ಉತ್ತಮ ಸಮಾಜ ಕಟ್ಟುವುದು, ಅದರ ಮೂಲಕ ನೊಂದ, ಶೋಷಿತ ಜನಕ್ಕೆ ಸಾಂತ್ವನ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುವುದು ಪ್ರಗತಿಪರತೆಯ ಮೂಲಗುಣ. ಈ ಪ್ರಗತಿಪರರು ಸದಾಕಾಲ ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಆಳುವ ಸರ್ಕಾರಗಳ ಕಿವಿಹಿಂಡುವ ಕೆಲಸ ಮಾಡಬೇಕು. ಸರ್ಕಾರಗಳು ಉತ್ತಮ ಕೆಲಸ ಮಾಡಿದಾಗ ಹೊಗಳು ಭಟ್ಟರ ವೇಷ ಹಾಕುವುದು, ಅದೇ ಜನಪೀಡಕ ಕೆಲಸ ಮಾಡಿದಾಗ ಮೌನವ್ರತ ಆಚರಣೆಗೆ ತೊಡಗುವುದು ಅಪಾಯಕಾರಿ ಪ್ರಗತಿಪರತೆಯ ಲಕ್ಷಣ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಆಗುತ್ತಿರುವುದೂ ಅದೇ! ಅದು ಎಷ್ಟರಮಟ್ಟಿಗೆ ಅಪಾಯಕಾರಿಯಾಗಿದೆಯೆಂದರೆ, ಈ ಅಪಾಯಕಾರಿ ಪ್ರಗತಿಪರರ ನಡೆಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಟೀಕಿಸುವ ಜನರನ್ನು ದ್ವೇಷಿಗಳೆಂದು, ಅನಾಚಾರಿಗಳೆಂದು ಜರಿಯಲಾಗುತ್ತಿದೆ.
ನಾನು ಏನು ಹೇಳ ಹೊರಟಿದ್ದೇನೆಂದು ನಿಮಗೀಗಾಗಲೇ ಅರ್ಥವಾಗಿರಬೇಕು. ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 4ರಿಂದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕಳೆದಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಅದೇ ವಿಧಾನಸೌಧದಲ್ಲಿ ವಿ.ಡಿ.ಸಾವರ್ಕರ್ ಫೋಟೋ ಹಾಕಿದ್ದರು. ಕಾಂಗ್ರೆಸ್ಸಿನ ಪ್ರತಿಭಟನೆಯ ನಂತರವೂ ವಿಮುಖ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಗಾಂಧಿ, ನೆಹರೂ, ಪಟೇಲ್ ಮತ್ತಿತರ ದಿಟ್ಟ ಸ್ವಾತಂತ್ರ್ಯ ಹೋರಾಟಗಾರರ ಪಕ್ಕದಲ್ಲಿ ಸ್ಥಾನಪಡೆದುಕೊಂಡದ್ದು ಈಗ ಇತಿಹಾಸ. ಅಂದು ಆ ಸಾವರ್ಕರ್‌ನ ಫೋಟೋ ಹಾಕಬಾರದೆಂದು ಪ್ರತಿಭಟಿಸಿದ್ದ ಕಾಂಗ್ರೆಸ್ ಪಕ್ಷವೇ ಭರ್ಜರಿ ಬಹುಮತ ಪಡೆದು ಅಧಿಕಾರದಲ್ಲಿ ಬಂದು ಕುಳಿತಿದೆ. ಅವರ ಮುಂದೆಯೇ ಸಾವರ್ಕರ್ ಫೋಟೋ ಕಾಂಗ್ರೆಸ್‌ನ ಘಟಾನುಘಟಿ ನಾಯಕರುಗಳಿಗೆ ಎದೆಗುಂದದೆ ಗೋಡೆಯಲ್ಲಿ ತೂಗುತ್ತಿದೆ.
ʻನನಗೇನಾದರೂ ಅವಕಾಶ ಕೊಟ್ಟರೆ ಆ ಫೋಟೋವನ್ನು ಕಿತ್ತು ಬಿಸಾಡುತ್ತೇನೆʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಷ್ಟೇ ಬಂತು. ಮಿಕ್ಕವರೆಲ್ಲಾ ಗಪ್‌ಚಿಪ್! ಕನಿಷ್ಟ ಖರ್ಗೆ ಅವರ ಎದೆಗಾರಿಕೆಗೆ ಮೆಚ್ಚುಗೆ ಸೂಚಿಸಿ, ಬೆಂಬಲಿಸಲಿಲ್ಲ. ಅಲ್ಲಿಗೆ ಪ್ರಿಯಾಂಕ್ ಒಬ್ಬೊಂಟಿ! ವಿಧಾನ ಸಭೆಯ ಸ್ಪೀಕರ್ ಮಾನ್ಯ ಯು.ಟಿ.ಖಾದರ್ ʻಕಟ್ಟುವುದಷ್ಟೇ ನನ್ನ ಕೆಲಸʼ ಎಂದು ವಿಧಾನ ಸಭೆಯ ಸಾಂಭವ್ಯ ಕೋಲಾಹಲವನ್ನು ತಣ್ಣಗಾಗಿಸಿದರು. ಅಲ್ಲಿಗೇ ಮುಗಿದಿದ್ದರೆ ಇದು ಅಂಬೇಡ್ಕರ್ ವರೆಗೂ ಬಂದು ತಲುಪುತ್ತಿರಲಿಲ್ಲ!
ಸೋಶಿಯಲ್ ಪ್ಲಾಟ್‌ಫಾಂಗಳಲ್ಲಿ ಚರ್ಚೆಗೆ ಗ್ರಾಸವಾಯ್ತು. ಪ್ರಗತಿಪರರಲ್ಲಿ ಅನೇಕರು ಮೌನವ್ರತ ಆಚರಿಸಿದರೆ, ಕೆಲವೇ ಕೆಲವು ಮಂದಿ ಮಾತ್ರ ಕಾಂಗ್ರೆಸ್ಸಿನ ಈ ನಡೆಯನ್ನು ಟೀಕಿಸಲು ಶುರುವಿಟ್ಟರು. ಅವರ ಜತೆಗೆ ಅಸಲೀ ಪ್ರಗತಿಪರರೂ ಸೇರಿಕೊಂಡಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರಕ್ಕೆ ಕಾರಣವಾಯ್ತು. ಜತೆಗೆ, ಸದ್ಯದ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಆಗುಹೋಗುಗಳ ಬಗ್ಗೆ ಸೋಶಿಯಲ್ ಪ್ಲಾಟ್‌ಫಾಂಗಳಲ್ಲಿ ಪ್ರತಿಕ್ರಿಯೆ ಕೊಡುವ ನಟ ಚೇತನ್ ಅಹಿಂಸಾ ʻಸಾವರ್ಕರ್ ಫೋಟೋ ತೆಗೆಯುವ ಜತೆಗೆ ಗಾಂಧಿಯ ಫೋಟೋ ಕೂಡಾ ತೆಗೆಯಬೇಕುʼ ಎಂದು ಹೇಳಿಕೆ ಕೊಟ್ಟರು. ಇಷ್ಟು ಸಾಕಿತ್ತು, ಮೌನವ್ರತ ಆಚರಿಸುತ್ತಿದ್ದ ಪ್ರಗತಿಪರರಿಗೆ! ಧುತ್ತನೇ ಅಖಾಡಕ್ಕೆ ಧುಮುಕಿಯೇಬಿಟ್ಟರು. ಸಾವರ್ಕರ್ ವರ್ಸಸ್ ಗಾಂಧಿಯ ಚರ್ಚೆಯಾಗಬೇಕಿದ್ದ ವೇದಿಕೆಗೆ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನೂ ಎಳೆದು ತಂದು, ಸರ್ಕಾರದ ಮುಜುಗರಕ್ಕೆ ಮುಲಾಮು ಅರೆಯಲು ಶುರು ಮಾಡಿದರು.
ಚೇತನ್ ಹೇಳಿಕೆ ತಪ್ಪಿದ್ದರೆ, ಅದಕ್ಕೊಂದು ಚರ್ಚೆಯ ವೇದಿಕೆ ಕೊಟ್ಟು, ಸಂವಾದ ಮಾಡಬೇಕಾದದ್ದು ಉತ್ತಮ ಸಮಾಜದ ಲಕ್ಷಣ. ಮೂಲಭೂತವಾದಿ, ಕೋಮುವಾದಿ ಚಾನೆಲ್ ಎಂದು ನಿರೂಪಿತವಾಗಿರುವ ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ಅಂಥವರೇ ಚೇತನ್, ಭಗವಾನ್ ಥರದ ಉಗ್ರ ಟೀಕಾಕಾರರನ್ನು ಕರೆಸಿ ಸಂವಾದ ನಡೆಸುತ್ತದೆ. ಮಾತನಾಡಲು, ಹೇಳಿಕೆಗೆ ಕ್ಲಾರಿಟಿ ಕೊಡಲು ಅವಕಾಶ ಕಲ್ಪಿಸುತ್ತದೆ. ಆದರೆ, ಈ ಕಾಂಗ್ರೆಸ್ ಪ್ರಗತಿಪರ ಬುದ್ದಿಜೀವಿಗಳಿಗೆ ಏನಾಗಿದೆ? ಮಾತೆತ್ತಿದರೆ ಸಂವಿಧಾನ ಅಪಾಯದಲ್ಲಿದೆ, ಇಂಡಿಯಾವನ್ನು ಕಾಪಾಡಿಕೊಳ್ಳಬೇಕು ಎಂದು ಡೈಲಾಗ್ ಹೊಡೆಯುವವರು ಮಾಡುತ್ತಿರುವುದು ಏನನ್ನು? ಕನಿಷ್ಟಪಕ್ಷ ಚೇತನ್ ಅವರನ್ನು ಕೂರಿಸಿಕೊಂಡು ಸಂವಾದ ನಡೆಸಿ, ಸಮಸ್ಯೆ ಪರಿಹರಿಸಿಕೊಂಡಿದ್ದರೆ ಆಗುತ್ತಿತ್ತಲ್ಲವ? ಚೇತನ್ ಥರದ ಟೀಕಾಕಾರನನ್ನು ಮಗ್ಗುಲ ಮುಳ್ಳಾಗಿಯಾದರೂ ಇಟ್ಟುಕೊಳ್ಳುವುದು ಉತ್ತಮ ಸಮಾಜದ ಲಕ್ಷಣ ಅಲ್ಲವ? ಬರೀ ಹೊಗಳುಭಟ್ಟರನ್ನು ಮಾತ್ರ ವೇದಿಕೆಗೆ ಕರೆಸಿ ಕರೋಕೆ ಭಾಷಣಗಳ ಆರ್ಕೆಸ್ಟ್ರಾ ನಡೆಸಿದರೆ ಏನು ಪ್ರಯೋಜನ… ಅದೇ ರಾಗ, ಅದೇ ಹಾಡು, ಅದೇ ಪ್ರೇಕ್ಷಕ, ಅದೇ ಚಪ್ಪಾಳೆಯಷ್ಟೇ ಗಿಟ್ಟುತ್ತದೆ. ನಾಟಕವೋ ಮತ್ತೊಂದೋ ಆರೆಸ್ಸೆಸ್‌ನಂತ ಜೀವವಿರೋಧಿ ಸಂಘಟನೆಯೇ ಎಡಪಂಥೀಯರನ್ನು ಸಭೆಗೆ ಆಹ್ವಾನಿಸಿ, ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಕೆಲಸ ಮಾಡಿಕೊಂಡು ಬರುತ್ತಿದೆ. ಆದರೆ ಇವರಿಗೇ ಅದೇನು ಮಂಕು ಬಡಿದಿದೆ? ಅಟ್ಲೀಸ್ಟ್ ಚೇತನ್ ಹೇಳಿಕೆಯನ್ನು ನಿರ್ಲಕ್ಷಿಸುವ ಅವಕಾಶವೂ ಅವರಿಗಿತ್ತು. ಆದರೆ ಅನಗತ್ಯವಾಗಿ ಬಾಬಾ ಸಾಹೇಬರನ್ನು ಎಳೆದುತಂದು, ಗಾಂಧಿಯನ್ನು ಬೆತ್ತಲು ಮಾಡಲು ಅವಕಾಶ ಕಲ್ಪಿಸಿಬಿಟ್ಟರು.
ಈ ದೇಶದ ದಲಿತರಿಗೆ ಗಾಂಧಿ ಮಾಡಿರುವ ಮೋಸ, ವಂಚನೆಗಳು ಸಂಗತಿಗಳು ಬೆಳಕಿಗೆ ಬಂದಿದ್ದೇ ತೀರಾ ಇತ್ತೀಚೆಗೆ. 1991ರಲ್ಲಿ ಬಾಬಾ ಸಾಹೇಬರ ಜನ್ಮಶತಮಾನೋತ್ಸವದ ಅಂಗವಾಗಿ ಮಹರಾಷ್ಟ್ರ ಸರ್ಕಾರವು, ಅಂಬೇಡ್ಕರ್ ಅವರ ಬದುಕು ಬರಹಗಳ ಸಂಪುಟಗಳನ್ನು ಪ್ರಕಟಿಸದೇ ಹೋಗಿದ್ದರೆ ಮಹಾತ್ಮ ಗಾಂಧಿಯು ದಲಿತ ವಿರೋಧಿ ಗಾಂಧಿ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಪೂನಾ ಒಪ್ಪಂದದ ಹಿಂದು ಮುಂದಾದ ಘಟನೆಗಳು, ಗಾಂಧಿಯವರೇ ಪಬ್ಲಿಶ್ ಮಾಡುತ್ತಿದ್ದ ಗುಜರಾತಿ ಮತ್ತು ಇಂಗ್ಲಿಶ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಎರಡು ಮುಖದ ಲೇಖನಗಳು, ಆಫ್ರಿಕಾದ ಜೈಲಿನಲ್ಲಿದ್ದಾ ಅಲ್ಲಿನ ನೀಗ್ರೋ ಜನಗಳ ಜತೆಗೆ ಗಾಂಧಿ ನಡೆದುಕೊಂಡ ರೀತಿಯೂ, ದೇವದಾಸಿ ಮಕ್ಕಳನ್ನು ದೇವರ ಮಕ್ಕಳು ಎಂದು ಕರೆಯುವುದು ಚಾಲ್ತಿಯಲ್ಲಿದ್ದ ಕಾಲದಲ್ಲೇ, ಭಾರತದ ದಲಿತರನ್ನು ʻಹರಿಜನʼ ಎಂದು ಕರೆದ ಗಾಂಧಿಯ ಜಾತೀವಾದಿ ಮನಸ್ಥಿತಿಯೂ ಸೇರಿದಂತೆ ಇದ್ಯಾವುದೂ ಬೆಳಕಿಗೆ ಬರುತ್ತಿರಲಿಲ್ಲ. ಎಲ್ಲವೂ ಮಹಾತ್ಮನೆಂಬ ಬೂದಿ ಮತ್ತು ಹೊಗೆಯೊಳಗೆ ಲೀನವಾಗಿಬಿಡುತ್ತಿತ್ತು.
ʻಪೊಲಿಟಿಕಲ್ ಪವರ್ ಈಸ್ ದ ಮಾಸ್ಟರ್ ಕೀʼ, ʻವೀ ಮಸ್ಟ್ ಗೇನ್ ದ ಪವರ್ʼ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳ ಹಾದಿ ಹಿಡಿದ ದಾದಾ ಸಾಹೇಬ್ ಕಾನ್ಶಿರಾಂ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ʻವೀ ಮಸ್ಟ್ ಗೇನ್ ದ ಪವರ್ ಅಟ್ ಎನೀ ಕಾಸ್ಟ್ʼ ಎಂದು ಯುಪಿಯಂಥ ಜಾತಿಕೂಪದ ರಾಜ್ಯದಲ್ಲಿ ದಲಿತರಿಗೆ ರಾಜ್ಯಾಧಿಕಾರ ಹಿಡಿಯುವ ಅವಕಾಶ ಕಲ್ಪಿಸಿದ್ದು ಈಗ ಇತಿಹಾಸ. ನಾವು ಅಧಿಕಾರ ಹಿಡಿಯಲು ಯಾವುದೇ ಬೆಲೆಯನ್ನಾದರೂ ತೆರಬೇಕು ಎಂದ ಕಾನ್ಶೀರಾಂ ಅವರು ಮೊದಲು ಮಾಡಿದ್ದು, ದಲಿತ ಉದ್ದಾರಕರು ನಾವೇ ಎಂದು ಸಿಕ್ಕಸಿಕ್ಕಲ್ಲೆಲ್ಲಾ ಜಂಡಾ ಊರುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸಿದರು. ಅದಕ್ಕಾಗಿ ಅವರು ನಯಾ ಪೈಸೆ ಖರ್ಚು ಮಾಡಲಿಲ್ಲ. ಬದಲಿಗೆ ಬಾಬಾ ಸಾಹೇಬರು ಕಂಡ ಕನಸನ್ನು ಬಿತ್ತಿದರು, ದಲಿತರಿಗೆ ರಾಜಕೀಯ ಜ್ಞಾನವನ್ನೂ, ಆಳುವ ಸರ್ಕಾರಗಳ ವಂಚನೆಯನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟ ಪರಿಣಾಮ ಎಚ್ಚೆತ್ತ ದಲಿತ ಮತದಾರರ, ಜತೆಗೆ ಜಾಗೃತರಾದ ಹಿಂದುಳಿದ, ಅಲ್ಪಸಂಖ್ಯಾತ ಮತದಾರರೂ ಕಾನ್ಶಿರಾಂ ಅವರು ಪಕ್ಷವನ್ನು ಬರೋಬ್ಬರಿ ನಾಲ್ಕುಬಾರಿ ಅಧಿಕಾರಕ್ಕೆ ತಂದರು. ಆಮೇಲಾದ ಇವಿಎಂ ಮ್ಯಾಜಿಕ್ ಕುರಿತು ಬೇರೆಯದೇ ಚರ್ಚೆ ಮಾಡಬೇಕಿದೆ.
ಇದನ್ನೂ ಓದಿ: ಸತ್ಯ ಬರೆದವರ ವಿರುದ್ಧವೇ ಕೇಸ್ ಜಡಿಯುವುದಾದರೆ ʻಕಾಂಗ್ರೆಸ್ʼ ಎಂಬ ಪ್ರಗತಿಪರ ಹಣೆಪಟ್ಟಿಯ ಸರ್ಕಾರ ಏಕೆ ಬೇಕು?
ಕಾನ್ಶಿರಾಂ ಮೂಡಿಸಿದ ಜಾಗೃತಿಯು ಕ್ರಮೇಣವಾಗ ಇಡೀ ಭಾರತಕ್ಕೆ ಹಬ್ಬಿತು. ಅದರ ಪರಿಣಾಮ ದಲಿತರು ಜಾಗೃತರಾದರು, ವಿದ್ಯಾವಂತರಾದರು, ಆಳುವ ಸರ್ಕಾರವನ್ನು ಪ್ರಶ್ನಿಸಿ, ಬೇಕಾದ ಸವಲತ್ತನ್ನು ಪಡೆದುಕೊಳ್ಳುವ ಹಂತಕ್ಕೆ ಬಂದರು. ಈ ಜಾಗೃತಿಯೇ ಇಂದು ಈ ಕಾಂಗ್ರೆಸ್ ಪ್ರಗತಿಪರರ ಕಣ್ಣು ಕುಕ್ಕುತ್ತಿರುವುದು, ಹೊಟ್ಟೆ ನೋವಿಗೆ ಕಾರಣವಾಗಿರುವುದು. ಗಾಂಧಿಯ ಕುರಿತು ಪುಂಖಾನುಪುಂಖವಾಗಿ ಪವಾಡವನ್ನೂ ಸೇರಿಸಿ, ಕತೆಕಟ್ಟಿ, ಲಕ್ಷಕ್ಕೂ ಮೀರಿದ ಪುಟಗಳ ಬರಹಗಳನ್ನು ಅನೇಕ ಸಂಪುಟಗಳಾಗಿ, ಪ್ರಕಟಿಸಿ, ಮುಗ್ಧ ಮಕ್ಕಳ ಶಾಲಾ ಪಠ್ಯಗಳಲ್ಲಿ ತುರುಕಿ, ಮಹಾತ್ಮನನ್ನು ಪ್ರಸ್ತುತವಾಗಿಡಲು ಹೆಣಗುವ ಕಾಲಘಟ್ಟದಲ್ಲೇ ಅಂಬೇಡ್ಕರ್ ಎಂಬ ಬೆಳಕು ದಲಿತರ ಎದೆಯಲ್ಲಿ ಕುಳಿತಾಗಿತ್ತು. ಗಾಂಧಿಯನ್ನು, ಗಾಂಧಿಯೇ ನೀರು ಗೊಬ್ಬರ ಹಾಕಿ ಬೆಳೆಸಿದ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸತೊಡಗಿದರು. ಗಾಂಧಿ ಈಗಿಲ್ಲ. ಆದರೆ ಗಾಂಧಿವಾದಿಗಳು ದಲಿತರ ವಿಚಾರದಲ್ಲಿ ಗಾಂಧಿಗಿಂತಲೂ ಅಪಾಯಕಾರಿಗಳಾಗಿದ್ದಾರೆ.
ನೀವು ಈಗಲೂ ಒಬ್ಬ ಗಾಂಧಿವಾದಿ ಕಲಾವಿದನಿಗೆ ಗಾಂಧಿಯ ಚಿತ್ರ ಬರೆಯಲು ಹೇಳಿ, ಆತ ಗಾಂಧಿಯೊಂದಿಗೆ ಭಗವದ್ಗೀತೆಯನ್ನೂ ಸೇರಿಸಿಯೇ ತೀರುತ್ತಾನೆ. ಅದೇ ಒಬ್ಬ ಪ್ರಜ್ಞಾವಂತ ಕಲಾವಿದನಿಗೆ ಅಂಬೇಡ್ಕರ್ ಚಿತ್ರ ಬರೆಯಲು ಹೇಳಿದರೆ, ಅವನು ಸಂವಿಧಾನವನ್ನು ಸೇರಿಸುತ್ತಾನೆ. ಈಗ ಹೇಳಿ ನಮಗೆ ಅಂದರೆ ಈ ದೇಶಕ್ಕೆ ಬೇಕಾಗಿರುವುದು ಭಗವದ್ಗೀತೆಯೋ, ಸಂವಿಧಾನವೋ?
- ವಿ.ಆರ್.ಕಾರ್ಪೆಂಟರ್
ಪ್ರಧಾನ ಸಂಪಾದಕ, ಬಿಗ್ ಕನ್ನಡ