕೆ ಬಿಡುಗಡೆ ಎಂದು ಚಿತ್ರತಂಡ ಹೇಳಿಕೊಂಡಿದೆ) ಪೂರ್ಣ ಕತೆಯನ್ನು ಹೇಳಿ, ಕುತೂಹಲವನ್ನು, ಚಿತ್ರತಂಡದ ಶ್ರಮವನ್ನು ಕೊಲ್ಲುವ ಕೆಲಸ ಮಾಡದೆ, ಚಿತ್ರದೊಳಗಿನ ತಿರುಳನ್ನು ಅಂಬೇಡ್ಕರ್ ಅವರ ನೆಲೆಯಲ್ಲಿ ನೋಡುವ ಪ್ರಯತ್ನ ಮಾಡಿದ್ದೇನೆ. ಅಷ್ಟೇ.
ಈ ಚಿತ್ರದಲ್ಲಿರುವ ಒಂದು ಪ್ರಮುಖ ಅಂಶವನ್ನು ಹೇಳಲೇಬೇಕು. ಅದೇನೆಂದರೆ, ಕಮ್ಯೂನಿಸಂ. ಕಮ್ಯೂನಿಸಂ ಎಷ್ಟು ರೋಮಾಂಚಕವೆಂದರೆ, ಅವಶ್ಯವಿದ್ದಾಗ ಮೈಮರೆಯುವುದು ಎಂಬದನ್ನು ಚಿತ್ರದ ನಿರ್ದೇಶಕರು ಗೊತ್ತೋ, ಗೊತ್ತಿಲ್ಲದೆಯೋ ʼಮೈಮರೆವʼವನ್ನು ಚಿತ್ರಿಸಿದ್ದಾರೆ. ಮುನಿರಾಜ ಜೈಲು ಶಿಕ್ಷೆ ಅನುಭವಿಸಿ ಹೊರಬಂದು ಮದುವೆಯಾಗುತ್ತಾನೆ. ಅವನಿಗೆ ಬೆಂಬಲವಾಗಿ ನಿಂತಿದ್ದ ಕಮ್ಯೂನಿಸ್ಟ್ (ನಕ್ಸಲ್ ಬೆಂಬಲಿಗರು) ಕಾರ್ಯಕರ್ತರು ಪ್ರಸ್ತ ಶಾಸ್ತ್ರದ ದಿನ ಗಡದ್ದಾಗಿ ಕುಡಿದು ಮಲಗಿಬಿಡುತ್ತಾರೆ. ನಕ್ಸಲಿಸಂನ ಗಂಧಗಾಳಿ ಅರಿಯದ, ಕೇವಲ ರಕ್ಷಣೆಗೆ ಅವರ ಬೆಂಬಲ ಪಡೆದಿದ್ದ ಮುನಿರಾಜ ಅದೇ ರಾತ್ರಿ ಧಾರುಣವಾಗಿ ಕೊಲೆಯಾಗಿಬಿಡುತ್ತಾನೆ. ʼಯಾರಿಗೂ ಅನ್ಯಾಯ ಆಗುವುದಕ್ಕೆ ಬಿಡೋಲ್ಲ, ವಿಪ್ಲವ ಚಿರಾಯು!ʼ ಎಂದು ಮಾತುಕೊಟ್ಟಿದ್ದ ಸಿದ್ಧಾಂತವೊಂದು ಕುಡಿದು ಚಿತ್ತಾಗಿ ಮಲಗಿಬಿಟ್ಟಿರುತ್ತದೆ! ಇದು ಈ ದೇಶದ ಕಮ್ಯೂನಿಸಂನ ಅಲಿಯತ್ತು!
ಅಂದಹಾಗೇ ಚಿತ್ರದಲ್ಲಿ ಕರ್ನಾಟಕ-ಆಂಧ್ರಪ್ರದೇಶ ಗಡಿಭಾಗದ ಭಾಷಾ ವೈವಿಧ್ಯತೆ, ಮದುವೆ ಮತ್ತು ಸಾವಿನ ಸರಳ ಆಚರಣೆಗಳನ್ನು ನಿರ್ದೇಶಕ ಬಹಳ ಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಜಾತಿ ವಿಕಾರತೆಯ ಕರಾಳ ಮುಖವನ್ನು ಯಾರ ಮರ್ಜಿ, ಮುಲಾಜು, ಜಪ್ತಿಗೂ ಸಿಗದೆ ಅನಾವರಣ ಮಾಡಿಬಿಟ್ಟಿದ್ದಾರೆ. ಏನನ್ನೂ ಹೇಳದೆ, ವಿಶುಅಲ್ ಎಫೆಕ್ಟ್ ಕೊಟ್ಟು ಪ್ರೇಕ್ಷಕರನ್ನು ಮಂಕು ಮಾಡಿ, ಮರುಳುಗೊಳಿ, ತಾಂತ್ರಿಕವಾಗಿ ಕೋಟ್ಯಂತರ ಖರ್ಚು ಮಾಡಿ ಬೀಗುವ ಚಿತ್ರ ನಿರ್ಮಾತೃಗಳು ಪಾಲಾರ್ ನಿರ್ದೇಶಕ ಜೀವಾ ನವೀನ್ ಬಳಿ ಚಿತ್ರದ ಕಂಟೆಂಟ್ ಮತ್ತು ಅದನ್ನು ಪ್ರೆಸೆಂಟ್ ಮಾಡು ಕುರಿತು ಪ್ರಾಥಮಿಕ ಪಾಠ ಹೇಳಿಸಿಕೊಳ್ಳುವುದು ಒಳ್ಳೆಯದು!
A STAR IS BORN!
ನಾಟಕ, ಗಾಯನಗಳಲ್ಲಿ ತನ್ನ ಅಗಾಧ ಪ್ರತಿಭೆಯನ್ನು ಅನಾವರಣ ಮಾಡಿದ್ದ ಉಮಾ, ಪಾಲಾರ್ ಮೂಲಕ ಕನ್ನಡದ ಅನೇಕ ಪ್ರಸಿದ್ಧ ಪ್ರಬುದ್ಧ ನಟಿಯರಿಗೆ ಸಡ್ಡುಹೊಡೆದು, ಒಬ್ಬ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ನಟಿಯೆಂದರೆ ಚೆಲುವು, ಎಕ್ಸ್ಪೋಸ್, ಬಬ್ಲಿ ಬಬ್ಲಿಯಾಗಿ ಮಾತನಾಡುತ್ತಾ, ನಾಯಕನ ಅಣತಿಯಂತೆ ನಡೆಯುವುದಷ್ಟೇ ಅಲ್ಲ… ನಟಿಯರ ನಟನೆಯೆಂದರೆ ಅವರದೇ ಪ್ರತ್ಯೇಕ ಅಸ್ಮಿತೆ, ಮಹಿಳೆಯರ, ಸಮಾಜದ ನೋವುಗಳನ್ನು ಅಡ್ರೆಸ್ ಮಾಡುವ, ಅನ್ಯಾಯಗಳ ವಿರುದ್ಧ ಸಿಡಿದುನಿಲ್ಲುವ ಹೃದಯವಂತಿಕೆ ಎಂಬುದನ್ನು ಉಮಾ ಕನ್ನಡ ಚಿತ್ರರಂಗಕ್ಕೆ ದಾಟಿಸಿದ್ದಾರೆ. ಇವರನ್ನು ಸರಿಯಾಗಿ ಬಳಸಿಕೊಂಡರೆ, ಉಮಾ ಜತೆಗೆ ಕನ್ನಡ ಚಿತ್ರರಂಗವೂ ಬೆಳೆಯುತ್ತದೆ.
ಒಟ್ಟಿನಲ್ಲಿ ಪಾಲಾರ್ ಕನ್ನಡ ಚಿತ್ರರಂಗಕ್ಕೊಂದು ಮೈಲುಗಲ್ಲಾಗಿ, ಕನ್ನಡ ಚಿತ್ರಗಳಲ್ಲಿರುವ ದಲಿತರ ಪ್ರಾತಿನಿಧಿಕರಣದ ಕೊರತೆಯನ್ನು ನೀಗಿಸುವ ಒರತೆಯಾಗಿ, ಕನ್ನಡ ಚಿತ್ರರಂಗದಲ್ಲಿ ಹೆಚ್ಚುಹೆಚ್ಚಾಗಿ ವಿಜೃಂಭಿಸುತ್ತಿರುವ ಮನುವಾದಿತನವನ್ನು ಮೆಟ್ಟಿನಿಲ್ಲುವ ಶಕ್ತಿಯಾಗಿ ಬೆಳೆದು, ಗೆಲ್ಲಲಿ ಎಂಬ ಆಶಿಸುವುದು ಈಗಿನ ತುರ್ತು…
ಒಳ್ಳೆಯ ಬರಹ… ನಿಮ್ಮ ಲೇಖನಿಯಿಂದ ಇನ್ನೂ ಹೆಚ್ಚು ಬರಹಗಳು ಬರಲಿ.. ಯಾವುದೇ ಪಂಥದ ಸಮ್ಮೋಹನಕ್ಕೆ ಒಳಗಾಗದೆ ಸದಭಿರುಚಿಯ ಸಾಹಿತ್ಯವನ್ನು ಕಟ್ಟಿಕೊಡಿ.. We are happy to read your write ups..
All the best VR