ನನಗೆ ತುಂಬ ದಿನಗಳ ನಂತರ ಒಬ್ಬರು ಕನ್ನಡ ಪ್ರೊಫೇಸರ್ ಸಿಕ್ಕಿದ್ದರು, ಅವರ ಜೊತೆ ಬಹಳ ಹೊತ್ತು ಮಾತಾಡಿ, ಹೀಗೆ ಮಾತು ಮುಂದುವರೆಯುತ್ತಿರಬೇಕಾದರೆ, ನಾನು ಪುಸ್ತಕಗಳನ್ನು ಓದಬೇಕು. ನಿಮಗೆ ತಿಳಿದ ಹಾಗೆ ಬಹಳ ಚೆನ್ನಾಗಿರುವ ಕಾದಂಬರಿಗಳನ್ನೇಳಿ ಸಾರ್ ಎಂದೆ. ಅದಕ್ಕೆ ಅವರು ಪ್ರತ್ಯುತ್ತರವಾಗಿ ʼಶ್ರೀಕೃಷ್ಣ ಆಲನಹಳ್ಳಿʼಯವರು ಬರೆದಿರುವ ಯಾವುದೆ ಕಾದಂಬರಿಯನ್ನ ಓದು ಅವುಗಳು ತುಂಬ ಚೆನ್ನಾಗಿರುತ್ತವೆ ಅಂದ್ರು, ನಂತರ ಪುಸ್ತಕಗಳ ಬಗ್ಗೆ ಏನನ್ನು ಮಾತಾಡಲಿಲ್ಲ, ನಂತರ ನಾನು ಹಾಸ್ಟೆಲಿಗೆ ಹೋದೆ, ಅವರು ಅವರ ದಾರಿಯನ್ನಿಡಿದರು.
ನಾನು ಹಾಸ್ಟೆಲಿಗೆ ಹೋದ ನಂತರ ನನ್ನ ಮನಸ್ಸಿನಲ್ಲಿ ತುಂಬ ಕೊರೆಯುತ್ತಿತ್ತು. ಅದೇನೆಂದರೆ ಶ್ರೀ ಕೃಷ್ಣ ಆಲನಹಳ್ಳಿಯವರ ಕಾದಂಬರಿಗಳನ್ನು ಓದಬೇಕೆಂಬುದು ಅವರ ಬಗ್ಗೆ ಗೂಗಲ್ ಮಾಡಿದಾಗ ಅವರು ಮೂರು ಕಾದಂಬರಿಗಳನ್ನು ಬರೆದ್ದಿದ್ದಾರೆಂಬುದು ತಿಳಿಯಿತು. ಅವು ಪರಸಂಗದ ಗೆಂಡೆತಿಮ್ಮ, ಕಾಡು, ಭುಜಂಗಯ್ಯನ ದಶಾವತಾರಗಳು. ಇವುಗಳನ್ನ ಓದಲೆಬೇಕೆಂದು ಮನಸು ತುಂಬಾ ಹಠ ಮಾಡಿತು. ಆದರೆ ಅದು ಸದ್ಯಕ್ಕೆ ಆಗಲ್ಲ ಕಾರಣ ಏನೆಂದರೆ ನನಗೆ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದವು. ಆ ಪರೀಕ್ಷೆಗಳಿಗೆ ಮೂರು – ನಾಲಕು ದಿನಗಳ ಅಂತರವಿರುತ್ತಿದ್ದು. ಆ ಸಮಯದೊಳಗೆ ಪೂರ್ತಿ ಸಿಲಬಸನ್ನ ಪುನರ್‌ಮನನ ಮಾಡಿಕೊಳ್ಳಬೇಕಾಗಿತ್ತು. ಅದಾದ ಒಂದು ಹದಿನೈದು ದಿನಗಳ ನಂತರ ನನಗಿದ್ದ ಪರೀಕ್ಷೆಗಳೆಲ್ಲಾ ಮುಗಿಯಿತು.
ಪರೀಕ್ಷೆ ಮುಗಿದ ನಂತರ ನಾನು ಒಂದು ದಿಸ ಪೂರ್ತಿಯಾಗಿ ರೆಸ್ಟ್‌ಮಾಡಿದೆ, ದೇಹಕ್ಕೆ ಆರಾಮೆನಿಸಿತು. ನಂತರ ಇದ್ದಕ್ಕಿಂದಂತೆ ಶ್ರೀ ಕೃಷ್ಣ ಆಲನಹಳ್ಳಿಯವರ ಕಾದಂಬರಿಗಳನ್ನು ಓದಬೇಕೇನಿಸಿತು. ಆಗ ನಮ್ಮ ಲೈಬ್ರರಿಯಲ್ಲಿ ವಿಚಾರಿಸಿದೆ. ಅವರು ಮನಸ್ಸಿನೊಳಗೆ ಏನಂದುಕೊಂಡ್ರೊ ಗೊತ್ತಿಲ್ಲ ಆದ್ರೆ ಬಾಯಿಬಿಟ್ಟು ಮೊನ್ನೆ ತಾನೆ ನಿನಗೆ ಪರಿಕ್ಷೆ ಮುಗಿದಿದೆ, ಆಗಲೆ ಬುಕ್ಸ್ ಕೇಳ್ಕೋಂಡು ಬಂದಿದ್ಯಾ, ಹೋಗಿ ನಾಲ್ಕೈದು ದಿನ ರೆಸ್ಟ್‌ಮಾಡೋ ಅಂದ್ರು. ನಾನು ಅವರ ಮಾತಿಗೆ ಕಿವಿಗೊಡದೆ ಅವರಿಗೆ ನಾನು ಐದಾರು ಸಲ ಕೇಳಿ, ರೇಜಿಗೆ ಇಳಿಸಿ ಕಂಪ್ಯೂಟರ್‌ನಲ್ಲಿ ಹುಡುಕಿಸಿದೆ. ಆಗ ಶ್ರೀ ಕೃಷ್ಣ ಆಲನಹಳ್ಳಿಯವರ ಕಾದಂಬರಿಗಳಲ್ಲಿ ʻಭುಜಂಗಯ್ಯನ ದಶಾವತಾರಗಳುʼ ಎಂಬ ಒಂದೇ ಒಂದು ಬುಕ್ಕಿದೆ ಅಂತ ತೋರಿಸಿತು. ಸರಿಯೆಂದು ಆ ಬುಕ್ ಇರುವ ಬೀರುವಿನ ಕಡೆ ನಡೆದೆ, ಮೊದಲು ನನ್ನ ಮನಸ್ಸಿನಲ್ಲಿದ್ದದ್ದು ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯನ್ನ ಓದಬೇಕು ಎಂದು. ಆದರೆ ನನ್ನ ಪಾಲಿಗೆ ಸಿಕ್ಕಿದ್ದು ʼಭುಜಂಗಯ್ಯನ ದಶಾವತಾರಗಳುʼ. ಸರಿ ಇದಾರ ಸಿಕ್ತಲ್ಲ ಅಂತ, ಇದನ್ನ ನನ್ನ ಹೆಸರಿನಲ್ಲಿ ತೆಗೆದುಕೊಂಡು ಹೊರಟೆ.
ಓದಲು ಶುರುಮಾಡಿದೆ ಎರಡು – ಮೂರು ದಿನಗಳಲ್ಲಿ ನಾನು ನೂರು ಪುಟಗಳಷ್ಟನ್ನ ಓದಿ ಮುಗಿಸಿದೆ. ನಂತರ ನಾನು ನನ್ನ ಗೆಳೆಯರ ಜೊತೆ ಬಿಜಾಪುರಕ್ಕೆ ಟ್ರಿಪ್‌ಹೋದೆ, ಅಲ್ಲಿಗೆ ಹೋದಾಗಲು ಈ ಬುಕ್ಕನ್ನ ಜೊತೆಲೆ ತೆಗೆದುಕೊಂಡು ಹೋದೆ ಆದರೆ ಅಲ್ಲಿ ಈ ಬುಕ್ಕನ್ನು ಓದಲು ನನಗೆ ಹೆಚ್ಚು ಸಮಯ ಸಿಗಲಿಲ್ಲ. ಆ ಐದು ದಿನಗಳಲ್ಲಿ ಐವತ್ತರಿಂದ ಅರವತ್ತು ಪುಟಗಳನ್ನಷ್ಟೆ ಒದಿದೆ. ನಂತರ ಬಿಜಾಪುರದಿಂದ ನಾನು ನಮ್ಮೂರಾದ ದಡದಪುರಕ್ಕೆ ಮರಳಿದೆ. ನಮ್ಮಟ್ಟಿಯಲ್ಲಿ ತಲ್ಲಿನನಾಗಿ ಎರಡೇ ಎರಡು ದಿನಗಳಲ್ಲಿ ಇಡೀ ಪುಸ್ತಕವನ್ನೆ ಓದಿ ಮುಗಿಸಿದೆ. ಈ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಗಳ ಮೇಲಾಗಿತ್ತು. ಇದನ್ನ ಓದಿ ಮುಗಿಸಿದ ನಂತರ ಮನಸ್ಸು ನೀರಾಳವಾಯಿತು. ಮುಂದೆ ಏನು ಮಾಡಬೇಕೆಂಬುದೆ ಗೊತ್ತಾಗಲಿಲ್ಲ. ಸ್ವಲ್ಪಹೊತ್ತು ಸುಮ್ಮನೆ ಕುಳಿತೆ, ಮತ್ತೆ ಮುಚ್ಚಿಟ್ಟ ಪುಸ್ತಕವನ್ನು ತೆರೆದು ಮಧ್ಯಮಧ್ಯದಲ್ಲಿ ಓದಿದೆ. ಮನಸ್ಸಿಗೆ ಸಮಾಧಾನವಾಗಲಿಲ್ಲ. ಕಾರಣ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ನನ್ನ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಮುಖಗಳು, ಸನ್ನಿವೇಶಗಳು ಕಣ್ಣಮುಂದೆ ಬಂದವು. ಕೆಲವು ಸನ್ನಿವೇಶಗಳಲ್ಲಿ ನಾನೇ ಇರುವಂತೆ, ಕೆಲವು ಪಾತ್ರಗಳನ್ನು ನಾನೇ ನಿಭಾಯಿಸಿದಂತೆ ಭಾಸವಾಯಿತು.
ಮೊದಲಿಗೆ ಹೇಳುವುದಾದರೆ, ಈ ಕಾದಂಬರಿಯ ಕಥಾನಾಯಕ ʻಭುಜಂಗಯ್ಯʼ ಈತ ಒಬ್ಬ ಸಾಮಾನ್ಯ ಮನುಷ್ಯ. ಈತ ಲಿಂಗಾಯತ ಧರ್ಮದಲ್ಲಿ ಹುಟ್ಟಿ, ಅದರ ಕಟ್ಟುಪಾಡುಗಳನ್ನು ನಿಷ್ಟೆಯಿಂದ ನಿಭಾಯಿಸುತ್ತಿದ್ದ. ನಂತರದ ದಿನಗಳಲ್ಲಿ ಭುಜಂಗಯ್ಯನಿಗೆ ತನ್ನ ಊರಿನಲ್ಲಿ ಮೇಷ್ಟ್ರಾಗಿದ್ದ ಗೋವಿಂದರಾಜು ಅವರ ಪರಿಚಯವಾಗಿ, ಅವರು ದಿನಲೂ ʻಮಹಾತ್ಮ ಗಾಂಧಿʼಯವರ ಬಗ್ಗೆ ಹೇಳುತ್ತಿದ್ದರು. ಮೊದಲಿಗೆ ಭುಜಂಗಯ್ಯನು ಮಹಾತ್ಮ ಗಾಂಧಿಯವರ ಬಗ್ಗೆ ತಿಳಿದುಕೊಳ್ಳುತ್ತಿರುವಾಗ ಇವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾನ್ ಹೋರಾಟಗಾರನೆಂದಷ್ಟೆ ಭಾವಿಸಿ, ಇದರಿಂದ ಪ್ರೇರಣೆಗೊಂಡು ತನ್ನ ಹೋಟೆಲಿನಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ದೇವರ ಫೋಟೋಗಳ ಸಮವಾಗಿ ಇಟ್ಟ. ಭುಜಂಗಯ್ಯನಲ್ಲಿ ಈ ಬೆಳವಣಿಗೆಯನ್ನ ಕಂಡ ಊರಿನ ಸ್ವಜಾತಿಯವರು ತಮ್ಮ ಮನಸ್ಸಿನಲ್ಲಿ ಭುಜಂಗಯ್ಯನ ಬಗ್ಗೆ ಕೆಟ್ಟದ್ದಾಗಿ ಎನೇನ್ನನ್ನೋ ಮಾತಾಡಿಕೊಂಡರು.
ಇನ್ನು ಮುಂದುವರೆದು ಭುಜಂಗಯ್ಯನು ಮಹಾತ್ಮ ಗಾಂಧಿಯವರ ಬಗ್ಗೆ ತಿಳಿದುಕೊಳ್ಳುತ್ತಿರುವಾಗ ಗಾಂಧಿಯವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕಷ್ಟೆ ಸಿಮೀತವಾಗದೆ, ʻಅಸ್ಪೃಷ್ಯತೆ ನಿರ್ಮೂಲನೆʼಗಾಗಿ ಕೈಗೊಂಡಿದ್ದ ಕಾರ್ಯಗಳ ಬಗ್ಗೆಯು, ಅವರ ಸಿದ್ಧಾಂತಗಳ ಬಗ್ಗೆಯು ತಿಳಿದುಕೊಂಡ. ಒಮ್ಮೊಮ್ಮೆ ಭುಜಂಗಯ್ಯನನ್ನು ಮಹಾತ್ಮ ಗಾಂಧಿಯವರ ವ್ಯಕ್ತಿತ್ವ ತುಂಬಾ ಕಾಡುತ್ತಲೆ ಇತ್ತು. ಅದೇನೆಂದರೆ “ನಾವು ಗಾಂಧೀಯನ್ನು ಒಪ್ಪಬಹುದು ಅದರೆ ಅವರ ಸಿದ್ಧಾಂತಗಳನ್ನ ಒಪ್ಪಲು ಸಾಧ್ಯವೇ? ಅವರ ಸಿದ್ಧಾಂತಗಳನ್ನ ಒಪ್ಪಿದರು, ಅವುಗಳನ್ನು ಅನುಸರಿಸಲು ಸಾಧ್ಯವೇ? ಅವುಗಳನ್ನು ನಾನು ಒಪ್ಪಿ ಅನುಸರಿಸಿದರು ಸಹ ನನ್ನ ಜಾತಿಕರು ಒಪ್ಪುವರೆ ಎಂದು?” ಕಡೆಪಕ್ಷ ನನ್ನ ಜಾತಿಕರು ಗಾಂಧೀಯನ್ನು ಒಪ್ಪಿದರು, ಅವರ ಸಿದ್ಧಾಂತಗಳನ್ನ ಒಪ್ಪಿ ಅನುಸರಿಸುವರೆ ಎಂದು? ಗೋವಿಂದರಾಜು ಮೇಷ್ಟ್ರು ಸದಾ ಹೇಳುತ್ತಲೆ ಇದ್ದರು “ಈ ಜಗತ್ತಿನಲ್ಲಿ ನಿಮ್ಮ ಲಿಂಗಾಯಿತ ಮಠದ ಸ್ವಾಮಿಗಳ ಹಾಗೆ ನೂರುಜನ, ಸಾವಿರಜನ ಸಿಗುತ್ತಾರೆ , ಆದರೆ ಮಹಾತ್ಮ ಗಾಂಧಿಯಂತವರು ಸಿಗಲು ಸಾಧ್ಯವೇ ಇಲ್ಲವೆಂದು”.
ನಂತರದ ದಿನಗಳಲ್ಲಿ ನಡೆದ ಒಂದು ಘಟನೆಯಿಂದಾಗಿ ದುರದೃಷ್ಟವಶಾತ್ ಭುಜಂಗಯ್ಯ ತನ್ನ ಕಣ್ಣುಗಳೆರಡುಗಳನ್ನು ಕಳೆದುಕೊಂಡನು. ಭುಜಂಗಯ್ಯನು ಮುಂದುವರೆದು ಗಾಂಧೀಯವರ ಬಗ್ಗೆ ತಿಳಿದುಕೊಂಡಿದ್ದಲ್ಲದೇ ಬಸವಣ್ಣನವರ, ಶಿವಶರಣರ ವಚನಗಳನ್ನು ಕೇಳುತ್ತ, ಅರ್ಥಮಾಡಿಕೊಳ್ಳುತ್ತ, ತತ್ವಪದಗಳನ್ನು ಹಂಪಾಪುರದ ತಂಬೂರಿ ಅಯ್ನೋರರಿಂದ ಕೇಳಿ ಅರ್ಥೈಸಿಕೊಳ್ಳುತ್ತ, ತನ್ನ ಜಾತಿಕರು ಅಸ್ಪೃಷ್ಯತೆ ವಿಚಾರದಲ್ಲಿ ತಾಳಿದ್ದ ನಿಲುವುಗಳನ್ನು ಈತ ಮುರಿಯುತ್ತ, ಗಾಂಧಿಯ ಅನುಯಾಯಿಯಾಗಿ ಬಾಳತೊಡಗಿ, ಅಧ್ಯಾತ್ಮದತ್ತ ಪಯಣ ಬೆಳೆಸಿದನು.
ಇನ್ನು ನನಗೆ ಭುಜಂಗಯ್ಯನಿಗಿಂತ ಅತಿ ಹೆಚ್ಚು ನನ್ನ ಮನಸ್ಸಿನಲ್ಲಿ ಕಾಡತೊಡಗಿದ ವ್ಯಕ್ತಿ ಎಂದರೆ “ಸುಶೀಲ”. ಮೊದಲು ಇವಳ ಬಗ್ಗೆ ಹೇಳುವುದಾದರೆ, ಇವಳ ತಂದೆ ಬಳೆಗಾರ, ಇವಳ ಹೆತ್ತ ತಾಯಿ ವಿಧಿವಶರಾಗಿದ್ದರು. ನಂತರ ಇವಳ ತಂದೆ ಎರಡನೇ ಮದುವೆಯಾದನು ಸುಶೀಲ ತನ್ನ ಮಲತಾಯಿಯ ಕಾಟದಿಂದ ತಪ್ಪಿಸಿಕೊಳ್ಳಲು, ಅಪ್ಪನ ಜೊತೆ ಬಳೆವ್ಯಾಪಾರ ಮಾಡವುದನ್ನು ಕಲಿತುಕೊಂಡಳು. ಮೈಸೂರಿನಿಂದ ಮಾದಳ್ಳಿ ಮತ್ತು ಅದರ ಅಕ್ಕ ಪಕ್ಕದ ಊರುಗಳಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದರು. ದಿನ ಪೂರ್ತಿ ಬಳೆವ್ಯಾಪಾರ ಮಾಡಿ, ರಾತ್ರಿ ಊರಿನಲ್ಲಿ ನಂಭಿಕಸ್ತರ ಮನೆಯಗಳ ಜಗಲಿಗಳ ಮೇಲೆ ತಂಗುತ್ತಿದ್ದರು. ಹೀಗೇ ಕಾಲ ಕಳೆದು ಸುಶೀಲ, ಭುಜಂಗಯ್ಯನು ಪ್ರೀತಿಸಿ ಮದುವೆ ಮಾಡಿಕೊಂಡರು. ಸುಶೀಲಳನ್ನು ಮದುವೆಯಾದ ನಂತರ ಭುಜಂಗಯ್ಯ ಸ್ವಲ್ಪ ದಿನ ಖುಷಿಯಿಂದಲೆ ಇದ್ದ, ನಂತರದಲ್ಲಿ ಒಂದು ದುರಂತ ನಡೆದು ಹೋಟೆಲ್ ಸುಟ್ಟು ಹೋಯಿತು. ಕಾರಣ ಏನೆಂದರೆ, ಭುಜಂಗಯ್ಯನ ಹೋಟೆಲು ದಿನ ನಿತ್ಯ ಸುಗಮವಾಗಿ, ಯಾವುದೇ ತಂಟೆ-ತಕರಾರು ಇಲ್ಲದೆ ನಡೆಯುತ್ತಿತ್ತು. ಆದರೆ ಒಂದು ದಿನ ಹೋಟೆಲಿನಲ್ಲಿ ಅದು ಲಿಂಗಾಯತರ ಪಾಲಿಗೆ ಒಂದು ಅತಾಚುರ್ಯ ನಡೆದೆಹೋಯಿತು. ಅದೇನೆಂದರೆ ಮಾದಳ್ಳಿ ಇಸ್ಕೂಲಿನ ಮೇಷ್ಟ್ರಾದ ಗೋವಿಂದರಾಜುರವರು ತಮ್ಮ ಇಸ್ಕೂಲಿಗೆ ಹೊಸದಾಗಿ ಬಂದಿದ ಮೇಷ್ಟ್ರನ್ನು ಹೋಟೆಲಿನ ಒಳಕ್ಕೆ ಕರೆದುಕೊಂಡು ಬಂದು, ಟೀ ಕುಡಿದು ಇಸ್ಕೂಲಿಗೆ ಹೊರಟು ಹೋಗಿದ್ದರು. ಇದು ನಿಜಕ್ಕೂ ಸಾಮಾನ್ಯ ಸಂಗತಿಯೇ ಹೌದು ಆದರೆ ಜಾತಿಶ್ರೇಷ್ಠತೆಯ ಲಿಂಗಾಯತರ ಪಾಲಿಗೆ ಇದು ಸಾಮಾನ್ಯ ಸಂಗತಿಯಲ್ಲ, ಇದು ಒಂದು ಮಹಾಪಾಪವೇ ಸರಿ. ಗೋವಿಂದರಾಜು ಮತ್ತು ಹೊಸ ಮೇಷ್ಟ್ರು ಬಂದು ಟೀ ಕುಡಿದು ಹೋದ ಮೇಲೆ ಊರಿನ ಜನರಿಗೆ ಗೊತ್ತಾಗಿದ್ದೆನೆಂದರೆ ಊರಿನ ಇಸ್ಕೂಲಿಗೆ ಬಂದಿರುವ ಹೊಸ ಮೇಷ್ಟ್ರು ಪರಿಶಿಷ್ಟ ಜಾತಿಗೆ ಸೇರಿದವರೆಂದು.
ಸಂಸ್ಕೃತ, ವೇದ, ಉಪನಿಷತ್ತು, ತಾರತಮ್ಯ, ಅಸ್ಪೃಶ್ಯತೆಯ ವಿರುದ್ಧವಾಗಿ ಕಟ್ಟಿದ ಕನ್ನಡದ ಧರ್ಮವೇ ಲಿಂಗಾಯತ ಧರ್ಮ. ಇಂತ ಅಮೂಲ್ಯವಾದ ಧರ್ಮವನ್ನು ಧರ್ಮವೆಂದೇ ತಿಳಿಯದ ಅಮಾಯಕರು, ಲಿಂಗಾಯತ ಧರ್ಮವನ್ನು ಜಾತಿಯೆಂಬ ಕೀಳು ವ್ಯವಸ್ತೆಗೆ ಇಳಿಸಿಕೊಂಡು ಬಿಟ್ಟಿದ್ದಾರೆ. ಇದನ್ನು ತಿಳಿಯದ ಗ್ರಾಮಸ್ಥರಲ್ಲಿ ಇದರ ಬಗ್ಗೆ ಭುಜಂಗಯ್ಯನಿಗೆ ದೂರೇಳುವ ಸಲುವಾಗಿ ಜಾತಿಯಲ್ಲಿ ಲಿಂಗಾಯತನಾಗಿದ್ದ ದ್ಯಾವಣ್ಣನಾದವನು ಬಂದ. ಅವನು ಹೋಟೆಲಿಗೆ ಬರುವಷ್ಟರಲ್ಲೆ ಹೋಟೆಲಿನ ಕೆಲಸದ ಆಳುಗಳು ಟೀ ಕುಡಿದ ಎಲ್ಲಾ ಲೋಟಗಳನ್ನು ತೊಳೆದಿಟ್ಟು ಬಿಟ್ಟಿದ್ದರು. ಹರಿಜನ ಮೇಷ್ಟ್ರು ಟೀ ಕುಡಿದ ಲೋಟ ಯಾವುದೆಂದು ಗೊತ್ತಾಗುವಂತಿರಲಿಲ್ಲ. ದ್ಯಾವಣ್ಣ ಬಂದು “ಆತ ಕೆಳಜಾತಿಯವನು ನಿನೇಗೆ ಅವನನ್ನು ಹೋಟೆಲಿನೊಳಗೆ ಬಿಟ್ಟೆ, ನಮ್ಮ ಜಾತಿಕರು ಬಂದು ಇಲ್ಲೆ ಟೀ ಕುಡಿದು, ಊಟ ಮಾಡ್ತಾರೆ, ಕೆಳಜಾತಿಯವರು ಬಂದು ಇಲ್ಲೆ ಕೂರೋದ? ನೀನು ಕೇಳ್ಬೇಕು ತಾನೆ? ಅವ ಜಾತಿಯವನೆಂದು” ಎಂದು ಚುಚ್ಚು ಮಾತಿನಿಂದಲೇ ನುಡಿದ. ಭುಜಂಗಯ್ಯ ದ್ಯಾವಣ್ಣನಿಗೆ ಇದರಲ್ಲಿ ನನ್ನದೇನು ತಪ್ಪಿಲ್ಲವೆಂದು, ಹರಿಜನ ಮೇಷ್ಟ್ರು ಬಂದು ಟೀ ಕುಡಿದು ಹೋಗಿದ್ದು ಸಹ ಏನು ತಪ್ಪಿಲ್ಲವೆಂದು ತಿಳಿ ತಿಳಿಯಾಗಿ ಬಿಡಿಸಿ ಹೇಳಿದ. ಆದರೆ ಇದ್ಯಾವುದು ದ್ಯಾವಣ್ಣನ ಮುಂದೆ ಕೆಲಸಕ್ಕೆ ಬಂದಿಲ್ಲ, ಅವ ಮತ್ತೆ “ನಿಂಗೇನೊ ಜಾತಿಲ್ಲ, ಕುಲಿಲ್ಲ, ನಮ್ಗೂ ಅಂಗೆ ಮಾಡ್ಬುಡದ ಅಂತ್ಲಾ” ಎಂದಂದ ಗಡುಸಾಗಿ, ಹೀಗೆಳಿದಕ್ಕೆ ಭುಜಂಗಯ್ಯ ಸರಿಯಾಗಿ ಬೈದು ಕಳಿಸಿದ.
ಇದನ್ನೂ ಓದಿ: ಸಿ.ಎಸ್.ದ್ವಾರಕಾನಾಥ್ ಕಂಡ ‘ಧಾವತಿ’
ಈ ವಿಷ್ಯ ಇಷ್ಟಕ್ಕೆ ಮುಗಿಯದೆ, ಮುಂದುವರೆದು ಪಂಚಾಯ್ತಿ ಸೇರಿಸಿ ಊರಿನಲ್ಲಿ ಭುಜಂಗಯ್ಯನ ವಿರುದ್ಧವಾಗಿದ್ದ ಊರಿನ ಮುಖಂಡರೆನಿಸಿದ್ದವರೆಲ್ಲಾ ಭುಜಂಗಯ್ಯನಿಗೆ ಹೊಡೆದು ಅವಮಾನಿಸಿ, ಹೋಟೆಲಿಗೆ ಬೆಂಕಿಯನ್ನಿಟ್ಟರು. ಭುಜಂಗಯ್ಯನ ಜೀವನಕ್ಕಿದ್ದ ಆಧಾರವೇ ಇಲ್ದದಂತಾಯಿತು. ಭುಜಂಗಯ್ಯ ಮತ್ತು ಸುಶೀಲಳ ಬದುಕು ಕೆಳಮಟ್ಟಕ್ಕಿಳಿಯಿತು. ಹಲವಾರು ಕಷ್ಟಕಾರ್ಪಣ್ಯಗಳು ಸಾಲು ಸಾಲು ಎದುರಾದವು. ನಂತರ ಭುಜಂಗಯ್ಯ ಕಂಟ್ರಾಟುದಾರನಾದ. ಅಲ್ಲಿಯು ಸಹ ಅವನಿಗೆ ಲಾಸಾಯಿತು. ನಂತರದಲ್ಲಿ ಕಣ್ಣುಕಳೆದುಕೊಂಡ, ಅಮೇಲೆ ತಾನು ಗಳಿಸಿದ್ದ ಎಂಟು ಎಕ್ಕರೆ ಗದ್ದೆಯನ್ನು ಕಳೆದುಕೊಂಡ, ನಂತರ ಇವನ ಜೀವನದಲ್ಲಿ ಕಷ್ಟದ ದಿನಗಳೆ ಎದುರಾದವು. ಅವುಗಳನ್ನು ಸುಶೀಲ ತನ್ನದೆ ಎಂದು ನಗುಮುಖದಿಂದಲೆ ಸ್ವಿಕರಿಸಿದಳು. ಗಂಡನಿಗೆ ನೋವೆನಿಸುವ ಹಾಗೆ ಯಾವತ್ತು ನಡೆದುಕೊಳ್ಳಲಿಲ್ಲ. ಮೊದಲಿಗೆ ಊರೆ ಇವಳನ್ನು ತಿರಸ್ಕರಿಸಿದರು, ನಂತರದಲ್ಲಿ ಇವಳ ನಡತೆ ಕಂಡು ಇಡೀ ಊರೆ ಒಪ್ಪಿಕೊಂಡಿತು. ಸುಶೀಲಳ ವ್ಯಕ್ತಿತ್ವ, ಅವಳ ಸಾದ್ವಿಗುಣಗಳೆಲ್ಲವು ನನಗೆ ತುಂಬಾ ಹಿಡಿಸಿದವು.
ಆಮೇಲೆ ನಾರಾಯಣನಿಂದ ಸುಶೀಲ ಅತ್ಯಾಚಾರಕ್ಕೊಳಗಾಗಿದ್ದು, ನಂತರ ಗಂಡನಲ್ಲಿ ಹೇಳಿಕೊಂಡು ಅತ್ತಿದ್ದು, ಭುಜಂಗಯ್ಯ ಇದೆಲ್ಲ ಶಿವನಲೀಲೆ ಎಂದೆನುತ ಮರೆತು ಬಿಟ್ಟದ್ದು, ಸುಶೀಲ ಈ ಘಟನೆಯಿಂದ ಜೀವನದಲ್ಲಿ ಉತ್ಸುಕತೆಯನ್ನು ಕಳೆದುಕೊಂಡರು ತನ್ನ ಜೀವವೇ ಆಗಿದ್ದ ಭುಜಂಗಯ್ಯನಿಗೋಸ್ಕರ ಬದುಕ್ಕಿದ್ದು. ಭುಜಂಗಯ್ಯ ಮತ್ತು ಸುಶೀಲ ಇಬ್ಬರು ಒಂದೇ ಜಾತಿಯವರಲ್ಲ, ರಕ್ತಸಂಬಂಧಿಗಳಲ್ಲ ಆದರು ಮದುವೆಯಾಗಿ ಸಹಬಾಳ್ವೆ ನಡೆಸಿದರು, ಕಾರಣ ಮದುವೆಯಾಗಿ ಸಂಸಾರ ನಡೆಸಲು ಬೇಕಿರುವುದು ಜಾತಿ, ಮತ, ಕುಲಗಳಲ್ಲ ಎರಡು ಒಳ್ಳೇಯ ಮುಗ್ಧ ಮನಸುಗಳಷ್ಟೆ ಬೇಕಿರುವುದು. ಕಾದಂಬರಿಕಾರರು ಈ ಕಾದಂಬರಿಯಲ್ಲಿ ಸಹಬಾಳ್ವೆ ನಡೆಸಲು ಬೇಕಿರೋದು ಜಾತಿ ಧರ್ಮಗಳಲ್ಲ ಎಂಬುದನ್ನು ಅಧ್ಬುತವಾಗಿ ನಿರೂಪಿಸಿದ್ದಾರೆ.
ನಾನು ಸುಮಾರು ಗಣ್ಯರು ಬರೆದ ಕಾದಂಬರಿಗಳನ್ನು ಒದಿದ್ದೇನೆ, ಅದರೆ ನನಗೆ ತುಂಬಾ ಹಿಡಿಸಿದ್ದು ʼಕುಂ.ವೀರಭದ್ರಪ್ಪʼನವರು ಬರೆದಿರುವ “ಬೇಲಿಯ ಹೂಗಳು” ಇವತ್ತು “ಭುಜಂಗಯ್ಯನ ದಶಾವತಾರಗಳು”. ಈ ಕಾದಂಬರಿಯ ಅಂತ್ಯದಲ್ಲಿ ಭುಜಂಗಯ್ಯ ಸಾಯುತ್ತಾನೆ, ನಂತರ ಸುಶೀಲಳ ಬದುಕೇನು, ಅವಳು ಮುಂದೆ ಹೇಗೆ ಬದುಕುತ್ತಾಳೆಂಬುದೆ ನನ್ನ ತಲೆಯನ್ನು ಕೊರೆಯುತ್ತಿತ್ತು, ಈಗಲೂ ಸಹ.. ಶ್ರೀಕೃಷ್ಣ ಆಲನಹಳ್ಳಿಯವರು ಈ ಕಾದಂಬರಿಯಲ್ಲಿ ಆ ಊರಿನಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನು, ಊರಿನ ಜನರ ಜಾತಿಪ್ರೀತಿಯನ್ನು, ಜಾತಿಪ್ರೀತಿಯಿಂದ ಸಂಭವಿಸಬಹುದಾದ ಕೇಡಕನ್ನು, ತೊಂದರೆಗಳನ್ನು ಕಣ್ಣಿಗೆ ರಾಚುವಂತೆ ಚಿತ್ರಿಸಿದ್ದಾರೆ.
ಭುಜಂಗಯ್ಯನ ದೃಷ್ಠಿಯಲ್ಲಿ ವ್ಯಕ್ತಿ ಶ್ರೇಷ್ಠವಾಗಿದ್ದ ಕಾರಣ ಹರಿಜನ ಮೇಷ್ಟ್ರನ್ನು ಉತ್ತಮರಾಗಿ ಕಂಡರು, ಅವರ ಜಾತಿಯನ್ನು ಪರಿಗಣಿಸಲಿಲ್ಲ. ಆದರೆ ಊರಿನ ಕೆಲವು ಮುಖಂಡರು ಜಾತಿ ಶ್ರೇಷ್ಠವೆಂದು ಭಾವಿಸಿದ್ದ ಕಾರಣ ಮೇಷ್ಟ್ರನ್ನು ಅವರ ಜಾತಿ ಆಧಾರಿಸಿ ಅವರನ್ನು ಕನಿಷ್ಠರಂತೆ ಕಂಡರು. ನಮ್ಮ ದುರಾದೃಷ್ಟವೆಂದರೆ ಈ ಕಾದಂಬರಿಯನ್ನು ಬರೆದು ಮುವತ್ತೆಂಟು ವರ್ಷಗಳಾಗಿದ್ದರು ಈ ಕಾದಂಬರಿಯಲ್ಲಿ ಚಿತ್ರಿಸಿರುವ ಸಾಮಾಜಿಕ ವ್ಯವಸ್ಥೆ ಮತ್ತು ಊರಿನ ಜನರ ಮನಸ್ಥಿತಿ ಇಂದಿಗೂ ವಾಸ್ತವವಾಗಿಯೆ ಇದೆ. ಇಂದಿಗೂ ಸಹ ನಮ್ಮ ರಾಜ್ಯದಲ್ಲಿ, ಇಂಡಿಯಾ ಒಕ್ಕೂಟ ವ್ಯವಸ್ಥೆಯಲ್ಲಿ ಜಾತಿಯ ಮದದಿಂದ ಜರುಗುವ ಮರ್ಯಾದೆಗೇಡು ಹತ್ಯೆಗಳು, ಜಾತಿ ತಾರತಮ್ಯ, ಜಾತಿ ಆಧಾರದಲ್ಲಾಗುವ ಕೊಲೆಸುಲಿಗೆಗಳು ಬಲವಂತರು, ಶ್ರೀಮಂತರು, ಜಾತಿಯಲ್ಲಿ ಉತ್ತಮರೆನಿಸಿಕೊಂಡವರು ಬಲಹೀನರ ಮೇಲೆ, ಬಡವರ ಮೇಲೆ, ಕೆಳಜಾತಿವರಮೇಲೆ ನಡೆಸುವ ನಿಕೃಷ್ಠ ಕ್ರೌರ್ಯಗಳು ಲೆಕ್ಕಕ್ಕೆ ಸಿಗದಿರುವಷ್ಟು.
ನಮ್ಮ ವಾಟ್ಸಾಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಗೌಪ್ಯವಾಗಿಡಲಾಗುವುದು.
ಈಗಿರುವ ನಮ್ಮ ರಾಜ್ಯಸರ್ಕಾರ ಈ ನಾಡಿನಿಂದ ಅಸ್ಪೃಷ್ಯತೆಯನ್ನು ಸಂಪೂರ್ಣವಾಗಿ ತೊಲಗಿಸಲು ಹಲವಾರು ಕಾಯ್ದೆ, ಕಾನೂನುಗಳನ್ನು ಜಾರಿಗೊಳಿಸಿ ಅಸ್ಪೃಷ್ಯತೆಯನ್ನು ಬೇರುಸಮೇತ ಕಿತ್ತೆಸೆಯಬೇಕೆಂದು ಕೇಳಿಕೊಳ್ಳುತ್ತೇನೆ. ಈ ಅಸಮಾನತೆಯೆಂಬ ಮನುಷ್ಯಮೃಗಕ್ಕೆ ಕೋಟಿ ಕೋಟ್ಯಾಂತರ ಮುಗ್ಧಜನರನ್ನು ಬಲಿತೆಗೆದುಕೊಂಡಿದೆ, ಈ ಕ್ರೌರ್ಯ ಇನ್ನು ನಿಲ್ಲದೆ ನಿರಂತರವಾಗಿ ನಡೆಯುತ್ತಲೆ ಇದೆ. ಈ ಅಸಮಾನತೆಯೆಂಬ ಮನುಷ್ಯಮೃಗವನ್ನು ನಿರ್ನಾಮ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ದರ್ಶನ್.ಡಿ.ಎನ್. ಕುರುಬಾಸ್
ಐಚ್ಛಿಕ ಕನ್ನಡ ವಿದ್ಯಾರ್ಥಿ
ಮೂರನೇ ವರ್ಷದ ಬಿ.ಎ.
ಸರ್ಕಾರಿ ಕಲಾ ಕಾಲೇಜು
ಅಂಬೇಡ್ಕರ್ ವೀದಿ, ಕೆ.ಆರ್. ಸರ್ಕಲ್ ಹತ್ತಿರ
ಬೆಂಗಳೂರು – 560001
ಮೊ: 9113961846