ಮೋಹನ ದಾಸ ಕರಮ್‌ಚಂದ್ರ ಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತು ಆಲೋಚನಾ ವಿಧಾನಗಳ ಬಗ್ಗೆ ಆಗಾಗ ಚರ್ಚೆಗಳು ನಡೆಯುವುದನ್ನು ನಾವು ಗಮನಿಸುತ್ತಲೆ ಬಂದಿದ್ದೇವೆ. ಕೆಲ ಗಾಂಧಿವಾದಿಗಳು ಮತ್ತು ಗಾಂಧಿ ಭಕ್ತರಂತು ಈ ಚರ್ಚೆಯು ಇಂದಿನ ಕಾಲಘಟ್ಟದ ಯುವ ಅಂಬೇಡ್ಕರ್ ವಾದಿಗಳು ಶುರು ಮಾಡಿರುವ ವಿವಾದ ಎಂಬಂತೆ ಬಿಂಬಿಸುವುದನ್ನು ನೋಡಿದ್ದೇವೆ. ಆದರೆ ಇವರಿಗೆ ಈ ಚರ್ಚೆಯು ಇಂದಿನದ್ದಲ್ಲಾ ಇದು ಸ್ವಾತಂತ್ರ್ಯ ಪೂರ್ವದಲ್ಲಿ ಅವರಿಬ್ಬರೂ ಬದುಕಿದ್ದಾಗಲೆ ನಡೆಯಿತಿದ್ದ ಚರ್ಚೆ ಹಾಗು ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ಮೊದಲೇ ಬೆತ್ತಲಾಗಿದ್ದ ಗಾಂಧಿಯನ್ನು ತಮ್ಮ “What Congress and Gandhi have done to untouchables” ಎಂಬ ಕೃತಿಯ ಮುಖಾಂತರ 1945ರಲ್ಲೇ ಮತ್ತಷ್ಟು ಬೆತ್ತಲಾಗಿಸಿದ್ದರು ಎಂಬುದು ಬಹುಶಃ ಇವರಿಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದರೂ ಜಾಣ ಕುರುಡತನವನ್ನು ತೋರಿಸುತಿದ್ದಾರೋ ಗೊತ್ತಿಲ್ಲಾ? ಹಾಗಾಗಿ, ಇವರು ಡಾ.ಬಾಬಾಸಾಹೇಬರ ಬರಹ ಮತ್ತು ಭಾಷಣಗಳ 9 ನೇ ಸಂಪುಟವನ್ನು ಓದಿದರೆ ಒಳಿತು ಅನ್ನಿಸುತ್ತದೆ.

ಜಗದ್ವಿಖ್ಯಾತ ಚಿಂತಕರು, ಮುತ್ಸದ್ಧಿ ರಾಜಕಾರಣಿಯು ಹಾಗು ಮಾನವ ಹಕ್ಕುಗಳ ಹೋರಾಟಗಾರರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ಇಡೀ ಭಾರತವನ್ನು ಸಮೂಹ ಸನ್ನಿಗೆ ಒಳಪಡಿಸಿದ ಗಾಂಧಿಯವರನ್ನು ಸುಖಾಸುಮ್ಮನೆ ಟೀಕಿಸಲು ಹಾಗು ತಿರಸ್ಕರಿಸಿಲು ಸಾಧ್ಯವೆ? ಖಂಡಿತವಾಗಿಯೂ ಸಾಧ್ಯವಿಲ್ಲ. ಬಾಬಾಸಾಹೇಬರ ಒಂಬತ್ತನೇ ಸಂಪುಟವನ್ನು ಓದಿದಾಗ ಬಾಬಾಸಾಹೇಬರು ಗಾಂಧಿಯನ್ನು ಟೀಕಿಸಲು ಹಾಗು ತಿರಸ್ಕರಿಸಲು ಸ್ಪಷ್ಟವಾದ ಕಾರಣಗಳು ಇದ್ದವು ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತೆ. ಅದು ಅಂದಿನ ಪರಿಸ್ಥಿತಿಗೆ ತಕ್ಕಂತೆ ಗಾಂಧಿಯವರು ಹಾಗೆ ನಡೆದು ಕೊಂಡರು ಹಾಗಾಗಿ ನಾವು ಈಗಲು ಅದನ್ನೆ ಮುಂದಿಟ್ಟುಕೊಂಡು ಅವರನ್ನು ಟೀಕಿಸುವುದು ಅಥವಾ ತಿರಸ್ಕರಿಸುವುದು ತಪ್ಪು ಎಂದು ಅವರ ಸಮರ್ಥಕರು ವಾದಿಸುವುದಾದರೆ, ಜರ್ಮನಿಯ ಹಿಟ್ಲರ್, USSR ನ ಸ್ಟಾಲಿನ್, ಇಟಲಿಯ ನೆಪೋಲಿಯನ್, ಭಾರತದ ಸಂಘ ಪರಿವಾರವು ಹಾಗು ನಾಥೂರಾಮ್ ಗೂಡ್ಸೆ ಮಾಡಿದ್ದು ಕೂಡ ಸರಿಯೆಂದು ಅವರು ಒಪ್ಪಬೇಕಾಗುತ್ತದೆ, ಏಕೆಂದರೆ ಮೇಲಿನವರು ಮಾಡಿದ ಕೃತ್ಯಗಳು ಹೇಗೆ ಕ್ಷಮಿಸಲಾಗಾದ ಅಪರಾಧವೋ ಹಾಗೆಯೇ ದಲಿತ ಮತ್ತು ಹಿಂದುಳಿದ ವರ್ಗಗಳ ವಿಷಯದಲ್ಲಿ ಗಾಂಧಿ ಮಾಡಿದ ಅಪರಾಧಗಳು ಕ್ಷಮಿಸಲಾಗದಂತವು!

ಪ್ರತಿ ದೇಶ ಮತ್ತು ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಸಮರ್ಥಿಸಿಕೊಳ್ಳಲು ಹಾಗು ಜನರು ತಮ್ಮನ್ನು ಒಪ್ಪಿಕೊಳ್ಳುವಂತೆ ಮಾಡಲು ಒಂದು Narrative ಗಳನ್ನು ಸೃಷ್ಟಿ ಮಾಡುತ್ತಾರೆ ಎಂಬ ಸತ್ಯವನ್ನು ಗಾಂಧಿವಾದಿಗಳು ಹಾಗು ಗಾಂಧಿ ಭಕ್ತರು ಕೂಡ ಒಪ್ಪುತ್ತಾರೆ ಎಂದು ಭಾವಿಸುತ್ತೇನೆ. ಹಾಗಾಗಿ, ಗಾಂಧಿಯವರನ್ನು ಅಹಿಂಸವಾದಿ, ಮಾನವತಾವಾದಿ, ಅಸ್ಪೃಶ್ಯರ ಬಂದು ಮತ್ತೊಂದು ಮಗದೊಂದು ಎಂದು ಒಪ್ಪಿಸಲು ಹಾಗೂ ಜನರು ತಮ್ಮನ್ನು ಒಪ್ಪಿಕೊಳ್ಳುವಂತೆ ಮಾಡಲು ಅವರ ಜೀವಂತ ಕಾಲದಲ್ಲೂ ಹಾಗು ನಂತರದಲ್ಲಿ 48,000 ಪುಟ ಗಳನ್ನೊಳಗೊಂಡ 98 ಸಂಪುಟಗಳ Gandhi’s Life and his Writings ಮುಂಖಾಂತರ ಸೃಷ್ಟಿಸಿದ Narrative ಭಾರತದ ಬಹುತೇಕರನ್ನು Convince ಮಾಡುವಲ್ಲಿ ಸಫಲವಾಯಿತು. ಗಾಂಧಿ ಮತ್ತು ಗಾಂಧಿವಾದದ ಬಲೆಯಲ್ಲಿ ಸಿಕ್ಕಿ ನರಳುತ್ತಿರುವ ದಲಿತರು ಕೂಡ ಈ Narrative ಅನ್ನು ಒಪ್ಪಿಕೊಂಡು ಅವರನ್ನು ತಮ್ಮ ವಿಮೋಚಕರು ಎಂದು ಒಪ್ಪು ಅಪ್ಪಿಕೊಳ್ಳುವಂತಾಯಿತು!

ಆದರೆ, ಬಾಬಾಸಾಹೇಬರ ಜನ್ಮ ಶತಮಾನೋತ್ಸವದ ಅಂಗವಾಗಿ 1991ರಲ್ಲಿ ಪ್ರಕಟಗೊಂಡ ಅವರ ಬರಹ ಮತ್ತು ಭಾಷಣಗಳು ಇಡೀ ಜಗತ್ತನ್ನು ಅದರಲ್ಲೂ ಭಾರತದ ದಲಿತರ ಕಣ್ತೆರಸಿದವು, ಅದೇ ಕಾಲಘಟ್ಟದಲ್ಲಿ ಅತ್ಯಂತ ಪ್ರಬಲವಾಗಿ ನಡೆಯುತ್ತಿದ್ದ ದಾದಾಸಾಹೇಬ್ ಕಾನ್ಷೀರಾಂಜಿ ಅವರ ಬಹುಜನ ಚಳವಳಿಯು ಬಹುಜನರನ್ನು ಮತ್ತಷ್ಟು ಜಾಗೃತ ಗೊಳಿಸಿ ಮುಚ್ಚಿಟ್ಟಲ್ಪಟ್ಟ ನೈಜ ಇತಿಹಾಸವನ್ನು ತಿಳಿಯುವಂತೆ ಮಾಡಿತು ಹಾಗು ಈ ಸಮುದಾಯಗಳ ಒಳಗೆ ಒಂದು ಬುದ್ಧಿವಂತ ವರ್ಗವನ್ನೆ ಸೃಷ್ಟಿಸಿ, ಇವರ ಮುಖಾಂತರ ಇತಿಹಾಸದ ಅಂತರ್ ಗರ್ಭದಲ್ಲಿ ಅಡಗಿದ್ದ ಸತ್ಯಗಳ ಅನಾವರಣ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ತಯಾರಾದ ಯುವ ಚಿಂತಕರು ಹಾಗೂ ಹೋರಾಟಗಾರರು ಈ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದ ಪರಿಣಾಮ ದೇಶದಲ್ಲಿ ರಾಜಕೀಯ ಪಲ್ಲಟಗಳು ಆಗಿದ್ದು ಇತಿಹಾಸವೆ ಸರಿ!

Narrative ಕಾಲ

1919ರಲ್ಲಿ ಭಾರತದ ರಾಜಕಾರಣಕ್ಕೆ ಧುಮುಕಿದ ಗಾಂಧಿಯವರು ಕೇವಲ ಬುದ್ಧಿಜೀವಿಗಳ ಕೂಟವಾಗಿದ್ದ ಕಾಂಗ್ರೆಸನ್ನು ತಮ್ಮ ಸಮುದಾಯದ ಹಣದ ಮುಖಾಂತರ ಕಾಂಗ್ರೆಸ್ಸನ್ನು ಜನಸಮೂಹಕ್ಕೆ ತಲುಪಿಸುವ ಕೆಲಸವನ್ನು ಪ್ರಾರಂಭ ಮಾಡುತ್ತಾರೆ. ಯಾರೆಲ್ಲಾ ವಾರ್ಷಿಕವಾಗಿ ನಾಲ್ಕು ಆಣೆ ದುಡ್ಡನ್ನು ಕಟ್ಟಿ ಪಕ್ಷವನ್ನು ಸೇರಬಲ್ಲರೋ ಅವರಿಗೆ ಪಕ್ಷದಲ್ಲಿ ಸೇರುವ ಮುಕ್ತ ಅವಕಾಶವನ್ನು ನೀಡುತ್ತಾರೆ. 1922ರಲ್ಲಿ ಬರ್ದೋಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ತೆಗೆದುಕೊಂಡು ಅದರ ಪೈಕಿ ಶೋಷಿತರ ಅರ್ಥಾತ್ ಅಸ್ಪೃಶ್ಯರ ಉದ್ದಾರಕ್ಕಾಗಿ ತಿಲಕ್ ಸ್ವರಾಜ್ಯ ನಿಧಿಯ 1 ಕೋಟಿ ರೂಪಾಯಿಗಳ ಪೈಕಿ 5 ಲಕ್ಷ ರೂಪಾಯಿಗಳನ್ನು ನೀಡಲು ತೀರ್ಮಾನಿಸಿ, ಸ್ವಾಮಿ ಶ್ರದ್ಧಾನಂದರವರ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸುತ್ತಾರೆ. ಆದರೆ ನಂತರದಲ್ಲಿ ಲಕ್ನೋದಲ್ಲಿ ನಡೆದ ಕಾರ್ಯಕಾರಣಿಯಲ್ಲಿ ಅಸ್ಪೃಶ್ಯರ ಉದ್ಧಾರಕ್ಕಾಗಿ ಮೀಸಲಿಟ್ಟ ಹಣವನ್ನು 5 ಲಕ್ಷ ರೂಪಾಯಿಗಳಿಂದ 2 ಲಕ್ಷಕ್ಕೆ ಇಳಿಸುತ್ತಾರೆ. ಇದರಿಂದ ಅಸಮಾಧಾನ ಗೊಂಡ ಶ್ರದ್ಧಾನಂದರವರು ಸಮಿತಿಗೆ ರಾಜೀನಾಮೆಯನ್ನು ನೀಡುತ್ತಾರೆ.

ಮತ್ತೆ 1923ರ ಗಯಾದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲೂ ಅಸ್ಪೃಶ್ಯರ ಸಮಸ್ಯೆ ಮತ್ತು ಉದ್ದಾರದ ಬಗ್ಗೆ ಏನು ಮಾಡಲಾಗದೆ, ಮೀಸಲಿಟ್ಟ ಹಣವನ್ನು ಇಂದು ಸರ್ಕಾರಗಳು ಹೇಗೆ SCP/ TSP ಹಣವನ್ನು ಖರ್ಚು ಮಾಡದೆ ಉಳಿಸಿಕೊಂಡು ಅಥವಾ ಬೇರೆ ಕಾರ್ಯಕ್ರಮ ಬಳಸಿಕೊಳ್ಳುತ್ತಾರೋ ಹಾಗೆ ಅಂದು ಕೂಡ ಮಾಡಿ, ಏನು ಮಾಡದೆ ನಾವು ದಲಿತರ/ ಅಸ್ಪೃಶ್ಯರ ಉದ್ದಾರಕ್ಕೆ ದುಡಿಯುತ್ತಿದೇವೆ ಎಂದು ಇಂದಿನ ಮೋದಿ ಮತ್ತು BJP ಯ ಹಾಗೆ ಅಂದು ಗಾಂಧಿ ಮತ್ತು ಕಾಂಗ್ರೆಸ್ ಕೂಡ ಪ್ರಚಾರ ತೆಗೆದುಕೊಳ್ಳುತ್ತದೆ, ಇದನ್ನು ಬಾಬಾಸಾಹೇಬರು ಸಾಕ್ಷಿ ಸಮೇತ ತಮ್ಮ ಕೃತಿಯಲ್ಲಿ ವಿವರಿಸುತ್ತಾರೆ.

ಗಾಂಧಿಯವರ ಎರಡು ಮುಖಗಳು

ಗಾಂಧಿಯವರು ಎರಡು ಪತ್ರಿಕೆಗಳನ್ನು ನಡೆಸುತಿದ್ದರು. ನವಜೀವನ್ ಎಂಬ ಗುಜರಾತಿ ಪತ್ರಿಕೆ ಹಾಗು ಯಂಗ್ ಇಂಡಿಯ ಎಂಬ ಇಂಗ್ಲಿಷ್ ಪತ್ರಿಕೆ. ಗಾಂಧಿಯವರು ತಮ್ಮ ಇಂಗ್ಲಿಷ್ ಪತ್ರಿಕೆಯ ಮುಖಾಂತರ ತಾವು ಬಹಳ ದೊಡ್ಡ ಉದಾರವಾದಿ, ಪ್ರಜಾಪ್ರಭುತ್ವವಾದಿ ಮತ್ತು ಆಧುನಿಕ ಆಲೋಚನೆಗಳನ್ನು ಒಳಗೊಂಡಿರುವ ವ್ಯಕ್ತಿಯೆಂಬಂತೆ ಬಿಂಬಿಸುವಂತ ಲೇಖನಗಳನ್ನು ಬರೆಯುತ್ತಿದ್ದರು ಹಾಗು ತಮ್ಮ ಗುಜರಾತಿ ಪತ್ರಿಕೆಯ ಮುಖಾಂತರ ಅವರು ತಾನೊಬ್ಬ ಸನಾತನಿ ಹಾಗು ಮೂಲಭೂತವಾದಿ ಎಂಬಂತೆ ಲೇಖನಗಳನ್ನು ಪ್ರಕಟಿಸುತ್ತಾ ಜನರನ್ನು ಹೇಗೆ ವಂಚಿಸುತಿದ್ದರು ಎಂಬುದನ್ನು ಕೂಡ ಬಾಬಾಸಾಹೇಬರು ತಮ್ಮ ಕೃತಿಯಲ್ಲಿ ದಾಖಲಿಸುತ್ತಾರೆ.

ಗಾಂಧಿಯವರು ಸದಾ ಚಾತುರ್ವಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಕೊಂಡು ಈ ದೇಶದ ಉಳಿವು ಮತ್ತು ಪ್ರಗತಿ ಕೇವಲ ಜಾತಿ ವ್ಯವಸ್ಥೆಯಿಂದ ಸಾಧ್ಯವೆಂದು ಪದೆ ಪದೆ ಸಾರಿ ಹೇಳುತಿದ್ದರು ಎಂಬುದನ್ನು ಕೂಡ ನಾವು ಒಪ್ಪಲೆಬೇಕು, ಆದರೂ ಗಾಂಧಿಯವರನ್ನು ಒಪ್ಪಿಸಲು ಸೃಷ್ಟಿಸಿದ Narrative ಅಲ್ಲಿ ಗಾಂಧಿಯವರನ್ನು ಮಾತ್ರ ಜಾತಿ ವಿರೋಧಿ, ಅಸ್ಪೃಶ್ಯರ ಮುಕ್ತಿದಾತ ಎಂದು ಹೇಳುತ್ತ ಅದಕ್ಕೆ ಪೂರಕವಾದ ಕಥೆಗಳನ್ನು ಹೆಣೆಯುವದರಲ್ಲಿ ಗಾಂಧಿವಾದಿಗಳು ಯಶಸ್ವಿಯಾದದ್ದು ಮಾತ್ರ ಸತ್ಯ!

ಗಾಂಧಿ ಮತ್ತು ದಲಿತರ ಅಧಿಕಾರ ನಿರಾಕರಣೆ

1919ರ ಭಾರತ ಸರ್ಕಾರದ ಕಾಯ್ದೆಯಂತೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಕಾಲಕ್ಕೆ ತಕ್ಕಂತೆ ಹಾಗು ಅವಶ್ಯಕತೆಯ ಅನುಗುಣವಾಗಿ ಸಂವಿಧಾನದ ಬದಲಾವಣೆ ತರಬಹುದಾಗಿತ್ತು ಹಾಗಾಗಿ 1928ರಲ್ಲಿ ಸರ್ ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಸೈಮನ್ ಆಯೋಗವನ್ನು ರಚಿಸಿಲಾಗಿತ್ತು. ಭಾರತ ಸರ್ಕಾರದ ಕಾರ್ಯದರ್ಶಿಯಾಗಿದ್ದ ಲಾರ್ಡ್ ಬರ್ಕಿನ್ಹೆಡ್ ಅವರು ಭಾರತೀಯರಿಗೆ ಆಯೋಗದಲ್ಲಿ ಅವಕಾಶವನ್ನು ನಿರಾಕರಿಸಿದ್ದರು ಹಾಗಾಗಿ ಕಾಂಗ್ರೆಸ್ ಪಕ್ಷವು ಆಯೋಗವನ್ನು ಬಹಿಷ್ಕರಿಸಿತ್ತು. ಹಾಗಾಗಿ ನಂತರದಲ್ಲಿ ಬ್ರಿಟಿಷ್ ಸರ್ಕಾರವು ಲಂಡನ್ ನಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಿ, ಆ ಸಭೆಗೆ ಭಾರತೀಯ ಪ್ರತಿನಿಧಿಗಳನ್ನು ಆಹ್ವಾನಿಸಿ ಮುಂದಿನ ಸಂವಿಧಾನದ ಬಗ್ಗೆ ಅವರ ಅಭಿಪ್ರಾಯವನ್ನು ಸಂಗ್ರಹಿಸಲು ತೀರ್ಮಾನಿಸಿ ಅದರಂತೆಯೆ 12, ನವೆಂಬರ್ 1930ರಲ್ಲಿ ಕಿಂಗ್ ಜಾರ್ಜ್ V ಲಂಡನ್ನಿನಲ್ಲಿ ಭಾರತೀಯ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿದರು. ಈ ಸಭೆಗೆ ಅಸ್ಪೃಶ್ಯ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲು ಡಾ.ಬಿ.ಅರ್‌. ಅಂಬೇಡ್ಕರ್ ಮತ್ತು ದೀವಾನ್ ಬಹದ್ದೂರ್ ಆರ್ ಶ್ರೀನಿವಾಸನ್ ಅವರಿಗೆ ಅವಕಾಶವನ್ನು ಬ್ರಿಟಿಷ್ ಸರ್ಕಾರ ಕಲ್ಪಿಸಿತ್ತು ಹಾಗಾಗಿ ಈ ಸಮಾವೇಶವು ಅಸ್ಪೃಶ್ಯರಿಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿತ್ತು.

ಮೊದಲನೆಯ ದುಂಡು ಮೇಜಿನ ಸಭೆಯನ್ನು ಕಾಂಗ್ರೆಸ್ ಪಕ್ಷವು ಬಹಿಷ್ಕರಿಸಿದ ಪರಿಣಾಮ ಸರ್ಕಾರವು ಕಾಂಗ್ರೆಸ್ ನ ಅಭಿಪ್ರಾಯ ತಿಳಿಯಲು ಸಾಧ್ಯವಾಗದ ಕಾರಣ ಮತ್ತೆ ಎರಡನೇ ದುಂಡು ಮೇಜಿನ ಸಭೆಗೆ ಆಹ್ವಾನ ನೀಡಲಾಗಿತ್ತು ಆ ಸಭೆಗೆ ಕಾಂಗ್ರೆಸ್ ಪಕ್ಷವು ಹಾಜರಾಗಲು ತಿರ್ಮಾನಿಸಿ ಗಾಂಧಿಯವರನ್ನು ತನ್ನ ಪ್ರತಿನಿಧಿಯಾಗಿ ಕಳುಹಿಸಿತು,. ಆದರೆ, ಕಾಂಗ್ರೆಸ್ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಗಾಂಧಿಯು ಮೊದಲನೆಯ ದಿನದಿಂದಲೇ ತಾನೊಬ್ಬನೆ ದೇಶದ ಏಕೈಕ ಪ್ರತಿನಿಧಿ ಇನ್ನು ಉಳಿದವರ್ಯಾರು ದೇಶದ ಪ್ರತಿನಿಧಿಗಳಲ್ಲ ಎಂಬಂತೆ ವರ್ತಿಸುತ್ತ ಇತರೆ ಪ್ರತಿನಿಧಿಗಳನ್ನು ಅವಮಾನಿಸ ತೊಡಗಿದರು. ಇನ್ನು ಬಾಬಾಸಾಹೇಬರು ಕೂಡ ದಲಿತರ ಪ್ರತಿನಿಧಿಯಲ್ಲಾ ದಲಿತರ ಪ್ರತಿನಿಧಿಯೂ ಕೂಡ ತಾನೆ ಎಂದು ಮಾತನಾಡ ತೊಡಗಿದರು. ಜೊತೆಗೆ ಬಾಬಾಸಾಹೇಬರು ದಲಿತರ ಪರವಾಗಿ ಸಭೆಯಲ್ಲಿ ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಮುಖ್ಯವಾಗಿ ಮತದಾನದ ಹಕ್ಕು ಹಾಗು ಪ್ರತ್ಯೇಕ ಚುಣಾಯಕಗಳನ್ನು ವಿರೋಧಿಸುತ್ತಾ, ದಲಿತರಿಗೆ ರಾಜಕೀಯ ಅಧಿಕಾರ ನೀಡುವುದರಿಂದ ಹಿಂದೂ ಧರ್ಮದಲ್ಲಿ ಒಡಕು ಮೂಡುತ್ತದೆ ಎಂಬ ಬಾಲಿಶ ವಾದವನ್ನು ಮಂಡಿಸಿ, ದಲಿತರಿಗೆ ಯಾವ ಸೌಲಭ್ಯಗಳು ಬೇಕೋ ಅದನ್ನು ಕೇಳಲಿ ನಾವು ಅದನ್ನು ಕೊಡಲು ಸಿದ್ದ, ಆದರೆ ರಾಜಕೀಯ ಅಧಿಕಾರವನ್ನು ಬಿಟ್ಟು ಎಂದು ನೇರವಾಗಿ ಬಾಬಾ ಸಾಹೇಬರನ್ನು ವಿರೋಧಿಸುತ್ತಾರೆ.

ಆದರೆ ಬಾಬಾ ಸಾಹೇಬರು ಗಾಂಧಿಯವರಿಗೆ ಅದೇ ಪ್ರಶ್ನೆಯನ್ನು ಕೇಳುತ್ತಾ ನೀವು ಕೂಡ ನಿಮಗೆ ಏನು ಬೇಕೆಂಬುದನ್ನು ಬ್ರಿಟಿಷರ ಸರ್ಕಾರದ ಮುಂದೆ ಕೇಳಿ ನಿಮಗೆ ಏಕೆ ಸ್ವಾತಂತ್ರ್ಯ ಬೇಕು?ಎಂದು ಕೇಳಿದಾಗ ಕೊನೆಗೆ ಉತ್ತರವಿಲ್ಲದೆ ಗಾಂಧಿಯವರು ಸುಮ್ಮನಾಗುತ್ತಾರೆ.

ಹೀಗೆ ಗಾಂಧಿಯವರು ದುಂಡುಮೇಜಿನ ಸಭೆಗೆ ಕೇವಲ ಅಂಬೇಡ್ಕರ್ ಅವರನ್ನು ವಿರೋಧಿಸಲೆಂದೇ ಬಂದವರಂತೆ ವರ್ತಿಸಿದ್ದು ಮಾತ್ರ ಐತಿಹಾಸಿಕ ಸತ್ಯ. ಅದರ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರವಾಗಿ ನಿಂತಿದ್ದ ಮುಸ್ಲಿಂ ಲೀಗ್ ಮತ್ತು ಇತರೆ ಧರ್ಮಿಯರನ್ನ ಅಂದರೆ ಕ್ರೈಸ್ತ ಪ್ರತಿನಿಧಿಗಳು ಹಾಗೂ ಇತರೆ ಪ್ರತಿನಿಧಿಗಳನ್ನು ಭೇಟಿಯಾದ ಗಾಂಧಿಯವರು, ತಾವು ಯಾವುದೇ ಕಾರಣಕ್ಕೂ ಅಂಬೇಡ್ಕರ್ ಅವರ ಬೇಡಿಕೆಗಳಿಗೆ ಬೆಂಬಲ ನೀಡಕೂಡದು ಹಾಗೆ ತಾವು ಮಾಡಿದ್ದೆಯಾದರೆ ತಾನು ಅವರು ಮಂಡಿಸುವ ಬೇಡಿಕೆಗಳನ್ನು ಯಾವುದೇ ಕಾರಣಕ್ಕೂ ವಿರೋಧಿಸುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ಆದರೆ ಅದೃಷ್ಟವಶಾತ್ ಗಾಂಧಿಯವರ ಬ್ಲಾಕ್ ಮೇಲ್ ತಂತ್ರಕ್ಕೆ ಇತರೆ ನಾಯಕರು ಒಪ್ಪಲಿಲ್ಲ ಹಾಗಾಗಿ ಕೊನೆಗೂ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ದುಂಡು ಮೇಜಿನ ಸಭೆಯಲ್ಲಿ ಒಂದು ದೊಡ್ಡ ಸಂಘರ್ಷವೇ ನಡೆದುಹೋಗುತ್ತದೆ.

ಕೊನೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾದವನ್ನು ಮಣಿಸಲಾಗದ ಗಾಂಧಿ “ನೀವು ದಲಿತರಿಗೆ ಪ್ರತ್ಯೇಕ ಚುನಾಯಕಗಳನ್ನು ನೀಡುವುದಾದರೆ ನಾನು ಅದನ್ನು ನನ್ನ ಪ್ರಾಣವನ್ನಾದರೂ ಬಲಿಕೊಟ್ಟು ನಿಲ್ಲಿಸುತ್ತೇನೆ” ಎಂದು ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಾರೆ. ಅಂಬೇಡ್ಕರ್ ಅವರ ಎಲ್ಲಾ ಬೇಡಿಕೆಗಳು ಬ್ರಿಟಿಷರಿಗೆ ಸರಿ ಎನಿಸಿದರೂ ಗಾಂಧಿ ಮತ್ತು ಕಾಂಗ್ರೆಸ್ನವರು ಒಪ್ಪದ ಕಾರಣ, ಇಬ್ಬರೂ ನಂತರದ ದಿನಗಳಲ್ಲಿ ಬ್ರಿಟಿಷ್ ಸರ್ಕಾರ ನೀಡುವ ತೀರ್ಮಾನಕ್ಕೆ ಬದ್ಧರಾಗುವಂತೆ ಒಪ್ಪಿಸಿ ಭಾರತಕ್ಕೆ ಕಳಿಸುತ್ತಾರೆ. ನಂತರ ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ಡೊನಾಲ್ಡ್ ಅವರು 1932ರ ಆಗಸ್ಟ್ ತಿಂಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಬೇಡಿಕೆಗಳಂತೆ ಇಬ್ಬರಿಗೂ ಅನುಕೂಲವಾಗುವಂತೆ ‘ಕೋಮುವಾರು ತೀರ್ಪನ್ನು’ ಪ್ರಕಟಿಸಿದರು. ಅದರ ಮುಖಾಂತರ ಎಲ್ಲಾ ಭಾರತೀಯರಿಗೂ ಮತದಾನದ ಹಕ್ಕು, ದಲಿತರಿಗೆ ಪ್ರತ್ಯೇಕ ಚುಣಾಯಕಗಳು ದಲಿತರು ಮತ್ತು ಸವರ್ಣ ಹಿಂದೂಗಳ ಒಗ್ಗಟ್ಟಿಗಾಗಿ ದಲಿತರಿಗೆ ಎರಡು ಮತಗಳ ಹಕ್ಕನ್ನು ನೀಡುತ್ತಾರೆ. ದಲಿತರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ್ದ ಗಾಂಧಿಯವರಿಗೆ ದಲಿತರಿಗೆ ನೀಡಿದ್ದ ಎರಡು ಮತಗಳ ಹಕ್ಕು ಆಘಾತವನ್ನು ಉಂಟುಮಾಡಿತು. ಹಾಗಾಗಿ ಬ್ರಿಟಿಷರ ನಿಲುವನ್ನು ವಿರೋಧಿಸಿ ಗಾಂಧಿಯು ಬ್ರಿಟಿಷರಿಗೆ ಪತ್ರವನ್ನು ಬರೆದು ದಲಿತರಿಗೆ ನೀಡಿರುವ ಪ್ರತ್ಯೇಕ ಚುನಾಯಕಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಾರೆ.

ಆದರೆ ಬ್ರಿಟಿಷರು ಅದರ ಬಗ್ಗೆ ಏನೇ ತಕರಾರಿದ್ದರು ಅದನ್ನು ನೀವು ಮತ್ತು ಅಂಬೇಡ್ಕರ್ ಕೂತು ಬಗೆಹರಿಸಿಕೊಳ್ಳಿ ಎಂದು ಹೇಳುತ್ತಾರೆ. ಹಾಗಾಗಿ ಬೇರೆ ವಿಧಿಯಿಲ್ಲದೆ, ಕೋಮುವಾರು ತೀರ್ಪನ್ನು ನಿರಾಕರಿಸುವಂತೆ ಅಂಬೇಡ್ಕರ್ ಅವರ ಮೇಲೆ ಒತ್ತಡ ಹೇರುತ್ತಾರೆ. ಆದರೆ ಅಂಬೇಡ್ಕರ್ ಅವರು ಗಾಂಧಿಯ ಒತ್ತಡಕ್ಕೆ ಮಣಿಯದ ಕಾರಣ, ಗಾಂಧಿಯವರು ದಲಿತರ ವಿರುದ್ಧವಾಗಿ ಯರವಾಡ ಜೈಲಿನಲ್ಲಿ ಅಮರಣ ಉಪವಾಸ ಸತ್ಯಾಗ್ರಹವನ್ನು ಕೂರಲು ತೀರ್ಮಾನಿಸಿ ಸೆಪ್ಟೆಂಬರ್ 20ರಂದು ದಲಿತರ ರಾಜಕೀಯ ಹಕ್ಕುಗಳ ವಿರುದ್ದವಾಗಿ ಉಪವಾಸ ಪ್ರಾರಂಭಿಸುತ್ತಾರೆ. ಸುಮಾರು ನಾಲ್ಕು ದಿನಗಳ ಕಾಲ ಅಂಬೇಡ್ಕರ್ ಅವರ ಮೇಲೆ ಎಲ್ಲಾ ರೀತಿಯ ಒತ್ತಡಗಳು ಹೇರಲು ಪ್ರಯತ್ನಿಸುತ್ತಾರೆ. ಪ್ರತಿಭಟನೆ, ಹಣದಾಸೆ, ಅಧಿಕಾರದಾಸೆ, ಕೊಲೆ ಬೆದರಿಕೆ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ದಲಿತರ ಹಳ್ಳಿಗಳ ಮೇಲೆ ದಾಳಿಯು ನಡೆಸುತ್ತಾರೆ.

ಕೊನೆಯದಾಗಿ ದಾರಿಕಾಣದೆ ಬಾಬಾಸಾಹೇಬರು ಒಲ್ಲದ ಮನಸ್ಸಿನಿಂದ ಕೋಮುವಾರು ತೀರ್ಪಿನಿಂದ ಸಿಕ್ಕಿದ್ದ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡು ‘ಮೀಸಲು ಕ್ಷೇತ್ರ’ಗಳನ್ನು ಒಪ್ಪಿ ಮೀಸಲು ಕ್ಷೇತ್ರಗಳಿಗೆ ಹತ್ತು ವರ್ಷಗಳ ಕಾಲಮಿತಿ, ಅನಿರ್ದಿಷ್ಟ ಕಾಲ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ, ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ನಿರ್ಬಂಧ ಮತ್ತು ಇನ್ನೂ ಇತರ ಶರತ್ತುಗಳೊಂದಿಗೆ ಸೆಪ್ಟೆಂಬರ್ 24, 1932ರಂದು ಯರವಾಡ ಜೈಲಿನಲ್ಲಿ “ಪೂನಾ ಒಪ್ಪಂದಕ್ಕೆ” ಸಹಿ ಹಾಕುತ್ತಾರೆ.

ಕಾನ್ಷೀರಾಂಜಿ ಹೇಳುವಂತೆ ಇಲ್ಲಿಂದ ಗಾಂಧಿಯವರು ಭಾರತದಲ್ಲಿ ಚಮಚ ಯುಗಕ್ಕೆ ನಾಂದಿಯಾಡಿದರು! ದುರಂತ ಎಂದರೆ ಪೂನಾ ಒಪ್ಪಂದದಲ್ಲಿ ಹೇಳಿದಂತೆ ನಡೆದುಕೊಳ್ಳದ ಗಾಂಧಿ 1936-37ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ದಲಿತ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿ ತಮ್ಮ ಮತ್ತು ಕಾಂಗ್ರೆಸ್ಸಿನ ಚಮಚಾಗಳನ್ನು ಸೃಷ್ಟಿಸಿ ದಲಿತರ ಸ್ವತಂತ್ರ ಮತ್ತು ಸ್ವಾಭಿಮಾನ ರಾಜಕಾರಣಕ್ಕೆ ತಿಳಾಂಜಲಿ ಹಾಡುತ್ತಾರೆ. ಆದರೆ ಗಾಂಧಿವಾದಿಗಳು ಮಾತ್ರ ತಮ್ಮ Narrative ಅಲ್ಲಿ ದೇಶದ ಉಳಿವಿಗಾಗಿ ಹಾಗು ದಲಿತರ ಪರವಾಗಿ ಗಾಂಧಿಯವರು 24 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು ಎಂದು ದೊಡ್ಡ ಸುಳ್ಳನ್ನು ಅಂದಿನಿಂದ ಇಂದಿನವರೆಗೆ ಮುಂದುವರೆಸಿಕೊಂಡು ಬಂದಿದ್ದಾರೆ.

ಗಾಂಧಿ ಮತ್ತು ವರ್ಣಬೇಧ

ಗಾಂಧಿಯವರನ್ನು ವರ್ಣಬೇಧ ವಿರೋಧಿ, ಅವರು ಸದಾ ವರ್ಣಬೇಧ ನೀತಿಯನ್ನು ಖಂಡಿಸಿ ಕರಿಯರ ಪರ ದ್ವನಿಯಾದವರು ಎಂದೆಲ್ಲಾ ಗಾಂಧಿವಾದಿಗಳು ಹೇಳುವುದನ್ನು ನೋಡಿದ್ದೇವೆ. ಆದರೆ ಗಾಂಧಿಯವರು ನಿಜವಾಗಲೂ ವರ್ಣಬೇಧ ನೀತಿಯ ವಿರುದ್ಧದ ನಿಲುವನ್ನು ಹೊಂದಿದ್ದರೆ ಎಂಬುದನ್ನು ಪರೀಕ್ಷಿಸಿ ನೋಡಿದರೆ ಅದೂ ಕೂಡ ಒಂದು ದೊಡ್ಡ ಜುಮ್ಲಾ ಎಂಬುದು ಗೊತ್ತಾಗುತ್ತದೆ! ಏಪ್ರಿಲ್ 1893ರಲ್ಲಿ, 24 ವರ್ಷದ ಯುವ ವಕೀಲ ಗಾಂಧಿಯವರು ದಕ್ಷಿಣ ಆಫ್ರಿಕಾದ ಶ್ರೀಮಂತ ಗುಜರಾತಿ ಮುಸ್ಲಿಂ ವ್ಯಾಪಾರಿಯ ಕಾನೂನು ಸಲಹೆಗಾರರಾಗಿ ಸೇವೆ ಮಾಡಲು ದಕ್ಷಿಣ ಆಫ್ರಿಕಾ ದೇಶಕ್ಕೆ ಕಾಲಿಡುತ್ತಾರೆ. ಪೀಟರ್ಮಾರ್ಟಿಝಬರ್ಗ್ ನಲ್ಲಿ ಬಿಳಯರಿಗಾಗಿ ಮೀಸಲಿದ್ದ ಮೊದಲನೆಯ ದರ್ಜೆಯ ರೈಲಿನಿಂದ ಗಾಂಧಿಯನ್ನು ಹೊರ ನೂಕಿದ ಕಥೆಯ ಬಗ್ಗೆ ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ ಅದು ಅರ್ಧ ಕಥೆ ಮಾತ್ರ. ಇನ್ನುಳಿದ ಅರ್ಧ ಕಥೆ ಕೇಳಿದರೆ ಮಾತ್ರ ನಮಗೆ ಗಾಂಧಿಯವರ ಅಸಲಿಯತ್ತು ತಿಳಿಯುವುದು! ತನ್ನನ್ನು ರೈಲಿನಿಂದ ಹೊರದಬ್ಬಿದ್ದಕ್ಕೆ ಗಾಂಧಿಯವರಿಗೆ ಖಂಡಿತವಾಗಿಯೂ ಬೇಸರವಾಗಿರರಲಿಲ್ಲ! ಅವರಿಗೆ ಬೇಸರವಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ಮಾಡಲು ಬಂದಿದ್ದ ಶ್ರೀಮಂತ ವ್ಯಾಪಾರಿಗಳನ್ನು ಅದರಲ್ಲೂ ಗಾಂಧಿಯಂತ ಮೇಲ್ಜಾತಿಯವರನ್ನು ಅಲ್ಲಿನ ಕರಿಯರಂತೆ ಅವಮಾನಿಸಿದ್ದಕ್ಕೆ. ಗಾಂಧಿಯವರ ಪ್ರಕಾರ ದಕ್ಷಿಣ ಆಫ್ರಿಕಾದ ನಾಟಲ್ ನಗರಕ್ಕೆ ಭಾರತೀಯರು ವ್ಯಾಪಾರಿಗಳಾಗಿ ಬಂದಿದ್ದು ಬ್ರಿಟಿಷ್ ಪ್ರಜೆಗಳಾಗಿ ಹಾಗಾಗಿ 1858 ರಾಣಿ ವಿಕ್ಟೋರಿಯಾ ಘೋಷಣೆಯ ಪ್ರಕಾರ ಅವರಿಗೂ ಸಮಾನ ಗೌರವದ ಹಕ್ಕಿದೆ ಹಾಗಾಗಿ ತಮ್ಮನ್ನು ಅಲ್ಲಿನ ಕರಿಯರಿಗೆ ಹೋಲಿಸಿ ಅವರಂತೆ ಅವಮಾನಿಸುವುದು ತಪ್ಪು ಎಂಬುದು.

ಗಾಂಧಿಯವರು 1894ರಲ್ಲಿ ನಾಟಲ್ ಇಂಡಿಯನ್ ಕಾಂಗ್ರೆಸ್ (NIC) ಎಂಬ ಶ್ರೀಮಂತರ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ದುಬಾರಿ ಮೂರು ಪೌಂಡ್ ಸದಸ್ಯತ್ವವನ್ನು ನಿಗದಿಪಡಿಸುತ್ತಾರೆ. 1895ರಲ್ಲಿ ಡರ್ಬನ್ ಪೋಸ್ಟ್ ಆಫೀಸ್ ಪ್ರಕರಣವು ಈ ಸಂಸ್ಥೆಯ ಮೊದಲ ರಾಜಕೀಯ ಗೆಲುವು, ಈ ಪ್ರಕರಣವು ಬಹಳ ಕುತೂಹಲಕಾರಿಯಾಗಿದೆ. ಡರ್ಬನ್ ನಲ್ಲಿದ್ದ ಪೋಸ್ಟ್ ಆಫೀಸಿನಲ್ಲಿ ಕರಿಯರಿಗೆ ಮತ್ತು ಬಿಳಿಯರಿಗೆ ಪ್ರತ್ಯೇಕವಾಗಿ ಎರಡು ಪ್ರವೇಶ ದ್ವಾರಗಳು ಇದ್ದವು. ಹಾಗಾಗಿ ಕಾಫೀರರ ಜೊತೆ ಭಾರತೀಯರು ಹೋಗಲು ಸಾಧ್ಯವಿಲ್ಲ, ನಾವು ಮತ್ತು ಬ್ರಿಟಿಷರು ಇಂಡೋ – ಆರ್ಯನ್ ಜನಾಂಗಕ್ಕೆ ಸೇರಿದ ಒಂದೇ ಜನಾಂಗದವರು ಎಂದು ಮ್ಯಾಕ್ಸ್‌‌ ಮುಲ್ಲರ್, ಆರ್ತರ್ ಸ್ಕೋಪನ್ಹ್ವೇರ್ ಮತ್ತು ವಿಲಿಯಂ ಜೋನ್ಸ್ ರ ವಾದವನ್ನು ಉಲ್ಲೇಖಿಸಿ ನಾಟಲ್ ಶಾಸನ ಸಭೆಗೆ ದಿನಾಂಕ 19.12.1894ರಂದು ಮುಕ್ತ ಪತ್ರವನ್ನು ಬರೆದು, ಭಾರತೀಯರಿಗೆ ಪ್ರತ್ಯೇಕ ಪ್ರವೇಶ ದ್ವಾರವನ್ನು ಅಂದರೆ ಮೂರನೆಯ ದ್ವಾರವನ್ನು ತೆರೆಯಬೇಕೆಂದು ಗಾಂಧಿಯವರ ನಾಯಕತ್ವದಲ್ಲಿ ಹೋರಾಟ ಮಾಡಿ ಮೂರನೆಯ ದ್ವಾರವನ್ನು ತೆಗೆಸುವುದರಲ್ಲಿ ಸಫಲರಾಗುತ್ತಾರೆ. ಅವರು ಎಂದಿಗೂ ಸಾಮಾನ್ಯ ಕಾರ್ಮಿಕರ ಜೊತೆ ಸೇರಲು ಬಯಸುತ್ತಿರಲಿಲ್ಲ. ಅವರು ಸದಾ ಅವರಿಂದ ಅಂತರವನ್ನು ಕಾಪಾಡಿಕೊಳ್ಳುತಿದ್ದರು.

ನಂತರದ ದಿನಗಳಲ್ಲಿ ಅವರು ಭಾರತೀಯ ಪ್ರಯಾಣಿಕರ ಪ್ರಮುಖ ವಕ್ತಾರರಾಗಿ 1896ರಲ್ಲಿ ಭಾರತಕ್ಕೆ ಭೇಟಿ ನೀಡಿ ಭಾರತೀಯರ ಮೇಲಿನ ಬ್ರಿಟಿಷರ ವರ್ಣಬೇಧದ ಬಗ್ಗೆ ಅನೇಕ ಸಭೆಗಳನ್ನು ನಡೆಸಿದರು. 1897ರಲ್ಲಿ ಗಾಂಧಿಯವರು ಡರ್ಬನ್‌‌‌‌ಗೆ ಹಿಂತಿರುಗಿ ಹೋದಾಗ, ಅವರ ನಿಲುವನ್ನು ಅರಿತ ಅಲ್ಲಿನ ಬಿಳಿಯರು ಗಾಂಧಿಯವರನ್ನು ಹಡಗಿನಿಂದ ಕೆಳಗಿಳಿಯಲು ಬಿಡಲಿಲ್ಲ ಸಮಾರು ದಿನಗಳ ಸಂಧಾನದ ನಂತರ ಅವರನ್ನು ಕೆಳಗಿಳಿಯಲುಬಿಟ್ಟರು. ದಿನಾಂಕ 12, ಜನವರಿ 1897ರಂದು ಅವರು ಮನೆಗೆ ಹೋಗುವ ಸಂಧರ್ಭದಲ್ಲಿ ಅವರ ಮೇಲೆ ದಾಳಿ ಮಾಡಿ ಅವರನ್ನು ಬಿಳಿಯರು ಥಳಿಸಿದ್ದರು. ಎರಡು ದಿನಗಳ ನಂತರ ಅವರು The Natal Advertiser ಎಂಬ ಪತ್ರಿಕೆಯ ಸಂದರ್ಶನದಲ್ಲಿ ತಮಗೂ ಭಾರತೀಯ ಕೂಲಿಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೆಯನ್ನು ನೀಡಿ ಭಾರತೀಯ ಕೂಲಿಗಳಿಂದ ದೂರ ಉಳಿದರು.

ನಮ್ಮ ವಾಟ್ಸಾಪ್ ಚಾನಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

1906ರ ಸೆಪ್ಟೆಂಬರ್ ತಿಂಗಳಲ್ಲಿ ಬ್ರಿಟಿಷ್ ಸರ್ಕಾರವು ಬಿಳಿಯರಿಗೆ ವ್ಯಾಪಾರದಲ್ಲಿ ತಲೆನೋವಾಗಿದ್ದ ಭಾರತೀಯ ವ್ಯಾಪಾರಸ್ಥರನ್ನು ನಿಯಂತ್ರಿಸಲು ‘Transvaal Asiatic Law Amendment Act ಅನ್ನು ತಂದು ಕೇವಲ ಹೆಬ್ಬೆಟ್ಟು ಮುದ್ರೆಯೊಂದಿದ ಪ್ರಮಾಣ ಪತ್ರ ಇರುವ ಭಾರತೀಯರಿಗೆ ಮಾತ್ರ ಟ್ರಾನ್ಸ್ ವಾಲ್ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ಇಲ್ಲದವರನ್ನು ಭಾರತಕ್ಕೆ ವಾಪಸ್ ಕಳಿಸಲಾಗುವುದು ಎಂಬ ಕಾನೂನು ತಂದರು. ಇದರ ವಿರುದ್ಧ ಗಾಂಧಿಯವರು ಹೋರಾಟದ ನಾಯಕತ್ವವನ್ನು ವಹಿಸಿದರು. ಸುಮಾರು ಎರಡು ಸಾವಿರ ಜನರು ಸಾರ್ವಜನಿಕವಾಗಿ ತಮ್ಮ ಪಾಸ್ ಗಳನ್ನು ಸುಟ್ಟು ಹಾಕಿದರು, ಗಾಂಧಿಯವರನ್ನು ಬಹಳ ಗಂಭೀರವಾಗಿ ಥಳಿಸಿ, ಬಂಧಿಸಿ ಜೈಲಿಗಟ್ಟಿದರು. ದುರಂತವೆಂದರೆ ಯಾವ ಗಾಂಧಿಯು ಕರಿಯರ ಜೊತೆಗೆ ಪ್ರವೇಶ ದ್ವಾರವನ್ನು ಹಂಚಿಕೊಳ್ಳಲು ನಿರಾಕರಿಸಿದರೋ ಅದೇ ಗಾಂಧಿ ಕೊನೆಗೆ ಕರಿಯರ ಜೊತೆಗೆ ಜೈಲಿನ ಕೋಣೆಯನ್ನು ಹಂಚಿಕೊಳ್ಳಬೇಕಾಯಿತು!

ಜನವರಿ 16, 1909ರಲ್ಲಿ Indian Opinion ಎಂಬ ಪತ್ರಿಕೆಯಲ್ಲಿ “ಮೈ ಸೆಕೆಂಡ್ ಎಕ್ಸ್ಪೀರಿಯೆನ್ಸ್ ಇನ್ ಗಾವ್ಲ್ ” ಎಂಬ ಲೇಖನದ ಮುಖಾಂತರ ತಮ್ಮ ಅನುಭವವನ್ನು ಗಾಂಧಿಯವರು ಹೀಗೆ ಬರೆಯುತ್ತಾರೆ “ನನನ್ನು ಅನಾರೋಗ್ಯ ಕಾಫೀರರು ತಂಗಿದ್ದ ಕೋಣೆಯಲ್ಲಿ ಇರಲು ಬಿಟ್ಟರು, ಇಡೀ ರಾತ್ರಿ ಅಲ್ಲಿ ನಾನು ಅತ್ಯಂತ ಭಯ ಮತ್ತು ಕಷ್ಟದಿಂದ ಕಾಲ ಕಳೆದನು. ನನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಭಗವದ್ಗೀತೆಯನ್ನು ಓದಿಕೊಂಡು ಧ್ಯಾನಿಸಿಕೊಂಡು ನನ್ನನ್ನು ನಾನು ಸಮಾಧಾನ ಮಾಡಿಕೊಂಡು ಉಳಿದಿದ್ದೆ. ಅವರು ಬಹಳ ಕೊಳಕರು. ನಮಗೂ ಮತ್ತು ಅವರಿಗೂ ಯಾವುದೇ ಸಾಮ್ಯತೆಗಳು ಇರಲಿಲ್ಲಾ…. ಎಂದೆಲ್ಲಾ ಬರೆದುಕೊಳ್ಳುತ್ತಾರೆ.

ನಂತರ ಜೈಲಿನಿಂದಲೇ ಬ್ರಿಟಿಷರಿಗೆ ಪತ್ರ ಬರೆದು ತಮ್ಮನ್ನು ಕರಿ ಖೈದಿಗಳಿಂದ ಪ್ರತ್ಯೇಕಗೊಳಿಸಿ ತಮಗೆ ಪ್ರತ್ಯೇಕವಾದ ಹೊದಿಕೆಯನ್ನು ನೀಡಬೇಕು, ಗಲೀಜು ಕಾಫೀರರು ಒದ್ದುಕೊಂಡಿರಬಹುದಾದ ಹೊದಿಕೆಯನ್ನು ನೀಡಬಾರದು, ತಮಗೆ ಪ್ರತ್ಯೇಕ ಆಹಾರ ಹಾಗು ಶೌಚಾಲಯಗಳನ್ನು ನೀಡಬೇಕೆಂದು ಕೂಡ ಮನವಿ ಮಾಡುತ್ತಾರೆ, ಇದು ಗಾಂಧಿಯವರ ವರ್ಣಬೇಧ ನೀತಿ!

ಹರಿರಾಮ್. ಎ
ವಕೀಲರು ಮತ್ತು ಚಿಂತಕರು

ಮುಂದುವರೆಯುವುದು

One thought on “ಗಾಂಧಿ ಮತ್ತು ಅಂಬೇಡ್ಕರ್ : ಎರಡು ದಿಕ್ಕುಗಳು”

Leave a Reply

Your email address will not be published. Required fields are marked *