ರೇಖಾ ಹೊಸಹಳ್ಳಿಯವರ ಈ ಕೋಟ್’ಗಳಲ್ಲಿ ಪ್ರೇಮದ ಸವಾಲಿನ ಹಾದಿಯ ಪಯಣದಲ್ಲಿ ಕಂಡುಕೊಂಡ ಹೊಳಹುಗಳು, ಪ್ರೇಮಿಸುವ ಬಗೆ, ಪ್ರೇಮದ ದಾರಿಯಲ್ಲಿ ಬೇಕಿರುವ ಎಚ್ಚರ, ವಹಿಸಬೇಕಾದ ಎಚ್ಚರಿಕೆ ಇಲ್ಲಿವೆ.
ಅಲ್ಲಿ ಹಾದುಹೋಗುವಾಗ ಆಗುವ ಬೆಳಕು ಕತ್ತಲೆಯ ಕುರಿತು ಒಳನೋಟವಿದೆ, ಆಧ್ಯಾತ್ಮದ ಸ್ಪರ್ಶವಿದೆ, ನಿರಾಶೆಯ, ಹತಾಶೆಯಂಥ ಸ್ಥಿತಿಯಲ್ಲೂ ಪ್ರೇಮದ ಜಾದೂ ಕುರಿತಾದ ಮಾತಿದೆ, ಪ್ರೇಮಕ್ಕೆ ಕ್ರಮಿಸಬೇಕಾದ ಹಾದಿ, ಅಗತ್ಯ ಮನಸ್ಥಿತಿ, ಪಡೆವ ಅರಿವುಗಳ ಕುರಿತಾದ ಚಿಂತನೆ ಇಲ್ಲಿದೆ. ರೂಢಿಗತ ಹಾದಿಯ ಪಯಣವೇ ಹೆಚ್ಚಿರುವಲ್ಲಿ ಇದೊಂದು ಹೊಸ ಹೊಳಹಿನ ಹೊಸ ಹಾದಿ ಎನಿಸುವುದು, ಕತ್ತಲ ಪಯಣದಲ್ಲಿ ಮುನ್ನಡೆಸುವ ಶಕ್ತಿಯ ವಿಚಾರ ಇಲ್ಲಿಹುದು, ಪ್ರೇಮಹಾದಿಯ ನಕ್ಷೆ ಇಲ್ಲಿನ ಬರಹಗಳಲ್ಲಿಹುದು, ಚುಕ್ಕೆಗಳ ಸೇರಿಸಿ ಚಿತ್ತಾರ ಮೂಡಿಸುವುದು ಪ್ರೇಮ ಪಯಣಿಗನ ಕೈಲಿಹುದು.
ಪ್ರೇಮ ಮತ್ತು ನಗು,
ನಿಮ್ಮ ಚೇತನವನ್ನು
ಮೇಲೆತ್ತುವ ಎರಡು ರೆಕ್ಕೆಗಳು
ಪ್ರೀತಿಯನ್ನು ಬಚ್ಚಿಟ್ಟುಕೊಳ್ಳುವವರು,
ಪ್ರೀತಿಯ ನಿರೀಕ್ಷೆ ಮಾಡಬಾರದು.
ಅರ್ಹತೆ ಇರಲಿ, ಬಿಡಲಿ
ಪ್ರೀತಿ ಸುಲಭವಾಗಿ ದಕ್ಕಿಬಿಡುತ್ತದೆ ಹಲವರಿಗೆ!
ಉಳಿಸಿಕೊಳ್ಳುವವರು ಮಾತ್ರ
ಯೋಗ್ಯತೆ ಇರುವವರೇ!!
ಪ್ರೀತಿಯ ಕೊರತೆಗಿಂತ,
ಅತಿ ಪ್ರೀತಿ
ವೈಮನಸ್ಯಕ್ಕೆ ಹೆಚ್ಚು ಕಾರಣವಾಗುವುದು.
ನರಕದಲ್ಲಿ ಬಚ್ಚಿಟ್ಟು ಕೊಂಡರೂ
ಕತ್ತಲೆಯಲ್ಲಿ ಕಣ್ಮರೆಯಾಗಿದ್ದರೂ
ಪ್ರೇಮದ ಬೆಳಕು
ಶುದ್ಧ ಹೃದಯವ ತಲುಪಿಯೇ ತೀರುತ್ತದೆ!
ನೋವಿನ ನೆರಳಲ್ಲಿಯೂ ಪ್ರೇಮವಿರುತ್ತದೆ,
ಎಂಟೆದೆಯವರಿಗೆ ಮಾತ್ರ ಪ್ರೇಮ ದಕ್ಕುತ್ತದೆ!
ನಿಷ್ಕಲ್ಮಶ ಪ್ರೇಮ,
ಹೃದಯಭೂಮಿಯ
ಕಣಕಣವನ್ನೂ ಆರ್ದ್ರಗೊಳಿಸುತ್ತದೆ,
ಬಿಸಿಲ ಬೇಗೆಯಲ್ಲೂ ತಂಪಾಗಿರಿಸುತ್ತದೆ.
ನಾವೂ,
ಒಬ್ಬರೊಡನೊಬ್ಬರೂ,
ಮಗುವಾಗದಿದ್ದರೆ,
ಮುದಿಯಾಗುತ್ತಾ
ಹೋಗುತ್ತೇವೆ.
ಎಷ್ಟು ಆಳವಾಗಿ ಹೃದಯ ತಟ್ಟಲಾಗುವುದೋ
ಅಷ್ಟು ಆಳದ ಪ್ರೇಮ ದಕ್ಕುವುದು
ಪದೇ ಪದೇ ಅನರ್ಹರನ್ನು ನಂಬಿದಲ್ಲಿ, ಕೊನೆಗೆ ನಮ್ಮ ಮೇಲಿನ ವಿಶ್ವಾಸವೂ ಮಾಯವಾಗುತ್ತದೆ
ಪ್ರೇಮ ಮಿಂಚಿ ಮಾಯವಾಗಿದ್ದು
ಭರವಸೆಯ ದಾರಿ ತೋರಲೆಂದೋ?
ಅಸ್ತಿತ್ವದಲ್ಲಿರಲು ಬುದ್ಧಿಯೇ ಸಾಕು
ಪ್ರವರ್ಧಿಸಲು ಹೃದಯವೇ ಬೇಕು
ಹೃದಯ ಶಾಸನ ವಿಧಿಸಿದೆ ಎಚ್ಚರಿಕೆ!
ಮೆದುಳಿನ ಅತಿಯಾದ ಬಳಕೆ, ದುರ್ಬಳಕೆ
ಹೃದಯಕ್ಕೆ ಹಾನಿಕರ!
ಪದಕ್ಕಿಳಿದ ಪ್ರೇಮಕೆ ಶಾಪವಿದೆ ಈ ಜಗದಲಿ,
ಬೇಕೆಂದರೆ ನನ್ನ ಓದಿ ಕೋ!
ಯಾರಿಗೂ ಸಿಕ್ಕದ
ಮುತ್ತು, ಪ್ರೀತಿ, ಅಪ್ಪುಗೆ, ಮಾತುಗಳು ದಕ್ಕುತ್ತವೆಂದರೆ
ಮರಳುಗಾಡಿನ ಮುಳ್ಳಿನ ಹಾದಿಯಲ್ಲಿ ದೊರೆತ ನಿಧಿಯಾಗಿರುತ್ತವಷ್ಟೇ.
ಕತ್ತಲ ಸಾಮ್ರಾಜ್ಯದಲ್ಲಿ
ಹೃದಯದ ದನಿಯೇ ದಾರಿದೀಪ
ಕತ್ತಲು ಕವಿದಾಗ
ಹೃದಯ ಪಥದ ಹಳಿ ತಪ್ಪಬೇಡ
ಹೃದಯದ ದಾರಿಗೆ
ಪ್ರೇಮವೇ ಬೆಳಕು;
ದ್ವೇಷವೇ ಕತ್ತಲು
ಬಾಗಿಲು ತೆರೆಯದೆ ಬೆಳಕಿಲ್ಲ
ಹೃದಯದ ಬಾಗಿಲು ತೆರೆಯದೆ ಪ್ರೇಮದ ಬೆಳಕಿಲ್ಲ
ಎದೆಯ ಹಾಡ ಹಾಡದೆ ಬದುಕಿಲ್ಲ
ಹಾಡ ಹಾಡದೆ ಪ್ರೇಮದ ಬೆಳಕಿಲ್ಲ
ನಾವಿಷ್ಟ ಪಡುವವರ ಮೋಹದಲ್ಲಿ ಮರುಳಾದರೆ,
ನಮ್ಮನ್ನಿಷ್ಟ ಪಡುವವರ ಮರೆಯುತ್ತೇವೆ,
ನಮ್ಮನ್ನೇ ನೆಚ್ಚಿದವರ ಅಗತ್ಯ, ಕಷ್ಟಗಳಿಗೆ ಕುರುಡಾಗುತ್ತೇವೆ!
ಖುಷಿಯಾಗಲೀ, ಪ್ರೀತಿಯಾಗಲೀ,
ನಮ್ಮೊಳಗಿದ್ದರೇನೇ ಇನ್ನೊಬ್ಬರಿಗೆ ಹಂಚಲು ಸಾಧ್ಯ!
ಮನಸೂ, ಹೃದಯ ತೆರೆದಿದ್ದರೇನೇ
ಇತರರ ಪ್ರೀತಿ ಕಾಣಲು ಸಾಧ್ಯ,
ಸಂತಸ ಅನುಭವಿಸಲು ಸಾಧ್ಯ!
ಪ್ರೇಮಿಸುವುದೆಂದರೆ ಬದುಕುವುದು,
ಬದುಕುವುದೆಂದರೆ ಪ್ರೇಮಿಸುವುದು!
ಪ್ರೇಮಿಸುವುದೇ ನಿಜ ಧರ್ಮವು.
ಪ್ರೇಮ ಹೃದಯದ ಕಣ್ಣು
ತೆರೆಯದಿದ್ದರೆ ಜೀವನ ಕುರುಡು
ಪ್ರೇಮದ ಹಾದಿ ತಪ್ಪಿದ ಹೃದಯ
ದ್ವೇಷದ ದಾರಿ ಹಿಡಿಯುತ್ತದೆ
ಪ್ರೇಮದ ದೀಪ ಬೆಳಗುವವರೆಗೂ
ಹೃದಯ ಅಂಧಕಾರದಲ್ಲಿ ಮುಳುಗುತ್ತದೆ
ಜೀವನ ಕುರುಡ ನಡೆವ ಹಾದಿಯಾಗುತ್ತದೆ
ಪ್ರೇಮ ಬದುಕು,
ದ್ವೇಷ ಸಾವು!
ವ್ಯಾಮೋಹ ಕಣ್ಣನ್ನು
ಕುರುಡಾಗಿಸುತ್ತದೆ,
ಪ್ರೀತಿ ಕಣ್ಣು ತೆರೆಸುತ್ತದೆ
ಪ್ರೇಮದ ಜ್ಯೋತಿ
ಹೊತ್ತಿಕೊಂಡಾಗ ಹೃದಯದಲಿ
ದಿಟ ದೀಪಾವಳಿ;
ಅಂತರಂಗದ ಅಂಧಕಾರಕೆ ಪ್ರೇಮದ ಬೆಳಕೇ ಸಲುವಳಿ
ಪ್ರೇಮಕ್ಕಿಂತ ಗುರುವಿಲ್ಲ
ಪ್ರೇಮಿಗಿಂತ ಶಿಷ್ಯನಿಲ್ಲ
ಪ್ರೇಮಕ್ಕಿಂತ ಗುರಿಯಿಲ್ಲ
ಪ್ರೇಮಕ್ಕಿಂತ ದಾರಿಯಿಲ್ಲ
ಪ್ರೇಮಿಸದೇ ಬದುಕಿಲ್ಲ
ಪ್ರೇಮಿಸದೇ ಮೋಕ್ಷವಿಲ್ಲ!
ಪ್ರೀತಿಯ ಅಮೃತ ಸವಿಯಲು,
ಪ್ರೀತಿ ಎಂಬ ನಿಧಿ ಪಡೆಯಲು,
ಪ್ರೀತಿಯ ಹಸಿವು ನೀಗಲು,
ಪ್ರೀತಿಸುವುದೊಂದೇ ದಾರಿಯು!
ಹೃದಯದಲ್ಲಿರುವವರೊಂದಿಗೆ
ಹೆಚ್ಚು ಹೊತ್ತು ಮುನಿಸಿಕೊಳ್ಳಲಾಗುವುದಿಲ್ಲ;
ಹೃದಯದೊಂದಿಗೆ ಹೃದಯ
ಯುದ್ಧ ಮಾಡಲಾಗುವುದಿಲ್ಲ.
ತನ್ನ ಅರಿಯದವನು
ಯಾರನ್ನೂ ಅರಿಯಲಾರ
ತನ್ನ ಎದುರಿಸದವನು
ಯಾರನ್ನೂ ಎದುರಿಸಲಾರ
ತನ್ನ ಸಹಿಸಲು ಬಾರದವನು
ಯಾರನ್ನೂ ಸೈರಿಸಲಾರ
ತನ್ನ ಪ್ರೀತಿಸಲಾಗದವನು
ಯಾರನ್ನೂ ಪ್ರೀತಿಸಲಾರ
ಪ್ರೇಮಿಸುವುದೇ ಜೀವಿಸುವ ಪರಿ
ಪ್ರೇಮ ಜೀವನದ ಗುರಿ
ಎಲ್ಲರಲ್ಲೂ ನೀ ಹುಡುಕುತ್ತಿರುವುದು ನಿನ್ನನ್ನೇ!
ಪ್ರೇಮದ ನಿಜ ಸ್ವರೂಪವನ್ನೇ!!