ಕಳೆದ ಎರಡು ವಾರಗಳಿಂದ ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬದವಲಾಣೆಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೆಡಿಎಸ್ ಬಿಜೆಪಿ ಮೈತ್ರಿಗೆ ದಳಪತಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇತ್ತ ಜೆಡಿಎಸ್ ನ ಪ್ರಮುಖ ನಾಯಕರು ಅತಿಯಾದ ಮುಜಗರಕ್ಕೆ ಒಳಗಾಗಿ, ತಮ್ಮ ವಿರೋಧಿ ಬಿಜೆಪಿ ಜೊತೆಗೆ ಮೈತ್ರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಪ್ರಮುಖ ನಾಯಕರು ಈಗಾಗಲೇ ರಾಜಿನಾಮೆಯನ್ನೂ ನೀಡಿದ್ದಾರೆ. ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ನಜ್ಮಾ ನಝೀರ್ ತಮ್ಮ ಮುಂದಿನ ನಡೆಯ ಬಗ್ಗೆ ಬಿಗ್ ಕನ್ನಡ ಜೊತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದಲ್ಲದೆ, ಪಕ್ಷದ ವರಿಷ್ಟರಿಗೆ 5 ಕಂಡೀಷನ್ಸ್‌ಗಳನ್ನೂ ಹಾಕಿರುವುದಾಗಿ ಹೇಳಿದ್ದಾರೆ. ಅವರ ಜತೆಗಿನ ಮಾತುಕತೆಗಳ ವಿವರ ಹೀಗಿದೆ.
- ಕೋಮು ಗಲಭೆಗಳಿಗೆ ಅವಕಾಶ ಕೊಡಬಾರದು
- ದಲಿತ ಮುಸ್ಲಿಂ ಸಮುದಾಯಗಳ ಪರ ಹಕ್ಕುಗಳ ಪರವಾಗಿ ಮುಂದೆಯು ಗಟ್ಟಿಯಾಗಿರಬೇಕು.
- RSS ಜೊತೆಗೆ ಯಾವುದೇ ರೀತಿಯ ಸಂಬಂಧ ಬೆಳೆಸಬಾರದು, ಅವರ ಜತೆಗೆ ವೇದಿಕೆಗಳನ್ನು ಹಂಚಿಕೊಳ್ಳಬಾರದು.
- ಬಿಜೆಪಿ ಜೊತೆ ಸಮ್ಮಿಶ್ರದ ನಂತರ ಯಾವುದೇ ಕಾರಣಕ್ಕೂ ಮೈನಾರಿಟಿಗಳ ಓಟು ಬೇಡ ಎನ್ನುವುದು ಆಗಬಾರದು
- ಅಲ್ಪಸಂಖ್ಯಾತ ಮತ್ತು ದಲಿತರ ವಿರುದ್ಧವಾಗಿ ಯಾರೆ ಮಾತನಾಡಿದರು ಅವರ ವಿರುದ್ಧ ನೇರ ಕ್ರಮಕ್ಕೆ ವರಿಷ್ಠರು ಸಿದ್ದರಿರಬೇಕು.
ಬಿಗ್ ಕನ್ನಡ: ಈ ಮೇಲಿರುವ ಕಂಡಿಷನ್ ಗಳು ಈಡೇರದಿದ್ದರೆ ನಿಮ್ಮ ಮುಂದಿನ ನಡೆಯೇನು?
ನಜ್ಮಾ: ಈಗಾಗಲೆ ಹಳೇ ಮೈಸೂರಿನ ಐದು ಜಿಲ್ಲೆಗಳ ಅಲ್ಪಸಂಖ್ಯಾತ ಘಟಕಗಳ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಈ ಐದು ಬೇಡಿಕೆಗಳು ಒಪ್ಪದೆ ಇದ್ದರೆ ನಾವು ನಮ್ಮ ಮುಂದಿನ ನಡೆಯನ್ನು ಕೈಗೊಳ್ಳುತ್ತೇವೆ. ನಮಗೊಂದು ಭಯವಿದೆ ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿ ಜೊತೆಗೆ ಸಂಪೂರ್ಣ ಮೈತ್ರಿಯಾದರೆ ಕೋಮುವಾದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆಗೆ ಸಂಪೂರ್ಣ ವಿಲೀನವಾದರೆ ರಾಜ್ಯ ದೊಡ್ಡ ನಷ್ಟ ಭರಿಸಬೇಕಾಗುತ್ತದೆ. ಏಕೆಂದರೆ ಹಳೆ ಮೈಸೂರು ಭಾಗದಲ್ಲಿ ಸೌಹಾರ್ದ ಮತ್ತು ಜ್ಯಾತ್ಯಾತೀತತೆಯನ್ನು ಬೆಳೆಸಿಕೊಂಡಿದ್ದೇವೆ. ಮತ್ತೇನಾದರೂ ಬಿಜೆಪಿಯೊಂದಿಗೆ ಸಂಪೂರ್ಣವಾಗಿ ವಿಲೀನವಾದರೆ ರಾಜ್ಯ ಕೋಮುವಾದಕ್ಕೆ ಬಲಿಯಾಗಿ ದೊಡ್ಡ ಕಷ್ಟ ಅನುಭವಿಸಲೇಬೇಕಾಗುತ್ತದೆ.
ಬಿಗ್ ಕನ್ನಡ: ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಬೇಸತ್ತು ಹೊರಗೆ ಬರುತ್ತಿರುವುದು ಕೇವಲ ಮುಸ್ಲಿಂ ಸಮುದಾಯದ ಪ್ರತಿನಿಧಿ/ಕಾರ್ಯಕರ್ತರೋ ಆಥವಾ ಅದರಲ್ಲಿ ಬೇರೆಯವರೂ ಇದ್ದಾರೋ?
ನಜ್ಮಾ : ಹೌದು, ಅಲ್ಪಸಂಖ್ಯಾತರೊಬ್ಬರೇ ಅಲ್ಲಾ, ಈಗಾಗಲೇ ಹಲವು ಶಾಸಕರು ಮತ್ತು ಜ್ಯಾತ್ಯಾತೀತವಾಗಿ ಯೋಚಿಸುವ ದಲಿತ, ಶೂದ್ರ ಸಮುದಾಯದ ನಮ್ಮವರೆಲ್ಲರು ಕೂಡ ದೊಡ್ಡ ಮಟ್ಟದಲ್ಲಿ ವಿರೋಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬಿಗ್ ಕನ್ನಡ: ರಾಜ್ಯ ಪ್ರಜ್ಞಾವಂತರು ಜನರು ಕಂಡಹಾಗೆ ಈ ವಿಲೀನದ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಕಾಣುತಿಲ್ಲ ಏಕೆ?
ನಜ್ಮಾ : ಈಗಾಗಲೇ ಪಕ್ಷದಲ್ಲಿರುವ ಅಲ್ಪಸಂಖ್ಯಾತರು ಖಾಲಿಯಾಗಿದ್ದಾರೆ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಇದ್ದುದ್ದರಿಂದ ಒಂದಷ್ಟು ಜ್ಯಾತ್ಯಾತೀತತೆ ಉಳಿದಿದೆ ಎನ್ನುಬಹುದು, ನಾನು ಕೂಡ ಕಳೆದ 3 ವರ್ಷಗಳಿಂದ ಎಷ್ಟೆಲ್ಲಾ ಕೆಲಸ ಮಾಡಿದ್ದೇವೆ. ಉಳಿಸಿಕೊಂಡಿದ್ದೇವೆ. ಇದೆಲ್ಲವೂ ಪಕ್ಷಕ್ಕಾಗಿ ಪಕ್ಷದ ಉಳಿವಿಗಾಗಿಗೆ ಎಂದಿದ್ದಾರೆ.
ಬಿಗ್ ಕನ್ನಡ: 2018ರಲ್ಲಿ ಬಿಎಸ್ಪಿ ಜತೆಗೆ ಮೈತ್ರಿಯಾದ ಕಾರಣದಿಂದ ಜೆಡಿಎಸ್ ಮಾತ್ರ ಲಾಭವಾಯಿತೇ ಹೊರತು, ಬಿಎಸ್ಪಿಗೆ ಲಾಭವಾಗಿಲ್ಲ. ಮೈತ್ರಿ ಮಾಡಿಕೊಂಡಿದ್ದಕ್ಕೆ 30 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಾಯಿತು ಆದರೆ ಈ ಬಾರಿ ಬಿಎಸ್ಪಿ ಜೊತೆಗೆ ಮೈತ್ರಿ ಇಲ್ಲದ ಕಾರಣ ಹೆಚ್ಚು ಸ್ಥಾನಗಳನ್ನು ಗೆಲ್ಲಲಾಗಲಿಲ್ಲ, ಹಾಗೆಯೇ ನೋಡಿದರೆ, ಈಗ ಬಿಜೆಪಿ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಲಾಭವಾಗುತ್ತದೆ ಅಲ್ಲವ?
ನಜ್ಮಾ: ಹೌದು, ಬಿಎಸ್‌ಪಿ ಮೈತ್ರಿಯಿಂದ ಜೆಡಿಎಸ್‌ಗೆ ಲಾಭವಾಗಿದೆ. ಮುಂದಿನ ಚುನಾವಣೆ ಹೀಗೆಯೇ ಇರುತ್ತದೆ ಅಂತ ಹೇಳಲು ಆಗುವುದಿಲ್ಲ. ಬಿಜೆಪಿಯ ಅತಿಯಾದ ಕೋಮುವಾದದ ಕಾರಣಕ್ಕೆ ಜನರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. 40% ಸರ್ಕಾರ ಭ್ರಷ್ಟಾಚಾರ, ಹಿಜಾಬ್, ಹಲಾಲ್ ಎಲ್ಲವೂ ಕೂಡ ಕಾರಣವಾಗಿದೆ. ಹೀಗಿದ್ದಾಗ ಜೆಡಿಎಸ್ ಮೈತ್ರಿಯಿಂದ ನೀವು ಹೇಳಿದಂತೆ ಬಿಜೆಪಿಗೇ ಲಾಭವಾಗಬಹುದೆಂದು ಕಾಣಿಸುತ್ತಿದೆ. ಯಾಕೆಂದರೆ, ಇಂಥ ಯಾವುದೇ ಭ್ರಷ್ಟಾಚಾರ, ಕೋಮುಗಲಭೆ ಮುಕ್ತ ಆಡಳಿತವನ್ನು ಜೆಡಿಎಸ್ ಪಕ್ಷ ಮಾತ್ರವೇ ಕೊಟ್ಟಿತ್ತು.
ಹಾಗೆಯೇ, ಕಡೆಯದಾಗಿ ನಿಮ್ಮ ವಾಹಿನಿ ಮೂಲಕ ಇನ್ನೊಂದು ಕಂಡೀಶನ್ ಹಾಕ್ತೀನಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಡ್ಡಾಯವಾಗಿ ಜೆಡಿಎಸ್‌ಗೆ ಟಿಕೆಟ್ ನೀಡಬೇಕು. ಯಾಕೆಂದರೆ, ಅಧಿಕ ವೋಟ್ ಶೇರಿಂಗ್ ಆಗೋದು ಈ ಭಾಗದಲ್ಲೇ, ಮತ್ತು ಜೆಡಿಎಸ್‌ಗೆ ಪ್ರಬಲವಾದ ಸ್ಥಳೀಯ ಜನಪ್ರತಿನಿಧಿಗಳು ಇರೋದೂ ಇಲ್ಲೆ.
ವರದಿ: ರಮೇಶ್ ಹಾಸನ, ಪ್ರತಿನಿಧಿ