ಹಬ್ಬದ ಸಂಭ್ರಮವನ್ನು ಮಸುಕಾಗಿಸುವ ಪರಿಸರ ಹಾನಿ ಹಾಗೂ ಬೆವರಂಗಡಿಯ ಬದುಕು

ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎರಡು ಅಂಶಗಳು ಸಾರ್ವಜನಿಕ ಚರ್ಚೆಗೊಳಗಾಗುತ್ತವೆ. ಮೊದಲನೆಯದು ಜಾತಿ-ಧರ್ಮಗಳ ಗಡಿಗಳನ್ನು ದಾಟಿ ಎಲ್ಲರೂ ದೀಪ ಬೆಳಗುವ ಮೂಲಕ ಹಬ್ಬವನ್ನು ಆಚರಿಸುವ ಒಂದು ಸಾಂಸ್ಕೃತಿಕ ವಿದ್ಯಮಾನ. ಎರಡನೆಯದು ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಂಡವರ, ಪಟಾಕಿ ತಯಾರಿಕೆಯಲ್ಲಿ ಪ್ರಾಣ ಕಳೆದುಕೊಂಡವರ ಹೃದಯವಿದ್ರಾವಕ ಸುದ್ದಿಗಳು. ಕರ್ನಾಟಕ ಸರ್ಕಾರ ಹಸಿರು ಪಟಾಕಿಯ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ, ಪಕ್ಕದ ರಾಜ್ಯದ ಹೊಸೂರಿಗೆ ಹೋಗಿ ಪಟಾಕಿಯನ್ನು ಖರೀದಿಸುವ ಮಧ್ಯಮ ವರ್ಗದ ಅಡಂಬರದ ನಡುವೆಯೇ ಈ ಬಾರಿಯೂ ದೀಪಾವಳಿ ಹಲವು ಅವಘಡಗಳಿಗೆ ಸಾಕ್ಷಿಯಾಗಿದೆ. ಹಬ್ಬದ ದಿನ ನಡೆಯುವ ಅವಘಡಗಳು ಕಡಿಮೆಯಾಗಿದ್ದರೆ ಸರ್ಕಾರ ಸಮಾಧಾನದ ನಿಟ್ಟುಸಿರು ಬಿಡುತ್ತದೆ. ಆದರೆ ಪಟಾಕಿ ತಯಾರಿಕೆಯ ಬೆವರಂಗಡಿಗಳಲ್ಲಿ ಜೀವ ಕಳೆದುಕೊಳ್ಳುವ ಶ್ರಮಿಕರು ಅನಾಥರಾಗಿಯೇ ವಿಸ್ಮೃತಿಗೆ ಜಾರಿಬಿಡುತ್ತಾರೆ.

ಈ ವರ್ಷವೂ ಪಟಾಕಿಗಳಿಂದ ಆಗಿರುವ ಹಾನಿಗೇನೂ ಕಡಿಮೆಯಿಲ್ಲ. ಚೆನ್ನೈ ನಗರದಲ್ಲಿ 208 ಸುಟ್ಟ ಗಾಯಗಳ ಪ್ರಕರಣಗಳು ದಾಖಲಾಗಿವೆ. ತುರ್ತು ಸನ್ನಿವೇಶದಲ್ಲಿ ಒದಗಿಸುವ ಆಂಬುಲೆನ್ಸ್‌ ಸೇವೆಗಳಿಗೆ ದೀಪಾವಳಿಯ ದಿನಗಳಲ್ಲಿ ಶೇ 45ರಷ್ಟು ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ದಾಖಲೆಗಳು ತಿಳಿಸುತ್ತವೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋಪಾಲ್‌ಬಾಗ್‌ನ ಪಟಾಕಿ ಮಾರುಕಟ್ಟೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಕನಿಷ್ಠ 12 ಜನರು ಗಾಯಗೊಂಡಿದ್ದು, 9 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.  26 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗಿರುವ 39 ಜನರಿಗೆ ಚಿಕಿತ್ಸೆ ನೀಡಲಾಗಿದೆ. ದೆಹಲಿಯಲ್ಲಿ ಅಗ್ನಿ ದುರಂತದ 208 ಪ್ರಕರಣಗಳು ದಾಖಲಾಗಿದ್ದು, ಇದರ ಪೈಕಿ 22 ಪಟಾಕಿ ಸಿಡಿತದಿಂದಲೇ ಸಂಭವಿಸಿವೆ.

ದೀಪಾವಳಿ ದುರಂತ

ದೆಹಲಿಯ ಸಾದರ್‌ ಬಜಾರ್‌, ಪೂರ್ವ ಕೈಲಾಶ್‌ ಮತ್ತು ತಿಲಕ್‌ನಗರಗಳಲ್ಲಿ ಪಟಾಕಿ ಅವಘಡ ಸಂಭವಿಸಿದೆ. ಈಗಾಗಲೇ ಪರಿಸರ ಮಾಲಿನ್ಯದಿಂದ ಬಾಧಿತವಾಗಿರುವ ದೆಹಲಿ ನಗರದಲ್ಲಿ ಪಟಾಕಿಗಳ ಬಳಕೆಯಿಂದ ವಾತಾವರಣ ಮತ್ತಷ್ಟು ಹದಗೆಟ್ಟಿದ್ದು ವಾಯು ಗುಣಮಟ್ಟ ಸೂಚ್ಯಂಕವು (AQI) 275ರಷ್ಟು ದಾಖಲಾಗಿದೆ. ಸೂಕ್ಷ್ಮ ಕಣ ಮಾಲಿನ್ಯದಿಂದಾಗಿ AQI ಹೆಚ್ಚಾಗುತ್ತದೆ. ಈ ಮಾಲಿನ್ಯ ಹೆಚ್ಚಾಗುವುದರ ಪರಿಣಾಮ ವಯಸ್ಸಾದವರು, ಮಕ್ಕಳು ಮತ್ತು ಉಸಿರಾಟದ ಅಥವಾ ಹೃದಯರಕ್ತನಾಳದ ಸಮಸ್ಯೆಗಳಿರುವವರಂತಹ ಸೂಕ್ಷ್ಮ ಗುಂಪುಗಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ದೀಪಾವಳಿಯ ಪಟಾಕಿ ಸಂಭ್ರಮದಲ್ಲಿ ನಗರಗಳಲ್ಲಿ ಈ ಮಾಲಿನ್ಯ ಹೆಚ್ಚಾಗುವುದು ಸಾಮಾನ್ಯ ಸಂಗತಿಯೂ ಅಗಿದೆ. ಈ ತಾತ್ಕಾಲಿಕ ಅವಘಡಗಳನ್ನೂ ದಾಟಿ ನೋಡುವ ಕ್ಷಮತೆ ಇದ್ದುದೇ ಆದಲ್ಲಿ ನಾವು ಪಟಾಕಿ ತಯಾರಿಕೆಯ ಘಟಕಗಳತ್ತ ಗಮನ ಹರಿಸುವುದು ನಮ್ಮ ಆದ್ಯತೆಯಾಗಬೇಕಿದೆ.

ಬೆವರಂಗಡಿಗಳಲ್ಲಿ ಸವೆಯುವ ಬದುಕು

ಅಕ್ಟೋಬರ್‌ 9 ತಮಿಳುನಾಡಿನ ಅರಿಯಲೂರ್‌ ಜಿಲ್ಲೆಯ ವಿ. ವಿರಗಲೂರ್‌ ಗ್ರಾಮದ ಪಟಾಕಿ ತಯಾರಿಕಾ ಘಟಕದಲ್ಲಿ ಹಠಾತ್‌ ಸ್ಫೋಟ ಸಂಭವಿಸುತ್ತದೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಪೂವರಸನ್‌ ಎಂಬ ಕಾರ್ಮಿಕ ಗಾಬರಿಯಿಂದ ಹೊರಬರುತ್ತಾನೆ. ಆದರೆ ಕ್ಷಣಮಾತ್ರದಲ್ಲಿ ಬೆಂಕಿಯು ಇಡೀ ಘಟಕವನ್ನು ಆವರಿಸಿಕೊಳ್ಳುತ್ತದೆ. ಪರವಾನಗಿ ಪಡೆದಿರುವ ಈ ಘಟಕದ  ಗೋದಾಮಿನಲ್ಲಿದ್ದ ಇತರ ಮೂವರೊಡನೆ ಪೂವರಸನ್‌ ಪಾರಾಗುತ್ತಾನೆ. ಆದರೆ ಇದೇ ಘಟಕದ ಮೊದಲನೆ ಗೋದಾಮಿನಲ್ಲಿ ದುಡಿಯುತ್ತಿದ್ದ ಆತನ ಅತ್ತೆ ಹಾಗೂ ಮಾವ ಬೆಂಕಿಗೆ ಆಹುತಿಯಾಗಿರುವುದು ನಂತರ ತಿಳಿಯುತ್ತದೆ. ಆತನ ಸೋದರ, ಭಾವಮೈದ ಗಂಭೀರ ಗಾಯಗಳೊಂದಿಗೆ ಪಾರಾಗುತ್ತಾರೆ.  ಈ ಬೆಂಕಿ ಅವಘಡದಲ್ಲಿ ಒಟ್ಟು 12 ಕಾರ್ಮಿಕರು ಬಲಿಯಾಗುತ್ತಾರೆ. ಇಂತಹ ಅವಘಡಗಳು-ಸಾವುಗಳು ಪಟಾಕಿ ತಯಾರಿಕೆಯ ಘಟಕಗಳಲ್ಲಿ ನಿರಂತರವಾಗಿ ಸಂಭವಿಸುತ್ತಲೇ ಇರುತ್ತವೆ.

ದೀಪಾವಳಿಗೆ ಪಟಾಕಿ ತಯಾರಿಯಲ್ಲಿ ಮಹಿಳೆಯರು

ತಮಿಳುನಾಡಿನ ವಿರುದನಗರ್‌ ಜಿಲ್ಲೆಯ ಒಣಪ್ರದೇಶ ಶಿವಕಾಶಿ ಹಲವು ದಶಕಗಳಿಂದ ದೇಶದ ಪಟಾಕಿ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ. 20ನೆಯ ಶತಮಾನದ ಆದಿಯಲ್ಲಿ ಶಣ್ಮುಗ ನಾಡರ್‌ ಮತ್ತು ಅಯ್ಯ ನಾಡರ್‌ ಎಂಬ ಸೋದರರು ಬೆಂಕಿಕಡ್ಡಿ ತಯಾರಿಕೆಯ ಬಗ್ಗೆ ಅರಿವು ಸಂಪಾದಿಸಲು ಕೊಲ್ಕತ್ತಾಗೆ ಹೋಗುತ್ತಾರೆ. ಅಲ್ಲಿ ಪಡೆದ ತಿಳುವಳಿಕೆಯಿಂದಲೇ ಈ ಪ್ರದೇಶದಲ್ಲಿ ಎರಡು ಪಟಾಕಿ ಕಾರ್ಖಾನೆಗಳನ್ನು ಸ್ಥಾಪಿಸುತ್ತಾರೆ. ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳೂ ಕ್ಷೀಣಿಸುತ್ತಿದ್ದ ಈ ಪ್ರದೇಶದಲ್ಲಿ ಕ್ರಮೇಣ ಪಟಾಕಿ ಉದ್ಯಮವೇ ಪ್ರಧಾನ ಕೈಗಾರಿಕೆಯಾಗಿ ರೂಪುಗೊಂಡು, ಕೆಲವೇ ದಶಕಗಳಲ್ಲಿ ದೇಶದ ಶೇ. 90ರಷ್ಟು ಪಟಾಕಿ ತಯಾರಿಕೆಗೆ ಇದು ಕೆಂದ್ರವಾಗುತ್ತದೆ. “ತಮಿಳುನಾಡು ಪಟಾಕಿ ಹಾಗೂ ಹುಸಿಮದ್ದು ತಯಾರಕರ ಸಂಘ” (TANFAMA)ದ ಅಂದಾಜಿನ ಪ್ರಕಾರ ಶಿವಕಾಶಿ ಸುತ್ತಮುತ್ತ 1085 ಪಟಾಕಿ ಕಾರ್ಖಾನೆಗಳಿವೆ. ಈ ಬೆವರಂಗಡಿಗಳಲ್ಲಿ ಸುಮಾರು ಎಂಟು ಲಕ್ಷ ಜನರು ದುಡಿಯುತ್ತಿದ್ದಾರೆ.

ಶಿವಕಾಸಿ ರೈಲ್ವೇ ನಿಲ್ದಾಣ

ಕಳೆದ ಹಲವು ವರ್ಷಗಳಲ್ಲಿ ಈ ಉದ್ಯಮವು ಚದುರಿಹೋಗಿದ್ದು ತಮಿಳುನಾಡಿನಾದ್ಯಂತ ಅಕ್ರಮ-ಸಕ್ರಮ ಪಟಾಕಿ ಕಾರ್ಖಾನೆಗಳು ತಲೆಎತ್ತಿವೆ. ಶಿವಕಾಶಿಯಲ್ಲಿ ದುಡಿದು ಪರಿಣತಿ ಪಡೆದಿರುವವರೇ ಇತರೆಡೆ ತಮ್ಮದೇ ಆದ ಸಣ್ಣ ಘಟಕಗಳನ್ನು ಸ್ಥಾಪಿಸುತ್ತಿದ್ದಾರೆ. ಪಟಾಕಿ ತಯಾರಿಕೆಯಲ್ಲಿ ಲಾಭಾಂಶದ ಪ್ರಮಾಣ ತೀರಾ ಹೆಚ್ಚಾಗಿರುವುದರಿಂದ ಇದು ಔದ್ಯಮಿಕವಾಗಿ ಆಕರ್ಷಣೀಯವಾಗಿ ಕಾಣುತ್ತದೆ.  ಹಾಗಾಗಿ ಚಿಲ್ಲರೆ ವ್ಯಾಪಾರದ ಪರವಾನಗಿ ಪಡೆದವರೂ ಸಹ ಪಟಾಕಿ ತಯಾರಿಕೆಯಲ್ಲಿ ತೊಡಗಿರುತ್ತಾರೆ ಎಂದು ಅಲ್ಲಿನ ಉದ್ಯಮಿಗಳೇ ಹೇಳುತ್ತಾರೆ. ಹಬ್ಬದ ಸೀಸನ್‌ಗಳಲ್ಲಿ ಈ ತಯಾರಿಕಾ ಘಟಕಗಳಲ್ಲಿ ದುಡಿಯುವವರ ಪೈಕಿ ಶಿವಕಾಶಿಯಿಂದಲೇ ಹೆಚ್ಚಿನವರಿದ್ದಾರೆ, ದಿನಕ್ಕೆ 8 ರಿಂದ 12 ಗಂಟೆ ದುಡಿಯುತ್ತಾರೆ ಹಾಗೂ ಎರಡರಷ್ಟು ಅಥವಾ ಮೂರುಪಟ್ಟು ಹೆಚ್ಚಿನ ಕೂಲಿಯನ್ನೂ ಪಡೆಯುತ್ತಾರೆ.

ಇಂದು ಇಂತಹ ಅನೇಕ ಘಟಕಗಳು ಸರ್ಕಾರದ ಕಣ್ಗಾವಲಿಗೆ ಗುರಿಯಾಗಿವೆ. ಬಹುಪಾಲು ಘಟಕಗಳು ಸೂಕ್ತ ಮೇಲ್ವಿಚಾರಣೆ ಅಥವಾ ನಿರ್ವಹಣೆ ಇಲ್ಲದೆ ಅಧಿಕೃತ ಪರಿವೀಕ್ಷಣೆ ಬಹುಮಟ್ಟಿಗೆ ಇಲ್ಲದೆ ಇತ್ತೀಚಿನ ದಿನಗಳಲ್ಲಿ ಅವಘಡಗಳೂ ಅನಿಯಂತ್ರಿತವಾಗುತ್ತಿವೆ. 2023ರ ಜೂನ್‌ 1ರಂದು ಪಶ್ಚಿಮ ಸೇಲಂ ಜಿಲ್ಲೆಯಲ್ಲಿನ ಪರವಾನಗಿ ಪಡೆದಿರುವ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟಕ್ಕೆ 9 ಮಂದಿ ಮೃತಪಟ್ಟಿದ್ದರು. ಅಕ್ಟೋಬರ್‌ 17ರಂದು ವಿರುದನಗರ ಜಿಲ್ಲೆಯ ಎರಡು ಘಟಕಗಳಲ್ಲಿ ಸಂಭವಿಸಿದ ಅವಘಡದಲ್ಲಿ 14 ಕಾರ್ಮಿಕರು ಮೃತಪಟ್ಟಿದ್ದರು. ಇವರಲ್ಲಿ ಬಹುಪಾಲು ಮಹಿಳೆಯರೇ ಇದ್ದರು. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ತಮಿಳುನಾಡಿನ ಅರಿಯಲೂರ್‌, ಪುದುಕೊಟ್ಟೈ, ಮಯಿಲಾಡುತುರೈ ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ 19 ಕಾರ್ಮಿಕರು ಮೃತಪಟ್ಟಿದ್ದಾರೆ. 

ಉತ್ಪಾದಕೀಯ ಶಕ್ತಿಗಳ ಸಾವು-ನೋವು

ಪಟಾಕಿ ತಯಾರಿಕೆ ಉದ್ದಿಮೆಯಲ್ಲಿ ಹಲವು ದಶಕಗಳಿಂದ ಇರುವ ಉದ್ಯಮಿಗಳ ಅಭಿಪ್ರಾಯದಲ್ಲಿ ಈ ಅವಘಡಗಳಿಗೆ ಹಲವು ಕಾರಣಗಳಿರುತ್ತವೆ. ರಾಸಾಯನಿಕ ವಸ್ತುಗಳನ್ನು ನಿಗದಿತ ಪ್ರಮಾಣಕ್ಕಿಂತಲೂ ಅಧಿಕವಾಗಿ ದಾಸ್ತಾನು ಮಾಡುವುದು ಒಂದು ಪ್ರಮುಖ ಕಾರಣವಾಗಿದೆ. ಹಲವು ಘಟಕಗಳಲ್ಲಿ ತರಬೇತಿ ಇಲ್ಲದ ಕಾರ್ಮಿಕರನ್ನೂ ನೇಮಿಸಿಕೊಳ್ಳಲಾಗುತ್ತದೆ.  ಮಯಿಲಾಡುತುರೈ ಜಿಲ್ಲೆಯಲ್ಲಿ ಅಕ್ಟೋಬರ್‌ 4ರಂದು ಸಂಭವಿಸಿದ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಘಟಕವು ಒಂದು ಹೆಂಚಿನ ಮನೆಯಲ್ಲಿ 2008ರಿಂದಲೂ ನಡೆಯುತ್ತಿದ್ದು ವಸತಿ ಪ್ರದೇಶದ ತುಸು ದೂರದಲ್ಲೇ ಇತ್ತು. ತರಬೇತಿ ಇಲ್ಲದ ಕಾರ್ಮಿಕರು ಸ್ಫೋಟಕಗಳನ್ನು ಬಳಸಿದ್ದು ಈ ಅವಘಡಕ್ಕೆ ಕಾರಣವಾಗಿತ್ತು.

ಸಾಮಾನ್ಯವಾಗಿ ಈ ಘಟಕಗಳು ದೇವಾಲಯಗಳ ಉತ್ಸವಗಳಿಗಾಗಿ, ಸಾರ್ವಜನಿಕ ಮೆರವಣಿಗೆಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ತಯಾರಿಸುತ್ತವೆ. ಪರವಾನಗಿ ಹೊಂದಿರುವ ಕೆಲವು ಕಾರ್ಖಾನೆಗಳು ಪರಿಣತಿ ಇಲ್ಲದ ಸಣ್ಣ ಘಟಕಗಳಿಗೆ ಉಪಗುತ್ತಿಗೆ ನೀಡುವುದು ಸಾಮಾನ್ಯ ಸಂಗತಿ. 80 ಪ್ರತಿಶತ ಅವಘಢಗಳು ಸಂಭವಿಸುವುದು ರಾಸಾಯನಿಕ ವಸ್ತುಗಳ ಮಿಶ್ರಣ ಮಾಡುವ ಹಾಗೂ ತುಂಬುವ ಪ್ರಕ್ರಿಯೆಯಲ್ಲಿ. ಕಾರ್ಮಿಕರಿಗೆ ಸೂಕ್ತ ತರಬೇತಿ ಇಲ್ಲದಿದ್ದರೆ ಇದು ಅಪಾಯಕಾರಿ ಕೆಲಸವಾಗುತ್ತದೆ ಎಂದು ನುರಿತ ಉದ್ಯಮಿಗಳು ಹೇಳುತ್ತಾರೆ. ಜೂನ್‌ 1ರಂದು ಸೇಲಂನಲ್ಲಿ ನಡೆದ ಸ್ಪೋಟಕ್ಕೆ ಇದೇ ಮೂಲ ಕಾರಣವಾಗಿತ್ತು. ಈ ಘಟಕಗಳಲ್ಲಿ ದಿನಗೂಲಿ ಸಾಮಾನ್ಯವಾಗಿ 500 ರೂಗಳಿದ್ದರೆ, ಹಬ್ಬದ ಸಂದರ್ಭಗಳಲ್ಲಿ ದುಪ್ಪಟ್ಟು ಕೂಲಿ ನೀಡಲಾಗುತ್ತದೆ. ಇದೂ ಸಹ ಶ್ರಮಿಕ ವರ್ಗಗಳ ಆಕರ್ಷಣೆಗೆ ಒಂದು ಕಾರಣವಾಗುತ್ತದೆ.

ಕೆಲವು ವರ್ಷಗಳ ಹಿಂದೆ ಪಟಾಕಿ ತಯಾರಿಕಾ ಘಟಕಗಳಲ್ಲಿ ರಾಸಾಯನಿಕ ಪದಾರ್ಥವನ್ನು ಮಿಶ್ರಣ ಮಾಡುವ ಅಪಾಯಕಾರಿ ಪ್ರಕ್ರಿಯೆಯನ್ನು ಯಾಂತ್ರೀಕರಣಗೊಳಿಸುವ ಪ್ರಯತ್ನಗಳೂ ನಡೆದಿದ್ದವು. ಆದರೆ ಈ ಯಂತ್ರವನ್ನು ಅಳವಡಿಸಲು 25 ರಿಂದ 30 ಲಕ್ಷ ರೂ ಬಂಡವಾಳ ಹೂಡಬೇಕಾಗುತ್ತದೆ. ಹಾಗಾಗಿ ಕೆಲವೇ ಘಟಕಗಳಲ್ಲಿ ಇದನ್ನು ಅಳವಡಿಸಲಾಗಿದೆ.  ಉಳಿದ ಘಟಕಗಳಲ್ಲಿ ಕಾರ್ಮಿಕರು ಮಿಶ್ರಣ ಮಾಡುವ, ತುಂಬುವ ಕೆಲಸವನ್ನು ಕೈಯ್ಯಿಂದಲೇ ಮಾಡುತ್ತಾರೆ. ಪಟಾಕಿ ಉದ್ಯಮವನ್ನು ನಿಯಂತ್ರಿಸುವ ಸಲುವಾಗಿ ಸ್ಥಾಪಿಸಲಾಗಿರುವ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆ (PESO) ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿದ್ದು 1000 ಘಟಕಗಳ ಮೇಲ್ವಿಚಾರಣೆಯನ್ನು ಐವರು ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. 15 ರಿಂದ 2000 ಕಿಲೋ ಪಟಾಕಿಗಳನ್ನು ತಯಾರಿಸುವ ಘಟಕಗಳಿಗೆ ಈ ಸಂಸ್ಥೆಯೇ ಲೈಸೆನ್ಸ್‌ ನೀಡುತ್ತದೆ. 

2012ರಲ್ಲಿ ಮುತ್ತಲಿಪಟ್ಟಿ ದುರಂತದಲ್ಲಿ 40 ಕಾರ್ಮಿಕರು ಮೃತಪಟ್ಟ ನಂತರ ಎಚ್ಚೆತ್ತ ಸರ್ಕಾರವು ಶಿವಕಾಶಿಯಲ್ಲಿರುವ PESO ಕಚೇರಿಗೆ ಕೇವಲ ಪಟಾಕಿ ತಯಾರಿಕಾ ಘಟಕಗಳನ್ನು ಮಾತ್ರವೇ ನಿರ್ವಹಿಸಲು ಆದೇಶ ನೀಡಿದೆ. ಈ ಘಟಕಗಳಲ್ಲಿನ ಸ್ಪೋಟಕಗಳು, ಸಂಪೀಡಿತ ಅನಿಲ (Compressed Gas)̧  ಪೆಟ್ರೋಲಿಯಂ ಇತರ ಅಪಾಯಕಾರಿ ವಸ್ತುಗಳ ಬಳಕೆ, ಸಂಗ್ರಹ ಹಾಗೂ ದಾಸ್ತಾನು ಪ್ರಕ್ರಿಯೆಯ ಮೇಲೆ ನಿಗಾವಹಿಸಲು ಈ PESO ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಾರೆ.  ಆದರೆ ಕಳೆದ ಕೆಲವು ತಿಂಗಳುಗಳಿಂದ ಶಿವಕಾಶಿಯ PESO ಕಚೇರಿ ಮುಖ್ಯಸ್ಥರಿಲ್ಲದೆಯೇ ಕಾರ್ಯನಿರ್ವಹಿಸುತ್ತಿದೆ. ಮೇಲಾಗಿ ಈ ತಯಾರಿಕಾ ಘಟಕಗಳಲ್ಲಿ ಮಾಹಿತಿದಾರರೂ ಹೆಚ್ಚಾಗಿ ಇರುವುದರಿಂದ ಅಧಿಕಾರಿಗಳು ಪರಿವೀಕ್ಷಣೆಗೆ ಬರುವ ಸುದ್ದಿ ಮೊದಲೇ ಕಾರ್ಖಾನೆಗಳಿಗೆ ತಲುಪಿ, ಸೂಕ್ತ ಬಂದೋಬಸ್ತ್‌ ಮಾಡಲಾಗಿರುತ್ತದೆ.

ಈರೋಡ್‌ ಜಿಲ್ಲೆಯಲ್ಲೇ 137 ಲೈಸೆನ್ಸ್‌ ಹೊಂದಿದ ತಯಾರಿಕಾ ಘಟಕಗಳಿದ್ದು, ಇವುಗಳ ಪೈಕಿ 13 ಕಾರ್ಖಾನೆಗಳಲ್ಲಿ ಆಕಾಶಕ್ಕೆ ಚಿಮ್ಮಿ ಸಿಡಿಯುವ ಪಟಾಕಿಗಳನ್ನು ತಯಾರಿಸಲಾಗುತ್ತದೆ. ಈ ಘಟಕಗಳಲ್ಲಿ ಹೆಚ್ಚೆಂದರೆ ತಲಾ ನಾಲ್ಕು ಕಾರ್ಮಿಕರು ಮಾತ್ರ ಇರುತ್ತಾರೆ. ಇಂತಹ ಕೆಲವು ಘಟಕಗಳಲ್ಲಿ ಅಕ್ರಮವಾಗಿ ನಾಡಬಾಂಬ್‌ ತಯಾರಿಸುತ್ತಿರುವ ಪ್ರಕರಣಗಳು ನಡೆದಿದ್ದು, ಸಂಬಂಧಿತ ಮಾಲೀಕರನ್ನು ಬಂಧಿಸಲಾಗಿದೆ. ಜುಲೈ 29ರಂದು ಕೃಷ್ಣಗಿರಿ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟ ಸರ್ಕಾರವನ್ನು ಎಚ್ಚರಿಸಿದ್ದು ಈ ಅವಘಡದಲ್ಲಿ ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದರು. ಅನಿಲ ಸಿಲಿಂಡರ್‌ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ತನಿಖೆಯ ನಂತರ ತಿಳಿದುಬಂದಿತ್ತು.  ಈ ದುರಂತ ಸಂಭವಿಸಿದ ನಂತರ ಕೃಷ್ಣಗಿರಿಯಲ್ಲಿ ತಯಾರಿಕೆ ನಡೆಸುತ್ತಿದ್ದ 100ಕ್ಕೂ ಹೆಚ್ಚು ಘಟಕಗಳ ಪೈಕಿ 51 ಘಟಕಗಳ ಲೈಸೆನ್ಸ್‌ ರದ್ದುಪಡಿಸಲಾಯಿತು.

ಸಾವಿನ ದವಡೆಯಲ್ಲಿ ದುಡಿಮೆ

ಕಳೆದ ಐವತ್ತು ವರ್ಷಗಳಲ್ಲಿ ಪಟಾಕಿ ಕಾರ್ಖಾನೆಗಳಲ್ಲಿ ಸಂಭವಿಸುವ ಆಕಸ್ಮಿಕ ಸ್ಫೋಟಗಳಿಂದ, ಪಟಾಕಿಯ ಬಳಕೆಯ ಸಂದರ್ಭದಲ್ಲಿ ಸಂಭವಿಸುವ ಅವಘಡಗಳಿಂದ ಸಾವಿರಾರು ಸಾವುಗಳು ಸಂಭವಿಸಿವೆ. ನೂರಾರು ಜನರು ದಹಿಸಿ ಹೋಗಿದ್ದಾರೆ. ಸಾವಿರಾರು ಜನರು ದೃಷ್ಟಿಹೀನರಾಗಿದ್ದಾರೆ. ಈ ಮಾನವ ದುರಂತದ ಹೊರತಾಗಿ ಪರಿಸರ ಹಾನಿ ಪರಾಕಾಷ್ಠೆ ಮುಟ್ಟಿದೆ. 8 ಲಕ್ಷ ಜನರ ದುಡಿಮೆಗೆ ಆಧಾರವಾಗಿರುವ ಪಟಾಕಿ ತಯಾರಿಕೆ ಲಕ್ಷಾಂತರ ಕುಟುಂಬಗಳ ಜೀವನೋಪಾಯದ ಮಾರ್ಗವಾಗಿರುವುದೂ ವಾಸ್ತವ. ಪಟಾಕಿಯ ತಯಾರಿಕೆಯನ್ನೇ ನಿಷೇಧಿಸಬೇಕು ಎಂಬ ಕೂಗು ಪ್ರತಿಯೊಂದು ದುರಂತದ ಸಮಯದಲ್ಲೂ ಕೇಳಿಬಂದರೂ ವಾಸ್ತವ ನೆಲೆಯಲ್ಲಿ ಅದು ಇತರ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಧಾರ್ಮಿಕ ಆಚರಣೆಗಳ ಪ್ರಶ್ನೆಯಷ್ಟೇ ಅಲ್ಲದೆ ಉದ್ದಿಮೆಯನ್ನೇ ನಂಬಿ ಬದುಕುವ ಲಕ್ಷಾಂತರ ಜನರ ಜೀವನ-ಜೀವನೋಪಾಯ ಹಾಗೂ ಭವಿಷ್ಯವನ್ನು ಕಗ್ಗತ್ತಲೆಗೆ ದೂಡಿದಂತಾಗುತ್ತದೆ.

 ಈ ಜಿಜ್ಞಾಸೆಯ ನಡುವೆಯೇ ಹಸಿರು ಪಟಾಕಿ ಎಂಬ ಕಡಿಮೆ ಅಪಾಯಕಾರಿ ಪಟಾಕಿಗಳ ಬಗ್ಗೆಯೂ ಅರಿವು ಮೂಡಿಸುವ ಪ್ರಯತ್ನಗಳನ್ನು ಸರ್ಕಾರಗಳು ಮಾಡುತ್ತಿವೆ. ಇದು ಅನಾಹುತಗಳನ್ನು ಕಡಿಮೆ ಮಾಡುವುದೇ ಹೊರತು ನಿರ್ಮೂಲ ಮಾಡಲಾಗುವುದಿಲ್ಲ. ಹಾಗೆಯೇ ಹಸಿರು ಪಟಾಕಿಯ ತಯಾರಿಕೆ, ವಿತರಣೆ, ಮಾರಾಟ ಹಾಗೂ ಬಳಕೆಯ ಮೇಲ್ವಿಚಾರಣೆಯನ್ನು ನಿರ್ವಹಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ. ಕೃಷಿ, ಕೈಗಾರಿಕೆ ಅಥವಾ ಆಧುನಿಕ ಡಿಜಿಟಲ್‌ ಸೇವಾ ಮಾರುಕಟ್ಟೆಯ ಮತ್ತಾವುದೇ ಉದ್ಯೋಗಾವಕಾಶಗಳಿಲ್ಲದ ಶಿವಕಾಶಿಯಂತಹ ಒಣಭೂಮಿಯಲ್ಲಿ ಕಾಯಕ ಜೀವಿಗಳಿಗೆ ಈ ಮಾರಣಾಂತಿಕ ಉದ್ಯಮವೇ ಉಸಿರಾಗಿದೆ. ಸ್ವತಃ ಅಪಾಯಗಳಿಗೆ ಒಡ್ಡಿಕೊಳ್ಳುತ್ತಲೇ ಕುಟುಂಬ ಸಮೇತವಾಗಿ ಈ ಕಾರ್ಖಾನೆಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರು ಹಠಾತ್‌ ಸಾವಿನಿಂದ ಪಾರಾದರೂ, ಶಾಶ್ವತವಾಗಿ ಕಾಡುವ ಶ್ವಾಸಕೋಶ ಸಮಸ್ಯೆಗಳು, ಚರ್ಮ ರೋಗಗಳು ಹಾಗೂ ಇತರ ಅಲರ್ಜಿಗಳಿಂದ ಜೀವನವಿಡೀ ಸೆಣಸಬೇಕಾಗಿದೆ.

ಔದ್ಯಮಿಕ ಲಾಭ, ನಂಬಿಕೆ ವಿಶ್ವಾಸಗಳ ಧಾರ್ಮಿಕ ಆಚರಣೆಗಳ ಸಾಂತ್ವನ ಹಾಗೂ ಬದುಕು ಸರಿದೂಗಿಸುವ ದುಡಿಮೆಯ ನೆಲೆಗಳು, ಈ ಮೂರೂ ಅಂಶಗಳನ್ನು ತಕ್ಕಡಿಯಲ್ಲಿಟ್ಟು ನೋಡಿದಾಗ ಪಟಾಕಿ ಉದ್ಯಮವೇ ಅಪರಾಧದ ಕಟಕಟೆಯಲ್ಲಿ ನಿಲ್ಲುತ್ತದೆ. ತಮ್ಮ ಬದುಕು ಸವೆಸಲು ಎಂತಹ ಅಪಾಯಕಾರಿ ಕೆಲಸವನ್ನಾದರೂ ಮಾಡಲು ಸಿದ್ಧವಾಗಿರುವ ಲಕ್ಷಾಂತರ ಶ್ರಮಜೀವಿಗಳಿಗೆ ಪಟಾಕಿ ಉದ್ಯಮ ಬದುಕು ಕಟ್ಟಿಕೊಡುತ್ತದೆ ಆದರೆ ಇದೇ ಕಾರ್ಮಿಕರ ವರ್ತಮಾನದ ಬದುಕಿನಿಂದ, ಭವಿಷ್ಯದಿಂದ ಈ ಉದ್ಯಮವು ಕಸಿದುಕೊಳ್ಳುವ ಜೀವನದ ಅಮೂಲ್ಯ ಕ್ಷಣಗಳು ಮಾರುಕಟ್ಟೆಯ ಗಣನೆಗೇ ಬರುವುದಿಲ್ಲ. GDPಯಿಂದಲೇ ದೇಶದ ಪ್ರಗತಿ-ಅಭಿವೃದ್ಧಿಯನ್ನು ಅಳೆಯವ ಅರ್ಥವ್ಯವಸ್ಥೆಯಲ್ಲಿ ಇಲ್ಲಿ ಸಂಭವಿಸುವ ಸಾವುನೋವುಗಳು-ಬಾಧಿಸಲ್ಪಡುವ ಜೀವನೋಪಾಯಗಳು ಮಾರುಕಟ್ಟೆ ಸರಕುಗಳಂತೆ ಬಿಕರಿಯಾಗುವ-ಖರೀದಿಯಾಗುವ ಪದಾರ್ಥಗಳಾಗಿಬಿಡುತ್ತವೆ. .

ಆದರೆ ಪ್ರತಿ ವರ್ಷ ದೀಪಾವಳಿಯಂದು ರಂಗುರಂಗಿನ ಪಟಾಕಿಗಳ ಬೆಳಕಿನಲ್ಲಿ, ಢಂಢಂ ಸದ್ದಿನಲ್ಲಿ, ಕಣ್ಮನ ಸೆಳೆಯುವ ಹೂಕುಂಡ-ಭೂಚಕ್ರ-ಸುರ್‌ಸುರ್‌ ಬತ್ತಿಗಳಲ್ಲಿ ಸಂಭ್ರಮಿಸುವ ಸುಶಿಕ್ಷಿತ-ಕಲಿತ ವರ್ಗಗಳಿಗೆ ಪಟಾಕಿಗಳ ಪ್ರತಿಯೊಂದು ಕಿಡಿಯಲ್ಲೂ ಶಿವಕಾಶಿಯ ದುರಂತದ ಚಹರೆಗಳ ಛಾಯೆಯಾದರೂ ಕಾಣುವಂತಾದರೆ, ಬಹುಶಃ ಕಾಲಕ್ರಮೇಣ ಪಟಾಕಿಯ ಸದ್ದೂ ಕಡಿಮೆಯಾಗುತ್ತಾ ಪರಿಸರವೂ ಸ್ವಚ್ಚವಾಗುತ್ತಾ ಹೋಗಬಹುದು.

ಕೊನೆಯ ಹನಿ :

ಶಿವಕಾಶಿಯ ಶ್ರಮಜೀವಿಗಳ ಎಳೆಯ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆಯೇ? ಇದು ನಾಗರಿಕತೆಯ ಮುಂದಿರುವ ಯಕ್ಷ ಪ್ರಶ್ನೆ!

ಈ ಲೇಖನದ ಮಾಹಿತಿ, ದತ್ತಾಂಶಗಳಿಗೆ ಆಧಾರ : Sparks of Danger – ದ ಹಿಂದೂ 21 ಅಕ್ಟೋಬರ್‌ 2023

Leave a Reply

Your email address will not be published. Required fields are marked *