Karnataka Budget 2023 ಅನ್ನು ನೋಡುವುದಾದರೆ, ಕಳೆದ ಎರಡು ವರ್ಷಗಳ ಬಜೆಟ್ ರಾಜ್ಯದ ಜನರಿಗೆ ಬಹಳ ನಿರಾಶದಾಯಕವಾಗಿತ್ತು. ಆದರೆ ಈ ಬಾರಿಯ ಮಾತ್ರ ಬಜೆಟ್ ಕೇಳಲಿಕ್ಕೆ ಮತ್ತು ನೋಡಲಿಕ್ಕೆ ‘ಅಚ್ಚೆ ದಿನ್’ ರೀತಿಯಲ್ಲೆ ಬಹಳ ಆಕರ್ಷಕವಾಗಿದೆ. ಆದರೆ ಎಷ್ಟರ ಮಟ್ಟಿಗೆ ಅದು ಫಲಪ್ರದವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 2023ರ ಕರ್ನಾಟಕದ ಬಜೆಟ್ ನೂರಕ್ಕೆ ನೂರರಷ್ಟು ಚುನಾವಣಾ ಪ್ರಣಾಳಿಕೆಯ ಹಾಗೆ ಗೋಚರಿಸುತ್ತಿದೆ! ಈಗಾಗಲೇ 40% ಕಮಿಷನ್, ನೇಮಕಾತಿ ಹಗರಣ ಮತ್ತು ಮುಂತಾದ ವಿಷಯಗಳ ಕಾರಣಕ್ಕೆ ಜನರ ವಿರೋಧವನ್ನು ಎದುರಿಸುತ್ತಿರುವ ಸರ್ಕಾರ ಅವರ ಗಮನವನ್ನು ಸೆಳೆಯಲು ಕೊಡುಗೆಗಳ ಮಹಾಪೂರವೇ ಹರಿಸಿದಂತೆ ಕಾಣುತ್ತಿದೆ.

ರೈತರ ಪರವಾದ ಕಾರ್ಯಕ್ರಮಗಳನ್ನು ಅದರಲ್ಲೂ ₹5 ಲಕ್ಷಗಳವರೆಗೂ ಬಡ್ಡಿರಹಿತ ಸಾಲವನ್ನು ಘೋಷಿಸಿರುವುದು ರೈತರ ಓಟು ಸೆಳೆಯಲು ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಏಕೆಂದರೆ ಕೆಲವು ದಿನಗಳ ಹಿಂದೆಯಷ್ಟೆ BJPಯ ಸಂಸದ ತೇಜಸ್ವಿ ಸೂರ್ಯ ರೈತರ ಸಾಲಮನ್ನಾ ಬಗ್ಗೆ ಹಗುರವಾಗಿ ಮಾತನಾಡಿ ಪೇಚೆಗೆ ಸಿಲುಕಿದ್ದರು ಆದರೆ ಈಗ ಸರಕಾರವು ಮಾತ್ರ ಬಜೆಟ್ ಮುಂಖಾತರ ತಾವು ರೈತರ ಪರ ಇದ್ದೆವೆ ಎಂಬ ಸಂದೇಶ ನೀಡಲು ಪ್ರಯತ್ನಿಸಿದೆ. ಹಾಗೆಯೇ, ಶಿಕ್ಷಣದ ಬಗ್ಗೆ ಬಹಳ ತಾತ್ಸಾರ ಮನೋಭಾವ ಹೊಂದಿದ್ದ BJP, ಈ ಬಾರಿಯ ಬಜೆಟ್ ನಲ್ಲಿ ಸರ್ಕಾರಿ ಶಾಲೆಗಳು ಹಾಗೂ ಬಡ ವಿದ್ಯಾರ್ಥಿಗಳ ಪರವಾಗಿ ಕಾರ್ಯಕ್ರಮ ರೂಪಿಸಿರುವುದು ಆಶ್ಚರ್ಯಕರವಾಗಿದೆ. SC/ST ವಿದ್ಯಾರ್ಥಿಗಳಂತು ಸ್ಕಾಲರ್ಶಿಪ್ ಕಡಿತ, ಹಾಸ್ಟೆಲ್ ಮತ್ತು ಇತರೆ ಸವಲತ್ತುಗಳು ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲವೆಂದು ಸರ್ಕಾರಕ್ಕೆ ಹಿಡಿ ಶಾಪವಾಕುತಿದ್ದರು. ಹಾಗಾಗಿ ಇವರಿಗು ಒಂದಿಷ್ಟು ಫ್ಯಾನ್ಸಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಆದರೆ ಇವು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತವೆ ಕಾದು ನೋಡಬೇಕು.

ಇನ್ನು ಸರ್ಕಾರಿ ನೌಕರರ ಬಗ್ಗೆಯಂತೂ ದಿವ್ಯ ಮೌನ! ಹಾಗೆಯೇ ದಲಿತರ ಪ್ರಚಲಿತ ವಿಷಯಗಳಾದ PTCL ಕಾಯ್ದೆಯ ತಿದ್ದುಪಡಿ ವಿಷಯದಲ್ಲಿ ದಲಿತರಿಗೆ ಮತ್ತೆ ಪೋಸ್ಟ್ ಡೇಟೆಡ್ ಚೆಕ್ ನೀಡುವ ಮುಖಾಂತರ ಮೂಗಿಗೆ ತುಪ್ಪ ಸವರಲಾಗಿದೆ. ಒಳಮೀಸಲಾತಿಯ ಬಗ್ಗೆಯಂತೂ ಮತ್ತೆ ಮೌನಕ್ಕೆ ಜಾರಿದ್ದಾರೆ!

ಇನ್ನೂ EWS ಎಂಬ ಭೂತದ ಮುಖಾಂತರ ಮತ್ತೆ ಸಾಮಾನ್ಯರಿಗೆ ಮೋಸ ಮಾಡಲು ಸರ್ಕಾರ ಸಿದ್ದವಿರುವುದು ಎದ್ದು ಕಾಣುತ್ತಿದೆ. ಏಕೆಂದರೆ ಈಗಾಗಲೇ 4% ಇರುವ ಮೇಲ್ಜಾತಿಗಳಿಗೆ 10% ಮೀಸಲಾತಿ ನೀಡಿ ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳಿಗೆ ಮೋಸ ಮಾಡಿತ್ತು ಮತ್ತೆ, ಅದರ ಜೊತೆಗೆ ಈ ಬಜೆಟ್ ನಲ್ಲಿ 4% ಇರುವ EWS ಗೆ ಒಟ್ಟು ಸರ್ಕಾರ ನೀಡಲಿರುವ ವಸತಿಗಳ ಪೈಕಿ ಮೂರರ ಒಂದು ಭಾಗದಷ್ಟು ಅಂದರೆ 33.33% ವಸತಿಗಳನ್ನು EWS ಗೆ ಮಂಜೂರು ಮಾಡುತ್ತೇವೆ ಎಂದು ರಾಜಾರೋಷವಾಗಿ ಕಾನೂನು ಬಾಹಿರ ಕೆಲಸವನ್ನು ಮಾಡುವುದಾಗಿ ಘೋಷಿಸಿದ್ದಾರೆ!

ಉದ್ಯೋಗ ಭಾಗ್ಯಕ್ಕೆ ಕಾಯುತಿದ್ದ ಯುವಕರಿಗೆ ₹2000 ನಿರುದ್ಯೋಗ ಭತ್ಯವನ್ನು ನೀಡುತ್ತೆವೆ ಎಂದು ಘೋಷಿಸಿದ್ದಾರೆ ಆದರೆ ಇದಕ್ಕೆ ಯಾವ “Conditions apply ” ಆಗುತ್ತೊ ಗೊತ್ತಿಲ್ಲಾ. ಇನ್ನು ಇರುವ ಸ್ಕಾಲರ್ಶಿಪ್ಗಳನ್ನೆ ರದ್ದು ಮಾಡಿರುವ ಸರ್ಕಾರ IIT, IIM ಹಾಗು ಇತರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಧನ ಸಹಾಯ, ಇನ್ನು ವಿದೇಶಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸ್ಕಾಲರ್ಶಿಪ್ ಅದರಲ್ಲೂ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಿರುವದು ನೋಡಿದರೆ ಇದು ಪಕ್ಕಾ ಓಟಿನ ಲೆಕ್ಕಾಚಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಟ್ಟಾರೆ ಹೇಳಬೇಕಾದರೆ ಬೊಮ್ಮಾಯಿಯವರು ಒಳ್ಳೆಯ ಚುನಾವಣಾ ಪ್ರಣಾಳಿಕೆಯನ್ನು ತಯಾರು ಮಾಡಿ ಮಂಡಿಸಿದ್ದಾರೆ. ಆದರೆ ಈ ಪ್ರಣಾಳಿಕೆಯನ್ನು ಮತದಾರ ಮಹಾ ಪ್ರಭುಗಳು ಎಷ್ಷರ ಮಟ್ಟಿಗೆ ನಂಬುತ್ತಾರೆ, ಒಪ್ಪುತ್ತಾರೆಂದು ಚುನಾವಣೆಯ ನಂತರದಲ್ಲಿ ತಿಳಿಯುವುದು.

ಹರಿರಾಮ್. ಎ
ವಕೀಲರು

Leave a Reply

Your email address will not be published. Required fields are marked *