ಮಂಜಣ್ಣ ಗಲ್ಲಕ್ಕೆ ಕೈಕೊಟ್ಟು ಜಗುಲಿಯಲ್ಲಿ ಮಂಕಾಗಿ ಕುಳಿತಿದ್ದ. ಅವನನ್ನು ಒಂದು ಬಗೆಯ ಖಿನ್ನತೆ ಆವರಿಸಿತ್ತು. ಕಳೆದ ಎರಡು ದಿನದಿಂದ ಕುಡಿಯಲು ಸೇಂದಿಯಾಗಲೀ, ಕಳ್ಳಭಟ್ಟಿಯಾಗಲೀ ಸಿಕ್ಕದೇ ಮನಸ್ಸು ವಿಲವಿಲ ಒದ್ದಾಡುತ್ತಿತ್ತು.

ʻಕುಡ್ದುಬಂದು ಮಲಿಕಳ್ತಾನೆ… ನನ್ನ ಮನೆಹಾಳಾಗುತ್ತೆ, ಅವನು ಬಂದ್ರೆ ಕಡ ಕೊಡ್ಬೇಡʼ ಎಂದು ಬೈನೆ ಸೇಂದಿ ಬೀರಪ್ಪನಿಗೂ, ಕಳ್ಳಭಟ್ಟಿ ಕಾಲಾಮನಿಗೂ ಅವನ ಹೆಂಡತಿ ಕಾವೇರಿ ಕಟ್ಟುನಿಟ್ಟಾಗಿ ಹೇಳಿ ಬಂದಿದ್ದಳು. ಹಳ್ಳಿಯ ಹುಡುಗಿಯಾಗಿದ್ದ ಅವಳಿಗೆ ತನ್ನ ಸಣ್ಣ ಹಿಡುವಳಿಯಲ್ಲಿ ವ್ಯವಸಾಯ ಮಾಡಿಕೊಂಡು ಸರೀಕರೆದುರಿಗೆ ಮರ್ಯಾದೆಯಾಗಿ ಬದುಕು ನಡೆಸಬೇಕಾಗಿತ್ತು.

ಹಸುಕರುಗಳನ್ನು ಗದ್ದೆಯ ಹಡ್ಲಿಗೆ ಕಟ್ಟಿಬಂದ ಅವಳು ಮಲಗಿದ್ದ ಆಡನ್ನೂ ಅಲ್ಲಾಡಿಸಿ ನೋಡಿದಳು. ಅದು ಹಾಗೆಯೇ ಮಲಗಿತ್ತು. ಹಿಂದಿನ ದಿನದಿಂದ ಅದು ಸರಿಯಾಗಿ ಮೇಯದೆ ಮಂಕಾಗಿ ನಿಂತುಕೊಳ್ಳುತ್ತಿತ್ತು. ಇದಕ್ಕೇನು ಜ್ವರಗಿರ ಬಂದಿತಾ ಏನಾ? ಕೂಡಿಗೆನಾದ್ರೂ ಹಿಡಕಂಡ್‌ ಹೋಗಿ ಒಂದ್‌ ಇಂಜೆಕ್ಷನ್‌ ಆದ್ರೂ ಕೊಡಿಸ್ಕಂಡ್‌ ಬಂದಿದ್ರಾಗದು… ನಾನೊಬ್ಳೆ ಎಷ್ಟೂಂತಾ ಹೆಣಗಾಡ್ಲಿ ಎಂದು ಪೇಚಾಡಿಕೊಳ್ಳುತ್ತಾ ಹೊರಬಂದು, ಕುಳಿತಿದ್ದ ಗಂಡನಿಗೆ ʻಇದೇನು ಪ್ರಪಂಚವೇ ಮೈಮೇಲೆ ಬಿದ್ದವನಂಗೆ ತಲೆ ಮೇಲೆ ಕೈ ಹೊತ್ಕಂಡು ಕೂತ್ಕಂಡಿದ್ದೀರಲ್ಲಾ… ಒಲೆ ಗುಂಡಿಲಿ ರೊಟ್ಟಿ ಇದಾವೆ ತಿಂದ್ಕಂಡು, ಆ ಆಡ್ನಾದರೂ ಕೂಡಿಗೆಗೆ ಹಿಡ್ಕಂಡ್‌ ಹೋಗಿ ದನಿನಾಸ್ಪತ್ರೆಲಿ ಒಂದು ಇಂಜೆಕ್ಷನ್‌ ಆದರೂ ಕೊಡಿಸ್ಕಂಡ್‌ ಬರಬಾರ್ದ?ʼ ಎಂದಳು.

ʻಕೂಡಿಗೆʼಯ ಹೆಸರು ಕೇಳುತ್ತಲೇ ಮಂಕಾಗಿ ಕುಳಿತಿದ್ದ ಅವನ ತಲೆಯಲ್ಲಿ ಜಗ್ಗನೆ ಬೆಳಕು ಹತ್ತಿದಂತೆ ಆಯಿತು. ಅಲ್ಲಿ ಸಾರಾಯಿ ಸಿಕ್ಕಿದೇನೋ ಸರಿ. ಆದರೆ ದುಡ್ಡು? ಏನಾದ್ರೂ ಮಾರಿ ಕುಡಿಯೋಣ ಎಂದರೆ, ಯಾವ ವಸ್ತು ಕೈಗೆಟುಕದಂತೆ ಮಾಡಿದ್ದಾಳೆ ಹೆಂಡತಿ. ಕೂಡಿಗೆಯಲ್ಲಿ ದಿನಸಿ ಅಂಗಡಿ ಕರಿಯಣ್ಣನ ಹತ್ತಿರ ಮಾಡಿದ ಕೈಸಾಲ ಹಾಗೇಯೇ ಇದೆ. ಇನ್ನೂ ಸಾರಾಯಿ ಅಂಗಡಿಯವನ ಬಳಿ ಹೋಗುವಂತೆಯೇ ಇಲ್ಲ. ಪಕ್ಕದಂಗಡಿ ಪಕೋಡದವನ ಹತ್ತಿರವೂ ಸಾಲ ಇದೆ. ಏನಾದರಾಗಲೀ ಅಪರೂಪದ ನೆಂಟರೋ, ಅಂಗಡಿ ಬೀದಿಯಲ್ಲಿ ಯಾರಾದರೂ ಹಳೆಯ ಗೆಳೆಯರೂ ಸಿಕ್ಕಿದರೂ ಸಿಕ್ಕಬಹುದು ಎಂಬ ಆಶಾಭಾವನೆ ಮೊಳೆಯಿತು.

ಅಲ್ಲಿನ ಆಸ್ಪತ್ರೆಯಲ್ಲಿ ದನದ ಡಾಕ್ಟರ್‌ ಇಲ್ಲದೇ ಕೆಲವರ್ಷಗಳೇ ಆಗಿತ್ತು. ಇನ್ಸ್‌ಪೆಕ್ಟರ್‌ ಈರೇಗೌಡನೇ ಎಲ್ಲಾ ಕೆಲಸ ನಿಭಾಯಿಸುತ್ತಿದ್ದ. ಹಳ್ಳಿಯ ಜನರೆಲ್ಲಾ ಅವನೇ ಅಲ್ಲಿಯ ವೈದ್ಯನೆಂದು ತಿಳಿದುಕೊಂಡಿದ್ದರು. ಔಷಧಿ, ಇಂಜೆಕ್ಷನ್‌ ಮುಂತಾದ ಸೇವೆಗಳಿಗೆ ರೈತರಿಂದ ಅಷ್ಟಿಷ್ಟು ಹಣ ದೊರೆಯುತ್ತಿತ್ತಾದರೂ ಅವನಿಗೆ ವರಮಾನದ ಮೂಲ ಬೇರೆಯೇ ಇತ್ತು. ಆಸ್ಪತ್ರೆಯೇ ಅವನ ಲಾಭದಾಯಕ ವ್ಯವಹಾರದ ಕೇಂದ್ರವಾಗಿತ್ತು.

ದನಕರುಗಳನ್ನು ಮಾರಿಸಿಕೊಡುವುದು, ಆಡು, ಹಂದಿಗಳನ್ನು ಯಾವ ಹಳ್ಳಿಯಲ್ಲಿ ಯಾರು ಸಾಕಿದ್ದಾರೆ ಎಂದು ತಿಳಿದುಕೊಂಡು, ಅವುಗಳ ಅವಶ್ಯಕತೆಯಿದ್ದು ಹುಡುಕುತ್ತಿರುವವರಿಗೆ ವ್ಯಾಪಾರ ಕುದುರಿಸಿಕೊಡುವುದು, ಕೂಡಿಗೆಯಲ್ಲಿರುವ ಸರ್ಕಾರಿ ನೌಕರರಿಗೆ ಹಳ್ಳಿಗಳಿಂದ ನಾಟಿಕೋಳಿ ತರಿಸಿಕೊಡುವುದು… ಈ ತರದ ದಳ್ಳಾಳಿ ವ್ಯಾಪಾರದಿಂದ ಎರಡು ಕಡೆಯವರಿಂದಲೂ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದ.

ಆಸ್ಪತ್ರೆಯಲ್ಲಿ ಆಗಲೇ ಕೆಲವಾರು ರೈತರು ತುಂಬಿಕೊಂಡಿದ್ದರು. ಎಲ್ಲರಿಗೂ ಅವಸರ. ಈರೇಗೌಡ ಕ್ಯೂನಲ್ಲಿ ಬಂದ ಒಬ್ಬೊಬ್ಬರನ್ನೇ ವಿಚಾರಿಸಿಕೊಳ್ಳುತ್ತಿದ್ದ. ಎದುರಿನ ರಸ್ತೆಯಲ್ಲಿ ದೂರದಲ್ಲಿ ಮಂಜಣ್ಣ ಬರುವುದು ಕಾಣಿಸಿತು. ಕೈಯಲ್ಲಿ ಹಿಡಿದ ಹಗ್ಗದಲ್ಲಿ ಆಡನ್ನೂ ಜಗ್ಗುತ್ತಾ ಬರುತ್ತಿದ್ದಾನೆ. ಮಂಜಣ್ಣ ಅವನಿಗೆ ಪರಿಚಿತನೇ ಹಿಂದೆ ಒಂದೆರಡು ಬಾರಿ ಅಗ್ಗದ ಬೆಲೆಗೆ ನಾಟಿಕೋಳಿ ತಂದುಕೊಟ್ಟಿದ್ದ. ತನ್ನ ಕೆಲಸ ಈಗ ಈಡೇರುವ ಸಮಯ ಬಂದಿತೆಂದು ಭಾವಿಸಿ ಖಷಿಯಲ್ಲಿ ಎದ್ದುನಿಂತ.

ರೈತರು ʻಸಾ ಸಾ ನಂದೊಂಚೂರು… ನನ್ನ ದನ ಕೊರಗ್ತಲೇ ಇದಾವ್‌ ಸಾ… ನಾನ್‌ ಗೊಂತಲಿರೋ ದನ ಬಿಚ್ಬೇಕು… ಸ್ವಲ್ಪ ಬೇಗ…ʼ ಹೀಗೆ ದುಂಬಾಲು ಬಿದ್ದ ರೈತರೆಡೆಗೆ ಗಮನ ಹರಿಸದೆ ಯಾವುದೋ ವಿಐಪಿಯನ್ನು ಸ್ವಾಗತಿಸಲು ಹೋಗುವವನಂತೆ ಬಾಗಿಲು ದಾಟಿ ಮಂಜಣ್ಣನ ಬಳಿಗೆ ಹೋದ.

ಎರಡು ದಿನದ ಹಿಂದಷ್ಟೇ ತಾಲ್ಲೂಕು ಪಂಚಾಯ್ತಿಯ ಉಪಚುನಾವಣೆಯ ಫಲಿತಾಂಶ ಹೊರಬಂದು ದಳದ ಅನುಸೂಯಮ್ಮ ಗೆದ್ದಿದ್ದಳು. ಆ ಪ್ರಯುಕ್ತ ಮರುದಿನವೇ ಅವಳಿಗಾಗಿ ಓಡಾಡಿದ ಕಾರ್ಯಕರ್ತರಿಗೆ ಬಾಡೂಟ ಏರ್ಪಾಡಾಗಿತ್ತು. ಮಾಂಸಕ್ಕಾಗಿ ಹಂದಿ, ಕುರಿ ಒದಗಿಸಿಕೊಡಲು ಈರೇಗೌಡನಿಗೆ ಜವಬ್ದಾರಿ ವಹಿಸಿದ್ದರು. ಹಂದಿಕೋಳಿ ಎಲ್ಲಾ ಹೇಗೋ ಹೊಂದಿಸಿದ್ದ ಎಷ್ಟು ಹುಡುಕಿದರೂ ಮಾರುವ ಆಡು ಸಿಕ್ಕಿರಲಿಲ್ಲ. ಮಂಜಣ್ಣ ಆಡನ್ನು ಮಾರಲು ಬಂದಿದ್ದರೂ ಇರಬಹುದು ಎಂಬ ಗುಮಾನಿಯೊಂದಿಗೆ ಅವನನು ಸಮೀಪಿಸಿ ಕಾಂಪೌಂಡ್‌ ಮೂಲೆಗೆ ಕರೆದುಕೊಂಡು ಹೋದ.

ʻಏನು ಸಮಾಚಾರ? ಎಂದು ಹುಬ್ಬು ಹಾರಿಸಿ ಕೇಳಿದ.

ʻಏನಿಲ್ಲ ಇದಕ್ಕೆ ಹುಷಾರಿಲ್ಲ. ನನ್‌ ಹೆಂಡತಿ ಡಾಕ್ಟರ್‌ ಹತ್ತಿರ ಹೊಡಕೊಂಡು ಹೋಗಿ ಇಂಜೆಕ್ಷನ್‌ ಕೊಡಿಸಿಕೊಂಡು ಬಾ ಅಂತ ಕಳಿಸಿದಳುʼ ಎಂದ ಅವನಿಗೆ ನಿರಾಸೆಯಾಯಿತು.

ʻಹೌದಾ, ಎಷ್ಟ್‌ ದಿವ್ಸ ಆಯ್ತುʼ ಎಂದ.

ʻಮೇಯದ್‌ ಬಿಟ್ಟೆ ಎರಡು ದಿವಸ ಆಯ್ತು ಸಾರ್‌ʼ ಎಂದ ಮಂಜಣ್ಣ.

ʻಛೇ! ಛೇ! ಇಷ್ಟು ತಡವಾಗಿ ಹೊಡೆದುಕೊಂಡು ಬಂದೀದ್ದಿಯಲ್ಲ ಮಾರಾಯ… ಮೇವು ಬಿಟ್ಟೆ ಎರಡು ದಿವ್ಸ ಆಗಿದೆ ಅಂತೀಯಾ… ಇದು ತುಂಬಾ ಸೀರಿಯಸ್‌ ಆಗಿದೆ…. ಉಳಿಯದು ಕಷ್ಟ… ಮಾರಿ ಬಿಡದು ಒಳ್ಳೆದುʼ ಆಡಿನ ತೊಗಲಿಗೆ ಕೈಹಾಕಿ ಪರೀಕ್ಷಿಸುವವನಂತೆ ನೋಡುತ್ತಾ ಈರೇಗೌಡ ಹೇಳಿದ.

ಮಂಜಣ್ಣ ಏನು ಹೇಳುವುದು ಎಂದು ತಿಳಿಯದೆ ತಲೆ ಕೆರೆಯುತ್ತಾ ನಿಂತುಕೊಂಡದ್ದನ್ನು ಕಂಡು ʻನೋಡು, ತಾಲ್ಲೂಕು ಪಂಚಾಯ್ತಿ ಬೈ ಎಲೆಕ್ಷನ್‌ ನಲ್ಲಿ ಗೆದ್ದಿದ್ದಾರಲ್ಲ ಅನುಸೂಯಮ್ಮ ಅವರ ಬಾಡೂಟಕ್ಕೆ ಒಂದು ಆಡು ಬೇಕು. ಬೇಕೆಂದರೆ ಮಾರಿಸಿಕೊಡ್ತೀನಿʼ ಈರೇಗೌಡ ಮಂಜಣ್ಣನನು ಪುಸಲಾಯಿಸುತ್ತಲ್ಲೇ ಆಡನ್ನು ಎತ್ತಿ ನೋಡಿದ, ʻಐದು ಸಾವಿರಕ್ಕೇನೂ ಮೋಸವಿಲ್ಲʼ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ      ನೋಡಪ್ಪಾ ಈಗ್ಲೇ ಕೈ ಮ್ಯಾಲೆ ಕ್ಯಾಷು ಮೂರುಸಾವಿರʼ ಎಂದು ಮುಖ ನೋಡಿದ.

ಕೈಯಲ್ಲಿ ಒಂದೂ ಕಾಸಿಲ್ಲದೆ ಕೆಲದಿನಗಳಿಂದ ಪರಿತಾಪ ಪಡುತ್ತಿದ್ದ ಅವನಿಗೆ ಇದ್ದಕ್ಕಿದ್ದಂತೆ ಮೂರುಸಾವಿರ ಸಿಕ್ಕುತ್ತದೆ ಎಂದರೆ ಬಿಕಾರಿಯ ಕಾಲಿಗೆ ನಿಧಿಯೇ ಬಂದು ಎಡವಿದಂತಲ್ಲವೇ? ಅವನ ಮುಖ ಅರಳಿತು. ಅದನ್ನು ಕಂಡು ಈರೇಗೌಡನಿಗೆ ಅದಕ್ಕಿಂತಾ ಹೆಚ್ಚು ಖುಷಿಯಾಯಿತು.

ಆದರೆ ಬರೀ ಕೈಲಿ ಹಿಂದಕ್ಕೆ ಹೋಗಿ ಹೆಂಡತಿಗೆ ಏನು ಹೇಳುವುದು?

ಮಂಜಣ್ಣನ ಸಮಸ್ಯೆ ಅರಿತ ಈರೇಗೌಡ ʻಏನಾದ್ರೂ ಹೇಳ್ಕೊ ಹೋಗೋ…ನಿನಗೆ ಹೇಳಿಕೊಡಬೇಕಾ? ಕುಡುಕರಿಗಿಂತಾ ಬುದ್ದಿವಂತರು ಯಾರಿರ್ತಾರೋ ಮಾರಾಯʼ ಎಂದು ಪುಸಲಾಯಿಸುತ್ತಾ ಮಂಜಣ್ಣನ ಕೈಗೆ ಮೂರು ಸಾವಿರ ಇಟ್ಟು ಕಳಿಸಿದ.

ಇದನ್ನೆಲ್ಲಾ ಗಮನಿಸುತ್ತಾ ಅಂಗಡಿಯಲ್ಲೇ ಕುಳಿತಿದ್ದ ಕರಿಯಣ್ಣ ಸುಮ್ಮನೆ ಬಿಡುತ್ತಾನೆಯೇ? ಮಂಜಣ್ಣನನ್ನು ಕರೆದು ತನಗೆ ಬರಬೇಕಾಗಿದ್ದದ್ದು ವಸೂಲು ಮಾಡಿಕೊಂಡೇ ಕಳಿಸಿದ. ಎರಡು ಮೂರು ದಿನಗಳಿಂದ ಒಂದು ತೊಟ್ಟೂ ಮದ್ಯ ನಾಲಿಗೆಯ ಮೇಲೆ ಹನಿಯದ ಅವನಿಗೆ ಗಂಟಲೊಣಗಿ ತಲೆ ಕೆಟ್ಟಂತೆ ಆಗಿತ್ತು. ಇನ್ನು ತಡಯುವಂತಿಲ್ಲ. ಆದರೆ ಪಕ್ಕದಂಗಡಿ ಪಕೋಡದವನನ್ನು ಹಾಗೆಯೇ ದಾಟಿ ಹೋಗಲು ಸಾಧ್ಯವೇ! ಅವನಿಗೆ ಕೊಡಬೇಕಾದ್ದು ಕೊಟ್ಟು ಸರಾಯಿ ಅಂಗಡಿಯ ಹಲಗೆ ಮೇಲಿಟ್ಟು ʻಎರಡು ಕ್ವಾರ್ಟರ್‌ʼ ಎಂದ.

ಅಂಗಡಿಯವನಿಗೆ ಅಚ್ಚರಿಯಾಯಿತು. ನಗದು ಕೊಟ್ಟು ವ್ಯಾಪಾರ ಮಾಡುವವರಿಗೆ ಗೌರವ ಜಾಸ್ತಿ ಅಲ್ಲವೇ? ಅಂಗಡಿಯವನು ಎರಡು ಕ್ವಾರ್ಟರ್‌ ಮುಂದಿಟ್ಟು, ಗ್ಲಾಸನ್ನು ತೊಳೆದು ಹೆಗಲಮೇಲಿನ ಟವೆಲಿನಿಂದ ಒರೆಸಿ ಗೌರವದಿಂದ ಮಂಜಣ್ಣನ ಮುಂದಿಟ್ಟ.

ʻಮೊದಲೇ ಆಡಿಲ್ಲದೆ ಬರಿ ಕೈಯಲ್ಲಿ ಹಿಂತಿರುಗುತ್ತಿದ್ದೇನೆ. ಈಗಲೇ ಕುಡಿದು ಚಿತ್ತಾಗುವುದು ಸರಿಯಲ್ಲ. ಎಂದುಕೊಳ್ಳುತ್ತಾ ಅವೆರಡನ್ನೂ ತೆಗೆದು ಚಡ್ಡಿ ಜೇಬಿಗೆ ಸೇರಿಸುತ್ತಾ ʻಇನ್ನೊಂದು ಅರ್ಧ ಕ್ವಾರ್ಟರ್‌ ಕೊಡುʼ ಎಂದ. ಅದನ್ನೆತ್ತಿ ಆರಿದ ಗಂಟಲಿಗೆ ಹೊಯ್ದುಕೊಂಡು, ಒಂದು ಪೊಟ್ಟಣ ಪಕೋಡ ಕಟ್ಟಿಸಿಕೊಂಡು ತಿನ್ನುತ್ತಾ ಊರಿನ ದಾರಿ ಹಿಡಿದ. ಮಂಕುಹಿಡಿದಂತಾಗಿದ್ದ ಅವನ ಮನಸ್ಸು ತುಸು ಚುರುಕಿನ ಔಷದ ಬಿದ್ದಂತಾಗಿ ಚುರುಕಾಗಿ ಒಡತೊಡಗಿದ.

ಹಗ್ರಾಣದ ಕತೆಗಳು ಮೊದಲ ಭಾಗವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ʻಕಾವೇರಿ ನಾನು ಆಡಿನೊಂದಿಗೆ ಹಿಂತಿರುಗಿ ಬರುವುದನ್ನೇ ಎದುರು ನೋಡುತ್ತಿರುತ್ತಾಳೆ. ಅವಳಿಗೆ ಏನು ಉತ್ತರ ಹೇಳುವುದು ಎಂಬುದೊಂದನ್ನೇ ಯೋಚಿಸುತ್ತಾ ಊರು ಸಮೀಪಿಸಿದ. ಬಾಗಿಲಲ್ಲೇ ನಿಂತಿದ್ದ ಕಾವೇರಿ ಗಂಡ ಬರಿಗೈಲಿ ಬಂದದ್ದು ಕಂಡು ದಿಗಿಲುಗೊಂಡಳು. ʻಆಡೆಲ್ಲಿ?ʼ ಎಂದಳು.

ಪರೀಕ್ಷೆ ಬರೆಯಲು ಕುಳಿತು ತಿಣುಕಾಡುತ್ತಿದ್ದ ಹುಡುಗನಿಗೆ ಕೊನೆಯ ಹಂತದ್ದು, ಗಕ್ಕನೆ ಉತ್ತರ ಹೊಳೆಯುವಂತೆ ಅವನ ಮಿದುಳಿನಲ್ಲಿ ವಿದ್ಯುತ್‌ ಸಂಚಾರವಾಯಿತು. ʻಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!ʼ ಎಂದುಬಿಟ್ಟ.

ಅವಳಿಗೆ ಪೇಟೆಯ ದೊಡ್ಡಾಸ್ಪತ್ರೆಯಲ್ಲಿ ಮನುಷ್ಯರು ಅಡ್ಮಿಟ್ಟಾಗುವುದು ಗೊತ್ತಿತ್ತು. ಆದರೆ ಯಾವದೇ ಜಾನುವಾರು ದನದ ಆಸ್ಪತ್ರೆಯಲ್ಲಿ ಆಡ್ಮಿಟ್ಟಾದ ವಿಚಾರ ಕೇಳಿರಲಿಲ್ಲ. ಅವಳಿಗೆ ಅನುಮಾನ, ಭಯ, ಆಶ್ಚರ್ಯ ಒಟ್ಟಿಗೇ ಆದವು. ಗಂಡನನು ಮುಂದೇನು ಕೇಳುವುದೆಂದು ಗೊತ್ತಾಗದೆ ಅವನ ಮುಖವನ್ನೇ ನೋಡುತ್ತಾ ನಿಂತಳು.

ʻಆಡುʼ ಎರಡು ದಿನದಿಂದ ಮೇವು ಬಿಟ್ಟು ಸೀರಿಯಸ್‌ ಆಗಿಬಿಟ್ಟಿದೆ. ಈಗ ಹೊಡ್ಕಂಡ್‌ ಬಂದ್ದಿದ್ದೀಯಲ್ಲಾ.. ಬರೀ ಇಂಜೆಕ್ಷನ್‌ನಲ್ಲಿ ವಾಸಿಯಾಗುತ್ತಾʼ ಅಂತಾ ಡಾಕ್ಟರು ತಾರಾಮಾರಾ ಬೈದರುʼ ಎಂದ. ಅವಳಿಗೆ ಮುಂದೇನು ಮಾತಾಡಬೇಕೆಂದು ತಿಳಿಯದೇ ಒಳಗೆ ಹೋದಳು.

ಸಂಜೆಯಾಗುತ್ತಿದ್ದುದ್ದನ್ನೇ ಕಾಯುತ್ತಿದ್ದ ಮಂಜಣ್ಣ ಹಿತ್ತಲಿಗೆ ಹೋಗಿ, ಎರಡು ಕ್ವಾಟರುಗಳನ್ನೂ ಒಮ್ಮೆಗೇ ಎತ್ತಿ, ಅಡಿಗೆ ಮನೆಯಲ್ಲಿ ಮಡಿಕೆಯ ತಳದಲ್ಲಿದ್ದುದ್ದನ್ನೂ ತಿಂದು ಬಂದು ಜಗುಲಿಯ ಮೇಲೆ ಮಲಗಿಕೊಂಡಿದ್ದ. ನಡುಮನಡಯಲ್ಲಿ ಮಲಗಿದ್ದ ಕಾವೇರಿಗೆ ಯೋಚನೆಯಿಂದ ತಲೆ ಸಿಡಿಯುತ್ತಿತ್ತು.

ʻಕುರಿ ಆಡ್ಮಿಟ್‌ ಆಗಿರುವುದು ನಿಜವೇ? ಇವನನ್ನು ಹ್ಯಾಗೆ ನಂಬುವುದು? ಆಡು ಮೇವು ಬಿಟ್ಟು ಎರಡು ದಿನವಾದ್ರೂ ಎಚ್ಚರಿಕೆ ಮಾಡದೇ ಹೋದದ್ದು ನನ್ನ ತಪ್ಪೇ ಹಾಗಾದರೆ? ಸಿರಿಯಸ್‌ ಆದ ಆಡು ಒಂದು ಇಂಜೆಕ್ಷನ್‌ ಕೊಟ್ಟ ಕೂಡಲೇ ವಾಸಿ ಆಗಲು ಸಾಧ್ಯವೇ? ನೋಡೋಣ ಬೆಳಗಾಗುತ್ತಲೇ ಗಂಡನನ್ನು ಕರೆದುಕೊಂಡು ಕೂಡಿಗೆ ಹೋಗಿ ನೋಡಿದರಾಯಿತುʼ ಎಂದು ಬಗೆಬಗೆಯಾಗಿ ಯೋಚಿಸುತ್ತಾ ನಿದ್ದೆಯಿಲ್ಲದೆ ಹೊರಳಾಡುತ್ತಾ ಇರುಳು ಕಳೆದಳು.

ಬೇಗನೇ ಎದ್ದು ಅಡಿಗೆ ಕೋಣೆ ಕೆಲಸ ಮುಗಿಸಿ, ಗಾಢ ನಿದ್ದೆಯಲ್ಲಿದ್ದ ಗಂಡನನ್ನೂ ಕರೆದು ಏಳಿಸಿ ಹಸುಕರುಗಳನ್ನು ಗದ್ದೆಯ ಬಳಿ ಕಟ್ಟಿ ಬರಲು ಹೋದಳು. ವಾಪಸ್ಸು ಬರುವಾಗ ಪಂಚಾಯಿತಿ ಮೆಂಬರ್‌ ಲೋಕೇಶ ಯಜ್ಡಿ ಬೈಕಿನಲ್ಲಿ ಅವಳೆದುರಿಗೆ ಬರುತ್ತಿದ್ದ. ಆಡಿನದೇ ಯೋಚನೆಯಲ್ಲಿದ್ದ ಅವಳು ಇವನಿಗೆ ಗೊತ್ತಿರುತ್ತದೆ, ಇವನನ್ನೇಕೆ ಕೇಳಬಾರದುʼ ಎಂದುಕೊಂಡು ಬೈಕ್‌ ನಿಲ್ಲಿಸಿ, ʻಭಾವ ಆಡನ್ನ ಆಸ್ಪತ್ರೆಲಿ ಆಡ್ಮಿಟ್ ಮಾಡಿಕೊಳ್ತಾರಾ?ʼ ಎಂದಳು.

Big Kannada Images

ಲೋಕೇಶನಿಗೆ ನಗು ಬಂತು. ʻಯಾರ್‌ ಹೇಳ್ದವ್ರು ಅತ್ತಿಗೆ ನಿಮ್ಗೆ?ʼ ಎಂದು ವ್ಯಂಗ್ಯವಾಗಿ ಹೇಳಿ ಬೈಕು ಚಲಾಯಿಸುತ್ತಾ ಕೂಡಿಗೆಯ ದಿಕ್ಕಿಗೆ ಹೊರಟುಹೋದ. ಅವನೂ ಅಲ್ಲಿ ಅನುಸೂಯಮ್ಮನ ಬಾಡೂಟದಲ್ಲಿ ಭಾಗವಹಿಸಬೇಕಾಗಿತ್ತು.

ಕಾವೇರಿಗೆ ತಾನು ಮೋಸಹೋಗಿರುವುದು ತಿಳಿದುಹೋಯಿತು. ಅವನನ್ನು ಇವತ್ತು ಸುಮ್ಮನೆ ಬಿಡುವುದಿಲ್ಲʼ ಎಂದುಕೊಳ್ಳುತ್ತಾ ಸಿಟ್ಟಿನಿಂದ ಇಡೀ ದೇಹವೇ ಉರಿಯುತ್ತಿದ್ದ ಅವಳು ಧಡಧಡನೇ ನಡೆಯುತ್ತಾ ಮನೆಯ ಮುಂದೆ ಬಂದು ನಿಂತಳು. ಹೆಂಡತಿ ಲೋಕೆಶನ ಬೈಕು ನಿಲ್ಲಿಸಿ ರಸ್ತೆಯಲ್ಲಿ ಮಾತಾಡುತ್ತಿದ್ದುದ್ದನ್ನು ಕಂಡಾಗಲೇ ಮಂಜಣ್ಣ ಅಲ್ಲಿಂದ ನೆಗೆದು ಪರಾರಿಯಾಗಿದ್ದ.

ಹಿಂದೆ ಒಂದೆರಡು ಬಾರಿ ಮನೆಯಲ್ಲಿ ಸಾಕಿದ್ದ ನಾಟಿಕೋಳಿಗಳನ್ನು ಮಂಜಣ್ಣ ಈರೇಗೌಡನ ಮುಖಾಂತರ ಕದ್ದು ಮಾರಿದ್ದು ತಿಳಿದಿತ್ತು. ಆಡಿನ ವಿಚಾರದಲ್ಲೂ ಅವನ ಕೈವಾಡ ಇರಬಹುದು ಎನ್ನಿಸಿ, ಆ ಡಾಕ್ಟರೇನಾದ್ರೂ ಆಡು ಇಲ್ದಂಗೆ ಮಾಡಕೆ ನನ್‌ ಗಂಡನ್‌ ಜೊತೆ ಸೇರಿದ್ರೆ ಅವನ ಹುಟ್ಲಿಲ್ಲ ಅನ್ನಿಸಿಬಿಡ್ತೀನಿʼ ಅಂದುಕೊಳ್ಳುತ್ತಾ ಉಟ್ಟ ಬಟ್ಟೆಯಲ್ಲೇ ಕೂಡಿಗೆಯ ಕಡೆ ಓಡತೊಡಗಿದಳು.

ಅನಸೂಯಮ್ಮನ ಬಾಡೂಟಕ್ಕೆ ಹೋಗಬೇಕಾಗಿದುದರಿಂದ ಈರೇಗೌಡ ಬಹಳ ಅವಸರದಲ್ಲಿದ್ದ. ಅವನನ್ನು ಕರೆಯಲು ಆಗಲೇ ಎರಡೂರ ಜನ ಬಂದಿದ್ದರು. ಬಂದಿದ್ದ ಜಾನುವಾರುಗಳಿಗೆಲ್ಲಾ ಬೇಗ ಬೇಗ ಚಿಕಿತ್ಸೆ ಮಾಡಿ, ಕೆಲವಕ್ಕೆ ಇಂಜೆಕ್ಷನ್‌ ಚುಚ್ಚಿ ಕೊನೆಯ ಹಸುವಿಗೆ ಜ್ವರದ ಇಂಜೆಕ್ಷನ್‌ ಮಾಡುವವನಿದ್ದ, ಜವಾನನನ್ನು ಕರೆದು, ʻನಾನೀಗ ಅನುಸೂಯಮ್ಮನ ಪಾರ್ಟಿಗೆ ಹೋಗ್ಬೇಕು… ಇನ್ಯಾರಾದರೂ ಬಂದ್ರೆ ಮದ್ಯಾಹ್ನದ ಮೇಲೆ ಬನ್ನಿ ಎಂದು ಹೇಳುʼ ಎಂದು ತಾಕೀತು ಮಾಡಿದ್ದ.

ಕೊನೆಯ ಹಸುವಿಗೆ ಇಂಜೆಕ್ಷನ್‌ ಮಾಡಲು ಅದರ ಕುತ್ತಿಗೆಯ ಬಳಿ ಸೂಜಿ ಹೊಡೆದು ಸಿರಿಂಜ್‌ ತೆಗೆದುಕೊಂಡು ಚುಚ್ಚಲು ಔಷಧ ರೆಡಿ ಮಾಡಿಕೊಳ್ಳುತ್ತಿದ್ದ, ಅಷ್ಟರಲ್ಲಿ ಜವಾನ ʻಸಾರ್‌, ತಪ್ಪಿಸ್ಕಳಿ ಸಾರ್‌ ಆ ಮಂಜಣ್ಣನ ಹೆಂಡತಿ ಚಾಮುಂಡಿ ರೂಪ ತಾಳಿ ನಿಮ್ಮನ್ನೇ ಹುಡುಕ್ಕಂಡ್‌ ಬರ್ತಾ ಇದಾಳೆʼ ಎಂದ ಗಾಬರಿಯಿಂದ.

ಈರೇಗೌಡನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಕೈಲಿದ್ದ ಸಿರಿಂಜನ್ನು ಅಲ್ಲಿಯೇ ಎಸೆದು ಹಿಂದಿನ ಆಳೆತ್ತರದ ಕಾಂಪೌಂಡನ್ನು ನೆಗೆದು ಹಾರಿ ದಯ್ಯದ ಕಾಡಿನ ಕಡೆಗೆ ರಭಸದಲ್ಲಿ ಓಡತೊಡಗಿದ. ಅಲ್ಲಿಯೇ ಹರೆಯಲ್ಲಿ ಬಾಡೂಟದಲ್ಲಿ ಭಾಗವಹಿಸಲು ಬಂದಿದ್ದ ಜನ ʻಡಾಕ್ಟರೇಕೆ ಹಿಂಗೆ ಓಡ್ತಾ ಇದಾರೆ?ʼ ಎನ್ನುತ್ತಾ ಕಣ್ಣು ಬಾಯಿ ತೆರೆದುಕೊಂಡು ನೋಡುತ್ತಾ ನಿಂತಿದ್ದರು.

One thought on “ಹಗ್ರಾಣದ ಕತೆಗಳು -2 : ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!”

Leave a Reply

Your email address will not be published. Required fields are marked *