ನಿಮಗೆಲ್ಲಾ ರಾಮಾಯಣದಲ್ಲಿ ಬರುವ ದುರಂತ ಪಾತ್ರ ಶಂಭೂಕ ವಧೆಯ ಕತೆ ಗೊತ್ತಿರುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಶಂಭೂಕನ ವಧೆಯನ್ನು ಹೀಗೆ ಚಿತ್ರಿಸಲಾಗಿದೆ. ಒಂದು ದಿನ ಬ್ರಾಹ್ಮಣನೊಬ್ಬ ಅಕಾಲ ಮೃತ್ಯುವಿಗೆ ತುತ್ತಾದ ತನ್ನ ಮಗನನ್ನು ಹೊತ್ತು, ರೋಧಿಸುತ್ತಾ ರಾಜದ್ವಾರವನ್ನು ಪ್ರವೇಶಿಸುತ್ತಾನೆ. “ನನ್ನ ಮಗನ ಅಕಾಲ ಮೃತ್ಯುವಿಗೆ ರಾಮನೇ ಹೊಣೆ, ರಾಜ್ಯಾಡಳಿತದಲ್ಲಾದ ಯಾವುದೋ ಅಕಾರ್ಯವೇ ನನ್ನ ಮಗನ ಸಾವಿಗೆ ಕಾರಣವಾಗಿದೆ. ರಾಮ ನನ್ನ ಮಗನನ್ನು ಬದುಕಿಸಿಕೊಡು, ಇಲ್ಲದಿದ್ದರೆ ನನ್ನ ಪತ್ನಿಯೊಡನೆ ಈ ರಾಜದ್ವಾರದ ಬಳಿಯೇ ಪ್ರಾಣಬಿಡುತ್ತೇವೆ. ಆಗ ನಿನಗೆ ಬ್ರಹ್ಮಹತ್ಯಾ ದೋಷವು ಗಂಟು ಬೀಳುತ್ತದೆ” ಎಂದು ಮಗನ ಸಾವಿನ ಸಂಕಟದಿಂದ ರಾಮನನ್ನು ವಿಧ ವಿಧವಾಗಿ ನಿಂದಿಸುತ್ತಾನೆ.
ನಂತರ ಮೃತ ಶಿಶುವಿನ ತಂದೆಯ ಆರ್ತನಾದವನ್ನು ಕೇಳಿದ ರಾಮ, ಶಿಶುವಿನ ಮರಣದ ನಿಜ ಕಾರಣವನ್ನು ತಿಳಿಯಲು ಎಂಟು ಋಷಿಗಳನ್ನೊಳಗೊಂಡ ಒಂದು ತುರ್ತು ಸಭೆಯನ್ನು ಏರ್ಪಡಿಸುತ್ತಾನೆ. ಆ ಸಭೆಯಲ್ಲಿ ಎಂಟು ಋಷಿಗಳ ಪರವಾಗಿ ನಾರದರು ತೇತ್ರಾಯುಗದಲ್ಲಿ ಶೂದ್ರನಿಗೆ ತಪಸ್ಸಿನ ಅಧಿಕಾರವಿಲ್ಲವಾದ್ದರಿಂದ ನಿನ್ನ ರಾಜ್ಯದಲ್ಲಿ ಯಾರೋ ಅಬ್ರಾಹ್ಮಣನೊಬ್ಬ ತಪಸ್ಸು ಮಾಡುತ್ತಿರಬೇಕು ಆದ್ದರಿಂದಲೇ ಈ ಬಾಲಕನ ಸಾವಾಗಿದೆ ಎಂದು ಹೇಳುತ್ತಾನೆ.
ನಂತರ ಶ್ರೀರಾಮ ಪುಷ್ಪಕ ವಿಮಾನವನ್ನೇರಿ ಆ ತಪಸ್ವಿಯ ಅನ್ವೇಷಣೆಗೆ ಹೊರಡುತ್ತಾನೆ. ಆಗ ಸರಸ್ಸಿ ತೀರದಲ್ಲೊಬ್ಬ ತಲೆಕೆಳಗಾಗಿ ನೇತಾಡುತ್ತಾ ತಪಸ್ಸಿನಲ್ಲಿ ನಿರತನಾಗಿರುವುದನ್ನು ಕಂಡು, ಸಮೀಪಕ್ಕೆ ಬಂದು ಗೌರವ ಪೂರ್ಣವಾಗೆ ಕೇಳುತ್ತಾನೆ. “ಎಲೈ ತಪೋನಿಷ್ಟನೆ, ನೀನು ಯಾರು? ಯಾವ ಯೋನಿಯಲ್ಲಿ ಜನಿಸಿದವನು? ನಿನ್ನ ತಪಸ್ಸಿನ ಉದ್ದೇಶ ಸ್ವರ್ಗಲೋಕ ಪ್ರಾಪ್ತಿಯೊ ಅಥವಾ ಅನ್ಯವರದ ಅಪೇಕ್ಷೆಯೂ? ನೀನು ಯಾವ ವರ್ಣದವನು?” ಇದಕ್ಕೆ ಉತ್ತರವಾಗಿ ಆ ತಪಸ್ವಿ, “ಶಂಬೂಕ ಎನ್ನುವುದು ನನ್ನ ಹೆಸರು, ನಾನು ಶೂದ್ರಯೋನಿಯಲ್ಲಿ ಜನಿಸಿದವನು. ಆದ್ದರಿಂದ ನನ್ನನ್ನು ಶೂದ್ರನೆಂದೇ ತಿಳಿ” ಎಂದು ಉತ್ತರಿಸುತ್ತಾನೆ. ಅಲ್ಲದೆ, “ನಾನು ಸ್ಥೂಲ ಶರೀರ ಸಹಿತನಾಗಿ ದೈವತ್ವ ಪ್ರಾಪ್ತಿ & ದೈವಲೋಕವನ್ನು ವಶಪಡಿಸಿಕೊಳ್ಳುವುದು ನನ್ನ ತಪಸ್ಸಿನ ಉದ್ದೇಶವೆಂದು” ಹೇಳುತ್ತಿದ್ದಂತೆಯೇ ರಾಮ ತನ್ನ ಹರಿತವಾದ ಖಡ್ಗದಿಂದ ಶಂಬೂಕನ ತಲೆಯನ್ನು ಕತ್ತರಿಸಿ ಹಾಕಿದ.
ಇದು ವಾಲ್ಮೀಕಿ ಕಥೆಯ ರಾಮ ಮತ್ತು ಶಂಭೂಕನಾದರೆ, ವಿಶ್ವಮಾನವ ಕುವೆಂಪು ಅವರ ʻಶೂದ್ರ ತಪಸ್ವಿʼಯ ಶಂಭೂಕನನ್ನು ವಧೆ ಮಾಡಲು ಬರುವ ರಾಮನೇ ಬೇರೆ. ತಪಸ್ಸು ಮಾಡುವ ಶೂದ್ರನನ್ನು ಹುಡುಕಿಕೊಂಡು ಬರುವ ರಾಮ, ತಪಸ್ಸಿಗೆ ಕುಳಿತಿರುವ ಶಂಭೂಕನ ಜತೆಗೆ ಮಾತುಕತೆಗೆ ಕೂತು ಧರ್ಮ, ಸತ್ಯ, ನ್ಯಾಯಗಳ ಕುರಿತು ಚರ್ಚಿಸುತ್ತಾನೆ. ಶೂದ್ರನೊಬ್ಬನ ತಪಸ್ಸಿನ ಮಹತ್ವವನ್ನು ಅರಿತ ರಾಮ, ಕುತಂತ್ರಿ ಅವಿವೇಕಿ ಬ್ರಾಹ್ಮಣರಿಗೆ ತಿಳಿಹೇಳುತ್ತಾನೆ.
ಭೀಮನಹಳ್ಳಿಯ ಕಾಟೇರನೂ ಒಂದರ್ಥದಲ್ಲಿ ಶಂಭೂಕನೇ ಹೌದು. ವೇದಶಾಸ್ತ್ರಗಳು ತನಗೆ ಕೊಟ್ಟ ಕೆಲಸಗಳನ್ನು ಮಾಡಿಕೊಂಡಿರುವುದು ಬಿಟ್ಟು, ಜಾತಿಗಳ ಸೃಷ್ಟಿಯ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಾನೆ. ಬಡವರ ಸಂಕಷ್ಟಗಳಿಗೆ ಕಿವಿಯಾಗುತ್ತಾನೆ, ಅವರ ನೋವಿಗೆ ಕೇವಲ ಬೆನ್ನೆಲುಬಾಗದೆ, ತನ್ನ ತೋಳು ಬಳಸಿ ಅವರನ್ನು ಕಾಪಾಡುವ ದೇವರಾಗಿಬಿಡುತ್ತಾನೆ. ಆದರೆ, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುವಷ್ಟು ಒಳ್ಳೆಯದೇ ಬ್ರಾಹ್ಮಣ್ಯ? ಅದು ತನ್ನ ನೀಚ ಆಟವನ್ನು ತೋರಿಸಲು ಶುರುವಾಗುತ್ತದೆ. ತಾನೇ ಸೃಷ್ಟಿಸಿದ ಹೊಲೆಮಾರಿಯ ಮೂಲಕ ಅವನ್ನು ಕೊಲ್ಲಲು ಸಂಚು ಹಾಕುತ್ತದೆ. ಅದು ಸಾಧ್ಯವಾಗದಿದ್ದಾಗ ಸರ್ಕಾರಿ ಯಂತ್ರ, ನ್ಯಾಯಾಂಗದ ಮೂಲಕವಾದರೂ ಇಲ್ಲವಾಗಿಸಲು ಸಂಚು ರೂಪಿಸುತ್ತದೆ. ಇದೆಲ್ಲದರಿಂದ ನಲುಗಿಹೋಗಿದ್ದ ಕಾಟೇರ ಅವನ ಆತ್ಮವೇ ಆಗಿದ್ದ ಪ್ರೀತಿಯನ್ನು ಕೊಂದುಹಾಕಿದ ಬ್ರಾಹ್ಮಣ್ಯದ ತಲೆಕಡಿದು, ಹೊಲೆಮಾರಿಗೆ ತಂದಿದ್ದ ಕೋಣನನ್ನು ಬಿಡುಗಡೆಗೊಳಿಸಿ, ಎಲ್ಲಾ ಜಾತಿಗಳಿಗೆ ಆದರ್ಶವಾಗುತ್ತಾನೆ. ಆದ್ದರಿಂದ ಈ ಕಾಟೇರನನ್ನು ಬ್ರಾಹ್ಮಣ್ಯದ ತಲೆಕಡಿದ ಶಂಭೂಕ ಎಂದೇ ನಾನು ಕರೆಯುತ್ತೇನೆ.
ಇದನ್ನೂ ಓದಿ: ಭೀಮ ಕೋರೆಗಾಂವ್‌ನ ಸಿದ್ಧನಾಕ; ಭೀಮನಹಳ್ಳಿಯ ಕಾಟೇರ!
ʻನನ್ನ ಜನಗಳ ಕೈಗೆ ಆಯುಧ ಹಿಡಿಯುವ ಅಧಿಕಾರ ಇದ್ದಿದ್ದರೆ ಈ ದೇಶ ಎಂದಿಗೂ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರಲಿಲ್ಲʼ ಎಂದು ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೋರೆಗಾವ್ ಯುದ್ಧವನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಹೌದು, ಈ ದೇಶಕ್ಕೆ ಅನ್ನ-ನೀರು ಹುಡುಕಿಕೊಂಡು ಬಂದ ಆರ್ಯರು, ಇಲ್ಲಿನ ಮೂಲನಿವಾಸಿಗಳನ್ನು ದೇವರು, ಧರ್ಮ, ಆಚರಣೆಗಳ ಭಯ ಹುಟ್ಟಿಸಿ ಬರಿಗೈ ಮಾಡಿದರು. ಅವರು ಮಾಡಿದ ಕೃತ್ಯದಿಂದ ಈ ದೇಶವನ್ನು ಆಳುತ್ತಿದ್ದ ರಾಜರುಗಳು, ಅವರ ಕುಡಿಗಳು ಸುಮಾರು ಎರಡೂವರೆ ಸಾವಿರ ವರ್ಷಗಳ ಕಾಲ ಗುಲಾಮರಾಗಿ ಬದುಕಿ, ಈ ನೆಲದ ಮೇಲಿನ ಅಧಿಕಾರವನ್ನೇ ಕಳೆದುಕೊಂಡರು. ಅಕಸ್ಮಾತ್ ಇಲ್ಲಿನ ಜಾತಿ ಹೆಸರಿನ ದೌರ್ಜನ್ಯಗಳು ನಡೆಯದೆ, ಎಲ್ಲರೂ ಆಯುಧಾಭ್ಯಾಸ, ಅಕ್ಷರಭ್ಯಾಸ ಮಾಡುವಂತಾಗಿದ್ದರೆ, ಈ ದೇಶವನ್ನು ಯಾರಾದರೂ ಯಾಕೆ ಆಕ್ರಮಣ ಮಾಡುತ್ತಿದ್ದರು. ಮೌಢ್ಯ, ಕಂದಾಚಾರ, ಅಸಮಾನತೆ ಇರುವ ಯಾವುದೇ ದೇಶವಾದರೂ ಅದು ಬಹುಬೇಗ ಪರಕೀಯರ ಆಕ್ರಮಣಕ್ಕೆ ತುತ್ತಾಗುತ್ತದೆ ಅಥವಾ ತನ್ನದೇ ಆಂತರಿಕ ಕಚ್ಚಾಟದಿಂದ ನಾಶವಾಗಿಹೋಗುತ್ತದೆ. ಹಾಗೆ, ನಾಶವಾಗಬಾರದೆಂಬ ಕಾಳಜಿಯನ್ನು ಕಾಟೇರ ಸಿನಿಮಾದ ಆಶಯ ಎತ್ತಿ ಹಿಡಿಯುತ್ತದೆ.
***
ನನ್ನ ಪ್ರೀತಿಯ ರಾಮು ಮತ್ತು ಅನಾಥರು ಸಿನಿಮಾಗಳು ದರ್ಶನ್ ಅವರಿಗೆ ನಿಜಕ್ಕೂ ಚಾಲೆಂಜಿಂಗ್ ಆಗಿದ್ದವು. ಅವುಗಳಲ್ಲಿನ ಪಾತ್ರ ಅವರು ನೀನಾಸಂನಲ್ಲಿ ಕಲಿತ ಅಭಿನಯದ ಮಟ್ಟುಗಳನ್ನು ಸರಿಯಾಗಿ ಉಪಯೋಗಿಸಿದ್ದರ ಪರಿಣಾಮ ಆಪ್ತವಾಗಿ ಮೂಡಿಬಂದಿದ್ದವು. ಅಂಥಹುದೇ ಇನ್ನೊಂದು ಆಪ್ತತೆ ಕಾಟೇರನ ಮೂಲಕ ಮೂಡಿಬಂದಿದೆ. ಪೆರೋಲ್ ಮೇಲೆ ಹೊರಬಂದ ಕಾಟೇರ ಮೌನವಾಗಿಯೂ ನಟಿಸಬಲ್ಲ, ಕೈಗಳಿಗೆ ಬೇಡಿ ಹಾಕಿಸಿಕೊಂಡು ಲಯಬದ್ಧವಾಗಿ, ಸಮರಕಲೆಯ ಹಲವು ಸಾಧ್ಯತೆಗಳನ್ನು ನಿರೂಪಿಸುತ್ತಾ, ಫೈಟ್ ಮಾಡುವ ಮೂಲಕವೂ ನಟಿಸಬಲ್ಲ ದರ್ಶನ್ ದಶಕದ ನಂತರ ನನಗೆ ಇಷ್ಟವಾಗಿಬಿಟ್ಟರು.
ಇಡೀ ಚಿತ್ರಕ್ಕೆ ಕತೆಯೇ ಜೀವಾಳ! ಜಾತಿ, ಜಾತಿಗಳ ನಡುವಿನ ಸಮಸ್ಯಾತ್ಮಕ ಅಂತರ, ಆ ಅಂತರ ಉಂಟುಮಾಡುವ ಅನಾಹುತಗಳನ್ನು ಕತೆಗಾರ ಸರಿಯಾಗಿಯೇ ಗ್ರಹಿಸಿದ್ದಾರೆ. ಆಯಾ ಜಾತಿವಂತ ಪಾತ್ರಗಳ ಭಾಷೆ, ದೇಹಭಾಷೆ ಎಲ್ಲವನ್ನೂ ಸರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಂಥ ಜಾತಿವಂತ ಪಾತ್ರಗಳಲ್ಲಿ ದರ್ಶನ್ ಕೂಡಾ ಒಂದು ಪಾತ್ರವಷ್ಟೇ. ದರ್ಶನ್ ಅಲ್ಲದಿದ್ದರೆ ಬೇರೆಯವರು ಮಾಡಿದ್ದರೂ ಈ ಕತೆಯ ಈ ಪಾತ್ರ ಹೀಗೆಯೇ ತನ್ನ ಸತ್ವವನ್ನು ಉಳಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಇದ್ದರೂ, ಆ ಕತೆಗೊಂದು ಸೂಕ್ತ ವೇದಿಕೆ ನೀಡಿದ್ದು ದರ್ಶನ್ ಅವರ ನಟನೆ ಎಂದರೆ ತಪ್ಪಾಗುವುದಿಲ್ಲ. ನೋವುಣ್ಣುವ ಆದರೆ ಸಮಯ ಬಂದಾಗ ಸಿಡಿದೇಳುವ ಪಾತ್ರಕ್ಕೆ ದರ್ಶನ್ ಹೇಳಿಮಾಡಿಸಿದ ನಿಲುವು.
ಇಡೀ ಚಿತ್ರಕತೆ ತೆಲುಗು ಚಿತ್ರಗಳ ಫ್ಯಾಕ್ಷನಿಸಂ ಆಯಾಮದಲ್ಲಿ ಕಟ್ಟಲಾಗಿರುವುದರಿಂದ ಬಾಲಕೃಷ್ಣ ಅವರ ಚಿತ್ರವನ್ನೋ, ಚಿರಂಜೀವಿ, ಪವನ್ ಕಲ್ಯಾಣ್ ಚಿತ್ರಗಳನ್ನೋ ನೋಡಿದಂತೆ ಭಾಸವಾಗುತ್ತದೆ. ಪಾತ್ರಗಳು, ಪಾತ್ರಗಳ ಉದ್ದೇಶ, ಪರಿಸರ, ಕತೆಯ ಓಘ, ಕತೆಯ ಉದ್ದೇಶ ಎಲ್ಲವೂ ತೆಲುಗು ಚಿತ್ರಗಳನ್ನು ನೆನಪಿಸುತ್ತವೆ. ರಂಗಸ್ಥಲಂ, ಪಲಾಸ ಚಿತ್ರಗಳ ಹಲವಾರು ದೃಶ್ಯಗಳು ಕಣ್ಣಮುಂದೆ ಸ್ಲೈಡ್ ಆಗುತ್ತವೆ. ನಿರ್ದೇಶಕ ಈ ಬಗ್ಗೆ ಸ್ವಲ್ಪ ಜಾಗರೂಕತೆ ವಹಿಸಿದ್ದರೆ ʻಕಾಟೇರʼ ಅಪ್ಪಟ ಕನ್ನಡ ಮಣ್ಣಿನ ಚಿತ್ರವಾಗಿ ಮತ್ತಷ್ಟು ಆಪ್ತವಾಗುತ್ತಿತ್ತು.
ಹಾಗೆಯೇ, ಸಿನಿಮಾ ಅಂದರೆ ಭಾಷಣವಲ್ಲ ಎಂಬುದನ್ನೂ ನಿರ್ದೇಶಕರು ಗ್ರಹಿಸಬೇಕಿತ್ತು. ಯಾಕೆಂದರೆ, ಜಾತಿ ವ್ಯವಸ್ಥೆಯ ಕುರಿತ ಸನ್ನಿವೇಶಗಳಲ್ಲಿ ದೃಶ್ಯ ಕಟ್ಟುವುದಕ್ಕಿಂತ, ಪಂಚಿಂಗ್ ಡೈಲಾಗ್‌ಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಗತಿಪರರ ಭಾಷಣ ಕೇಳಿದಂತೆ ಭಾಸವಾಗುತ್ತದೆ. ದಲಿತ ಪಾತ್ರಗಳನ್ನು ನಿರೂಪಿಸುವಾಗ ತಮಿಳು ಚಿತ್ರಗಳ ನಿರ್ದೇಶಕರು ತೋರುವ ಸೆನ್ಸಿಬಿಲಿಟಿಯನ್ನು ತರುಣ್ ಸುಧೀರ್ ಕಾಟೇರದಲ್ಲಿ ಮಿಸ್ ಮಾಡಿದ್ದಾರೆ.
ಮೇಲೆ ಉಲ್ಲೇಖಿಸಿದ ಎರಡು ಲೋಪಗಳನ್ನು ಹೊರತುಪಡಿಸಿದರೆ, ಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಇನ್ನೊಬ್ಬ ನೀನಾಸಂ ಕಲಾವಿದ ಪಿ.ಮಂಜುನಾಥ್ ಅವರು ತಮಗೆ ಸಿಕ್ಕ ಸಣ್ಣ ಅವಕಾಶದಲ್ಲೇ ಆವರಿಸಿಕೊಳ್ಳುತ್ತಾರೆ. ಬಿರಾದಾರ್ ಅವರನ್ನು ಮೊದಲಬಾರಿಗೆ ಕಮರ್ಶಿಯಲ್ ಚಿತ್ರವೊಂದರಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಾಗಿರುವುದು ಅತ್ಯಂತ ಖುಷಿಯ ಸಂಗತಿ. ಶೃತಿ, ಅವಿನಾಶ್ ಯಥಾ ರೀತಿಯಾಗಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ಅವರಿಗೆ ಇನ್ನೊಂದಿಷ್ಟು ಟ್ರೇನಿಂಗ್ ಕೊಟ್ಟು ಇಂಥ ಪಾತ್ರಕ್ಕೆ ಅವಕಾಶ ಕೊಡಬೇಕಿತ್ತು. ಆದರೆ ಜಗಪತಿ ಬಾಬು ಅವರ ಪಾತ್ರವನ್ನು ಸರಿಯಾಗಿ ಕಟ್ಟಲಾಗಿಲ್ಲ. ಆ ಪಾತ್ರಕ್ಕಾಗಿ ಅವರು ಆಂಧ್ರದಿಂದ ಬರುವ ಅವಶ್ಯಕತೆ ಇರಲಿಲ್ಲ. ದೃಶ್ಯಗಳನ್ನು ಅಚ್ಚುಕಟ್ಟಾಗಿ ಸೆರೆಹಿಡಿದು, ಅಷ್ಟೇ ಅಚ್ಚುಕಟ್ಟಾಗಿ ಕತ್ತರಿಸಿ, ತೆರೆಗೆ ಅಂಟಿಸಲಾಗಿದೆ. ಅಂತೆಯೇ, ಚಿತ್ರದ ಹಿನ್ನೆಲೆ ಸಂಗೀತ ಎಲ್ಲೋ ಕೇಳಿದಂತೆ ಅನಿಸುವುದು ಸುಳ್ಳಲ್ಲ.
ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಕಮರ್ಶಿಯಲ್ ಮಟ್ಟದ ಕನ್ನಡ ಚಿತ್ರವೊಂದು ಈ ನೆಲದ ಶೋಷಣೆಯನ್ನು ಜನರಿಗೆ ಯಥಾವತ್ತಾಗಿ ತೋರಿಸುವ ಧೈರ್ಯ ಮಾಡಿರುವುದು ಸಮಾಧಾನದ ಸಂಗತಿ. ಈ ಟ್ರೆಂಡ್ ಹೀಗೆಯೇ ಮುಂದುವರೆದು, ಜಾತಿ ಸಂಕೋಲೆ ಸಂಕಷ್ಟಗಳು ಆರಾಮು ಜನಗಳ ಮನಸ್ಸಿನಾಳಕ್ಕೆ ಇಳಿಯುವಂತಾಗಲಿ ಎಂದು ಚಿತ್ರತಂಡದ ಈ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
- ವಿ.ಆರ್.ಕಾರ್ಪೆಂಟರ್
ಪ್ರಧಾನ ಸಂಪಾದಕ