ಹುಬ್ಬಳ್ಳಿ : ಮುಡಾ ನಿವೇಶನವನ್ನು ನೀಡುವುದರ ಮೂಲಕ ಅನುಮಾನಗಳನ್ನು ಹುಟ್ಟುಹಾಕಿ ತನ್ನ ಹಳ್ಳವನ್ನು ತಾನೇ ತೋಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ನೀಡಿರುವ ವಿಷಯದ ಬಗ್ಗೆ ಮಾತನಾಡಿದ ಅವರು,ಪ್ರಕರಣ ದಾಖಲಾದ ಕೂಡಲೇ ವಾಪಸ್ ನೀಡಿ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ತನಿಖೆ ನಡೆಸಿದ್ದರೆ ಮುಗಿದೋಗುತ್ತಿತ್ತು. ಆದರೆ ಅವರು ಹಾಗೆ ಮಾಡಲಿಲ್ಲವಾದ್ದರಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಗ್ರೀನ್ ಸಿಗ್ನಲ್ ಕೊಟ್ಟು, ಪ್ರಕರಣವೂ ದಾಖಲಾಗಿ ತನಿಖೆ ನಡೆದ ನಂತರ ವಾಪಸ್ ನೀಡಿದರೆ ಏನು ಪ್ರಯೋಜನ? ಈ ನಡೆಯಿಂದ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ವಾಪಸ್ ನೀಡುವುದರ ಮೂಲಕ ತಪ್ಪು ಮಾಡಿದ್ದೇವೆ ಎಂದು ತೋರಿಸಿಕೊಂಡಿದ್ದಾರೆ.
ಈ ಹಿಂದೆ ಯಡಿಯೂರಪ್ಪನ ಕೇಸಿನಲ್ಲೂ ಇದೇ ರೀತಿ ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಇದೇ ಸಿದ್ದರಾಮಯ್ಯ ಹೇಳಿದ ಮಾತು ಇಲ್ಲೂ ಅಪ್ಲೈ ಆಗುತ್ತಿದೆ. ಇದರಿಂದ ಸಾಬೀತಾಗಿರುವುದು ಏನೆಂದರೆ ಸೈಟ್ ಹಂಚಿಕೆಯು ಕಾನೂನುಬಾಹಿರವಾಗಿ ನಡೆದಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದ್ದು ಮತ್ತಷ್ಟು ಸಂಕಷ್ಟವನ್ನು ಬರಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.