ಭಾರತದ ದರಿದ್ರ ಜಾತಿ ವ್ಯವಸ್ಥೆಯ ಪ್ರಭಾವ ಹೇಗಿದೆಯೆಂದರೆ, ಯಾರಾದರೂ ದಲಿತ ತನಗಾದ ಸಂಕಟವನ್ನು ನೇರವಾಗಿ ಹೇಳಿಕೊಳ್ಳಲು, ಅದನ್ನು ಅಕ್ಷರರೂಪದಲ್ಲಿ ದಾಖಲಿಸಲು ಆಗಲಾರದಂಥಹ ಉಸಿರುಗಟ್ಟಿಸುವ ವಾತಾವರಣವನ್ನು ಸುಲಭವಾಗಿ ಸೃಷ್ಟಿಸಲಾಗಿದೆ. ದಲಿತರು ತನಗಾದ ಸಂಕಟವನ್ನು, ದೌರ್ಜನ್ಯವನ್ನು, ಹಿಂಸೆ, ಮಾನಸಿಕ ಒತ್ತಡವನ್ನು ಸಹಿಸಿಕೊಂಡು, ʻತನ್ನನ್ನು ಅವಮಾನಿಸಿದ, ಹಿಂಸಿಸಿದ, ದೌರ್ಜನ್ಯ ಮಾಡಿದ, ಮಾನಸಿಕ ಒತ್ತಡ ಹಾಕಿದ ಮೃಗಗಳ ಕೃತ್ಯವನ್ನು ಕ್ಷಮಿಸಿ, ಮನುಷ್ಯರಾಗಬೇಕಾದ ದರ್ದು, ಒತ್ತಡ, ಮೃಗಗಳು ಒಡ್ಡುವ ಬೆದರಿಕೆಯನ್ನು ಸಹಿಸಿಕೊಳ್ಳಬೇಕಾದ ಟಾಸ್ಕ್ ಎದುರಾಗಿದೆ.
ಮೊನ್ನೆ ಪ್ರಕಾಶ್ ಮಂಟೇದ ಅವರು ತಮ್ಮ ಅಂಕಣ ʻಅರಿವೇ ಕಂಡಾಯʼದ ಮೂಲಕ ಆತ್ಮಚರಿತ್ಮಾತಕ ಲೇಖನ ʻಅಪ್ಪನ ನಿಮ್ಮ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂʼ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದರು. ಆ ಲೇಖನ ಸ್ಪಷ್ಟವಾಗಿ ಪ್ರಕಾಶ್ ಮಂಟೇದ ತನ್ನ ಬಾಲ್ಯದಲ್ಲಿ ಅನುಭವಿಸಿದ ಸಂಕಟ, ಅಪಮಾನ, ಹಿಂಸೆಯನ್ನು ಕುರಿತು, ತನ್ನ ಊರಿನಲ್ಲಿ ಜರುಗಿದ ಘಟನೆಗಳ ಚಿತ್ರಣವಷ್ಟೇ ಇದ್ದದ್ದು. ಅದರಲ್ಲಿ ಪರಿಶಿಷ್ಟ ಪಂಗಡದಲ್ಲೇ ಗುರುತಿಸಿಕೊಳ್ಳುವ, ಅಸ್ಪೃಷ್ಯರಲ್ಲ ಜಾತಿಯಾದರೂ ಅಸ್ಪೃಷ್ಯ ಜಾತಿಯಲ್ಲಿ ಗುರುತಿಸಿಕೊಂಡಿರುವ, ಇಂದಿಗೂ ಆ ಪಟ್ಟಿಯ ಸವಲತ್ತುಗಳ ಗರಿಷ್ಟ ಲಾಭಗಳನ್ನು ಪಡೆದು, ಬಲಿಷ್ಟವಾಗಿರುವ ಅಂದಿನ ಭೋವಿ ಜನಾಂಗವು ಹೊಲೆಯ ಸಮುದಾಯದ ಮೇಲೆ ಎಸಗಿರುವ ದೌರ್ಜನ್ಯಗಳನ್ನು ಪ್ರಕಾಶ್ ಮಂಟೇದ ಅವರು ಬಹಳಷ್ಟು ಕನಿಕರ, ಕಕ್ಕುಲಾತಿ ಮತ್ತು ಭೋವಿ ಜನಾಂಗವು ಅನುಭವಿಸುತ್ತಿರುವ ಕೃತಕ ಮತ್ತು ಭ್ರಮಾತ್ಮಕ ಮೇಲರಿಮೆಯ ಸ್ಥಿತಿಯನ್ನು ಟೀಕಿಸಿ, ಅದರ ಮುಖೇನ ಅವರು ಸಹಮಾನವರ ಬಗ್ಗೆ ಎಸಗುತ್ತಿರುವ ಜಾತಿ ಕೇಂದ್ರಿತ ಕೃತ್ಯಗಳನ್ನು ಖಂಡಿಸಿ ತೀರಾತೀ ತೀರಾ ಸರಳ ಲೇಖನ ಬರೆದರು. ಅದರ ಲಿಂಕ್ ಇಲ್ಲಿದೆ. ಅದನ್ನು ಓದಿದ ಮೇಲೆ ಈ ಲೇಖನ ಮುಂದುವರೆಸಿ. ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ ಮತ್ತು ಭೋವಿಗಳ ಅಂದಿನ ಅಟ್ಟಹಾಸವೂ!
ಓದಿದಿರಲ್ಲವ? ಈಗ ಹೇಳಿ, ಈ ಲೇಖನದಲ್ಲಿ ಇಡೀ ಭೋವಿ ಸಮುದಾಯವನ್ನು ಅವಹೇಳನ ಮಾಡಿದ ಒಂದೇ ಒಂದಾದರೂ ಪದ ಆಥವಾ ಸಾಲು ಇದೆಯ? ಪ್ರಕಾಶ್ ಮಂಟೇದ ತನ್ನ ಬಾಲ್ಯವನ್ನು, ತನ್ನ ಬಾಲ್ಯದಲ್ಲಿ ಅನುಭವಿಸಿದ ಜಾತಿ ಹಿಂಸೆಯನ್ನು, ಆ ಮೂಲಕ ತನ್ನ ಹಳ್ಳಿಯ ಹೊಲೆಯ ಜನಾಂಗದ ಹೀನಾಯ ಸ್ಥಿತಿಯನ್ನು ಸ್ಪಷ್ಟವಾಗಿ, ಸಂಕಟದ ಭಾಷೆಯಲ್ಲಿ, ಸೌಜನ್ಯದ ಆಕ್ರೋಶದ ದಾಟಿಯಲ್ಲಿ ದಾಖಲಿಸಿ ಬರೆದಿದ್ದಾರೆ. ಅಲ್ಲವೇ? ಜಾತಿ ಸಂಕಟಕ್ಕೆ, ಜಾತಿ ದೌರ್ಜನ್ಯಕ್ಕೆ, ಜಾತಿ ಹಿಂಸೆ ಮೊದಲಾದ ಸಾಮಾಜಿಕ ಅವಮಾನಗಳಿಗೆ ಈಡಾದ ವ್ಯಕ್ತಿ ತನ್ನ ಮೇಲಾದ ಸಂಕಟ, ದೌರ್ಜನ್ಯ, ಹಿಂಸೆಯನ್ನು ದಾಖಲಿಸುವುದು ಭಾರತೀಯ ದಂಡ ಸಂಹಿತೆಯ ಯಾವ ಕಲಮ್ಮಿನಡಿ ತಪ್ಪಾಗುತ್ತದೆ?
ಆದರೂ ರಾಮನಗರ ಗ್ರಾಮಾಂತರ ಠಾಣೆಯಲ್ಲಿ IPC 1860 (U/s-505,153A)ರ ಅನ್ವಯ ಕೇಸ್ ದಾಖಲಾಗಿ, ಎಫ್‌ಐಆರ್ ಮೂಲಕ ಲೇಖಕನನ್ನು ಠಾಣೆಗೆ ಹಾಜರಾಗಿ, ಹೇಳಿಕೆ ನೀಡಲು ನೋಟೀಸ್ ಜಾರಿಯಾಗುತ್ತದೆ. ಅಂದರೆ, ಇಲ್ಲಿನ ವ್ಯವಸ್ಥೆ ಯಾರಪರ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡುವುದು ಸಹಜ ಅಲ್ಲವೇ? ಎಫ್‌ಐಆರ್ ಮಾಡುವ ಮೊದಲು ಅಲ್ಲಿನ ಠಾಣಾಧಿಕಾರಿ ಲೇಖನವನ್ನು ಓದಿ ಅರ್ಥೈಸಿಕೊಂಡು, ಕಂಪ್ಲೆಂಟ್ ಕೊಡಲು ಬಂದ ಅರಿವುಗೇಡಿ ದೂರುದಾರರಿಗೆ ತಿಳುವುಹೇಳಬೇಕಿತ್ತು. ಇತಿಹಾಸದುದ್ದಕ್ಕೂ ಶೂದ್ರಾತೀ ಶೂದ್ರ ಜಾತಿಗಳು ಪರಿಶಿಷ್ಟರ ಜಾತಿ ಜನಾಂಗದ ಜನರ ಮೇಲೆ ಮಾಡಿರುವ ಅಕ್ಷಮ್ಯ ದೌರ್ಜನ್ಯಗಳ ಕುರಿತು ಮನವರಿಕೆ ಮಾಡಬಹುದಿತ್ತು. ಯಾವುದೋ ಕಾಯ್ದೆಯ ಮೂಲಕ ಎಸ್ಸಿ ಮೀಸಲುಪಟ್ಟಿಯಲ್ಲಿ ನುಸುಳಿರುವ ಕಾರಣ ಆಗುತ್ತಿರುವ ಸಾಮಾಜಿಕ ಅನ್ಯಾಯ, ಆ ಅನ್ಯಾಯದ ಮೂಲಕ (ಪ್ರಕಾಶ್ ಮಂಟೇದ ಅವರ ಲೇಖನದಲ್ಲಿ ಉಲ್ಲೇಖಿಸಿರುವಂತೆ) ನಿಜವಾದ ಅಸ್ಪೃಷ್ಯ ಮತ್ತು ಸ್ಪಷ್ಯ ಜಾತಿಗಳನ್ನು ಮೀಸಲಾತಿ ಪಟ್ಟಿಯಲ್ಲಿ ಕಾನೂನಾತ್ಮಕವಾಗಿ ಏಕವೆಂದು ಮಾಡಿ ಜರುಗುತ್ತಿರುವ ಅನ್ಯಾಯವನ್ನು ಬಿಡಿಸಿ ಹೇಳಬೇಕಿತ್ತು. ಆದರೆ ಅದ್ಯಾವುದೂ ಆಗದೇ, ಏಕಮುಖವಾಗಿ ದೂರು ದಾಖಲಿಸಲಾಗಿದೆ.
ಇನ್ನು, ಈ ಲೇಖನ ಪ್ರಕಟವಾದ ದಿನದಿಂದ ಪ್ರಕಾಶ್ ಮಂಟೇದ ಅವರಿಗೆ ಬಂದ ಕರೆಗಳಲ್ಲಿ ಅದೆಷ್ಟೋ ಕರೆಗಳು ಲಿಟರರಿ ಬೆದರಿಕೆಯ ಕರೆಗಳು. ಕಾಲಾಂತರದಿಂದ ದೌರ್ಜನ್ಯ ಮಾಡಿದ್ದು ಸಾಲದೆಂಬಂತೆ, ಎಂದೋ ಆದ ದೌರ್ಜನ್ಯವನ್ನು ಖಂಡಿಸಿ, ದಾಖಲಿಸಿ, ʻಅಂದಿನ ಭೋವಿಗಳುʼ ಎಂದು ಸ್ಟಷ್ಟವಾಗಿ, ಆ ಸಮುದಾಯದಕ್ಕೆ ಯಾವುದೇ ಅವಮಾನವಾಗದ ರೀತಿಯಲ್ಲಿ ಗೌರವಾನ್ವಿತ ಪದಗಳಲ್ಲಿ ಬರೆದ ಕಾರಣಕ್ಕೆ ಇಂದು ಕೇಸ್ ದಾಖಲಿಸಿದ್ದಾರೆ.
ಕಡೆಯದಾಗಿ, ಹೀಗೆ ಸತ್ಯ ಬರೆದ ಕಾರಣಕ್ಕೆ ಕೇಸ್ ದಾಖಲಾಗುವುದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತರ ಸರ್ಕಾರಗಳಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಎರಡೂ ಪಕ್ಷಗಳಲ್ಲಿ ಯಾವುದೇ ಪಕ್ಷ ಅಧಿಕಾರಲ್ಲಿ ಇದ್ದರೂ ಸ್ಪರ್ಧೆಗೆ ಬಿದ್ದವರಂತೆ ದಲಿತರ ಮೇಲೆ ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣ ಮೂಲಕ ದಲಿತರು ಹಣ ಮತ್ತು ನೆಮ್ಮದಿ ಎರಡನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ದಲಿತ, ಅಲ್ಪಸಂಖ್ಯಾತರ ಮೇಲೆ ಕೇಸ್ ದಾಖಲಿಸುವುದಕ್ಕೂ, ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಕೇಸ್ ದಾಖಲಾಗುವುದಕ್ಕೂ ಏನಾದರೂ ಫರಕ್ ಇದೆಯಾ? ಹಾಗಾದರೆ, ಸತ್ಯ ಬರೆದವರ ವಿರುದ್ಧವೇ ಕೇಸ್ ಜಡಿಯುವುದಾದರೆ ʻಕಾಂಗ್ರೆಸ್ʼ ಎಂಬ ಪ್ರಗತಿಪರ ಹಣೆಪಟ್ಟಿಯ ಸರ್ಕಾರ ಏಕೆ ಬೇಕು? ಏನೇ ಆದರೂ ನಮ್ಮ ಸುದ್ದಿ ಸಂಸ್ಥೆ ಮತ್ತು ನಮ್ಮ ಜತೆಗಿರುವ ಎಲ್ಲರೂ ಪ್ರಕಾಶ್ ಮಂಟೇದ ಅವರ ಬೆನ್ನಿಗೆ ನೈತಿಕವಾಗಿ ನಿಂತಿರುತ್ತವೆ.
ವಿ.ಆರ್.ಕಾರ್ಪೆಂಟರ್
ಪ್ರಧಾನ ಸಂಪಾದಕ
ಭಯ ಬೇಡ ಸತ್ಯ ಗೆಲ್ಲುತ್ತದೆ, ನಾವೂ ಅವರೊಟ್ಟಿಗೆ ಇದ್ದೇವೆ.
[…] ಇದನ್ನೂ ಓದಿ: ಸತ್ಯ ಬರೆದವರ ವಿರುದ್ಧವೇ ಕೇಸ್ ಜಡಿಯುವುದ… […]