“ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ದಲಿತ ವಿರೋಧಿಯಲ್ಲ ಎಂದು ಹೇಳಿಕೆ ನೀಡಿದ ಕಾರಣಕ್ಕೆ ಸಂಸದ ಮುನಿಸ್ವಾಮಿಯವರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ” ಎಂದು ಆರೋಪಿಸಿ ಡೆತ್ನೋಟ್ ಬರೆದಿಟ್ಟು ದಲಿತ ಯುವ ಹೋರಾಟಗಾರ ಕೆ.ಎಂ.ಸಂದೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಲಾರದ ಯುವ ಹೋರಾಟ ಗಾರ, ಡಾ.ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ಎಎಸ್ಎಸ್ಕೆ) ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಎರಡು ಪುಟದ ಡೆತ್ನೋಟ್ ಬರೆದಿಟ್ಟಿದ್ದಾರೆ.
ಇತ್ತೀಚೆಗೆ “ಯುವಕನೊಬ್ಬನನ್ನು ಕಿಡ್ನಾಪ್ ಮಾಡಲಾಗಿದೆ” ಎಂದು ಆರೋಪಿಸಿ ಸಂದೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. “ಪೊಲೀಸ್ ಎಂದು ಹೇಳಿಕೊಂಡು ಕಿಡ್ನಾಪ್ ಮಾಡಲಾಗಿದೆ” ಎಂದು ಪೊಲೀಸರು ಆರೋಪಿಸಿದ್ದರು.
“ದಲಿತ ಹೆಣ್ಣು ಮಗಳೊಬ್ಬಳಿಗೆ ಸವರ್ಣೀಯ ಜಾತಿಯ ಹುಡುಗ ಮೋಸ ಮಾಡಿದ್ದನ್ನು ಕೇಳಿ, ಆಕೆಯ ನೆರವಿಗೆ ಸಂದೇಶ್ ಧಾವಿಸಿದ್ದರು. ಮೋಸ ಮಾಡಿದ್ದ ಹುಡುಗನನ್ನು ಕರೆದುಕೊಂಡು ಬಂದು, ಸಂಧಾನ ನಡೆಸಿದ್ದರು. ಹುಡುಗ- ಹುಡುಗಿ ಇಬ್ಬರೂ ಮದುವೆಯಾಗುವುದಾಗಿ ಒಪ್ಪಿಕೊಂಡರು. ಆದರೆ ನಂತರದಲ್ಲಿ ಅಪಹರಣದ ಆರೋಪ ಹೊರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ” ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದರು. ದೊಡ್ಡಬಳ್ಳಾಪುರ ಸರ್ಕಲ್ ವ್ಯಾಪ್ತಿಯ ರಾಜಾನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸಂದೇಶ್ ಬರೆದ ಪತ್ರದಲ್ಲಿ ಏನಿದೆ?
ಬಾಗಲಕೋಟೆ ಮೂಲದ ದಲಿತ ಯುವತಿಗೆ ನ್ಯಾಯ ಕೊಡಿಸುವ ಸಲುವಾಗಿ ಮುಂದಾಗಿದ್ದರಿಂದ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಾಲ್ಕು ಜನ ಅಮಾಯಕರಿದ್ದಾರೆ. ಅವರಿಗೆ ತೊಂದರೆಯಾಗುವುದರಿಂದ ಆ ಪ್ರಕರಣದ ಕುರಿತು ಬರೆಯುವುದಿಲ್ಲ. ನ್ಯಾಯಾಲಯದಲ್ಲಿ ಗೆಲುವು ಸಿಗುತ್ತದೆ”.
“ನನ್ನ ವಿಚಾರವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು, ಅದನ್ನು ಪತ್ರಿಕೆಗಳಲ್ಲಿ ಕೆಟ್ಟದ್ದಾಗಿ ಬರೆದಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಯಾವುದೇ ತಪ್ಪು ಮಾಡದೆ ಇದ್ದರೂ ಸಮಾಜದಲ್ಲಿ ತಲೆ ಎತ್ತಿ ನಡೆಯಲು ಆಗುತ್ತಿಲ್ಲ. “ಕಣ್ಣೂರು ಸ್ಮಶಾನ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಬಂಡಹಳ್ಳಿ ಗ್ರಾಮದಲ್ಲಿ ಬಡವರ ಮನೆಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟದಲ್ಲಿ ಒಂದು ಪ್ರಕರಣ, ಈಗ ಈ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳು ನನ್ನ ಸ್ವಾರ್ಥಕ್ಕಾಗಿ ಆದದ್ದಲ್ಲ.”
“ನಾನು ಇಲ್ಲಿಯ ತನಕ 129 ಅಂತರ್ಜಾತಿ ವಿವಾಹಗಳನ್ನು ನಡೆಸಿದ್ದು, ಯಾವುದೇ ದಂಪತಿಯಿಂದ ಒಂದು ಪೈಸೆ ಹಣ ಪಡೆದಿಲ್ಲ. ನನ್ನ ಜೀವನದಲ್ಲಿ ಯಾವುದೇ ಕಚೇರಿ, ಅಧಿಕಾರಿಯ ಬಳಿ ರೋಲ್ಕಾಲ್ ಮಾಡಿಲ್ಲ. ನನ್ನ ವಿರುದ್ಧವಾಗಿ ಯಾವುದೇ ಆಧಾರವಿಲ್ಲದೆ ಪತ್ರಿಕಾಗೋಷ್ಠಿ ನಡೆಸಿರುವುದರಿಂದ ನೋವಾಗಿದೆ. ನಾನು ಜೀವನಪೂರ್ತಿ ಬಾಡಿಗೆ ಮನೆಯಲ್ಲಿಯೇ ವಾಸವಿದ್ದೇನೆ. ಇಲ್ಲಿಯ ತನಕ ಸ್ವಃತ ಮನೆಯನ್ನೂ ಕಟ್ಟಿಕೊಂಡಿಲ್ಲ. ಒಂದೇ ಒಂದು ಗುಂಟೆ ಜಮೀನಿಲ್ಲ. ಒಂದೇ ಒಂದು ನಿವೇಶನ ಇಲ್ಲ. ನನಗೆ ಕೆಟ್ಟ ಹವ್ಯಾಸಗಳೂ ಇಲ್ಲ. ನನ್ನ ಜನರು ಫೋನ್ ಮಾಡಿದರೆ ತಕ್ಷಣ ಅಲ್ಲಿಗೆ ಹೋಗಿ ಅವರಿಗೆ ನ್ಯಾಯ ಕೊಡಿಸುವ ಹವ್ಯಾಸವೊಂದು ನನಗಿದೆ. ನನ್ನನ್ನು ಮುಗಿಸಲು ಕೋಲಾರ ಜಿಲ್ಲೆಯ ಸಂಸದ ಮುನಿಸ್ವಾಮಿ ಷಡ್ಯಂತ್ರ ನಡೆಸಿ, ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇಷ್ಟು ವರ್ಷ ಮನೆಮನೆಗೆ ಪತ್ರಿಕೆ ಹಾಕಿಕೊಂಡು, ಕಾಲಿಗೆ ಚಪ್ಪಲಿ ಇಲ್ಲದೆ, ಹರಿದ ಬಟ್ಟೆಹಾಕಿ ಕೊಂಡು ಕೂಡಿಟ್ಟುಕೊಂಡಿದ್ದ ಗೌರವವನ್ನು ಸಂಸದ ಮುನಿಸ್ವಾಮಿ ಹಾಳು ಮಾಡಿದ್ದಾರೆ.”
“ನಾನು ಮೊದಲೇ ಹೇಳಿದ್ದೆ. ನನಗೆ ಯಾವತ್ತೂ ಅವಮಾನ ಆಗುತ್ತೋ ಅವತ್ತು ನನ್ನ ಸಾವು ಎಂದು. ಆದರೆ ನಾನು ಯಾವ ತಪ್ಪು ಮಾಡದೆ ನನಗೆ ಸಾಕಷ್ಟು ಅವಮಾನ ಆಗುತ್ತಿದ್ದು ಇದನ್ನು ನನ್ನಿಂದ ಸಹಿಸಲು ಆಗುತ್ತಿಲ್ಲ. ಸಿದ್ದರಾಮಯ್ಯನರು ದಲಿತ ವಿರೋಧಿ ಅಲ್ಲ ಎಂದು ನಾನು ಕೊಟ್ಟ ಒಂದೇ ಒಂದು ಹೇಳಿಕೆಯಿಂದ ನನಗೆ ಈ ಪರಿಸ್ಥಿತಿ ಬಂದಿದೆ. ನಾನು ಕಷ್ಟದಲ್ಲಿದ್ದ ಸಮಯದಲ್ಲಿ ನನಗೆ ಯಾರು ಸಹಾಯ ಮಾಡಿಲ್ಲ. ಈ ಸಮಾಜದಲ್ಲಿ ನಾನು ಯಾವತ್ತೂ ತಲೆ ಬಾಗಿಲ್ಲ. ಆದರೆ ನಾನು ಮಾಡದ ತಪ್ಪಿಂದ ಈ ತೀರ್ಮಾನ ತೆಗೆದುಕೊಂಡಿದ್ದೇನೆಂದು ಬರೆದುಕೊಂಡಿದ್ದು, ದಲಿತ ಜನಪ್ರತಿ ನಿದಿಗಳು, ಅವರ ಸಂಕಷ್ಟಕ್ಕೆ ಸ್ಪಂದಿಸಿ ಅಂಬೇಡ್ಕರ್ ಅವರ ಆದರ್ಶಗಳನ್ನು ಯುವ ಸಮಾಜಕ್ಕೆ ಮತ್ತಷ್ಟು ವಿಸ್ತರಿಸಲು ಸಂದೇಶ್ ಅನಿವಾರ್ಯವಾಗಿದೆ. ಹೋರಾಟಗಾರರನ್ನು ಕುಗ್ಗಿಸುವ ಸರ್ಕಾರವಾಗಲಿ, ಜನಪ್ರತಿನಿದಿಯಾಗಲಿ ಇಂತಹ ವರ ರಕ್ಷಣೆಗೆ ಉಳಿದ ಸಂಘ-ಸಂಸ್ಥೆಗಳು ನಿಲ್ಲವಂತಾದರೆ ಮಾತ್ರ ದಲಿತ ಸಮುದಾಯಗಳ ಉದ್ದಾರ ಸಾಧ್ಯ
ವರದಿ: ಜಗದೀಶ್ ದೇವನಹಳ್ಳಿ