ಮೊದಲಿಗೆ ಒಂದು ಪ್ರಸಂಗ ಹೇಳಿ ಲೇಖನದ ಮೂಲ ವಸ್ತುವಿಗೆ ಬರುತ್ತೇನೆ. ಈ ಜಗತ್ತಿನಲ್ಲಿ ಅತಿ ಹೆಚ್ಚಿನ ವಿಮಾನ ಅಪಘಾತಗಳು ಜರುಗುತ್ತಿದ್ದದ್ದು ಕೊರಿಯನ್ ಏರ್ಲೈನ್ಸ್ನಲ್ಲಿ. ಸಣ್ಣಪುಟ್ಟ ವಿಷಯಕ್ಕೂ ಅಪಘಾತ. ಸರಣಿ ಅಪಘಾತಗಳು. ಹುಡುಕಿದರೆ ಕಾರಣಗಳೇ ಕಾಣಿಸುತ್ತಿರಲಿಲ್ಲ. ಸರ್ಕಾರ ಎಂಥೆಂತ ತನಿಖೆ ಮಾಡಿದರೂ ಅಪಘಾಗಳು ನಿಲ್ಲುತ್ತಲೇ ಇಲ್ಲ. ಹೀಗಿರುವಾಗ ಅಮೆರಿಕದ ಒಬ್ಬ ರಕ್ಷಣಾ ಅಧಿಕಾರಿಯನ್ನು ಅನಿವಾರ್ಯವಾಗಿ ತನಿಖೆಗೆ ನೇಮಿಸಲಾಗುತ್ತದೆ. ಆತ ಒಂದಷ್ಟು ದಿನ ಅಧ್ಯಯನ ನಡೆಸಿ, ಏರ್ಲೈನ್ಸ್ ಸಂವಹನದ ಭಾಷೆಯನ್ನು ಕೊರಿಯನ್ನಿಂದ ಇಂಗ್ಲಿಷಿಗೆ ಬದಲಾಯಿಸುವಂತೆ ವರದಿ ಸಲ್ಲಿಸುತ್ತಾನೆ. ಸರ್ಕಾರ ಆತನ ಸಲಹೆಯನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಇಂಗ್ಲಿಷಿಗೆ ಬದಲಾಯಿಸುತ್ತದೆ. ಆಗ ಜರುಗುವುದೇ ಪವಾಡ!
ಅಪಘಾತಗಳೇ ಇಲ್ಲದೆ, ನಿರಾಳವಾಗಿ ವಿಮಾನಗಳು ಸಂಚರಿಸಲು ಪ್ರಾರಂಭಿಸುತ್ತವೆ. ಅಮೆರಿಕನ್ ಅಧಿಕಾರಿ ನೀಡಿದ್ದ ಶಿಫಾರಸ್ಸಿನಲ್ಲಿ ಕೊರಿಯನ್ ಭಾಷೆಯಲ್ಲಿರುವ ಸಂವಹನದ ತೊಡಕಿನ ಬಗ್ಗೆ ವಿವರಿಸುತ್ತಾ, ʼಕೊರಿಯನ್ ಭಾಷೆಯು ಅದ್ಭುತ ಶಬ್ದ ಸಂಪತ್ತನ್ನು ಹೊಂದಿದೆ. ಅದು ಜಗತ್ತಿನ ಶ್ರೇಷ್ಟ ಭಾಷೆಗಳಲ್ಲಿ ಒಂದು ಎಂಬ ಅರಿವು ನನಗೆ ಕಾಣಿಸಿತು. ಆದರೆ, ರಕ್ಷಾಣಾ ವ್ಯವಸ್ಥೆ, ವಿಮಾನ ಸಂಚಾರ ವ್ಯವಸ್ಥೆ ಮುಂತಾದ ಕಡೆಗಳಲ್ಲಿ ಈ ಭಾಷಾ ಸಂಪತ್ತೇ ದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ಏಕೆಂದರೆ ಕೆಳಹಂತದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ತನ್ನ ಮೇಲಿನ ಅಧಿಕಾರಿಯನ್ನು ಹಲವು ವಿಧದ ಬಿರುದುಬಾವಲಿಗಳನ್ನು ಬಳಸಿ ಮಾತನಾಡಿಸಬೇಕು. ಇಂಗ್ಲಿಷ್ ನಲ್ಲಿ ಸರ್ ಅಥವಾ ಕ್ಯಾಪ್ಟನ್ ಅನ್ನುವುದನ್ನು ಕೊರಿಯಾದಲ್ಲಿ ನಾಲ್ಕೈದು ಪದಗಳನ್ನು ಬಳಸಿ ಕರೆಯಬೇಕು. ತುರ್ತು ಸ್ಥಿತಿಗಳಲ್ಲಿ, ಅಥವಾ ಯಾವುದೋ ಒಂದು ಸಣ್ಣ ಮೆಸೇಜ್ ತಲುಪಿಸುವ ಸಂದರ್ಭದಲ್ಲಿ ಅಧಿಕಾರಿಗೆ ದೀರ್ಘದಂಡ ನಮಸ್ಕಾರ ಹಾಕಿ ಹೇಳಬೇಕಾಗುತ್ತದೆʼ ಎಂದು ಉಲ್ಲೇಖಿಸುತ್ತಾನೆ. ಆತನ ಮಾತನ್ನು ಸರ್ಕಾರ ಒಪ್ಪಿಕೊಂಡು ತನ್ನ ಪ್ರಯಾಣಿಕರ ಪ್ರಾಣವನ್ನು ಉಳಿಸಿಕೊಳ್ಳುತ್ತದೆ.
ಈ ಪ್ರಸಂಗ ಯಾಕೆ ನೆನಪಾಯಿತೆಂದರೆ- ಇತ್ತೀಚೆಗೆ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಅವಮಾನಿಸಿದ ಸ್ಕಿಟ್ ಸಿದ್ಧಪಡಿಸಿ, ಬಹಳ ವಿಕೃತವಾಗಿ ಪ್ರದರ್ಶನ ಮಾಡಿದ್ದು ಅಪರಾಧವೇ! ಅದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಆ ಸ್ಕಿಟ್ ತಯಾರಿಸುವ ಮನಸ್ಥಿತಿಗೆ ಬರುವಷ್ಟು ಆ ವಿದ್ಯಾರ್ಥಿಗಳ ಮನಸ್ಸು ವಿಕೃತಗೊಳ್ಳುವುದರ ಹಿಂದಿರುವ ಸಂವಹನದ ಕೊರತೆ ಯಾವುದು? ಯಾಕಾಗಿ ಅಂಥ ಹೀನ ಮನಸ್ಥಿತಿಗೆ ಅವರು ತಲುಪಿದ್ದಾರೆ? ಎಂಬುದನ್ನು ಅಧ್ಯಯನ ಮಾಡುವ ಅಗತ್ಯವಿದೆ. ಇದು ತುರ್ತಾಗಿ ಆಗಬೇಕಿದೆ. ಯಾಕೆಂದರೆ, ಜೈನ್ ವಿವಿಯ ಆ ವಿದ್ಯಾರ್ಥಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ಆದ ತಕ್ಷಣ, ಈ ದೇಶದ ಒಳಗೇ ಅಂತರ್ಗತವಾಗಿರುವ ಅಂಬೇಡ್ಕರ್ ಅವರ ಮೇಲಿನ ದ್ವೇಷ ನಿಂತು ಬಿಡುತ್ತದೆಯೇ? ಇಂದು ಆ ವಿದ್ಯಾರ್ಥಿಗಳಿಗೆ ಶಿಕ್ಷೆಯಾದ ತಕ್ಷಣ, ನಾಳೆಯಿಂದ ಎಲ್ಲವೂ ಬದಲಾಗಿ ಅಂಬೇಡ್ಕರ್ ಅವರನ್ನು ದೇಶದ ಅತ್ಯುನ್ನತ ಐಕಾನ್ ಎಂದು ಇಲ್ಲಿರುವ ಮೇಲ್ಜಾತಿ ಅಹಮ್ಮಿನ ವರ್ಗ ಅಪ್ಪಿಕೊಂಡುಬಿಡುತ್ತದೆಯೆ? ಅಸಲಿಗೆ ಇಂಥ ಹೀನ ಕೃತ್ಯಗಳಿಗೆ ಶಿಕ್ಷೆಯೊಂದೇ ಮಾನದಂಡವೇ? ಅದೊಂದೇ ಮಾರ್ಗವೇ?
ಶಿಕ್ಷೆಯ ಬದಲಿಗೆ ಶಿಕ್ಷಣವನ್ನು ಮಾನದಂಡ ಮತ್ತು ಮಾರ್ಗವೆಂದು ಒಪ್ಪಿಕೊಳ್ಳುವ ಸ್ಥಿತಿಯನ್ನು ನಾವು ತಲುಪುವುದು ಯಾವಾಗ? ಅಂದು ಬುದ್ಧ ಮತ್ತು ಅಂಗುಲಿಮಾಲ ಕಾಡಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡಾಗ, ಸಣ್ಣ ಹೊಡೆದಾಟ ಏರ್ಪಟ್ಟಿದ್ದರೂ ಇಂದು ಬುದ್ಧನೂ ಇರುತ್ತಿರಲಿಲ್ಲ; ಅಂಗುಲಿಮಾಲನ ಹೆಸರೂ ಉಳಿಯುತ್ತಿರಲಿಲ್ಲ. ಮನುಷ್ಯರನ್ನು ಕೊಲ್ಲುತ್ತಿದ್ದವನನ್ನು ಮನುಷ್ಯನನ್ನಾಗಿ ಪರಿವರ್ತಿಸಲು ಬುದ್ಧ ಕಂಡುಕೊಂಡ ದಾರಿಯನ್ನು ನಾವು ಅರಿಯಬೇಕಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಬುದ್ಧನ ಅಸಲಿ ಕತೆಗಳನ್ನು, ಅಂಬೇಡ್ಕರ್ ಅವರ ವಿಚಾರಗಳನ್ನು ಸರಳವಾಗಿ ಬೋಧಿಸುವ ಪಠ್ಯಗಳು ರೂಪುಗೊಳ್ಳಬೇಕು. ಹಿಂಸೆಯನ್ನು ಪ್ರತಿಪಾದಿಸುವ, ಹಿಂಸೆಯನ್ನು ವೈಭವೀಕರಿಸುವ ಪಠ್ಯಗಳನ್ನು ಕೈಬಿಟ್ಟು, ಸಹಬಾಳ್ವೆ, ಸಾಮರಸ್ಯ ಮೂಡಿಸುವ ಪಠ್ಯಗಳಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ.
ಜೈನ್ ವಿವಿಯಲ್ಲಿ ಆ ವಿಕೃತ ನಾಟಕ ಪ್ರದರ್ಶನ ಮಾಡಿದಂತ ಮನಸ್ಥಿತಿಯ ವಿದ್ಯಾರ್ಥಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗಿಯೇ ಇದೆ. ಕಾನೂನಿನ ಭಯದಿಂದಲೋ, ಅಟ್ರಾಸಿಟಿ ಕಾಯ್ದೆಯ ಆತಂಕದಿಂದಲೋ ಅವರು ಮಗುಮ್ಮಾಗಿದ್ದಾರಷ್ಟೇ. ಇಂದಿಗೂ, ಈ ಕ್ಷಣಕ್ಕೂ ಅದೆಷ್ಟೋ ಖಾಸಗಿ ಸಮಾರಂಭಗಳ ಸ್ಟಾಂಡ್ ಅಪ್ ಕಮೆಡಿಯನ್ಗಳಲ್ಲಿ ಅಂಬೇಡ್ಕರ್ ಮತ್ತು ಈ ದೇಶದ ದಲಿತ ಸಮುದಾಯ ಗೇಲಿಯ ಪ್ರಮುಖ ವಸ್ತುವಾಗಿ ಉಳಿದಿವೆ. ಇದೇ ವಾಸ್ತವ ಮತ್ತು ಇದೇ ಈ ದೇಶದ ನಿಜವಾದ ಆತ್ಮ!
ನಟ ಚೇತನ್ ಹೇಳಿಕೆ ಮತ್ತು…
ನಿನ್ನೆ ನಟ ಚೇತನ್ ಅವರು, ʻಈ ದೇಶದ ಪ್ರಧಾನಿ ಸೇರಿದಂತೆ ರಾಮ / ಮಹಮ್ಮದ್ / ಬಸವ / ಅಂಬೇಡ್ಕರ್ ದಲಿತರ ವಿರುದ್ಧದ ಹಾಸ್ಯವನ್ನು ಅಪರಾಧ ಎಂದು ಪರಿಗಣಿಸುವುದು ಪ್ರಜಾಪ್ರಭುತ್ವವಲ್ಲʼ ಎಂದು ಹೇಳಿಕೆ ಕೊಟ್ಟುಬಿಟ್ಟರು. (ಇಂದು ಆ ಹೇಳಿಕೆಯನ್ನು ಹಿಂಪಡೆದಿದ್ದಾರೆ) ಹಾಸ್ಯ ಮತ್ತು ಅಪಮಾನದ ವ್ಯತ್ಯಾಸವನ್ನು ಚೇತನ್ ಅರಿತು ಮಾತನಾಡಬೇಕಿತ್ತು. ಆದರೆ, ಅವರ ಹೇಳಿಕೆಯು ಒಂದು ಎಚ್ಚರಿಕೆಯನ್ನು ದಾಟಿಸಿದೆ. ಅದೇನೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಅಳಿವಿನ ಆತಂಕ. ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಅನಂತಕುಮಾರ್ ಹೆಗಡೆ, ಜಗದೀಶ್ ಕಾರಂತ, ಕಲ್ಲಡ್ಕ ಪ್ರಭಾಕರ ಭಟ್ಟ ಥರದ ಕಿಡಿಗೇಡಿ ಭಾಷಣಕೋರರ ಮಾತುಗಳಿಂದ ಪ್ರಚೋದನೆಗೊಳ್ಳುವ ಶೂದ್ರ ಮತ್ತು ದಲಿತ ಸಮುದಾಯದ ಯುವಕರು ನಿತ್ಯವೂ ಹೀಗೇ ಅಂಬೇಡ್ಕರ್ ವಿರುದ್ಧ, ದೇಶದ ಶೋಷಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಕಿಡಿಕಾರುತ್ತಾ, ವಿಕೃತವಾಗಿ ಲೇವಡಿ ಮಾಡುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದನ್ನು ಖಂಡಿಸುತ್ತಾ ನಾವು ಬೀದಿ ಹೋರಾಟ ಮಾಡಿ, ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. ಇದು ನಿತ್ಯವೂ ಆಗುತ್ತಿರುತ್ತದೆ. ಇದನ್ನು ಗಮನಿಸುವ ಯಾವುದೋ ಒಂದು ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿಬಿಟ್ಟರೆ, ಈ ದೇಶದ ಪ್ರಜ್ಞಾವಂತರ, ಬುದ್ದಿಜೀವಿಗಳ ಮಾತುಗಳಿಗೆ ಸೆನ್ಸಾರ್ ಬೀಳುವುದಿಲ್ಲವೆ? ಪ್ರೊ.ಭಗವಾನ್ ಥರದವರ ಮಾತುಗಳಿಂದ, ಬರಹಗಳಿಂದ ಪ್ರಚೋದನೆಗೊಂಡು ರಾಮನ ವಿರುದ್ಧವೋ, ಕೃಷ್ಣನ ವಿರುದ್ಧವೋ ಸಿಡಿದೆದ್ದು ಹೇಳಿಕೆ ಕೊಡುವ ಶೂದ್ರ ಹುಡುಗರು ಜೈಲು ಸೇರುವುದಿಲ್ಲವೇ?
ಅಭಿವ್ಯಕ್ತಿ ಸ್ವಾತಂತ್ರ್ಯದಿಂದಲೇ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತಿರುತ್ತದೆ. ಅದರ ನಡುವೆಯೂ ಹಾಸ್ಯ ಬೇರೆ, ಅಪಮಾನ ಮಾಡುವುದು ಬೇರೆ ಎಂಬ ಸ್ಪಷ್ಟತೆಯೂ ಇರಬೇಕಾಗುತ್ತದೆ. ಈ ಒಂದು ಹೇಳಿಕೆಗಾಗಿ, ಚೇತನ್ ಅವರು ಎಡವಟ್ಟಿನ ಹೇಳಿಕೆ ಕೊಡಲಿ ಎಂದೇ ಕಾಯುತ್ತ, ಅವರ ಮೇಲೆ ಮುಗಿಬಿದ್ದಿರುವ ಅದೆಷ್ಟೋ ಜನರ ಒಳಗೆ ಅಂಬೇಡ್ಕರ್ ಇಲ್ಲವೇಇಲ್ಲ! ಚೇತನ್ ವಿರುದ್ಧದ ಅವರ ದ್ವೇಷಕ್ಕೆ ಮೂಲಕಾರಣ; ಚೇತನ್ ಗಾಂಧಿಯನ್ನು ಟೀಕಿಸುತ್ತಾರೆಂದು, ಚೇತನ್ ಕಾಂಗ್ರೆಸ್ ಟೀಕಿಸುತ್ತಾರೆಂದು, ಚೇತನ್ ಕಮ್ಯುನಿಷ್ಟರನ್ನು ಟೀಕಿಸುತ್ತಾರೆಂದು! ಒಟ್ಟಿನಲ್ಲಿ ಈ ನೆಲದ ಸಾಫ್ಟ್, ಹಾರ್ಡ್ಕೋರ್ ಮನುವಾದಿಗಳನ್ನು ಚೇತನ್ ಟೀಕಿಸಿ, ಮನನೋಯಿಸಿದ್ದಾರೆಂಬ ಒಂದೇ ಒಂದು ಕಾರಣಕ್ಕೆ ಮುಗಿಬಿದ್ದಿದ್ದಾರೆ. ಉಳಿದವರು ಬಹಳ ನೋವಿನಿಂದ, ಚೇತನ್ ಮೇಲಿನ ಪ್ರೀತಿಯಿಂದ, ʼಈ ಹೇಳಿಕೆ ತಪ್ಪುʼ ಎಂಬ ಕಕ್ಕುಲಾತಿಯಿಂದ ಮಾತನಾಡುತ್ತಿದ್ದಾರೆ.
ಜೈನ್ ವಿವಿಯ ಅರಿವುಗೇಡಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮತ್ತು ಬುದ್ಧನ ಅರಿವನ್ನು ಮೂಡಿಸು ಪ್ರಯತ್ನವಾಗಬೇಕಿದೆ. ಅವರಿಗೆ ಶಿಕ್ಷೆಗಿಂತಲೂ ಪ್ರಾಥಮಿಕ ಶಿಕ್ಷಣದ ಅಗತ್ಯವಿದೆ. ಶಿಕ್ಷೆಯಿಂದ ಈ ಜಗತ್ತಲ್ಲಿ ಯಾವುದೂ ಬದಲಾವಣೆಯಾಗಿಲ್ಲ. ಜೀಸಸ್ ಕ್ರೈಸ್ಟ್ ಹೇಳುವಂತೆ ನಮ್ಮ ಕರುಣೆ ಯಾವಾಗಲೂ ಪಾಪಿಗಳ ಮೇಲಿರಬೇಕು!
-ವಿ.ಆರ್.ಕಾರ್ಪೆಂಟರ್
ಪ್ರಧಾನ ಸಂಪಾದಕ