ಸುಗತ ಶ್ರೀನಿವಾಸರಾಜು ಅವರು ಬರೆದಿರುವ ರಾಹುಲ್ ಗಾಂಧಿಯವರ ಕುರಿತ ಪುಸ್ತಕ Strange Burden’s ಕುರಿತು ಇಂದು (12ನೇ ಸೆಪ್ಟೆಂಬರ್, ಮಂಗಳವಾರ) ಸಂಜೆ 6 ಗಂಟೆಗೆ ಕೊಂಡಜ್ಜಿ ಬಸಪ್ಪ ಹಾಲ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ , (ರಾಡಿಸನ್ ಬ್ಲೂ ಏಟ್ರಿಯಾ ಎದುರು)ನಲ್ಲಿ ಬಿಡುಗಡೆಯಾಗುತ್ತಿದೆ. ಈ ನೆಪದಲ್ಲಿ ಕೆ.ಪಿ.ಸಿ.ಸಿ. ಸಾಮಾಜಿಕ ನ್ಯಾಯ ವಿಭಾಗದ ಮುಖ್ಯಸ್ಥರು, ಖ್ಯಾತ ವಕೀಲರು ಮತ್ತು ಲೇಖಕರು ಆದ ಡಾ. ಸಿ.ಎಸ್.ದ್ವಾರಕಾನಾಥ್ ಅವರು ಕೃತಿಯ ಕುರಿತು ಬರೆದ ಟಿಪ್ಪಣಿ ಇಲ್ಲಿದೆ.
ಈ ದೇಶದ ಮುಂಚೂಣಿ ನಾಯಕರೆನಿಸಿಕೊಂಡ ರಾಹುಲ್ ಗಾಂಧಿ ಯವರ ಕುರಿತು ದೇಶವಿದೇಶಗಳಲ್ಲಿ ಅನೇಕ ರೀತಿಯ ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳೂ ಇವೆ, ಕೆಲವರು ರಾಹುಲ್ ರವರಲ್ಲಿ ದ್ವಂದ್ವಗಳನ್ನು, ವೈರುದ್ಯಗಳನ್ನು, ಅಪಕ್ವತೆಯನ್ನು ಕಂಡರೆ ಮತ್ತೆ ಕೆಲವರು ಇವರಲ್ಲಿ ಪಕ್ವತೆಯನ್ನು, ವೈಚಾರಿಕತೆಯನ್ನು, ಮಾನವ ಕಾಳಜಿಯನ್ನು ಕಾಣುತ್ತಾರೆ. ಒಬ್ಬ ಮನುಷ್ಯ ಹೀಗೆ ಒಟ್ಟಾರೆ ಕಪ್ಪಾಗಿ ಅಥವಾ ಬಿಳುಪಾಗಿ ಇರಲಾರ. ಆ ಕಪ್ಪು ಬಿಳುಪುಗಳ ನಡುವೆ ದಕ್ಕಬಹುದಾದ ರಾಹುಲ್ ಗಾಂಧಿಯವರನ್ನು ಇಂಗ್ಲಿಷ್ ಮತ್ತು ಕನ್ನಡದ ಖ್ಯಾತ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಆಳವಾಗಿ ಗ್ರಹಿಸಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಹುಲ್ ಗಾಂಧಿಯವರ 2004ರಲ್ಲಿನ ರಾಜಕೀಯ ಪ್ರವೇಶದಿಂದ ಹಿಡಿದು 2023ರ “ಭಾರತ್ ಜೋಡೋ” ಯಾತ್ರೆವರೆಗಿನ ಸುಮಾರು ಹತ್ತೊಂಬತ್ತು ವರ್ಷಗಳ ದೀರ್ಘ ಪಯಣವನ್ನು ತಮ್ಮ”strange burdens” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದನ್ನು political and predicaments of Rahul Gandhi” ಎಂದು ಕರೆದಿರುವುದು ಸಮರ್ಪಕವಾಗಿದೆ.
ಈ ಪುಸ್ತಕವನ್ನು ಓದಿದಂತೆಲ್ಲ ನಮ್ಮೊಳಗೆ ರಾಹುಲ್ ಗಾಂದಿಯವರ ಕುರಿತು ಈಗಾಗಲೇ ಮೂಡಿರುವ ಯಾವುದೇ ಅಭಿಮಾನ ಅಥವಾ ದುರಭಿಮಾನಗಳೆಂಬ ಪೂರ್ವಾಗ್ರಹಗಳಿಂದ ಮುಕ್ತಗೊಳಿಸಿ ಒಂದು ರೀತಿಯ ವಾಸ್ತವ ವಿಶ್ಲೇಷಣೆಗೆ ಒಳಗಾಗುವಂತೆ ಸುಗತ ರವರು ನಮ್ಮನ್ನು ತೊಡಗಿಸುತ್ತಾರೆ.
ನೆಹರು – ಇಂದಿರಾ ಕುಟುಂಬದ ಮುದ್ದಿನ ಕುಡಿ ರಾಹುಲ್ ಹುಟ್ಟಿನಿಂದಲೇ ಎಲ್ಲಾ ರೀತಿಯ privilege (ಸವಲತ್ತು) ಗಳನ್ನು ಪಡೆದು ಬಂದವರು. ಇಂತವರಿಗೆ Burden’s(ಹೊರೆ) ಗಳು ಹೇಗೆ ಕಾಡಲು ಸಾದ್ಯ? ಹಾಗಾದರೆ ರಾಹುಲ್ ಗೆ ಆದ ಈ strange burdens (ಅಪರಿಚಿತ ಹೊರೆ) ಗಳಾದರೂ ಏನು? ಸುಮಾರು ಮುನ್ನೂರು ಪುಟಗಳ ಈ ಪುಸ್ತಕದಲ್ಲಿ ಸುಗತ ಶೀನಿವಾಸರಾಜು ಅವರು ವಿಶ್ಲೇಷಣಾತ್ಮಕವಾಗಿ ರಾಹುಲ್ ಗಾಂಧಿ ಅವರನ್ನು ಅನಾವರಣ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಮಾತು, ಸರಳತೆ, ದ್ವಂದ್ವ, ರಾಜಕಾರಣ, ಆದ್ಯಾತ್ಮ, ಮಾನವೀಯತೆ, ಭಕ್ತಿಯ ನಿಲುವು, ಧಾರ್ಮಿಕ ಆಚರಣೆ, ಜಾತ್ಯಾತೀತತೆ, ಜನಿವಾರ ಧಾರಣೆ, ವೈಯಕ್ತಿಕ ನೋವು, ನಿಷ್ಕಲ್ಮಷ ಪ್ರೀತಿ, ಕುಟುಂಬದ ಭಾರ, ತತ್ವ ಸಿದ್ದಾಂತದ ಆಶಯ, ಅನುಭಾವ, ಆತನ unscripted ಹೇಳಿಕೆಗಳು, impulsive ನಡುವಳಿಕೆಗಳು, ಎಲ್ಲವನ್ನೂ ತಣ್ಣಗೆ ವಿಶ್ಲೇಷಿಸುತ್ತಾ ನಮ್ಮ ಮುಂದಿಡುತ್ತಾರೆ. ಎಲ್ಲವನ್ನೂ ನಾನೇ ಹೇಳಿದರೆ ಪುಸ್ತಕ ಓದುವವರ ಆಸಕ್ತಿಗೆ ಧಕ್ಕೆಯಾಗುತ್ತದೆ ಆದ್ದರಿಂದ ಇಲ್ಲಿಗೆ ನಿಲ್ಲಿಸುತ್ತೇನೆ.
ಸುಗತ ಅವರ ಈ ಪುಸ್ತಕ ಓದಿದಂತೆಲ್ಲ ನಮಗೆ ಒಬ್ಬ ಲಂಕೇಶ್ ಅಥವಾ ವಿನೋದ್ ಮೆಹ್ತಾ ರವರು ನಮ್ಮ ಮನಸ್ಸಿಗೆ ಬಂದು ಹೋಗುತ್ತಾರೆ! ಕನ್ನಡದಲ್ಲಿ ಲಂಕೇಶರು ಈ ರೀತಿಯ ವಿಶ್ಲೇಷಣೆ ಮಾಡಬಹುದಾದರೆ, ಇಂಗ್ಲಿಷ್ ನಲ್ಲಿ ವಿನೋದ್ ಮೆಹ್ತಾ ಮಾತ್ರ ಹೀಗೆ ಬರೆಯಬಲ್ಲರೇನೋ ಎನಿಸುತ್ತದೆ. ಸುಗತರವರಿಗೆ ಮಾತ್ರ ಈ ಸುಂದರ ಬಾಷೆ ಮತ್ತು ಸ್ಪಷ್ಟ ವ್ಯಕ್ತಿಚಿತ್ರಣ ದಕ್ಕಿದೆ. ಸುಗತ ಶ್ರೀನಿವಾಸರಾಜು ರವರು ಈ ಅಮೂಲ್ಯ ಪುಸ್ತಕಕ್ಕಾಗಿ ಅಭಿನಂದನಾರ್ಹರು. ಸುಗತರವರು ದೇವೇಗೌಡರ ಬಗ್ಗೆ ಬರೆದ ಪುಸ್ತಕ Furrows in a Field ಈಗಾಗಲೇ ಜಗತ್ತಿನಾದ್ಯಂತ ಹೆಸರು ಮಾಡಿದೆ.
ಈ ದೇಶ ಮತ್ತು ಈ ದೇಶದ ರಾಜಕಾರಣದ ಬಗ್ಗೆ ಆಸಕ್ತಿಯುಳ್ಳವರು, ರಾಜಕಾರಣಿಗಳು, ರಾಜಕೀಯ ವಿಶ್ಲೇಷಕರು ಪಕ್ಷಬೇದ ಬದಿಗಿಟ್ಟು ಈ ಪುಸ್ತಕ ಓದಬೇಕು, ಅದರಲ್ಲೂ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ತಮ್ಮ ನಾಯಕನನ್ನು ಕನಿಷ್ಟ ಅರ್ಥಮಾಡಿಕೊಳ್ಳಲಾದರೂ ಈ ಪುಸ್ತಕವನ್ನು ಓದಲೇಬೇಕು.
– ಸಿ.ಎಸ್.ದ್ವಾರಕಾನಾಥ್