ಬೆಂಗಳೂರು: ಎಲ್ಲರೂ ಸಹಮತದಿಂದ ಒಳಮೀಸಲಾತಿ ನಿರ್ಣಯವನ್ನು ಮಾಡಿದ್ದೇವೆ.ಸಾಮಾಜಿಕ ನ್ಯಾಯ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಮಾದಿಗ ಸಮುದಾಯವೂ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ಸುಪ್ರೀಂ ಕೋರ್ಟ್ ಕೂಡ ತೀರ್ಪನ್ನು ನೀಡಿದೆ.ಆದ್ದರಿಂದ ಒಳಮೀಸಲಾತಿಯನ್ನು ಜಾರಿ ಮಾಡಲೇಬೇಕಿದೆ ಎಂದು ತಿಳಿಸಿದ್ದಾರೆ.
ಸಮುದಾಯಗಳನ್ನು ಪರಸ್ಪರ ಸುಳ್ಳುಗಳ ಮೂಲಕ ಎತ್ತಿಕಟ್ಟುವ ಬಿಜೆಪಿ ಕೇಂದ್ರದಲ್ಲಿ ಏಕೆ ಎಸ್.ಸಿ.ಎಸ್.ಟಿ/ಟಿ.ಎಸ್.ಪಿ ಕಾಯ್ದೆ ಜಾರಿ ಮಾಡಲಿಲ್ಲ? ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯಗಳಲ್ಲೂ ನಾವು ಜಾರಿ ಮಾಡಿದ ಎಸ್.ಸಿ.ಎಸ್.ಟಿ/ಟಿ.ಎಸ್.ಪಿಕಾಯ್ದೆಯನ್ನು ಅವರೇಕೆ ಮಾಡಲಿಲ್ಲ ಹೇಳಿ. ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ. ಬಿಜೆಪಿಯ ಯಾವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ. ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ರಾಜ್ಯ ಮಾತ್ರ.ಇದು ನನ್ನ ಕಮಿಟ್‌ಮೆಂಟ್.ರಾಜಕಾರಣಕ್ಕಾಗಿ ಇದೆಲ್ಲಾ ಮಾಡಿದ್ದಲ್ಲ. ಇದರ ಮುಂದುವರೆದ ಭಾಗವಾಗಿಯೇ ಒಳಮೀಸಲಾತಿ ಜಾರಿಗೆ ಮುಂದಾಗಿದ್ದೇವೆ. ಹೊಸ ಆಯೋಗದ ವರದಿ ನಿಗದಿತ ಸಮಯದೊಳಗೆ ಬರುವ ನಿರೀಕ್ಷೆ ಇದೆ. ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ ಮಾಡಲಾಗುವುದು.
ಒಳಮೀಸಲಾತಿ ಕುರಿತ ಸಚಿವ ಸಂಪುಟದ ನಿರ್ಣಯಕ್ಕಾಗಿ ಇಂದು ನನ್ನನ್ನು ಅಭಿನಂದಿಸಿದ ಮಾದಿಗ ಸಮುದಾಯದ ರಾಜ್ಯ ಮುಖಂಡರು, ಒಳಮೀಸಲಾತಿ ಹೋರಾಟದ ನಾಯಕರು, ಪದಾಧಿಕಾರಿಗಳು ಮತ್ತು ಸಮುದಾಯದ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದೆ.