ನಮ್ಮ ಒಕ್ಕೂಟ ರಾಷ್ಟ್ರದಲ್ಲಿ ಜೀವಿಸುತ್ತಿರುವ ಎಲ್ಲರಿಗೂ ಏಕಪ್ರಕಾರವಾಗಿ ಬದುಕುವ, ಉದ್ಯೋಗ, ಉದ್ಯಮ, ಕೈಗಾರಿಕೆ ಅಥವಾ ವ್ಯಾಪಾರ ನಡೆಸುವ ಹಕ್ಕಿದೆ. ಅದನ್ನು ಯಾರಿಗೆ ಯಾರೂ ವಂಚಿಸುವಂತಿಲ್ಲ ಎಂದು ಸಂವಿಧಾನದ ಅನೇಕ ಆರ್ಟಿಕಲ್‌ಗಳು ಸ್ಪಷ್ಟವಾಗಿ ನಿರ್ದೇಶನ ನೀಡಿವೆ. ಆದರೆ, ಇಲ್ಲಿರುವ ಭ್ರಷ್ಟ ಆಡಳಿತಶಾಹಿ ವರ್ಗ, ಉಳ್ಳವರಿಗೊಂದು; ಇಲ್ಲದವರಿಗೊಂದು, ಮೇಲ್ಜಾತಿಗೊಂದು; ಕೆಳಜಾತಿಗಳಿಗೊಂದು ಎಂಬ ಅಲಿಖಿತ ಕಾನೂನಿನ ಅಥವಾ ಮನುಧರ್ಮಶಾಸ್ತ್ರದ ಮೂಲಕ ದೇಶವನ್ನು ಈ ಸ್ಥಿತಿಗೆ ತಂದಿವೆ. ಅದರಲ್ಲೂ ದಲಿತರಿಗಂತೂ ಎಲ್ಲ ಕ್ಷೇತ್ರಗಳಲ್ಲೂ ತಾರತಮ್ಯ. ಸರ್ಕಾರ ಅದೆಂತಹುದೇ ಕಾಯ್ದೆ ಕಾನೂನು ತಂದರೂ ಅದರೊಳಗೆ ಈ ಮನುಧರ್ಮದ ಕಾನೂನು ತಣ್ಣಗೆ ನುಸುಳಿ ತನ್ನ ಹೀನ ಕೆಲಸವನ್ನು ಪ್ರಾರಂಭಿಸಿರುತ್ತದೆ. ಇದು ದೇಶದ ಏಳಿಗೆಗೆ ಕುಂಠಿತ.
ದೇಶದ ಸಂಪತ್ತು, ಭೂಮಿ ಪ್ರತಿಯೊಬ್ಬ ನಾಗರಿಕನಿಗೂ ಸೇರಿದ್ದು. ಇಲ್ಲಿರುವ ಸಂಪನ್ಮೂಲಗಳ ಮುಖೇನ ಇಲ್ಲಿ ಬದುಕುವ ಪ್ರತಿಯೊಬ್ಬ ನಾಗರಿಕ ತನ್ನ ಬದುಕನ್ನು ರೂಪಿಸಿಕೊಳ್ಳಬಹುದು. ಆದರೆ ಆಗುತ್ತಿರುವುದು ಏನು? ನೋಡೋಣ ಬನ್ನಿ…
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಭೂಮಿ ಹಂಚಿಕೆಯಲ್ಲಿ ದಲಿತರಿಗೆ ಜಾತೀ ತಾರತಮ್ಯ ಮಾಡುತ್ತಿರುವುದಲ್ಲದೆ, ಅನರ್ಹರಿಗೆ ಅಕ್ರಮವಾಗಿ, ತರಾತುರಿಯಲ್ಲಿ ಭೂಮಿ ಹಂಚುವ ಕೆಲಸ ಮಾಡುತ್ತಿದ್ದಾರೆಂದು DHEEP (Dhalith Emerging & Established Entrepreneur’s Platform)ನ ಅಧ್ಯಕ್ಷರಾದ ಹೆಚ್ ಸತೀಶ್ ಕುಮಾರ್ ಆರೋಪಿಸಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಅವರು ತಮ್ಮ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿರುವಂತೆ:
ಸರ್ಕಾರವು ದಲಿತರ ಪುರೋಭಿವೃದ್ಧಿಗೆ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಲ್ಲಿ ತನ್ನ ಅಧೀನದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಕೈಗಾರಿಕಾ ನಿವೇಶನಗಳನ್ನು ಹಂಚುತ್ತಿರುವುದು ಒಂದಾಗಿರುತ್ತದೆ.
ನಿವೇಶನಗಳನ್ನು ಹಂಚುವ ಈ ಪ್ರಕ್ರಿಯೆಯಲ್ಲಿ ಹಲವು ನ್ಯೂನ್ಯತೆಗಳಿದ್ದು, ಅದನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ. ಕೈಗಾರಿಕಾ ಪ್ರದೇಶ ಒಂದು ನಿರ್ಮಾಣಗೊಂಡ ನಂತರ ನಿಯಮಾನುಸಾರ ” ದಲಿತರ ಪಾಲನ್ನು ಹಂಚುತ್ತಿರುವುದು ಹೌದಾದರೂ, ಹಂಚುತ್ತಿರುವ ಸದರಿ ನಿವೇಶನಗಳು ಆಯಕಟ್ಟಿನ/ಪ್ರಮುಖ ಪ್ರದೇಶದಿಂದ ದೂರವಿರುವುದು ಕೇವಲ ಕಾಕತಾಳೀಯವಿರಲಾರದು, ಅಲ್ಲದೆ ಮುಖ್ಯರಸ್ತೆ/ಅಡ್ಡರಸ್ತೆಗಳಲ್ಲಿನ ಮೂಲೆ ನಿವೇಶನಗಳು ದಲಿತರಿಗೆ ಮೀಸಲಡುವ ಪದ್ಧತಿಯೇ ವಿರಳವಾಗಿದೆ ಮತ್ತೂ ಮುಂದುವರೆದು ವ್ಯಾಜ್ಯವುಳ್ಳ/ವಿವಾದಿತ ಭೂಮಿಯಲ್ಲಿನ ನಿವೇಶನಗಳನ್ನು ಹಂಚುತ್ತಿರುವ ಪ್ರಕ್ರಿಯೆಯು ನಡೆದು ಬಂದಿದೆ. ಇದಕ್ಕೆ ಉದಾಹರಣೆಯಾಗಿ ಹಾರೋಹಳ್ಳಿ ಹಾಗೂ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿನ ವ್ಯಾಜ್ಯಗಳನ್ನು ಉದಾಹರಿಸಬಹುದಾಗಿದೆ.
ಅಲ್ಲದೆ ಕೈಗಾರಿಕಾ ವಸಾಹತು ಒಂದು ಸಂಪೂರ್ಣ ನಿರ್ಮಾಣಗೊಳ್ಳುವ ಮುನ್ನವೇ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಸುವ ಪರಿಪಾಠವಿದ್ದು, ನಿವೇಶನಗಳ ಹಂಚಿಕೆಗೆ ಸಿದ್ಧಗೊಂಡಿರುವ ಕೋಲಾರ ಜಿಲ್ಲೆಯಲ್ಲಿನ ಬಾವನಹಳ್ಳಿ, ವೇಮಗಲ್ಲು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಗೌರಿಬಿದನೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ 6ನೇ ಹಂತ ಇವುಗಳಲ್ಲದೆ, ದೇವನಹಳ್ಳಿ ಸಮೀಪದ ITIR ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮೇಲ್ಕಾಣಿಸಿದ ಅನ್ಯಾಯ ನಡೆಯುವುದು ಶತಸಿದ್ಧ.
ಕೈಗಾರಿಕಾ ಪ್ರದೇಶ ಒಂದು ಸಂಪೂರ್ಣ ನಿರ್ಮಾಣಗೊಂಡು ದಲಿತರಿಗೆ ಮೀಸಲಾಗಿಡುವ ನಿವೇಶನಗಳನ್ನು ಒಳಗೊಂಡ ಸಂಪೂರ್ಣ ನಕಾಶೆಯನ್ನು ಕ ಕೈ ಪ್ರ ಮಂಡಳಿಯ ವೆಬ್‌ಸೈಟ್ ನಲ್ಲಿ ಪ್ರಕಟಿಸಿದ ನಂತರವೇ ನಿವೇಶನಗಳನ್ನು ಹಂಚುವ ಪ್ರಕ್ರಿಯೆ ನಡೆದರೆ ನಾವು ಹೆಸರಿಸಿರುವ ಅನ್ಯಾಯ/ಅಕ್ರಮಗಳು ನಡೆಯಲು ಅವಕಾಶ ಇಲ್ಲದಂತಾಗುತ್ತದೆ ಎಂಬುದು ನಮ್ಮ ಭಾವನೆ. ಈ ಸಂಬಂಧ ತಾವು ಕೂಡಲೇ ಗಮನಹರಿಸಿ ದಲಿತರ ನ್ಯಾಯಬದ್ಧ ಹಕ್ಕುಗಳ ವಂಚಿಸುವ ಪ್ರಕ್ರಿಯೆಯನ್ನು ತಡೆಯ ಬೇಕೆಂದು ವಿನಮ್ರ ಮನವಿ.
ಎಂದು ಉಲ್ಲೇಖಿಸಿ, ದೂರು ನೀಡಲಾಗಿದೆ. ದೂರಿನ ಪ್ರತಿಯನ್ನು ಎಸ್ ಸಿ / ಎಸ್ ಟಿ ಆಯೋಗ ಮತ್ತು ಕಲ್ಯಾಣ ಸಮಿತಿಗೂ ಸಲ್ಲಿಸಲಾಗಿದ್ದು, ಇದು ಅಟ್ರಾಸಿಟಿ ಕಾಯ್ದೆಯಲ್ಲಿ ಒಳಪಡುತ್ತದೆ ಎಂಬುದು ಗಮನಾರ್ಹ ಸಂಗತಿ.
ಮಿತ್ರ ದಲಿತರ ಶತ್ರುವಾಗುತ್ತಿರುವುದು ಯಾಕಾಗಿ?
ಆ ದೇಶದ ಆದಾಯ ಗಳಿಕೆಗೆ ಕೃಷಿ ಕ್ಷೇತ್ರದ ನಂತರದ ಸ್ಥಾನದಲ್ಲಿ ನಿಲ್ಲುವುದು ಕೈಗಾರಿಕೋದ್ಯಮ. ಈ ಕ್ಷೇತ್ರದ ಉತ್ತೇಜನೆಗೆ ರಾಜ್ಯ ಸರ್ಕಾರವೂ ಮುಂದಾಗಿದ್ದು ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸಿ ಪ್ರೋತ್ಸಾಹಿಸಲು ಕರ್ನಾಟಕ ಉದ್ಯೋಗ ಮಿತ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಇದರ ಮೂಲ ಉದ್ದೇಶ ಹೂಡಿಕೆದಾರರನ್ನು ಆಹ್ವಾನಿಸಿ, ಮೂಲ ಸೌಕರ್ಯಗಳಾದ ಭೂಮಿ, ವಿದ್ಯುತ್, ನೀರು ಸರಬರಾಜು ವ್ಯವಸ್ಥೆಯನ್ನು ಒದಗಿಸುವುದು. ಈ ಸಂಬಂಧ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಅಭಿವೃದ್ದಿಗೊಳಿಸಿ, ಕೈಗಾರಿಕಾ ವಸಾಹತನ್ನ ನಿರ್ಮಿಸಿ ನಂತರ ಕೈಗಾರಿಕೆಗಳ ಸ್ಥಾಪನೆಗೆ ಅನುವಾಗುವಂತೆ, ಅರ್ಹ ಫಲಾನುಭವಿಗಳಿಗೆ ಹಂಚುವುದು. ಆದರೆ ಹೀಗೆ ಹಂಚುವ ಈ ಹಂತದಲ್ಲೇ ಇರುವುದು ಒಳಗುಟ್ಟು.
ಕೈಗಾರಿಕೆಗಳ ಸ್ಥಾಪನೆಗೆ ನಿವೇಶನಗಳನ್ನು ಪಡೆದು, ಅದನ್ನು ಬಯಸುವವರಿಗೆ ಸರ್ಕಾರವೇ ಸ್ಥಾಪಿಸಿರುವ ʼಕರ್ನಾಟಕ ಉದ್ಯೋಗ ಮಿತ್ರʼ ಎಂಬ ಸಂಸ್ಥೆಯು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ತದನಂತರ ನಿವೇಶನಗಳನ್ನು ಹಂಚುತ್ತದೆ. ಈ ಹಂತದಲ್ಲಿ ಫಲಾನುಭವಿಗಳ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳಾದ ಅನುಭವ, ವಿದ್ಯಾರ್ಹತೆ, ಬಂಡವಾಳ ಹೂಡುವ ಶಕ್ತಿ, ತಯಾರಿಸುವ ವಸ್ತು, ಇತ್ಯಾದಿಗಳು ಮುನ್ನಲೆಗೆ ಬರುತ್ತದೆ. ಈ ಪ್ರಕ್ರಿಯೆ ಬಹುಪಾಲು ಪಾರದರ್ಶಕರಾಗಿರುವುದಿಲ್ಲ. ಪಾರದರ್ಶಕವಾಗಿಲ್ಲವೆಂದರೆ, ಅದೊಂದು ಅಕ್ರಮದ ಕೂಪವೆಂದು ಬಿಡಿಸಿ ಹೇಳಬೇಕಿಲ್ಲ. ವಶೀಲಿ ಬಾಜಿ, ಶಿಫಾರಸ್ಸು ಹಾಗೂ ಇನಿತರ ಸಂಗತಿಗಳು ಇಲ್ಲಿ ಕೆಲಸ ಮಾಡುತ್ತವೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಳ್ಳುವ ಕೈಗಾರಿಕಾ ವಸಾಹತುಗಳಲ್ಲಿ, ಸಂಸ್ಥೆಯ ಅಧಿಕಾರಿಗಳು ತಮಗೆ ಬೇಕಾದ ಸ್ಥಳದಲ್ಲಿ, ಬೇಕಾದ ನಿವೇಶನಗಳನ್ನು, ಬೇಕಾದ ಜನರಿಗೆ ಹಂಚುವ ಜಾದುವನ್ನು ಮಾಡಿಕೊಂಡು ಬಂದಿರುತ್ತಾರೆ. ಇಂಥ ಅಧಿಕಾರಿಗಳ ದೆಸೆಯಿಂದ ದಲಿತ ಹಾಗೂ ಇನ್ನಿತರ ಶೋಷಿತ ವರ್ಗಗಳಿಗೆ ನಿಯಮಾನುಸಾರ ನೀಡಬೇಕಾಗಿರುವ ನಿವೇಷನಗಳು, ಆಯಕಟ್ಟಿನ ಸ್ಥಳಗಳಗಳಲ್ಲಿ ಇರುವುದು ಅಪರೂಪ. ಇನ್ನೂ ಮೂಲೆ ನಿವೇಶನಗಳು ಮರೀಚಿಕೆ. ಒಂದು ರೀತಿಯಲ್ಲಿ ಇದೊಂದು ಕೈಗಾರಿಕೆಯ ಊರು-ಕೇರಿ ಆಟ! ಅಂದರೆ: ದಲಿತರಿಗೆ ಪ್ರಮುಖವಲ್ಲ, ಸರಿಯಾದ ರಸ್ತೆ ಸೌಲಭ್ಯವಿಲ್ಲ ಸ್ಥಳಗಳನ್ನು ಹಂಚುವುದು. ಹಲವುಬಾರಿ ಭೂ ವ್ಯಾಜ್ಯವಿರುವ ಭೂಮಿಯನ್ನು ಹಂಚಿ, ಪ್ರಕರಣಗಳಲ್ಲಿ ಅವರ ಹೆಸರನ್ನು ಸೇರಿಸುವುದು ನಡೆಯುತ್ತಿರುತ್ತದೆ. ಹೀಗೆ ಮಾಡುವುದು ಅಪರಾಧವಾಗಿದ್ದರೂ ಯಾವುದೇ ಎಗ್ಗಿಲ್ಲದೆ ಈ ಪ್ರಕ್ರಿಯೆ ನಡೆಯುತ್ತದೆ.
ಇನ್ನೂ ಮುಂದುವರೆದಂತೆ, ದಲಿತರಿಗೆ ಮೀಸಲು ನಿವೇಷನಗಳನ್ನು ಗುರುತಿಸಲ್ಪಡುವ ಮುನ್ನವೇ, ಅವುಗಳಲ್ಲಿನ ನಿವೇಶನ ಹರಾಜಿಗೆ ಬಂದು ಹಂಚಿಕೆ ಮುಗಿದೇಬಿಟ್ಟಿರುತ್ತದೆ.
ಹಾರೋಹಳ್ಳಿ/ದಾಬಸ್‌ಪೇಟೆಯ ಕೆಲವು ಹಂತಗಳೇ ಇದಕ್ಕೆ ಉದಾಹರಣೆ:
ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ (MD)ನ ಹುದ್ದೆ ಹಾಗೂ KIADBಯ ಜಂಟಿ ನಿರ್ದೇಶಕನ ಹುದ್ದೆಗಳೆರಡನ್ನೂ ಒಬ್ಬರೇ ನಿಭಾಯಿಸುತ್ತಿರುವುದು ಬಲವಾದ ಅನುಮಾನಕ್ಕೆ ಕಾರಣವಾಗಿದ್ದು, ಇತ್ತೀಚಿನ ಅವರ ನಡವಳಿಕೆ ಸಂಪೂರ್ಣ ಪಾರದರ್ಶಕವಾಗಿರುವುದಿಲ್ಲ ಎಂದು ಸತೀಷ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈಗಿನ ರಾಜ್ಯ ಮಟ್ಟದ ಏಕಗವಾಕ್ಷಿ ಆಯ್ಕೆ ಕ್ರಿಯೆಯಲ್ಲಿ buck allotment ನಲ್ಲಿ ಭೂಮಿಯನ್ನು ಪಡೆದುಕೊಂಡ ಕೆಲ ಸಂಸ್ಥೆಗಳ ಅರ್ಹತೆಯೇ ಪ್ರಶ್ನಾರ್ಹವಾಗಿದ್ದು, ಈ ಸಂಬಂಧ ತನಿಖೆ ನಡೆಸಲು ಕೆಲ ದಲಿತ ಸಂಘಟನೆಗಳು ಸರ್ಕಾರಕ್ಕೆ ಮನವಿಯನ್ನು ಅರ್ಪಿಸಿ, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲು ತಯಾರಿ ನಡೆಸಿವೆ. ಇಷ್ಟೇ ಅಲ್ಲದೆ, ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ತರತುರಿಯಲ್ಲಿ ಏಕಗವಾಕ್ಷಿ ಪ್ರಕ್ರಿಯೆ ಮುಖೇನ ಸಂದರ್ಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಇನ್ನೂ ಸಿದ್ಧಗೊಂಡಿರದ ನಿವೇಶನಗಳನ್ನು ಹಂಚಿ ಬಿಡುವ ಹುನ್ನಾರ ನಡೆಸಿದ್ದು, ಈ ಪ್ರಕ್ರಿಯೆಯನ್ನು ತಡೆಯಬೇಕೆಂದು ದಲಿತ ಕೈಗಾರಿಕೋದ್ಯಮಿ ಸಂಘಟನೆಗಳು ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರನ್ನು ಭೇಟಿ ಮಾಡಿ ಸ್ಥಿತಿಯನ್ನು ವಿವರಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸುವುದು, ಅಲ್ಲದೆ ಈ ಹುನ್ನಾರದಿಂದ ಕೈಗಾರಿಕೋದ್ಯಮಿಗಳಿಗೆ ಆಗುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳ ಕಚೇರಿಯನ್ನು ಸಂಪರ್ಕಿಸಿ ಪ್ರಧಾನ ಮಂತ್ರಿಗಳಿಗೂ ಈ ಸಂಬಂಧ ಕ್ರಮ ವಹಿಸಲು ನಿರ್ದೇಶಿಸುವ ಕ್ರಮಕ್ಕಾಗಿ ಕಾಯುತ್ತಿವೆ. ಮುಂದುವರಿದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕ, ರಾಜ್ಯ ಎಸ್ಸಿ ಎಸ್ಟಿ ಫೆಡರೇಷನ್ ಹಾಗೂ ಇನ್ನಿತರ ದಲಿತ ಸಂಸ್ಥೆಗಳು ಈ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಯೋಜನೆಗಳನ್ನು ರೂಪಿಸುತ್ತಿವೆ.
ನಾಡಿನ ಕೈಗಾರಿಕೋದ್ಯಮವನ್ನು ಪೋಷಿಸಬೇಕಾದ ಸಂಸ್ಥೆಗಳೇ ಈ ರೀತಿಯಾದರೆ, ಕೈಗಾರಿಕಾ ಕ್ಷೇತ್ರದ ಪ್ರಗತಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ. ಈಗಲಾದರೂ ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಯು ಎಚ್ಚೆತ್ತುಕೊಳ್ಳುವುದೇ ಕಾದು ನೋಡೋಣ..!
ವಿಶೇಷ ವರದಿ: ಬಿಗ್ ಕನ್ನಡ ನ್ಯೂಸ್ ಡೆಸ್ಕ್