ನಮ್ಮ ಭಾರತ ದೇಶ ಜಾತ್ಯತೀತ ರಾಷ್ಟ್ರ. ನಾನಾ ರೀತಿಯ ಧರ್ಮಗಳಿದ್ದು, ಹಿಂದೂ ಧರ್ಮದ ಜನರು ಹೆಚ್ಚಾಗಿರಬಹುದು. ಆದರೆ ಭಾರತವು ಹಿಂದೂ ರಾಷ್ಟ್ರವಲ್ಲ. ನಮ್ಮ ರಾಷ್ಟ್ರಕ್ಕೆ ನಾನಾ ಚಿಹ್ನೆಗಳು ಇವೆ. ಆದರೆ ಇಲ್ಲಿ ರಾಷ್ಟ್ರೀಯ ಧರ್ಮ ಅಂತ ಯಾವುದೂ ಇಲ್ಲ… ಅವರವರ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವು ನೀಡಿದೆ. ಆದರೆ ಒಂದು ಧರ್ಮವನ್ನು ಆಚರಿಸಲು ಮತ್ತೊಂದು ಧರ್ಮವನ್ನು ಏಕೆ ವಿರೋಧಿಸುವುದು? ಹಿಂದೂ ಧರ್ಮದವರಾಗಿದ್ದರೆ ಅ ಧರ್ಮದ ಸಂಪ್ರದಾಯವನ್ನು ಅನುಸರಿಸಬೇಕು. ಬೇರೆ ಧರ್ಮದ ಸಂಪ್ರದಾಯವನ್ನು ಅಡ್ಡಿಪಡಿಸುತ್ತಿರುವುದನ್ನು ನಾವು ಈ ಸಮಾಜದಲ್ಲಿ ಕಾಣುತ್ತಿದ್ದೇವೆ. ಸಮಾಜವು ವ್ಯಕ್ತಿಗಳ ಪರ ಇರಬೇಕೆ ಹೊರತು ಯಾವುದೇ ಧರ್ಮದ ಪರವಲ್ಲ.
ಈಗಿರುವಂತಹ ಮೀಡಿಯಾಗಳು, ನ್ಯೂಸ್ ಚಾನೆಲ್ ಗಳು, ದಿನಪತ್ರಿಕೆಗಳು, ರಾಜಕೀಯ ಪಕ್ಷಗಳು ಧರ್ಮಗಳ ಪರ ಕೆಲಸ ಮಾಡುತ್ತಿದ್ದಾವೆ. ಕೆಲಸ ಮಾಡಬೇಕಾದದ್ದು ನ್ಯಾಯದ ಪರ, ನೊಂದವರ ಪರ. ಹಿಂದೂ ಧರ್ಮವೂ ಸನಾತನ ಧರ್ಮವಂತೆ. ಸನಾತನ ಅಂದ್ರೆ ಸದಾಕಾಲ ಇರುವಂತಹದ್ದು, ಎಲ್ಲರೂ ಸುಖ ಸಂತೋಷದಿಂದ ಬದುಕಬೇಕು ಎಂದು ಬಯಸುವುದು ಎಂದು ಹೇಳುವರು. ಆದರೆ ಎಲ್ಲರೂ ಸಮಾನವಾಗಿ ಬದುಕಲು ಆಗದಿರುವ ಈ ಧರ್ಮವು ಹೇಗೆ ಸನಾತನ ಧರ್ಮವಾಗುತ್ತದೆ? ಮನುಷ್ಯ ಹುಟ್ಟಿದ ನಂತರ ಧರ್ಮ ಹುಟ್ಟಿರುವಂಥದ್ದು. ಮನುಷ್ಯನಿಗೆ ಧರ್ಮ ಬೇಕು ಆದರೆ ಆ ಧರ್ಮದಲ್ಲಿ ಶುದ್ಧೀಕರಣ ಆಗಬೇಕು.
ನಾವು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಹಿಂದೂ ಸಮಾಜದಲ್ಲಿ. ಈ ಸಮಾಜದಲ್ಲಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಜಾತಿ ಸಮಸ್ಯೆ. ಇದರ ವಿರುದ್ಧ ಎಷ್ಟೋ ವರ್ಷಗಳ ಕಾಲ ಹೋರಾಟಗಳು ನಡೆದಿವೆ. ಆದರೆ ಅದು ತಾತ್ಕಾಲಿಕವಾಗಿ ಸರಿ ಎಂದು ಮುಂದೆ ಹೋಗುತ್ತಾರೆ. ಆದರೆ ಅದೇ ದೋಷಗಳು ದಬ್ಬಾಳಿಕೆಗಳು, ಜಾತಿ ನಿಂದನೆಗಳು, ಜಾತಿಯ ಕಾರಣಕ್ಕಾಗಿ ಕೊಲೆಗಳು, ಅತ್ಯಾಚಾರಗಳು ನಡೆಯುತ್ತಲೇ ಇವೆ. ಒಂದು ಗ್ರಾಮದಲ್ಲಿ ಒಬ್ಬ ಕೆಳ ವರ್ಗದ ಅಪ್ರಾಪ್ತ ಹುಡುಗ ಊರುಗೋಲನ್ನು ಮುಟ್ಟಿದ ಎಂಬ ಕಾರಣಕ್ಕೆ, ಸವರ್ಣಿಯರು ಆ ಹುಡುಗನನ್ನು ಊರಿನ ಮಧ್ಯೆ ಕಟ್ಟಿ, ಹಿಂಸೆ ನೀಡಿ, ದಂಡ ವಿಧಿಸಿರುವ ಪ್ರಕರಣವೂ ನಡೆದಿದೆ. ಊರುಗೋಲು ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂದು ನಂಬುವ ಸಮಾಜ, ಅವರು ಮುಟ್ಟಿ ಕೊಡುವ ಹಣವು ಮೈಲಿಗೆ ಆಗುವುದಿಲ್ಲವೇ?..
ಹುಡುಗಿಯೊಬ್ಬಳು ಕೆಳ ಜಾತಿಯ ಹುಡುಗನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಆ ಹುಡುಗಿ ತನ್ನ ತಂದೆಯಿಂದಲೇ ಕೊಲೆಯಾಗಿರುವ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಒಬ್ಬ ತಂದೆಯು ತನ್ನ ಮಗಳ ಜೀವಕ್ಕಿಂತ ತನ್ನ ಜಾತಿಯೇ ದೊಡ್ಡದು ಎನ್ನುವ ತೀರ್ಮಾನಕ್ಕೆ ಬರುವಷ್ಟು ಈ ಸಮಾಜವು ಹದಗೆಟ್ಟಿದೆ. ಕೆಳವರ್ಗದ ವ್ಯಕ್ತಿ ಹೋಟೆಲ್ ನಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಸವರ್ಣೀಯರು ಒಡೆದು ಸಾಯಿಸಿರುವ ಘಟನೆ, ದಲಿತನ ಬಾಯಿಗೆ ಮೂತ್ರವನ್ನು ಮಾಡಿರುವ ಘಟನೆಯು ಸಹ ನಡೆದಿದೆ. ಈ ತರಹದ ಎಲ್ಲಾ ಸಮಸ್ಯೆಗಳು ಇರುವುದು ಹಿಂದೂ ಧರ್ಮದಲ್ಲಿ. ಇದಿಷ್ಟೇ ಅಲ್ಲದೆ, ತೀರಾ ಮೊನ್ನೆ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಸಹ ಮಾಡಿಬಿಟ್ಟರು. ಯಾಕೆ ಅ ಮಹಿಳೆಯರು ಹಿಂದೂ ಅಲ್ಲವೇ?.. ಇಷ್ಟೆಲ್ಲ ಅನಾಚಾರಗಳು, ಸಮಸ್ಯೆಗಳು ಹಿಂದೂ ಧರ್ಮದಲ್ಲಿ ಇರುವಾಗ, ಹಿಂದೂ ಧರ್ಮವು ಹೇಗೆ ಸನಾತನ ಧರ್ಮವಾಗುತ್ತದೆ?
ಒಬ್ಬ ಮನುಷ್ಯನಿಗೆ ಬೇಕಿರುವುದು ಮನುಷ್ಯತ್ವ, ಮಾನವೀಯತೆ. ಯಾವುದೇ ಜಾತಿಯಾಗಿರಲಿ ಯಾವುದೇ ಧರ್ಮವಾಗಿರಲಿ ಗೌರವದಿಂದ ಕಾಣುತ್ತಾ, ಮನುಷ್ಯ ಮನುಷ್ಯನ ಪ್ರೀತಿಸುವುದೇ ನಿಜವಾದ ಧರ್ಮ. ಭಾರತವು ಹಲವು ಧರ್ಮಗಳನ್ನು ಹೊಂದಿರುವ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ಧಾರ್ಮಿಕ ಬೇದಭಾವ ಯಾಕೆ? ಹಿಂದೂ ಧರ್ಮದಲ್ಲೇ ಅಳಿಸಲಾಗದ ಸಮಸ್ಯೆಗಳು ಎದುರಾಗುತ್ತಿರುವಾಗ ಮತ್ತೊಂದು ಧರ್ಮಕ್ಕೆ ಸಮಸ್ಯೆ ಮಾಡುವುದೇಕೆ? ನಾವು ನಮ್ಮ ಧರ್ಮವನ್ನು ಆರಾಧಿಸುವ ಮೂಲಕ ನಮ್ಮ ಧರ್ಮ ಶ್ರೇಷ್ಠ ಎಂದು ಹೇಳಬೇಕೆ ಹೊರತು, ಮತ್ತೊಂದು ಧರ್ಮಕ್ಕೆ ತೊಂದರೆ ನೀಡಿ ನಮ್ಮ ಧರ್ಮ ಶ್ರೇಷ್ಠ ಎನ್ನುವುದು ತಪ್ಪು. ಯಾವುದೇ ಧರ್ಮವಾಗಿರಲಿ, ಎಲ್ಲರೂ ಒಂದು ಎನ್ನುವ ಮನೋಭಾವ ಮೂಡಿ, ಎಲ್ಲಾ ಧರ್ಮಗಳ ಜನರನ್ನ ಸಮಾನವಾಗಿ ಕಾಣುವುದೇ ನಿಜವಾದ ಧರ್ಮ.
ಹೇಮಂತ್ ಕೋಲಾರ
ತೃತೀಯ ಬಿ.ಎಸ್ಸಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದೊಡ್ಡಬಳ್ಳಾಪುರ.
[…] […]