ನಿನ್ನೆಯಷ್ಟೇ ಟರ್ಕಿ ದೇಶದ ಆಗ್ನೇಯ ಭಾಗದ ಸಿರಿಯಾ ಸಮೀಪದ ಉತ್ತರ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ 2300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ! ಇದು ನಿಜಕ್ಕೂ ನೋವಿನ ಸಂಗತಿ. ಭೂಕಂಪದಿಂದ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಅವುಗಳ ಅವಶೇಷಗಳಡಿ ಬದುಕಿದ್ದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಎಷ್ಟೋ ಜನರ ಜೀವಗಳನ್ನು ಬಲಿ ಪಡೆದು, ಎಷ್ಟೋ ಕುಟುಂಬಗಳನ್ನು ಮೂರಾಬಟ್ಟೆ ಮಾಡಿರುವ ಭೂಕಂಪ ತನ್ನ ಅಟ್ಟಹಾಸವನ್ನು ತೋರಿಸುತ್ತಿರುವುದು ಇದೇನು ಮೊದಲಲ್ಲ.

ಈ ಹಿಂದೆ ಅಂದರೆ, 1952ರಲ್ಲಿ ರಷ್ಯಾದ ಕಮ್ ಚಟ್ಕಾ ಪರ್ಯಾಯ ದ್ವೀಪದಲ್ಲಿ 9.0 ತೀರ್ವತೆಯ ಭೂಕಂಪ ಸಂಭವಿಸಿ 2000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಸಮುದ್ರದಡಿಯಲ್ಲಿ ಭೂಮಿ ಕಂಪಿಸಿದ ಕಾರಣ ದೊಡ್ಡ ಮಟ್ಟದ ಸುನಾಮಿಯು ಎದ್ದು, ಅದರ ರಕ್ಕಸ ಅಲೆಗಳು ಪೆರು, ಚಿಲಿ, ನ್ಯೂಜಿಲ್ಯಾಂಡ್ ವರೆಗೂ ತಲುಪಿ ಅಪಾರ ಹಾನಿಯನ್ನು ಉಂಟು ಮಾಡಿದ್ದವು. ಮೇ 1960 ರಲ್ಲಿ ಚಿಲಿಯಲ್ಲಿ ಸಂಭವಿಸಿದ ಭೂಕಂಪ ದುರಂತದಿಂದ ಸುಮಾರು 6000 ಜನರು ಸಾವನ್ನಪ್ಪಿದ್ದರು. ಆಗಿನ ಭೂಕಂಪದ ತೀವ್ರತೆ 9.4 ರಿಂದ 9.6 ರವರೆಗಿದ್ದು ಭೂಮಿ ಸುಮಾರು 10 ನಿಮಿಷಗಳ ಕಾಲ ನಡುಗಿತ್ತು. 1964ರಲ್ಲಿ ಅಲಾಸ್ಕಾದಲ್ಲಿ ಗುಡ್‌ಫ್ರೈಡೆ ದಿನದಂದೇ ಈ ದುರಂತ ಸಂಭವಿಸಿತ್ತು. ರಿಕ್ಟರ್‌ ಮಾಪಕದಲ್ಲಿ 9.2 ತೀವ್ರತೆಯಲ್ಲಿ ಭೂಮಿ 5 ನಿಮಿಷಗಳ ಕಾಲ ಕಂಪಿಸಿತ್ತು. ಇದು ಉತ್ತರ ಅಮೆರಿಕದಲ್ಲಿ ಹಿಂದೆಂದೂ ದಾಖಲಾಗದ ಪ್ರಬಲ ಭೂಕಂಪವಾಗಿತ್ತು. ಕಂಪನಕ್ಕೆ 9 ಮಂದಿ ಬಲಿಯಾದರೆ, ನಂತರದಲ್ಲಿ ಎದ್ದ ಸುನಾಮಿಗೆ 100 ಮಂದಿ ಅಸುನೀಗಿದ್ದರು.

ಗುಜರಾತ್‌ನ ಭುಜ್‌ನಲ್ಲಿ ಜನವರಿ 26, 2001ರಲ್ಲಿ ಸಂಭವಿಸಿದ ಭೂಕಂಪ ಎರಡು ಶತಮಾನಗಳಲ್ಲಿ ಭಾರತ ಕಂಡ 3ನೇ ಅತಿ ಪ್ರಬಲ ಭೂಕಂಪವಾಗಿದೆ. ಈ ದುರಂತವು 20 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದಲ್ಲದೇ, ಸಾವಿರಾರು ಮನೆಗಳನ್ನು ನಾಶ ಮಾಡಿತು. ಲಕ್ಷಾಂತರ ಮಂದಿಯನ್ನು ನಿರ್ಗತಿಕರನ್ನಾಗಿ ಮಾಡಿತು. ಇಂಡೋನೇಷ್ಯದ ಸುಮಾತ್ರದಲ್ಲಿ ಭೂಕಂಪ ಮತ್ತು ಸುನಾಮಿ, 2004 ರಲ್ಲಿ ಸಂಭವಿಸಿ ಹಿಂದೆಂದೂ ಕಂಡಿರದಂಥ ವಿನಾಶಕಾರಿ ನೈಸರ್ಗಿಕ ಪ್ರಕೋಪವನ್ನು ಉಂಟುಮಾಡಿತ್ತು. ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ 9.1 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದಲ್ಲದೆ, 100 ಅಡಿ ಎತ್ತರಕ್ಕೆ ಎದ್ದ ಸುನಾಮಿ ಅಲೆಗಳು ಥಾಯ್ಲೆಂಡ್‌, ಶ್ರೀಲಂಕಾ, ಭಾರತ ಮತ್ತು ಇಂಡೋನೇಷ್ಯಾ ಸೇರಿದಂತೆ 14 ದೇಶಗಳ 2.27 ಲಕ್ಷ ಮಂದಿಯನ್ನು ಬಲಿಪಡೆದುಕೊಂಡವು. ಭಾರತದಲ್ಲೇ 42 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ನಮ್ಮ ನೆರೆ ರಾಷ್ಟ್ರ ನೇಪಾಳವು ಕೂಡ ಭೂಕಂಪನದಿಂದ ಹೊರತಾಗಿಲ್ಲ. ನೇಪಾಳದಲ್ಲಿ 1934ರ ಬಳಿಕ ಮೊದಲ ಬಾರಿಗೆ 2015ರಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿತು. ಇದರಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಹಾಗೂ ಅನೇಕ ಸಾವಿರ ಮಂದಿ ನಿರ್ಗತಿಕರಾದರು. ಹೀಗೆ ಭೂಕಂಪ, ಸುನಾಮಿ ತಮ್ಮ ಶೌರ್ಯ ಪರಾಕ್ರಮವನ್ನು ತೋರಿಸುತ್ತಲೇ ಇವೆ.

ಭೂಕಂಪ ಏಕೆ /ಹೇಗೆ ಸಂಭವಿಸುತ್ತದೆ?
ಭೂಮಿಯ ಗರ್ಭದಲ್ಲಿ ಸುಮಾರು 5000ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದೆ. ಕಲ್ಲನ್ನು ಕೂಡ ಕರಗಿಸಬಲ್ಲ ಈ ಉಷ್ಣತೆ ಮೇಲ್ಮುಖವಾಗಿ ಚಲಿಸಿ, ಜ್ವಲಾಮುಖಿಯ ಮುಖಾಂತರ ಹೊರಬರುತ್ತದೆ. ಸಾಕಷ್ಟು ಜ್ವಾಲಾಮುಖಿಗಳು, ಅಗ್ನಿ ಪರ್ವತಗಳು ಸಾಗರ-ಸಮುದ್ರದ ತಳದಲ್ಲಿವೆ. ಭೂಗರ್ಭದಲ್ಲಿನ ಉಷ್ಣತೆ ಬರುವಾಗ ಭೂಮಿಯೂ ಕಂಪಿಸಿ ಮೇಲ್ಪದರ ಬಿರುಕು ಬಿಡಲು ಶುರು ಮಾಡುತ್ತದೆ. ಅದುವೇ ಭೂಕಂಪ. ಭೂಮಿಯ ಮೇಲ್ಮೈ ನಡುಗಿದಾಗ ಸಹಜವಾಗಿ ಕಟ್ಟಡಗಳು ನೆಲಕಚ್ಚುತ್ತವೆ. ಅಪಾರ ಸಾವು ನೋವುಗಳು ಸಂಭವಿಸುತ್ತವೆ. ಜನರ ಜೀವನ ಕ್ರಮ ಏರು ಪೇರಾಗುತ್ತದೆ. ಬಹುತೇಕ ಭೂಕಂಪಗಳು ಸಾಗರ ಸಮುದ್ರದ ಪಕ್ಕದಲ್ಲಿರುವ ಸ್ಥಳಗಳಿಗೆ ಹಾನಿ ಮಾಡುತ್ತವೆ. ಕಾರಣ ಭೂಕಂಪ ಸಾಮಾನ್ಯವಾಗಿ ಸಂಭವಿಸುವುದು ಸಮುದ್ರದಾಳದಲ್ಲಿ! ಆದ್ದರಿಂದಲೇ ಕಡಲ ತೀರದ ಪ್ರದೇಶಗಳು ಬೇಗ ಬಲಿಯಾಗುತ್ತವೆ. ಭೂಕಂಪಗಳನ್ನು ಭೂಕಂಪಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ, ರಿಕ್ಟರ್ ಮಾಪಕ ಅಥವಾ (ಸೈಸ್ಮಗ್ರಾಫ್) ಎಂದೂ ಕರೆಯುತ್ತಾರೆ.
ಮನುಷ್ಯ ಎಷ್ಟೇ ಆಧುನಿಕತೆ ಬೆಳೆಸಿಕೊಂಡರು ಪ್ರಕೃತಿ ಯ ಮುಂದೆ ಅವನೊಬ್ಬ ಅಣು! ತನ್ನ ಜ್ಞಾನ,ವಿಜ್ಞಾನ – ತಂತ್ರಜ್ಞಾನ, ಡಿಜಿಟಲೀಕರಣ ಮಾಡಿ ಎಷ್ಟೇ ಮುಂದುವರೆದರೂ ಪ್ರಕೃತಿಯ ಮುಂದೆ ಅವನು ಅಸಹಾಯಕ! ಅತೀವೃಷ್ಟಿ, ಅನಾವೃಷ್ಟಿ, ಬರಗಾಲ, ಬಿಸಿಲು, ಮಳೆ, ಚಳಿ, ಭೂಕಂಪ, ಪ್ರವಾಹ ಇನ್ನಿತರ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಆಗದ ಮನುಷ್ಯ ಅವುಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳಲೇಬೇಕು. ಕೆಲವೊಮ್ಮೆ ಅವನ ಅತಿಯಾದ ದುರಾಸೆಯೂ ಕೂಡ ತನ್ನ ವಿನಾಶಕ್ಕೆ ಕಾರಣವಾಗುತ್ತದೆ. ಜಾಗತಿಕವಾಗಿ ಹಸಿವು, ಬಡತನ, ನಿರುದ್ಯೋಗ, ವಲಸೆ, ಅನಕ್ಷರತೆಮುಂತಾದ ಕಾರಣಗಳು ಒಂದು ಕಡೆಯಾದರೆ ಈ ಭೂಕಂಪ, ಸುನಾಮಿ, ಪ್ರವಾಹಗಳಂತ ನೈಸರ್ಗಿಕ ವಿಕೋಪಗಳು ಕೂಡ ಮನುಷ್ಯನನ್ನು ಜರ್ಜರಿತನನ್ನಾಗಿ ಮಾಡುತ್ತಿವೆ. ಟರ್ಕಿಗೆ ಎಲ್ಲಾ ವಿಧದಲ್ಲೂ ಸಹಾಯ ಮಾಡುತ್ತೇವೆ ಎಂಬ ನಮ್ಮ ಭಾರತ ದೇಶದ ನಿಲುವು ಮೆಚ್ಚುತಕ್ಕದ್ದು.ಅದರಂತೆ ಈಗಾಗಲೇ ರಕ್ಷಣಾ ಪಡೆ ಹಾಗೂ ವೈದ್ಯಕೀಯ ಪರಿಕರಗಳನ್ನು ಅಲ್ಲಿಗೆ ಕಳುಹಿಸಿರುವುದು ಕೂಡ ಶ್ಲಾಘನೀಯ. ಆಪತ್ತಿನಲ್ಲಿ ರುವವರಿಗೆ ಸಹಾಯ ಹಸ್ತ ನೀಡುವ ನಮ್ಮ ದೇಶದ ಸಂಸ್ಕಾರ ಇತರರಿಗೂ ಮಾದರಿಯ ನಡೆ.

ಕಾಡನ್ನು ಹೆಚ್ಚು ಹೆಚ್ಚು ಬೆಳೆಸುವುದು, ವಾಯುಮಾಲಿನ್ಯ, ಜಲಮಾಲಿನ್ಯ ತಡೆಯುವುದು, ಸಮುದ್ರ ಸಾಗರಗಳ ಮಟ್ಟವನ್ನು ತಗ್ಗಿಸುವುದು, ಓಝೋನ್ ಪದರದ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಮುಂತಾದವು ನಮ್ಮೆಲ್ಲರ ಜವಾಬ್ದಾರಿಯಾಗಿವೆ. ಪ್ರಕೃತಿಯ ಮೇಲಿನ ನಮ್ಮ ಆಕ್ರಮಣ ಕೂಡ ನಮ್ಮ ಅವಸನಕ್ಕೆ ಕಾರಣವಾಗುತ್ತೆ. ಜಾಗತಿಕವಾಗಿ ಶಾಂತಿ ಸುವ್ಯವಸ್ಥೆ ಬಯಸುವ ಎಲ್ಲಾ ರಾಷ್ಟ್ರಗಳು ಕೂಡಿ ಪ್ರಕೃತಿ ಮೇಲಾಗುವ ದೌರ್ಜನ್ಯವನ್ನು ಪರಿಹರಿಸುವ ನಿಟ್ಟಿನಲ್ಲಿ ಚಿಂತಿಸಿದರೆ ಒಂದಷ್ಟು ಪ್ರಾಕೃತಿಕ ವಿಕೋಪಗಳಿಂದ ದೂರವೀರಬಹುದು ಅಥವಾ ಪ್ರಕೃತಿ ಮಾತೆಯ ಮುನಿಸಿನಿಂದ ಪಾರಾಗಬಹುದು.

ರಂಗಸ್ವಾಮಿ ದೇವರಬೆಟ್ಟ

Leave a Reply

Your email address will not be published. Required fields are marked *