ಸ್ವಾತಂತ್ರ್ಯಗೊಂಡ ಕೇವಲ ಎಪ್ಪತ್ತೈದು ವರ್ಷಗಳಿಗೆ ನಮ್ಮ ದೇಶವು ತನ್ನ ಪ್ರಜೆಗಳ ಸ್ವಾತಂತ್ರ್ಯ ಮತ್ತು ಬದುಕನ್ನು ಕಿತ್ತುಕೊಳ್ಳುತ್ತೆ ಎಂದು ಯಾರು ಊಹಿಸಿರಲಿಲ್ಲ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 2020ರಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಅಂಗೀಕರಿಸಿದಾಗ, ಆ ಕಾಯ್ದೆಯ ವಿರುದ್ಧ ಬೀದಿಗಿಳಿದ ರೈತರು ಆಗಸ್ಟ್ 9, 2020 ರಿಂದ ಡಿಸೆಂಬರ್ 11, 2021ರ ತನಕ ಅಂದರೆ 1 ವರ್ಷ, 4 ತಿಂಗಳು, 2 ದಿನಗಳ ಕಾಲ ಪ್ರತಿಭಟನೆ ಮಾಡಿದ ಪರಿಣಾಮ ಕೇಂದ್ರ ಸರ್ಕಾರವು ತಾವು ಜಾರಿ ಮಾಡಿದ್ದ ಕೃಷಿ ಕಾಯ್ದೆಯನ್ನು ಹಿಂಪಡೆಯಿತು.

ಆದರೆ ಮತ್ತೆ ಸರ್ಕಾರದ ಕಣ್ಣು ಬಿದ್ದದ್ದು ಮಾತ್ರ ದೇಶದ ಕಾರ್ಮಿಕರ ಮೇಲೆ. 44 ಕೇಂದ್ರ ಕಾರ್ಮಿಕ ಕಾಯ್ದೆಗಳನ್ನು 4 ಕಾರ್ಮಿಕ ವಿರೋಧಿ ಕಾಯ್ದೆಗಳನ್ನಾಗಿಸಿ ಕಾರ್ಮಿಕರ ಬದುಕು ಮತ್ತು ಭವಿಷ್ಯಕ್ಕೆ ಕೊಳ್ಳಿಯಿಟ್ಟರು.

ಪರಕೀಯ ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಅನೇಕ ಕ್ರಾಂತಿಕಾರಿಕ ಮತ್ತು ಸಮಾಜ ಸುಧಾರಕ ಕಾನೂನುಗಳನ್ನು ತರುವುದರ ಜೊತೆಗೆ ದೇಶದಲ್ಲಿ ಜನ ಪರ ಮತ್ತು ಕಾರ್ಮಿಕ ಪರ ನೀತಿಗಳನ್ನು ಜಾರಿ ಮಾಡಿದ್ದರು. 1942ರಲ್ಲಿ ಬ್ರಿಟಿಷ್ ಸರ್ಕಾರದ ವೈಸರಾಯ್ ಕೌನ್ಸಿಲ್ ಗೆ ಆಯ್ಕೆಯಾಗಿ ಕಾರ್ಮಿಕ ಮಂತ್ರಿಗಳಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರು ಬ್ರಿಟಿಷ್ ಸರ್ಕಾರವನ್ನು ಒಪ್ಪಿಸಿ ಅನೇಕ ಕಾರ್ಮಿಕ ಪರ ಕಾನೂನುಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. The Factories Act , 1934 ಮುಖಾಂತರ 10- 12 ಗಂಟೆಗಳ ಕಾಲವಿದ್ದ ಕೆಲಸದ ಸಮಯವನ್ನು 8 ಗಂಟೆಗೆ ಇಳಿಸಿ ಜೊತೆಗೆ ಅನೇಕ ಕಾರ್ಮಿಕ ಸ್ನೇಹಿ ಕಾನೂನುಗಳನ್ನು ಜಾರಿ ಮಾಡಿದರು. ಆದರೆ, ಇಂದು ನಮ್ಮದೆ ಸರ್ಕಾರಗಳು ತಮ್ಮ ಪ್ರಜೆಗಳ ವಿರುದ್ದ ಕಾನೂನುಗಳನ್ನು ರೂಪಿಸುತ್ತಿರುವುದು ವಿಪರ್ಯಾಸವೆ ಸರಿ.

ಇತ್ತೀಚೆಗೆ ಕರ್ನಾಟಕ ಸರ್ಕಾರವು ಮತ್ತೊಂದು ಕಾರ್ಮಿಕ ವಿರೋಧಿ ಕಾನೂನು ಜಾರಿ ಮಾಡುವ ಮುಖಾಂತರ ತಾವು ಜನ ವಿರೋಧಿ ಸರ್ಕಾರವೆಂದು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ -2023ಕ್ಕೆ ಅನುಮೋದನೆ ನೀಡುವ ಮುಖಾಂತರ ರಾಜ್ಯದಲ್ಲಿ 8 ಗಂಟೆಗಳ ಕಾಲದ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಏರಿಸಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಆದರೆ ಇದರಿಂದ ಉದ್ಯೋಗಳು ಕಡಿಮೆ ಆಗುತ್ತವೆಯೆ ಹೊರೆತು ಅದು ಹೇಗೆ ಹೆಚ್ಚಾಗುತ್ತವೋ? ಎಂಬುದನ್ನು ಇದಕ್ಕೆ ಸರ್ಕಾರವೇ ಉತ್ತರಿಸಬೇಕು! ಒಟ್ಟಾರೆ 1991-92ರಲ್ಲಿ ಹೊಸ ಆರ್ಥಿಕ ನೀತಿಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರವು ರೈತ ಮತ್ತು ಕಾರ್ಮಿಕರಿಗೆ ಗೋರಿ ತೋಡಿದರೆ, ಇಂದು ದೇಶಭಕ್ತ ಎಂದು ಹೇಳಿಕೊಳ್ಳುವ BJP ಸರ್ಕಾರವು ಮಣ್ಣು ಮುಚ್ಚುವ ಕೆಲಸವನ್ನು ಮಾಡುತ್ತಿದೆ.

ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವು ವಿಕಾಸಗೊಳ್ಳುವುದರ ಜೊತೆಗೆ ಮತ್ತಷ್ಟು ಗಟ್ಟಿಗೊಳ್ಳಬೇಕಿತ್ತು. ಆದರೆ, ಇಂದು ದೇಶದಲ್ಲಿ ಪ್ರಜಾಪ್ರಭುತ್ವವು ದುರ್ಬಲಗೊಳ್ಳುವ ಜೊತೆಗೆ ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳು ಕೂಡ ಮಾಯವಾಗುತ್ತಿವೆ! ಇಂತಹ ಸಂಧರ್ಭದಲ್ಲಿ ಜಾಗೃತಗೊಂಡು ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಬೇಕಿದ್ದ ಪ್ರಜೆಗಳು ಅಸಹಾಯಕರಾಗಿ ಕೂತಿರುವುದು ಮಾತ್ರ ವಿಪರ್ಯಾಸವೆ ಸರಿ.

ಶಿಕ್ಷಣ ಮತ್ತು ಸಾಕ್ಷರತೆ ಕಡಿಮೆ ಇದ್ದ ಕಾಲದಲ್ಲೇ ಜನರಲ್ಲಿ ಜಾಗೃತಿ ಮತ್ತು ಹೋರಾಟದ ಕಿಚ್ಚು ಹೆಚ್ಚಿತ್ತು. ಹಾಗಾಗಿ ಸರ್ಕಾರಗಳು ಜನರ ಅಭಿಪ್ರಾಯ ಮತ್ತು ಹೋರಾಟಗಳಿಗೆ ಮಣಿಯುತಿದ್ದರು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜಗತ್ತೇ ನಮ್ಮ ಕೈ ಬೆರಳಿನಡಿ ಇರಲು, ಜನರಲ್ಲಿ ಜಾಗೃತಿ ಮತ್ತು ಹೋರಾಟದ ಭಾವನೆ ಹೆಚ್ಚಾಗ ಬೇಕಿತ್ತು. ಆದರೆ ಅದ್ಯಾವುದು ಇಲ್ಲದ ಪರಿಣಾಮ ಇಂದು ಸರ್ಕಾರಗಳು ತಮ್ಮ ಇಚ್ಚೆಯಂತೆ ವರ್ತಿಸುತ್ತ ತಮ್ಮ ಗೆಲುವಿಗೆ ಕಾರಣರಾದ ಹಣವಂತರು ಮತ್ತು ಕಾರ್ಪೊರೇಟ್ ದೊರೆಗಳ ತಾಳಕ್ಕೆ ತಕ್ಕಂತೆ ಕುಣಿಯುತಿದ್ದಾರೆ! ಸಂವಿಧಾನ, ಕಾನೂನು ಮತ್ತು ಪ್ರಜಾ ಸೇವೆಯ ಪರಿಜ್ಞಾನವೇ ಇಲ್ಲದ ಕ್ರಿಮಿನಲ್ ಮತ್ತು ಕಾರ್ಪೊರೇಟ್ ಕಮಿಷನ್ ಏಜೆಂಟ್‌ ಗಳನ್ಮು ನಮ್ಮನ್ನು ಆಳುವ ದೊರೆಗಳನ್ನಾಗಿ ಆಯ್ಕೆ ಮಾಡಿಕೊಂಡಾಗ ನಾವು ಅವರ ಆಯ್ಕೆಯಂತೆ ಬದುಕ ಬೇಕಾಗುವುದು ಅನಿವಾರ್ಯವಲ್ಲವೆ?

ಹರಿರಾಮ್. ಎ
ವಕೀಲರು

Leave a Reply

Your email address will not be published. Required fields are marked *