ವೆಂಕಟೇಶ್, ಆನೆ ವೆಂಕಟೇಶ್ ಭೀಮ ಎಂಬ ಆನೆಗೆ ಬಲಿಯಾಗಿ ಹೋಗಿದ್ದಾರೆ. ಸಕಲೇಶಪುರ, ಆಲೂರು ತಾಲೋಕಿನ ಸುತ್ತಾ ಇಂತಹಾ ೮೦ ಜೀವಗಳು ಹೋಗಿಯಾಗಿದೆ. ಒಂದೊಂದು ಜೀವ ಹೋದಾಗಲೂ ಇಡೀ ಅರ್ಧ ಹಾಸನ ಜಿಲ್ಲೆ ತಲ್ಲಣಿಸಿ ಹೋಗಿದೆ. ವೆಂಕಟೇಶ್ ಭೀಮ ಎಂಬ ಆನೆಯ ಗಾಯಕ್ಕೆ ಔಷದಿ ನೀಡುವ ಸಲುವಾಗಿ ಅರವಳಿಕೆ ಚುಚ್ಚುಮದ್ದು ನೀಡಲು ಹೋದಾಗ ಈ ಅವಘಡ ಸಂಭವಿಸಿದೆ. ಆನೆ ಗಾಯಗೊಂಡಿರುವುದು ಗೊತ್ತಿದ್ದೂ ಹದಿನೈದು ಇಪ್ಪತ್ತು ದಿನಗಳ ತನಕ ಅರಣ್ಯ ಇಲಾಖೆ ಅತ್ತ ತಲೆ ಹಾಕದೇ ಕುಳಿತಿದ್ದು ಒಂದು ನಿರ್ಲ್ಯಕ್ಷದ ಉದಾಹರಣೆಯಾದರೆ ಇಷ್ಟೊಂದು ಆನೆಯ ಉಪಟಳವಿದ್ದಾಗಲೂ ಸರಿಯಾದ ಸಮಯಕ್ಕೆ ಕೆಲಸ ಮಾಡಬಲ್ಲ ಒಂದು ಶಕ್ತ ತಂಡವನ್ನು ಅರಣ್ಯ ಇಲಾಖೆ ಹೊಂದಿಲ್ಲದೇ ಇರುವುದು ಅದರ ಅತ್ಯಂತ ನಿರ್ಲ್ಯಕ್ಷತೆಯನ್ನು ತೋರಿಸುತ್ತದೆ.

ಈಶ್ವರ ಖಂಡ್ರೆ ಎಂಬ ಅರಣ್ಯಮಂತ್ರಿ ಬೆಂಗಳೂರಿನಲ್ಲೇ ಕುಳಿತು ಸಂತಾಪ ಸೂಚಿಸಿದ್ದಾರೆ. ರೀ ಸ್ವಾಮಿ ಖಂಡ್ರೆಯವರೇ, ನೀವು ವೈಯಕ್ತಿಕವಾಗಿ ತುಂಬಾ ಒಳ್ಳೆಯವರಿದ್ದೀರಿ ಎಂಬುದನ್ನು ಕೇಳಿ ಬಲ್ಲೆವು. ಆದರೆ ಆ ಒಳ್ಳೆಯತನ ಕೆಲಸಕ್ಕೆ ಬಾರದೆ ಹೋದರೆ ಆ ಒಳ್ಳೆಯತನಕ್ಕೆ ಎಲ್ಲಿಯ ಬೆಲೆ ಹೇಳಿ. ಆಲೂರು, ಸಕಲೇಶಪುರ, ಅರಕಲಗೂಡು ಮುಂತಾದ ಕಡೆ ಕಾಡಾನೆ ಹಾವಳಿ ತೀವ್ರವಾಗಿದ್ದು ಅರಣ್ಯಮಂತ್ರಿಯಾದ ಮರುಕ್ಷಣವೇ ನಿಮ್ಮ ಗಮನಕ್ಕೆ ಬರಬೇಕಾಗಿತ್ತು. ಆದರೆ ಇದೂವರೆಗೂ ಕಾಡಾನೆ ಸಮಸ್ಯೆಯ ಬಗ್ಗೆ ಒಂದೇ ಒಂದು ನಿರ್ದಾರ ತೆಗೆದುಕೊಳ್ಳುವುದರಲ್ಲಿ ನೀವು ಗಮನ ಹರಿಸಿಯೇ ಇಲ್ಲ ಅಂತಾದ ಮೇಲೆ ನಿಮ್ಮ ಒಳ್ಳೆಯತನ ಕಟ್ಟಿಕೊಂಡು ಈ ನಾಡಿನ ಜನ ಏನು ಮಾಡಿಕೊಳ್ಳಬೇಕು ಹೇಳಿ…?
ಆನೆ ಕಾರಿಡಾರ್, ಆನೆಗಳ ಸ್ಥಳಾಂತರ, ಕಾಡಾನೆ ಹಾಗು ಮನುಷ್ಯರ ನಡುವಿನ ಸಂಘರ್ಷ ಮುಂತಾದ ವಿಚಾರದಲ್ಲಿ ನಿಮ್ಮ ನಿಲುವೇನು ತಿಳಿಸಿ.
ಒಬ್ಬ ಅರವಳಿಕೆ ತಜ್ಞನಂತಹಾ ಮುಖ್ಯವಾದ ವ್ಯಕ್ತಿ ಗುತ್ತಿಗೆ ಆದಾರದ ಮೇಲೆ ನಿಮ್ಮ ಇಲಾಖೆಯಲ್ಲಿ ಇದ್ದು ಗುತ್ತಿಗೆ ಆದಾರದ ಮೇಲೆ ನಿವೃತ್ತ ಕೂಡ ಆಗುತ್ತಾರೆ. ಆ ನಂತರ ಯಾವುದೇ ನಾಚಿಕೆ ಇಲ್ಲದೇ ನಿಮ್ಮ ಇಲಾಖೆ ಆ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡಿ ನಿವೃತ್ತನಾದ ಅರವಳಿಕೆ ತಜ್ಞನನ್ನು ದುಡಿಸಿಕೊಳ್ಳುತ್ತಾ ಬಂದಿದೆ ಎಂದರೆ ನಿಮಗೂ ನಿಮ್ಮ ಸರ್ಕಾರಕ್ಕೂ, ಮುಖ್ಯವಾಗಿ ನಿಮ್ಮ ಇಲಾಖೆಗೆ ನಾಚಿಕೆಯಾಗಬೇಕು.
ಮೊದಲಿಗೆ ನಿಮ್ಮ ಇಲಾಖೆಗೆ ಕೆಲಸ ಮಾಡಲು ಬೇಕಾದ ಸೌಲಭ್ಯ ಒದಗಿಸಿ. ಆ ನಂತರ ಅರಣ್ಯ ಇಲಾಖೆ ಇಂತಹಾ ಜೀವ ಹೋಗುವಂತಹಾ ಸಮಯದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಹೇಳಿಕೊಟ್ಟು ಅದನ್ನು ಜನರ ಮುಂದೆ ಬಾಯಿ ಬಿಟ್ಟು ಹೇಳಿ. ಸಕಲೇಶಪುರ, ಆಲೂರು ಭಾಗದ ಜನರು ಜೀವವನ್ನು ಕೈಯ್ಯಲ್ಲಿ ಇಟ್ಟುಕೊಂಡು ಬದುಕುತ್ತಿದ್ದಾರೆ. ಅದು ಇಂದು ನಿನ್ನೆಯ ಸಮಸ್ಯೆಯಲ್ಲ, ಬದಲಿಗೆ ಎರಡು ಮೂರು ದಶಕಗಳಿಂದಲೂ ಜ್ವಲಂತವಾಗಿ ಇರುವಂತಹಾ ಸಮಸ್ಯೆ. ಅದರ ಬಗ್ಗೆ ಗಮನ ಹರಿಸದ ಮೇಲೆ, ಕಾಡಾನೆ ಸಮಸ್ಯೆಗೆ ಎರಡೂ ತಾಲೋಕಿನ ಜನಜೀವನ ಸಂಕಷ್ಟದಲ್ಲಿ ಸಿಲುಕಿ ಬದುಕೇ ಇಲ್ಲ ಅನ್ನುವಂತಾಗಿರುವಾಗ ಬೆಂಗಳೂರಿನಲ್ಲಿ ಕುಳಿತು ಅದು ಹೇಗೆ ಆರಾಮಾಗಿ ಇರುತ್ತಿರೋ ನಿಮ್ಮ ಒಳ್ಳೆಯತನವೇ ಹೇಳಬೇಕು.
ಗೂಂಡಾ ಕಾಯ್ದೆಯ ಸ್ಪಷ್ಟ ದುರುಪಯೋಗ
ಸಕಲೇಶಪುರ ತಾಲೋಕಿನಲ್ಲಿ ಕಾಡಾನೆ ಸಮಸ್ಯೆಗೆ ಸಂಬಂಧಪಟ್ಟಂತೆ ಹೋರಾಟ ಮಾಡಿದವರನ್ನು ನಾನಾ ಕೇಸುಗಳನ್ನು ಹಾಕುವುದರ ಮೂಲಕ ಅಲ್ಲಿನ ಹೋರಾಟಗಾರರನ್ನು ಬೆದರಿಸಲಾಗುತ್ತಿದೆ.
ಅಲ್ಲಾ ಸ್ವಾಮಿ, ಜನ ಆಚೆ ತಿರುಗಾಡುವಂತಿಲ್ಲ. ಆನೆಗಳು ಎಲ್ಲೆಂದರಲ್ಲಿ ತಿರುಗಾಡುತ್ತಿವೆ. ಆನೆ ನೋಡಬೇಕು ಅಂದರೂ ನಿಮ್ಮ ಇಲಾಖೆಯ ಅಂದರೆ ಅರಣ್ಯ ಇಲಾಖೆಯ ಪರ್ಮಿಷನ್ ತೆಗೆದುಕೊಳ್ಳಬೇಕು. ಅಂತದ್ದರಲ್ಲಿ ನಮ್ಮ ತೋಟ, ಮನೆ ಎನ್ನದಂತೆ ಎಲ್ಲೆಂದರಲ್ಲಿ ನಿಮ್ಮ ಸುಪರ್ದಿಯ ಆನೆಗಳು ಬಂದು ಜೀವ ತೆಗದು ಹೋಗುತ್ತಿದ್ದರೆ ನೀವು ಬಿ ಎಂ ರಸ್ತೆಯ ದೊಡ್ಡ ಕಟ್ಟಡದಲ್ಲಿ ಅದ್ಯಾವ ಫೈಲುಗಳನ್ನು ನೋಡಿ ಅದೆಷ್ಟು ದುಡ್ಡಿನ ಬಿಲ್ಲುಗಳಿಗೆ ಸಹಿ ಹಾಕುತ್ತಾ ಕುಳಿತಿರುತ್ತಿರೋ ನೀವೇ ಹೇಳಬೇಕು.
ಇದ್ಯಾಕೆ ಸ್ವಾಮಿ ಹೀಗೆ ಅಂತ ಕೇಳಿದರೆ ಅಂತಹವರ ಮೇಲೆ ಕೇಸಿನ ಮೇಲೆ ಕೇಸ್ ಹಾಕಿ ಬೆದರಿಸುತ್ತೀರಿ. ನೀವು ಇಂತಹಾ ಹೋರಾಟ ಮಾಡುವವರ ಮೇಲೆ ಕೇಸ್ ಹಾಕುವ ಮೂಲಕ ನಿಮ್ಮ ಯೋಗ್ಯತೆಯನ್ನು ನೀವೇ ಬಯಲು ಮಾಡಿಕೊಳ್ಳುತ್ತಿದ್ದೀರಿ. ಅದ್ಯಾವಾಗ ಯಡೇಹಳ್ಳಿ ಮಂಜುನಾಥ್ ಎಂಬ ಸಹೃದಯಿಯ ಮೇಲೆ ಕೇಸ್ ಹಾಕಿ ನಾಲ್ಕು ದಿನ ಜೈಲಿನಲ್ಲಿ ಕೂರಿಸಿದಿರೋ ಅಂದೆ ನಿಮ್ಮ ಸಂಪೂರ್ಣ ಯೋಗ್ಯತೆ ಸಾರ್ವಜನಿಕರಿಗೆ ತಿಳಿದು ಹೋಯಿತು.
ಯಡೇಹಳ್ಳಿ ಮಂಜುನಾಥ್ ಅಂದರೆ ಎಂತಹಾ ವ್ಯಕ್ತಿ ಅಂತ ಗೊತ್ತಿದೆಯೇ ಖಾಕಿ ಜನರೇ…? ಅವರ ಜಿವಪರ ಕಾಳಜಿಯ ಸಮೀಪಕ್ಕೂ ನಿಮ್ಮ ಖಾಕಿ ಬಂದು ನಿಲ್ಲಲಾರದು. ಅವರ ಅಭಿರುಚಿ ಹಾಗು ಜನಪರ ನಡೆಯನ್ನು ಗೌರವಿಸುವ ಅಸಂಖ್ಯಾತ ಮಂದಿ ಸಕಲೇಶಪುರ ಮಾತ್ರವಲ್ಲ, ನಾಡಿನ ತುಂಬೆಲ್ಲಾ ಇದ್ದಾರೆ. ಯಾವಾಗ ಅಂತಹಾ ಯಡೇಹಳ್ಳಿ ಮಂಜುನಾಥ್ ಎಂಬ ವ್ಯಕ್ತಿ ಮೇಲೆ ನೀವು ಗಲಾಟೆ ಮಾಡಲು ಬಂದಿದ್ರು ಅಂತ ಕೇಸ್ ಹಾಕಿದಿರೋ ಅಂದೇ ನಿಮ್ಮ ಬಗ್ಗೆ ಇದ್ದ ಅಲ್ಪಸ್ವಲ್ಪ ಗೌರವವೂ ಹೋಯಿತು.
ಆ ಸಹೃದಯಿ ತಾತ್ವಿಕ ಹೋರಾಟಗಾರನೂ ಹೌದು. ಅವರ ಬಂದನದ ನಂತರವೂ ಅವರು ಬಂದು ಪ್ರೆಸ್ ಮೀಟ್ ಮಾಡಿ ನಿಮ್ಮ ಖಾಕಿಯ ತಪ್ಪನ್ನು ನಿಮ್ಮ ಮುಖಕ್ಕೆ ರಾಚುವಂತೆ ಹೇಳಿದ್ದಾರೆ. ಈಗಲೂ ಕೂಡ ಅವರನ್ನು ಬಂದಿಸುತ್ತೀರೋ ಹೇಗೆ ನೋಡಿ. ನಿಮ್ಮ ಯೋಗ್ಯತೆ ಇನ್ನೂ ಜನಕ್ಕೆ ಗೊತ್ತಾಗಲಿ. ಕಾಡಾನೆಗೆ ಚಿಕಿತ್ಸೆ ನೀಡಲು ಒಬ್ಬ ಅರವಳಿಕೆ ತಜ್ಞನನ್ನು ಹೊಂದಲಾರದ ನಿಮ್ಮ ಖಾಕಿ ಇಲಾಖೆಗೆ, ಆನೆಯಿಂದ ಗಾಯಗೊಂಡ ವೆಂಕಟೇಶ್ ಅವರನ್ನು ಆಂಬುಲೆನ್ಸ್ ಮೂಲಕ ಕರೆ ತರುವಾಗ ಆ ಆಂಬುಲೆನ್ಸ್ ಕೂಡ ದಾರಿ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತದೆ ಎಂದರೆ ಅದ್ಯಾವ ಸಿದ್ದತೆ ನಿಮ್ಮಲ್ಲಿತ್ತು ಒಮ್ಮೆ ಯೋಚಿಸಿ ನೋಡಿ.
ಆನೆದಾಳಿಯ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. https://www.facebook.com/prasad.raxidi/videos/860462402402513/
ಹಾಗೆ ಯೋಚಿಸಿ ಆದ ಮೇಲೆ ನೀವು ಹಾಕಿರುವ ದೂರು, ಕೇಸು, ಗೂಂಡಾ ಕಾಯ್ದೆಗಳನ್ನು ಒಮ್ಮೆ ನೋಡಿಕೊಂಡು ಬನ್ನಿ. ನೀವು ಎಲ್ಲಿ ನಿಂತು ಏನು ಕೆಲಸ ಮಾಡುತ್ತಿದ್ದೀರಿ ಎಂಬುದು ತಿಳಿಯುತ್ತದೆ. ಸಕಲೇಶಪುರದ ಜನರನ್ನು ಗುಂಡ್ಯ ಜಲವಿದ್ಯುತ್ ಯೋಜನೆಯ ಕಾಲದಿಂದಲೂ ತುಳಿಯುತ್ತಲೇ ಬಂದಿದೆ ಈ ವ್ಯವಸ್ಥೆ. ಈಗ ಇಷ್ಟಾದರೂ ಮಾತಾಡುತ್ತಿದ್ದಾರೆ ಎಂದರೆ ನಿಜಕ್ಕೂ ಅಲ್ಲಿನ ಜನರ ಶಕ್ತಿಯ ಬಗ್ಗೆ ಹೆಮ್ಮೆ ಪಡಲೇ ಬೇಕಿದೆ.
ಒಂದು ಆನೆ ಕಾರಿಡಾರ್, ಒಂದು ರೈಲ್ವೇ ಬ್ಯಾರಕೇಡ್ ಮುಂತಾದ ಸಮಸ್ಯೆಗೆ ಪರಿಹಾರ ಯೋಚಿಸಲಾಗದೇ ಕೇವಲ ರಾಜಕಾರಣಿಗಳ ಮುಂದಿನ ಸೆಲ್ಯೂಟುಗಳಾದ ನಿಮ್ಮಿಂದ ಬೇರೇನೂ ನಿರೀಕ್ಷೆ ಮಾಡಬಹುದು ಹೇಳಿ…? ಇನ್ನಾದರೂ ಜನರ ಮಧ್ಯೆ ವಿಶ್ವಾಸಗಳಿಸಬೇಕೆಂಬುದು ನಿಮ್ಮ ಆಶಯವಾಗಿದ್ದರೆ ತಮ್ಮ ಸಮಸ್ಯೆಗಳ ಕಾರಣಕ್ಕೆ ಹೋರಾಟ ಮಾಡುವವರ ಜೊತೆ ಹಾಗು ಅಲ್ಲಿನ ಜನಸಾಮಾನ್ಯರ ಜೊತೆ ಒಂದಾಗಿ ಕೆಲಸ ಮಾಡಿ.
ಜನಾಂದೋಲನ ಆಗಲೇಬೇಕು…
ಸಕಲೇಶಪುರ ಶಾಪಗ್ರಸ್ತ ತಾಲೋಕು ಆಗಿ ಬಹಳ ದಶಕಗಳೇ ಆದವು. ಅಲ್ಲಿನ ಜನಕ್ಕೆ ತಾಳ್ಮೆ ಬಹಳ/ ಆತಿಥ್ಯದಲ್ಲಿ ಸದಾ ಮುಂದು. ಕನಿಷ್ಟ ಅಲ್ಲಿಗೆ ಹೋಗಿ ಆತಿಥ್ಯ ಸ್ವೀಕರಿಸಿದವರಾದರೂ ಅವರ ಕಷ್ಟಗಳಗೆ ಸ್ಪಂದಿಸಬೇಕಿದೆ. ಕಾಡಾನೆ ಸೇರಿದಂತೆ ಹಲವಾರು ವನ್ಯಜೀವಿಗಳ ಸಮಸ್ಯೆ ಹಾಗು ಸರ್ಕಾರದ ಹಲವಾರು ಯೋಜನೆಗಳ ಭಾರಕ್ಕೆ ಸಕಲೇಶಪುರ ಕುಸಿದು ಹೋಗಿದೆ. ಆದರೂ ಕೂಡ ಅಲ್ಲಿನ ಜನ ಮಾತನಾಡುವ ಶಕ್ತಿ ಉಳಿಸಿಕೊಂಡಿದ್ದಾರೆ. ಅದ್ಕಕೆ ಒಂದು ಸಾಂಘಿಕ ರೂಪ ಬೇಕಾಗಿದೆ. ನೋಡುವಷ್ಟು ನೋಡಿಯಾಗಿದೆ. ಮೂವತ್ತು ನಲವತ್ತು ವರ್ಷದ ತಾಳ್ಮೆ ಎಂದರೆ ಅದು ಸುಮ್ಮನೆ ಮಾತಾಗಲಿಲ್ಲ. ಸರ್ಕಾರದ ಗಮನವನ್ನು ಶತಾಯಗತಾಯ ಸೆಳೆಯುವಂತಹಾ ಹೋರಾಟ, ಒಂದು ಜನಾಂದೋಲನ ಆಗಲೇ ಬೇಕಿದೆ. ಸ್ಥಳಿಯ ರಾಜಕೀಯ, ಸ್ವಪ್ರತಿಷ್ಟೆ ಬಿಟ್ಟು ಒಂದಾಗಬೇಕಿದೆ.
– ಚಲಂ ಹಾಡ್ಲಹಳ್ಳಿ, ಸಂಪಾದಕರು, ಜೇನುಗಿರಿ ದಿನಪತ್ರಿಕೆ, ಹಾಸನ