ರಾಜಕಾರಣದ ಧ್ರುವನಕ್ಷತ್ರವಾಗಿ ಬಹುಕಾಲ ಮಿಂಚಬಹುದಿದ್ದ ಸಜ್ಜನ ಮತ್ತು ಜನಾನುರಾಗಿ ರಾಜಕಾರಣಿ ಎಂದೇ ಹೆಸರು ಮಾಡಿದ್ದ ಧ್ರುವನಾರಾಯಣರು ಹಠಾತ್ ನಿರ್ಗಮಿಸಿರುವುದು ಆಘಾತಕಾರಿಯಾದ ಸುದ್ದಿಯಾಗಿದೆ. ವೈಯಕ್ತಿಕವಾಗಿ ನನಗೆ ತೀವ್ರ ನೋವುಂಟುಮಾಡುವ ಸುದ್ದಿಯಾಗಿದೆ. ಧ್ರುವನಾರಾಯಣ್ ಅವರು ಇಷ್ಟು ಬೇಗ ನಿರ್ಗಮಿಸುವ ಯಾವ ಸೂಚನೆಗಳೂ ಸ್ವತಃ ಅವರಿಗೂ ಇದ್ದಿರಲಿಕ್ಕಿಲ್ಲ. ಅವರ ಅಪಾರ ಅಭಿಮಾನಿ ಬಳಗ ಈ ಅಗಲಿಕೆಯ ದುಃಖವನ್ನು ಸಹಿಸಲಾಗದು. ಧ್ರುವನಾರಾಯಣ ನಿಜಕ್ಕೂ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತ ಗುಣಸ್ವಭಾವವನ್ನು ಬೆಳೆಸಿಕೊಂಡಿದ್ದ ವ್ಯಕ್ತಿಯಾಗಿದ್ದರು. ಅದೇ ಅವರ ಶಕ್ತಿಯಾಗಿತ್ತು. ಅಂತಹ ಧೀಮಂತ ವ್ಯಕ್ತಿ ಇಂದು ಹೃದಯಾಘಾತದಿಂದ ವಿಧಿವಶರಾದುದು ನಂಬಲಾರದ ಸುದ್ದಿಯಾಯಿತು.

ನಾವು ಬಹುಜನ ಚಳವಳಿಯವರು. ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ ದ್ವೇಷಿಸುವುದನ್ನು ರೂಢಿಮಾಡಿಕೊಂಡವರು. ಗಾಂಧೀಜಿ ಕಾಲದಿಂದಲೂ ಬಾಬಾಸಾಹೇಬರ ಹೋರಾಟವನ್ನು ಕಾಂಗ್ರೆಸ್ ದಿಕ್ಕುತಪ್ಪಿಸಿತು ಎಂಬ ಕಾರಣಕ್ಕೆ ನಮಗೆ ಗಾಂಧೀಜಿಯವರ ಕಾಂಗ್ರೆಸ್ ಅಪಥ್ಯವಾಗಿತ್ತು. ಇದೊಂದು ರೀತಿಯ ತರ್ಕಬದ್ದವಾದ ಆಲೋಚನೆಯೇ ಸರಿ.

ಆದರೆ, ನಾವು ಕಾಂಗ್ರೆಸ್ ನಲ್ಲಿರುವವರನ್ನೂ ದ್ವೇಷಿಸುವಂತೆ ಮಾಡಲಾಯಿತು. ರಾಜಕಾರಣದ ಅನಿವಾರ್ಯತೆಯಿಂದಲೋ, ಅಧಿಕಾರದ ಆಸೆಯಿಂದಲೋ ಕಾಂಗ್ರೆಸ್ ನೆರಳಲ್ಲಿ ರಾಜಕಾರಣಕ್ಕಿಳಿದ ಎಲ್ಲರನ್ನೂ ಅದರಲ್ಲೂ  ಕಾಂಗ್ರೆಸ್ ನಲ್ಲಿ ದಲಿತ ರಾಜಕಾರಣಿಗಳನ್ನು ಇನ್ನಿಲ್ಲದಂತೆ ದ್ವೇಷಿಸುವಂತೆ ರೂಢಿಸಲಾಯಿತು. ಹೀಗಾಗಿ ನಾವು ನಮ್ಮ ಅನೇಕ ರಾಜಕಾರಣಿಗಳ ಜೊತೆ ಸ್ನೇಹ ಸಂಬಂಧವನ್ನೇ ಹೊಂದಲಿಲ್ಲ. ಸ್ನೇಹದ ಮಾತು ಅಲ್ಲಿರಲಿ ನಾವು ಅವರನ್ನು ವಿಪರೀತವಾಗಿ ದ್ವೇಷಿಸುತ್ತಿದ್ದೆವು…

ಹೀಗೆ ಮಾಡಿ ನಾವು ಸಾಧಿಸಿದ್ದೇನೂ ಇಲ್ಲ!

ವಿಚಿತ್ರವೆಂದರೆ ನಮಗೆ ದ್ವೇಷದ ಗಿಳಿಪಾಠ ಹೇಳಿಕೊಟ್ಟ ಪುಣ್ಯಾತ್ಮರು ಸರ್ವಪಕ್ಷಗಳ ಸದಸ್ಯರು, ಅಧಿಕಾರಸ್ಥರೊಡನೆ ಚಂದದ ಸಂಬಂಧ ಕಟ್ಟಿಕೊಂಡು ತಮ್ಮ ಜೀವನ ಭದ್ರಪಡಿಸಿಕೊಳ್ಳುವುದನ್ನು ಕಂಡ ಮೇಲೆ ನಮಗೆ ಜ್ಞಾನೋದಯವಾಗಿ “ಎಲ್ಲಾ ರಾಜಕೀಯ” ಅನ್ನೋದು ತಿಳಿದು ದ್ವೇಷದ ಪಾಠ ಹೇಳಿದವರ ಮೇಲೆ ವಿಪರೀತ ಅಸಹ್ಯದ ಭಾವ ಉಂಟಾಯಿತು. ಯಾರಿಗೆ ಸ್ವಯಂ ಓದು, ಗ್ರಹಿಕೆ, ವಿಶ್ಲೇಷಣೆಯ ಹಾದಿ ಕಾಣುತ್ತದೋ ಅವರಿಗೆ ಮಾತ್ರ ಇಂತಹ ಜ್ಞಾನೋದಯವಾಯಿತು. ಕೆಲವರಿಗೆ ಇನ್ನೂ ಅಂತಹ ಅವಕಾಶ ದಕ್ಕಿಲ್ಲ ಎಂಬುದು ವಿಷಾದದ ಸಂಗತಿ.

ಹೀಗಾಗಿ ಹಲವು ಕಾಲ ಅನೇಕ ರಾಜಕಾರಣಿಗಳ ಭೇಟಿಯಿಂದ ದೂರವೇ ಇದ್ದ ನಾನು ಒಮ್ಮೆ ಧ್ರುವನಾರಾಯಣ ಅವರನ್ನು ಭೇಟಿ ಮಾಡುವ ಸಂದರ್ಭ ಎದುರಾಯಿತು. ಆಗ ಅವರ ಮನೆಗೆ ಹೋದಾಗ, ಜನರು ಅವರ ಭೇಟಿಗಾಗಿ ಕಿಕ್ಕಿರಿದು ತುಂಬಿದ್ದರು. ಅವರೆಲ್ಲರೂ ಅವರ ಪಕ್ಷದ ಕಾರ್ಯಕರ್ತರು, ಪರಿಚಿತರು ಆಗಿದ್ದರು. ನನ್ನದು ತೀರಾ ಅಪರಿಚಿತ ಮುಖ. ಎಲ್ಲೊ ಒಂದೆರಡು ಕಾರ್ಯಕ್ರಮಗಳಲ್ಲಿ ಒಂದೇ ವೇದಿಕೆಯಲ್ಲಿದ್ದರೂ ನಾನು ಅವರನ್ನು ಮಾತಾಡಿಸುವ ಸೌಜನ್ಯವನ್ನೂ ತೋರದೆ, ಮುಖ ಗಂಟಿಕ್ಕಿಕೊಂಡು ಕುಳಿತಿದ್ದು, ಅವಕಾಶ ಬಂದಾಗ ಉಗ್ರ ಭಾಷಣ ಬಿಗಿದು, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ದಲಿತರನ್ನು ಬಾಯಿಕಟ್ಟಿದ ನಾಯಿಗಳು, ಮೂಗುದಾರ ಹಾಕಿದ ಎತ್ತುಗಳು ಎಂದು ಜರಿದು ನೀರಿಳಿಸಿ ಎದೆಯುಬ್ಬಿಸಿ ನಡೆದಿದ್ದೆ!

ಅಂದು ಅವರ ಮನೆಯ ಬಳಿ ನನ್ನನ್ನು ನೋಡಿದ ಧ್ರುವನಾರಾಯಣ ಅವರು ಅದೆಷ್ಟು ಸೂಕ್ಷ್ಮವಾಗಿ ನನ್ನನ್ನು ಗ್ರಹಿಸಿದರೆಂದರೆ “ಓಹೋಹೋ…ಬಹುಜನ ನಾಯಕರು ಏನು ನಮ್ಮನ್ನ ನೋಡೋಕೆ ಬಂದಿದೀರಿ!!?” ಎಂದು ಉದ್ಗರಿಸುತ್ತಲೇ ಅವರೆಲ್ಲಾ ಅಭಿಮಾನಿಗಳ ಅಹವಾಲುಗಳನ್ನು ಬಿಟ್ಟು ನನ್ನನ್ನು ಪರ್ಸನಲ್ ರೂಮ್ ಗೆ ಕರೆದೋಯ್ದರು! ಬೇರೇನೂ ಮಾತಾಡದೆ, ನಾನು ಬಂದ ಕೆಲಸವನ್ನು ಕುಳಿತಲ್ಲೇ ಫೋನ್ ಮೂಲಕವೇ ಪರಿಹರಿಸಿದರು.  ನನಗೇ ದಿಗಿಲಾಯ್ತು! ನಾವಂದುಕೊಂಡಂತೆ ಅಥವಾ ನಮಗೆ ತಿಳಿಸಿಕೊಟ್ಟಂತೆ ಅವರೊಳಗೆ ನಮ್ಮ ಮೇಲೆ ಯಾವುದೇ  ದ್ವೇಷವಿರಲಿಲ್ಲ. ಇದೇ ರೀತಿಯ ಘಟನೆ ಬಿ.ಸೋಮಶೇಖರ್ ಅವರಿಂದಲೂ ಆಯಿತು. ನಾವು ಅವರನ್ನು ವಿನಾಕಾರಣ ಸೋಲಿಸಿದ್ದೆವು!

ಧ್ರುವನಾರಾಯಣರ ಕುರಿತು ಸಾಕಷ್ಟು ಬರೆಯುವುದಿದೆ. ಈ ಕ್ಷಣದಲ್ಲಿ ಯಾಕೆ ಇದನ್ನು ಹೇಳಬೇಕಾಯಿತೆಂದರೆ ವ್ಯಕ್ತಿ ಮತ್ತು ಪಕ್ಷದ ಸಿದ್ದಾಂತಗಳನ್ನು ಒಂದೇ ಆಗಿ ನೋಡುವುದರ ಅಪಾಯ ಎಷ್ಟರಮಟ್ಟಿಗೆ ಸಂಬಂಧಗಳನ್ನು ಹಾಳುಗೆಡವುತ್ತದೆ ಎಂಬುದನ್ನು ತಿಳಿಸಲು ಈ ಪ್ರಸಂಗ ನೆನಪಾಯಿತು. ಇದೆಲ್ಲದರ ನಡುವೆ ಸಹ ಧ್ರುವನಾರಾಯಣ ಅವರಿಗೆ ಪಕ್ಷವನ್ನು ಮೀರಿದ ಮಾನವತೆ ಸಿದ್ದಿಸಿತ್ತು, ಪಕ್ಷವನ್ನು ಮೀರಿದ ಬಾಂಧವ್ಯ ಕರಗತವಾಗಿತ್ತು. ನಾವು ಅದ್ಬುತ ಭಾಷಣಕಾರರಾಗಿ ಜೀವನಾನುಭವದಲ್ಲಿ ತೀರ ಅಪ್ರಬುದ್ದತೆ ತೋರುತ್ತಿದ್ದೆವು. ಧ್ರುವನಾರಾಯಣ ಅವರ ಸೀದಾಸಾದಾ ಮನೋಧೋರಣೆಯನ್ನು ಹೇಳಲು ಈ ಪ್ರಸಂಗ ಈ ಕ್ಷಣ ನೆನಪಾಯಿತು. ಅವರಿಲ್ಲ ಎಂಬ ವಿಷಯವನ್ನು ಜೀರ್ಣಿಸಿಕೊಳ್ಳಲೂ ಸಾಧ್ಯವಾಗದಷ್ಟು ನೋವು ಹೃದಯ ಹಿಂಡುತ್ತಿದೆ.

ಧ್ರುವನಾರಾಯಣ ಇನ್ನು ನೆನಪು ಮಾತ್ರ. ನೆನಪುಗಳನ್ನು ನಿಧಾನಕ್ಕೆ ಮಾತಾಡಬಹುದು. ಬೇರೆಲ್ಲಾ ಮಾತುಗಳು ಈಗ ಕ್ಲೀಷೆಯಾಗುತ್ತವೆ.

-ಡಾ.ಚಮರಂ

Leave a Reply

Your email address will not be published. Required fields are marked *