ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿಗೆ ಕೂಗು ಹೆಚ್ಚಾಗಿದೆ. ಇದರ ಜತೆಗೆ, ಬಿಹಾರದ ಮುಖ್ಯಮಂತ್ರಿಗಳು ಎಲ್ಲಾ ಅಡೆತಡೆಗಳನ್ನೂ ದಾಟಿ ಜಾತಿಗಣತಿಯ ಸಮೀಕ್ಷೆಯನ್ನು ಬಿಡುಗಡೆ ಮಾಡಿರುವುದು, ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಜಾತಿ ರಾಜಕಾರಣವೇ ಮೇಲಾಗಿರುವ ಭಾರತದಲ್ಲಿ ಈ ರೀತಿಯ ನಿಖರ, ವೈಜ್ಞಾನಿಕ ಲೆಕ್ಕಾಚಾರಗಳು, ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲವು. ಇದಕ್ಕೆ ಪೂರಕವಾಗಿ, ನ್ಯಾಯಾಲಯಗಳು ಕೂಡ ವೈಜ್ಞಾನಿಕ ಜಾತಿ ಸಮೀಕ್ಷೆ ಮಾಡಿ ಎಂದು ಪದೇ ಪದೇ ಹೇಳುತ್ತಾ ಬಂದಿವೆ. ಈ ನಿಟ್ಟಿನಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಮಾನ್ಯ ಸಿದ್ದರಾಮಯ್ಯನವರ ಸರ್ಕಾರ, ಕಾಂತರಾಜ್‌ ಆಯೋಗದ ಮೂಲಕ ʻಜಾತಿವಾರು ಸಮೀಕ್ಷೆಯನ್ನು ಮಾಡಿಸಿತ್ತು. ಕಾಂತರಾಜ್ ಆಯೋಗ ಸಮಗ್ರ ಜಾತಿ ಸಮೀಕ್ಷೆ ಸಿದ್ದಗೊಳಿಸಿದ್ದರು. ಆದರೆ ನಾನಾ ಲಾಭಿಗಳು, ಒತ್ತಡಗಳ ಕಾರಣ ಸಿದ್ದರಾಮಯ್ಯನವರ ಸರ್ಕಾರವೂ ಸೇರಿದಂತೆ, ಆನಂತರ ಬದಲಾದ ಮೂರೂ ಮುಖ್ಯಮಂತ್ರಿಗಳ ಸರ್ಕಾರಗಳು ಈ ವರದಿ ಒಪ್ಪಿಕೊಳ್ಳಲು ಸಿದ್ದರಾಗಿರಲಿಲ್ಲ.

ಈ ವರದಿಯನ್ನು ರೂಪಿಸಲು ಕಾರಣೀಭೂತರಾದ ಶ್ರೀ ಸಿದ್ದರಾಮಯ್ಯನವರೇ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಬಿಹಾರದಲ್ಲಿ ಬಿಡುಗಡೆಯಾದ ಜಾತಿವಾರು ವರದಿಯ ಹಿನ್ನೆಲೆಯಲ್ಲಿ, ಕಾಂತರಾಜ್‌ ಆಯೋಗದ ವರದಿಯನ್ನು ಬಿಡುಗಡೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಲೇಖಕ ಹಾಗೂ ಪತ್ರಕರ್ತ ಕೆ.ಜೆ.ಹಳ್ಳಿ ಸುರೇಶ್‌ ಅವರು ಬಿಗ್‌ ಕನ್ನಡಕ್ಕಾಗಿ ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು, ಹಿಂದುಳಿದ ಆಯೋಗಗಳ ಮಾಜಿ ಅಧ್ಯಕ್ಷರು, ನ್ಯಾಯವಾದಿಗಳೂ ಆದ ಕಾಂತರಾಜ್ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಕೆ.ಜೆ.ಹಳ್ಳಿ ಸುರೇಶ್: ಹೇಗಿದ್ದೀರಿ? ನಿಮ್ಮ ಸಾಮಾಜಿಕ ಕಾರ್ಯಚಟುವಟಿಕೆಗಳು ಹೇಗೆ ನಡೆಯುತ್ತಿವೆ?

ಕಾಂತರಾಜ್:‌ ಚನ್ನಾಗಿದ್ದೇನೆ. ನ್ಯಾಯವಾದಿ ಕೆಲಸ ಹೃದಯಕ್ಕೆ ಹತ್ತಿರವಾಗಿರುವ ಕೆಲಸ. ಈ ವೃತ್ತಿಯಿಂದ ತಳಸಮುದಾಯಗಳ ಬಗೆಗಿನ ಕಾಳಜಿ, ಸಂವಿಧಾನವನ್ನು ಮತ್ತಷ್ಟು ಅರ್ಥಮಾಡಿಕೊಳ್ಳುವುದು ಅವಕಾಶವಂಚಿತ ಜನರ ಸಾಮಾಜಿಕ ನ್ಯಾಯಕ್ಕಾಗಿ ತುಡಿಯುವ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಹಿಂದುಳಿದ ಆಯೋಗದಲ್ಲಿ ಎರಡು ಬಾರಿ ಕೆಲಸ ಮಾಡಿದ್ದೇನೆ, ರವಿವರ್ಮಕುಮಾರ್ ಆಯೋಗದಲ್ಲಿ 1998ರಿಂದ 2000ರವರೆಗೆ ಸದಸ್ಯನಾಗಿದ್ದೆ. ನಂತರ 2014ರಿಂದ 2019ರ ತನಕ ಹಿಂದುಳಿದ ವರ್ಗಳ ಆಯೋಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ.

ಕೆ.ಜೆ.ಹಳ್ಳಿ ಸುರೇಶ್:‌ ಬಲಾಢ್ಯ ಮತ್ತು ದುರ್ಬಲ ಸಮುದಾಯಗಳು ಏಕಕಾಲಕ್ಕೆ ಮೀಸಲಾತಿ, ಮೀಸಲಾತಿ ಹೆಚ್ಚಳ ಬೇಡಿಕೆ ಮುಂದಿಟ್ಟು ತೀವ್ರ ಹೋರಾಟ ನಡೆಸುತ್ತಿವೆ. ಈ ಹೋರಾಟಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕಾಂತರಾಜ್:‌ ನೋಡಿ ನಮ್ಮ ಭಾರತ ಸಂವಿಧಾನ ಹೇಳುವುದು ಏನೆಂದರೆ ಸಮಾಜದಲ್ಲಿ ಸಮಾನತೆ ಬರಬೇಕು, ಅಸಮಾನತೆ ವಿರುದ್ಧವಾಗಿ ಕೆಲಸ ಮಾಡಬೇಕು. ಅಂದ್ರೆ ದೇಶ ರಾಜ್ಯಗಳಲ್ಲಿರುವಂತಹ ಸಂಪತ್ತು ಎಲ್ಲಾ ಕ್ಷೇತ್ರಗಳಲ್ಲೂ ಸಮನಾಗಿ ಹಂಚಿಕೆಯಾಗಬೇಕು. ಸಬಲ ಜಾತಿಗಳು ಮೀಸಲಾತಿ ಹೆಚ್ಚಳ, ಪ್ರವರ್ಗ ಬದಲು ಮಾಡಲು ಆಗ್ರಹಿಸುತ್ತಿವೆ. ಅವರಿಗೆ ಕೇಳುವ ಅವಕಾಶವಿದೆ. ಆದರೆ ನಿಜವಾಗಿಯೂ ಯಾರು ಸಬಲರು, ಯಾರು ಆಶಕ್ತರು ಎನ್ನುವುದನ್ನು ಸರ್ಕಾರ, ಹಿಂದುಳಿದ ವರ್ಗದ ಆಯೋಗ ತೀರ್ಮಾನ ಮಾಡುತ್ತದೆ.

ಆಯೋಗಕ್ಕೆ ಬಂದು ಯಾವ ಸಮುದಾಯಗಳು ಬೇಕಾದರೂ ಬಂದು, ಮೀಸಲಾತಿ, ಪ್ರವರ್ಗ ಬದಲಾವಣೆ ಕುರಿತು ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿಗೆ ಅರ್ಹರನ್ನು ಗುರುತಿಸಬೇಕಾಗುತ್ತದೆ. ಸಂವಿಧಾನ ಹೇಳುವುದೇನೆಂದರೆ ಯಾರು ಹಿಂದುಳಿದ ವರ್ಗದವರು ಎನ್ನುವುದನ್ನು ತೀರ್ಮಾನ ಮಾಡಬೇಕಾದರೆ, ಯಾರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೋ ಅಂಥ ಸಮುದಾಯಗಳನ್ನು ಹಿಂದುಳಿದ ವರ್ಗಗಳು ಎಂದು ಗುರುತಿಸಿ, ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು. ಉದ್ಯೋಗಳಲ್ಲಿ ಅವಕಾಶ ವಂಚಿತರಾಗಿದ್ದರೆ, ಅಲ್ಲಿಯೂ ಮೀಸಲಾತಿ ಕಲ್ಪಿಸಬೇಕು ಎಂದು ಸಂವಿಧಾನ ಹೇಳುತ್ತದೆ.

ಜಾತಿಗಣತಿ ಮಾಡಿದ ಕಾಂತರಾಜ್
ಕಾಂತರಾಜ್‌ ಅವರೊಂದಿಗೆ ಕೆ.ಜೆ.ಹಳ್ಳಿ ಸುರೇಶ್

ಕೇಂದ್ರ ಸರ್ಕಾರದಲ್ಲಾದರೆ ಕೇಂದ್ರದವರು ಆಯೋಗ ರಚನೆ ಮಾಡುತ್ತಾರೆ. ನಾವು ಇಲ್ಲಿ ಒಂದು ತಿಳಿದುಕೊಳ್ಳಬೇಕು ಕೇಂದ್ರ ಸರ್ಕಾರದ ಮೀಸಲಾತಿ ಪಟ್ಟಿನೇ ಬೇರೆ ಇರುತ್ತೆ. ರಾಜ್ಯಕ್ಕೆ ಸಂಬಂಧಪಟ್ಟಂತೆ, ಮತ್ತೆ ರಾಜ್ಯದ ಒಳಗೆ ಬೇರೆ ಇರುತ್ತೆ. ಕೇಂದ್ರ ಸರ್ಕಾರದಲ್ಲಿ ಮೀಸಲಾತಿ ಬೇಕು ಅಂದ್ರೆ, ಕೇಂದ್ರ ಸರ್ಕಾರ ಆಯೋಗವನ್ನು ರಚನೆ ಮಾಡಿದೆ ಅಲ್ಲಿ ಮೀಸಲಾತಿ ಪಡೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರದಲ್ಲಾದರೆ ಹಿಂದುಳಿದ ವರ್ಗಗಳ ಆಯೋಗ ಇದೆ. ಆಯೋಗಗಳು ಮೀಸಲಾತಿಯನ್ನ ನಿಗದಿ ಮಾಡಲು ಮುಖ್ಯ ಸಮುದಾಯವಾರು ಅಂಕಿಅಂಶಗಳು ಬೇಕು. ಸುಮ್ಮನೆ ಮೀಸಲಾತಿ ಕೊಡಿ ಎಂದು ಪ್ರಬಲ ಜಾತಿಗಳು ಹೋರಾಟ ಮಾಡಿದರೆ ಮೀಸಲಾತಿ ಸಿಗುವುದಿಲ್ಲ. ಸರ್ಕಾರದ ಮೂಲಕ ಅಧಿಕೃತ ಸಮೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಮೀಸಲಾತಿ ಪಡೆಯಬೇಕು.

ಕೆ.ಜೆ.ಹಳ್ಳಿ ಸುರೇಶ್: ಪ್ರಬಲ ಜಾತಿಗಳು ಮೀಸಲಾತಿಗಾಗಿ ಸರ್ಕಾರವನ್ನು ಬ್ಲಾಕ್ಮೇಲ್ ಮಾಡುತ್ತಿವೆ, ಹಿಂದುಳಿದ ವರ್ಗ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ?

ಕಾಂತರಾಜ್:‌ ನೋಡಿ ಹಿಂದುಳಿದ ವರ್ಗಗಳ ಆಯೋಗ ಸಾಂವಿಧಾನಿಕ ಸ್ವತಂತ್ರವಾದ ಸಂಸ್ಥೆ. ಸರ್ಕಾರ ಹೀಗೆ ಮಾಡಿ ಹಾಗೆ ಎಂದು ಆಯೋಗಗಳ ಅಧ್ಯಕ್ಷರಿಗೆ ಹೇಳುವುದು ಸರಿಯಲ್ಲ. ಆಯೋಗ ಸರ್ಕಾರದ ಒತ್ತಡಕ್ಕೆ ಒಳಗಾಗದೆ ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕು. ಆಯೋಗದ ಅಧ್ಯಕ್ಷರು ಸಮುದಾಯಗಳ ಕಡೆಯಿಂದ ಅರ್ಜಿ ಬಂದಾಗ ಸಮುದಾಯದ ಜನಸಂಖ್ಯೆ, ಇತಿಹಾಸ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿ ಉದ್ಯೋಗದ ಮಾಹಿತಿ ಇವೆಲ್ಲವುಗಳ ಅಧ್ಯಯನ ಆಧರಿಸಿ ಆಯೋಗ ಕೆಲಸ ಮಾಡಬೇಕಾಗುತ್ತದೆ.

ಕೆ.ಜೆ.ಹಳ್ಳಿ ಸುರೇಶ್: ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ನೀವು ಜಾತಿ ಸಮೀಕ್ಷೆ ಎನ್ನುವ ಮಹತ್ತರ ಕೆಲಸ ಮಾಡಿದಿರಿ, ಯಾವ ಉದ್ದೇಶಕ್ಕೆ ಸಮೀಕ್ಷೆ ಮಾಡಿದಿರಿ? ಆ ಸಮೀಕ್ಷೆ ಕಾರ್ಯ ಚಟುವಟಿಕೆಗಳು ಹೇಗಿದ್ದವು?

ಕಾಂತರಾಜ್:‌ 1950ರಲ್ಲಿ ಸಂವಿಧಾನ ಜಾರಿಗೆ ಬಂತು. ಬಂದಾದ ಮೇಲೆ ಮೀಸಲಾತಿ ಪರಿಶಿಷ್ಟ ಜಾತಿಗಳಿಗೂ ಇದೆ ಪರಿಶಿಷ್ಟ ಪಂಗಡಗಳಿಗೂ ಇದೆ. ಹಿಂದುಳಿದ ವರ್ಗಗಳಿಗೂ ಇದೆ, ಇತರೆ ಹಿಂದುಳಿದ ವರ್ಗಗಳಿಗೂ ಇದೆ. ಇತರೆ ಹಿಂದುಳಿದ ವರ್ಗಗಳು ಯಾರು ಅಂದ್ರೆ ಯಾರು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡವಲ್ಲವೂ ಅವರನ್ನು ಬಿಟ್ಟು ಈ ಚೌಕಟ್ಟಿನ ಒಳಗಡೆ ಇರುವರನ್ನು ಇತರೆ ಹಿಂದುಳಿದ ವರ್ಗಗಳು ಎಂದು ಕರೆಯುತ್ತಾರೆ. ಇತರೆ ಹಿಂದುಳಿದ ವರ್ಗಗಳ ಮಾಹಿತಿ ಜನಗಣತಿಯಲ್ಲಿ ಜಾತಿವಾರು ಸಿಗುತ್ತಿರಲಿಲ್ಲ .

1931ರ ನಂತರ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಮನೆಮನೆಗೆ ತೆರಳಿ ಜಾತಿ ಸಮೀಕ್ಷೆ ಮಾಡಿದ್ದು 2015ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ. ಆಗ ನಾನು ಹಿಂದುಳಿದ ಆಯೋಗದ ಅಧ್ಯಕ್ಷನಾಗಿದ್ದಾಗ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದೇನೆ. ಈ ಸಮಗ್ರ ಜಾತಿ ಸಮೀಕ್ಷೆಯನ್ನು ಯಾವ ಉದ್ದೇಶಕ್ಕಾಗಿ ಮಾಡಲಾಯ್ತು ಅಂದ್ರೆ, ಹಿಂದುಳಿದ ವರ್ಗಗಳು ಹಾಗೂ ಇತರೆ ಸಮುದಾಯಗಳಿಗೆ ಮೀಸಲಾತಿ ಎಷ್ಟು ಬೇಕು ಎನ್ನುವ ಅಧ್ಯಯನಗಳಾಗಬೇಕು. ಈಗ 50% ಮೀಸಲಾತಿ ಮೀರುವಂತಿಲ್ಲ ಎನ್ನುವ ತತ್ವವನ್ನು ಅಳವಡಿಕೊಂಡು ಬರಲಾಗಿದೆ. ಆದ್ರೆ 50% ಮೀರಿ ಹೆಚ್ಚಿನ ಪ್ರಮಾಣದಲ್ಲಿ ಹಿಂದುಳಿದ ವರ್ಗಗಳು ಇದ್ದರೆ ಏನು ಮಾಡಬೇಕು? ಎಷ್ಟು ಜನ ಹಿಂದುಳಿದವರು ಇದ್ದಾರೊ ಅವರೆಲ್ಲರಿಗೂ ಮೀಸಲಾತಿ ಕೊಡಬೇಕಲ್ಲವೆ? ಪ್ರತಿ ಬಾರಿಯೂ ನ್ಯಾಯಾಲಯಗಳು ಅಂಕಿ ಅಂಶಗಳನ್ನು ಕೇಳುತ್ತಿದೆ ಹಾಗಾಗಿ ನಮ್ಮ ವೈಜ್ಞಾನಿಕ ಸಮಗ್ರ ಜಾತಿ ಸಮೀಕ್ಷೆಯಲ್ಲಿ ಈ ಸಮಸ್ಯೆಗೆ ಉತ್ತರವಿದೆ.

ಈ ಸಮೀಕ್ಷೆಯಲ್ಲಿ 55 ಪ್ರಶ್ನೆಗಳನ್ನ ಕೇಳಿದ್ದೇವೆ. ನಿಮ್ಮ ಜಾತಿ ಯಾವುದು? ಧರ್ಮ ಯಾವುದು? ಮನೆ ಇದಿಯಾ? ಇಲ್ಲವಾ? ಹೀಗೆ ವಿವಿಧ ಪ್ರಶ್ನೆಗಳನ್ನು ಕೇಳಿದ್ದೇವೆ. ನಾವಷ್ಟೆ ಅಲ್ಲದೇ ಹಿಂದಿನ ಹಿಂದುಳಿದ ಆಯೋಗಗಳ ಅಧ್ಯಕ್ಷರು, ಅವರ ಕೆಲಸ ಕಾರ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡಿದ್ದೇವೆ.

ಕೆ.ಜೆ.ಹಳ್ಳಿ ಸುರೇಶ್: ಈ ಸಮೀಕ್ಷೆಗೆ ಎಷ್ಟು ಹಣ ಖರ್ಚಾಯ್ತು? ಸಮೀಕ್ಷೆಯ ಕಾರ್ಯದಲ್ಲಿ ಎಷ್ಟು ಜನರನ್ನ ಬಳಸಿಕೊಳ್ಳಲಾಯ್ತು?

ಕಾಂತರಾಜ್:‌ ನೋಡಿ ಈ ಸಮೀಕ್ಷೆಯನ್ನು ಮನೆ ಮನೆಗೆ ತೆರಳಿ ಮಾಡಿರುವಂತಹುದು. ಈ ಸಮೀಕ್ಷೆ ಕೇವಲ ಹಿಂದುಳಿದ ವರ್ಗಗಳು ಸೇರಿದಂತೆ ಕೆಲವೆ ಜಾತಿಗಳಿಗೆ ಸೀಮಿತವಾಗಿಲ್ಲ. ರಾಜ್ಯದಲ್ಲಿರುವ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮೀಕ್ಷೆಯಾಗಿದೆ. ಮನೆ ಇದ್ದವರ, ಮನೆ ಇಲ್ಲದವರ, ಗುಡಿಸಿಲಲ್ಲಿ ವಾಸ ಮಾಡುವವರ, ಗುಡ್ಡಗಳಲ್ಲಿ ವಾಸ ಮಾಡುವರ ಹೀಗೆ ಎಲ್ಲಾ ವಲಯದ ಜನರ ಸಾಮಾಜಿಕ ಸ್ಥಿತಿಗತಿಯ ಸಮಗ್ರ ಮಾಹಿತಿಯನ್ನ ಕಲೆ ಹಾಕಿದ್ದೇವೆ. ಈ ಸಮೀಕ್ಷೆಗೆ 168 ಕೋಟಿ ಹಣ ಖರ್ಚು ಮಾಡಲಾಡಲಾಗಿದೆ. 1ಲಕ್ಷದ 60 ಸಾವಿರ ಅಧಿಕಾರಿಗಳು ಸಿಬ್ಬಂದಿಗಳು ಸಹಾಯಕರನ್ನು ಬಳಸಿಕೊಳ್ಳಲಾಗಿದೆ. ಈ ಸಮೀಕ್ಷೆಯ ಉದ್ದೇಶ ಇಷ್ಟೇ ಯಾರು ಮೀಸಲಾತಿ ವಂಚಿತರಾಗಿದ್ದಾರೆ, ಯಾರಿಗೆ ಸಾಮಾಜಿಕ ನ್ಯಾಯದ ಅವಶ್ಯಕತೆ ಇದೆ, ಅಂಥವರಿಗೆ ನ್ಯಾಯ ಒದಗಿಸುವ ಸಮುದಾಯಗಳ ವಾಸ್ತವ ಸ್ಥಿತಿಗತಿ ಅರಿಯುವ ಉದ್ದೇಶವಾಗಿದೆ.

ಕೆ.ಜೆ.ಹಳ್ಳಿ ಸುರೇಶ್: ಸುಮಾರು ಮೂರು ವರ್ಷ ನೀವು ಕಷ್ಟಪಟ್ಟು ಸಂಗ್ರಹಿಸಿ ಮಾಹಿತಿಯನ್ನೊಳಗೊಂಡ ವರದಿಯ ಸದ್ಯದ ಸ್ಥಿತಿ ಏನು? ವರದಿ ಸದ್ಯ ಯಾರ ಸುಪರ್ದಿಯಲ್ಲಿದೆ?

ಕಾಂತರಾಜ್:‌ ನಾವು ಸಮೀಕ್ಷೆಯನ್ನು ಸಿದ್ದಗೊಳಿಸಿದ್ದೇವೆ, ಸರ್ಕಾರ ಈ ಸಮೀಕ್ಷೆಯನ್ನು ಪಡೆದು ಅನುಷ್ಟಾನಕ್ಕೆ ತರಬೇಕು. ಆಯೋಗ ಸಾಮಾಜಿಕ ಕಳಕಳಿಯಿಂದ ನಡೆಸುವ ಅಧ್ಯಯನ, ಸಮೀಕ್ಷೆಗಳನ್ನ ನಿರ್ಲಕ್ಷ್ಯ ಮಾಡದೆ ಜಾರಿಮಾಡುವ ಬಗ್ಗೆ ಪ್ರಬಲ ಕಾಯ್ದೆ ರೂಪಿಸುವ ಅಗತ್ಯತೆ ಇದೆ.

ಕೆ.ಜೆ.ಹಳ್ಳಿ ಸುರೇಶ್: ವರದಿಯಲ್ಲಿ ಸೆಕೆಂಡರಿ ಸೋರ್ಸ್ ಆಫ್ ಡೇಟಾ ಅಡಕ ಮಾಡಿಲ್ಲ ಎಂಬ ಮಾತಿದೆ. ಆ ಬಗ್ಗೆ ಆಯೋಗದ ಸಭೆಯಲ್ಲಿ ಕೂಡ ಚರ್ಚೆ ನಡೆದಿತ್ತಂತೆ.. ಹೌದೇ?

ಕಾಂತರಾಜ್:‌ ನಾವು ಸೆಕೆಂಡರಿ ಸೋರ್ಸ್ ಆಫ್ ಡೇಟಾವನ್ನು ಸಂಬಂಥ ಪಟ್ಟ ಇಲಾಖೆಗೆಗಳಿಗೆ ಪತ್ರ ಬರೆದು ಪಡೆದಿದ್ದೇವೆ, ಆದರೆ 100ಕ್ಕೆ ನೂರಷ್ಟು ಕಲೆ ಹಾಕಿದ್ದೇವೆ ಎಂದು ನಾವು ಹೇಳುತ್ತಿಲ್ಲ. ಎಷ್ಟು ಸಾಧ್ಯವೋ ಅಷ್ಟು ನಿಖರ ಮಾಹಿತಿ ಪಡೆದಿದ್ದೇವೆ.

ಕೆ.ಜೆ.ಹಳ್ಳಿ ಸುರೇಶ್: ಸಿದ್ದರಾಮಯ್ಯ ಅವರು ಜಾತಿ ಲೆಕ್ಕಾಚಾರದ ಮಾಹಿತಿ ಪಡೆಯಲು ಈ ಸಮೀಕ್ಷೆ ಮಾಡಿಸಿದರು ಅನ್ನೋ ಆರೋಪವಿದೆಯಲ್ಲ?

ಕಾಂತರಾಜ್:‌ ಅದೆಲ್ಲವೂ ಸುಳ್ಳು. ಸಾಮಾಜಿಕ ನ್ಯಾಯದ ಚಿಂತನೆ ಅಡಿಯಲ್ಲಿ ಈ ಸಮೀಕ್ಷೆ ಮಾಡಲಾಗಿದೆ. ಕೆಲವರು ಪ್ರಾರಂಭದಲ್ಲಿ ಜಾತಿ ಸಮೀಕ್ಷೆ ಬೇಕಾ ಎನ್ನುವ ತಗಾದೆ ತೆಗೆದರು, ಯಾರು ಏನೇ ಅಂದುಕೊಳ್ಳಲ್ಲಿ ಜಾತಿ ಸಮೀಕ್ಷೆ ಸಾಮಾಜಿಕ ಅವಜ್ಞೆ ಒಳಗಾದವರಿಗೆ ವರದಾನವಾಗಲಿದೆ.

ಕೆ.ಜೆ.ಹಳ್ಳಿ ಸುರೇಶ್: ಹಾಗಿದ್ದರೆ ಏಕೆ ನಿಮ್ಮ ಸಮೀಕ್ಷೆಯನ್ನು ಯಾವ ಸರ್ಕಾರಗಳು ಒಪ್ಪಿಕೊಳ್ಳಲು ತಯಾರಿಲ್ಲ?

ಕಾಂತರಾಜ್: ಸರ್ಕಾರಗಳಿಗೆ ಸಾಮಾಜಿಕ ಬದ್ಧತೆ ಬೇಕಾಗಿದೆ. ನಿಜಕ್ಕೂ ಇಂಥಾ ಸಮೀಕ್ಷೆಗಳನ್ನು ಅನುಷ್ಟಾನಕ್ಕೆ ತಂದರೆ ಜನರಿಗೂ ನ್ಯಾಯ ಸಿಕ್ಕಂತಾಗುತ್ತದೆ.

ಮುಕ್ತಾಯ…

Leave a Reply

Your email address will not be published. Required fields are marked *