ಗೆಳೆಯ ಮತ್ತು ಪತ್ರಕರ್ತ ವಿ ಆರ್ ಕಾರ್ಪೆಂಟರ್ ಅವರು ತಮ್ಮ ಸುದ್ದಿ ಸಂಸ್ಥೆ ಬಿಗ್ ಕನ್ನಡಕ್ಕೆ ಲೇಖನಗಳನ್ನು ಬರೆಯಲು ಕೇಳಿಕೊಂಡಾಗ, ಮರು ಮಾತಿಲ್ಲದೆ ಒಪ್ಪಿಕೊಂಡೆ. ಯಾವ ವಿಚಾರವಾಗಿ ಬರೆಯಬೇಕೆಂದು ಯೋಚಿಸುತ್ತಿದ್ದಾಗಲೇ ಮತ್ತೆ ಅವರೇ ಫೋನ್ ಮಾಡಿ, ಇತಿಹಾಸದ ಪೋಸ್ಟ್ ಮಾರ್ಟಮ್ ಮಾಡುವ ಮೂಲಕ, ಸತ್ಯವನ್ನು ಬಗೆದು ತೆಗೆಯುವ ಕೆಲಸ ಮಾಡಿದರೆ ಚೆನ್ನಾಗಿರುತ್ತೆ, ನೀವು ಅದನ್ನು ಚೆನ್ನಾಗಿ ಮಾಡುತ್ತೀರಿ ಎಂದು ಬೆನ್ನು ತಟ್ಟಿದರು. ಮತ್ತೇನು ಹೇಳುವುದು, ಆಯ್ತು ಎಂದು ಒಪ್ಪಿಕೊಂಡು ಎರಡು ದಿನಗಳಿಂದ ಕೆಲಸಗಳಲ್ಲಿ ಕಳೆದು ಹೋಗಿದ್ದೆ. ಇತಿಹಾಸ ಗೊತ್ತಿಲ್ಲದವನು ಭವಿಷ್ಯವನ್ನು ರೂಪಿಸಲಾರ ಎನ್ನುವ ಬಾಬಾ ಸಾಹೇಬರ ಮಾತಿನಂತೆ ಪ್ರತಿ ಮನುಷ್ಯನಿಗೂ ತನ್ನ ಇತಿಹಾಸವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇಲ್ಲಿ ಇತಿಹಾಸವೆಂದರೆ ಕ್ರಿಸ್ತ ಪೂರ್ವ, ಕ್ರಿಸ್ತಶಕ ಕಾಲಘಟ್ಟದ ಇತಿಹಾಸವೇ ಆಗಬೇಕಂತ ಇಲ್ಲ. ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರದಲ್ಲೇ ಮುಳುಗೇಳುವುದೇ ಇತಿಹಾಸ ಅಲ್ಲ. ಈಗ ಗತಿಸಿಹೋದ ಒಂದು ಘಳಿಗೆಯು ಇತಿಹಾಸದ ಸಮಾದಿಯಲ್ಲಿ ಸೇರಿಹೋಯ್ತು ಎಂತಲೇ ಅರ್ಥ. ಹಾಗಾಗಿ ಇಲ್ಲಿ ತೀರ ಇತ್ತೀಚಿನ ಚಳುವಳಿಗಳ ಇತಿಹಾಸವನ್ನೇ ಬಗೆದು, ತೆಗೆದು ಪೋಸ್ಟ್ ಮಾರ್ಟಮ್ ಮಾಡಿ ಸತ್ಯ ತೆಗೆಯುವ ಪ್ರಯತ್ನ ಮಾಡಿದ್ದೇನೆ. ಇದರಿಂದ ಏನಾದರೂ ಚಳುವಳಿಗಳ ನಮ್ಮ ಹುಡುಗರ ಒಬ್ಬಿಬ್ಬರ ಕಣ್ಣು ತೆರೆದರೂ ನನ್ನ ಪೋಸ್ಟ್ ಮಾರ್ಟಮ್ ಕೆಲಸ ಸಾರ್ಥಕ ಎಂದು ಭಾವಿಸುತ್ತೇನೆ.

ಹಿರಿಯರಾದ ಪುರುಷೋತ್ತಮ‌ ಬಿಳಿಮಲೆ ಅವರ ಮಗ, ವಿದ್ಯಾಭ್ಯಾಸ ಮತ್ತು ವೃತ್ತಿಯ ಕಾರಣಕ್ಕಾಗಿ, ವಿದೇಶಕ್ಕೆ ಹೋಗಿರುವ ವಿಷಯದ ಬಗ್ಗೆ ಬಿಳಿಮಲೆ ಅವರು Face bookನಲ್ಲಿ ಹಂಚಿಕೊಂಡಿದ್ದನ್ನು ನೋಡಿದೆ. ಬಿಳಿಮಲೆ ಅವರ ಪೋಸ್ಟಿಗೆ ಶುಭ ಹಾರೈಸಿ ತುಂಬಾ ಜನ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು. ನಾನೂ ಕೂಡಾ ಬಿಳಿಮಲೆ ಅವರ ಮಗನ ವಿಧ್ಯಾಬ್ಯಾಸ ಮತ್ತು ವೃತ್ತಿಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಅತ್ಯಂತ ಸಂತೋಷದಿಂದ ಮನಃಪೂರ್ವಕವಾಗಿ ಹಾರೈಸುತ್ತೇನೆ.

ಅದೇ ರೀತಿಯಾಗಿ ಹಿರಿಯ ದಲಿತ ಮುಖಂಡರು ಮತ್ತು ಸಾಹಿತಿಗಳು ಆದ ಸುಬ್ಬು ಹೊಲೆಯಾರ್ ಅವರ ಮಗನೂ ವಿದೇಶದ ವ್ಯಾಸಾಂಗಕ್ಕೆ ಹೋದ ಬಗ್ಗೆ ಸಹೋದರ ಹೆತ್ತೂರ್ ನಾಗರಾಜ್ ಅವರು ಹಂಚಿಕೊಂಡಿದ್ದರು. ಸುಬ್ಬು ಹೊಲೆಯಾರ್ ಅವರ ಮಗನಿಗೂ ಯಶಸ್ಸಾಗಲಿ ಎಂದು ಹಾರೈಸುತ್ತೇನೆ. ಮತ್ತು ಇದೇ ಸಮಯದಲ್ಲಿ ತಮ್ಮ ಗಮನಕ್ಕೆ ತರಬಯಸುವುದೇನೆಂದರೇ, ಕಳೆದ ವರ್ಷ ನನ್ನ ಅಣ್ಣನ‌ ಮಗಳೂ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋದಳು. ಮತ್ತು ಇನ್ನೆರಡು ವರ್ಷಗಳ ನಂತರ ನನ್ನ ಮಗ ಮತ್ತು ಮಗಳನ್ನೂ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳಿಸಲು ತಯಾರಿ ಮಾಡಿದ್ದೇನೆ.

ಈಗೇಕೆ ಈ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದೇನೆಂದರೇ, ಚಳುವಳಿಗಳಿಗಾಗಿ ತಮ್ಮ ವಿದ್ಯಾಭ್ಯಾಸ, ನೌಕರಿ, ತಂದೆ ತಾಯಿ ಮತ್ತು ವಯಕ್ತಿಕ ಜೀವನವನ್ನೂ ಕಳೆದುಕೊಂಡು ತಮ್ಮ‌ತಂದೆ ತಾಯಿಯರ ಕನಸುಗಳಿಗೆ ಕೊಳ್ಳಿ ಇಡುತ್ತಿರುವ ಮಕ್ಕಳು, ಸ್ವತಃ ಚಳುವಳಿಗಾರರಾಗಿರುವ ನಮ್ಮ ಮಕ್ಕಳನ್ನು, ನಾವು ಯಾವ ಹಾದಿಯಲ್ಲಿ ಬೆಳೆಸುತ್ತಿದ್ದೇವೆ ಮತ್ತು ನಮ್ಮ ಮಕ್ಕಳಾದರೂ ನಮ್ಮ ಯಾವ ಪ್ರಭಾವಕ್ಕೂ ಒಳಗಾಗದೆ, ಹೇಗೆ ತಮ್ಮ ಆಯ್ಕೆಯ ಬದುಕನ್ನು ಬದುಕಲು ಹಾದಿಯನ್ನು ಆಯ್ದುಕೊಳ್ಳುತ್ತಾರೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಹಾಗೂ ಚಳುವಳಿಗಾಗಿ ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಭಾಷಣ ಮತ್ತು ಬರಹಗಳನ್ನು ಕಕ್ಕುವವರ ಬಗ್ಗೆ ಎಚ್ಚರವಾಗಿರಬೇಕು ಎಂದು ಹೇಳಲು ಬಯಸುತ್ತೇನೆ.

ನನ್ನನ್ನು ಅರ್ಥ ಮಾಡಿಕೊಂಡಿರುವ ಎಲ್ಲರಿಗೂ ಗೊತ್ತಿರುವ ವಿಚಾರವೇನೆಂದರೇ, ಎಜುಕೇಶನ್ ಮತ್ತು ಕೆಲಸವನ್ನು ಬಿಟ್ಟು, ಯಾರಾದರು ಚಳುವಳಿಗೆ ಬರುವ ಹುಡುಗರನ್ನು ನಾನು ಯಾವ ಮುಲಾಜೂ ಇಲ್ಲದೇ, ನನ್ನ ಜೊತೆ ಸೇರಿಸಿಕೊಳ್ಳಲ್ಲ. ಮೊದಲು ನಿಮ್ಮ ಕಾಲ ಮೇಲೆ ನೀವು ನಿಂತು, ಆಮೇಲೆ ಬೇರೆಯವರ ಅಭಿವೃದ್ಧಿ ಮತ್ತು ರಕ್ಷಣೆಯ ಬಗ್ಗೆ ಮಾತಾಡುವ ಯೋಗ್ಯತೆಯನ್ನು ಸಂಪಾದಿಸಿಕೊಳ್ಳಿ ಎಂದೇ ಅತ್ಯಂತ ನಿಷ್ಟೂರವಾಗಿಯೇ ಓಡಿಸಿದ್ದೇನೆ. ಈ ವಿಚಾರವಾಗಿ KVSನ ಹುಡುಗರ ಜೊತೆ ಬಹಳವೇ ಜಗಳವಾಡಿದ್ದೇನೆ. ನನ್ನ ಪ್ರಾರ್ಥನೆ ಏನೆಂದರೇ, ಈ ಚಳುವಳಿಯ ಹುಡುಗರು ನನ್ನ ಮಾತನ್ನಂತೂ ಕೇಳಲ್ಲ. ಆದ್ದರಿಂದ ಹಿರಿಯರಾದ ಬಿಳಿಮಲೆಯವರು ದಯಮಾಡಿ ಆ ಹುಡುಗರಿಗೆ ಸರಿಯಾದ ತಿಳಿವಳಿಕೆಯನ್ನು ನೀಡಿ, ವಿದ್ಯೆ ಮತ್ತು ಉದ್ಯೋಗದ ಮಹತ್ವವನ್ನು ಅರ್ಥ ಮಾಡಿಸಿ, ಇಂಜಿನಿಯರಿಂಗ್, ಡಾಕ್ಟರೇಟ್, ಮತ್ತು ವಿವಿಧ ಡಿಗ್ರಿಗಳನ್ನು ಪಡೆದು ಉದ್ಯೋಗಗಳಿಗೆ ಹೋಗದೇ, ತಮ್ಮ ಸಂಪೂರ್ಣ ಸಮಯವನ್ನು ಚಳುವಳಿಗಳಿಗಾಗಿಯೇ ಮೀಸಲಿಟ್ಟು, ತಮ್ಮ ತಂದೆ ತಾಯಿಯರ ಹೊಟ್ಟೆಗೆ ಬೆಂಕಿ ಸುರಿದಿರುವ ಆ ಹುಡುಗರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಯಾಕೆಂದರೆ ನಿಮ್ಮ ಮಾತನ್ನೇ ಅವರು ಕೇಳುತ್ತಾರೆ ಎಂದು ನಾನು ತಮ್ಮಲ್ಲಿ ಅತ್ಯಂತ ವಿನಯದಿಂದ ಪ್ರಾರ್ಥಿಸುತ್ತೇನೆ.

ಹಿರಿಯರಾದ ದಿನೇಶ್ ಅಮಿನ್ಮಟ್ಟು ಅವರ ಜೊತೆ ಒಮ್ಮೆ ನನಗೂ ಅವರಿಗೂ ಮನಸ್ತಾಪದ ಜಗಳ ನಡೆದಿದ್ದಾಗ, ಅಮಿನ್ಮಟ್ಟು ಅವರ ಆಪ್ತ ಬಳಗದವರು ವಿನಾಕಾರಣ ನನ್ನ ಮಗನನ್ನು ಜಗಳದ ಮಧ್ಯೆ ಎಳೆದು ತಂದು ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನಲ್ಲಿ, ವರ್ಷಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡಿ ಮಗನನ್ನು ಓದಿಸುತ್ತೀರಲ್ಲಾ? ಇದೇನಾ ಅಂಬೇಡ್ಕರ್ ವಾದ? ನಿಮ್ಮದು ಡೋಂಗಿತನ ಎಂದು ನನ್ನ ವಿರುದ್ದ ತಿರುಗಿ ಬಿದ್ದಿದ್ದ, ಅನೇಕಾನೇಕ ಕಮ್ಯುನಿಸ್ಟ್ ಗೆಳೆಯರೂ ಇವತ್ತು ಬಿಳಿಮಲೆಯವರ ಮಗನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದು ನೋಡಿ, ಸದ್ಯ ಈಗಲಾದರೂ ಇವರಿಗೆ ಬುದ್ದಿ ಬಂತಲ್ಲ ಎಂದು ಸಮಾಧಾನವಾಯಿತು. ವಿಶೇಷ ಏನಂದ್ರೆ ಅವರೆಲ್ಲ ನನ್ನ ಮಗನ ಹೆಚ್ಚು ಖರ್ಚಿನ ವಿದ್ಯಾಭ್ಯಾಸದ ಬಗ್ಗೆ ಕುಹಕವಾಡುವಾಗ, ಹಿರಿಯರಾದ ಅಮಿನ್ನಟ್ಟು ಅವರ ಮಗಳು ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ತಮಾಷೆ ಏನೆಂದರೆ, ಪಾಪ ಈ ವಿಚಾರ ನನ್ನ ಟೀಕಾಕಾರಗೆ ಗೊತ್ತಿರಲಿಲ್ಲ ಎನ್ನುವುದು!

So, ಚಳುವಳಿಗಳಿಗಾಗಿ ತಮ್ಮ ಜೀವ, ಜೀವನ ಎರಡನ್ನೂ ಮುಡುಪಾಗಿಟ್ಟಿರುವ ನನ್ನ ಅತ್ಯಂತ ಅಕ್ಕರೆಯ ಹುಡುಗರಿಗೆ ನಾನು ಹೇಳುವುದೇನೆಂದರೇ, ಭಾಷಣ ಮತ್ತು ಬರಹಗಳಲ್ಲಿರುವ ವಂಚನೆಗಳಿಗೆ ಸೋಲಬೇಡಿ. ಬಾಬಾ ಸಾಹೇಬರು ತಮ್ಮ ಜೀವಿತದ ಕೊನೆಯವರೆಗೂ ದುಡಿಮೆಯನ್ನು ಮಾಡುತ್ತಿದ್ದರು ಮತ್ತು ಚಳುವಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದರು. ದಯಮಾಡಿ ಅರ್ಥ ಮಾಡಿಕೊಳ್ಳಿ. ಸ್ವಾತಂತ್ರ್ಯ ಹೋರಾಟಗಳ ಸಂದರ್ಭದಲ್ಲಿ ಗಾಂಧಿ ಮತ್ತು ಪರಿವಾರ ಅವತ್ತಿನ ವಿದ್ಯಾರ್ಥಿಗಳನ್ನು ಶಾಲಾ ಕಾಲೇಜುಗಳಿಂದ ಹೊರ ಬರುವಂತೆ ಕರೆ ಕೊಡುತ್ತಿದ್ದರು. ಗಾಂಧಿ ಮತ್ತು ಪರಿವಾರವನ್ನೂ ಟೀಕಿಸುತ್ತಿದ್ದ ಕ್ರಾಂತಿಕಾರಿಗಳೂ ಕೂಡ ವಿದ್ಯಾರ್ಥಿಗಳನ್ನು ಶಾಲಾ ಕಾಲೇಜುಗಳಿಂದ ಹೊರಬರಲು ಹೇಳುತ್ತಿದ್ದರು. ನೌಕರರು ತಮ್ಮ ನೌಕರಿಗಳನ್ನು ಬಿಟ್ಟು ಬರುವಂತೆ ಪ್ರೇರೇಪಿಸುತ್ತಿದ್ದರು. ಆದರೆ, ಬಾಬಾ ಸಾಹೇಬರು ಮಾತ್ರ ತಮ್ಮ ಸಮುದಾಯದ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು, ವಿದೇಶಗಳಿಗೆ ಹೋಗಿ ಕಲಿತು ಬರಬೇಕು, ಉತ್ತಮ‌ ನೌಕರಿಗಳನ್ನು ಹಿಡಿಯಬೇಕು, Go Back To your society, pay back to your society ಎನ್ನುವ ಮೂಲಕವೇ ನಿಜವಾದ ಚಳುವಳಿಯ ಸಾರ್ಥಕತೆಯನ್ನು ಕಾಣಬಯಸಿದ್ದರು.

ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ಯ ಇಲ್ಲದ ಸ್ವಾತಂತ್ರ್ಯ ಸ್ವಾತಂತ್ರ್ಯವೇ ಅಲ್ಲ. ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ಯ ಇಲ್ಲದ ಸ್ವಾತಂತ್ರ್ಯ ಸಾಮಾಜಿಕ ಸಮಾನತೆಯನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ. ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ಯ ಇಲ್ಲದ ಸ್ವಾತಂತ್ರ್ಯ ಗುಲಾಮಿತನಕ್ಕೆ ಎಡೆಮಾಡಿಕೊಡುತ್ತದೆ. ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಹೊಂದಿದ ಯಾರಾದರೂ ಸರಿ ಚಳುವಳಿಗಳನ್ನು ಕಟ್ಟುವ ಬಗ್ಗೆ ಮಾತಾಡಿದರೆ ಅವರಿಗೆ ಸ್ವಾಗತ‌. ಆದರೆ, ಚಳುವಳಿಗಳ ನಿಜವಾದ ಆರ್ಥವನ್ನು ಬಾಬಾ ಸಾಹೇಬರ ಕಣ್ಣಲ್ಲಿ ಓದಿ ಅರ್ಥ ಮಾಡಿಕೊಳ್ಳಿ.
ಧನ್ಯವಾದಗಳು
ಜೈ ಭೀಮ್.

4 thoughts on “ಪ್ರಗತಿಪರರ ಮಕ್ಕಳ ವಿದೇಶ ಪ್ರಯಾಣವೂ… ಚಳುವಳಿಯ ಹುಡುಗರೂ…”
  1. ನಿಮ್ಮ ಬರಹ ಓದಿ ತುಂಬಾ ಮನಸ್ಸಿಗೆ ತಟ್ಟಿದಂತೆ ಭಾಸವಾಯಿತು. ನಿಮ್ಮ ಒಂದೊಂದು ಅಕ್ಷರವನ್ನೂ ಚಾಚೂ ತಪ್ಪದೇ ಅಳವಡಿಸಿಕೊಂಡು ಬದುಕುವ ಪ್ರಯತ್ನ ಮಾಡುತ್ತೇನೆ. ನಾನು ನಿಮ್ಮ ಅಭಿಮಾನಿ, ನಾನು B.com, LL.B,LL.M ಹಾಗೂ MBA ಮಾಡುತ್ತಲೇ ನನ್ನ ಹೋರಾಟ ಜೀವನ ಮುಂದು ವರೆಸಿದ್ದೆ, ಈಗ ವಕೀಲನಾಗೀ, ಕಾನೂನು ಪ್ರಾಧ್ಯಾಪಕನಾಗೀ ಹಾಗೂ ಸರಕಾರಿ ಸಂಸ್ಥೆಗಳಿಗೆ ಕಾನೂನು ಸಲಹೆಗಾರ ನಾಗಿಯೂ ಹೋರಾಟದ ಜೀವನದಲ್ಲಿ ಇದ್ದೇನೆ, ನನ್ನ 3 ಹೆಣ್ಣು ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇನೆ. ಸದಾ ನಿಮ್ಮ ಜೊತೆಗೆ ಇದ್ದೇನೆ, ಉಳಿದ ಯುವಕರಿಗೂ ನಿಮ್ಮ ಈ ಸಂದೇಶವನ್ನು ಕೊಡುತ್ತೇನೆ. ನನ್ನ ಕೆಲವು ಲೇಖನ ಗಳು ಇವೆ, ನನ್ಗೂ ಬರೆಯುವ ಅವಕಾಶ ಕೊಡಿಸಿ ಎಂದು ನಿವೇದನೆ.

Leave a Reply

Your email address will not be published. Required fields are marked *