ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಯುವಕರು ಮಹಿಳಾ ಸಮಾನತೆ ಕುರಿತು ಅರ್ಥ ಮಾಡಿಕೊಂಡು ಸ್ಪಂದಿಸಬೇಕಿದೆ. ಇಂದಿನ ಯುವತಿಯರು ಮದುವೆ ಮಾಡಿಕೊಳ್ಳುವ ಮುನ್ನ ತನ್ನ ಭಾವಿ ಸಂಗಾತಿ ಅಡುಗೆ ಕೆಲಸ ಬರುತ್ತದೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಮದುವೆಗೆ ಒಪ್ಪಿಗೆ ಸೂಚಿಸಬೇಕಿದೆ ಎಂದು ಹಿರಿಯ ಲೇಖಕಿ ಎಚ್.ಎಸ್.ಅನುಪಮ ಕರೆ ನೀಡಿದರು.
ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮುನ್ನಡೆ, ಸಾಧನಾ, ಸಮೃಧ್ಧಿ ಮತ್ತು ಗಾರ್ಮೆಂಟ್ ಲೇಬರ್ ಯೂನಿಯನ್ ಸಂಸ್ಥೆಗಳು ರವಿವಾರ ಹಮ್ಮಿಕೊಂಡಿದ್ದ “ದುಡಿಯುವ ಮಾನಿನಿಯರ ಮಹಾಸಂಗಮ”
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ನಿಜವಾದ ಅರ್ಥದಲ್ಲಿ ಹತ್ತು ತೋಳ್ಬಲ ಹೊಂದಿರುವ ಚಾಮುಂಡೇಶ್ವರಿಯರು. ಇವರು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಲೇ ಮನೆಯಲ್ಲಿ ಅಡುಗೆ ಕೆಲಸ, ಮಕ್ಕಳನ್ನು ಸಂಭಾಳಿಸುವ ಕೆಲಸ ಹೀಗೆ ಹಲವಾರು ಜವಾಬ್ಧಾರಿಗಳನ್ನು ನಿಭಾಯಿಸಬೇಕಾಗಿದೆ. ಭಾರತದ ಪುರುಷಪತಿಯರು ಮೊದಲಿನಿಂದಲೂ ಪರಾವಲಂಭಿ ಜೀವಿಗಳಾಗಿ ಬದಕುತ್ತಿದ್ದಾರೆ. ಕಚೇರಿ ಕೆಲಸ ಮುಗಿಸಿಕೊಂಡು ಬಂದು ಹೆಂಡತಿಗೆ ಇರುಳ್ಳಿ ಹೆಚ್ಚಲು ಸಹ ಸಹಾಯ ಮಾಡುವುದಿಲ್ಲ. ಇಂದಿನ ಯುವತಿಯರು ಮದುವೆಯಾಗುವ ಮುನ್ನ, ಅಥವಾ ಪ್ರೀತಿ ಮಾಡುವ ಮುನ್ನ ತನ್ನ ಭಾವಿ ಸಂಗಾತಿಗೆ ಅಡುಗೆ ಮಾಡಲು ಬರುತ್ತದೆಯೇ ಅಥವಾ ಕಲಿಯಲು ಆಸಕ್ತಿಯಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದರು.
ಈ ಹಿಂದೆ ಮಹಿಳೆಯರನ್ನು ನಾಲ್ಕು ಗೋಡೆಯ ಅಡುಗೆಮನೆಯಲ್ಲಿ ಬಂಧಿಸಿಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಹಿಳೆಯೂ ಕೂಡ ಮನೆಯಿಂದ ಹೊರಗೆ ಹೋಗಿ ದುಡಿಯುತ್ತಿದ್ದಾಳೆ. ಆದರೆ, ಯಾವ ಕ್ಷೇತ್ರದಲ್ಲಿ ಮಹಿಳೆಯನ್ನು ದುಡಿಸಿಕೊಳ್ಳಲಾಗುತ್ತದೆ ಎಂಬುದು ಬಹಳ ಮುಖ್ಯ. ಕಡಿಮೆ ವೇತನ ಸಿಗುವ ಸೇವಾ ಕ್ಷೇತ್ರದಲ್ಲಿ ಶೇ.56 ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ನಿರ್ಧಾರ ತೆಗೆದುಕೊಳ್ಳುವ ಮ್ಯಾನೇಜಮೆಂಟ್ ಕ್ಷೇತ್ರದಲ್ಲಿ ಕೇವಲ 14 ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ನರ್ಸಿಂಗ್ ಕ್ಷೇತ್ರದಲ್ಲಿ ಶೇ. 99ರಷ್ಟು ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರರ್ತೆ, ಬಿಸಿಯೂಟ ಡಾಟಾ ಆಪರೇಟರ್, ಇಂಥ ಕಡಿಮೆ ವೇತನ ಇರುವ ಕೆಲಸಗಳನ್ನು ಮಾತ್ರ ಮಹಿಳೆಯರು ಮಾಡುವ ಪರಿಸ್ಥಿತಿಯಿದೆ. ಉನ್ನತ ಹುದ್ದೆಗಳಲ್ಲಿ ಪರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರ್ಮಿಕ ಕ್ಷೇತ್ರದಲ್ಲಿ ಇಂದು ಮಹಿಳೆಯರ ಉದ್ಯೋಗೀಕರಣ ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ರಾಜಕಾರಣಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ದುಡಿಯುವ ಕಾರ್ಮಿಕರಿಗೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದೇ ಉದ್ದೇಶವಾಗಬಾರದು. ದುಡಿಯುವುದರ ಜೊತೆಗೆ ವರ್ತಮಾನದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಶ್ನೆ ಮಾಡುವುದನ್ನು ಕಲಿಯಬೇಕು. ದುಡಿಯುವ ವರ್ಗ ವಿಚಾರವಂತರಾದಾಗ ಮಾತ್ರ ಈ ದೇಶದಲ್ಲಿ ಬದಲಾವಣೆ ಸಾಧ್ಯ ಎಂದರು.
ಇಂದಿನ ಯಾವ ರಾಜಕಾರಣಿಗಳು, ಯಾವ ಪಕ್ಷಗಳು ಕೂಡ, ಗಾರ್ಮೆಂಟ್ಸ್ ಮಹಿಳೆಯರ, ಕಾರ್ಮಿಕರ, ರೈತರ ಸಂಕಟಗಳನ್ನು ಮತ್ತು ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಸಹನೆಯನ್ನು ಹೊಂದಿಲ್ಲ. ರಾಜಕಾರಣ ಎನ್ನುವುದು ಇವತ್ತು ವ್ಯಾಪಾರವಾಗಿದೆ. ಹಾಗಾಗಿ ನಿಮ್ಮ ಹಕ್ಕುಗಳ ಬಗ್ಗೆ ನೀವೇ ಧ್ವನಿ ಎತ್ತಬೇಕಿದೆ ಎಂದರು.
ಈ ಹಿಂದೆ ಹಳ್ಳಿಗಳಲ್ಲಿ ಟೇಲರ್‌ಗಳೇ ನಿಜವಾದ ಗಾರ್ಮೆಂಟ್ಸ್ ನಡೆಸುತ್ತಿದ್ದರು. ಆದರೆ ಅವರು ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ವರ್ಕರ್ಸ್ ಆಗಿರಲಿಲ್ಲ. ಸ್ವಯಂ ಉದ್ಯೋಗಿಗಳಾಗಿದ್ದರು. ಯಾವಾಗ ಗಾರ್ಮೆಂಟ್ಸ್ ಉದ್ಯಮವಾಗಿ ಬೆಳೆಯಿತೋ ಮತ್ತು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರಪ್ತು ಆಗುವುದು ಹೆಚ್ಚಾಯಿತೋ ಆಗ ಗಾರ್ಮೆಂಟ್ಸ್ ಉದ್ಯಮದಲ್ಲಿ ಕಾರ್ಮಿಕರನ್ನು ಶೋಷಣೆ ಮಾಡುವ ಪ್ರಕರಣಗಳು ಹೆಚ್ಚಾದವು. ಬಟ್ಟೆ ಹೊಲಿಯುವವನಿಗಿಂತ ಮತ್ತು ಬಟ್ಟೆ ತೊಡುವವರಿಗಿಂತ ಬಟ್ಟೆ ಮಾರಾಟ ಮಾಡುವ ಮಧ್ಯವರ್ತಿಗಳಿಂದ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದರು.
ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರನ್ನು ಯಂತ್ರಗಳಂತೆ ಬಳಸಿಕೊಳ್ಳಲಾಗುತ್ತಿದೆ. ಯಾವ ದೇಶದಲ್ಲಿ ಬಡತನವಿದೆಯೋ ಅಲ್ಲೆಲ್ಲ ಗಾರ್ಮೆಂಟ್ಸ್ ಉದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳು ತೆರೆಯುತ್ತಿವೆ. ಬಾಂಗ್ಲಾ ಮತ್ತು ಭಾರತದಲ್ಲಿ ಗಾರ್ಮೆಂಟ್ಸ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದರು.
ಜನವಾದಿ ಮಹಿಳಾ ಸಂಘಟನೆಯ ವಿಮಲಾ ಮಾತನಾಡಿ, ಇತ್ತೀಚೆಗೆ ಸಂಸತ್ತಿನಲ್ಲಿ ದಿನದ 12 ಗಂಟೆ ಕೆಲಸ ಮಾಡುವ ಹೊಸ ಕಾರ್ಮಿಕ ನೀತಿ ಅನುಮೋದನೆ ನೀಡಲಾಗಿದೆ. ಇದನ್ನು ಎಲ್ಲ ಮಹಿಳೆಯರು ವಿರೋಧಿಸಬೇಕಿದೆ. ಗಾರ್ಮೆಂಟ್ಸ್ ಮಹಿಳೆಯರು ದಿನಪೂರ್ತಿ ಒಂಡೆ ಕಡೆ ಕುಳಿತು ಕೆಲಸ ಮಾಡುವುದರಿಂದ ಅವರಿಗೆ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಅವಗಳ ಕಡೆ ಲಕ್ಷ್ಯ ಕೊಡಬೇಕಿದೆ ಎಂದರು
ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಮುಖ್ಯಸ್ಥರಾದ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಮುನ್ನಡೆ ಸಂಸ್ಥೆಯ ಯಶೋಧಾ, ಸಮೃದ್ಧಿ ಸಂಸ್ಥೆಯ ಶಿವರಾಜೆಗೌಡ ಮತ್ತು ಸಾಧನಾ ಸಂಸ್ಥೆಯ ಗಾಯತ್ರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಳೆದ 25 ವರ್ಷಗಳಿಂದ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಹಿರಿಯ ಕಾರ್ಮಿಕರಾದ ಚಂದ್ರಕಲಾ, ಯಶೋದಮ್ಮ, ಭಾಗ್ಯಮ್ಮ ಮತ್ತು ಪದ್ಮಾ ಅವರಿಗೆ ಸನ್ಮಾನ ಮಾಡಲಾಯಿತು. ಪರಿವರ್ತನ ತಂಡದ ಪೂರ್ಣಿಮಾ ಮತ್ತಿತರರು ಅರಿವಿನ ಹಾಡು ಕಾರ್ಯಕ್ರಮವನ್ನು ನಡೆಸಿಕೊಟ್ಟರು.