ಚಿಕ್ಕಬಳ್ಳಾಪುರ: ಸಚಿವ ಸುಧಾಕರ್ ತನಗೊಂದು ನೆಲೆಬೆಲೆ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹಬಗೆದು ರಾತ್ರೋರಾತ್ರಿ ಬಾಂಬೆಗೆ ತೆರಳಿ ಬಿಜೆಪಿ ಸಖ್ಯ ಬೆಳೆಸಿದ ನಂಬಿಕೆದ್ರೋಹಿ ರಾಜಕಾರಣಿ. ಎಂ.ಸಿ. ಸುಧಾಕರ್ ನಮ್ಮ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರ ಬಗ್ಗೆ ಮಾತನಾಡಲು ಇವರಿಗೆ ನೈತಿಕತೆಯಿಲ್ಲ. ಸೋಲು ಗೆಲುವು ಯಾರಿಗಿಲ್ಲ, ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಮಾತನಾಡಬಾರದು ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಆರೋಪಿಸಿದರು.
ಮಂಗಳವಾರ ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ʼಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಚಿರತೆಯಂತಹ ಚಾಣಾಕ್ಷ ವ್ಯಕ್ತಿಯನ್ನು ನಿಲ್ಲಿಸಲಾಗುವುದು ಎಂದು ವರಿಷ್ಟರು ಹೇಳಿಕೆ ನೀಡಿದರೆ ತಪ್ಪೇನು? ಒಳಗಿನವರೋ, ಹೊರಗಿನವನರೋ ಇವರಿಗೆ ಆದ ನಷ್ಟವೇನು?ಜ.೨೩ರಂದು ನಡೆಸಿದ ಪ್ರಜಾಧ್ವನಿ ಯಾತ್ರೆಯಲ್ಲಿ ಚರ್ಚೆಯಾಗಿರುವ ವಿಚಾರ ನಮ್ಮ ಪಕ್ಷದ ಅಂತರಿಕ ವಿಚಾರ. ನಮ್ಮ ಪಕ್ಷ ಗಂಡಸರಿಗೂ, ಹೆಂಗಸರಿಗೂ ಸಮಾನ ಪ್ರಾತಿನಿಧ್ಯ ನೀಡಿದ ಪಕ್ಷ. ಈ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದು ತರವಲ್ಲ. ನಿಮ್ಮನ್ನು ಭೀತಿಯಲ್ಲಿಟ್ಟು ಹೀಗೆ ಮಾತನಾಡಿ ಎಂದು ಹೇಳಿಕಳಿಸಿರುವುದು ಜನತೆಗೆ ತಿಳಿದಿದೆ. ಚಿಂತಾಮಣಿ ಸುಧಾಕರ್ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕುʼ ಎಂದು ತಾಕೀತು ಮಾಡಿದರು.
ಚೇತನ್ ಹಠಾವೋ
ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿದ್ದ ಎಸ್.ಐ.ಚೇತನ್‌ಕುಮಾರ್ ಅವರನ್ನು ಮತ್ತೊಮ್ಮೆ ನಗರಠಾಣೆಗೆ ವರ್ಗಾವಣೆ ಮಾಡಿಸಿಕೊಂಡು ಬರಲಾಗಿದೆ. ಅವರ ಮೇಲೆ ಚುನಾವಣಾ ಅಕ್ರಮದಂತಹ ಗುರುತರವಾಧ ಆರೋಪಗಳಿವೆ. ಹೀಗಿದ್ದರೂ ಚುನಾವಣೆ ಸಮಯದಲ್ಲಿ ಹಣ ಹಂಚಲು ನೆರವು ಪಡೆಯುವ ಉದ್ದೇಶದಿಂದಲೇ ಮತ್ತೊಮ್ಮೆ ಕರೆತರಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಅದಕ್ಕೂ ಬಗ್ಗಲಿಲ್ಲ ಎಂದರೆ ವರ್ಗಾವಣೆ ಮಾಡುವವರೆಗೆ ಪಕ್ಷದ ವತಿಯಿಂದ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಂದು ಘೋಷಿಸಿದರು.
ದಾಖಲೆ ಜತೆ ಚರ್ಚೆಗೆ ಬನ್ನಿ
ಮಂಚೇನಹಳ್ಳಿ ಪ್ರಕಾಶ್ ಮಾತನಾಡಿ ಜನಧ್ವನಿ ಸಮಾವೇಶದ ನಂತರ ಬಿಜೆಪಿ ಮುಖಂಡರು ಸ್ವಯಿಚ್ಛೆಯಿಂದ ಬಂದು ಕಾಂಗ್ರೆಸ್ ವಿರುದ್ಧ ಸುದ್ದಿಗೋಷ್ಟಿ ಮಾಡಿದ್ದಾರೆ ಅನಿಸುವುದಿಲ್ಲ. ಸುಧಾಕರ್ ಪ್ರಾಢ್, ಪ್ರಾಢ್‌ನ ಪ್ರಾಢ್ ಎಂತಲೇ ಕರೆಯೋದು. ನಾವು ಇಂತಹ ಕೆಲಸಗಳನ್ನು ಎಂದಿಗೂ ಮಾಡುವುದಿಲ್ಲ. ಸಚಿವ ಸುಧಾಕರ್ ಯಾವುದಾದರೂ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆಗೆ ಬರುತ್ತಾರೆ ಎಂದರೆ ಅವರಿಗೆ 10 ರಿಂದ 15 ಪರ್ಸೆಂಟ್ ಕಮಿಷನ್ ಕೊಟ್ಟಿರಬೇಕು. ಕೆ.ವಿ.ನಾಗರಾಜ್ ಮಗನೂ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ, ಇದು ಸುಳ್ಳಾದರೆ ಅವರ ಮನೆದೇವರ ಮೇಲೆ ಆಣೆ ಮಾಡಲಿ ನಾನೂ ಮಾಡುತ್ತೇನೆ. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ನೀಡಿದ್ದ ಸಾವಿರಾರು ಕೋಟಿ ಅನುಧಾನದಲ್ಲಿ ಆದ ಕೆಲಸಗಳನ್ನು ನಮ್ಮ ಅಭಿವೃದ್ಧಿ ಎಂದರೆ ಆಗದು. ಸುಧಾಕರ್ ನೀವು ಬಿಜೆಪಿಗೆ ಹೋದ ಮೇಲೆ ತಂದು ಮಾಡಿರುವ ಅಭಿವೃದ್ದಿಯನ್ನು ತೋರಿಸಿ ಚರ್ಚೆಗೆ ಬನ್ನಿ, ಅದಕ್ಕೆ ಬೇಕಾದ ವೇದಿಕೆ ನಾವೇ ಕಲ್ಪಿಸಿಕೊಡುತ್ತೇವೆ ನಿಮ್ಮ ಕೈಲಾದರೆ ದಾಖಲೆ ಸಮೇತ ಚರ್ಚೆಗೆ ಬನ್ನಿ ಎಂದು ಬಿಜೆಪಿ ಮುಖಂಡರಿಗೆ ಪಂಥಾಹ್ವಾನ ನೀಡಿದರು.
ಕೆಪಿಸಿಸಿ ಸದಸ್ಯ ಪುರದಗಡ್ಡೆ ಮುನೇಗೌಡ ಮಾತನಾಡಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಪ್ರಜಾಧ್ವನಿ ನೋಡಿ ಬಿಜೆಪಿಗೆ ನಡುಕ ಬಂದು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ಸ್ಥಳೀಯರಾಗಿದ್ದರೋ, ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದವರಾ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುತ್ತಾರೋ, ಹೊರಗಿನವರಿಗೆ ಟಿಕೆಟ್ ನೀಡುತ್ತಾರೋ ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಕಳೆದ ಚುನಾವಣೆಯಲ್ಲಿ ತಮ್ಮ ವಿರುದ್ದ ಸ್ಪರ್ಧೆ ಮಾಡಿದ್ದವರನ್ನು ಉದ್ದೇಶಿಸಿ ಹೇಳಿದ್ದನ್ನು ಸ್ಮರಣೆಗೆ ತಂದುಕೊಳ್ಳಿ ಕೆ.ವಿ.ನವೀನ್‌ಕಿರಣ್ ಅವರನ್ನು ಒಬ್ಬ ಕೊಂಟೋನು, ಜಿ.ಹೆಚ್. ನಾಗರಾಜ್ ಅವರನ್ನು ಸಾರಾಯಿ ಮಾರೋನು, ಮಾರೋನು ಎಂದು ಜರಿದಿರಲಿಲ್ಲವೇ?ಈಗ ಅವರು ನಿಮಗೆ ಸುಮ್ಮನೆ ಸ್ನೇಹಿತರಾಗಿದ್ದಾರಾ ಎಂದು ಕುಟುಕಿದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿ 2012ರಲ್ಲಿ ನೀವು ಕ್ಷೇತ್ರದ ಯಾರಿಗೆ ಗೊತ್ತಿದ್ದಿರಿ. ನಿಮ್ಮನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದರಲ್ಲಿ ನಮ್ಮದೂ ಪಾತ್ರವಿದೆ. ಮಹಿಳಾ ಕಾಲೇಜು ನನ್ನ ಅವಧಿಯಲ್ಲಿ ಬೇರ್ಪಟ್ಟರೆ ಶಂಕುಸ್ಥಾಪನೆ ನಿಮ್ಮ ಕಾಲದಲ್ಲಿ ಆಗಿದೆ. ಈವರೆಗೂ ಅದು ಮಕ್ಕಳ ಬಳಕೆಗೆ ಒದಗಿಲ್ಲ.ರಂಗಮಂದಿರ ಪೂರ್ಣಗೊಳಿಸಿಲ್ಲ. 16 ಮಂದಿ ಒಕ್ಕಲಿಗ ನಾಯಕರು, ನನ್ನನ್ನೂ ಸೇರಿದಂತೆ ಹತ್ತಾರು ಮಂದಿ ದಲಿತ ನಾಯಕ, ನೂರಾರು ಅಮಾಯಕರ ಮೇಲೆ ಕೇಸು ಹಾಕಿಸಿ ಜಂಬದ ಮಾತುಗಳನ್ನು ಆಡುತ್ತಿದ್ದೀಯ. ನಿನಗೆ ಕೊನೇ ದಿನಗಳು ಹತ್ತಿರ ಬಂದಿವೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಉಚಿತ ನಿವೇಶನ ಯೋಜನೆ ಜಾರಿಗೆ ತರಲಾಗಿದೆ. ವೇದಿಕೆಯಲ್ಲಿ ಮಂಜೂರಾತಿ ಪತ್ರ ನೀಡಿ ಕಾರ್ಯಕ್ರಮ ಮುಗಿದ ಕೂಡಲೇ ವಾಪಸ್ಸು ಪಡೆದುಕೊಳ್ಳುತ್ತಿರುವುದನ್ನು ಮತದಾರರು ಗಮನಿಸುತ್ತಿದ್ದಾರೆ ಎಂದು ನೋವಿನಿಂದ ನುಡಿದರು.
ಮಿಲ್ಟನ್ ವೆಂಕಟೇಶ್ ಮಾತನಾಡಿ ಸಭೆಯಲ್ಲಿ ಅಧ್ಯಕ್ಷ ಸ್ಥಾನ ದಲಿತರಿಗೆ ಮೀಸಲಾಗಿದ್ದನ್ನು ಸಹಿಸದೆ ಕುತಂತ್ರದಿಂದ ಅದನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಿದ ಅಪ್ಪಟ ದಲಿತವಿರೋಧಿ ವ್ಯಕ್ತಿ ಸುಧಾಕರ್. ಬಾಯಲ್ಲಿ ಮಾತ್ರ ನಾನು ದೀನದಲಿತರ ಕಳಕಳಿ ಕಾಳಜಿಯುಳ್ಳವನು ಎನ್ನುತ್ತಾರೆ. ಆದರೆ ಹೊಟ್ಟೆಯಲ್ಲಿ ಇರುವುದು ದಲಿತ ವಿರೋಧಿ ನಡೆ. ಇದಕ್ಕೆ ತಾಜಾ ಉದಾಹರಣೆ ಮೂರು ಮಂದಿ ಮಾಜಿ ಶಾಸಕರ ಮೇಲೆ ದೂರುದಾಖಲಿಸಿದ ಪ್ರಕರಣವೇ ಸಾಕು. ಚುನಾವಣೆ ಹತ್ತಿರವಿರುವಾಗ 20 ಕಿ.ಮಿ.ದೂರದಲ್ಲಿ ನಗರವಾಸಿಗಳಿಗೆ ಸೈಟು ನೀಡುವ ಮಾತನಾಡಿದ್ದೀರಿ. ಇದು ಮಹಾಮೋಸ ಎನ್ನುವುದು ಎಲ್ಲರಿಗೂ ಗೊತ್ತು. ಕೆಲವೇ ದಿನಗಳ ಅವಧಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಸ್ಥಾನ ದಲಿತರಿಗೆ ನೀಡಿ ಕಣ್ಣೊರೆಸುವ ಕೆಲಸ ಮಾಡಲಾಗಿದೆ. ದಲಿತರಷ್ಟೇ ಅಲ್ಲ ಇವರು ಒಕ್ಕಲಿಗರು ಸೇರಿದಂತೆ ಎಲ್ಲಾ ಸಮುದಾಯಗಳ ಪ್ರಗತಿಯ ವಿರೋಧಿ. ಇವರನ್ನು ಪ್ರಶ್ನಿಸಿದರೆ ಸಾಕು. ಅವರ ಮೇಲೆ ಕೇಸುಗಳನ್ನು ಹಾಕಿ ಹೆದರಿಸುತ್ತಾರೆ ಎಂದು ದೂರಿದರು.
ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಯಲುವಹಳ್ಳಿ ರಮೇಶ್ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ ಇದ್ದರು. ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿದರು.
ಬಿಗ್ ಕನ್ನಡ ಪ್ರತಿನಿಧಿ, ಚಿಕ್ಕಬಳ್ಳಾಪುರ