ಆಡ್ತಾ ಆಡ್ತಾ ಈ ಚುನಾವಣೆಯೂ ಮುಗಿದೇಹೋಯ್ತು! ಆದರೆ ಜನ ಸಾಮಾನ್ಯರ ಬದುಕಿನ ಗುಣಮಟ್ಟ ಐದು ವರ್ಷದ ಹಿಂದಿನದಕ್ಕಿಂತಲೂ ಮೇಲೆ ಹೋದಂತಿಲ್ಲ, ಸಾಮಾಜಿಕರಲ್ಲಿ ಕನಿಷ್ಟ ನೆಮ್ಮದಿಯೂ ಇಲ್ಲ. ಅದೇ ಗಲಾಟೆ, ಅದೇ ಕಿತ್ತಾಟ, ಜಾತಿಯ ಮೇಲಾಟ, ಕೋಮು ಕೋಮುಗಳ ನಡುವೆ ಅಧಿಕಾರದಾಹಿಗಳು ಹಚ್ಚಿದ ಬೆಂಕಿಯನ್ನು ಶಮನಗೊಳಿಸುವ ಬದಲು ಇನ್ನೂ ಧಗಧಗಿಸುವಂತೆ ಮಾಡಿ, ಅದರಾಚೆಗೆ ಕಾಣುವ ಕುರ್ಚಿಯ ಕನಸು ಕಾಣುತ್ತಾ ಸುಖಿಸುವ ನಾಯಕರೆಂಬುವವರ ಪರಿ!

ಹಳೆಯ ನೋಟು ರದ್ದು ಮಾಡಿ ಹೊಸದನ್ನು ಪ್ರಿಂಟು ಮಾಡಿದ್ದಾಯಿತು. ಕಳ್ಳ ಖದೀಮರ ಬಳಿ ಇರುವ ಕಪ್ಪು ಹಣವನ್ನು ಕಿತ್ತು ಬಡವರಿಗೆ ತಲುಪಿಸುವುದಾಗಿ ಆಸೆ ಹುಟ್ಟಿಸಲಾಯಿತು. ಬಡವರು ಬಾಯ್ದಿಟ್ಟುಕೊಂಡು ಕಾಯುತ್ತಾ ಸಹಕರಿಸಿದ್ದೆ ಬಂತು. ಈಗ ಅದೆಲ್ಲಾ ದೇಶದ ಅಭಿವೃದ್ಧಿಯ ದೂರಗಾಮಿ ಆಲೋಚನೆಗಳು’ ಎಂದರು. ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ, ಸುಮ್ಮನಾದರು. ಇನ್ನು ಬಡವರಿಗಾಗಿ ಎಷ್ಟೊಂದು  ಭಾಗ್ಯಗಳು! ಬಡವರ ಮೂಗಿಗೆ ಈ ಭಾಗ್ಯಗಳೆಂಬ ತುಪ್ಪ ಸವರುತ್ತಾ ಅವರನ್ನು ತಮ್ಮ ಹಿಂಬಾಲಕರಾಗಿಯೇ ಇರುವಂತೆ ನೋಡಿಕೊಂಡಿದ್ದೇ ಬಂತು. ಅವರು ದುಡಿದು ಸ್ವಾವಲಂಬಿಯಾಗಲು ಬೆಂಬಲವಾಗುವಂತಹ ಯಾವುದಾದರೂ ಭಾಗ್ಯ ಅವರ ಬದುಕಿನಲ್ಲಿ ಬಂತೆ?

ಇನ್ನು ಕೃಷಿಕರಿಗೆ ಎಂತೆಂತಹ ಭಾಗ್ಯಗಳು…! ಸೋತಾಗ ಆತ್ಮಹತ್ಯೆ ಮಾಡಿಕೊಳ್ಳಲೂ ಉಪಯೋಗಕ್ಕೆ ಬಾರದ ನೀರಿಲ್ಲದ ಹೊಂಡಗಳು! ಆ ಹೊಂಡದಿಂದ ಇಲ್ಲದ ನೀರನ್ನು ಎತ್ತಲು ಪಂಪ್‌ಸೆಟ್‌ಗಳು! ಉದ್ದಾರವಾಗಲು ಇನ್ನೇನು ಬೇಕು! ರೈತನಿಗೆ ಬೆಳೆಯ ಖಾತ್ರಿಯ ಬಗ್ಗೆ ಬೆಳೆದ ಬೆಳೆಗೆ ಬೆಲೆಯ ಖಾತ್ರಿಯ ಬಗ್ಗೆ ಯಾರಾದರೂ ಆಲೋಚಿಸಿದರಾ? ಹಾಗಾಗಿ ಕೊನೆಗೆ ಅವನಿಗೆ ಉಳಿದದ್ದು ಮರಣಭಾಗ್ಯ ಒಂದೇ ಎಂಬಂತಹ ಪರಿಸ್ಥಿತಿ. ಇದೆಂತಹ ವಿಪರ್ಯಾಸ! ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ಮಹತ್ವ. ಈ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು ಎನ್ನುತ್ತಾರೆ. ಅದು ಎಲ್ಲಿಯವರೆಗೆ? ಅವರ ಮತ ಡಬ್ಬದೊಳಗೆ ಬೀಳುವವರೆಗೆ ಮಾತ್ರ! ಇದನ್ನು ಚುನಾವಣೆ ಎನ್ನುವುದಕ್ಕಿಂತ ಬಡಜನರಿಗೆ ಒಂದೆರಡು ತಿಂಗಳು ಮೋಜುಣಿಸುವ ಪ್ರಹಸನ ಎನ್ನುವುದೇ ಸರಿ ಎನಿಸುತ್ತದೆ. ಎಂತೆಂತಹ ನಾಯಕರು ನುರಿತ ನಟರಂತೆ ರಂಗ ಪ್ರವೇಶಿಸುತ್ತಾರೆ!

ಹಗಲು ಹಾದರ ಮಾಡಿ ಸಿಕ್ಕಿ ಬಿದ್ದವರು ಮಲಿನ ಬಟ್ಟೆಯ ಬಿಸುಟು ಹೊಲಸು ಕಳೆದವರಂತೆ ಹೊಸ ಜುಬ್ಬಾ ಧರಿಸಿ ಬರುತ್ತಾರೆ. ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಜೈಲು ಕಂಡಿದ್ದವರು ಖೈದಿ ಬಟ್ಟೆಯನ್ನು ಎಸೆದು ಮಿರಿ ಮಿರಿ ಮಿಂಚುವ ಶುಭ್ರ ಬಟ್ಟೆಯೊಂದಿಗೆ ಬರುತ್ತಾರೆ. ಜೀವನ ಪರ್ಯಂತ ಸರ್ಕಾರಿ ಹುಲ್ಲುಗಾವಲಿನಲ್ಲಿ ಮೇದು ಕೊಬ್ಬಿದ ಅಧಿಕಾರಿಗಳು ನಿವೃತ್ತಿ ಪಡೆದು ಸಫಾರಿ ಸೂಟು ಬಿಚ್ಚೆಸೆದು ದುಡ್ಡಿನ ಗಂಟು ತಬ್ಬಿಕೊಂಡು ನಾಯಕರ ಹೊಸ ಪೋಷಾಕಿನಲ್ಲಿ ರಂಗಕ್ಕೆ ಬಂದಿಳಿಯುತ್ತಾರೆ.

ಒಬ್ಬರೇ, ಇಬ್ಬರೇ, ನೂರಾರು ಸಾವಿರಾರು ಜನ. ಅವರ ದೊಡ್ಡ ದೊಡ್ಡ ಕಾರುಗಳು ಹೈವೆ ಬಿಟ್ಟು ಹಳ್ಳಿ ಹಳ್ಳಿಯ ಗಲ್ಲಿಗಿಳಿಯುತ್ತವೆ. ಜನ ಸೇರಿದ್ದ ಸೋಮಾರಿ ಕಟ್ಟೆಯ ಬಳಿ ನಿಲ್ಲುತ್ತವೆ. ಕಾರಿನಿಂದಿಳಿದ ನಾಯಕರು ‘ನೆಂಟ್ರೆ’ ಅಂತ ಮಾತಾಡಿಸ್ತಾರೆ. ಕೆಲವರ ಹೆಸರು ಹಿಡಿದು ಕರೀತಾರೆ, ಕೈ ಮುಟ್ತಾರೆ, ಹಿರಿಯರಂದ್ರೆ ಕಾಲು ಮುಟ್ತಾರೆ, ಹಬ್ಬಕ್ಕೆ ಬರ್ತಾರೆ, ದೇವ ಸ್ಥಾನದ ಪೂಜೆಗೆ ಬರ್ತಾರೆ, ಮದುವೆಗೆ ಬರ್ತಾರೆ ತಿಥಿಗೂ ಬರ್ತಾರೆ. ಜನ ಧನ್ಯರಾದೆವು ಅಂದುಕೊಳ್ತಾರೆ.

ಲೇಖಕ: ಹಾಡ್ಲಹಳ್ಳಿ ನಾಗರಾಜ್

ನೋಡ ನೋಡುತ್ತಿದ್ದಂತೆಯೇ ಕಣ ರಂಗೇರುತ್ತದೆ. ಎದುರಾಳಿ ನಾಯಕರು ಅವರ ಚಡ್ಡಿಯನ್ನು ಇವರು ಬಿಚ್ತಾರೆ. ಇವರ ಚಡ್ಡಿಯನ್ನು ಅವರು ಬಿಚ್ತಾರೆ. ಇದೇ ಸಂದರ್ಭವನ್ನು ಕೆಲವರು ಸದುಪಯೋಗಪಡಿಸಿಕೊಳ್ತಾರೆ. ಯಾವುದೋ ನೆಪ ಮಾಡಿಕೊಂಡ ಕೆಲ ಹೋರಿಗಳು ಒಳ್ಳೆ ಮೇವಿರುವ ಹುಲ್ಲುಗಾವಲು ಕಡೆ ನೆಗೆದುಕೊಳ್ಳುತ್ತವೆ. ಇನ್ನು ಅಂತಂತವರೇ ಸೇರಿಕೊಂಡು ಅಂತರಗಟ್ಟೆ ಜಾತ್ರೆಗೆ ಹೋದರು ಎಂಬಂತೆ ಎಲ್ಲೆಲ್ಲೋ ಇದ್ದವರು ಮೈತ್ರಿ ಎಂಬ ಕೂಡಾವಳಿ ಮಾಡಿಕೊಂಡು ಜನರ ಮುಂದ ಬರಲು ಅಣಿಯಾಗುತ್ತಾರೆ. ಚಾನಲ್ಗಳವರು ಇದನ್ನು ಕಣ್ಣಾರೆ ಕಾಣದೆ ಮನೆಯಲ್ಲಿ ಕುಳಿತವರಿಗೆ ಅಲ್ಲಿಗೇ ಉಣಬಡಿಸಿ ಧನ್ಯರಾಗ್ತಾರೆ ಊರೂರುಗಳಲ್ಲಿ ಜನರಿಗಾಗಿ ಹಬ್ಬಗಳಾಗುತ್ತವೆ. ಹಣ, ಹೆಂಡ ಹರಿದಾಡುತ್ತದೆ. ಯಾರಿಗುಂಟು ಯಾರಿಗಿಲ್ಲ! ಸಿಕ್ಕವರಿಗೆ ಸೀರುಂಡೆ. ತೋಳದ ವೇಷ ಕಳಚಿದ ನಾಯಕರು ಹಸುವಿನ ವೇಷದಲ್ಲಿ ಪ್ರತಿಯೊಬ್ಬರ ಬಾಗಿಲಲ್ಲೂ ಪ್ರತ್ಯೇಕವಾಗಿ ಪ್ರತ್ಯಕ್ಷರಾಗುತ್ತಾರೆ. ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ತಾರೆ. ತಾವೆಷ್ಟು ಸಾಚಾ ಎಂಬುದನ್ನು ಸಮರ್ಥನೆಯ ಮೂಲಕ ನಿರೂಪಿಸುತ್ತಾರೆ. ಅವರ ಇತಿಹಾಸ ಗೊತ್ತಿದ್ದ ಜನ ತಬ್ಬಿಬ್ಬಾಗಿ ನಿಲ್ಲುತ್ತಾರೆ.

ಅದೇ ರೀತಿಯದು ನಮ್ಮ ಅಜ್ಜೇಗೌಡರ ಕತೆ. ಆ ಊರಲ್ಲಿ ಅಜ್ಜೇಗೌಡರೇ ಸಾಹುಕಾರರು. ಊರ ಸುತ್ತಲಿನ ಹಸನಾದ ಜಮೀನೆಲ್ಲಾ ಇವರದೆ. ಬಹುತೇಕ ಜನ ಇವರ ಜಮೀನಿನಲ್ಲೇ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅಷ್ಟಿಷ್ಟು ತುಂಡು ಭೂಮಿ ಇದ್ದವರೂ ಒಂದಿಲ್ಲೊಂದು ಕಾರಣಕ್ಕೆ ಅಜ್ಜೇಗೌಡ ಕುಟುಂಬವನ್ನೇ ಅವಲಂಬಿಸಬೇಕಾಗಿತ್ತು. ಆ ಕುಟುಂಬಕ್ಕೆ ಹಿಂದಿನಿಂದಲೂ ಒಳ್ಳೆಯ ಹೆಸರಿತ್ತು. ಆದರೆ ಬರು ಬರುತ್ತಾ ದುಡ್ಡಿನ ಮದ ಅವನನ್ನು ನಿಧಾನಕ್ಕೆ ದಾರಿ ತಪ್ಪಿಸತೊಡಗಿತು. ದಬ್ಬಾಳಿಕೆ ಪ್ರವೃತ್ತಿ ಬೆಳೆಯಿತು. ಕಂಡ ಕಂಡ ಹೆಣ್ಣುಗಳನ್ನು ಕರೆದು ದಕ್ಕಿಸಿಕೊಳ್ಳತೊಡಗಿದ. ಜನ ಏನು ಮಾಡಿಯಾರು? ಅವರವರೇ ಗೊಣಗಿಕೊಂಡರು. ‘ಅಜ್ಜೇಗೌಡರೇ’ ಎಂದು ಪ್ರೀತಿ ತೋರುತ್ತಿದ್ದವರು ತಮ್ಮ ತಮ್ಮಲ್ಲೇ ‘ಪೋಲಿ ಅಜ್ಜೇಗೌಡ’ ಅನ್ನತೊಡಗಿದರು. ಬರು ಬರುತ್ತಾ ಆ ಹೊಸ ಹೆಸರು ಸಾರ್ವಜನಿಕವಾಗಿ ಕೇಳಿ ಬರತೊಡಗಿತು.

ಅಜ್ಜೇಗೌಡರ ಕುಟುಂಬದ ನೆಂಟರಿಷ್ಟರಿಗೆ ಇರುಸು ಮುರುಸಾಗತೊಡಗಿತು. ಅವರಿಗೆ ಬುದ್ಧಿವಾದ ಹೇಳಿದರು. ಹೊರಕ್ಕೆ ಮದುವೆ ಮಾಡಿಕೊಟ್ಟಿದ್ದ ಅವನ ಹೆಣ್ಣು ಮಕ್ಕಳು ಬಂದು ಬೈದರು. ನಾವು ತಲೆ ಎತ್ತಿ ತಿರುಗುವಂತಿಲ್ಲ. ಎಂಥಾ ಘನತೆವೆತ್ತ ಕುಟುಂಬ ನಮ್ಮದು. ಈಗೆಷ್ಟು ಹಗುರವಾದಿವಿ ಜನರ ಕಣ್ಣಲ್ಲಿ! ಇನ್ನಾದರೂ ಜನರ ಜತೆ ಒಳ್ಳೆ ಸಂಬಂಧ ಇಟ್ಟುಕೊ, ಇಲ್ಲವಾದಲ್ಲಿ ನಾವು ತವರು ಮನೆಯ ಕಡೆ ತಲೆನೇ ಹಾಕೋದಿಲ್ಲ ಎಂದು ಧಮಕಿ ಹಾಕಿ ಬಿಟ್ಟರು.

ಅಜ್ಜೇಗೌಡರಿಗೆ ಸರಿ ಎನಿಸಿತು. ಮೊದಲೆಲ್ಲಾ ಊರ ಜನ ಎಷ್ಟೆಲ್ಲಾ ಪ್ರೀತಿ-ಗೌರವದಿಂದ ʼಅಜ್ಜೇಗೌಡರೆ’ ಎಂದು ಬಾಯಿ ತುಂಬಾ ಕರೆಯುತ್ತಿದ್ದರು. ಈಗ ನನ್ನ ನಡವಳಿಕೆಯಿಂದಾಗಿ ನನ್ನ ಹೆಸರಿನೊಂದಿಗೆ ಪೋಲಿ ಎಂಬುದು ತಳುಕು ಹಾಕಿಕೊಂಡು ಊರವರ ಮುಂದೆ ಎಷ್ಟೊಂದು ಹಗುರಾಗಿ ಬಿಟ್ಟೆ! ಮತ್ತೆ ಮೊದಲಿನಂತಾಗಲು ಸಾಧ್ಯವೆ? ಆದರೆ ಜನಮಾನಸದಲ್ಲಿ ಬೇರೂರಿ ನಿಂತಿರುವ ಈ ಅಸಡ್ಡೆಯ ಭಾವವನ್ನು ತೊಲಗಿಸಲು ಸಾಧ್ಯವೇ? ಎಂದೆಲ್ಲಾ ಯೋಚಿಸಿದ. ಯಾಕಾಗುವುದಿಲ್ಲ? ಜನರ ನೆನಪಿನ ಶಕ್ತಿ ಕಡಿಮೆ. ಅವರನ್ನು ಮತ್ತೆ ನನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಎಷ್ಟು ಹೊತ್ತಿನ ಕೆಲಸ’, ಅವನ ಉಡಾಫೆಯ ಮನಸ್ಸು ಹೇಳಿತು.

ಒಂದು ದೊಡ್ಡ ಔತಣ ಕೂಟ ವ್ಯವಸ್ಥೆ ಮಾಡಿದ. ಆ ಹಳ್ಳಿಯ ಜನ ಎಂದೂ ಕಂಡರಿಯದಂತಹ ಅದ್ಭುತ ಔತಣ ಕೂಟ ಅದು. ಔತಣ ನಡೆಯುವಾಗ ಅಜ್ಜೇಗೌಡರ ಹಂತಿ ಹಂತಿಯಲ್ಲೂ ತಿರುಗಾಡಿದ. ಜನ ಚಪ್ಪರಿಸಿಕೊಂಡು ಊಟ ಸವಿಯುತ್ತಿದ್ದರು. ಅವರ ಸಂಭ್ರಮ ಕಂಡು ಅಜ್ಜೇಗೌಡರ ಖುಷಿಯಾದ. ಊಟ ಮುಗಿಯುತ್ತಾ ಬಂದಂತೆ ಜನರ ಹಳೆಯ ಪ್ರೀತಿಯನ್ನೇ ನಿರೀಕ್ಷಿಸುತ್ತಾ ಕೈ ತೊಳೆದು ಹೊರ ಹೋಗುವ ಜಾಗದ ಬಳಿ ಬಂದು ನಿಂತುಕೊಂಡ. ಊಟ ಮುಗಿಸಿ ತೃಪ್ತರಾದ ಜನ ಕೈ ತೊಳೆದುಕೊಂಡು ಹೊರ ಬರತೊಡಗಿದರು. ಅಜ್ಜೇಗೌಡರನ್ನು ದಾಟಿದ ಪ್ರತಿಯೊಬ್ಬರೂ ‘ಹೋಗಿ ಬರ್ತಿವಿ ಪೋಲಿ ಅಜ್ಜೇಗೌಡರೇʼ ಎನ್ನುತ್ತಾ ನಿರ್ಗಮಿಸ ತೊಡಗಿದರು. ಕೊನೆಗೂ ಜನ ಯಾವುದೇ ಆಮಿಷಕ್ಕೆ ಬಲಿಯಾಗದೆ ತಮ್ಮ ನಾಯಕನ ಗುಣ ಧರ್ಮಗಳನ್ನು ಸರಿಯಾಗಿಯೇ ಗುರ್ತಿಸಿ ಅದಕ್ಕೆ ಸರಿಯಾಗಿ ನಡೆದುಕೊಂಡರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಕಾಲದಲ್ಲಿ ಜನರೂ ಹೀಗೆಯೇ ನಡೆದುಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ!

ಕಥೆಗಳು ಮುಂದುವರೆಯುತ್ತವೆ…

One thought on “ಹಗ್ರಾಣದ ಕತೆಗಳು – 1 ಚುನಾವಣೆಯೂ, ಪೋಲಿ ಅಜ್ಜೇಗೌಡನೂ…”

Leave a Reply

Your email address will not be published. Required fields are marked *