ನಾವು ಜೀವಿಸುವ ಈ ನೆಲ ,ಬದುಕು ನೀಡಿದ ಈ ಸಮಾಜ, ಕನಸುಗಳನ್ನು ಸೃಷ್ಟಿಸಿ ಕಣ್ಣಾಮುಚ್ಚಾಲೆಯಾಡುವ ಜೀವನ, ಇದೆಲ್ಲವೂ ಒಂದು ಕ್ಷಣ ಭ್ರಮೆ ಎನಿಸುವುದಿಲ್ಲವೇ!, ಹಾಗನ್ನಿಸಿದ್ದೇ ಆದಲ್ಲಿ ನಾವು ಮನುಷ್ಯರು ಅಥವಾ ಜೀವಂತವಿರುವವರು ಎಂಬುದನ್ನು ನೀವು ಬಲವಾಗಿ ನಂಬಬಹುದು. ಇಲ್ಲ ನಾವು ಬಹಳ ಸುಖಿಗಳು ನಮಗೆ ಯಾವುದೇ ಕೊರತೆಗಳಿಲ್ಲ ಸಕಲವನ್ನೂ ಬಲ್ಲವರು ಸಕಲೈಶ್ವರ್ಯವನ್ನೂ ಹೊಂದಿದ್ದೇವೆ ಎಂದು ತಿಳಿದಿರೋ ನೀವು ಖಂಡಿತವಾಗಿ ಯಾವುದೋ ಮಾಯಾಜಾಲದಲ್ಲಿ ಸಿಲುಕಿದ್ದೀರೆಂದೇ ನಿರ್ಣಯಿಸಬೇಕಾದೀತು. ಈಗ ನಾವು ಮಾತನಾಡಬೇಕಾದರೆ ಒಂದು ಸಂಖ್ಯೆ, ರೇಷನ್ ತಡಗೆದುಕೊಳ್ಳಲು, ಸಂಬಳ ಪಡೆಯಲು ,ಮಾಡಿದ ಕೆಲಸಕ್ಕೆ ಕೂಲಿ ಪಡೆಯಲು, ದುಡಿದ ವ್ಯಾಪಾರದ ಲಾಭ ಪಡೆಯಲು, ಹೀಗೆ ಎಲ್ಲದಕ್ಕೂ ಸಂಖ್ಯೆಯನ್ನೇ ಹೊಂದಿರುವ ನಾವು ಇನ್ನು ಕೆಲವು ವರ್ಷಗಳ ನಂತರ ನಾಮಕರಣ ಮಾಡಲು ಪದಗಳನ್ನು ಸೇರಿಸಿ ಹೆಸರು ಹುಡುಕುವ ಬದಲು ಸಂಖ್ಯೆಗಳನ್ನು ಸೇರಿಸಿ ಕರೆಯುವ ಕಾಲ ದೂರವಿಲ್ಲವೆನಿಸುತ್ತದೆ.ಸರ್ಕಾರಿ ಜಾಗದಲ್ಲಿ ಬೆಳೆದಿರುವ ಅಥವಾ ಬೆಳೆಸಲ್ಪಟ್ಟ ಮರಗಿಡಗಳಿಗೂ ಸಂಖ್ಯೆ ನೀಡಲಾಗುತ್ತದೆ ಮೆಟ್ರೋ ಕಂಬಗಳಿಗೆ ಅಥವಾ ಮೇಲ್ಸೇತುವೆಗಳ ನಿರ್ಮಾಣದ ಕಂಬಗಳಿಗೂ ಸಂಖ್ಯೆ ನೀಡಲಾಗುತ್ತದೆ.

Bangalore metro at M G Road

ಪ್ರಾಥಮಿಕ ಶಾಲಾ ದಿನಗಳಲ್ಲಿ ಹಾಜರಾತಿ ಕರೆಯುವಾಗ ಹೆಸರನ್ನು ಕರೆಯುವ ಬದಲು ಕ್ರಮ ಸಂಖ್ಯೆ ಕೂಗಿ ಹಾಜರಾತಿ ಹಾಕುತ್ತಿದ್ದರು. ಅಂದರೆ ಈ ಸಂಖ್ಯೆಗಳು ಮತ್ತು ಅಂಕಗಳು ಮನುಷ್ಯನನ್ನು ಗುರುತಿಸುವ ಸಲುವಾಗಿ ಬಹಳ ಹಿಂದಿನಿಂದಲೂ ಬಳಸುತ್ತಿರುವ ಪದ್ದತಿಯೇ!? ಬಹುಶಃ ವಿಲಿಯಂ ಶೇಕ್ಸ್‌ಪಿಯರ್‌ what is there in the name ಎಂದು ಹೇಳಿದ್ದು ಈ ಕಾರಣಕ್ಕೆ ಇರಬೇಕು. ಹೆಸರಿನಲ್ಲಿ ಏನಿದೆ ಒಬ್ಬ ಮನುಷ್ಯನನ್ನು ಗುರಿತಿಸಲು ಅಥವಾ ಅವನ ಇರುವಿಕೆ ಮತ್ತು ಗೈರಿನ ಬಗ್ಗೆ ಲೆಕ್ಕಾಚಾರ ಹಾಕಲು ಮಾತ್ರ ಬಳಸಲ್ಪಡುವ ಪದಗಳ ಸಮೂಹವಷ್ಟೇ.


ನಮ್ನೂರಿನಲ್ಲಿ ಮುತ್ತಯ್ಯ ಎಂಬ ಹೆಸರಿನವರು ನಾಲ್ಕು ಜನ ಇದ್ದರು ಮೊದಲನೆಯ ಬಿಕ್ಕಲ ಮುತ್ತಯ್ಯ ಎರಡನೆಯವ ಮೇಕೆ ಮುತ್ತಯ್ಯ ಮೂರನೆಯವ ತೊಣಸಮ್ಮನ ಗಂಡ ಇನ್ನೂ ನಾಲ್ಕನೆಯವ ಗೌರಮ್ಮನ ಗಂಡ ಈ ಮೂರನೆಯವ ಮತ್ತು ನಾಲ್ಕನೆಯವರ ಹೆಸರನ್ನು ಅಂದರೆ ಅವರ ನಾಮಕರಣಗೊಂಡ ಹೆಸರನ್ನು ಹೇಳಿದರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ ತೊಣಸಮ್ಮನ ಗಂಡ ಗೌರಮ್ಮನ ಗಂಡ ಎಂದರೆ ಓ ಅವನಾ ಎಂದು ಉದ್ಘಾರ ತೆಗೆದು ಮನೆಯ ದಾರಿ ಹೇಳುತ್ತಿದ್ದರು. ಈಗ ನೋಡಿ ಅವರ ಹುಟ್ಟು ಹೆಸರೇ ಮರೆಯಾಗಿ ಬೇರೊಂದು ಹೆಸರಿನಿಂದ ಗುರುತಿಸಿಕೊಳ್ಳುವಂತಾಗಿತ್ತು ಅವರ ಪರಿಸ್ತಿತಿ. ಈಗ ಆ ಇಬ್ಬರೂ ಸಹ ಕಾಲವಾಗಿ ಬಹಳ ವರ್ಷಗಳಾಯ್ತು ಆದರೆ ಇಂದಿಗೂ ಅವರ ಬಗ್ಗೆ ಏನಾದರೂ ಮಾತು ಬಂದರೆ ಅದೇ ತೊಣಸಮ್ಮ (ಬಹುಶಃ ಇದು ತುಳಸಮ್ಮ ಇರಬಹುದು ಆಡುಭಾಷೆಯಲ್ಲಿ ಈ ರೀತಿಯಾಗಿದೆ ಆದರೂ ಹೊಸಾ ತರಹದ ಹೆಸರು ಸೃಷ್ಡಿಯಾಗಿದೆ) ಮತ್ತು ಗೌರಮ್ಮ ಇವರ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ.


ಹೀಗೆ ಮನುಷ್ಯ ಏನೇ ಜಾತಕ ವಾರ ನಕ್ಷತ್ರ ಮುಂತಾದವುಗಳನ್ನು ಹುಡುಕಿ ಜನಿವಾರದಯ್ಯನನ್ನು ತಡಕಿ ಎಂತದ್ದೇ ಹೆಸರಿಟ್ಟರೂ ಅವನು ಬೆಳೆಯುತ್ತಾ ಈ ಸಂಖ್ಯೆಗಳ ಮುಖಾಂತರ ಗುರುತಿಸಿಕೊಳ್ಳುವಂತಾಗದೇ ವಿಧಿಯಿಲ್ಲ ಯಾಕೆಂದರೆ ಈ ಸಂಖ್ಯೆಗಳಿಲ್ಲದಿದ್ದಲ್ಲಿ ಮನುಷ್ಯನ ಅಸ್ತಿತ್ವವನ್ನೇ ಗುರುತಿಸುವುದು ಅಸಾಧ್ಯ. ನಾನು ಇತ್ತೀಚೆಗೆ ವಾಸ್ತವ್ಯ ಬದಲಾಯಿಸಿ ಬೇರೆ ಬಾಡಿಗೆ ಮನೆಯನ್ನು ಸೇರಿಕೊಂಡೆ ಆಗ ಯಾರಿಗೆ ವಿಳಾಸ ಕೊಡದಿದ್ದರೂ ಪರವಾಗಿಲ್ಲ ಆದರೆ ಗ್ಯಾಸ್ ಸರಬರಾಜು ಮಾಡುವವರಿಗೆ ಮಾತ್ರ ತಕ್ಷಣ ಮರೆಯದೇ ಹೇಳಲೇಬೇಕು ಅವರ ಕವೇರಿಯ ಮಾಹಿತಿ ವಿಭಾಗದಲ್ಲಿ ನಮೂದಿಸಲೇ ಬೇಕು ಎಂದು ಯೋಚಿಸಿ ಗ್ಯಾಸ್ ಕಛೇರಿಗೆ ಹೋದೆ ಹೋಗಿ ನನ್ನ ಹೆಸರು ಇಂಥಾದ್ದು ನಾನು ಹೊಸ ಮನೆಯ ವಿಳಾಸವನ್ನು ನಮೂದಿಸಬೇಕು ಎಂದೆ ಸರಿ ಅದಕ್ಕವರು ಗ್ಯಾಸ್ ಸಂಪರ್ಕ ನೀಡುವಾಗ ಕೊಟ್ಟಿರುವಂತಹ ಗ್ರಾಹಕ ಸಂಖ್ಯೆಯನ್ನು ಹೇಳಿ ಎಂದರು ನಾನು ಅದನ್ನು ಬರೆದಿಟ್ಟುಕೊಂಡಿರಲಿಲ್ಲ ಮನುಷ್ಯ ನಾನೇ ಇದೀನಲ್ಲ ನಾನೇ ಇರುವಾಗ ಅದೆಲ್ಲಾ ಯಾಕೆ ಎಂದು ಬಿಡುಬೀಸಾಗಿ ಹೋಗಿದ್ದೆ, ಅವರು ಕೇಳಿದರು ನಾನು ತಬ್ಬಿಬ್ಬಾದೆ ಅಲ್ಲ ನಾನೇ ಇದೀನಲ್ಲ ನನ್ನ ಹೆಸರು ಇಂಥದ್ದು ಇಕೊಳಿ ಮೊಬೈಲ್ ನಂಬರ್ ಹೇಳ್ತೇನೆ ಅಂದೆ ಅದಕ್ಕವರು ಇಲ್ಲ ಸರ್ ಗ್ರಾಹಕ ಸಂಖ್ಯೆ ಹೇಳಲೇಬೇಕು ಅದಿಲ್ಲವೆಂದರೆ ಏನೂ ಮಾಡಲು ಸಾಧ್ಯವಿಲ್ಲ ಅದಲ್ಲದೇ ನಿಮ್ಮನ್ನು ನಾವು ನಂಬಬಹುದು ಆದರೆ ನಮ್ಮ ಮಾಹಿತಿ ಇರುವ ಕಂಪ್ಯೂಟರ್ ನಂಬಬೇಕಲ್ಲ ಎಂದಾಗ ನನ್ನ ಎದೆ ಧಸಕ್ಕೆಂದಿತು ಅಯ್ಯೋ ಶಿವನೇ ಮನುಷ್ಯ ಬದುಕಿದ್ದೀನಿ ಎಂಬುದಕ್ಕೆ ನಾನೇ ಆ ಮನುಷ್ಯ ಎಂದು ರುಜುವಾತು ಮಾಡಲು ಬರೀ ಉಸಿರಾಡಿದರೆ ಸಾಲದು ಈ ಶರೀರಕ್ಕೊಂದು ಸಂಖ್ಯೆ ಇರಲೇಬೇಕು ಎಂಬ ವಿಷಯ ಕೇಳಿ ಬಹಳವಾಗಿ ಬೆದರಿ ಹೋದೆ ಅವರನ್ನು ಮತ್ತೆ ಕೇಳಿದೆ ಅಲ್ಲ ಒಂದು ವೇಳೆ ಈ ಸಂಖ್ಯೆ ಕಳೆದು ಹೋದರೆ ಆಗ ಏನು ಮಾಡುವುದು, ಏನೂ ಮಾಡಲು ಆಗುವುದಿಲ್ಲ ಸರ್ ಈಗ ಪ್ರತಿಯೊಂದೂ ಗಣಕೀಕೃತವಾಗಿರುವುದರಿಂದ ನೀವು ಸಂಖ್ಯೆಗಳನ್ನು ಹೇಳಿದರೆ ಮಾತ್ರ ನಿಮಗೆ ಸಹಾಯ ಮಾಡಬಹುದು ಅಷ್ಟೇ, ಗ್ಯಾಸ್ ಸಿಲಿಂಡರ್ ನೀವು ನಂಬರ್ ಕೊಟ್ಟ ನಂತರ ಕೊಡಲಾಗುವುದು ಇಲ್ಲಾಂದ್ರೆ ಇಲ್ಲ ಎಂದರು.

ಸಾಂದರ್ಭಿಕ ಚಿತ್ರ

ಮನೆಗೆ ಬಂದು ಎರಡು ದಿನ ತಡಕಾಡಿದೆ ಎಲ್ಲೋ ಪಾತಾಳದಲ್ಲಿ ಇದ್ದಂತಹ ಗ್ಯಾಸ್ ಪುಸ್ತಕವನ್ನು ತೆಗೆದುಕೊಂಡು ಹೋಗಿ ಕೊಟ್ಟ ನಂತರ ಮೂರು ದಿನಗಳಾದ ಮೇಲೆ ಸಿಲಿಂಡರ್ ತಂದುಕೊಟ್ಟರು.
ತನಗೇನೇನೋ ಗೊತ್ತು ನಾನು ಮಹಾನ್ ಪಂಡಿತ ಜಗತ್ತಿನ ಎಲ್ಲಾ ವಿಷಯಗಳನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಹೇಳ ಬಲ್ಲೆ ಎಂಬ ಜಂಭದ ಕೋಳಿಗಳು ಯಾರಾದರೂ ಇದ್ದಲ್ಲಿ ನೆನಪಿಟ್ಟುಕೊಳ್ಳಿ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆ ಪಾನ್ ಸಂಖ್ಯೆ ಇವುಗಳಲ್ಲಿ ಒಂದನ್ನು ಮರೆತರೂ ನೀವು ಬದುಕಿದ್ದೂ ಸತ್ತಂತೆ. ನೀವು ಬದುಕಿದ್ದೇವೆ ನಾವೇ ನಾವು ಎಂದು ರುಜುವಾತುಗೊಳಿಸಲು ಸಂಖ್ಯೆಗಳ ಅವಲಂಬನೆ ಬೇಕೇ ಬೇಕು. ಬದುಕಿದ್ದರೂ ಸಂಖ್ಯೆ ಸತ್ತರೂ ಸಂಖ್ಯೆ ಈ ಸಂಖ್ಯೆ ಗಳೇ ನಮ್ಮನ್ನು ಆಳುತ್ತಿವೆ. ಸಂಖ್ಯೆಗಳಿಲ್ಲವೆಂದರೆ ಜಗತ್ತಿನ ಅಸ್ತಿತ್ವವೇ ಇರಲಾರದೇನೋ!?.
ಕೆರೆಯಂಗಳದಲ್ಲಿ ಹಸಿರೋ ಹಸಿರು ಆದರೆ ಆ ಹಸಿರು ಹುಲ್ಲಿನದ್ದೋ ಸೊಪ್ಪಿನದ್ದೋ ಕಳೆಯದ್ದೋ ಗಿಡಗಳದ್ದೋ ನೀರಿನ ಪಾಚಿಯದ್ದೋ ಇನ್ನಿತರೇ ಜಲಚರ ಜೀವಿಗಳದ್ದೋ … ಇವುಗಳನ್ನು ವಿಂಗಡಿಸಲು ಸಾಕಷ್ಡು ಸಮಯ ಬೇಕು‌.ಕೆರೆ ಎಂಬುದು ಒಂದು ರೂಪಕವಷ್ಟೇ ಅದರಲ್ಲಿ ಅಸಂಖ್ಯಾತ ಜೀವಗಳು ಹಾಗೂ ಭಾವಗಳು ಇರುತ್ತವೆ. ಎಷ್ಟೋ ಜೀವಗಳು ಬದುಕಲು ಅವಲಂಬಿಸಿವೆ. ಸಾಸಲು ಚಿನ್ನಮ್ಮನ ಕೆರೆ ನಮ್ಮ ಬಾಲ್ಯವನ್ನು ಶ್ರೀಮಂತಗೊಳಿಸಿತು, ನನ್ನ ತಾತ ನನಗೊಂದು ಎಮ್ಮೆ ಕೊಟ್ಟು ಮೇಯಿಸಲು ನೇಮಿಸಿದ್ದ ಅವನು ಎಂತಹ ದುಷ್ಟನೆಂದರೆ ನಾನು ಎಮ್ಮೆಯನ್ನು ಸರಿಯಾಗಿ ಮೇಯಿದುತ್ತಿದ್ದೇನೋ ಇಲ್ಲವೋ ಎಂಬುದನ್ನು ದೂರದಿಂದಲೇ ಪರಿಶೀಲಿಸಿ ಊಟ ಕೊಡುತ್ತಿದ್ದ ಇರಲಿ‌ಅವನ ವಿಚಾರ ಮುಂದೆ ಎಂದಾದರೂ ಮಾತನಾಡುವೆ.
ಆ ಎಮ್ಮೆ ಬಹಳ ಸಾಧು ನಾಲ್ಕು ಜನ ಕುಳಿತುಕೊಂಡು ಸವಾರಿ ಮಾಡಿದರೂ ಸಾವಧಾನವಾಗಿ ಕೆರೆಯ ತುಂಬಾ ಓಡಾಡಿ ಖುಷಿ ಕೊಡುತ್ತಿತ್ತು. ಹೀಗೆ ಇರುವ ಈ ಸಾಧು ಮನಸಿನ ಎಮ್ಮೆಯು ನನ್ನ ಅತ್ಯಂತ ಪ್ರೀತಿಯ ಸಂಗಾತಿಯಾಗಿತ್ತು. ಪುಣ್ಯಕ್ಕೆ ಇದ್ದದ್ದು ಒಂದೇ ಎಮ್ಮೆಯಾದ್ದರಿಂದ ಒಂದಕ್ಕಿಂತ ಹೆಚ್ಚು ಸಂಖ್ಯೆಗಳನ್ನು ನೆ‌ನಪಿಟ್ಟುಕೊಳ್ಳಬೇಕಾದ ಪ್ರಮೇಯ ಯಾವತ್ತೂ ಬರಲಿಲ್ಲ. ಇಂತಹ ಎಮ್ಮೆಯ ಸವಾರಿ ಸುಖ ಅನುಭವಿಸಲು ಬೆಂಗಳೂರಿನಿಂದ ಹಳ್ಳಿಗೆ ಬಂದಿದ್ದಂತಹ ನನ್ನ ವಾರಿಗೆಯ ದೊಡ್ಡಮ್ಮನ ಮಕ್ಕಳು ಇಚ್ಚೆ ಪಟ್ಟರು ಸರಿ ಅವರನ್ನು ಮೊದಲು ಎಮ್ಮೆಯ ಬೆನ್ನ ಮೇಲೆ ಇಬ್ಬರನ್ನೂ ಕುತ್ತಿಗೆಯ ಮೇಲೆ ಒಬ್ಬರನ್ನು ಕುಳ್ಳಿರಿಸಿ ನಾನು ಸುಮ್ಮನಿರದೇ ಅದರ ಬಾಲವನ್ನು ಹಿಡಿದುಕೊಂಡು ಹಿಂದೆ ಪೃಷ್ಟದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದೆ ಆ ಪ್ರಯತ್ನದಲ್ಲಿ ಆ ಎಮ್ಮೆಗೆ ಕಚಗುಳಿಯುಂಟಾಗಿ ನಾಗಾಲೋಟದಲ್ಲಿ ಓಡಲಾರಂಭಿಸಿತು ಬಾಲವನ್ನು ಬಿಟ್ಟು ನಾನು ಅಲ್ಲಿಯೇ ಬಿದ್ದೆ ಎಮ್ಮೆಯ ಮೇಲಿದ್ದ ಮೂವರೂ ಸಹ ಕೆರೆಯ ದಿಕ್ಕು ದಿಕ್ಕಿಗೂ ಬಿದ್ದು ಒದ್ದಾಡುತ್ತಿದ್ದರು .ಇಷ್ಟೆಲ್ಲಾ ಅವಾಂತರ ಮಾಡಿದ ಎಮ್ಮೆಯು ಮಾತ್ರ ಅಲ್ಲಿದ್ದ ಅಸಂಖ್ಯಾತ ಹಸುರಿನ ಮೇವಿನ ಸಂಖ್ಯೆಗಳನ್ನು ಲೆಕ್ಕವಿಡದೇ ಆನಂದದಿಂದ ಮೇಯುತ್ತಿತ್ತು ಆಗಾಗ‌ ಕತ್ತೆತ್ತಿ ನಾನು ಇರುವೆನೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿತ್ತು. ಎಮ್ಮೆಯ ಮೇಲಿನಿಂದ ಬಿದ್ದವರಲ್ಲಿ ಒಬ್ಬ ಬಿದ್ದ ರಭಸಕ್ಕೆ ಮುರಿದು ಬಿದ್ದಿದ್ದ ಮುಂಭಾಗದ ಎರಡು ಹಲ್ಲುಗಳನ್ನು ಕೈಯ್ಯಲ್ಲಿ‌ ಹಿಡಿದುಕೊಂಡು ಅಳುತ್ತಾ ಎರಡೂ ಆ.ಆ.ಆ.ಆ.ಎರಡೂ ಎಂದು ಸಂಖ್ಯೆಗಳನ್ನು ಎಣಿಸುತ್ತಿದ್ದ.

ಇಂದಿನ ಸಮಾಜದಲ್ಲಿನ‌ ಯುವಕರಿಗೆ ಜೀವನ ಮೌಲ್ಯಗಳು ಮತ್ತು ಬದುಕಿನ ಮಹತ್ವ ತಿಳಿ ಹೆರಳುವವರಿಲ್ಲದೇ ದಾರಿ ತಪ್ಪಿ ನಡೆದು ಬದುಕನ್ನು ನರಕ ಮಾಡಿಕೊಳ್ಳುತ್ತಿದ್ದಾರೆ. ಯಾವುದೋ ಮೋಹಕ್ಕೋ ಭ್ರಮೆಯ ಜಾಲಕ್ಕೋ ಸಿಲುಕಿ‌ ತಮ್ಮ ಅಮೂಲ್ಯವಾದಂತಹ ಬದುಕನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ತಂತ್ರಜ್ಞಾನ ಬಹಳಷ್ಟು ಕೊಟ್ಟಿದೆ ಆದರೆ ಮಾನವೀಯತೆಯ ಅಸ್ಮಿತೆಯನ್ನು ಅಳಿಸಿ ಹಾಕಿದೆ ಭಾವನಾ ರಹಿತರಾಗಿ ಜೀವಿಸುತ್ತಿರುವ ಇವರಿಂದ ಭವಿಷ್ಯದಲ್ಲಿ ಸದೃಢವಾದ ಸಮಾಜದ ನಿರ್ಮಾಣ ಮತ್ತು ನಿರ್ವಹಣೆ ಸಾಧ್ಯವೇ ಎಂಬ ಪ್ರಶ್ನೆ ಬಾನೆತ್ತರ ನಿಂತು ಕೇಳಿದಂತಾಗುತ್ತದೆ. ಮನುಷ್ಯರಾಗದೇ ಮಾನವೀಯತೆಯ ಸ್ಪರ್ಷವಿಲ್ಲದೇ ಕೇವಲ ಸಂಖ್ಯೆಗಳಲ್ಲಿಯೇ ಜೀವಿಸಿ ಸಂಖ್ಯೆಗಳಲ್ಲಿ ಯೇ ಲೀ‌ನವಾಗುತ್ತಾರೇನೋ ಎಂಬ ಆತಂಕ ಈ ಸಮಾಜಕ್ಕಂತೂ ಇದ್ದೇ ಇದೆ. Let’s have good hope about youths and future of this society.


ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ೯೮೪೪೬೭೩೯೭೬
ನಾಟಕ ರಚನೆ, ನಟನೆ, ನಿರ್ದೇಶನ ಮಾಡುತ್ತಾ, ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ದೊಡ್ಡಬಳ್ಳಾಪುರದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಬರೆಯುತ್ತಿರುವ ಚಿನ್ನುಪ್ರಕಾಶ್‌ ಶ್ರೀರಾಮನಹಳ್ಳಿ ಸದ್ಯ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *